Friday 28 September 2012

Current Events - 2013

2013

  ಪ್ರಚಲಿತ ವಿದ್ಯಮಾನಗಳು ಡಿಸೆಂಬರ್ 31, 2013


ರಾಜ್ಯ ಸರ್ಕಾರದ ಪ್ರತಿಷ್ಠಿತ ಬಸವ ಪ್ರಶಸ್ತಿಗೆ ಯು.ಆರ್.ಅನಂತಮೂರ್ತಿ ಆಯ್ಕೆ
ಪ್ರಚಲಿತ ವಿದ್ಯಮಾನಗಳು ಡಿಸೆಂಬರ್ 31, 2013ರಾಜ್ಯ ಸರ್ಕಾರದ ಪ್ರತಿಷ್ಠಿತ ಬಸವ ಪ್ರಶಸ್ತಿಗೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಡಾ. ಯು.ಆರ್. ಅನಂತಮೂರ್ತಿ ಅವರನ್ನು ಆಯ್ಕೆ ಮಾಡಲಾಗಿದೆ. ಬಳ್ಳಾರಿಯ ಜಿ.ಬಿ. ಹಂಸಾನಂದಾಚಾರ್ಯ ಅವರನ್ನು ಜಕಣಾಚಾರಿ ಪ್ರಶಸ್ತಿ, ಧಾರವಾಡದ ರಂಗ ಕಲಾವಿದೆ ಲಕ್ಷ್ಮೀಬಾಯಿ ಏಣಗಿ ಅವರನ್ನು ಗುಬ್ಬಿ ವೀರಣ್ಣ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಬಸವ ಪ್ರಶಸ್ತಿ:
ರಾಜ್ಯ ಸರ್ಕಾರದ 2012 ನೇ ಸಾಲಿನ ಬಸವ ಪ್ರಶಸ್ತಿಗೆ ಡಾ. ಯು.ಆರ್. ಅನಂತಮೂರ್ತಿ ಅವರನ್ನು ಆಯ್ಕೆ ಮಾಡಲಾಗಿದ್ದು. ಈ ಪ್ರಶಸ್ತಿ 10 ಲಕ್ಷ ನಗದು ಹಾಗೂ ಸ್ಮರಣಿಕೆ, ಪ್ರಶಸ್ತಿ ಫಲಕವನ್ನು ಒಳಗೊಂಡಿದೆ. ಬಸವ ಪುರಸ್ಕಾರ ಪ್ರಶಸ್ತಿಗೆ ಆಯ್ಕೆ ಮಾಡಲು ರಂಜಾನ್ ದರ್ಗಾ ಅಧ್ಯಕ್ಷತೆಯಲ್ಲಿ ಆಯ್ಕೆ ಸಮಿತಿ ರಚಿಸಲಾಗಿತ್ತು
ಜಕಣಾಚಾರಿ ಪ್ರಶಸ್ತಿ:
2012ನೇ ಸಾಲಿನ ಜಕಣಾಚಾರಿ ಪ್ರಶಸ್ತಿಗೆ ಶಿಲ್ಪ, ಕಾಷ್ಠ ಹಾಗೂ ಲೋಹ ಶಿಲ್ಪಗಳಲ್ಲಿ ಪರಿಣತಿ ಹೊಂದಿರುವ ಬಳ್ಳಾರಿಯ ಜಿ.ಬಿ. ಹಂಸಾನಂದಚಾರ್ಯ ಅವರನ್ನು ಕನಕಮೂರ್ತಿ ಅಧ್ಯಕ್ಷತೆಯ ಆಯ್ಕೆ ಸಮಿತಿ ಆಯ್ಕೆ ಮಾಡಿದೆ. ಈ ಪ್ರಶಸ್ತಿಯು ರು. 3 ಲಕ್ಷ ನಗದು, ಸ್ಮರಣಿಕೆ, ಪ್ರಶಸ್ತಿ ಫಲಕ ಒಳಗೊಂಡಿದೆ.
ಗುಬ್ಬಿ ವೀರಣ್ಣ ಪ್ರಶಸ್ತಿ:
ಧಾರವಾಡದ ರಂಗ ಕಲಾವಿದೆ ಲಕ್ಷ್ಮೀಬಾಯಿ ಏಣಗಿ ಅವರನ್ನು 2012ನೇ ಸಾಲಿನ ಗುಬ್ಬಿವೀರಣ್ಣ ಪ್ರಶಸ್ತಿಗೆ ಎಲ್.ಬಿ.ಕೆ. ಆಲ್ದಾಳ್ ಅಧ್ಯಕ್ಷತೆಯ ಆಯ್ಕೆ ಸಮಿತಿ ಒಮ್ಮತದಿಂದ ಆಯ್ಕೆ ಮಾಡಿದೆ. ಈ ಪ್ರಶಸ್ತಿ ರು. 3 ಲಕ್ಷ ನಗದು, ಸ್ಮರಣಿಕೆ, ಪ್ರಶಸ್ತಿ ಫಲಕ ಒಳಗೊಂಡಿದೆ.

ಗೂಗಲ್‌ ಜತೆಗಿನ ಉದ್ದೇಶಿತ ಒಪ್ಪಂದವನ್ನು ಕೈಬಿಟ್ಟ ಕೇಂದ್ರ ಚುನಾವಣಾ ಆಯೋಗ
googleರಾಷ್ಟ್ರದ ಸುರಕ್ಷತೆ ಮತ್ತು ಭದ್ರತೆಯ ದೃಷ್ಟಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರ ಚುನಾವಣಾ ಆಯೋಗ, ಅಮೆರಿಕ ಮೂಲದ ಜಾಗತಿಕ ಅಂತರ್ಜಾಲ ಸಂಸ್ಥೆ ಗೂಗಲ್‌ ಜತೆಗಿನ ಉದ್ದೇಶಿತ ಒಪ್ಪಂದವನ್ನು ಕೊನೆಯ ಕ್ಷಣದಲ್ಲಿ ಕೈಬಿಟ್ಟಿದೆ. ಪ್ರಮುಖ ರಾಜಕೀಯ ಪಕ್ಷಗಳೂ ಸೇರಿದಂತೆ ಅನೇಕರು ಗೂಗಲ್‌ ಜತೆಗಿನ ಒಪ್ಪಂದ ಕುರಿತು ಸಂದೇಹ ವ್ಯಕ್ತಪಡಿಸಿದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ಸ್ಪಷ್ಟಪಡಿಸಿದೆ.
ಏನಿದು ಒಪ್ಪಂದ?
ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಮತದಾರರಿಗೆ ಅಗತ್ಯ ಸೇವಾ ಸೌಲಭ್ಯ ಮತ್ತು ಪ್ರತಿಕ್ಷಣದ ಮಾಹಿತಿ ಒದಗಿಸುವ ಉದ್ದೇಶದಿಂದ ಗೂಗಲ್‌ ಜತೆ ಒಪ್ಪಂದ ಮಾಡಿಕೊಳ್ಳಲು ಚುನಾವಣಾ ಆಯೋಗ ಮುಂದಾಗಿತ್ತು. ಚುನಾವಣೆ ವೇಳೆ ತಾನು ಒದಗಿಸುವ ಸೇವಾ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಲು ಗೂಗಲ್‌ ಸಂಸ್ಥೆ ಇತ್ತೀಚೆಗೆ ಆಯೋಗದ ಕಚೇರಿಯಲ್ಲಿ ಪರಿಚಯ ಕಾರ್ಯಕ್ರಮವನ್ನೂ ಹಮ್ಮಿಕೊಂಡಿತ್ತು. ಆದರೆ, ಈ ಯೋಜನೆಗೆ ಆಕ್ಷೇಪ ತೀವ್ರವಾದ ಹಿನ್ನೆಲೆಯಲ್ಲಿ ಸಾಧಕ-ಬಾಧಕಗಳ ಕುರಿತು ಚರ್ಚಿಸಲು ಆಯೋಗ ಸಭೆ ಕರೆದಿತ್ತು.  ಈ ಸಭೆಯಲ್ಲಿ ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ವಿ.ಎಸ್‌. ಸಂಪತ್‌, ಆಯುಕ್ತರಾದ ಎಚ್‌.ಎಸ್‌. ಬ್ರಹ್ಮ ಮತ್ತು ಎಸ್‌ಎನ್‌ಎ ಜೈದಿ ಉದ್ದೇಶಿತ ಒಪ್ಪಂದ ಕೈಬಿಡುವ ತೀರ್ಮಾನಕ್ಕೆ ಬಂದರು.
ಕಾರಣಗಳೇನು?
  • ತಾನು ನೀಡುವ ಮಹತ್ವದ ಮಾಹಿತಿಗಳನ್ನು ಬಹಿರಂಗ ಪಡಿಸದಂತೆ ಆಯೋಗ ಈ ಮೊದಲ ಗೂಗಲ್ ಸಂಸ್ಥೆ ಯ ಜತೆ ಒಪ್ಪಂದವನ್ನೂ ಮಾಡಿಕೊಂಡಿತ್ತು. ಆದರೆ, ಇದುವರೆಗೂ ಆಯೋಗ, ಸಂಸ್ಥೆಗೆ ಯಾವುದೇ ಮಾಹಿತಿ ಅಥವಾ ಅಂಕಿ, ಅಂಶಗಳನ್ನು ಹಸ್ತಾಂತರಿಸಿಲ್ಲ.
  •  ಗೂಗಲ್‌ ಸರ್ಚ್‌ ಎಂಜಿನ್‌ ಬಳಸಿ ಮತದಾರಿಗೆ ಮಾಹಿತಿ ನೀಡುವ ಉದ್ದೇಶಿತ ಯೋಜನೆಗೆ ಕಾಂಗ್ರೆಸ್‌ ಮತ್ತು ಬಿಜೆಪಿಗಳಲ್ಲದೇ ಸೈಬರ್‌ ತಂತ್ರಜ್ಞರು ಕೂಡ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದರು.
  • ರಾಷ್ಟ್ರೀಯ ಭದ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ಒಪ್ಪಂದ ಕೈಬಿಡುವುದು ಲೇಸು ಎಂದು ಕಾಂಗ್ರೆಸ್‌ನ ಕಾನೂನು ಘಟಕ ಮುಖ್ಯ ಚುನಾವಣಾ ಅಧಿಕಾರಿಗೆ ಪತ್ರ ಬರೆದಿತ್ತು. ಸರ್ವಪಕ್ಷಗಳ ಸಭೆ ಕರೆದು ಒಪ್ಪಿಗೆ ಪಡೆಯುವಂತೆ ಬಿಜೆಪಿ ಸಲಹೆ ನೀಡಿತ್ತು.
  • ದೇಶದ ಚುನಾವಣೆಗೆ ಸಂಬಂಧಿಸಿದ ಅಂಕಿ, ಅಂಶಗಳು ಮತ್ತು ಮಹತ್ವದ ದಾಖಲೆಗಳನ್ನು ವಿದೇಶಿ ಸಂಸ್ಥೆಯೊಂದಕ್ಕೆ ಒಪ್ಪಿಸುವುದು ಅಮೆರಿಕದ ಬೇಹುಗಾರಿಕಾ ಇಲಾಖೆಗೆ ಒಪ್ಪಿಸಿಂತೆ. ರಾಷ್ಟ್ದ ಭದ್ರತೆ ಮತ್ತು ಸುರಕ್ಷತೆ ದೃಷ್ಟಿಯಿಂದ ಇದು ಸಮ್ಮತವಲ್ಲ ಎಂದು ಸೈಬರ್‌ ತಜ್ಞರು ಸಲಹೆ ಮಾಡಿದ್ದರು.

ಚೂರು-ಪಾರು ಸುದ್ಧಿಗಳು:
    barbie
  • ಭಾರತದ ಅತಿ ಎತ್ತರದ ವಾಯುಸಂಚಾರ ನಿಯಂತ್ರಣ ಗೋಪುರ ಮುಂಬೈನಲ್ಲಿ: ಭಾರತದ ಅತಿ ಎತ್ತರದ ವಾಯುಸಂಚಾರ ನಿಯಂತ್ರಣ ಗೋಪುರ (ಎಟಿಸಿ) ಮುಂಬೈನಲ್ಲಿ ಕಾರ್ಯಾರಂಭಿಸಿದೆ. ಛತ್ರಪತಿ ಶಿವಾಜಿ ಅಂತರರಾಷ್ಟ್ರೀಯ ವಿಮಾನನಿಲ್ದಾಣದಲ್ಲಿ ಸ್ಥಾಪಿಸಿರುವ ಈ ಗೋಪುರ 30 ಅಂತಸ್ತಿನ ಗಗನಚುಂಬಿ ಕಟ್ಟಡಗದಷ್ಟು ಎತ್ತರವಿದೆ. ರೂ.125 ಕೋಟಿ ವೆಚ್ಚದಲ್ಲಿ ಗೋಪುರ ನಿರ್ಮಿಸಲಾಗಿದ್ದು, ಐದು ಮೈಲಿ ದೂರ 360 ಡಿಗ್ರಿಯಲ್ಲಿ ವೀಕ್ಷಣೆ ನಡೆಸಬಹುದು ಎನ್ನಲಾಗಿದೆ. ವಿಮಾನ ನಿಲ್ದಾಣದಲ್ಲಿ ಈ ಹಿಂದಿದ್ದ ಹಳೆ ಗೋಪುರದ ಬದಲು ಹೊಸ ಗೋಪುರದ ಮುಖಾಂತರವೇ ವಾಯು ಸಂಚಾರ ನಿರ್ವಹಣೆ ಕಾರ್ಯ ನಡೆಯಲಿದೆ. ಹೊಸ ಗೋಪುರ ಏಕಕಾಲಕ್ಕೆ ಒಂದು ಗಂಟೆಯಲ್ಲಿ 46 ವಿಮಾನಗಳ ಕಾರ್ಯಾಚರಣೆಯನ್ನು ನಿಯಂತ್ರಿಸುವ ಸಾಮರ್ಥ್ಯ ಹೊಂದಿದ್ದು, ಸುಮಾರು 750 ಟೇಕಾಫ್‌ (ವಿಮಾನ ಹಾರಾಟ) ಮತ್ತು ಲ್ಯಾಂಡಿಂಗ್ (ವಿಮಾನ ಇಳಿಯುವಿಕೆ)ಗಳ ಕಾರ್ಯಾಚರಣೆ ನಿರ್ವಹಿಸಲಿದೆ.

  • ರಣಜಿಯಲ್ಲಿ ಜಮ್ಮು ಮತ್ತು ಕಾಶ್ಮೀರ ಕ್ರಿಕೆಟ್ ತಂಡದ ಐತಿಹಾಸಿಕ ಸಾಧನೆ: ತ್ರಿಪುರ ವಿರುದ್ಧದ ಪಂದ್ಯ ಡ್ರಾದಲ್ಲಿ ಅಂತ್ಯಗೊಂಡ ಕಾರಣ ಜಮ್ಮು ಮತ್ತು ಕಾಶ್ಮೀರ ತಂಡವು ಇದೇ ಮೊದಲ ಬಾರಿ ರಣಜಿ ಟ್ರೋಫಿ ಕ್ರಿಕೆಇಟ್‌ ಕೂಟದ ಕ್ವಾರ್ಟರ್‌ಫೈನಲಿಗೇರಿತು. 2001-02ರ ಋತುವಿನಲ್ಲಿ ಜಮ್ಮು ಕಾಶ್ಮೀರ ತಂಡವು ನಾಕೌಟ್‌ ಹಂತಕ್ಕೇರಿತ್ತು. ಬೇರೆ ಮಾದರಿಯಲ್ಲಿ ನಡೆದಿದ್ದ ಈ ಕೂಟದಲ್ಲಿ ಜಮ್ಮು ಕಾಶ್ಮೀರ ಪ್ರಿ-ಕ್ವಾರ್ಟರ್‌ಫೈನಲ್‌ನಲ್ಲಿ ಒಡಿಶಾ ವಿರುದ್ದ 420 ರನ್ನುಗಳ ಭಾರೀ ಅಂತರದಿಂದ ಸೋತಿತ್ತು.

  • ವಿಶ್ವದ ಅತಿದೊಡ್ಡ ಔದ್ಯಮಿಕ ತರಬೇತಿ ಮತ್ತು ಅಭಿವೃದ್ಧಿ ಕೇಂದ್ರ ಆರಂಭಿಸಲಿರುವ ಟಿಸಿಎಸ್:  ದೇಶದ ಪ್ರಮುಖ ಸಾಫ್ಟ್ ವೇರ್‌ ದಿಗ್ಗಜ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್‌ (ಟಿಸಿಎಸ್‌), ಕೇರಳದ ತಿರುವನಂತಪುರಂನಲ್ಲಿ ವಿಶ್ವದಲ್ಲಿಯೇ ಅತಿದೊಡ್ಡ ಔದ್ಯಮಿಕ ತರಬೇತಿ ಮತ್ತು ಅಭಿವೃದ್ಧಿ ಕೇಂದ್ರ ಆರಂಭಿಸಲಿದೆ. ಈ ಕೇಂದ್ರ ಪ್ರತಿ ವರ್ಷ 50 ಸಾವಿರ ವೃತ್ತಿಪರರಿಗೆ ತರಬೇತಿ ನೀಡುವ ಸಾಮರ್ಥ್ಯ ಹೊಂದಿರಲಿದೆ. ತರಬೇತಿ ಕೇಂದ್ರ, ನಗರದ ಟೆಕ್‌ ಪಾರ್ಕ್‌ನಲ್ಲಿರುವ 97 ಎಕರೆ ಪ್ರದೇಶದಲ್ಲಿ ನಿರ್ಮಾಣವಾಗಲಿದೆ. ಒಂದೇ ಬಾರಿಗೆ 15 ಸಾವಿರ ವೃತ್ತಿಪರರಿಗೆ ಮತ್ತು ವಾರ್ಷಿಕವಾಗಿ 50 ಸಾವಿರ ಮಂದಿಗೆ ತರಬೇತಿ ನೀಡುವ ಸಾಮರ್ಥಯ ಹೊಂದಿರಲಿದೆ ಎಂದು ಟಿಸಿಎಸ್‌ನ ಕಾರ್ಯನಿರ್ವಾಹಕ ನಿರ್ದೇಶಕ ಎನ್‌. ಚಂದ್ರಶೇಖರನ್‌ ತಿಳಿಸಿದ್ದಾರೆ.

 

ಪ್ರಚಲಿತ ವಿದ್ಯಮಾನಗಳು ಡಿಸೆಂಬರ್ 30, 2013


ಮೈಕ್ರೋಸಾಫ್ಟ್ ಸ್ಥಾಪಕ ಬಿಲ್‌ ಗೇಟ್ಸ್‌ ವಿಶ್ವದ ಅತ್ಯಂತ ಶ್ರೀಮಂತ ವ್ಯಕ್ತಿ
ಪ್ರಚಲಿತ ವಿದ್ಯಮಾನಗಳು ಡಿಸೆಂಬರ್ 30, 2013ಬರೋಬ್ಬರಿ ರೂ.4.86 ಲಕ್ಷ ಕೋಟಿ ಆಸ್ತಿ ಹೊಂದುವ ಮೂಲಕ ವಿಶ್ವದ ಅತಿ ಶ್ರೀಮಂತ ಎಂಬ ಹೆಗ್ಗಳಿಕೆಗೆ ಮೈಕ್ರೋಸಾಫ್ಟ್ ಸ್ಥಾಪಕ ಬಿಲ್‌ ಗೇಟ್ಸ್‌ ಮತ್ತೆ ಪಾತ್ರರಾಗಿದ್ದಾರೆ. ಇದುವರೆಗೆ ಈ ಸ್ಥಾನ ಹೊಂದಿದ್ದ ಮೆಕ್ಸಿಕೋದ ಉದ್ಯಮಿ ಕಾರ್ಲೋಸ್‌ ಸ್ಲಿಮ್‌ 3ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದಾರೆ.
ಶ್ರೀಮಂತರ ಪಟ್ಟಿ:
  • ಬ್ಲೂಂಬರ್ಗ್‌ ಸಂಸ್ಥೆ 300 ಮಿಲಿಯನೇರ್‌ಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ 2013 ಡಿಸೆಂಬರ್ 31 ರವರೆಗೆ ವಿವಿಧ ಉದ್ಯಮಿಗಳು ಹೊಂದಿರುವ ಆಸ್ತಿಯನ್ನು ಪ್ರಕಟಿಸಿದೆ.
  • ಅದರನ್ವಯ 2013ರಲ್ಲಿ ಗೇಟ್ಸ್‌ ಆಸ್ತಿಯಲ್ಲಿ ಶೇ.40ರಷ್ಟು ಅಂದರೆ, ಸುಮಾರು 97 ಸಾವಿರ ಕೋಟಿ ರೂ. ಹೆಚ್ಚಳವಾಗಿದೆ.
  • 2013ರ ಅಂತ್ಯಕ್ಕೆ ಗೇಟ್ಸ್‌ ಷೇರುದಾರ ಕಂಪನಿಗಳಾದ ಮೈಕ್ರೋಸಾಫ್ಟ್, ಕೆನಡಿಯನ್‌ ರೈಲ್ವೇ ಮತ್ತು ಶೌಚಾಲಯ ಉತ್ಪನ್ನ ತಯಾರಿಕಾ ಕಂಪನಿ ಇಕೋಲ್ಯಾಬ್‌ ಷೇರುಗಳ ಬೆಲೆ ಕ್ರಮವಾಗಿ ಶೇ.45ರವರೆಗೆ ಹೆಚ್ಚಾಗಿದ್ದು ಆದಾಯ ವೃದ್ಧಿಗೆ ಕಾರಣವಾಗಿದೆ ಎಂದು ಹೇಳಲಾಗಿದೆ.
  • ಇನ್ನು ಎರಡನೇ ಸ್ಥಾನವನ್ನು ಲಾಸ್‌ ವೇಗಾಸ್‌ ಸ್ಯಾಂಡ್ಸ್‌ ಕಾರ್ಪೋರೇಷನ್‌ (ಮೋಜು ಮಂದಿರ) ನ ಸ್ಥಾಪಕ ಶೆಲ್ಡನ್‌ ಅಡೆಲ್ಸನ್‌, ತಮ್ಮ ಆದಾಯವನ್ನು ಶೇ.71ರಷ್ಟು ವೃದ್ಧಿಸಿಕೊಂಡು 4.53 ಲಕ್ಷ ಕೋಟಿ ರೂ. ಸಂಪತ್ತಿನೊಂದಿಗೆ 2ನೇ ಸ್ಥಾನಕ್ಕೇರಿದ್ದಾರೆ.
  • ಆದರೆ ಕಾರ್ಲೋಸ್‌ ಸ್ಲಿಮ್‌ ಅವರ ಆದಾಯ ಶೇ.12ರಷ್ಟು ಕಡಿಮೆಯಾಗಿದ್ದು 4 ಲಕ್ಷ ಕೋಟಿ ರೂ. ಆಸ್ತಿಯೊಂದಿಗೆ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ.

ಸ್ವದೇಶಿ ನಿರ್ಮಿತ ಕ್ರಯೋಜನಿಕ್ ಎಂಜಿನ್ ಹೊಂದಿರುವ ಜಿಎಸ್‌ಎಲ್‌ವಿ ಡಿ- 5 ಯಶಸ್ವಿ ಉಡಾವಣೆ
gslv d5ಚಂದ್ರಯಾನ, ಮಂಗಳಯಾನ ಬಳಿಕ ಇಸ್ರೋಗೆ ಮತ್ತೊಂದು ಯಶಸ್ಸಿನ ಗರಿ, ಸ್ವದೇಶಿ ನಿರ್ಮಿತ ಕ್ರಯೋಜನಿಕ್ ಎಂಜಿನ್ ಹೊಂದಿರುವ ಜಿಎಸ್‌ಎಲ್‌ವಿ ಡಿ- 5 ನಭಕ್ಕೆ ನೆಗೆದಿದೆ. ಜಿಎಸ್‌ಎಲ್‌ವಿ- ಡಿ5ರ ಯಶಸ್ವಿ ಪ್ರಯೋಗದೊಂದಿಗೆ ಸ್ವದೇಶಿ ನಿರ್ಮಿತ ಕ್ರಯೋಜನಿಕ್ ಎಂಜಿನ್ ರಾಕೆಟ್‌ನ ಯಶಸ್ವಿ ಪ್ರಯೋಗ ನಡೆಸಿದ ವಿಶ್ವದ ಆರನೇ ರಾಷ್ಟ್ರ ಎನ್ನುವ ಗೌರವಕ್ಕೆ ಭಾರತ ಪಾತ್ರವಾಗಿದೆ. ಈಗಾಗಲೇ ಅಮೆರಿಕ, ರಷ್ಯಾ, ಜಪಾನ್, ಚೀನಾ ಮತ್ತು ಫ್ರಾನ್ಸ್ ಸ್ವದೇಶಿ ನಿರ್ಮಿತ ಕ್ರಯೋಜನಿಕ್ ಎಂಜಿನ್‌ನ ಯಶಸ್ವಿ ಪ್ರಯೋಗ ನಡೆಸಿವೆ.
4 ಬಾರಿ ಯಶಸ್ವಿ:  
ಸ್ವದೇಶಿ ನಿರ್ಮಿತ ಕ್ರಯೋಜನಿಕ್ ಎಂಜಿನ್ ಭಾರತದ ಪಾಲಿಗೆ ಸವಾಲಾಗಿತ್ತು. 2001ರಿಂದ ಈ ನಿಟ್ಟಿನಲ್ಲಿ ಇಸ್ರೋ ನಡೆಸಿದ ಏಳು ಉಡ್ಡಯನದಲ್ಲಿ ನಾಲ್ಕರಲ್ಲಿ ಮಾತ್ರ ಇಸ್ರೋಗೆ ಯಶಸ್ಸು ಸಿಕ್ಕಿತ್ತು. ಜಿಎಸ್‌ಎಲ್‌ವಿ ಡಿ-5 ರಾಕೆಟ್‌ 8ನೇ ಉಡ್ಡಯನ. 2010ರಲ್ಲಿ ಒಂದೇ ವರ್ಷ ಜಿಎಸ್‌ಎಲ್‌ವಿ ಪ್ರಯೋಗ ಸತತ ಎರಡು ಬಾರಿ ವೈಫಲ್ಯ ಕಂಡಿತ್ತು.
ಲಾಭ ಏನು?
  • ಮಂಗಳಯಾನ ಹಾಗೂ ಚಂದ್ರಯಾನ-2ರಂತಹ ಮಹತ್ವದ ಯೋಜನೆಗಳಿಗೆ ಅನುಕೂಲವಾಗಲಿದೆ.
  • ಬಹುಕೋಟಿ ಮೊತ್ತದ ವಾಣಿಜ್ಯ ಉಪಗ್ರಹಗಳ ಉಡ್ಡಯನ ಮಾರುಕಟ್ಟೆಯನ್ನು ಪ್ರವೇಶಿಸುವ ನಿಟ್ಟಿನಲ್ಲಿ ಹಾಗೂ 4 ಟನ್‌ಗಳಷ್ಟು ಭಾರದ ಉಪಗ್ರಹಗಳನ್ನು ಉಡ್ಡಯನ ಮಾಡುವ ನಿಟ್ಟಿನಲ್ಲಿ ಮೊದಲ ಹೆಜ್ಜೆಯಾಗಿದೆ.
  • ಸ್ವದೇಶಿ ನಿರ್ಮಿತ ಕ್ರಯೋಜನಿಕ್ ಎಂಜಿನ್‌ನಿಂದಾಗಿ ನಮ್ಮದೇ ರಾಕೆಟ್‌ಗಳ ಮೂಲಕವೇ ಸಂವಹನ ಉಪಗ್ರಹಗಳನ್ನು ಉಡ್ಡಯನ ಮಾಡಬಹುದಾಗಿದೆ. ಇದರಿಂದ ದೇಶದಿಂದ ಹೊರಹೋಗುತ್ತಿದ್ದ ದೊಡ್ಡ ಪ್ರಮಾಣದ ವಿದೇಶಿ ವಿನಿಮಯವನ್ನು ಉಳಿಸಿದಂತಾಗುತ್ತದೆ.
  • ಜಿಎಸ್‌ಎಲ್‌ವಿ-ಡಿ5 ರಾಕೆಟ್ ಜಿಸ್ಯಾಟ್-14 ಉಪಗ್ರಹವನ್ನು ಹೊತ್ತುಕೊಂಡು ನಭಕ್ಕೆ ಜಿಗಿದಿದೆ. ಇದು ದೇಶದ ಸಂವಹನ ಸೇವೆಗಳಿಗೆ ನೆರವಾಗಲಿದ್ದು, ತಂತ್ರಜ್ಞಾನ ಸಂಬಂಧಿ ಮೈಲಿಗಲ್ಲು ಸಾಧಿಸುವಲ್ಲಿ ಮಹತ್ತರ ಪಾತ್ರ ವಹಿಸಲಿದೆ.
  • 2014ರಲ್ಲಿ ವಿಶ್ವದಲ್ಲೇ ಉಡ್ಡಯನವಾದ ಪ್ರಥಮ ಉಪಗ್ರಹ ಎಂಬ ಹೆಗ್ಗಳಿಕೆಗೂ ಜಿಸ್ಯಾಟ್-14 ಪಾತ್ರವಾಗಲಿದೆ.
ಇದೇ ರಾಕೆಟ್ ಏಕೆ?
ಜಿಎಸ್‌ಎಲ್‌ವಿ-ಡಿ5 ರಾಕೆಟ್ ಬರೋಬ್ಬರಿ 50 ಮೀಟರ್ ಅಂದರೆ ಸುಮಾರು 15 ಅಂತಸ್ತಿನ ಕಟ್ಟಡದಷ್ಟು ಎತ್ತರವಿದೆ. ಜಿಸ್ಯಾಟ್-14 ಉಪಗ್ರಹವು ಸುಮಾರು 2 ಟನ್ ತೂಕವಿದೆ. ಇಸ್ರೋದ ಪೋಲಾರ್ ಸೆಟಲೈಟ್ ಲಾಂಚ್ ವೆಹಿಕಲ್(ಪಿಎಸ್‌ಎಲ್‌ವಿ)ಗೆ ಕೇವಲ 1.4 ಟನ್ ತೂಕದ ಉಪಗ್ರಹವನ್ನಷ್ಟೇ ಹೊರುವ ಸಾಮರ್ಥ್ಯ ಹೊಂದಿದೆ. ಹಾಗಾಗಿ ಜಿಸ್ಯಾಟ್-14ನ್ನು ಹೊತ್ತೊಯ್ಯಲು ಪಿಎಸ್‌ಎಲ್‌ವಿಗೆ ಸಾಧ್ಯವಿಲ್ಲ ಎಂಬ ಕಾರಣಕ್ಕಾಗಿಯೇ ಜಿಎಸ್‌ಎಲ್‌ವಿ-ಡಿ5 ಅನ್ನು ಆಯ್ಕೆ ಮಾಡಲಾಗಿದೆ.
3 ಹಂತಗಳು:
ಜಿಎಸ್‌ಎಲ್‌ವಿ ಮೂರು ಹಂತದ ಉಡ್ಡಯನ ನೌಕೆಯಾಗಿದೆ. ಅವೆಂದರೆ, ಸಾಲಿಡ್, ಲಿಕ್ವಿಡ್ ಹಾಗೂ ಕ್ರಯೋಜನಿಕ್ ಹಂತ. ಜಿಎಸ್‌ಎಲ್‌ವಿ-ಡಿ5 ರಾಕೆಟ್‌ನ ಮೊದಲ ಮತ್ತು ಎರಡನೇ ಹಂತವನ್ನು ಈ ಹಿಂದೆ ಜಿಎಸ್‌ಎಲ್‌ವಿ ಮಿಷನ್‌ಗೆ ಬಳಸಿದ ಮಾದರಿಯಲ್ಲೇ ವಿನ್ಯಾಸಗೊಳಿಸಲಾಗಿದೆ. ಮೂರನೇ ಹಂತವು ಸ್ವದೇಶಿ ಕ್ರಯೋಜನಿಕ್ ಹಂತವಾಗಿದೆ. ಉಳಿದ ಹಂತಗಳಿಗೆ ಹೋಲಿಸಿದರೆ ಕ್ರಯೋಜನಿಕ್ ಹಂತವು ಅತ್ಯಂತ ಪರಿಣಾಮಕಾರಿ ಹಾಗೂ ಕ್ಲಿಷ್ಟಕರ ಹಂತವಾಗಿದೆ.
ವಿನ್ಯಾಸ ಸುಧಾರಣೆ:
ಈ ಹಿಂದಿನ ಮಿಷನ್‌ಗಳಲ್ಲಿ ಹೇಗೆ ಕಾರ್ಯನಿರ್ವಹಿಸಿದೆ ಎನ್ನುವುದರ ಮೇಲೆ ಜಿಎಸ್‌ಎಲ್‌ವಿ ರಾಕೆಟ್‌ನ ವಿನ್ಯಾಸ ಹಾಗೂ ಸ್ವದೇಶಿ ನಿರ್ಮಿತ ಕ್ರಯೋಜನಿಕ್ ವ್ಯವಸ್ಥೆಯನ್ನು ಮರುಪರಿಶೀಲನೆ ನಡೆಸಲಾಯಿತು. ಗ್ರೌಂಡ್ ಟೆಸ್ಟಿಂಗ್ ಜತೆಗೆ ರಾಕೆಟ್‌ನ ವಿನ್ಯಾಸವನ್ನು ಸುಧಾರಿಸಲಾಯಿತು. ನೌಕೆಯ ಪಯಣದ ವೇಳೆ ಕ್ರಯೋಜನಿಕ್ ಎಂಜಿನ್ ಅನ್ನು ರಕ್ಷಿಸುವಂತಹ ‘ಲೋವರ್ ಶ್ರೌಡ್‌’ ಹಾಗೂ ಹೆಚ್ಚಿನ ಒತ್ತಡವನ್ನು ಸಹಿಸುವಂತೆ ಕ್ರಯೋದ ವಯರ್ ಟನೆಲ್‌ನ ವಿನ್ಯಾಸದಲ್ಲಿ ಬದಲಾವಣೆ ಮಾಡಲಾಯಿತು. ಅಷ್ಟೇ ಅಲ್ಲದೆ, ಲಿಕ್ವಿಡ್ ಹೈಡ್ರೋಜನ್ ಪ್ರೊಪಲ್ಲೆಂಟ್ ಅಕ್ವಿಸಿಷನ್ ಸಿಸ್ಟಂ(ಕಶ್ಮಲೀಕರಣ ತಡೆಗೆ), ಪಾಲಿಮೈಡ್ ಪೈಪ್‌ಲೈನ್‌ಗಳು, ಲಿಕ್ವಿಡ್ ಆಕ್ಸಿಜನ್ ಹಾಗೂ ಲಿಕ್ವಿಡ್ ಹೈಡ್ರೋಜನ್ ಲೆವೆಲ್ ಸೆನ್ಸರ್‌ಗಳು ಮತ್ತಿತರ ಪ್ರಮುಖ ವ್ಯವಸ್ಥೆಗಳನ್ನು ಸುಧಾರಿಸಲಾಯಿತು.
ಹಿಂದಿನ ಯೋಜನೆಗಳು:
ಜಿಎಸ್‌ಎಲ್‌ವಿ-ಡಿ5  ಹೊತ್ತೊಯ್ದ ‘ಜಿಸ್ಯಾಟ್‌ 14′ ಭಾರತದ 23ನೇ ಸಂವಹನ ಉಪಗ್ರಹವಾಗಿದೆ. 2001, 2003, 2004 ಮತ್ತು 07ರಲ್ಲಿ ಜಿಎಸ್‌ಎಲ್‌ವಿ ನೆರವಿನಿಂದ ಜಿಸ್ಯಾಟ್‌ ಉಪಗ್ರಹಗಳನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿತ್ತು. 2010ರಲ್ಲಿ ಎರಡು ಜಿಎಸ್‌ಎಲ್‌ವಿ ರಾಕೆಟ್‌ ವಿಫಲವಾದ ನಾಲ್ಕು ವರ್ಷಗಳ ಬಳಿಕ ಈ ಯಶಸ್ಸು ದೊರೆತಿರುವುದು ಇಸ್ರೊ ವಿಜ್ಞಾನಿಗಳಲ್ಲಿಯ ಆತ್ಮವಿಶ್ವಾಸ ಇಮ್ಮಡಿಗೊಳಿಸಿದೆ. ಜೊತೆಗೆ ಭಾರತದ ಬಾಹ್ಯಾಕಾಶ ತಂತ್ರಜ್ಞಾನದ ಕಿರೀಟಕ್ಕೆ ಮತ್ತೊಂದು ಗರಿ ಮೂಡಿಸಿದೆ.

ಪ್ರತಿಷ್ಠಿತ ಆಷಸ್ ಕ್ರಿಕೆಟ್ ಸರಣಿ ಮುಡಿಗೇರಿಸಿಕೊಂಡ ಆಸ್ಟ್ರೇಲಿಯಾ
ashesನಿರೀಕ್ಷೆಯಂತೆ ಆಸ್ಟ್ರೇಲಿಯಾ ತಂಡ ಇಂಗ್ಲೆಂಡ್‌ ತಂಡವನ್ನು ಐದನೇ ಹಾಗೂ ಅಂತಿಮ ಟೆಸ್ಟ್‌ನಲ್ಲಿ 281 ರನ್‌ಗಳಿಂದ ಹೆಡೆಮುರಿ ಕಟ್ಟಿ ಆಷಸ್‌ ಸರಣಿಯ ಇತಿಹಾಸದಲ್ಲಿ ಮೂರನೇ ಬಾರಿ 5-0ಯಿಂದ ವೈಟ್‌ ವಾಷ್‌ ಸಾಧನೆ ಮೆರೆದಿದೆ.
ವೈಟ್ ವಾಷ್ ಸಾಧನೆ:
  • ಕಳೆದ ವರ್ಷ ಇಂಗ್ಲೆಂಡ್‌ನಲ್ಲಿ ಅನುಭವಿಸಿದ್ದ 3-0 ಸೋಲಿಗೆ ಸೇಡು ತೀರಿಸಿಕೊಂಡ ಆಸ್ಟ್ರೇಲಿಯಾ ತಂಡ, ಮೂರನೇ ಬಾರಿ ಆಯಷಸ್‌ ಸರಣಿಯನ್ನು ವೈಟ್‌ವಾಷ್‌ ಸಾಧನೆ ಮಾಡಿತು.
  • ಇದಕ್ಕೂ ಮುನ್ನ 1920-21ರಲ್ಲಿ ಆರ್ಮ್ಸ್ಟ್ರಾಂಗ್‌ ನೇತೃತ್ವದಲ್ಲಿ ಹಾಗೂ 2006-07ರಲ್ಲಿ ರಿಕಿ ಪಾಂಟಿಂಗ್‌ ಸಾರಥ್ಯದಲ್ಲಿ ತಂಡ 5-0ಯಿಂದ ಸರಣಿ ಗೆದ್ದ ಸಾಧನೆ ಮಾಡಿತು.
  • ಮೈಕಲ್‌ ಕಾರ್ಕ್‌ ಪಡೆ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ 21 ದಿನಗಳ ಆಟದಲ್ಲೇ ಸರಣಿ ಗೆದ್ದ ಸಾಧನೆ ಮಾಡಿತು.
  • ಆರ್ಮ್ಸ್ಟ್ರಾಂಗ್‌ ಪಡೆ 24 ದಿನದಲ್ಲಿ ಸರಣಿ ಗೆದ್ದರೆ ಪಾಂಟಿಂಗ್‌ ತಂಡ 23 ದಿನಗಳಲ್ಲಿ ವೈಟ್‌ವಾಷ್‌ ಮಾಡಿತ್ತು.
  • ಸರಣಿಯಲ್ಲಿ 37 ವಿಕೆಟ್‌ ಪಡೆದ ಮಿಚೆಲ್‌ ಜಾನ್ಸನ್‌ ಸರಣಿ ಶ್ರೇಷ್ಠ ಪಡೆದರೆ, ರಯಾನ್‌ ಹ್ಯಾರಿಸ್‌ 8 ವಿಕೆಟ್‌ನೊಂದಿಗೆ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾದರು..

ಪ್ರಚಲಿತ ವಿದ್ಯಮಾನಗಳು ಡಿಸೆಂಬರ್ 29, 2013


ಪೋರ್ಚುಗಲ್‌ ಫುಟ್‌ಬಾಲ್‌ನ ದಂತಕತೆ ಯುಸೇಬಿಯೊ ಅಧ್ಯಾಯ ಅಂತ್ಯ
ಪ್ರಚಲಿತ ವಿದ್ಯಮಾನಗಳು ಡಿಸೆಂಬರ್ 29, 2013ಪೋರ್ಚುಗಲ್‌ ಫುಟ್‌ಬಾಲ್‌ನ ದಂತಕತೆ ಹಾಗೂ 1966 ರ ಫಿಫಾ ವಿಶ್ವಕಪ್‌ ಟೂರ್ನಿಯ ‘ಹೀರೊ’ ಯುಸೇಬಿಯೊ ಹೃದಯಾಘಾತದಿಂದ ನಿಧನರಾದರು. ಇದರೊಂದಿಗೆ ಪೋರ್ಚುಗೀಸ್‌ ಫುಟ್‌ಬಾಲ್‌ನ ಅಧ್ಯಾಯವೊಂದು ತೆರೆಕಂಡಿದೆ.
ಪೋರ್ಚುಗಲ್ ಹೀರೋ:
ಯುಸೇಬಿಯೊ ಡ ಸಿಲ್ವ ಫೆರೀರಾ 1960ರ ದಶಕದಲ್ಲಿ ಪೋರ್ಚುಗಲ್‌ ಫುಟ್‌ಬಾಲ್‌ನ ಶಕ್ತಿ ಎನಿಸಿಕೊಂಡಿದ್ದರು. 1965 ರಲ್ಲಿ ಯೂರೋಪಿನ ‘ವರ್ಷದ ಆಟಗಾರ’ ಗೌರವ ತಮ್ಮದಾಗಿಸಿಕೊಂಡಿದ್ದರು. ಆದರೆ 1966ರ ವಿಶ್ವಕಪ್‌ನಲ್ಲಿ ತೋರಿದ ಆಟದಿಂದಾಗಿ ಅವರು ಫುಟ್‌ಬಾಲ್‌ ಆಡುವ ಎಲ್ಲ ದೇಶಗಳಲ್ಲಿ ಜನಪ್ರಿಯರಾಗಿದ್ದರು. ಈ ಟೂರ್ನಿಯಲ್ಲಿ ಯುಸೇಬಿಯೊ ಒಟ್ಟು ಒಂಬತ್ತು ಗೋಲುಗಳನ್ನು ಗಳಿಸಿದ್ದರು. ಇವರ ಅಮೋಘ ಆಟದ ನೆರವಿನಿಂದಾಗಿ ಪೋರ್ಚುಗಲ್‌ ತಂಡ ಸೆಮಿಫೈನಲ್‌ವರೆಗೆ ಪ್ರವೇಶಿಸಿತ್ತು. ‘ಬ್ಲಾಕ್‌ ಪ್ಯಾಂಥರ್‌’ ಹಾಗೂ ‘ದಿ ಕಿಂಗ್‌’ ಎಂಬ ಹೆಸರಿನಲ್ಲಿ ಜನಪ್ರಿಯರಾಗಿದ್ದ ಯುಸೇಬಿಯೊ 1942 ರಲ್ಲಿ ಮೊಜಾಂಬಿಕ್‌ನಲ್ಲಿ ಹುಟ್ಟಿದರು.
ದಂತಕತೆ:
ಯುಸೇಬಿಯೊ 15 ವರ್ಷಗಳ ಕಾಲ ಈ ಕ್ಲಬ್‌ ಪರ ಆಡಿದ್ದಾರೆ. ಬೆನ್ಫಿಕಾ ಕ್ಲಬ್‌ 1962ರ ಯೂರೋಪಿಯನ್‌ ಕಪ್‌ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಲಿಸ್ಬನ್‌ನ ತಂಡ ಫೈನಲ್‌ನಲ್ಲಿ ರಿಯಲ್‌ ಮ್ಯಾಡ್ರಿಡ್‌ ವಿರುದ್ಧ ಜಯ ಪಡೆದಿತ್ತು. 1975 ರಲ್ಲಿ ಬೆನ್ಫಿಕಾ ಪರ ಕೊನೆಯ ಪಂದ್ಯವನ್ನಾಡಿದ್ದ ಅವರು ಆ ಬಳಿಕ ಉತ್ತಮ ಅಮೆರಿಕದ ಕೆಲವು ಕ್ಲಬ್‌ಗಳನ್ನು ಪ್ರತಿನಿಧಿಸಿದ್ದರು. 1979 ರಲ್ಲಿ ವಿದಾಯ ಹೇಳಿದ್ದರು. ಪೋರ್ಚುಗಲ್‌ ಪರ ಒಟ್ಟು 64 ಅಂತರರಾಷ್ಟ್ರೀಯ ಪಂದ್ಯಗಳನ್ನಾಡಿರುವ ಈ ಮುನ್ನಡೆ ಆಟಗಾರ 41 ಗೋಲುಗಳನ್ನು ಗಳಿಸಿದ್ದಾರೆ. ಫ್ರೀ ಕಿಕ್‌ ಅವಕಾಶಗಳಲ್ಲಿ ಚೆಂಡನ್ನು ಗುರಿ ಸೇರಿಸುವ ವಿಶೇಷ ಸಾಮರ್ಥ್ಯ ಯುಸೇಬಿಯೊ ಕಾಲುಗಳಲ್ಲಿ ಅಡಗಿದ್ದವು.

ಅಂತರರಾಜ್ಯ ವಿದ್ಯುತ್ ಸಂಪರ್ಕ ಕಲ್ಪಿಸುವ ವಿದ್ಯುತ್ ಗ್ರಿಡ್ ಗಳು: ಪಕ್ಷಿ ನೋಟ
gridದೇಶದ ಒಂದು ಭಾಗವನ್ನು ಇನ್ನೊಂದು ಭಾಗದೊಂದಿಗೆ ಸಂಪರ್ಕಿಸುವ ಕಾರ್ಯವನ್ನು ರಾಷ್ಟ್ರೀಯ ಹೆದ್ದಾರಿಗಳು ಮಾಡುತ್ತವೆ. ಅದೇ ರೀತಿ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ವಿದ್ಯುತ್ ಅನ್ನು ಪ್ರವಹಿಸುವ ಕೆಲಸವನ್ನು ಗ್ರಿಡ್‌ಗಳು ಮಾಡುತ್ತವೆ. ಈ ಗ್ರಿಡ್‌ಗಳ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ.
ಗ್ರಿಡ್ ಅಂದೆರೇನು?
ಗ್ರಿಡ್ ಅಥವಾ ವಿದ್ಯುತ್ ಜಾಲ ಒಂದು ಸಾಮಾನ್ಯ ಟ್ರಾನ್ಸ್‌ಮಿಷನ್ ನೆಟ್‌ವರ್ಕ್. ಇದರ ಮೂಲಕ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ವಿದ್ಯುತ್ ಪ್ರವಹಿಸುತ್ತದೆ ಮತ್ತು ಲೋಡ್‌ಗಳನ್ನು ಸಂಪರ್ಕಿಸಲಾಗುತ್ತದೆ.
ಕಾರ್ಯಾಚರಣೆ ಹೇಗೆ?
ಸದ್ಯ ಭಾರತದಲ್ಲಿ ಉತ್ತರ, ಪಶ್ಚಿಮ, ಪೂರ್ವ ಮತ್ತು ಈಶಾನ್ಯ ಪ್ರದೇಶಗಳನ್ನು ಸಮಗ್ರವಾಗಿ ಬಲಿಷ್ಠವಾದ ಸಿಂಕ್ರೋನಸ್ ಎಸಿ ಟ್ರಾನ್ಸ್‌ಮಿಷನ್ ಲಿಂಕ್‌ಗಳ ಮೂಲಕ ಸಂಪರ್ಕಿಸಲಾಗಿದೆ. ಇವುಗಳ ಮೂಲಕ ಯಾವುದೇ ಅಡೆತಡೆ ಇಲ್ಲದೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ವಿದ್ಯುತ್ ಪ್ರವಹಿಸುತ್ತದೆ. ಆದರೆ, ದಕ್ಷಿಣ ಭಾರತವು ಪ್ರತ್ಯೇಕ ಗ್ರಿಡ್ ವ್ಯವಸ್ಥೆ ಹೊಂದಿದೆ. ಎಸಿಂಕ್ರೊನಸ್ ಎಚ್‌ವಿಡಿಸಿ (ಹೈ ವೋಲ್ಟೇಜ್ ಡೈರೆಕ್ಟ್ ಕರೆಂಟ್) ಟ್ರಾನ್ಸ್‌ಮಿಷನ್ ಲಿಂಕ್ ಮೂಲಕ ದೇಶದ ಇತರೆ ಭಾಗಗಳೊಂದಿಗೆ ಸಂಪರ್ಕ ಸಾಧಿಸಿದೆ. ಇದು ವೀಲಿಂಗ್ ಸಾಮರ್ಥ್ಯದ ಮೇಲೆ ಒಂದಷ್ಟು ನಿರ್ಬಂಧ ಹೇರುತ್ತದೆ. ಇದರಿಂದ ದಕ್ಷಿಣ ಭಾರತದಿಂದ ದೇಶದ ಇತರೆ ಭಾಗಕ್ಕೆ ವಿದ್ಯುತ್‌ನ ಮುಕ್ತ ಪ್ರವಹಿಸುವಿಕೆ ಮೇಲೆ ಕಡಿವಾಣ ಬೀಳುತ್ತದೆ.
ಸಿಂಕ್ರೊನಸ್-ಎಸಿಂಕ್ರೊನಸ್:
ಎಸಿಂಕ್ರೊನಸ್ ಇಂಟರ್‌ಕನೆಕ್ಷನ್ ಇದು ಎಚ್‌ಡಿವಿಸಿ ಟರ್ಮಿನಲ್‌ಗಳ ಸಹಾಯದಿಂದ 2 ಸ್ವತಂತ್ರ ಗ್ರಿಡ್‌ಗಳ ಪರಸ್ಪರ ಜೋಡಿಸುತ್ತದೆ. ಒಂದು ಗ್ರಿಡ್‌ನಲ್ಲೇನಾದರೂ ಸಮಸ್ಯೆ ಕಾಣಿಸಿಕೊಂಡರೆ ಅದು ಇನ್ನೊಂದಕ್ಕೆ ವರ್ಗಾವಣೆಯಾಗುವುದನ್ನು ತಡೆಯುತ್ತದೆ. ಸಿಂಕ್ರೊನಸ್ ಇಂಟರ್ ಸಂಪರ್ಕ ಇಲ್ಲಿ 2 ಸ್ವತಂತ್ರ ಗ್ರಿಡ್‌ಗಳನ್ನು ಎಸಿ ಟ್ರಾನ್ಸ್‌ಮಿಷನ್ ಲಿಂಕ್‌ಗಳ ಮೂಲಕ ಸಂಪರ್ಕಿಸಲಾಗುತ್ತದೆ. ಇದು ಸಿಂಕ್ರೊನೈಜ್ಡ್ ಫ್ರೀಕ್ವೆನ್ಸಿ ಮೂಲಕ ಕಾರ್ಯಾಚರಿಸುತ್ತದೆ. ಈ ರೀತಿಯ ಅತಿದೊಡ್ಡ ಗ್ರಿಡ್ ಅಂದ್ರೆ ಯುರೋಪ್ ಖಂಡದ ಸಿಂಕ್ರೊನಸ್ ಗ್ರಿಡ್(ಇಎನ್‌ಟಿಎಸ್‌ಒ-ಇ). ಇದು 667 ಗಿಗಾವಾಟ್ಸ್ ವಿದ್ಯುತ್ ಉತ್ಪಾದನೆ ಸಾಮರ್ಥ್ಯ ಹೊಂದಿದೆ. ಅಲ್ಲದೆ, ಅತಿ ಹೆಚ್ಚು ಭಾಗವನ್ನು ಈ ವ್ಯವಸ್ಥೆ ಮೂಲಕ ಸಂಪರ್ಕಿಸಲಾಗಿದೆ.
ದೊಡ್ಡ ಗ್ರಿಡ್ ಲಾಭ ಏನು?
ದೊಡ್ಡ ಗ್ರಿಡ್‌ಗಳು ಹೆಚ್ಚು ವಿದ್ಯುತ್‌ಗೆ ಸಂಬಂಧಿಸಿ ಹೆಚ್ಚು ಜಡತ್ವ ಹೊಂದಿರುತ್ತವೆ. ಹಾಗಾಗಿ ಅವು ಹೆಚ್ಚು ಸ್ಥಿರವಾಗಿರುತ್ತವೆ. ಸಮಸ್ಯೆಗಳು ಕಾಣಿಸಿಕೊಳ್ಳುವುದು ಕಡಿಮೆ.
ಅನನುಕೂಲತೆಗಳೇನು?
ಪ್ರಮುಖ ಲೈನ್‌ನಲ್ಲಿ ಗಂಭೀರ ಸಮಸ್ಯೆಗಳೇನಾದರೂ ಕಾಣಿಸಿಕೊಂಡರೆ ಇಡೀ ದೇಶದ ಬಹುತೇಕ ಭಾಗ ಕತ್ತಲೆಯಲ್ಲಿ ಮುಳುಗಬೇಕಾಗುತ್ತದೆ. 2012ರ ಜುಲೈನಲ್ಲಿ ಆಗ್ರಾ- ಗ್ವಾಲಿಯರ್- ಬಿನಾ ಲೈನ್‌ನಲ್ಲಿ ಹೆಚ್ಚುವರಿ ಲೋಡಿಂಗ್‌ನಿಂದ ಸಮಸ್ಯೆ ಕಾಣಿಸಿಕೊಂಡಿತ್ತು. ಇದು ಉತ್ತರ ಭಾರತವನ್ನು ಪಶ್ಚಿಮ ಭಾರತದೊಂದಿಗೆ ಸಂಪರ್ಕಿಸುವ ಗ್ರಿಡ್ ಆಗಿದೆ. ಈ ಗ್ರಿಡ್‌ನಲ್ಲಿ ಕಾಣಿಸಿಕೊಂಡ ಸಮಸ್ಯೆ ಪೂರ್ವಭಾರತದ ಗ್ರಿಡ್ ಮೇಲೂ ಪ್ರಭಾವ ಬೀರಿತು. ಯಾಕೆಂದರೆ ಪೂರ್ವದ ಗ್ರಿಡ್‌ಗಳು ಉತ್ತರ, ಪಶ್ಚಿಮದ ಗ್ರಿಡ್‌ಗಳ ಜತೆಗೆ ಸಿಂಕ್ರೊನಸ್ ಆಗಿದ್ದವು

ಖ್ಯಾತ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊಗೆ ‘ಸಿಂಬಾಲ್ ಆಫ್ ಪೋರ್ಚುಗಲ್‌’ ಪ್ರಶಸ್ತಿ
ronaldoಪೋರ್ಚುಗಲ್ ದೇಶದ ಅತ್ಯುನ್ನತ ಪ್ರಶಸ್ತಿಯನ್ನು ‘ಸಿಂಬಾಲ್ ಆಫ್ ಪೋರ್ಚುಗಲ್‌’ ಆ ದೇಶದ ಖ್ಯಾತ ಫುಟ್ಬಾಲ್ ತಾರೆ ಕ್ರಿಸ್ಟಿಯಾನೊ ರೊನಾಲ್ಡೊ ಅವರಿಗೆ ನೀಡಲಾಗಿದೆ. ರೊನಾಲ್ಡೊ ಅವರಿಗೆ ಪ್ರಶಸ್ತಿ ನೀಡಿರುವ ಕುರಿತು ಪೋರ್ಚುಗಲ್ ಅಧ್ಯಕ್ಷರೇ ಅಧಿಕೃತವಾಗಿ ಖಚಿತಪಡಿಸಿದ್ದಾರೆ.
ರೊನಾಲ್ಡೊ ಕೊಡುಗೆ:
‘ಗ್ರ್ಯಾಂಡ್ ಆಫೀಸರ್ ಆಫ್ ದಿ ಆರ್ಡರ್ ಆಫ್ ಪ್ರಿನ್ಸ್ ಹೆನ್ರಿ ದಿ ನೆವಿಗೇಟರ್‌’ ಪ್ರಶಸ್ತಿಯನ್ನು ಲಿಸ್ಬನ್‌ನಲ್ಲಿರುವ ಅರಮನೆಯಲ್ಲಿ ಅಧ್ಯಕ್ಷ ಅನಿಬಲ್ ಕಾವಾಕೋ ಸಿಲ್ವಾ ಅವರಿಂದ ರೊನಾಲ್ಡೊ, ಸ್ವೀಕರಿಸಲಿದ್ದಾರೆ. ಅಂತಾರಾಷ್ಟ್ರೀಯ ಮಟ್ಟದಲ್ಲಿ ಪೋರ್ಚುಗಲ್‌ಗೆ ನೀಡಿದ ಕೊಡುಗೆಯನ್ನು ಪರಿಗಣಿಸಿ ಮತ್ತು ಭವಿಷ್ಯದ ತಲೆಮಾರಿಗೆ ಮಾದರಿಯಾಗಿರುವ ಹಿನ್ನೆಲೆಯಲ್ಲಿ ರೊನಾಲ್ಡೊಗೆ ಈ ಪ್ರಶಸ್ತಿ ನೀಡಲು ತೀರ್ಮಾನಿಸಲಾಗಿದೆ ಎಂದು ಪೋರ್ಚುಗಲ್ ಫುಟ್ಬಾಲ್ ಸಂಸ್ಥೆಯ ಅಧ್ಯಕ್ಷ ತಿಳಿಸಿದ್ದಾರೆ. ಕಳೆದ ವರ್ಷ ನವೆಂಬರ್‌ನಲ್ಲಿ ಸ್ವೀಡನ್‌ನಲ್ಲಿ ನಡೆದ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ರೊನಾಲ್ಡೊ ಅವರು, ಬರುವ ಜೂನ್‌ನಲ್ಲಿ ನಡೆಯಲಿರುವ ಫುಟ್ಬಾಲ್ ವಿಶ್ವಕಪ್‌ಗೆ ಪೋರ್ಚುಗಲ್ ಅರ್ಹತೆ ಪಡೆಯಲು ನೆರವಾಗಿದ್ದರು.
‘ಬ್ಯಾಲನ್ ಡಿ ಓರ್’ ಪ್ರಶಸ್ತಿಗಾಗಿ ಆಯ್ಕೆ ಮಾಡಲಾಗಿರುವ ಆಟಗಾರರ ಅಂತಿಮ ಪಟ್ಟಿಯಲ್ಲಿ ಹೆಸರು ಪಡೆದಿರುವ ರೊನಾಲ್ಡೊ ಮತ್ತು ಆತ ಆಡುತ್ತಿರುವ ರಿಯಲ್ ಮ್ಯಾಡ್ರಿಡ್ ತಂಡ ಸೇರಿ ಅವರು ಹುಟ್ಟಿದ ಸ್ಥಳವಾದ ಮದೆರಾ ದ್ವೀಪದಲ್ಲಿ ಇತ್ತೀಚೆಗೆ ವಸ್ತು ಸಂಗ್ರಹಾಲಯವೊಂದನ್ನು ಅನಾವರಣ ಮಾಡಿದ್ದಾರೆ.

 

ಪ್ರಚಲಿತ ವಿದ್ಯಮಾನಗಳು ಡಿಸೆಂಬರ್ 28, 2013


ಮಹತ್ವಾಕಾಂಕ್ಷಿ ನೂತನ ಭೂಸ್ವಾಧೀನ ಶಾಸನ ಜಾರಿಗೆ: ಕೇಂದ್ರ ಸರ್ಕಾರ
ಪ್ರಚಲಿತ ವಿದ್ಯಮಾನಗಳು ಡಿಸೆಂಬರ್ 28, 2013ಸುಮಾರು 120 ವರ್ಷಗಳ ಹಿಂದೆ ಬ್ರಿಟಿಷರು ರೂಪಿಸಿದ್ದ ಭೂಸ್ವಾಧೀನ ಕಾಯ್ದೆಯನ್ನು ಬದಲಿಸುವ ಉದ್ದೇಶದಿಂದ ಕಳೆದ ಸೆಪ್ಟೆಂಬರ್‌ನಲ್ಲಿ ಸಂಸತ್ತು ಅಂಗೀಕರಿಸಿದ್ದ ಯುಪಿಎ ಸರ್ಕಾರದ ಮಹತ್ವಾಕಾಂಕ್ಷೆಯ ನೂತನ ಭೂಸ್ವಾಧೀನ ಶಾಸನ ಹೊಸವರ್ಷದ ದಿನದಿಂದ ಜಾರಿಗೆ ಬಂದಿದೆ.
ಕಾಯ್ದೆಯ ಸ್ವರೂಪ:
  • ಹೆದ್ದಾರಿ, ಕಟ್ಟಡ ಅಥವಾ ಕೈಗಾರಿಕಾ ಉದ್ದೇಶಕ್ಕೆ ಸ್ವಾಧೀನಪಡಿಸಿಕೊಳ್ಳುವ ಜಮೀನಿಗೆ ಹೆಚ್ಚಿನ ಪರಿಹಾರ ಒದಗಿಸುವ ಹಾಗೂ ಪುನರ್ವಸತಿ ಕಲ್ಪಿಸುವ ‘ನ್ಯಾಯಯುತ ಪರಿಹಾರ ಹಾಗೂ ಭೂಸ್ವಾಧೀನ.
  • ಪುನಾವಸತಿಯಲ್ಲಿ ಪಾರದರ್ಶಕತೆ ಕಾಯ್ದೆ’ಯಡಿ ಸಾರ್ವಜನಿಕ-ಖಾಸಗಿ ಸಹಭಾಗಿತ್ವದ ಯೋಜನೆಗೆ ಭೂಮಿ ಸ್ವಾಧೀನಪಡಿಸಿಕೊಳ್ಳುವ ಮುನ್ನ ಶೇ.70 ಹಾಗೂ ಖಾಸಗಿ ಕಂಪನಿಗಳ ಉದ್ದೇಶಕ್ಕಾದರೆ ಶೇ.80 ರೈತರ ಒಪ್ಪಿಗೆ ಪಡೆಯುವುದು ಅನಿವಾರ್ಯವಾಗಲಿದೆ.
  • ಇದಲ್ಲದೆ ಭೂಸ್ವಾಧೀನದಿಂದಾಗಿ ಉದ್ಭವಿಸಬಹುದಾದ ವಿವಾದಗಳನ್ನು ಇತ್ಯರ್ಥಪಡಿಸಲು ರಾಜ್ಯ ಸರ್ಕಾರಗಳು ಭೂಸ್ವಾಧೀನ ಪರಿಹಾರ ಹಾಗೂ ಪುನರ್ವಸತಿ ಪ್ರಾಧಿಕಾರ ಸೇರಿದಂತೆ ಕನಿಷ್ಠ 6 ಸಂಸ್ಥೆಗಳನ್ನು ರಚಿಸಬೇಕಾಗುತ್ತದೆ.
  • ಹೊಸ ಕಾಯ್ದೆಯಿಂದಾಗಿ ಗ್ರಾಮೀಣ ಪ್ರದೇಶಗಳ ಭೂಮಾಲೀಕರಿಗೆ ಈಗಿರುವುದಕ್ಕಿಂತ ನಾಲ್ಕು ಪಟ್ಟು ಹಾಗೂ ನಗರ ಪ್ರದೇಶಗಳ ಭೂ ಒಡೆಯರಿಗೆ 2 ಪಟ್ಟು ಹೆಚ್ಚು ಪರಿಹಾರ ಲಭಿಸಲಿದೆ. ಸಂಪೂರ್ಣ ಪರಿಹಾರ ಪಾವತಿಸುವವರೆಗೂ ರೈತರು ತಮ್ಮ ಜಮೀನನ್ನು ಬಿಟ್ಟುಕೊಡಬೇಕಾದ ಪ್ರಮೇಯವಿರುವುದಿಲ್ಲ. ಕಂಪನಿಗಳು ಇಡೀ ಜಮೀನನ್ನು ಖರೀದಿಸುವ ಬದಲು ಗುತ್ತಿಗೆ ಪಡೆಯಬಹುದಾಗಿರುತ್ತದೆ.
  • ಖಾಸಗಿಯಾಗಿ ಮಾತುಕತೆ ನಡೆಸಿ ನಗರಗಳಲ್ಲಿ 50 ಎಕರೆ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ 100 ಎಕರೆಗಿಂತ ಹೆಚ್ಚು ಜಮೀನು ಖರೀದಿಸುವ ಕಂಪನಿಗಳು ಭೂಮಿ ಕಳೆದುಕೊಳ್ಳುವವರಿಗೆ ಪುನರ್ವಸತಿ ಕಲ್ಪಿಸಬೇಕಾಗುತ್ತದೆ.
ಕಾಯ್ದೆಯಲ್ಲೇನಿದೆ?
  • ಗ್ರಾಮೀಣ ಪ್ರದೇಶಗಳಲ್ಲಿನ ರೈತರಿಗೆ ಮಾರುಕಟ್ಟೆ ದರದ 4 ಪಟ್ಟು ಪರಿಹಾರ
  • ನಗರ ಪ್ರದೇಶಗಳಲ್ಲಿನ ಭೂ ಸ್ವಾಧೀನಕ್ಕಾಗಿ ಮಾರುಕಟ್ಟೆ ದರದ 2 ಪಟ್ಟು ಪರಿಹಾರ
  • ಭೂಮಿ ಸಂಪೂರ್ಣವಾಗಿ ಮಾರದೇ ಲೀಸ್‌ ಆಧಾರದಲ್ಲಿ ನೀಡುವ ಅವಕಾಶ
  • ಲೀಸ್‌ ಆಧಾರದಲ್ಲಿ ಭೂಮಿ ನೀಡಿದರೆ ರೈತರಿಗೂ ಆದಾಯದಲ್ಲಿ ನಿಯಮಿತ ಪಾಲು
  • ಖಾಸಗಿ ಯೋಜನೆಗಳಿಗೆ ಭೂಮಿ ವಶಪಡಿಸಿಕೊಳ್ಳುವುದಕ್ಕೆ ಶೇ.80ರಷ್ಟು ರೈತರ ಒಪ್ಪಿಗೆ ಕಡ್ಡಾಯ
  • ಶೇ.80ಕ್ಕಿಂತ ಕಡಿಮೆ ಪ್ರಮಾಣದ ರೈತರು ಭೂಮಿ ಬಿಟ್ಟುಕೊಟ್ಟಲ್ಲಿ ಭೂಸ್ವಾಧೀನ ಕೈಬಿಡುವುದು ಅನಿವಾರ್ಯ
  • ಸರ್ಕಾರ ಮತ್ತು ಖಾಸಗಿ ಪಾಲುದಾರಿಕೆಯಲ್ಲಿ ಕೈಗೊಳ್ಳುವ ಯೋಜನೆಗಳಿಗೆ ಶೇ.70 ರೈತರು ಒಪ್ಪಿಗೆ ಸೂಚಿಸಿದಲ್ಲಿ ಮಾತ್ರ ಭೂಸ್ವಾಧೀನ
  • ಸ್ವಾಧೀನ ಮಾಡಿಕೊಂಡ ಭೂಮಿ ಪೂರ್ಣ ಪ್ರಮಾಣದಲ್ಲಿ ಬಳಕೆಯಾಗದೇ ಇದ್ದಲ್ಲಿ ಅದು ರೈತರಿಗೇ ವಾಪಸ್‌

ರಾಜ್ಯ ವಿಧಾನಸಭೆಯ ಆಂಗ್ಲೋ ಇಂಡಿಯನ್‌ ಸದಸ್ಯೆಯಾಗಿ ವಿನಿಷಾ ನೀರೊ ಆಯ್ಕೆ
vinisha neroಅಪ್ಪಟ ಕನ್ನಡತಿಯಂತೆ ಮಾತನಾಡುವ, ಕಾಣುವ, ಉಡುಗೆ, ತೊಡುಗೆ, ಅಡುಗೆ ಎಲ್ಲದರಲ್ಲಿಯೂ ಕನ್ನಡದ ಸೊಗಡನ್ನು ಅಳವಡಿಸಿಕೊಂಡಿರುವ ಆಂಗ್ಲೋ ಇಂಡಿಯನ್‌ ವಿನಿಷಾ ನೀರೊ, ಸದ್ಯಕ್ಕೆ ರಾಜ್ಯ ವಿಧಾನಸಭೆಯ ನಾಮಾಂಕಿತ ಶಾಸಕಿ.
ಹಿನ್ನೆಲೆ:
ತಾತ ಲಂಡನ್‌ ಮೂಲದವರು. 1915ರಲ್ಲಿ ಬೆಂಗಳೂರಿಗೆ ಬಂದು ನೆಲೆಸಿದರು. ಇವರಿಗೆ 1966ರಲ್ಲಿ ಜನಿಸಿದ ಮೊದಲ ಮಗುವೇ ‘ವಿನಿಷಾ’. ‘ಶಾರ್ಟ್‌ ಹ್ಯಾಂಡ್‌, ಡಿಪ್ಲೋಮಾ ಇನ್‌ ಏರ್‌ ಟಿಕೆಟಿಂಗ್‌, ಡಿಪ್ಲೋಮಾ ಇನ್‌ ಸೆಕ್ರೆಟ್ರಿ ಕೋರ್ಸ್‌, ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದಲ್ಲಿ ಕಲಾ ವಿಭಾಗದಲ್ಲಿ ಪದವಿ, ಸಾಮಾಜಶಾಸ್ತ್ರ ಹಾಗೂ ತತ್ವಶಾಸ್ತ್ರತದಲ್ಲಿ ಸ್ನಾತಕೋತ್ತರ ಹಾಗೂ ಸಮಾಜಶಾಸ್ತ್ರದಲ್ಲಿ ಆಂಗ್ಲೋ ಇಂಡಿಯನ್ನರ ಸಾಮಾಜಿಕ ಮತ್ತು ಆರ್ಥಿಕ ಸ್ಥಾನಮಾನ ಕುರಿತಂತೆ ಎಂಫಿಲ್‌. ಅವಕಾಶ ಸಿಕ್ಕರೆ ಇದೇ ವಿಷಯದ ಮೇಲೆ ಪಿಎಚ್‌ಡಿ ಮಾಡುವ ಆಸೆಯೂ ಅವರಿಗಿದೆ.
ಕಾರ್ಯಾನುಭವ:
ವಿನಿಷಾ ಅವರು ಹಲವು ಬಹುರಾಷ್ಟ್ರೀಯ ಸಂಸ್ಥೆಗಳಲ್ಲಿ ಉನ್ನತ ಹುದ್ದೆಗಳನ್ನು ಅಲಂಕರಿಸಿದರು. 1995ರಲ್ಲಿ ಆಂಗ್ಲೋ ಇಂಡಿಯನ್‌ ಸಂಘದ ಬೆಂಗಳೂರು ಶಾಖೆಯ ಸದಸ್ಯೆಯಾಗಿ ಸೇರಿಕೊಂಡರು. ಅಲ್ಲಿಂದ ತನ್ನ ಸಮುದಾಯಕ್ಕೆ ಸೇವೆ ಸಲ್ಲಿಸಲಾರಂಭಿಸಿದರು. ನಂತರ ಬೆಂಗಳೂರು ಶಾಖೆಯ ಗೌರವ ಕಾರ್ಯದರ್ಶಿಯಾದರು. ಆಂಗ್ಲೋ ಇಂಡಿಯನ್ಸ್‌ ಸಂಘದ ಮೂಲ ಸಂಸ್ಥೆಯಲ್ಲಿಯೂ ಸಕ್ರಿಯ ಸದಸ್ಯರಾದರು. 1992ರಲ್ಲಿ ಭಾರತೀಯ ಕಾರ್ಯದರ್ಶಿ ಹಾಗೂ ಆಡಳಿತಾತ್ಮಕ ವೃತ್ತಿಪರರ ಸಂಘದ ಸದಸ್ಯೆಯಾದರು. ಸದ್ಯ ಈ ಸಂಘದ ಬೆಂಗಳೂರು ಶಾಖೆಯ ಅಧ್ಯಕ್ಷೆಯಾಗಿದ್ದಾರೆ. ‘ಕ್ಲಚ್‌ ಸಮೂಹ ಸಂಸ್ಥೆ’ಯ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗೆ ಆಪ್ತ ಸಹಾಯಕಿಯಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ.

ಅರ್ಜುನ ಪ್ರಶಸ್ತಿ ಆಯ್ಕೆಗೆ ನೂತನ ಮಾನದಂಡವನ್ನು ರೂಪಿಸಿದ ಕೇಂದ್ರ ಸರ್ಕಾರ
arjun awardಭಾರತದ ಕ್ರೀಡಾ ಸಾಧಕರಿಗೆ ನೀಡುವ ಪ್ರತಿಷ್ಠಿತ ಅರ್ಜುನ ಪ್ರಶಸ್ತಿಯನ್ನು ವಿವಾದ ಮುಕ್ತಗೊಳಿಸಲು ಕೇಂದ್ರ ಯುವಜನ ಸೇವೆ ಮತ್ತು ಕ್ರೀಡಾ ಸಚಿವಾಲಯ ನಿರ್ಧರಿಸಿದೆ. ಪ್ರಶಸ್ತಿಗೆ ಕ್ರೀಡಾಪಟು ಗಳನ್ನು ಆಯ್ಕೆ ಮಾಡಲು ನೂತನ ಮಾನದಂಡವನ್ನು ರೂಪಿಸಿದ್ದು, ಇದು ಈ ವರ್ಷದಿಂದಲೇ ಜಾರಿಗೆ ಬರಲಿದೆ.
ಆದ್ಯತೆ ಯಾರಿಗೆ?
  • ಈ ಸಂಬಂಧ ಸಚಿವಾಲಯ ಪ್ರಕಟಣೆ ಹೊರಡಿಸಿದ್ದು, ಪ್ರಶಸ್ತಿಗೆ ವಿವಿಧ ಅಂತರ ರಾಷ್ಟ್ರೀಯ ಚಾಂಪಿಯನ್‌ಷಿಪ್‌ಗಳು , ಒಲಿಂಪಿಕ್ಸ್, ಏಷ್ಯಾ ಮತ್ತು ಕಾಮನ್‌ವೆಲ್ತ್‌ ಕ್ರೀಡಾ ಕೂಟಗಳಲ್ಲಿ ಪದಕ ಜಯಿಸಿದ ಕ್ರೀಡಾಪಟುಗಳಿಗೆ ಹೆಚ್ಚಿನ ಆದ್ಯತೆ ನೀಡಲು ನಿರ್ಧರಿಸಲಾಗಿದೆ.
  • ಒಲಿಂಪಿಕ್ಸ್‌ ಮತ್ತು ಪ್ಯಾರಾಒಲಿಂಪಿಕ್ಸ್‌ ನಲ್ಲಿ ಪದಕ ಜಯಿಸಿದ ಕ್ರೀಡಾಪಟುಗಳನ್ನು ಅವರು ಪಡೆದ ಪದಕದ ಆಧಾರದ ಮೇಲೆ ರಾಜೀವ್‌ ಗಾಂಧಿ ಖೇಲ್‌ರತ್ನ ಮತ್ತು ಅರ್ಜುನ ಪ್ರಶಸ್ತಿಗೆ ನೇರವಾಗಿ ಪರಿಗಣಿಸಲಾಗುತ್ತದೆ.
  • ನಂತರದಲ್ಲಿ ವಿಶ್ವ ಚಾಂಪಿಯನ್‌ಷಿಪ್‌ ಮತ್ತು ವಿಶ್ವಕಪ್‌ನಲ್ಲಿ ಸಾಧನೆ ಮಾಡಿದವರನ್ನು, ಆ ನಂತರದಲ್ಲಿ ಏಷ್ಯಾ ಮತ್ತು ಕಾಮನ್‌ವೆಲ್ತ್‌ ಕ್ರೀಡಾ ಕೂಟಗಳಲ್ಲಿ ಪದಕ ಪಡೆದವರನ್ನು ಪರಿಗಣಿಸಲಾಗುತ್ತದೆ.
  • ಈ ವಿಭಾಗಗಳಲ್ಲಿ ಕ್ರೀಡಾಪಟುಗಳು ತೋರಿದ ಸಾಧನೆಯ ಆಧಾರದ ಮೇಲೆ ಅವರು ನೇರವಾಗಿ 90 ಅಂಕಗಳನ್ನು ಪಡೆಯಲಿದ್ದು, ಉಳಿದ 10 ಅಂಕಗಳನ್ನು ಆಯ್ಕೆ ಸಮಿತಿಯು ಆಟಗಾರರು ಪದಕ ಪಡೆದ ಚಾಂಪಿಯನ್‌ಷಿಪ್‌ಗಳು, ಆಟದ ವೇಳೆ ಅವರು ತೋರಿದ ಶಿಸ್ತು, ಕ್ರೀಡಾಸ್ಫೂರ್ತಿ, ನಾಯಕತ್ವಗುಣ, ತಂಡ ಸ್ಫೂರ್ತಿ ಮುಂತಾದ ಅಂಶಗಳ ಆಧಾರದ ಮೇಲೆ ನೀಡುತ್ತದೆ.
ಮಾನದಂಡಗಳು:
  • ಕ್ರಿಕೆಟ್‌ ಹಾಗೂ ದೇಶಿಯ ಕ್ರೀಡಾ ಕೂಟಗಳಿಗೆ ಸಂಬಂಧಿಸಿದಂತೆ ಆಟಗಾರರ ವೈಯಕ್ತಿಕ ಪ್ರದರ್ಶನ, ನಾಯಕತ್ವ ಗುಣ ಮತ್ತು ಶಿಸ್ತಿನ ಆಧಾರದ ಮೇಲೆ ಎರಡು ಪ್ರಶಸ್ತಿಗಳನ್ನು ಮಾತ್ರ ನೀಡಲು ಆಯ್ಕೆ ಸಮಿತಿ ಶಿಫಾರಸ್ಸು ಮಾಡಲಿದೆ.
  • ಕ್ರೀಡೆಯ ವಿಧ ಹಾಗೂ ಮಹಿಳಾ ಆಟಗಾರ್ತಿಯನ್ನು ಹೊರತುಪಡಿಸಿ ಒಂದು ವರ್ಷದಲ್ಲಿ ನಿಗದಿತ ಕ್ರೀಡೆಯಲ್ಲಿ ಒಬ್ಬರಿಗೆ ಮಾತ್ರ ಪ್ರಶಸ್ತಿ ನೀಡಲಾಗುತ್ತದೆ.
  • ಅರ್ಹ ಕ್ರೀಡಾಪಟುಗಳ ಸಂಖ್ಯೆ ಹೆಚ್ಚಿದ್ದರೆ ಅದನ್ನು ಪರಿಶೀಲಿಸಿ ಪ್ರಶಸ್ತಿ ಸಂಖ್ಯೆಯನ್ನು ಹೆಚ್ಚಿಸುವ ಅಧಿಕಾರ ಆಯ್ಕೆ ಸಮಿತಿಗಿರಲಿದೆ.
  • ವರ್ಷದಲ್ಲಿ 15 ಮಂದಿಗೆ ಮಾತ್ರ ಪ್ರಶಸ್ತಿಗಳನ್ನು ನೀಡಬೇಕು. ಒಂದು ವೇಳೆ ನಿಗದಿತ ವರ್ಷದಲ್ಲಿ ವಿವಿಧ ಕ್ರೀಡೆಗಳಲ್ಲಿ ಸಾಧನೆ ಮಾಡಿದವರ ಸಂಖ್ಯೆ ಹೆಚ್ಚಿದ್ದರೆ, ಅವರ ಪ್ರದರ್ಶನದ ಆಧಾರದಲ್ಲಿ ಅರ್ಜುನ ಪ್ರಶಸ್ತಿಯ ಸಂಖ್ಯೆಯನ್ನು ಹೆಚ್ಚಿಸುವಂತೆ ಸರ್ಕಾರಕ್ಕೆ ಆಯ್ಕೆ ಸಮಿತಿ ಶಿಫಾರಸ್ಸು ಮಾಡಲಿದೆ.
  • ಅಂಕಗಳ ಆಧಾರದ ಮೇಲೆ ಆಯ್ಕೆ ಸಮಿತಿಯು ಅರ್ಜುನ ಪ್ರಶಸ್ತಿಗೆ ಅರ್ಹರಿರುವ ಕ್ರೀಡಾಪಟುಗಳ ಅಂತಿಮ ಪಟ್ಟಿಯನ್ನು ಸಿದ್ಧಪಡಿಸಿ ಸರ್ಕಾರಕ್ಕೆ ಕಳುಹಿಸಲಿದ್ದು, ಒಂದೇ ವಿಭಾಗದಲ್ಲಿ ನಾಲ್ಕು ಜನರಿಗಿಂತಲೂ (ಇಬ್ಬರು ಪುರುಷರು ಮತ್ತು ಮಹಿಳೆಯರು) ಹೆಚ್ಚಿನ ಆಟಗಾರರ ಹೆಸರನ್ನು ಶಿಫಾರಸ್ಸು ಮಾಡುವಂತಿಲ್ಲ.
  • ಈ ಮಾರ್ಗದರ್ಶಿ ಸೂತ್ರಗಳ ಹೊರತಾಗಿಯೂ ಅರ್ಹ ಕ್ರೀಡಾಪಟುಗೆ ಅರ್ಜುನ ಪ್ರಶಸ್ತಿ ದೊರೆತಿಲ್ಲ ಎಂದು ಆಯ್ಕೆ ಸಮಿತಿ ಅಭಿಪ್ರಾಯಪಟ್ಟು, ಕ್ರೀಡಾಪಟುವಿನ ಕುರಿತು ಸಮರ್ಥನೆ ನೀಡಿ ಶಿಫಾರಸ್ಸು ಮಾಡಿದರೆ ಈ ಬಗ್ಗೆ ಕ್ರೀಡಾ ಸಚಿವರು ಅಂತಿಮ ತೀರ್ಮಾನ ಕೈಗೊಳ್ಳಲಿದ್ದಾರೆ.

ಪ್ರಚಲಿತ ವಿದ್ಯಮಾನಗಳು ಡಿಸೆಂಬರ್ 27, 2013


ಅಗಸ್ಟಾ ವೆಸ್ಟ್‌ಲ್ಯಾಂಡ್ ಕಂಪನಿಯೊಂದಿಗಿನ ಸಂಬಂಧ ರದ್ದುಪಡಿಸಿದ ಭಾರತ
ಪ್ರಚಲಿತ ವಿದ್ಯಮಾನಗಳು ಡಿಸೆಂಬರ್ 27, 2013ಇಟಲಿಯ ಅಗಸ್ಟಾವೆಸ್ಟ್‌ಲ್ಯಾಂಡ್ ಕಂಪನಿ ಜತೆಗಿನ 3600 ಕೋಟಿ ಮೊತ್ತದ ವಿವಿಐಪಿ ಕಾಪ್ಟರ್ ಡೀಲ್ ಅನ್ನು ಭಾರತ ಕೊನೆಗೂ ರದ್ದು ಮಾಡಿದೆ. 2010ರಲ್ಲಿ ನಡೆದ ಈ ವಿವಾದಾತ್ಮಕ ಒಪ್ಪಂದದಂತೆ ಅಗಸ್ಟಾ ವೆಸ್ಟ್‌ಲ್ಯಾಂಡ್ ಭಾರತಕ್ಕೆ 12 ಹೆಲಿಕಾಪ್ಟರ್‌ಗಳನ್ನು ಪೂರೈಸಬೇಕಿತ್ತು. ಆದರೆ, ಈ ಒಪ್ಪಂದ ಕುದುರಿಸಲು ಕಂಪನಿ 360 ಕೋಟಿ ಕಿಕ್ ಬ್ಯಾಕ್ ನೀಡಿದ ಆರೋಪ ಎದುರಿಸುತ್ತಿದೆ. ಇದು ಒಪ್ಪಂದದ ಪೂರ್ವಷರತ್ತಿನ ಸ್ಪಷ್ಟ ಉಲ್ಲಂಘನೆ ಎಂದು ಸರ್ಕಾರ ಆರೋಪಿಸಿದೆ. ಈ ಹಿನ್ನೆಲೆಯಲ್ಲಿ ಒಪ್ಪಂದ ರದ್ದು ಮಾಡುವ ನಿರ್ಧಾರ ತೆಗೆದುಕೊಂಡಿದೆ.
ಹೆಲಿಕಾಪ್ಟರ್ ಪೂರೈಕೆ:
ಅಗಸ್ಟಾ ವೆಸ್ಟ್‌ಲ್ಯಾಂಡ್ ಕಂಪನಿಯು ಈಗಾಗಲೇ 3 ಹೆಲಿಕಾಪ್ಟರ್‌ಗಳನ್ನು ಭಾರತಕ್ಕೆ ಪೂರೈಸಿದೆ. ಅಲ್ಲದೆ, ಒಪ್ಪಂದದ ಶೇ.40ರಷ್ಟು ಹಣವನ್ನು ಭಾರತ ಈಗಾಗಲೇ ಕಂಪನಿಗೆ ಪಾವತಿಸಿದೆ. ಒಂದು ವೇಳೆ ಈ ಡೀಲ್ ರದ್ದಾದರೆ ಕಂಪನಿ ಭಾರಿ ನಷ್ಟಕ್ಕೆ ಗುರಿಯಾಗಲಿದೆ. ಈ ಹಿನ್ನೆಲೆಯಲ್ಲಿ ಕಂಪನಿಯು ಕಾನೂನು ಹೋರಾಟಕ್ಕೆ ಮುಂದಾಗುವ ಸಾಧ್ಯತೆ ಇದೆ.
ನವೆಂಬರ್‌ನಲ್ಲೇ ಆರಂಭ:
ಈ ಒಪ್ಪಂದ ರದ್ದುಪಡಿಸುವ ಪ್ರಕ್ರಿಯೆ ಕಳೆದ ವರ್ಷ ಆರಂಭವಾಗಿತ್ತು. ಕಿಕ್‌ಬ್ಯಾಕ್ ಕ್ರಮವು ‘ಒಪ್ಪಂದದ ಷರತ್ತುಗಳ ಸ್ಪಷ್ಟ ಉಲ್ಲಂಘನೆ’ ಎಂದು ಅಟಾರ್ನಿ ಜನರಲ್ ಹಾಗೂ ಕಾನೂನು ಸಚಿವಾಲಯವು ರಕ್ಷಣಾ ಸಚಿವಾಲಯಕ್ಕೆ ವರದಿ ನೀಡಿತ್ತು. ಈ ಹಿನ್ನೆಲೆಯಲ್ಲಿ ರಕ್ಷಣಾ ಸಚಿವಾಲಯ ನವೆಂಬರ್‌ನಲ್ಲೇ ಒಪ್ಪಂದ ರದ್ದುಗೊಳಿಸುವ ಪ್ರಕ್ರಿಯೆ ಆರಂಭಿಸಿತ್ತು.
ಏನಿದು ಹಗರಣ?
ವಿವಿಐಪಿಗಳ ಪ್ರಯಾಣಕ್ಕಾಗಿ 12 ಎಡಬ್ಲ್ಯು 101 ವಿವಿಐಪಿ ಹೆಲಿಕಾಪ್ಟರ್‌ಗಳನ್ನು ಪೂರೈಸಲು ಇಟಲಿಯ ಫಿನ್‌ಮೆಕಾನಿಕಾ ಕಂಪನಿಯ ಸಹಸಂಸ್ಥೆ ಅಗಸ್ಟಾ ವೆಸ್ಟ್‌ಲ್ಯಾಂಡ್ 2010ರಲ್ಲಿ ರಕ್ಷಣಾ ಇಲಾಖೆಯೊಂದಿಗೆ ಒಪ್ಪಂದ ಮಾಡಿಕೊಂಡಿತ್ತು. ಈ ಡೀಲ್ ಕುದುರಿಸಲು ಕಂಪನಿಯು 3 ಮಧ್ಯವರ್ತಿಗಳ ಮೂಲಕ 360 ಕೋಟಿ ಕಿಕ್‌ಬ್ಯಾಕ್ ನೀಡಿತ್ತು. ಆರೋಪಕ್ಕೆ ಸಂಬಂಧಿಸಿ ಕಂಪನಿಯ ಸಿಇಒ ಗಿಸುಪ್ಪೆ ಓರ್ಸಿರನ್ನು ಇಟಲಿ ಪೊಲೀಸರು ಬಂಧಿಸಿದ್ದರು.

ರಾಜ್ಯದಲ್ಲಿ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ ಸ್ಥಾಪನೆ ಪ್ರಕ್ರಿಯೆಗೆ ಚಾಲನೆ
RD univಸರ್ಕಾರದ ಪ್ರಸ್ತಾವಿತ ಹೊಸ ಗ್ರಾಮೀಣಾಭಿವೃದ್ಧಿ ವಿಶ್ವವಿದ್ಯಾಲಯ ಆರಂಭಿಸುವ ಪ್ರಕ್ರಿಯೆಗೆ ಚಾಲನೆ ದೊರೆತಿದ್ದು, ಗ್ರಾಮೀಣಾಭಿವೃದ್ಧಿ ಕ್ಷೇತ್ರದಲ್ಲಿ ಮಹತ್ವದ ಮೈಲಿಗಲ್ಲು ಸ್ಥಾಪಿಸಿ ರಾಷ್ಟ್ರಮಟದಲ್ಲಿ ಹೆಸರು ಮಾಡಿರುವ ಧರ್ಮಸ್ಥಳ ರುಡ್‌ಸೆಟ್, ಹುಲಕೋಟಿಯ ಕೆವಿಕೆ, ಬೆಂಗಳೂರಿನ ಐಸೆಕ್ ಮಾರ್ಗದರ್ಶನ ಪಡೆಯಲು ತೀರ್ಮಾನಿಸಲಾಗಿದೆ. ಹೊಸ ವಿಶ್ವವಿದ್ಯಾಲಯ ರೂಪುರೇಷೆ ಸಿದ್ಧಪಡಿಸುವ ಉದ್ದೇಶದಿಂದ 2013ರ ಕೊನೆ ದಿನ ತಜ್ಞರ ಸಮಿತಿ ರಚಿಸಿದ್ದು, ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ಎಸ್.ವಿ.ರಂಗನಾಥ್ ಅಧ್ಯಕ್ಷತೆಯಲ್ಲಿ ತಜ್ಞರ ಸಮಿತಿ ರಚಿಸಲಾಗಿದೆ.
ಹಿನ್ನೆಲೆ:
2013-14ನೇ ಸಾಲಿನ ಆರ್ಥಿಕ ಆಯವ್ಯಯದಲ್ಲಿ ರಾಜ್ಯದಲ್ಲಿ ಗ್ರಾಮೀಣ ವಿಶ್ವವಿದ್ಯಾಲಯ ಸ್ಥಾಪಿಸುವ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಯ ವಿವಿಧ ಯೋಜನೆಗಳ ವಾರ್ಷಿಕ ಒಟ್ಟಾರೆ 10 ಸಾವಿರ ಕೋಟಿ ರುಪಾಯಿ ಹಣ ವಿನಿಯೋಗಿಸಿ ಅನುಷ್ಠಾನಗೊಳಿಸಲಾಗುತ್ತಿದೆ. ವಿವಿಧ ಅಭಿವೃದ್ಧಿ ಕ್ಷೇತ್ರಗಳಲ್ಲಿ ಆಗುತ್ತಿರುವ ಬದಲಾವಣೆ ಪ್ರಕ್ರಿಯೆಯನ್ನು ಗ್ರಹಿಸದಿದ್ದರೆ, ಇಲಾಖೆಯ ಕಾರ್ಯಕ್ರಮಗಳ ಗರಿಷ್ಠ ಪ್ರಯೋಜನವಾಗಲಿ ಅಥವಾ ಅಂತಹ ಯೋಜನೆಗಳಿಗೆ ಕಾರ್ಯಕ್ರಮಗಳಿಗೆ ಸಮರ್ಥವಾಗಿ ಹಣ ಖರ್ಚು ಮಾಡುವುದಾಗಲಿ ಸಾಧ್ಯವಾಗುವುದಿಲ್ಲ. ಅದೇ ರೀತಿ ರಾಜ್ಯದ ಜನಸಂಖ್ಯೆಯಲ್ಲಿ ಶೇಕಡಾ 65ರಷ್ಟು ಗ್ರಾಮೀಣ ಪ್ರದೇಶದಲ್ಲಿ ವಾಸ್ತವ್ಯ ಹೂಡಿದವರಾಗಿರುತ್ತಾರೆ. ಹೀಗಾಗಿ ಕೆಲವು ಧ್ಯೇಯೋದ್ದೇಶದೊಂದಿಗೆ ಹೊಸ ವಿವಿ ಸ್ಥಾಪಿಸಲು ಉದ್ದೇಶಲಾಗಿದೆ. ಗ್ರಾಮೀಣ ವಿಶ್ವವಿದ್ಯಾಲಯವು ಗ್ರಾಮೀಣಾಭಿವೃದ್ಧಿ ಯೋಜನಾ ಪ್ರಕ್ರಿಯೆ ಹಾಗೂ ನೀತಿ ನಿರೂಪಣೆಯಲ್ಲಿ ಪ್ರಮುಖ ಪಾತ್ರ ವಹಿಸುವುದು. ರಾಜ್ಯದ ವಿವಿಧ ಗ್ರಾಮ, ತಾಲೂಕು ಹಾಗೂ ಜಿಲ್ಲಾ ಪಂಚಾಯಿತಿಗಳು ತಮ್ಮಲ್ಲಿ ಈಗಾಗಲೇ ಅಳವಡಿಸಿಕೊಂಡಿರುವ ಅನೇಕ ಉತ್ತಮ ಪದ್ಧತಿಗಳ ತಾತ್ವಿಕವಾಗಿ ವಿಶ್ಲೇಷಣೆಗೊಂಡು ಅವುಗಳಿಗೆ ರಾಜ್ಯಮಟ್ಟದಲ್ಲಿ ಮಹತ್ವ ದೊರಕಿಸುವುದು.
ಸಂಶೋಧನೆ:
  • ಗ್ರಾಮೀಣಾಭಿವೃದ್ಧಿ ಕುರಿತಂತೆ ಸಮಗ್ರ ಮುನ್ನೋಟ ತಯಾರಿಸುವುದು ಹಾಗೂ ಸಂಶೋಧನೆ ನಡೆಸುವುದು.
  • ಬಿಪಿಎಲ್ ಹಾಗೂ ಶೋಷಿತ ಹಿಂದುಳಿದ ಸಮುದಾಯಗಳ ಸಾಮಾಜಿಕ ಮತ್ತು ಆರ್ಥಿಕ ಅಧ್ಯಯನ ಹಾಗೂ ಸಂಶೋಧನೆ ಮಾಡುವುದು.
  • ಗ್ರಾಮೀಣ ಪ್ರದೇಶಕ್ಕೆ ಬೃಹತ್ ಹಾಗೂ ಮಧ್ಯಮ ಕೈಗಾರಿಕೆಗಳಿಂದ ಅಭಿವೃದ್ಧಿಗೆ ಸಂಪನ್ಮೂಲ ತರಲು ಯೋಜನೆಗಳನ್ನು ರೂಪಿಸುವುದು, ಕಾರ್ಯಕ್ರಮ ವಹಿಸುವುದು.
  • ಸಾಮಾಜಿಕ ಮತ್ತು ಸಾಂಸ್ಕೃತಿಕ ವಿಷಯಗಳನ್ನು ವಾಸ್ತವಿಕ ನೆಲೆಗಟ್ಟಿನಲ್ಲಿ ಅಧ್ಯಯನ ಮತ್ತು ಸಂಶೋಧನೆ ನಡೆಸುವುದು.
  • ಬಡತನ ಮತ್ತು ಅನಕ್ಷರತೆಯ ಬಗ್ಗೆ ಸಮಗ್ರ ಅಧ್ಯಯನ ಹಾಗೂ ಸಂಶೋಧನೆ ಹಮ್ಮಿಕೊಳ್ಳುವುದು. ಸರ್ಕಾರದ ಪೈಲಟ್ ಪ್ರಾಜೆಕ್ಟ್‌ಗಳನ್ನು ಪಡೆದು ಅವುಗಳ ಅಧ್ಯಯನ ಮಾಡಿ ಸಂಬಂಧಪಟ್ಟವರಿಗೆ ವರದಿ ಕೊಡುವುದು.
ಉದ್ಯೋಗಾವಕಾಶ:
  • ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗ ಅವಕಾಶ ಕಲ್ಪಿಸಿ ವಲಸೆ ಹೋಗುವುದನ್ನು ತಡೆಗಟ್ಟಲು ಅಧ್ಯಯನ ನಡೆಸಿ ಸರ್ಕಾರಕ್ಕೆ ವರದಿ ನೀಡುವುದು, ಕೃಷಿ ಮತ್ತು ಕೃಷಿಯೇತರ ಕ್ಷೇತ್ರವನ್ನು ಅಧ್ಯಯನಕ್ಕೆ ಒಳಪಡಿಸುವುದು.
  • ನಿರುದ್ಯೋಗ ನಿವಾರಣೆಗೆ ಉದ್ಯಮಶೀಲತನೆಯನ್ನು ಅಭಿವೃದ್ಧಿ ಪಡಿಸುವುದು ಹೇಗೆ, ಕೇಂದ್ರ ಹಾಗೂ ರಾಜ್ಯ ಸರ್ಕಾರ ಕುಡಿವ ನೀರು, ನೈರ್ಮಲ್ಯ, ಪೌಷ್ಟಿಕತೆ, ಸಾರ್ವಜನಿಕ ಆರೋಗ್ಯ, ಉದ್ಯೋಗ ಖಾತ್ರಿ, ಮಹಿಳಾ ಸಬಲೀಕರಣ, ಗ್ರಾಮೀಣ ನಿರುದ್ಯೋಗ ನಿವಾರಣೆ ಮೊದಲಾದ ವಲಯಗಳಲ್ಲಿ ಸಾವಿರಾರು ಕೋಟಿಗಳನ್ನು ಖರ್ಚು ಮಾಡುತ್ತಿದೆ. ಅವುಗಳ ಅಧ್ಯಯನ ಹಾಗೂ ಮೌಲ್ಯಮಾಪನ ಮಾಡುವುದು.
  • ಗ್ರಾಮ ಪ್ರದೇಶದಲ್ಲಿ ಪಾರಂಪರಿಕವಾದ ಜಲ ಸಂಪನ್ಮೂಲ ರಕ್ಷಣೆ, ಅಂತರ್ಜಲದ ಸದುಪಯೋಗ, ಗ್ರಾಮ ಪಂಚಾಯಿತಿಗಳ ಸ್ವಂತ ಸಂಪನ್ಮೂಲ ಕ್ರೋಡೀಕರಿಸಲು ಅಧ್ಯಯನ, ಸಲಹೆ ಮತ್ತು ಸಹಕಾರ ನೀಡುವುದು ಇತ್ಯಾದಿ.
ತಜ್ಞರಿಂದ ವರದಿ:
ಈ ವಿಚಾರಗಳ ಬಗ್ಗೆ ನೂತನವಾಗಿ ಅಸ್ತಿತ್ವಕ್ಕೆ ಬರಲಿರುವ ವಿಶ್ವವಿದ್ಯಾಲಯ ಪರ್ಯಾಲೋಚಿಸಬೇಕು. ಈ ವಿಶ್ವವಿದ್ಯಾಲಯ ಸಂಪೂರ್ಣವಾಗಿ ಸಂಶೋಧನೆಗೆ ಮೀಸಲಾಗಿರಬೇಕೆ ಅಥವಾ ಕೋರ್ಸ್‌ಗಳನ್ನು ಪ್ರಾರಂಭಿಸಬೇಕೆ ಹಾಗೆಯೇ ಪ್ರಾರಂಭಿಸುವ ಅಧ್ಯಯನ ವಿಷಯಗಳಾವುವು, ಸ್ನಾತಕ, ಸ್ನಾತಕೋತ್ತರ, ಪಿಎಚ್‌ಡಿ ಡಿಪ್ಲೋಮಾ, ಸರ್ಟಿಫಿಕೇಟ್ ಕೋರ್ಸ್ ಇವುಗಳಲ್ಲಿ ತಕ್ಷಣ ಯಾವುದನ್ನು ಆರಂಭಿಸಬೇಕು, ಇತರೆ ವಿವಿಗಳೊಂದಿಗೆ ಸಮನ್ವಯತೆ ಹೇಗಿರಬೇಕು ಎಂಬುದರ ಕುರಿತು ತಜ್ಞರ ತಂಡದಿಂದ ಶಿಫಾರಸು ಅಪೇಕ್ಷಿಸಲಾಗಿದೆ. ಹಾಗೆಯೇ ವಿಶ್ವವಿದ್ಯಾಲಯ ಕರ್ನಾಟಕದ ಯಾವ ಭಾಗದಲ್ಲಿದ್ದರೆ ಉತ್ತಮ ಎಂಬುದರ ಬಗ್ಗೆಯೂ ಸಲಹೆ ಕೇಳಲಾಗಿದೆ. ತಜ್ಞರ ಸಮಿತಿ ರಚನೆ ವಿವಿ ಬಗ್ಗೆ ಸಂಪೂರ್ಣವಾಗಿ ಅಧ್ಯಯನ ಮಾಡಿ ಎರಡು ತಿಂಗಳೊಗಾಗಿ ಸರ್ಕಾರಕ್ಕೆ ವರದಿ ನೀಡಲು ತಜ್ಞರ ಸಮಿತಿಯೊಂದನ್ನು ರಚಿಸಲಾಗಿದೆ.

ಏಕದಿನ ಕ್ರಿಕೆಟ್ ನಲ್ಲಿ ಅತ್ಯಂತ ವೇಗದ ಶತಕ ಸಿಡಿಸಿದ ನ್ಯೂಜಿಲೆಂಡ್ ನ ಕೋರೆ ಆಂಡರ್ಸನ್
andersonಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಕೋರೆ ಆಯಂಡರ್ಸನ್‌ರ ವಿಶ್ವದಾಖಲೆ ವೇಗದ ಶತಕ ಸಿಡಿಸಿದ್ದಾರೆ. ಐದನೇ ಕ್ರಮಾಂಕದಲ್ಲಿ ಆಡಲಿಳಿದ ಕೋರೆ ಆಯಂಡರ್ಸನ್ ಕೇವಲ 36 ಎಸೆತಗಳಲ್ಲಿ ಶತಕ ಪೂರೈಸಿ ಹೊಸ ವಿಶ್ವದಾಖಲೆ ನಿರ್ಮಿಸಿದರು. 95 ರನ್ ಗಳಿಸಿದ್ದಾಗ ಮಿಲ್ಲರ್ ಎಸೆತವೊಂದನ್ನು ಸಿಕ್ಸರ್ ಆಗಿ ಪರಿವರ್ತಿಸುವುದರೊಂದಿಗೆ ಈ ಮೈಲುಗಲ್ಲು ನೆಟ್ಟರು. ಆ ಮೂಲಕ ಅವರು, 1996ರಲ್ಲಿ ಶ್ರೀಲಂಕಾ ವಿರುದ್ಧ ನೈರೋಬಿಯಲ್ಲಿ ನಡೆದ ಪಂದ್ಯದಲ್ಲಿ ಪಾಕಿಸ್ತಾನದ ಶಾಹಿದ್ ಅಫ್ರಿದಿ ಕೇವಲ 37 ಎಸೆತಗಳಲ್ಲಿ ವಿಶ್ವದಾಖಲೆ ವೇಗದ ಶತಕ ಬಾರಿಸಿದ ಸಾಧನೆಯನ್ನು 18 ವರ್ಷಗಳ ನಂತರ ಅಳಿಸಿ ಹಾಕಿದಂತಾಯಿತು.
ಅತಿ ಹೆಚ್ಚು ಸಿಕ್ಸರ್:
ಇದೇ ವೇಳೆ ಕಿವೀಸ್ ಆಟಗಾರ ಏಕದಿನ ಇತಿಹಾಸದಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ಮೂರನೇ ಆಟಗಾರ ಕೂಡ ಎನಿಸಿದರು. ಭಾರತದ ರೋಹಿತ್ ಶರ್ಮಾ 16 ಸಿಕ್ಸರ್ ಬಾರಿಸಿ (ಆಸ್ಟ್ರೇಲಿಯಾ ವಿರುದ್ಧ) ಮೊದಲ ಸ್ಥಾನದ ಗೌರವ ಹೊಂದಿದ್ದರೆ, ಆಸ್ಟ್ರೇಲಿಯಾದ ಶೇನ್ ವ್ಯಾಟ್ಸನ್ 15 ಸಿಕ್ಸರ್ ಗಳಿಸಿದ್ದು (2011ರಲ್ಲಿ ಬಾಂಗ್ಲಾದೇಶ ವಿರುದ್ಧ) ಎರಡನೇ ಸಾಧನೆಯಾಗಿದೆ. ಅಂತಿಮವಾಗಿ ಕೋರೆ 47 ಎಸೆತಗಳಲ್ಲಿ 6 ಬೌಂಡರಿ ಮತ್ತು 14 ಸಿಕ್ಸರ್ ಒಳಗೊಂಡಂತೆ 131 ರನ್ ಬಾರಿಸಿ ಅಜೇಯರಾಗುಳಿದರು.
ವೇಗದ ಶತಕ ವೀರರು:
  • ಕೋರೆ ಆಯಂಡರ್ಸನ್‌ (ನ್ಯೂಜೀಲ್ಯಾಂಡ್‌)- ರನ್: 131, ಎಸೆತ: 36
  • ಶಾಹಿದ್‌ ಅಫ್ರಿದಿ (ಪಾಕಿಸ್ಥಾನ)- ರನ್: 102,  ಎಸೆತ:37
  • ಮಾರ್ಕ್‌ ಬೌಷರ್‌ (ದಕ್ಷಿಣ ಆಫ್ರಿಕಾ)- ರನ್: 147, ಎಸೆತ: 44
  • ಬ್ರ್ಯಾನ್‌ ಲಾರಾ (ವೆಸ್ಟ್‌ ಇಂಡೀಸ್‌)- ರನ್: 117, ಎಸೆತ: 45
  • ಶಾಹಿದ್‌ ಅಫ್ರಿದಿ (ಪಾಕಿಸ್ಥಾನ)- ರನ್: 102, ಎಸೆತ: 45
  • ಜೆಸ್ಸಿ ರೈಡರ್‌ (ನ್ಯೂಜೀಲ್ಯಾಂಡ್‌)- ರನ್: 104, ಎಸೆತ: 46
  • ಜಯಸೂರ್ಯ (ಶ್ರೀಲಂಕಾ)-ರನ್: 134, ಎಸೆತ: 48
  • ಕೆವಿನ್‌ ಓ’ಬ್ರ್ಯಾನ್‌ (ಅಯರ್ಲಂಡ್‌)-ರನ್: 113, ಎಸೆತ: 50
  • ವಿರಾಟ್‌ ಕೊಹ್ಲಿ (ಭಾರತ)- ರನ್: 100, ಎಸೆತ: 52
  • ಶಾಹಿದ್‌ ಅಫ್ರಿದಿ (ಪಾಕಿಸ್ಥಾನ)- ರನ್: 124, ಎಸೆತ: 53

ಪ್ರಚಲಿತ ವಿದ್ಯಮಾನಗಳು ಡಿಸೆಂಬರ್ 26, 2013


ವಿಶ್ವದ ಮೊದಲ ಕೃತಕ ಹೃದಯ ಕಸಿ ಫ್ರಾನ್ಸ್ ನಲ್ಲಿ ಯಶಸ್ವಿ
ಪ್ರಚಲಿತ ವಿದ್ಯಮಾನಗಳು ಡಿಸೆಂಬರ್ 26, 2013ಇದೇ ಮೊದಲ ಬಾರಿಗೆ ಹೃದಯ ತೊಂದರೆ ಹೊಂದಿರುವ ರೋಗಿಗಳಿಗೆ ಐದು ವರ್ಷಗಳ ಕಾಲ ಅಧಿಕ ಜೀವದಾನ ನೀಡುವ ಕೃತಕ ಹೃದಯ ಕಸಿಯನ್ನು ಫ್ರಾನ್ಸ್ ನಲ್ಲಿ ಯಶಸ್ವಿಯಾಗಿ ನೆರವೇರಿಸಲಾಗಿದೆ. ಫ್ರಾನ್ಸ್ ನ ಬಯೊಮೆಡಿಕಲ್ ಸಂಸ್ಥೆಯೊಂದು ಅಭಿವೃದ್ದಿಪಡಿಸಿರುವ ಈ ಕೃತಕ ಹೃದಯವನ್ನು 75 ವರ್ಷದ ರೋಗಿಗೆ ಯಶಸ್ವಿಯಾಗಿ ಜೋಡಣೆ ಮಾಡಲಾಗಿದ್ದು, ರೋಗಿ ಆರೋಗ್ಯವಾಗಿ ಇರುವುದಾಗಿ ಹೇಳಲಾಗಿದೆ.
  • ಫ್ರಾನ್ಸ್ ಬಯೊಮೆಡಿಕಲ್ ಸಂಸ್ಥೆ ಕಾರ್ಮಟ್ ಅಭಿವೃದ್ದಿ ಪಡಿಸಿರುವ ಈ ಕೃತಕ ಹೃದಯ ಲಿಥೀಯಂ-ಐಯಾನ್ ಬ್ಯಾಟರಿ ಚಾಲಿತವಾಗಿದ್ದು, ದೇಹದ ಹೊರಗಡೆ ಬಳಸಬಹುದಾಗಿದೆ.
  • ಈ ಕೃತಕ ಹೃದಯ ಐದು ವರ್ಷಗಳ ಕಾಲ ಕಾರ್ಯನಿರ್ವಹಿಸಲಿದೆ. ಈ ಹಿಂದೆ ಅಭಿವೃದ್ದಿಪಡಿಸಲಾಗಿದ್ದ ಹೃದಯ ಕೇವಲ ತಾತ್ಕಲಿಕ ಆಗಿತ್ತು.
  • ಈ ಹೃದಯದ ತೂಕ ಒಂದು ಕೆ.ಜಿ ಗಿಂತಲೂ ಕಡಿಮೆಯಿದೆ. ಸ್ವಾಭಾವಿಕ ಹೃದಯಕ್ಕಿಂತ ಮೂರು ಪಟ್ಟು ಹೆಚ್ಚು.
  • ರಕ್ತದ ಸಂಪರ್ಕಕ್ಕೆ ಬರುವ ಹೃದಯದ ಭಾಗವನ್ನು ಪ್ರಾಣಿ ಅಂಗಾಂಶದಿಂದ ಮಾಡಲಾಗಿದೆ. ಯಾವುದೇ ಪ್ಲಾಸ್ಟಿಕ್ ತರನಾದ ವಸ್ತುವನ್ನು ಬಳಸಲಾಗಿಲ್ಲ ಎನ್ನುವುದು ಗಮನಾರ್ಹ.

ಗುರ್ ಗಾವ್  ದೇಶದ ಅತ್ಯಂತ ಸಮೃದ್ದಿ (Prosperous) ನಗರ: ಸಮೀಕ್ಷೆ
gurguonಕ್ರೆಡಿಟ್ ರೇಟಿಂಗ್ ಸಂಸ್ಥೆ “ಕ್ರಿಸಿಲ್” ನಡೆಸಿರುವ ಸಮೀಕ್ಷೆಯ ಪ್ರಕಾರ ಗುರ್ ಗಾವ್ ದೇಶದ ಸಮೃದ್ದಿ ನಗರವಾಗಿ ಹೊರಹೊಮ್ಮಿದೆ. ದಿನ ಬಳಕೆ ಗ್ರಾಹಕ ವಸ್ತುಗಳನ್ನು ಆಧಾರವಾಗಿಟ್ಟುಕೊಂಡು ನಡೆಸಲಾಗಿರುವ ಈ ಸಮೀಕ್ಷೆಯಲ್ಲಿ ಗುರ್ ಗಾವ್ ದೇಶದ ನಂ.1 ಸಮೃದ್ದಿ ನಗರ ಎನಿಸಿಕೊಂಡಿದೆ.
  • ಸಮೀಕ್ಷೆಯ ಪ್ರಕಾರ ಗುರ್ ಗಾವ್ ನ ಭಾಗಶ: ಎಲ್ಲಾ ಮನೆಗಳಲ್ಲಿ ಕಂಪ್ಯೂಟರ್, ಲ್ಯಾಪ್ ಟಾಪ್ ಸೇರಿದಂತೆ ದಿನಬಳಕೆ ಗ್ಯಾಡ್ಜೆಟ್ ಗಳನ್ನು ಹೊಂದಿವೆ.
  • ದೇಶದ 16 ನಗರಗಳಲ್ಲಿ ನಡೆಸಲಾಗಿರುವ ಈ ಸಮೀಕ್ಷೆಯಲ್ಲಿ ಗುರ್ ಗಾವ್ ನ ಶೇ 27 ರಷ್ಟು ಮನೆಗಳು ದಿನಬಳಕೆ ಬೇಕಾಗುವ ಎಲ್ಲಾ ಅಗತ್ಯತೆಗಳನ್ನು ಹೊಂದುವ ಮೂಲಕ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದೆ.
  • ಶೇ 24 ರಷ್ಟು ಮನೆಗಳು ಎಲ್ಲಾ ಅಗತ್ಯತೆಗಳನ್ನು ಹೊಂದುವ ಮೂಲಕ ಚೆನ್ನೈ ದೇಶದ ಎರಡನೇ ಅತ್ಯಂತ ಸಮೃದ್ದಿ ನಗರ ಎನಿಸಿದೆ. ಶೇ 23.6 ರಷ್ಟು ಹೊಂದುವ ಮೂಲಕ ಬೆಂಗಳೂರು ದೇಶದ ಮೂರನೇ ಸಮೃದ್ದಿ ನಗರವಾಗಿದೆ. ಮುಂಬೈ ಮತ್ತು ದೆಹಲಿ ನಂತರದ ಸ್ಥಾನಗಳನ್ನು ಪಡೆದುಕೊಂಡಿವೆ.
  • ಗುರ್ ಗಾವ್ ಶೇ 77 ರಷ್ಟು ಮನೆಗಳಲ್ಲಿ ಟಿ.ವಿ ಇರುವುದಾಗಿ ಹೇಳಲಾಗಿದೆ. ಶೇ 1 ನೇ ಮೂರರಷ್ಟು ಮನೆಗಳು ಲ್ಯಾಪ್ ಟಾಪ್ ಹೊಂದಿವೆ ಎನ್ನಲಾಗಿದೆ. ಶೇ 40 ರಷ್ಟು ಮನೆಗಳು ದ್ವಿಚಕ್ರ ವಾಹನ ಹಾಗೂ ಶೇ 30 ರಷ್ಟು ಮನೆಗಳು ಕಾರುಗಳನ್ನು ಹೊಂದಿವೆ.
  • ಚತ್ತೀಸ್ ಗಢ್ ದ ರಾಜಧಾನಿ ರಾಯ್ ಪುರ ದೇಶದ ಅತ್ಯಂತ ಬಡ ನಗರವೆನಿಸಿಕೊಂಡಿದೆ.

ಸೂಪರ್ ಹರ್ಕ್ಯೂಲಸ್ ಯುದ್ಧ ವಿಮಾನ ಖರೀದಿ: ಆಮೆರಿಕಾದೊಂದಿಗೆ ಭಾರತ ಒಪ್ಪಂದ
super herculesವಿಶಿಷ್ಟ ಕಾರ್ಯಾಚರಣೆ ಮಾಡಬಲ್ಲ ಸಾಮರ್ಥ್ಯ ಹೊಂದಿರುವ ಸಿ-130ಜೆ ಸೂಪರ್ ಹರ್ಕ್ಯೂಲಸ್ ಯುದ್ದವಿಮಾನಗಳನ್ನು ಖರೀದಿಸುವ ಸಲುವಾಗಿ ಭಾರತ ಮತ್ತು ಅಮೆರಿಕ ನಡುವೆ ಒಪ್ಪಂದಕ್ಕೆ ಸಹಿ ಹಾಕಲಾಗಿದೆ. ಭಾರತ ಈಗಾಗಲೇ ಆರು ಸೂಪರ್ ಹರ್ಕ್ಯೂಲಸ್ ಯುದ್ದವಿಮಾನಗಳನ್ನು ಅಮೆರಿಕಾದಿಂದ ಖರೀದಿಸಲಾಗಿದ್ದು, ಮತ್ತೆ ಆರು ಸಿ-130ಜೆ ಯುದ್ಧ ವಿಮಾನಗಳನ್ನು ಖರೀದಿಸಲು ಒಪ್ಪಂದಕ್ಕೆ ಸಹಿ ಹಾಕಿವೆ.
  • 1.01 ಬಿಲಿಯನ್ ಡಾಲರ್ ಮೊತ್ತದ ಈ ಒಪ್ಪಂದದಡಿ ನಾಲ್ಕು ಎಂಜಿನ್ ನ ಆರು ಸಿ-130ಜೆ ಯುದ್ಧ ವಿಮಾನಗಳನ್ನು ಅಮೆರಿಕಾ ಮುಂದಿನ ಮೂರು ವರ್ಷಗಳ ಅವಧಿಯಲ್ಲಿ ಸರಬರಾಜು ಮಾಡಲಿದೆ.
  • ಈ ಹಿಂದೆ 2007 ರಲ್ಲಿ ಮಾಡಿಕೊಳ್ಳಲಾದ 962 ಮಿಲಿಯನ್ ಡಾಲರ್ ಒಪ್ಪಂದದಡಿ ಅಮೆರಿಕಾ ಆರು ಸಿ-130ಜೆ ಯುದ್ಧ ವಿಮಾನಗಳನ್ನು ಈಗಾಗಲೇ ಭಾರತಕ್ಕೆ ಪೂರೈಸಿದೆ. ಇವುಗಳನ್ನು ಈಗಾಗಲೇ ವಿಶಿಷ್ಟ ಕಾರ್ಯಚರಣಗೆ ಭಾರತೀಯ ಸೇನೆ ಬಳಸಿಕೊಳ್ಳುತ್ತಿದೆ.
  • ರಕ್ಷಣಾ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಭಾರತ ಮತ್ತು ಅಮೆರಿಕಾ ಈಗಾಗಲೇ ಅನೇಕ ಒಪ್ಪಂದಗಳಿಗೆ ಸಹಿ ಹಾಕಿವೆ. ಅವುಗಳಲ್ಲಿ ಪ್ರಮುಖವಾದವುಗಳೆಂದರೆ 22 ಅಪಚೆ ಹೆಲಿಕಾಪ್ಟರ್, 15 ಚಿನೂಕ್ ಹೆವಿ-ಲಿಪ್ಟ್ ಚಾಪರ್, P-81 ಸಮುದ್ರ ಗಸ್ತು ವಿಮಾನಗಳು ಸಹ ಸೇರಿವೆ.

ಚೂರು ಪಾರು ಸುದ್ದಿಗಳು:
    barbie
  • ಮುಂಬೈನಲ್ಲಿ 10 ನೇ ವಿಶ್ವ ಪಾರ್ಸಿ ಸಮುದಾಯ ಸಮ್ಮೇಳನಕ್ಕೆ ಚಾಲನೆ: 10 ನೇ ವಿಶ್ವ ಪಾರ್ಸಿ ಸಮುದಾಯ ಸಮ್ಮೇಳನಕ್ಕೆ ಮುಂಬೈನಲ್ಲಿ ಅದ್ಧೂರಿ ಚಾಲನೆ ನೀಡಲಾಯಿತು. ರಾಷ್ಟ್ರಪತಿ ಪ್ರಣಬ್ ಮುಖರ್ಜಿ ಅವರು ಈ ಸಮ್ಮೇಳನಕ್ಕೆ ಚಾಲನೆ ನೀಡಿ ಪಾರ್ಸಿ ಸಮುದಾಯದ ಸಂಖ್ಯೆ ಕ್ಷೀಣಿಸುತ್ತಿದ್ದು, ಸಮುದಾಯದ ಉಳಿವಿಗೆ ಮುಂದಾಗಬೇಕೆಂದು ಕರೆ ನೀಡಿದರು. “Zoroastrianism in the 21st Century: Nurturing Growth and Affirming Identity” ಇದು ಈ ಸಮ್ಮೇಳನದ ಥೀಮ್.

  • ಕುರುಚಲು ತಿಂಡಿ ಪ್ಲಾಸ್ಟಿಕ್ ಪೊಟ್ಟಣದ ಮೇಲೆ ನಿರ್ಬಂಧ ಹೇರಿದ ಹಿಮಾಚಲ ಪ್ರದೇಶ ಹೈಕೊರ್ಟ್: ಚಿಪ್ಸ್, ಕುರುಕುರೆ ಮುಂತಾದ ಕುರುಚಲು ತಿಂಡಿಗಳನ್ನು ಪ್ಲಾಸ್ಟಿಕ್ ನಲ್ಲಿ ಮಾರಾಟ ಮಾಡುವುದರ ಮೇಲೆ ನಿಷೇಧ ಹೇರುವ ಮೂಲಕ ಮಹತ್ವದ ತೀರ್ಪೊಂದನ್ನು ಹಿಮಾಚಲ ಪ್ರದೇಶ ಹೈಕೋರ್ಟ್ ನೀಡಿದೆ. ಅಷ್ಟೇ ಅಲ್ಲದೇ ಅಡುಗೆಗೆ ಬಳಸುವ ಎಣ್ಣೆ ಪದಾರ್ಥಗಳನ್ನು ಸಹ ಪ್ಲಾಸ್ಟಿಕ್ ಕವರ್ ನಲ್ಲಿ ಮಾರಾಟ ಮಾಡಬಾರದೆಂದು ಕೋರ್ಟ್ ಆದೇಶಿಸಿದೆ, ಜನವರಿ 26, 2014 ರಿಂದ ಈ ತೀರ್ಪು ಜಾರಿಗೆ ಬರಲಿದೆ.

  • ನೊವಾಕ್ ಮಡಿಲಿಗೆ ಅಬು ದುಬೈ ಟೆನ್ನಿಸ್ ಚಾಂಪಿಯನ್ ಷಿಪ್: ನೊವಾಕ್ ಜೊಕೊವಿಕ್ ಅವರು ಡೇವಿಡ್ ಫೆರರರ್  ಅವರನ್ನು 7-5, 6-2 ನೇರ ಸೆಟ್ ಗಳಿಂದ ಸೋಲಿಸುವ ಮೂಲಕ ಅಬು ದುಬೈ ಟೆನ್ನಿಸ್ ಚಾಂಪಿಯನ್ ಷಿಪ್ ಅನ್ನು ಮುಡಿಗೇರಿಸಿಕೊಂಡರು. ನೊವಾಕ್ ಗೆ ಇದು ಈ ವರ್ಷದ ಮೂರನೇ ಟೆನ್ನಿಸ್ ಚಾಂಪಿಯನ್ ಷಿಪ್ ಪ್ರಶಸ್ತಿ ಆಗಿದೆ.

ಬಾಲಿವುಡ್ ಖ್ಯಾತ ನಟ ಫಾರುಕ್ ಶೇಖ್ ನಿಧನ : ಬಾಲಿವುಡ್ ನ ಹಿರಿಯ ಹಾಗೂ ಪ್ರಸಿದ್ಧ ನಟ ಫಾರೂಕ್ ಶೇಖ್ ಅವರು ನಿಧನರಾದರು. ದುಬೈನಲ್ಲಿ ಪ್ರವಾಸಕ್ಕೆಂದು ತೆರಳಿದ್ದ ವೇಳೆ ತೀವ್ರ ಹೃದಯಘಾತಕ್ಕೆ ಒಳಗಾಗಿ ಅವರು ಕೊನೆಯುಸಿರೆಳೆದರು. “ನೂರಿ”, “ಕಿಸಿ ಸೇ ನ ಖೇನ”, “ಚಶ್ಮೆ ಬುದ್ದುರ್” ಸೇರಿದಂತೆ ಅನೇಕ ಚಿತ್ರಗಳಿಂದ ಅವರು ಹೆಸರು ವಾಸಿಯಾಗಿದ್ದರು. ರಂಗಭೂಮಿ ಹಾಗೂ ದೂರದರ್ಶನದ ಮೂಲಕವು ಅವರು ಜನಪ್ರಿಯತೆಯನ್ನು ಗಳಿಸಿದ್ದರು.

ಪ್ರಚಲಿತ ವಿದ್ಯಮಾನಗಳು ಡಿಸೆಂಬರ್ 25, 2013


ಆಂಡಿ ಮುರ್ರೆಗೆ 2013-ಬಿಬಿಸಿ ವರ್ಷದ ಶ್ರೇಷ್ಠ ಆಟಗಾರ ಪ್ರಶಸ್ತಿ
ವಿಂಬಲ್ಡನ್ ಚಾಂಪಿಯನ್ ಅಂಡಿ ಮುರ್ರೆ ಈ ವರ್ಷದ ಬಿಬಿಸಿ (ಬ್ರಿಟಿಷ್ ಬ್ರಾಡ್ ಕಾಸ್ಟ್ ಕಾರ್ಪೋರೇಶನ್) ಮಾಧ್ಯಮ ಸಂಸ್ಥೆ ನೀಡುವ ‘ಬಿಬಿಸಿ-2013 ವರ್ಷದ ಶ್ರೇಷ್ಠ ಆಟಗಾರ’ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಬ್ರಿಟಿಷ್ ರಗ್ಬಿ ಆಟಗಾರ ಲೈ ಹಾಫ್ ಪೆನ್ನಿ ಎರಡನೇ ರನ್ನರ್ ಆಫ್ ಆಗಿ ಮತ್ತು ಜಾಕಿ ಮೆಕ್ ಕಾನಿ ಅವರು ಮೂರನೇ ರನ್ನರ್ ಆಫ್ ಆಗಿದ್ದಾರೆ.
  • ಬ್ರಿಟನ್ ಮುರ್ರೆ ಅವರು 77 ವರ್ಷಗಳ ಇತಿಹಾಸಲ್ಲೇ ವಿಂಬಲ್ಡನ್ ಪ್ರಶಸ್ತಿಯನ್ನು ಗೆದ್ದ ಬ್ರಿಟಿಷ್ ಆಟಗಾರ. ವಿಂಬಲ್ಡನ್ ಪುರುಷರ ಸಿಂಗಲ್ಸ್ ನಲ್ಲಿ ನೊವಾಕ್ ಜೊಕೊವಿಕ್ ಅವರನ್ನು ಮಣಿಸುವ ಮೂಲಕ ವಿಂಬಲ್ಡನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು.
  • ಬಿಬಿಸಿ ವರ್ಷದ ಆಟಗಾರ ಪ್ರಶಸ್ತಿಗೆ ಭಾಜನರಾಗುತ್ತಿರುವ ನಾಲ್ಕನೇ ಟೆನ್ನಿಸ್ ಆಟಗಾರ ಮುರ್ರೆ. ಈ ಹಿಂದೆ 1969 ರಲ್ಲಿ ಅನ್ನ ಜೋನ್ಸ್, 1977 ರಲ್ಲಿ ವರ್ಜಿನಿಯಾ ವಾಡೆ, ಹಾಗೂ 1997 ರಲ್ಲಿ ಗ್ರೇಗ್ ರುಸೆದ್ಸ್ಕಿ ಅವರು ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದರು.

ಭಾರತ-ಜಪಾನ್ ಮೊದಲ ಕಡಲ ಸಮರ ಅಭ್ಯಾಸ (JIMEX-2013) ಗೆ ಚಾಲನೆ
maritime exerciseಭಾರತ ಮತ್ತು ಜಪಾನ್ ನಡುವಿನ ಮೊದಲ ಕಡಲ ಸಮರ ಅಭ್ಯಾಸ JIMEX-2013 (Japan-India Maritime Exercise) ಇತ್ತೀಚೆಗೆ ಬಂಗಾಳ ಕೊಲ್ಲಿಯಲ್ಲಿ ಡಿಸೆಂಬರ್ 19 ರಂದು ಆರಂಭಗೊಂಡಿತು. ನಾಲ್ಕು ದಿವಸಗಳ ಕಾಲ ನಡಯಲಿರುವ ಈ ಅಭ್ಯಾಸದಲ್ಲಿ ಉಭಯ ದೇಶಗಳ ವಿವಿಧ ಯುದ್ದ ನೌಕೆಗಳು ಪಾಲ್ಗೊಳ್ಳಲಿವೆ.
  • ಭಾರತದ ಸ್ವದೇಶಿ ತಂತ್ರಜ್ಞಾನ ನಿರ್ಮಿತ ರಹಸ್ಯ ಕಾರ್ಯಚರಣೆ ನಡೆಸಬಲ್ಲ INS ಸತ್ಪುರ ನೌಕೆ, ಶತ್ರು ಕ್ಷಿಪಣಿಯನ್ನು ಹೊಡೆದು ಉರುಳಿಸಬಲ್ಲ INS ರಣವಿಜಯ್ ನೌಕೆ ಹಾಗೂ INS ಕುಥಾರ್ ನೌಕೆಗಳು ಈ ಸಮರಭ್ಯಾಸದಲ್ಲಿ ಭಾಗವಹಿಸಲಿವೆ.
  • ಜಪಾನ್ ಪರವಾಗಿ INS Ariake ಹಾಗೂ JS Setogiri ಯುದ್ದ ನೌಕೆಗಳು ಈ ಸಮರಭ್ಯಾಸದಲ್ಲಿ ತೊಡಗಿಸಿಕೊಳ್ಳಲಿವೆ.
  • ಕಡಲ ಕಣ್ಗಾವಲು, ಕಡಲ ಭದ್ರತೆ ಮತ್ತು ಪೈರಿಸಿ ನಿಗ್ರಹಕ್ಕೆ ಸಂಬಂಧಿಸಿದ ವಿವಿಧ ಕಸರತ್ತುಗಳನ್ನು ಈ ಅಭ್ಯಾಸದ ವೇಳೆ ನಡೆಸಲಾಗುವುದು.
  • ಭಾರತ ರಕ್ಷಣಾ ಸಚಿವ ಎ.ಕೆ.ಆಂಟೋನಿ ಅವರು 2011 ರಲ್ಲಿ ಜಪಾನ್ ಗೆ ಭೇಟಿ ನೀಡಿದ್ದ ಸಂದರ್ಭದಲ್ಲಿ ಈ ಸಮರಭ್ಯಾಸ ಕುರಿತಾಗಿ ಸಹಿ ಹಾಕಿದ್ದರು. 2012 ರಲ್ಲಿ ಭಾರತ ಮತ್ತು ಜಪಾನ್ ಇಂತಹದೇ ಅಭ್ಯಾಸವನ್ನು ಜಪಾನ್ ನಲ್ಲಿ ನಡೆಸಿದ್ದವು.

ಚಿಲಿಯ ರಾಷ್ಟ್ರಧ್ಯಕ್ಷರಾಗಿ ಮತ್ತೆ ಚುಕ್ಕಾಣಿ ಹಿಡಿಯಲಿರುವ “ಮೈಕಲ್ ಬಾಚೆಲೆಟ್ (Michell Bachelet)”
Michell Bacheletಚಿಲಿ ದೇಶದ ಮುಂದಿನ ಅಧ್ಯಕ್ಷರಾಗಿ ಸಮಾಜವಾದಿ ಪಕ್ಷ “ಮೈಕಲ್ ಬಾಚೆಲೆಟ್” ಅವರು ಆಯ್ಕೆಯಾಗಿದ್ದಾರೆ. ಇತ್ತೀಚೆಗೆ ನಡೆದ ಚುನಾವಣೆಯಲ್ಲಿ ಪ್ರಸ್ತುತ ಅಧ್ಯಕ್ಷರಾಗಿರುವ ಕನ್ಸರೇಟಿವ್ ಪಕ್ಷದ ಸೆಬಾಸ್ಟಿಯನ್ ಪಿನೆರಾ ಅವರ ಉತ್ತರಾಧಿಕಾರಿಯಾಗಿ ಎರಡನೇ ಭಾರಿಗೆ ಅಧ್ಯಕ್ಷರಾಗಿ ಚುಕ್ಕಾಣಿ ಹಿಡಿಯಲಿದ್ದಾರೆ.
  • ಬಾಚೆಲೆಟ್ ಅವರು ಮಾರ್ಚ್ 11, 2014 ರಂದು ಅಧಿಕಾರವನ್ನು ವಹಿಸಿಕೊಳ್ಳಲಿದ್ದು, 2018 ರ ವರೆಗೆ ರಾಷ್ಟ್ರಧ್ಯಕ್ಷರಾಗಿ ಮುಂದುವರೆಯಲಿರುವರು. ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಬಾಚೆಲೆಟ್ ಶೇ.62.40 ಮತಗಳನ್ನು ಪಡೆದರೆ ಅವರ ಪ್ರತಿಸ್ಪರ್ಧಿ ಮಾಥಯ್ ಕೇವಲ ಶೇ 37.50 ಮತಗಳನ್ನು ಪಡೆಯುವಲ್ಲಿ ಮಾತ್ರ ಸಫಲಾರದರು. ಇದೇ ಮೊದಲ ಬಾರಿಗೆ ಲ್ಯಾಟಿನ್ ಅಮೆರಿಕಾ ದೇಶವೊಂದರಲ್ಲಿ ಇಬ್ಬರೂ ಮಹಿಳೆಯರು ರಾಷ್ಟ್ರಧ್ಯಕ್ಷ ಹುದ್ದೆಗೆ ಸ್ಪರ್ಧಿಸಿರುವುದು ಒಂದು ವಿಶೇಷವೆನಿಸಿದೆ.
  • ಈ ಹಿಂದೆ 2006 ರಲ್ಲಿ ಬಾಚೆಲೆಟ್ ಚಿಲಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಅವರ ಅಧಿಕಾರವದಿಯಲ್ಲಿ ಆರೋಗ್ಯ ಸೇವೆ ಸುಧಾರಣೆ, ಪಿಂಚಣಿ ವ್ಯವಸ್ಥೆ ಸುಧಾರಣೆ ಸೇರಿದಂತೆ ಉತ್ತಮ ಆಡಳಿತ ನೀಡಿದ್ದರು.

ಚೂರು ಪಾರು ಸುದ್ದಿಗಳು:
    churu
  • ಹಿರಿಯ ಪತ್ರಕರ್ತ ಪ್ರಾಣ್ ಚೋಪ್ರಾ ನಿಧನ: ಹಿರಿಯ ಪತ್ರಕರ್ತ ಹಾಗೂ “ದಿ ಸ್ಟೇಟ್ ಮನ್ಸ್” ಪತ್ರಿಕೆಯ ಮಾಜಿ ಸಂಪಾದಕ ಪ್ರಾಣ್ ಚೋಪ್ರಾ ಧೀರ್ಘಕಾಲದ ಅನಾರೋಗ್ಯದಿಂದ ನಿಧನರಾದರು. ಪ್ರಾಣ್ ದಿ ಹಿಂದೂ, ಟ್ರಿಬುನ್ ಸೇರಿದಂತೆ ವಿವಿಧ ಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸಿದ್ದರು. “ದಿ ಸಿಟಿಜನ್” “ದಿ ವೀಕ್ ಎಂಡ್” ಚೋಪ್ರಾ ಅವರ ನಿಯತಕಾಲಿಕೆಗಳು.

  • ಅಬ್ದಿವೆಲಿ ಶೇಖ್ ಅಹಮ್ಮದ್ (Abdiweli Sheikh Ahmed) ಸೊಮಾಲಿಯ ನೂತನ ಪ್ರಧಾನಿ: ಆರ್ಥಿಕ ತಜ್ಞ ಅಬ್ದಿವೆಲಿ ಶೇಖ್ ಅಹಮ್ಮದ್ ಅವರು ಸೊಮಾಲಿಯ ಎರಡನೇ ಪ್ರಧಾನ ಮಂತ್ರಿಯಾಗಿ ನೇಮಕಗೊಂಡಿದ್ದಾರೆ.  

 ಹಿರಿಯ ಜೀವಿಗಳಿಗೆ “ಆಸರೆ” ಯೋಜನೆ ಜಾರಿ: ಇತ್ತೀಚೆಗೆ ಒಂಟಿಯಾಗಿ ವಾಸಿಸುತ್ತಿರುವ ವೃದ್ಧರ ಮನೆಗಳಲ್ಲಿ ಕಳ್ಳತನ, ದರೋಡೆಯಂತಹ ಪ್ರಕರಣ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಒಂಟಿಯಾಗಿ ವಾಸಿಸುತ್ತಿರುವ ಹಿರಿಯ ಜೀವಿಗಳನ್ನು ರಕ್ಷಿಸುವ ಸಲುವಾಗಿ ಆಸರೆ ಎಂಬ ಯೋಜನೆಯನ್ನು ಮೈಸೂರಿನಲ್ಲಿ ಜಾರಿಗೊಳಿಸಲಾಯಿತು. ಪ್ರಸ್ತುತ ಮೈಸೂರು ನಗರದಲ್ಲಿ ಮಾತ್ರ ಜಾರಿಗೆ ಬಂದಿರುವ ಈ ಯೋಜನೆಯಲ್ಲಿ ನಗರದಲ್ಲಿ ವಾಸಿಸುತ್ತಿರುವ ವೃದ್ಧರ ಮನೆಗಳನ್ನು ಗುರುತಿಸಲಾಗಿದ್ದು, ಈ ಮನೆಗಳಿಗೆ ಪ್ರತಿ ದಿನ ಪೊಲೀಸ್ ಸಿಬ್ಬಂದಿ ಭೇಟಿ ನೀಡಲಿದ್ದಾರೆ. ವೃದ್ಧರ ಮನೆಗಳಲ್ಲಿ ಕಳ್ಳತನದಂತಹ ಪ್ರಕರಣಗಳು ನಡೆಯದಂತೇ ಇವರು ಕ್ರಮವಹಿಸಲ್ಲಿದ್ದಾರೆ. ಮುಂದಿನ ದಿನಗಳಲ್ಲಿ ರಾಜ್ಯದ ಎಲ್ಲಾ ನಗರಗಳಿಗೂ ಈ ಯೋಜನೆಯನ್ನು ಜಾರಿಗೊಳಿಸುವುದಾಗಿ ಹೇಳಲಾಗಿದೆ.

 

 

ಪ್ರಚಲಿತ ವಿದ್ಯಮಾನಗಳು ಡಿಸೆಂಬರ್ 24, 2013


ಅಗ್ನಿ-III ಕ್ಷಿಪಣಿ: ಪ್ರಯೋಗಾರ್ಥ ಪರೀಕ್ಷೆ ಯಶಸ್ವಿಯಾಗಿ ನೆರವೇರಿಸಿದ ಭಾರತ
ಪ್ರಚಲಿತ ವಿದ್ಯಮಾನಗಳು ಡಿಸೆಂಬರ್ 24, 2013ಸಿಡಿಲ ತಲೆಯನ್ನು ಯಶಸ್ವಿಯಾಗಿ ಹೊತ್ತೊಯ್ಯಬಲ್ಲ ಸಾಮರ್ಥ್ಯವನ್ನು ಹೊಂದಿರುವ ಅಗ್ನಿ-III ಕ್ಷಿಪಣಿಯ ಪರೀಕ್ಷೆಯನ್ನು ಇತ್ತೀಚೆಗೆ ಓಡಿಶಾದ ವೀಲ್ಹರ್ ಐಲ್ಯಾಂಡ್ ನಲ್ಲಿ ಯಶಸ್ವಿಯಾಗಿ ಪರೀಕ್ಷಿಸಲಾಯಿತು. ಭಾರತ ಸೇನಾ ಪಡೆ ಮತ್ತು ರಕ್ಷಣಾ ಸಂಶೋಧನಾ ಹಾಗೂ ಅಭಿವೃದ್ದಿ ಸಂಸ್ಥೆ ಜಂಟಿಯಾಗಿ ಈ ಪರೀಕ್ಷೆಯನ್ನು ನಡೆಸಿದ್ದು, ಅಗ್ನಿ-III ಎರಡನೇ ಪ್ರಯೋಗಾರ್ಥ ಪರೀಕ್ಷೆ ಇದಾಗಿದೆ.
ಅಗ್ನಿ-III ಕ್ಷಿಪಣಿ:
  • ಅಗ್ನಿ-III ಕ್ಷಿಪಣಿ ಭಾರತ ನಿರ್ಮಿಸುತ್ತಿರುವ ಅಗ್ನಿ ಸರಣಿಯ ಪ್ರಮುಖ ಕ್ಷಿಪಣಿ. ನೆಲದಿಂದ ನೆಲಕ್ಕೆ ಚಿಮ್ಮುವ ಈ ಕ್ಷಿಪಣಿ 3,000 ಕಿ.ಮೀ ಗುರಿಯನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ.
  • ಭಾರತ ಸ್ವದೇಶಿ ತಂತ್ರಜ್ಞಾನದೊಂದಿಗೆ ಅಭಿವೃದ್ದಿ ಪಡಿಸಿರುವ ಈ ಕ್ಷಿಪಣಿಯ 1.5 ಟನ್ ತೂಕದ ಅಣ್ವಸ್ತ್ರವನ್ನು ಹೊತ್ತೊಯ್ಯಬಲ್ಲದ್ದಾಗಿದೆ.
  • ಅಗ್ನಿ-III ಎರಡು ಹಂತದ ಘನ ಇಂಧನ ಆಧಾರಿತ ವ್ಯವಸ್ಥೆ ಹೊಂದಿದೆ. ಈ ಕ್ಷಿಪಣಿಯ ಉದ್ದ 17 ಮೀಟರ್, ವ್ಯಾಸ 2 ಮೀಟರ್ ಹಾಗೂ ಒಟ್ಟು ತೂಕ 50 ಟನ್ ಗಳಷ್ಟು.
  • ಅಗ್ನಿ-III ಕ್ಷಿಪಣಿಯ ಮೊದಲ ಪರೀಕ್ಷೆಯನ್ನು ಜುಲೈ 9, 2006 ರಲ್ಲಿ ಕೈಗೊಳ್ಳಲಾಗಿತ್ತು. ಆದರೆ ಆಗ ನಿರೀಕ್ಷಿತ ಫಲ ದೊರಕಿರಲಿಲ್ಲ. ಬಳಿಕ ಏಪ್ರಿಲ್ 12, 2007, ಮೇ 7, 2008 ಹಾಗೂ ಫೆಬ್ರವರಿ 7, 2010 ರಲ್ಲಿ ಪರೀಕ್ಷೆಗೆ ಒಳಪಡಿಸಲಾಯಿತು. ಮೊದಲ ಪ್ರಯೋಗಾರ್ಥ ಪರೀಕ್ಷೆಯನ್ನು ಸೆಪ್ಟೆಂಬರ್ 21, 2012 ರಲ್ಲಿ ನಡೆಸಲಾಗಿತ್ತು.

ಕಿಶನ್ ಗಂಗಾ ಯೋಜನೆ: ಭಾರತಕ್ಕೆ ಹಸಿರು ನಿಶಾನೆ ತೋರಿದ ಅಂತರರಾಷ್ಟ್ರೀಯ ಕೋರ್ಟ್
kishan gangaಭಾರತ ಮತ್ತು ಪಾಕಿಸ್ತಾನದ ನಡುವೆ ವಿವಾದಕ್ಕೆ ಎಡೆಮಾಡಿಕೊಟ್ಟಿರುವ ಕಿಶನ್ ಗಂಗಾ ಯೋಜನೆಯನ್ನು ಮುಂದುವರೆಸುವಂತೆ ಭಾರತಕ್ಕೆ ಅಂತರರಾಷ್ಟ್ರೀಯ ಕೋರ್ಟ್ ಆದೇಶಿಸಿದೆ. ಈ ಮೂಲಕ ಪಾಕಿಸ್ತಾನಕ್ಕೆ ಮತ್ತೊಮ್ಮೆ ಮುಖಭಂಗವಾಗಿದೆ. ಜಮ್ಮು ಮತ್ತು ಕಾಶ್ಮೀರದಲ್ಲಿ ಕಿಶನ್ ಗಂಗಾ ನದಿಯ ಮೇಲೆ ಭಾರತ ಅಣೆಕಟ್ಟು ನಿರ್ಮಿಸುತ್ತಿದ್ದು, ಪಾಕಿಸ್ತಾನ ಇದಕ್ಕೆ ವಿರೋಧ ವ್ಯಕ್ತಪಡಿಸಿ ಕೋರ್ಟ್ ಮೆಟ್ಟಿಲೇರಿದ ಹಿನ್ನಲೆಯಲ್ಲಿ ಈ ತೀರ್ಪು ಹೊರಬಿದ್ದಿದೆ.
  • ಕಿಶನ್ ಗಂಗಾ ನದಿ ಜೀಲಂ ನದಿಯ ಉಪನದಿ. ಭಾರತದ ಜಮ್ಮು ಮತ್ತು ಕಾಶ್ಮೀರದ ಮೂಲಕ ಹರಿದು ಪಾಕಿಸ್ತಾನ ಸೇರುವ ಮೂಲಕ ಅರಬ್ಬಿ ಸಮುದ್ರಕ್ಕೆ ಈ ನದಿ ನೀರು ಸೇರಿಕೊಳ್ಳುತ್ತದೆ.
  • ಕಿಶನ್ ಗಂಗಾ ನದಿಯ ಮೇಲೆ ಭಾರತ 330 ಮೆಗಾ ವ್ಯಾಟ್ ಜಲ ವಿದ್ಯುತ್ ಯೋಜನೆಯನ್ನು ಕೈಗೊಳ್ಳುತ್ತಿದೆ. ಈ ಯೋಜನೆಯನ್ನು 2007 ರಲ್ಲೇ ಆರಂಭಿಸಿತ್ತಾದರೂ ಪಾಕಿಸ್ತಾನ ಈ ಯೋಜನೆಗೆ ಚಕಾರ ಎತ್ತಿರುವ ಕಾರಣ ಸ್ಥಗಿತಗೊಂಡಿದೆ. ಪಾಕಿಸ್ತಾನದಲ್ಲಿ ಕಿಶನ್ ಗಂಗಾ ನದಿಯನ್ನು ನೀಲಂ ನದಿ ಎಂದು ಕರೆಯಲಾಗುತ್ತದೆ.
  • ಭಾರತ-ಪಾಕಿಸ್ತಾನ ನಡುವೆ ನದಿ ನೀರು ಹಂಚಿಕೆ ಸಲುವಾಗಿ 1960 ರಲ್ಲಿ ಒಪ್ಪಂದ ಏರ್ಪಟ್ಟಿದ್ದು, ಈ ಒಪ್ಪಂದದ ಪ್ರಕಾರ ಉಭಯ ದೇಶಗಳು ನದಿ ನೀರನ್ನು ನಿಯಮಾನುಸಾರ ಸಮರ್ಪಕವಾಗಿ ಬಳಕೆ ಮಾಡಬೇಕು. ಆದರೆ ಕಿಶನ್ ಗಂಗಾ ಯೋಜನೆಯಿಂದ ಈ ನದಿಯ ನೀರು ಹರಿಯುವ ದಿಕ್ಕನ್ನು ಭಾರತ ಬದಲಿಸಿದೆ ಇದರಿಂದ 1960 ರಲ್ಲಿ ಏರ್ಪಟ್ಟಿರುವ ಒಪ್ಪಂದದ ಉಲ್ಲಂಘನೆಯಾಗಲಿದೆ ಎಂದು ಪಾಕಿಸ್ತಾನ ಅಂತರರಾಷ್ಟ್ರೀಯ ಕೋರ್ಟಿನ ಮೆಟ್ಟಿಲೇರಿತ್ತು.
  • ಸದ್ಯ ಅಂತರರಾಷ್ಟ್ರೀಯ ಕೋರ್ಟ್ ತನ್ನ ಅಂತಿಮ ವರದಿಯನ್ನು ನೀಡಿದ್ದು, ಭಾರತಕ್ಕೆ ಯೋಜನೆಯ ಕಾಮಗಾರಿಯನ್ನು ಮುಂದುವರೆಸುವಂತೆ ಆದೇಶಿಸಿದೆ.

ಚಿಕನ್ ಪಾಕ್ಸ್ ಗೆ ಲಸಿಕೆ ಕಂಡು ಹಿಡಿದ “ಮಿಚಿಯಾಕಿ ತಕಹಶಿ (Michiaki Takahashi)” ನಿಧನ
Michiaki Takahashiಚಿಕನ್ ಪಾಕ್ಸ್ ಎಂಬ ಮಾರಕ ಕಾಯಿಲೆಗೆ ಲಸಿಕೆ ಕಂಡು ಹಿಡಿದು ಸಾವಿರಾರು ರೋಗಿಗಳ ಜೀವಕ್ಕೆ ನೆರವಾಗಿದ್ದ ಮಿಚಿಯಾಕಿ ತಕಹಶಿ ಅವರು ಹೃದಯಾಘಾತದಿಂದ ನಿಧನರಾದರು. ತಕಹಶಿ ಅವರಿಗೆ 85 ವರ್ಷ ವಯಸ್ಸಾಗಿತ್ತು. ತನ್ನ ಸ್ವಂತ ಮಗನಿಗೆ ಹರಡಿದ ಈ ವೈರಸ್ ಕಾಯಿಲೆಯ ಮೇಲೆ ಸಂಶೋಧನೆ ನಡೆಸಿದ ತಕಹಶಿ ಅವರು ಚಿಕನ್ ಪಾಕ್ಸ್ ಗೆ ಲಸಿಕೆಯನ್ನು ಕಂಡು ಹಿಡಿಯುವಲ್ಲಿ  ಯಶಸ್ವಿಯಾಗಿದ್ದರು.
ಮಿಚಿಯಾಕಿ ತಕಹಶಿ:
  • ಮಿಚಿಯಾಕಿ ತಕಹಶಿ ಜಪಾನ್ ನ ಪ್ರಸಿದ್ದ ವೈರಾಣು ತಜ್ಞ. ಜಪಾನ್ ಒಸಾಕ ವಿಶ್ವವಿದ್ಯಾಲಯದಲ್ಲಿ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದ ವೇಳೆ ಇವರು ಕೈಗೊಂಡ ಸಂಶೋಧನೆಯಿಂದಾಗಿ ಚಿಕನ್ ಪಾಕ್ಸ್ ಎಂಬ ಮಾರಕ ಕಾಯಿಲೆಗೆ ಲಸಿಕೆಯನ್ನು ಅಭಿವೃದ್ದಿ ಪಡಿಸುವ ಮೂಲಕ ವಿಖ್ಯಾತಿಯಾದರು.
  • ಚಿಕನ್ ಪಾಕ್ಸ್ “ವರಿಸೆಲ್ಲಾ-ಜೋಸ್ಟರ್” ಎಂಬ ವೈರಸ್ ನಿಂದ ಹರಡುವ ಕಾಯಿಲೆ. ಇದೊಂದು ಸಾಂಕ್ರಾಮಿಕ ಕಾಯಿಲೆಯಾಗಿದ್ದು, ಸೋಂಕಿತ ವ್ಯಕ್ತಿಯ ಸಂಪರ್ಕಕ್ಕೆ ಬಂದಾಗ ಕಾಯಿಲೆ ಹರಡುವ ಸಾಧ್ಯತೆಗಳು ಹೆಚ್ಚು. ಸುಕ್ಕುಗಟ್ಟಿದಂತಹ ಚರ್ಮ ಈ ಕಾಯಿಲೆಯ ಪ್ರಮುಖ ಲಕ್ಷಣ.
  • ಚಿಕನ್ ಪಾಕ್ಸ್ ಕಾಯಿಲೆ ವಯಸ್ಕರಲ್ಲಿ ಅತ್ಯಂತ ಹೆಚ್ಚಾಗಿ ಕಂಡು ಬರುತ್ತದೆ. ಸೋಂಕಿತ ವ್ಯಕ್ತಿ ಗುಣಮುಖನಾಗಿ ಕಂಡುಬಂದರೂ ಕಾಯಿಲೆ ಯಾವಾಗ ಬೇಕಾದರು ಮರುಕಳಿಸಬಹುದು. ಸರಿಯಾದ ಸಮಯದಲ್ಲಿ ಸೂಕ್ತ ಲಸಿಕೆ ಹಾಕಿಸಿಕೊಂಡಲ್ಲಿ ಮಾತ್ರ ಕಾಯಿಲೆಯನ್ನು ತಡೆಗಟ್ಟಬಹುದು.

ಚೂರು ಪಾರು ಸುದ್ದಿಗಳು:
    teacher
  • ಟೆಸ್ಟ್ ಕ್ರಿಕೆಟ್ ನಲ್ಲಿ 300 ವಿಕೆಟ್ ಪಡೆದ ಜಹೀರ್ ಖಾನ್: ವೇಗದ ಬೌಲರ್ ಜಹೀರ್ ಖಾನ್ ಅವರು ಟೆಸ್ಟ್ ಕ್ರಿಕೆಟ್ ನಲ್ಲಿ 300 ವಿಕೆಟ್ ಪಡೆದ ಭಾರತದ ನಾಲ್ಕನೇ ಆಟಗಾರ ಎಂಬ ಗೌರವಕ್ಕೆ ಪಾತ್ರರಾಗಿದ್ದಾರೆ. ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆದ ಟೆಸ್ಟ್ ಪಂದ್ಯದಲ್ಲಿ ಜಾಕ್ ಕಾಲಿಸ್ ಅವರ ವಿಕೆಟ್ ಪಡೆಯುವ ಮೂಲಕ ಜಹೀರ್ ಈ ಹಿರಿಮೆಗೆ ಪಾತ್ರರಾದರು. ಈ ಹಿಂದೆ ಅನಿಲ್ ಕುಂಬ್ಳೆ, ಹರಭಜನ್ ಸಿಂಗ್ ಹಾಗೂ ಕಪಿಲ್ ದೇವ್ ಟೆಸ್ಟ್ ಪಂದ್ಯದಲ್ಲಿ 300 ವಿಕೆಟ್ ಗಡಿದಾಟಿರುವ ಭಾರತದ ಇತರೆ ಆಟಗಾರರು.

  • ಗ್ರೇಟ್ ಟ್ರೈನ್ ರಾಬರಿ ಖ್ಯಾತಿಯ ರೋನಿ ಬಿಗ್ಗ್ಸ್ ನಿಧನ: ವಿಶ್ವದಲ್ಲೇ ಅತಿ ದೊಡ್ಡ ದರೋಡೆ ಪ್ರಕರಣ ಎಂದು ಹೆಸರು ಪಡೆದಿರುವ ಬ್ರಿಟನ್ ನ ಗ್ರೇಟ್ ಟ್ರೈನ್ ದರೋಡೆ ಪ್ರಕರಣದ ಪ್ರಮುಖ ರೂವಾರಿ “ರೋನಿ ಬಿಗ್ಗ್ಸ್” ನಿಧನರಾದರು. ರೋನಿ ಅವರಿಗೆ 87 ವರ್ಷ ವಯಸ್ಸಾಗಿತ್ತು. 1963 ರಲ್ಲಿ ನಡೆದ ಈ ಪ್ರಕರಣದಲ್ಲಿ ಬ್ರಿಟನ್ ನ ಮೇಲ್ ನೈಟ್ ರೈಲನ್ನು ತಡೆದು ಸುಮಾರು 2.6 ಮಿಲಿಯನ್ ಫೌಂಡ್ ನಷ್ಟು ಮೊತ್ತವನ್ನು ರೋನಿ ಹಾಗೂ ಅವರ ತಂಡ ದರೋಡೆ ಮಾಡಿತ್ತು. ಆ ಬಳಿಕ ಲಂಡನ್ ವಂಡ್ಸ್ ವರ್ಥ್ ಸೆರೆಮನೆಯಲ್ಲಿ ಬಂಧಿಸಲಾಗಿದ್ದ ರೋನಿ ಅಲ್ಲಿಂದ ತಪ್ಪಿಸಕೊಂಡ ಬಳಿಕ ವಿಶ್ವದಾದ್ಯಂತ ಕುಖ್ಯಾತಿ ಹೊಂದಿದ್ದರು.

ಖ್ಯಾತ ನಟ ಪಾಲ್ ವಾಕರ್ (Paul Walker) ನಿಧನ: ಫಾಸ್ಟ್ ಅಂಡ್ ಪ್ಯೂರಿಯಸ್  (Fast and Furious) ಸರಣಿ ಚಿತ್ರಗಳ ಅಮೋಘ ಅಭಿನಯದಿಂದ ವಿಶ್ವ ಪ್ರಸಿದ್ಧಿ ಹೊಂದಿದ್ದ ಹಾಲಿವುಡ್ ನಟ ಪಾಲ್ ವಾಕರ್ ತಮ್ಮ ಕಾರು ಅಪಘಾತದಲ್ಲಿ ದುರ್ಮರಣ ಹೊಂದಿದರು. 1999 ರಲ್ಲಿ ತೆರೆಕಂಡ “ವರ್ಸಿಟಿ ಬ್ಲೂ” ಚಿತ್ರದ ಮೂಲಕ ಪ್ರಸಿದ್ದ ಹೊಂದಿದ ವಾಕರ್ ಅವರು ಫಾಸ್ಟ್ ಅಂಡ್ ಪ್ಯೂರಿಯಸ್ ಸರಣಿ ಚಿತ್ರಗಳ ಮೂಲಕ ಅತ್ಯಂತ ಯಶಸ್ವಿ ನಟ ಎನಿಸಿದರು.

 

ಪ್ರಚಲಿತ ವಿದ್ಯಮಾನಗಳು ಡಿಸೆಂಬರ್ 23, 2013


ಅಪರೂಪದ ‘ಗ್ರೇಟ್ ಇಂಡಿಯನ್ ಬಸ್ಟರ್ಡ್’ ಪಕ್ಷಿಯ ಸಂರಕ್ಷಣೆಗೆ ರಾಜ್ಯ ಸರ್ಕಾರ ನಿರ್ಧಾರ
ಪ್ರಚಲಿತ ವಿದ್ಯಮಾನಗಳು ಡಿಸೆಂಬರ್ 23, 2013ಮಾನವನ ಆರ್ಭಟಕ್ಕೆ ಹಲವು ಪ್ರಾಣಿ, ಪಕ್ಷಿಗಳ ಸಂತತಿ ಕಣ್ಮರೆಯಾಗುತ್ತಿವೆ. ಇವುಗಳ ಸಾಲಿನಲ್ಲಿ ಗ್ರೇಟ್ ಇಂಡಿಯನ್ ಬಸ್ಟರ್ಡ್ ಕೂಡಾ ಒಂದು. ಭಾರತ ಮತ್ತು ಪಾಕಿಸ್ತಾನದಲ್ಲಿ ಮಾತ್ರ ಕಾಣಸಿಗುವ ಈ ಪಕ್ಷಿ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಿದೆ.ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ಪಿಸಿಸಿಎಫ್) ಅಧ್ಯಕ್ಷತೆಯಲ್ಲಿ ಸಮಿತಿ ರಚನೆಯಾಗಿದೆ.
ನಶಿಸುತ್ತಿರುವ ಸಂತತಿ:
  • ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿಯು ದೇಶದ ಮಧ್ಯಪ್ರದೇಶ, ಕರ್ನಾಟಕ ಅದರಲ್ಲೂ ಬಳ್ಳಾರಿ, ರಾಣಿಬೆನ್ನೂರು, ಗುಜರಾತ್, ರಾಜಸ್ಥಾನ, ಆಂಧ್ರಪ್ರದೇಶದಲ್ಲಿ ಮಾತ್ರ ಕಂಡು ಬರುತ್ತದೆ.
  • 21ನೇ ಶತಮಾನದ ಆರಂಭದಲ್ಲಿ 31 ಸಾವಿರ ಇದ್ದ ಪಕ್ಷಿಗಳು 2008ರಲ್ಲಿ ನಡೆದ ಪಕ್ಷಿ ಗಣತಿಯಲ್ಲಿ ಕೇವಲ 250ಕ್ಕೆ ಬಂದು ನಿಂತಿದೆ. ಕಳ್ಳಬೇಟೆಯಿಂದಾಗಿ ಸಂತತಿ ಕಣ್ಮರೆಯಾಗುತ್ತಿದೆ.
  • ಹುಲ್ಲುಗಾವಲಿನಲ್ಲಿಯೇ ಹೆಚ್ಚಾಗಿ ಕಂಡು ಬರುವ ಇಂತಹ ಪಕ್ಷಿಗಳು, ಕೆಲವು ದಿನಗಳ ಹಿಂದೆಯೇ ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ಹಾಗೂ ಚೇಳ್ಳಗುರ್ಕಿಯಲ್ಲಿ ಕಂಡು ಬಂದಿದ್ದವು.
  • ಕೃಷ್ಣಮೃಗಗಳು ಹೆಚ್ಚಾಗಿರುವ ಸ್ಥಳದಲ್ಲಿ ಇಂಡಿಯನ್ ಬಸ್ಟರ್ಡ್ ಸಂತತಿಯ ಪಕ್ಷಿಗಳು ಕಾಣಸಿಗುತ್ತವೆ. ಬಿಟ್ಲ್ಸ್ ಜಾತಿ ಹುಳು, ಗುಂಗಾಡಿ, ಹುಲ್ಲಿನ ಬೀಜಗಳು, ವಿವಿಧ ರೀತಿಯ ತೆನೆಗಳೇ ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿಯ ಆಹಾರ.
  • ಮೊಗಲ್ ರಾಜ ಬಾಬರನಿಗೆ ಅತ್ಯಂತ ಪ್ರಿಯವಾದದ್ದು ಈ ಪಕ್ಷಿಯ ಮಾಂಸವಾಗಿದೆ ಎಂಬುದು ಇತಿಹಾಸ ಹೇಳುತ್ತದೆ. ಹಿಂದೆ ಈ ಪಕ್ಷಿಯು ಮೋಜಿನ ಬೇಟೆಯಿಂದಾಗಿ ಸಂತತಿ ಅವನತಿಯ ಅಂಚಿನಲ್ಲಿದೆ.
  • ಇನ್ನು ಹೆಸರಾಂತ ಪಕ್ಷಿ ತಜ್ಞ ಸಲೀಂ ಅಲಿ ಅವರು, ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿಯನ್ನು ರಾಷ್ಟ್ರೀಯ ಪಕ್ಷಿಯಾಗಿ ಮಾಡಬೇಕೆಂಬ ಪ್ರಸ್ತಾವನೆ ಸಲ್ಲಿಸಿದ್ದನ್ನು ಇಲ್ಲಿ ಸ್ಮರಿಸಬಹುದು.
ಸಂರಕ್ಷಣೆ ಯೋಜನೆ:
  • ರೂ.4.5 ಕೋಟಿ ವೆಚ್ಚದಲ್ಲಿ ಯೋಜನೆ ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿಯು ಅವನತಿಯ ಅಂಚಿನಲ್ಲಿರುವ ಪ್ರಮುಖ ಪಕ್ಷಿಗಳಲ್ಲಿ ಇದು ಒಂದು ಎಂದು ಐಯುಸಿಎನ್ ಅವರು ಗುರುತಿಸಿದ್ದಾರೆ.
  • ಇಂತಹ ಪಕ್ಷಿಗಳ ಸಂತತಿ ರಕ್ಷಣೆಗೆ ರಾಜ್ಯದ ರಾಣಿಬೆನ್ನೂರಿನಲ್ಲಿ ಧಾಮ, ಸೊಲ್ಲಾಪುರ ಸಮೀಪದಲ್ಲಿ ನನಾಜ್ ಧಾಮ, ದೇಶದ ಇತರ ಕಡೆಗಳಲ್ಲಿ ಬ್ಲಾಕ್ ಓಕ್ ಸೆಂಚುರಿ, ರೊಲ್ಲಾಪಾಡ್ ಸೆಂಚುರಿ, ನಾಗಪುರ ಸಮೀಪದ ಕರೇರಾ ವಲ್ಡ್ ಲೈಫ್ ಸೆಂಚುರಿ, ಇನ್ನು ಗುಜರಾತ್ ಹಾಗೂ ರಾಜಸ್ಥಾನಗಳಲ್ಲಿ ಇಂತಹ ಪಕ್ಷಿಗಳ ಧಾಮವನ್ನು ಹೊಂದಿವೆ.
  • ಇನ್ನು ರಾಜಾಸ್ಥಾನದಲ್ಲಿ ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿ ಸಂತತಿಯ ರಕ್ಷಣೆಗೆ ರೂ.4.5 ಕೋಟಿ ವೆಚ್ಚದಲ್ಲಿ ಯೋಜನೆಯನ್ನು ಕೈಗೆತ್ತಿಕೊಂಡಿದೆ.
  • ಪಕ್ಷಿ ವಾಸಿಸುವ ಸ್ಥಳಗಳನ್ನು ಗುರುತಿಸಿ ರೂ. 8 ಕೋಟಿ ವೆಚ್ಚದಲ್ಲಿ ಸಂತತಿ ರಕ್ಷಣೆಗೆ ಮುಂದಾಗಿದೆ. ರಾಜ್ಯದಲ್ಲೂ ಸಮಿತಿ ರಚನೆ ಇದೀಗ ರಾಜ್ಯದಲ್ಲಿ ಅತಿ ಅಪರೂಪವಾದ ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿ ಸಂತತಿಯ ರಕ್ಷಣೆಗೆ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವನ್ಯಜೀವಿ ವಿಭಾಗ ಅವರ ಅಧ್ಯಕ್ಷತೆಯಲ್ಲಿ ಸಮಿತಿಯನ್ನು ಈ ಹಿಂದಿನ ಪಿಸಿಸಿಎಫ್ ಜಿ.ಎಸ್. ಪ್ರಭು ಅವರು ಇದ್ದಾಗ ರಚನೆ ಮಾಡಲಾಗಿತ್ತು. ಇದೀಗ ಪಿಸಿಸಿಎಫ್ಗೆ ವಿಯನ್ ಲಾಥೂರ್ ಅವರು ಇದ್ದು, ಇವರ ಅಧ್ಯಕ್ಷತೆಯಲ್ಲಿ ಸಮಿತಿ ರಚನೆ ಮಾಡಲಾಗಿದೆ.
ಗ್ರೇಟ್ ಇಂಡಿಯನ್ ಬಸ್ಟರ್ಡ್:
  • ಎರೆಭೂತ, ಎರಲಾಡ ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿಯನ್ನು ಬೇರೆ ಬೇರೆ ಪ್ರದೇಶಗಳಲ್ಲಿ ಬೇರೆ ಬೇರೆ ಹೆಸರಲ್ಲಿ ಕರೆಯುತ್ತಾರೆ.
  • ನಮ್ಮ ರಾಜ್ಯದ ಬಳ್ಳಾರಿ ಜಿಲ್ಲೆಯಲ್ಲಿ ‘ಎರೆಭೂತ’ ಎಂದು ಕರೆದರೆ, ಹಾವೇರಿ ಮತ್ತು ರಾಣೆಬೆನ್ನೂರು ತಾಲೂಕಿನಲ್ಲಿ ‘ಎರಲಾಡ’ ಎಂದು ಗುರುತಿಸುತ್ತಾರೆ.
  • ಬೇಟೆಯಾಡಿದರೆ 7 ವರ್ಷ ಜೈಲು ವಾಸ,  ವನ್ಯ ಜೀವಿಗಳ ರಕ್ಷಣಾ ಕಾಯ್ದೆ- 1972ರ ಕಾಯ್ದೆ ಪ್ರಕಾರ ಮೊದಲ ಅನುಸೂಚಿಯಲ್ಲಿಯೇ ಗ್ರೇಟ್ ಇಂಡಿಯನ್ ಬಸ್ಟರ್ಡ್ ಪಕ್ಷಿಯನ್ನು ಗುರುತಿಸಲಾಗಿದೆ.
  • ದೇಶದಲ್ಲಿ ಇಂತಹ ಪಕ್ಷಿ ಇರುವುದು ಹೆಗ್ಗಳಿಕೆಯಾಗಿದ್ದು, ಈ ಪಕ್ಷಿ ಸಂತತಿಯ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗುತ್ತಿರುವುದು ಸ್ವಾಗತಾರ್ಹ, ಇಂತಹ ಪಕ್ಷಿಯನ್ನು ಬೇಟೆಯಾಡಿದರೆ 7 ವರ್ಷ ಶಿಕ್ಷೆ, ರು. 10 ಸಾವಿರ ದಂಡವೂ ಇದೆ.

ಭಾರತೀಯ ವಾಯುಪಡೆಯ ಮುಖ್ಯಸ್ಥರಾಗಿ ಅರೂಪ್‌ ರಾಹಾ  ನೇಮಕ
arup rahaಭಾರತೀಯ ವಾಯುಪಡೆಯ 24ನೇ ಮುಖ್ಯಸ್ಥರಾಗಿ ಅನುಭವಿ ಯುದ್ಧ ವಿಮಾನ ಪೈಲಟ್‌ ಅರೂಪ್‌ ರಾಹಾ ಅಧಿಕಾರ ವಹಿಸಿಕೊಂಡಿದ್ದಾರೆ. ಏರ್‌ ಚೀಫ್‌ ಮಾರ್ಷಲ್‌ ಎನ್‌.ಎ.ಕೆ. ಬ್ರೌನ್‌ ಅವರ ಉತ್ತರಾಧಿಕಾರಿಯಾಗಿ ರಾಹಾ ಸೇವೆ ಸಲ್ಲಿಸಲಿದ್ದಾರೆ. ವಾಯುಪಡೆಯ ಹಿರಿಯ ಅಧಿಕಾರಿಗಳ ಉಪಸ್ಥಿತಿಯಲ್ಲಿ ನಡೆದ ಸಮಾರಂಭದಲ್ಲಿ ಬ್ರೌನ್‌ ಅವರಿಂದ 59 ವರ್ಷದ ರಾಹಾ ಅಧಿಕಾರ ಸ್ವೀಕರಿಸಿದರು. ಅವರು ಮೂರು ವರ್ಷ ವಾಯುಪಡೆ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸಲಿದ್ದಾರೆ.
ರಾಹಾ ಬಗ್ಗೆ:
  • 1974ರ ಡಿಸೆಂಬರ್‌ 14ರಂದು ಭಾರತೀಯ ವಾಯುಪಡೆಯ ಯುದ್ಧ ವಿಮಾನ ವಿಭಾಗಕ್ಕೆ ರಾಹಾ ಸೇರಿದ್ದರು.
  • ತಮ್ಮ 39 ವರ್ಷಗಳ ಸೇವಾವಧಿಯಲ್ಲಿ ಅವರು ಹಲವು ಹುದ್ದೆಗಳನ್ನು ನಿರ್ವಹಿಸಿದ್ದಾರೆ.
  • ಭಾರತೀಯ ವಾಯುಪಡೆ ಆಧುನೀಕರಣಗೊಳ್ಳುವ ಹಾದಿಯಲ್ಲಿದೆ. ಇದು ಸಂಪೂರ್ಣ ಸಾಮರ್ಥ್ಯದ ಪಡೆಯಾಗಿ ಹೊರ ಹೊಮ್ಮಲಿದೆ ಎಂಬ ಸಂದೇಶವನ್ನು 1.75 ಲಕ್ಷ ಯೋಧರನ್ನು ಹೊಂದಿರುವ ವಾಯುಪಡೆಗೆ ನೀಡಿದರು.
  • ಹೊಸ ಸಲಕರಣೆಗಳನ್ನು ಬಳಸಲು ಅಗತ್ಯವಾದ ಆಳವಾದ ಜ್ಞಾನ, ಪರಿಣತಿ ಮತ್ತು ವೃತ್ತಿ ದಕ್ಷತೆ ನಮ್ಮ ಕರ್ತವ್ಯಗಳನ್ನು ಶ್ರೇಷ್ಠ ಮಟ್ಟದಲ್ಲಿ ನಿರ್ವಹಿಸಲು ನೆರವಾಗುತ್ತವೆ. ವಾಯುಪಡೆಯ ಎಲ್ಲ ಹಂತಗಳಲ್ಲಿ ಅಸಾಧಾರಣ ನಾಯಕತ್ವದ ಮೂಲಕ ಇದನ್ನು ಸಾಧಿಸುವುದು ಸಾಧ್ಯ ಎಂದು ರಾಹಾ ಹೇಳಿದ್ದಾರೆ.

ಚೂರು-ಪಾರು ಸುದ್ಧಿಗಳು:
    news
  • ‘ಎ.ಕೆ.47′ನ ಸಂಶೋಧಕ ರಷ್ಯಾದ ಮಿಖಾಯಿಲ್‌ ಕಲಾಶ್ನಿಕೋವ್‌ ನಿಧನ: ವಿಶ್ವದ ಅತ್ಯಂತ ಜನಪ್ರಿಯ, ಅತ್ಯಂತ ಹೆಚ್ಚು ಮಾರಾಟವಾದ ಮತ್ತು ಅತ್ಯಂತ ಭೀಕರ ಗನ್‌ ‘ಎ.ಕೆ.47′ನ ಸಂಶೋಧಕ ರಷ್ಯಾದ ಮಿಖಾಯಿಲ್‌ ಕಲಾಶ್ನಿಕೋವ್‌ ನಿಧನರಾಗಿದ್ದಾರೆ. ಕಳೆದ ಕೆಲ ತಿಂಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಕಲಾಶ್ನಿಕೋವ್‌ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫ‌ಲಕಾರಿಯಾಗದೆ ಅವರು ಸಾವನ್ನಪ್ಪಿದ್ದಾರೆ. ಕೃಷಿ ಸಂಬಂಧಿ ಉಪಕರಣಗಳನ್ನು ತಯಾರಿಸುವದಲ್ಲಿ ಆಸಕ್ತಿ ಹೊಂದಿದ್ದ ಕಲಾಶ್ನಿಕೋವ್‌, ಆಕಸ್ಮಿಕವಾಗಿ ಎ.ಕೆ. 47 ರೈಫ‌ಲ್‌ ಕಂಡುಹಿಡಿದಿದ್ದರು. 1946ರಲ್ಲಿ ಮೊದಲ ಬಾರಿಗೆ ಈ ಗನ್‌ಗಳ ಅವಿಷ್ಕಾರವಾಗಿದ್ದು, ನಂತರದ ದಶಕಗಳಲ್ಲಿ ಇವು ಜಗತ್ತಿನಾದ್ಯಂತ ಜನಪ್ರಿಯವಾಗಿತ್ತು. ಇದುವರೆಗೆ ಅಧಿಕೃತವಾಗಿಯೇ 10 ಕೋಟಿಗೂ ಹೆಚ್ಚು ಎ.ಕೆ.47 ಸರಣಿಯ ಗನ್‌ಗಳು ಮಾರಾಟವಾಗಿವೆ ಎಂಬುದೇ ಇವುಗಳ ಜನಪ್ರಿಯತೆಗೆ ಸಾಕ್ಷಿ.

  • ಪ್ರಾಣಿ ದಯಾ ಸಂಘ ‘ಪೇಟಾ’ ದ ‘ವರ್ಷದ ವ್ಯಕ್ತಿಯಾಗಿ’ ಶಶಿ ತರೂರ್ ಆಯ್ಕೆ: ಪ್ರಾಣಿಗಳ ಸಂರಕ್ಷಣೆಗಾಗಿ ಕ್ರಮ ಕೈಗೊಂಡಿರುವುದಕ್ಕೆ ಪ್ರಾಣಿ ದಯಾ ಸಂಘ ‘ಪೇಟಾ’, ಕೇಂದ್ರ ಸಚಿವ ಶಶಿ ತರೂರ್‌ ಅವರನ್ನು ‘ವರ್ಷದ ವ್ಯಕ್ತಿ’ಯಾಗಿ ಆಯ್ಕೆ ಮಾಡಿದೆ. ‘ಪೇಟಾ’ ರೂಪಿಸಿದ್ದ ಕಾರ್ಯಕ್ರಮವೊಂದನ್ನು ಸಿಬಿಎಸ್‌ಸಿ ಪಠ್ಯಕ್ರಮದಲ್ಲಿ ಅಳವಡಿಸುವ ಕುರಿತು ಪರಿಶೀಲನೆ ನಡೆಸುವಂತೆ ರಾಷ್ಟ್ರೀಯ ಶಿಕ್ಷಣ ಸಂಶೋಧನೆ ಹಾಗೂ ತರಬೇತಿ ಮಂಡಳಿಗೆ ಶಶಿ ತರೂರ್‌ ಪ್ರೋತ್ಸಾಹ ನೀಡಿದ್ದರು. ವೈದ್ಯಕೀಯ ಶಿಕ್ಷಣ ಕ್ಷೇತ್ರದಲ್ಲಿ ಪ್ರಾಣಿಗಳನ್ನು ಬಳಸದೆ ಪರ್ಯಾಯ ವಿಧಾನಗಳನ್ನು ಅಳವಡಿಸಿಕೊಳ್ಳುವಂತೆ ಮಾಡಲು ಕೋರಿ, ಆರೋಗ್ಯ ಸಚಿವ ಗುಲಾಂ ನಬೀ ಆಜಾದ್‌ ಅವರಿಗೆ ತರೂರ್‌ ಪತ್ರವನ್ನೂ ಬರೆದಿದ್ದರು.

  • ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ (ಕೆಎಸ್‌ಸಿಎ) ಅಧ್ಯಕ್ಷರಾಗಿ ಅಶೋಕಾನಂದ ಆಯ್ಕೆ:  ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ (ಕೆಎಸ್‌ಸಿಎ) ಹಿರಿಯ ಉಪಾಧ್ಯಕ್ಷ ಅಶೋಕಾನಂದ ಅವರು ಅಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ನಿಧನದಿಂದ ಈ ಸ್ಥಾನ ತೆರವಾಗಿತ್ತು. ಹೋದ ತಿಂಗಳು ನಡೆದ ಕೆಎಸ್‌ಸಿಎ ಚುನಾವಣೆಯಲ್ಲಿ ಒಡೆಯರ್‌ ಅವರು ಅನಿಲ್ ಕುಂಬ್ಳೆ ಬೆಂಬಲಿತ ಸದಾನಂದ ಮಯ್ಯ ಬಣದ ಎದುರು ಗೆಲುವು ಸಾಧಿಸಿ ಅಧ್ಯಕ್ಷರಾಗಿದ್ದರು. ಆದರೆ, ಅವರು ಈ ತಿಂಗಳ ಮೊದಲ ವಾರದಲ್ಲಿ ಮೃತಪಟ್ಟಿದ್ದರು. ಅಧ್ಯಕ್ಷ ಸ್ಥಾನಕ್ಕೆ ನಡೆದ ಪೈಪೋಟಿಯಲ್ಲಿ ಒಡೆಯರ್‌ 510 ಮತಗಳಿಂದ ಸದಾನಂದ ಮಯ್ಯ ಅವರನ್ನು ಸೋಲಿಸಿದ್ದರು.

ಸಾಹಿತಿ ಕೆ.ಸಚ್ಚಿದಾನಂದನ್‌ ಅವರಿಗೆ ಪ್ರಪ್ರಥಮ ‘ಕುವೆಂಪು ರಾಷ್ಟ್ರೀಯ ಪುರಸ್ಕಾರ’ ಪ್ರಶಸ್ತಿ ತೀರ್ಥಹಳ್ಳಿಯ ಕುಪ್ಪಳಿಯಲ್ಲಿ ರಾಷ್ಟ್ರಕವಿ ಕುವೆಂಪು ಅವರ 109ನೇ ಜನ್ಮದಿನೋತ್ಸವ ಕಾರ್ಯಕ್ರಮದಲ್ಲಿ ಮಲೆಯಾಳಂನ ಸಾಹಿತಿ ಕೆ.ಸಚ್ಚಿದಾನಂದನ್‌ ಅವರಿಗೆ ಪ್ರಪ್ರಥಮ ‘ಕುವೆಂಪು ರಾಷ್ಟ್ರೀಯ ಪುರಸ್ಕಾರ’ ಪ್ರದಾನ ಮಾಡಲಾಯಿತು. ಕೆ.ಸಚ್ಚಿದಾನಂದನ್‌ ಅವರಿಗೆ ರೂ.5 ಲಕ್ಷ ನಗದು, ಸ್ಮರಣಿಕೆ ನೀಡಿ, ಗೌರವಿಸಲಾಯಿತು.

 

 

ಪ್ರಚಲಿತ ವಿದ್ಯಮಾನಗಳು ಡಿಸೆಂಬರ್ 22, 2013


ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಪ್ರಕಟಿಸಿದ ದಕ್ಷಿಣ ಆಫ್ರಿಕಾ ತಂಡದ ಆಲ್‌ರೌಂಡರ್‌ ಜಾಕ್‌ ಕಾಲಿಸ್‌ ದಕ್ಷಿಣ ಆಫ್ರಿಕಾ ತಂಡದ ಆಲ್‌ರೌಂಡರ್‌ ಜಾಕ್‌ ಕಾಲಿಸ್‌ ಟೆಸ್ಟ್‌ ಕ್ರಿಕೆಟ್‌ಗೆ ನಿವೃತ್ತಿ ಪ್ರಕಟಿಸಿದ್ದಾರೆ. ಏಕದಿನ ಮತ್ತು ಟ್ವೆಂಟಿ-20 ಪಂದ್ಯಗಳಲ್ಲಿ ಆಡಲು ಲಭ್ಯವಿರುವುದಾಗಿ ಕಾಲಿಸ್‌ ತಿಳಿಸಿದ್ದಾರೆ. ಈ ಮೂಲಕ 2015ರ ಏಕದಿನ ವಿಶ್ವಕಪ್‌ ಟೂರ್ನಿಯಲ್ಲಿ ಆಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಕಾಲಿಸ್ ಕ್ರಿಕೆಟ್ ಪಯಣ:
    ಪ್ರಚಲಿತ ವಿದ್ಯಮಾನಗಳು ಡಿಸೆಂಬರ್ 22, 2013
  • 38ರ ಹರೆಯದ ಕಾಲಿಸ್‌ 1995ರ ಡಿಸೆಂಬರ್‌ನಲ್ಲಿ ಇಂಗ್ಲೆಂಡ್‌ ವಿರುದ್ಧದ ಪಂದ್ಯದೊಂದಿಗೆ ಟೆಸ್ಟ್‌ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದ್ದರು.
  • ತಮ್ಮ 18 ವರ್ಷಗಳ ಅಂತರರಾಷ್ಟ್ರೀಯ ಕ್ರಿಕೆಟ್‌ ಜೀವನದಲ್ಲಿ 165 ಟೆಸ್ಟ್‌ಗಳನ್ನಾಡಿರುವ ಅವರು 55.12ರ ಸರಾಸರಿಯಲ್ಲಿ 13289 ರನ್‌ ಪೇರಿಸಿದ್ದಾರೆ.
  • ಆಲ್‌ರೌಂಡ್‌ ಆಟದ ಮೂಲಕ ತಂಡದ ಹಲವು ಗೆಲುವುಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದ ಕಾಲಿಸ್‌ 292 ವಿಕೆಟ್‌ಗಳು ಹಾಗೂ 199 ಕ್ಯಾಚ್‌ಗಳನ್ನು ಪಡೆದಿದ್ದಾರೆ.
  • ಸಚಿನ್‌ ತೆಂಡೂಲ್ಕರ್‌ (200 ಪಂದ್ಯಗಳಿಂದ 15921), ರಿಕಿ ಪಾಂಟಿಂಗ್‌ (13378, 168 ಟೆಸ್ಟ್‌) ಬಳಿಕ ಟೆಸ್ಟ್‌ ಕ್ರಿಕೆಟ್‌ನಲ್ಲಿ ಅತ್ಯಧಿಕ ರನ್‌ ಪೇರಿಸಿದ ಆಟಗಾರ ಎಂಬ ಗೌರವ ಕಾಲಿಸ್‌ ಹೊಂದಿದ್ದಾರೆ.
  • ಅಂಕಿಅಂಶಗಳನ್ನು ನೋಡಿದರೆ ಕಾಲಿಸ್‌ ಟೆಸ್ಟ್‌ ಕ್ರಿಕೆಟ್‌ನ ಸಾರ್ವಕಾಲೀಕ ಶ್ರೇಷ್ಠ ಆಲ್‌ರೌಂಡರ್‌ ಎಂಬುದು ಸ್ಪಷ್ಟವಾಗುತ್ತದೆ. ಏಕೆಂದರೆ ವೆಸ್ಟ್‌ ಇಂಡೀಸ್‌ನ ಗ್ಯಾರಿ ಸೋಬರ್ಸ್‌ (8032 ರನ್‌, 109 ವಿಕೆಟ್‌) ಮತ್ತು ಇಯಾನ್‌ ಬಾಥಮ್‌ (5200 ರನ್‌, 383 ವಿಕೆಟ್‌) ಅವರನ್ನು ಮೀರಿಸುವ ಸಾಧನೆಯನ್ನು ಕಾಲಿಸ್‌ ಮಾಡಿದ್ದಾರೆ. ಸಚಿನ್‌ ತೆಂಡೂಲ್ಕರ್‌ (51) ಬಳಿಕ ಟೆಸ್ಟ್‌ನಲ್ಲಿ ಅತ್ಯಧಿಕ ಶತಕ ಗಳಿಸಿದ ದಾಖಲೆಯೂ ಕಾಲಿಸ್‌ (44) ಹೆಸರಿನಲ್ಲಿದೆ.

“ಒಂದೇ ಮಗು” ನಿಯಮದಿಂದ ಹಿಂದೆ ಸರಿದಿರುವ ಚೀನಾ
one child policyದಂಪತಿ ಒಂದೇ ಮಗುವನ್ನು ಹೊಂದಬೇಕು ಎನ್ನುವ ನಿಲುವಿನಿಂದ ಹಿಂದೆ ಸರಿದಿರುವ ಚೀನಾ, ಅಗತ್ಯ ಸಂದರ್ಭದಲ್ಲಿ ಇನ್ನೊಂದು ಮಗು ಪಡೆಯುವ ಕುಟುಂಬ ಯೋಜನೆಗೆ ಹಸಿರು ನಿಶಾನೆ ತೋರಿದೆ. ನ್ಯಾಷನಲ್‌ ಪೀಪಲ್ಸ್‌ ಕಾಂಗ್ರೆಸ್‌ (ಎನ್‌ಪಿಸಿ)ನ ಸ್ಥಾಯಿ ಸಮಿತಿಯ ದ್ವೈಮಾಸಿಕ ಸಭೆಯಲ್ಲಿ ಈ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. ಸಂವಿಧಾನ ತಿದ್ದುಪಡಿ: ಪ್ರಾಂತೀಯ ರಾಜ್ಯಗಳು ತಮ್ಮ ವಿವೇಚನೆಗೆ ಅನುಗುಣವಾಗಿ ಈ ನಿರ್ಣಯವನ್ನು ಜಾರಿಗೆ ತರಬಹುದು. ಸ್ಥಳೀಯ ಜನಸಂಖ್ಯೆಯನ್ನು ಆಧಾರವಾಗಿಟ್ಟುಕೊಂಡು ಸ್ಥಳೀಯ ಸರ್ಕಾರಗಳು ಕುಟುಂಬ ಯೋಜನೆಗೆ ಸಂಬಂಧಿಸಿದಂತೆ ಮಾರ್ಪಾಡು ಮಾಡಬಹುದಾಗಿದೆ. ಚೀನಾದಲ್ಲಿ ದಂಪತಿ ಒಂದೇ ಮಗುವನ್ನು ಹೊಂದಬೇಕು ಎನ್ನುವುದು ಅಲ್ಲಿನ ಸಂವಿಧಾನದ ಆಶಯವಾಗಿದೆ. ಈ ಕಾನೂನನ್ನು ತಿದ್ದುಪಡಿ ಮಾಡಬೇಕಾದರೆ ಎನ್‌ಪಿಸಿಯ ಅನುಮೋದನೆ ಅಗತ್ಯ. ಎನ್‌ಪಿಸಿಯ ಈ ನಿರ್ಣಯ ಈಗ ದೇಶದಲ್ಲಿ ಕಾನೂನಾಗಿ ಪರಿವರ್ತನೆ ಆಗಲಿದೆ. ಕಾರಣವೇನು?
  • 1990 ರ ದಶಕದಿಂದ ಈಚೆಗೆ ಚೀನಾದಲ್ಲಿ ಜನಸಂಖ್ಯಾ ಹೆಚ್ಚಳ 1.5 ರಿಂದ 1.6 ಕ್ಕೆ ಇಳಿಮುಖವಾಗಿದೆ. ಇದು ದೇಶದ ಮಾನವ ಸಂಪನ್ಮೂಲ ಕೊರತೆಗೆ ಕಾರಣವಾಗಲಿದೆ. ಹಾಗಾಗಿ ಕುಟುಂಬ ಯೋಜನೆಯಲ್ಲಿ ಮಾರ್ಪಾಡು ಮಾಡಲು ಎನ್‌ಪಿಸಿ ನಿರ್ಣಯ ಕೈಗೊಂಡಿದೆ.
  • 2012 ರಲ್ಲಿ ಮಾನವ ಸಂಪನ್ಮೂಲ ಪ್ರಮಾಣ 34.50 ಲಕ್ಷಕ್ಕೆ ಇಳಿದಿದೆ. ಈ ಪ್ರಮಾಣ ಹೀಗೆಯೇ ಮುಂದುವರಿದರೆ 2023 ರ ಸುಮಾರಿಗೆ ವಾರ್ಷಿಕ 80 ಲಕ್ಷ ಮಾನವ ಸಂಪನ್ಮೂಲ ಇಳಿಮುಖವಾಗಲಿದ್ದು, ಆರ್ಥಿಕತೆ ಮೇಲೆ ಗಂಭೀರ ಪರಿಣಾಮ ಬೀರುವ ಸಾಧ್ಯತೆ ಇದೆ.
  • 1970 ರಲ್ಲಿ ಚೀನಾದಲ್ಲಿ ದಂಪತಿಗೆ ಒಂದೇ ಮಗು ಕಾನೂನು ಜಾರಿ ಮಾಡಿದ್ದು, ಇದರಿಂದಾಗಿ 40 ಕೋಟಿ ಮಕ್ಕಳ ಜನನವನ್ನು ತಡೆಹಿಡಿದಂತೆ ಆಗಿದೆ ಎಂದು ಚೀನಾ ಸರ್ಕಾರ ಅಂದಾಜು ಮಾಡಿದೆ.

ಇಡೀ ಭಾರತ ಒಂದೇ ವಿದ್ಯುತ್ ಜಾಲಕ್ಕೆ ಜೋಡಣೆಯಾಗಲಿರುವ ಮಹತ್ವದ ಯೋಜನೆಗೆ ಚಾಲನೆ
electricl gridದೇಶದ ವಿದ್ಯುತ್ ವಲಯದಲ್ಲಿ ಡಿಸೆಂಬರ್ 30 ರಂದು ಹೊಸ ಮೈಲಿಗಲ್ಲು ಸ್ಥಾಪನೆಯಾಗಿದೆ. ಇಡೀ ಭಾರತ ಒಂದೇ ವಿದ್ಯುತ್ ಜಾಲದ ಮೂಲಕ ಜೋಡಣೆಯಾಗಿರುವ ಮಹತ್ವದ ದಿನವದು. ರಾಯಚೂರಿನಲ್ಲಿ ಸ್ಥಾಪನೆಯಾಗಿರುವ 400.765 ಕೆ.ವಿ. ಬೃಹತ್ ವಿದ್ಯುತ್ ಉಪ ಕೇಂದ್ರ ರಾಜ್ಯದ ಮೊದಲ ಅತಿ ದೊಡ್ಡ ಉಪ ಕೇಂದ್ರವಾಗಿದೆ. ಅದು ಸೊಲ್ಲಾಪುರದ 400.765 ಕೆವಿ ವಿದ್ಯುತ್ ಉಪ ಕೇಂದ್ರದೊಡನೆ ಸಂಪರ್ಕ ಸಾಧಿಸುವ ಮೂಲಕ ಇಡೀ ದೇಶದ ಗ್ರಿಡ್ ಜೋಡಣೆಯಾಗಲಿದೆ. ಆ ಮೂಲಕ ಇಡೀ ದೇಶ ವಿದ್ಯುತ್ ಸಂಪರ್ಕ ಜಾಲದಲ್ಲಾದರೂ ವೈವಿಧ್ಯತೆಯಲ್ಲಿ ಏಕತೆ ಸಾಧಿಸಲಿದೆ. ‘ಒಂದು ದೇಶ ಒಂದು ಗ್ರಿಡ್‌’ : ‘ಒಂದು ದೇಶ ಒಂದು ಗ್ರಿಡ್‌’ ಜಾರಿಯಾದಲ್ಲಿ ದಕ್ಷಿಣ ಪ್ರಾದೇಶಿಕ ಗ್ರಿಡ್ ಉತ್ತರ, ಪೂರ್ವ, ವಾಯವ್ಯ ಮತ್ತು ಪಶ್ಚಿಮ ಭಾರತದ ಪ್ರಾದೇಶಿಕ ಗ್ರಿಡ್‌ಗಳೊಂದಿಗೆ ಜೋಡಣೆ ಸಾಧ್ಯವಾಗುತ್ತದೆ. ಇದರಿಂದ ತೀವ್ರ ವಿದ್ಯುತ್ ಕೊರತೆ ಎದುರಿಸುತ್ತಿರುವ ದಕ್ಷಿಣ ಪ್ರಾದೇಶಿಕ ಗ್ರಿಡ್ ಕೊರತೆ ನಿವಾರಿಸಿಕೊಳ್ಳುವ ಸಾಧ್ಯತೆ ಇರುವುದು ದಕ್ಷಿಣದ ರಾಜ್ಯಗಳಿಗೆ ವರವಾಗಿ ಪರಿಣಮಿಸಲಿದೆ. ಬೇಡಿಕೆಗೆ ಅನುಗುಣವಾಗಿ ಪೂರೈಕೆ:
  • ಯೋಜನೆ ಮತ್ತು ಕಾರ್ಯಾಚರಣೆ ದೃಷ್ಟಿಯಿಂದ ಭಾರತದ ವಿದ್ಯುತ್ ವ್ಯವಸ್ಥೆಯನ್ನು 5 ಪ್ರಾದೇಶಿಕ ಗ್ರಿಡ್ ಗಳನ್ನಾಗಿ ವಿಂಗಡಿಸಲಾಗಿತ್ತು.
  • 90ರ ದಶಕದ ಆರಂಭದಲ್ಲಿ ಪ್ರಾದೇಶಿಕ ಗ್ರಿಡ್ ಗಳನ್ನು ಪರಸ್ಪರ ಜೋಡಿಸುವ ಮೂಲಕ ರಾಷ್ಟ್ರೀಯ ಗ್ರಿಡ್ ಸ್ಥಾಪಿಸುವ ಪರಿಕಲ್ಪನೆಗೆ ಚಾಲನೆ ದೊರೆಯಿತು.
  • ಆರಂಭದಲ್ಲಿ ಪ್ರಾದೇಶಿಕ ಗ್ರಿಡ್ಗಳಲ್ಲಿ ಹೆಚ್ಚುವರಿಯಾದ ವಿದ್ಯುತ್ತನ್ನು ಪರಸ್ಪರ ಹಂಚಿಕೊಳ್ಳುವ ಉದ್ದೇಶದಿಂದ ಪ್ರಾದೇಶಿಕ ಗ್ರಿಡ್ ಗಳ ಜೋಡಣೆ ಯೋಜಿಸಲಾಗಿತ್ತು. ನಂತರದ ದಿನಗಳಲ್ಲಿ ಪ್ರಾದೇಶಿಕ ಸ್ವಾವಲಂಬನೆಗಿಂತ ಇಡೀ ರಾಷ್ಟ್ರದ ವಿದ್ಯುತ್ ಬೇಡಿಕೆ ಗಮನದಲ್ಲಿರಿಸಿ ಗ್ರಿಡ್ ಗಳ ಸಂಪರ್ಕ ಕಲ್ಪಿಸಲು ಯೋಜನೆ ರೂಪಿಸಲಾಯಿತು.
ಜೋಡಣೆ ಕಾರ್ಯಾರಂಭ:
  • 1991ರ ಅಕ್ಟೋಬರ್ನಲ್ಲಿ ವಾಯವ್ಯ ಮತ್ತು ಪೂರ್ವ ಪ್ರಾದೇಶಿಕ ಗ್ರಿಡ್ ಗಳನ್ನು ಪರಸ್ಪರ ಜೋಡಿಸಲಾಯಿತು.
  • 2003ರ ಮಾರ್ಚ್ ನಲ್ಲಿ ಪಶ್ಚಿಮ ಪ್ರಾದೇಶಿಕ ಗ್ರಿಡ್ ಮತ್ತು ಪೂರ್ವ ಹಾಗೂ ವಾಯವ್ಯ ಪ್ರಾದೇಶಿಕ ಗ್ರಿಡ್ ಗಳನ್ನು ಪರಸ್ಪರ ಸಂಪರ್ಕಿಸಲಾಯಿತು.
  • 2006ರ ಆಗಸ್ಟ್ ನಲ್ಲಿ ಉತ್ತರ ಪ್ರಾದೇಶಿಕ ಗ್ರಿಡ್ ಮತ್ತು ಪೂರ್ವ ಪ್ರಾದೇಶಿಕ ಗ್ರಿಡ್ ಗಳಿಗೆ ಸಂಪರ್ಕ ಕಲ್ಪಿಸಲಾಯಿತು.
  • ಸದ್ಯ ಉತ್ತರ, ಪೂರ್ವ, ಪಶ್ಚಿಮ ಮತ್ತು ವಾಯವ್ಯ ಪ್ರಾದೇಶಿಕ ಗ್ರಿಡ್ ಗಳು ಪರಸ್ಪರ ಜೋಡಣೆಯಾಗಿದ್ದು, ಒಂದೇ ಫ್ರೀಕ್ವೆನ್ಸಿಯಲ್ಲಿ ಕಾರ್ಯ ನಿರ್ವಹಿಸುತ್ತಿವೆ. ಈಗ ಈ ಎಲ್ಲ ಪ್ರಾದೇಶಿಕ ಗ್ರಿಡ್ ಗಳೊಂದಿಗೆ ದಕ್ಷಿಣ ಪ್ರಾದೇಶಿಕ ಗ್ರಿಡ್ ಕೂಡ ಜೋಡಣೆಯಾಗಲಿದ್ದು, ಇಡೀ ದೇಶವೇ ಏಕ ಫ್ರೀಕ್ವೆನ್ಸಿಯ ವಿದ್ಯುತ್ ಬಳಕೆ ಪ್ರಾರಂಭಿಸಲಿದೆ.
  • ಹೆಚ್ಚುವರಿ ವಿದ್ಯುತ್ ಲಭ್ಯ ಗ್ರಿಡ್ ಜೋಡಣೆಯಿಂದ ಹೆಚ್ಚುವರಿ ವಿದ್ಯುತ್ ಸಂಪನ್ಮೂಲ ಹೊಂದಿರುವ ಗ್ರಿಡ್ ನಿಂದ ಕೊರತೆ ಅನುಭವಿಸುತ್ತಿರುವ ಗ್ರಿಡ್ ಗಳಿಗೆ ವಿದ್ಯುತ್ ವರ್ಗಾವಣೆ ಮಾಡುವ ಮೂಲಕ ನೈಸರ್ಗಿಕ ಸಂಪನ್ಮೂಲದ ಗರಿಷ್ಠ ಪ್ರಯೋಜನ ಪಡೆದುಕೊಳ್ಳಲು ಸಾಧ್ಯವಾಗುತ್ತದೆ.
  • ಇದರಿಂದ ವಿದ್ಯುತ್ ಮಾರುಕಟ್ಟೆ ಪ್ರಬಲಗೊಂಡು ಪ್ರಾದೇಶಿಕ ಗ್ರಿಡ್ ಗಳ ನಡುವೆ ವಿದ್ಯುತ್ ವ್ಯಾಪಾರ ಸುಲಭ ಸಾಧ್ಯವಾಗಲಿದೆ.

ಪ್ರಚಲಿತ ವಿದ್ಯಮಾನಗಳು ಡಿಸೆಂಬರ್ 21, 2013


ಬ್ಯಾಂಕ್ ಜಂಟಿ ಖಾತೆದಾರರಿಗೆ ಎರಡು ಎಟಿಎಂ ಕಾರ್ಡ್‌ ನೀಡುವ ವ್ಯವಸ್ಥೆ ಜಾರಿಗೊಳಿಸಿದ ಕೆನರಾ ಬ್ಯಾಂಕ್‌
ಪ್ರಚಲಿತ ವಿದ್ಯಮಾನಗಳು ಡಿಸೆಂಬರ್ 21, 2013ರಾಷ್ಟ್ರೀಕೃತ ಬ್ಯಾಂಕುಗಳಲ್ಲಿ ಮೊದಲ ಬಾರಿಗೆ ಜಂಟಿ ಖಾತೆದಾರರಿಗೆ ಎರಡು ಎಟಿಎಂ ಕಾರ್ಡ್‌ ನೀಡುವ ವ್ಯವಸ್ಥೆಯನ್ನು ಕೆನರಾ ಬ್ಯಾಂಕ್‌ ಜಾರಿಗೆ ತಂದಿದೆ. ಕೆನರಾ ಬ್ಯಾಂಕಿನ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಆರ್‌.ಕೆ. ದುಬೆ ಈ ವಿನೂತನ ವ್ಯವಸ್ಥೆಗೆ ಚಾಲನೆ ನೀಡಿದರು.
ಏನಿದು ವ್ಯವಸ್ಥೆ?
  • ಜಂಟಿ ನಿರ್ವಹಣಾ ಪದ್ಧತಿಗೊಳಪ್ಪಟ್ಟಿರುವ ಜಂಟಿ ಖಾತೆ ಹೊಂದಿರುವ ಇಬ್ಬರು ಖಾತೆದಾರರಿಗೂ ಪ್ರತ್ಯೇಕವಾಗಿ ಒಂದೊಂದು ಎಟಿಎಂ ಕಾರ್ಡ್‌ಗಳ ಜತೆಗೆ ಪಿನ್‌ ಸಂಖ್ಯೆ ಸಹ ನೀಡಲಾಗುತ್ತದೆ.
  • ಒಬ್ಬ ಖಾತೆದಾರನನ್ನು ಮೊದಲ (ಪ್ರೈಮರಿ) ಖಾತೆದಾರ ಹಾಗೂ ಮತ್ತೂಬ್ಬರನ್ನು ಎರಡನೇ (ಸೆಕೆಂಡರಿ) ಖಾತೆದಾರ ಎಂದು ಗುರುತಿಸಲಾಗುತ್ತದೆ.
  • ಮೊದಲ ಖಾತೆದಾರ ಎಟಿಎಂ ಯಂತ್ರದೊಳಗೆ ಕಾರ್ಡ್‌ ಹಾಕಿ ಪಿನ್‌ ಸಂಖ್ಯೆ ನಮೋದಿಸಿದರೆ ಹಣ ಡ್ರಾ ಮಾಡಿಕೊಳ್ಳುವ ಪ್ರಕ್ರಿಯೆಗೆ ಚಾಲನೆ ಸಿಗುತ್ತದೆ. ಈ ಹಂತದಲ್ಲಿ ನಮೂದಿಸಲಾದ ಮೊತ್ತವನ್ನು ತಾತ್ಕಾಲಿಕವಾಗಿ ತಡೆ ಹಿಡಿಯಲಾಗಿರುತ್ತದೆ.
  • ಎರಡನೇ ಖಾತೆದಾರ ಎಟಿಎಂ ಕಾರ್ಡ್‌ ಹಾಕಿ ಪಿನ್‌ ಸಂಖ್ಯೆ ನಮೋದಿಸಿದಾಗ ಮಾತ್ರ ಹಣ ಡ್ರಾ ಮಾಡಿಕೊಳ್ಳಬಹುದು.
  • ಜಂಟಿ ಖಾತೆದಾರರಿಗೆ ನೀಡಲಾಗುವ ಎಟಿಎಂ ಕಾರ್ಡ್‌ಗಳಿಂದ ಕೇವಲ ಹಣ ಮಾತ್ರ ಡ್ರಾ ಮಾಡಿಕೊಳ್ಳಬಹುದು. ಕೆನರಾ ಬ್ಯಾಂಕಿನ ಎಲ್ಲ ಶಾಖೆಗಳ ಎಟಿಎಂಗಳಲ್ಲಿ ಈ ವ್ಯವಸ್ಥೆ ಲಭ್ಯವಿರುತ್ತದೆ.
  • ಉಳಿದಂತೆ ಬಾಕಿ ಮಾಹಿತಿ, ಕಿರು ಹೇಳಿಕಾ ಪ್ರತಿ (ಮಿನಿ ಸ್ಟೇಟ್‌ಮೆಂಟ್‌), ಪಿನ್‌ ಸಂಖ್ಯೆ ಬದಲಾವಣೆ ಮತ್ತಿತರ ಸೇವೆಗಳನ್ನು ಜಂಟಿ ಖಾತೆದಾರರಿಗೆ ಪ್ರತ್ಯೇಕವಾಗಿ ನೀಡಲಾಗುತ್ತದೆ.
  • ಹಣ ಡ್ರಾ ಮಾಡಿದ ಬಗ್ಗೆ ಪ್ರಾಥಮಿಕ ಖಾತೆದಾರನ ನೋಂದಾಯಿತ ಮೊಬೈಲ್‌ ಸಂಖ್ಯೆಗೆ ಮಾಹಿತಿ ಬರುತ್ತದೆ.

ಕ್ರಿಕೆಟ್ ಆಟಗಾರ ರವಿಚಂದ್ರನ್ ಅಶ್ವಿನ್ ಗೆ “ಪಾಲಿ ಉಮ್ರಿಗಾರ್ ಪ್ರಶಸ್ತಿ”
ashwinಐಸಿಸಿ ಟೆಸ್ಟ್ ಆಲ್ರೌಂಡರ್ ವಿಭಾಗದಲ್ಲಿ ಮೊದಲ ಸ್ಥಾನದಲ್ಲಿರುವ ಆರ್. ಅಶ್ವಿನ್ ಅವರು, ಭಾರತದ ವರ್ಷದ ಶ್ರೇಷ್ಠ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರನಿಗೆ ನೀಡುವ, 2012-13ನೇ ಸಾಲಿನ ಪಾಲಿ ಉಮ್ರಿಗಾರ್ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಕ್ಟೋಬರ್ 2012 ರಿಂದ ಸೆಪ್ಟೆಂಬರ್ 30, 2013ರವರೆಗೆ ಶ್ರೇಷ್ಠ ಪ್ರದರ್ಶನ ನೀಡಿದ ಭಾರತದ ಆಟಗಾರರಿಗೆ ಮುಂಬೈಯಲ್ಲಿ ಜನವರಿ ಯಲ್ಲಿ ನಡೆಯಲಿರುವ ಬಿಸಿಸಿಐನ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಗೌರವಿಸಲಾಗುತ್ತದೆ.
ಸಾಧನೆ ಏನು?
  • ಒಂದು ಪಂದ್ಯದಲ್ಲಿ 10 ವಿಕೆಟ್ ಪಡೆದಿರುವ ಅಶ್ವಿನ್, ನಾಲ್ಕು ಬಾರಿ 5 ವಿಕೆಟ್ ಪಡೆಯುವ ಮೂಲಕ ಒಟ್ಟು 43 ವಿಕೆಟ್ ಪಡೆದಿದ್ದಾರೆ.
  • ಈ ವರ್ಷ 8 ಟೆಸ್ಟ್ ಪಂದ್ಯಗಳನ್ನಾಡಿರುವ ಅಶ್ವಿನ್ ಅವರು 2 ಅರ್ಧ ಶತಕಗಳೊಂದಿಗೆ 263 ರನ್ ಗಳಿಸಿದ್ದಾರೆ.
  • ಏಕದಿನ ಕ್ರಿಕೆಟ್ ನಲ್ಲಿ 18 ಪಂದ್ಯಗಳಿಂದ ಒಟ್ಟು 24 ವಿಕೆಟ್ ಪಡೆದಿದ್ದಾರೆ.
  • 4 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಿಂದ 3 ವಿಕೆಟ್ ಪಡೆದಿದ್ದಾರೆ.
ಪ್ರಶಸ್ತಿ ಬಗ್ಗೆ:
  • ಪಾಲಿ ಉಮ್ರಿಗಾರ್ ಪ್ರಶಸ್ತಿ ಒಂದು ಟ್ರೋಫಿಯೊಂದಿಗೆ ರೂ. 5 ಲಕ್ಷ ಮೊತ್ತದ ಚೆಕ್ ಒಳಗೊಂಡಿದೆ.
  • ಈ ಮೊದಲ 2006-07 ಮತ್ತು 2009-10ರಲ್ಲಿ ಸಚಿನ್ ತೆಂಡೂಲ್ಕರ್, 2007-08ರಲ್ಲಿ ವೀರೇಂದ್ರ ಸೆಹ್ವಾಗ್, 2008-09ರಲ್ಲಿ ಗೌತಮ್ ಗಂಭೀರ್, 2010-11ರಲ್ಲಿ ರಾಹುಲ್ ದ್ರಾವಿಡ್ ಹಾಗೂ 2011-12ರಲ್ಲಿ ವಿರಾಟ್ ಕೊಹ್ಲಿ ಈ ಪ್ರಶಸ್ತಿ ಪಡೆದಿದ್ದಾರೆ.
ಇತರೆ ಪ್ರಶಸ್ತಿಗಳು:
  • 2012-13ರ ರಣಜಿ ಟ್ರೋಫಿಯಲ್ಲಿ ಶ್ರೇಷ್ಠ ಆಲ್ರೌಂಡ್ ಪ್ರದರ್ಶನ ನೀಡಿದ ಮುಂಬೈ ತಂಡದ ಅಭಿಷೇಕ್ ನಾಯರ್ ಅವರು ಲಾಲಾ ಅಮರ್ನಾಥ್ ಪ್ರಶಸ್ತಿ ಪಡೆಯಲಿದ್ದಾರೆ. ಆ ವರ್ಷದಲ್ಲಿ ಅವರು 96.6 ಸರಾಸರಿಯಲ್ಲಿ 966 ರನ್ ಕಲೆ ಹಾಕಿದ್ದರು. ಇದರಲ್ಲಿ 3 ಶತಕ ಮತ್ತು 8 ಅರ್ಧ ಶತಕ ಸೇರಿದ್ದವಲ್ಲದೆ, ಬೌಲಿಂಗ್ ನಲ್ಲಿ 22.8 ಸರಾಸರಿಯಲ್ಲಿ 19 ವಿಕೆಟ್ ಪಡೆದಿದ್ದರು. ಈ ಪ್ರಶಸ್ತಿ ಒಂದು ಟ್ರೋಫಿ ಮತ್ತು ರು. 2.5 ಲಕ್ಷ ಬಹುಮಾನ ಮೊತ್ತವನ್ನು ಹೊಂದಿರುತ್ತದೆ.
  • ಮುಂಬೈ ಕ್ರಿಕೆಟ್ ಸಂಸ್ಥೆ 2012-13 ಋತುವಿನಲ್ಲಿ ಒಟ್ಟಾರೆ ಶ್ರೇಷ್ಠ ಪ್ರದರ್ಶನ ನೀಡಿದ ಟ್ರೋಫಿಯನ್ನು ಪಡೆಯಲಿದೆ.
  • ಭಾರತ ಕ್ರಿಕೆಟ್ ಗೆ ಅಮೋಘ ಸೇವೆ ಸಲ್ಲಿಸಿದ ಮೂವರು ಮಾಜಿ ಆಟಗಾರರಾದ ಆರ್. ಜಿ ನಾಡಕರಣಿ, ಫಾರೂಕ್ ಎಂಜಿನಿಯರ್ ಹಾಗೂ ದಿವಂಗತ ಏಕ್ನಾತ್ ಸೋಲ್ಕರ್ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಗುತ್ತದೆ. ಇವರು ಒಂದು ಸ್ಮರಣಿಕೆ ಮತ್ತು ತಲಾ ರು. 15 ಲಕ್ಷ ಹಣ ಪಡೆಯಲಿದ್ದಾರೆ.
  • ರಣಜಿ ಟ್ರೋಫಿ ಅತಿ ಹೆಚ್ಚು ರನ್ ಗಳಿಸಿದ ಜೀವನ್ಜೋತ್ ಸಿಂಗ್ ಚೌಹಣ್ ಅವರಿಗೆ ಮಾಧವ್ ರಾವ್ ಸಿಂಧಿಯಾ ಪ್ರಶಸ್ತಿ ದೊರಕಿದೆ. ಅತಿ ಹೆಚ್ಚು ವಿಕೆಟ್ ಪಡೆದ ಈಶ್ವರ್ ಪಾಂಡೆ ಅವರಿಗೂ ಇದೇ ಪ್ರಶಸ್ತಿ ದೊರಕಿದೆ.
  • 15 ವರ್ಷದೊಳಗಿನ ಶ್ರೇಷ್ಠ ಕ್ರಿಕೆಟರ್ ಕರಣ್ ಶರ್ಮಾ ಮತ್ತು 16 ವರ್ಷದೊಳಗಿನ ಶ್ರೇಷ್ಠ ಕ್ರಿಕೆಟರ್ ಆರ್ಮಾನ್ ಜಾಫರ್ ಹಾಗೂ ಶ್ರೇಷ್ಠ ಮಹಿಳಾ ಕ್ರಿಕೆಟ್ ಆಟಗಾರ್ತಿ ಎಂ.ಡಿ ತಿರುಷ್ಕಾಮಿನಿ ಅವರಿಗೆ ಎಂ.ಎ ಚಿದಂಬರಂ ಪ್ರಶಸ್ತಿ ನೀಡಲಾಗಿದೆ. ಶಾಂಸುದ್ದೀನ್ ಶ್ರೇಷ್ಠ ದೇಶೀಯ ಕ್ರಿಕೆಟರ್ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ.

ರಾಷ್ಟ್ರೀಯ ಪೊಲೀಸ್ ಅಕಾಡೆಮಿಯ (ಎನ್.ಪಿ.ಎ.) ಪ್ರಥಮ ಮಹಿಳಾ ಮುಖ್ಯಸ್ಥೆಯಾಗಿ ಅರುಣಾ ಬಹುಗುಣ ನೇಮಕ
aruna bahugunaರಾಷ್ಟ್ರೀಯ ಪೊಲೀಸ್ ಅಕಾಡೆಮಿಗೆ ಪ್ರಥಮ ಮಹಿಳಾ ಮುಖ್ಯಸ್ಥೆಯಾಗಿ ಹೈದರಾಬಾದ್ ಮೂಲದ ಐಪಿಎಸ್ ಅಧಿಕಾರಿ ಅರುಣಾ ಬಹುಗುಣ ನೇಮಕಗೊಂಡಿದ್ದಾರೆ. ಮಹಿಳೆಯೊಬ್ಬರು ಪೊಲೀಸ್ ಅಕಾಡೆಮಿಯ ಮುಖ್ಯಸ್ಥೆಯಾಗಿರುವುದು ಇದೇ ಪ್ರಥಮ.
ಅರುಣಾ ಬಗ್ಗೆ:
  • 1979ನೇ ಸಾಲಿನ ಐಪಿಎಸ್ ಅಧಿಕಾರಿ ಅರುಣಾ ಬಹುಗುಣ ಅವರನ್ನು, 65 ವರ್ಷಗಳ ಇತಿಹಾಸ ಹೊಂದಿರುವ ವಲ್ಲಭಬಾಯಿ ಪಟೇಲ್ ನ್ಯಾಷನಲ್ ಪೊಲೀಸ್ ಅಕಾಡೆಮಿ(ಎಸ್‌ವಿಪಿಎನ್‌ಪಿಎ) ನಿರ್ದೇಶಕರಾಗಿ ನೇಮಕ ಮಾಡಲಾಗಿದೆ.
  • ಆಂಧ್ರ ಪ್ರದೇಶ ತಂಡದ ಬಹುಗುಣ ಪ್ರಸ್ತುತ ರಾಷ್ಟ್ರದ ಅತ್ಯಂತ ದೊಡ್ಡ ಅರೆ ಸೇನಾ ಪಡೆ ಸಿಆರ್‌ಪಿಎಫ್ ನ ಕೇಂದ್ರಕಚೇರಿಯಲ್ಲಿ ವಿಶೇಷ ಮಹಾ ನಿರ್ದೇಶಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
  • ಬಹುಗುಣ ಅವರು ಆಂಧ್ರ ಪ್ರದೇಶದ ಪೊಲೀಸ್ ಇಲಾಖೆಯಲ್ಲಿ ವಿವಿಧೆಡೆ ಸೇವೆ ಸಲ್ಲಿಸಿರುವುದು ಸೇರಿದಂತೆ ಸಿಆರ್‌ಪಿಎಫ್‌ನ ಪ್ರಥಮ ಎಸ್‌ಡಿಜಿ ಆಗಿಯೂ ಸೇವೆ ಸಲ್ಲಿಸಿದ್ದಾರೆ.
  • ಎನ್‌ಎಪಿಯ ನಿರ್ದೇಶಕ ಸ್ಥಾನದಲ್ಲಿದ್ದ ಸುಭಾಷ್ ಗೋಸ್ವಾಮಿ ಅವರನ್ನು ಇಂಡೊ-ಟಿಬೆಟ್ ಗಡಿ ಪೊಲೀಸ್(ಐಟಿಬಿಪಿ) ಪಡೆಯ ಮಹಾ ನಿರ್ದೇಶಕರಾಗಿ ಕಳೆದ ತಿಂಗಳು ನೇಮಕ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಸ್ಥಾನ ತೆರವಾಗಿತ್ತು.

 

ಪ್ರಚಲಿತ ವಿದ್ಯಮಾನಗಳು ಡಿಸೆಂಬರ್ 20, 2013


ಪ್ರಚಲಿತ ವಿದ್ಯಮಾನಗಳು ಡಿಸೆಂಬರ್ 20, 2013ಕಿಶನ್ ಗಂಗಾ ಅಣೆಕಟ್ಟೆ ಕಾಮಗಾರಿ ಮುಂದುವರಿಸಲು ಅಂತರರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾಲಯ ಆದೇಶ
ಭಾರತವು ಜಮ್ಮು ಮತ್ತು ಕಾಶ್ಮೀರದಲ್ಲಿ ನಿರ್ಮಿಸುತ್ತಿರುವ ಕಿಶನ್‌ಗಂಗಾ ಅಣೆಕಟ್ಟೆ ಕಾಮಗಾರಿ ಮುಂದುವರಿಸಲು ಅಂತರರಾಷ್ಟ್ರೀಯ ಮಧ್ಯಸ್ಥಿಕೆ ನ್ಯಾಯಾಲಯ ಭಾರತಕ್ಕೆ ಸಮ್ಮತಿ ನೀಡಿ ಅಂತಿಮ ಆದೇಶ ಹೊರಡಿಸಿದೆ. ಈ ಅಣೆಕಟ್ಟೆ ನಿರ್ಮಾಣಕ್ಕೆ ಪಾಕಿಸ್ತಾನ ತಕಾರರು ಸಲ್ಲಿಸಿತ್ತು. ಪಶ್ಚಿಮದ ನದಿಗಳಿಂದ ಜಲ ವಿದ್ಯುತ್‌ ಉತ್ಪಾದನೆಗೆ ನೀರು ಪಡೆಯುವ ಹಕ್ಕು ಇದೆ ಎನ್ನುವ ಭಾರತದ ವಾದವನ್ನು ಮಧ್ಯಂತರ ಆದೇಶದಲ್ಲಿ ನ್ಯಾಯಾಲಯ ಎತ್ತಿ ಹಿಡಿದಿತ್ತು.
ಆದೇಶ ಏನು?
1960ರ ‘ಇಂಡಸ್‌’ ಜಲ ಒಪ್ಪಂದದ ಪ್ರಕಾರ ಪಶ್ಚಿಮದ ನದಿಗಳ ನೀರು ಪಾಕಿಸ್ತಾನಕ್ಕೆ ಮೀಸಲಿವೆ. ‘ಪರಿಸರ ನಿರ್ವಹಣೆಗೆ ಸಂಬಂಧಿಸಿದಂತೆ ಎಲ್ಲ ಸಂದರ್ಭದಲ್ಲಿ ಕಿಶನ್‌ಗಂಗಾ ನದಿಯಲ್ಲಿ ಒಂಬತ್ತು ಕ್ಯೂಬಿಕ್‌ ಮೀಟರ್‌ ನೀರಿನ ನೈಸರ್ಗಿಕ ಹರಿವು ಇರಬೇಕು’ ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ. ಕಿಶನ್‌ಗಂಗಾ ಜಲವಿದ್ಯುತ್‌ ಯೋಜನೆಗೆ ಪರ್ಯಾಯ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದರ ಜೊತೆಗೆ ಪಶ್ಚಿಮ ದಿಕ್ಕಿಗೆ ಹರಿಯುವ ಎಲ್ಲ ನದಿಗಳಿಗೆ ಇದೇ ತಂತ್ರಜ್ಞಾನ ಅಳವಡಿಸಿಕೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ.

ರಾಜ್ಯದ ಬರಪೀಡಿತ ತಾಲೂಕುಗಳ ಸಂಖ್ಯೆ 98ಕ್ಕೆ ಏರಿಕೆ
droughtಮುಂಗಾರು ಮಳೆಯ ವೈಫಲ್ಯದಿಂದ ರಾಜ್ಯದ ಬರಪೀಡಿತ ತಾಲೂಕುಗಳ ಸಂಖ್ಯೆ 98ಕ್ಕೇರಿಸಲಾಗಿದೆ. ಪ್ರಥಮ ಹಂತದಲ್ಲಿ 22 ಜಿಲ್ಲೆಗಳ 64 ತಾಲೂಕುಗಳನ್ನು ಬರಪೀಡಿತ ತಾಲೂಕುಗಳೆಂದು ಘೋಷಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿತ್ತು. ಇದೀಗ ಮತ್ತೆ 34 ತಾಲೂಕುಗಳನ್ನು ಬರಪೀಡಿತ ಪಟ್ಟಿಗೆ ಸೇರಿಸಿ ಆದೇಶ ಹೊರಡಿಸಿದೆ.
ಬರ ನಿರ್ಧಾರ ಹೇಗೆ?
ಕಳೆದ ವರ್ಷ ರಾಜ್ಯದಲ್ಲಿ 134 ತಾಲೂಕುಗಳನ್ನು ರಾಜ್ಯ ಸರ್ಕಾರ ಬರಪೀಡಿತ ತಾಲೂಕುಗಳೆಂದು ಘೋಷಣೆ ಮಾಡಿತ್ತು. ಈ ಬಾರಿ ರಾಜ್ಯದ ಹಲವೆಡೆ ಉತ್ತಮ ಮಳೆಯಾಗಿದ್ದರೆ, ಕೆಲವು ತಾಲೂಕುಗಳಲ್ಲಿ ಮಳೆಯ ಕೊರತೆಯಿಂದಾಗಿ ಬರಗಾಲ ಎದುರಾಗಿದೆ. ಹೀಗಾಗಿ ಪ್ರಸಕ್ತ ವರ್ಷದಲ್ಲಿ ಬರಪೀಡಿತ ತಾಲೂಕುಗಳ ಸಂಖ್ಯೆ 98ಕ್ಕೆ ಏರಿದೆ. ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ ವರದಿಯ ಆಧಾರದ ಮೇಲೆ ಮಳೆ ಕೊರತೆ ಮತ್ತು ತೇವಾಂಶ ಕೊರತೆಯಿಂದ 34 ತಾಲೂಕುಗಳನ್ನು ಎರಡನೇ ಹಂತದಲ್ಲಿ ಬರ ಪೀಡಿತ ಪ್ರದೇಶ ಪಟ್ಟಿಗೆ ಪರಿಗಣಿಸಲಾಗಿದೆ.
ಹೊಸದಾಗಿ ಸೇರ್ಪಡೆಯಾದ ತಾಲೂಕುಗಳು:
  • ಹಾಸನ: ಚನ್ನರಾಯಪಟ್ಟಣ, ಅರಸೀಕೆರೆ, ಹಾಸನ, ಹೊಳೆನರಸೀಪುರ
  • ಬಾಗಲಕೋಟೆ: ಹುನಗುಂದ
  • ತುಮಕೂರು: ಕೊರಟೆಗೆರೆ, ತುಮಕೂರು, ಕುಣಿಗಲ್, ತುರುವೇಕೆರೆ
  • ಮಂಡ್ಯ: ನಾಗಮಂಗಲ, ಮಂಡ್ಯ, ಮಳವಳ್ಳಿ
  • ಕೊಪ್ಪಳ: ಯಲಬುರ್ಗಾ, ಕುಷ್ಟಗಿ
  • ಬಿಜಾಪುರ: ಮುದ್ದೇಬಿಹಾಳ, ಇಂಡಿ
  • ರಾಮನಗರ: ಚನ್ನಪಟ್ಟಣ
  • ಗುಲ್ಬರ್ಗ: ಆಳಂದ, ಗುಲ್ಬರ್ಗ
  • ಗದಗ: ಶಿರಹಟ್ಟಿ
  • ಧಾರವಾಡ: ಕುಂದಗೋಳ
  • ಬೆಂಗಳೂರು ಗ್ರಾಮಾಂತರ: ದೊಡ್ಡಬಳ್ಳಾಪುರ
  • ದಾವಣಗೆರೆ: ಹರಪ್ಪನಹಳ್ಳಿ
  • ಚಾಮರಾಜನಗರ: ಕೊಳ್ಳೇಗಾಲ, ಯಳಂದೂರು
  • ಬಳ್ಳಾರಿ: ಹಡಗಲಿ
  • ರಾಯಚೂರು: ಸಿಂಧನೂರು
  • ಯಾದಗಿರಿ: ಸುರಪುರ
  • ಹಾವೇರಿ: ಹಾನಗಲ್ಲ, ಸವಣೂರು, ಶಿಗ್ಗಾವಿ
  • ಚಿಕ್ಕಮಗಳೂರು: ಕಡೂರು
  • ಉತ್ತರ ಕನ್ನಡ: ಮುಂಡಗೋಡು, ಯಲ್ಲಾಪುರ

ಪಶ್ಚಿಮ ಘಟ್ಟದಲ್ಲಿ ಕೃಷಿ ಹಾಗೂ ತೋಟಗಾರಿಕೆ ಚಟುವಟಿಕೆ ನಡೆಸಲು ಕೇಂದ್ರ ಸರ್ಕಾರ ಅನುಮತಿ
w Ghatಪರಿಸರ ತಜ್ಞ ಕಸ್ತೂರಿರಂಗನ್ ವರದಿ ಅನುಷ್ಠಾನದಿಂದಾಗಿ ನೆಲೆ ಕಳೆದುಕೊಳ್ಳುವ ಭೀತಿಯಲ್ಲಿದ್ದ ಪಶ್ಚಿಮಘಟ್ಟದ ತಪ್ಪಲಿನ ಜನರು ಸ್ವಲ್ಪ ನಿಟ್ಟುಸಿರು ಬಿಡುವಂತ ಆದೇಶವನ್ನು ಕೇಂದ್ರ ಸರ್ಕಾರ ಹೊರಡಿಸಿದೆ. ಪಶ್ಚಿಮಘಟ್ಟದಲ್ಲಿ ಕೃಷಿ ಹಾಗೂ ತೋಟಗಾರಿಕೆ ಚಟುವಟಿಕೆ ನಡೆಸಲು ಕೇಂದ್ರ ಸರ್ಕಾರ ಅನುಮತಿ ನೀಡಿದೆ. ಪಶ್ಚಿಮಘಟ್ಟ ವ್ಯಾಪ್ತಿಯ ರಾಜ್ಯಗಳ ಅದರಲ್ಲೂ ಮುಖ್ಯವಾಗಿ ಕೇರಳದಿಂದ ಬಂದ ಒತ್ತಡದಿಂದಾಗಿ ಕೇಂದ್ರ ಪರಿಸರ ಸಚಿವಾಲಯ ಈ ನಿರ್ಧಾರ ತೆಗೆದುಕೊಂಡಿದೆ.
ವಿವಾದವೇನು?
  • ಕಸ್ತೂರಿರಂಗನ್ ಸಮಿತಿ ಪಶ್ಚಿಮಘಟ್ಟ ವ್ಯಾಪ್ತಿಯಲ್ಲಿ ಕೃಷಿ ಹಾಗೂ ತೋಟಗಾರಿಕೆಗೆ ನಿಷೇಧಕ್ಕೆ ಶಿಫಾರಸು ಮಾಡಿತ್ತು.
  • ಆದರೆ, ಕರ್ನಾಟಕ, ಕೇರಳ ಸೇರಿದಂತೆ ಪಶ್ಚಿಮಘಟ್ಟ ವ್ಯಾಪ್ತಿಯ ರಾಜ್ಯಗಳಲ್ಲಿ ಈ ಕುರಿತು ತೀವ್ರ ವಿರೋಧ ವ್ಯಕ್ತವಾಗುತ್ತಿದ್ದಂತೆ ಸರ್ಕಾರ ಸದ್ಯ ಕಸ್ತೂರಿರಂಗನ್ ಸಮಿತಿ ವರದಿಯಲ್ಲಿನ ಕೆಲ ನಿಯಮಗಳನ್ನು ಸಡಿಲಗೊಳಿಸಿದೆ.
  • ಜತೆಗೆ, ಪಶ್ಚಿಮಘಟ್ಟ ವ್ಯಾಪ್ತಿಯ ದಿನನಿತ್ಯದ ಚಟುವಟಿಕೆಗಳಿಗೆ ಅಡ್ಡಿಯಾಗುತ್ತದೆಂದು ಜನ ಆತಂಕಪಡುವ ಅಗತ್ಯ ಇಲ್ಲ ಎಂದು ಪರಿಸರ ಸಚಿವಾಲಯ ಸ್ಪಷ್ಟನೆ ನೀಡಿದೆ.
ಯಾವ ನಿಯಮ ಸಡಿಲಿಕೆ?
ಕೃಷಿ, ತೋಟಗಾರಿಕೆ ಮೇಲೆ ಹೇರಿದ್ದ ನಿಷೇಧ ವಾಪಸ್ ದಿನನಿತ್ಯದ ಚಟುವಟಿಕೆಗೂ ತೊಂದರೆ ಇಲ್ಲ ಗಣಿಗಾರಿಕೆ, ಮರಳುಗಾರಿಕೆ, ಕಟ್ಟಡ ನಿರ್ಮಾಣ, ಬೃಹತ್ ವಸತಿ ಯೋಜನೆಗಳಿಗೆ ನಿಷೇಧ ಮುಂದುವರಿಕೆ
ವಾಪಸ್ ಏಕೆ?
  • ಪಶ್ಚಿಮಘಟ್ಟ ವ್ಯಾಪ್ತಿಯ ರಾಜ್ಯಗಳು ಮುಖ್ಯವಾಗಿ ಕೇರಳದಲ್ಲಿ ವ್ಯಕ್ತವಾದ ಪ್ರತಿಭಟನೆಯಿಂದಾಗಿ ಆದೇಶ ವಾಪಸ್ ಕಸ್ತೂರಿರಂಗನ್ ಸಮಿತಿ ವರದಿಯನ್ನು ಸ್ವೀಕರಿಸುತ್ತಿರುವುದಾಗಿ ನವೆಂಬರ್ 16 ರಂದು ಹೊರಡಿಸಿದ್ದ ಆದೇಶವನ್ನೂ ಪರಿಸರ ಸಚಿವಾಲಯ ವಾಪಸ್ ಪಡೆದಿದೆ.
  • ಅಲ್ಲದೆ, ಸಮಿತಿಯ ಶಿಫಾರಸುಗಳನ್ನು ಅನುಷ್ಠಾನಕ್ಕೆ ತರಲು ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಸಚಿವಾಲಯ ತಿಳಿಸಿದೆ.
  • ವಿಶೇಷ ವಲಯ ಹೊರತುಪಡಿಸಿ ಕಸ್ತೂರಿರಂಗನ್ ಸಮಿತಿಯ ಶಿಫಾರಸುಗಳು ತೋಟಗಾರಿಕೆ, ಕೃಷಿಗೆ ಸಂಬಂಧಿಸಿದ ಅಥವಾ ಇನ್ಯಾವುದೇ ಮಾಮೂಲಿ ಚಟುವಟಿಕೆಗೆ ನಿಯಂತ್ರಣ ಹಾಕುವುದಿಲ್ಲ ಎಂದೂ ಸಚಿವಾಲಯ ಹೇಳಿದೆ.

 

ಪ್ರಚಲಿತ ವಿದ್ಯಮಾನಗಳು ಡಿಸೆಂಬರ್ 19, 2013


ಫುಟ್‌ಬಾಲ್  ಆಟಗಾರ ಸುನಿಲ್ ಚೆಟ್ರಿಗೆ ಎಐಎಫ್‌ಎಫ್ 2013 ನೇ ಸಾಲಿನ ವರ್ಷದ ಆಟಗಾರ ಪ್ರಶಸ್ತಿ
ಪ್ರಚಲಿತ ವಿದ್ಯಮಾನಗಳು ಡಿಸೆಂಬರ್ 19, 2013ಭಾರತ ಫುಟ್‌ಬಾಲ್ ತಂಡದ ನಾಯಕ ಸುನಿಲ್ ಚೆಟ್ರಿ ಅವರು ಅಖಿಲ ಭಾರತ ಫುಟ್‌ಬಾಲ್ ಸಂಸ್ಥೆ (ಎಐಎಫ್‌ಎಫ್) ಪ್ರಕಟಿಸಿರುವ 2013 ನೇ ಸಾಲಿನ ವರ್ಷದ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ.
ಎಐಎಫ್‌ಎಫ್ ಸಭೆ:
ಎಐಎಫ್‌ಎಫ್ ಅಧ್ಯಕ್ಷ ಪ್ರಫುಲ್ ಪಟೇಲ್ ನೇತೃತ್ವದಲ್ಲಿ ನಡೆದ ವಾರ್ಷಿಕ ಸಾಮಾನ್ಯ ಸಭೆಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಯಿತು. ಸಭೆಯಲ್ಲಿ ವರ್ಷದ ಆಟಗಾರನ ಆಯ್ಕೆಗೆ ನಡೆದ ಮತದಾನದಲ್ಲಿ ಐ ಲೀಗ್ ಕ್ಲಬ್‌ಗಳ ಕೋಚ್‌ಗಳು ಚೆಟ್ರಿ ಪರವಾಗಿ ಮತ ಹಾಕಿದರು.
ಮೂರನೇ ಬಾರಿಗೆ:
ಇದರೊಂದಿಗೆ ಅವರು ಮೂರನೇ ಬಾರಿಗೆ ಈ ಗೌರವ ತಮ್ಮದಾಗಿಸಿ ಕೊಂಡಿದ್ದಾರೆ. 2007 ಮತ್ತು 2011ರಲ್ಲಿ ಚೆಟ್ರಿ ಈ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದರು. ಈ ಗೌರವವು ರೂ.2ಲಕ್ಷ ನಗದು ಮತ್ತು ಟ್ರೋಫಿಯನ್ನು ಒಳಗೊಂಡಿದ್ದು, ಐ.ಎಮ್.ವಿಜಯನ್ ನಂತರ ಮೂರು ಬಾರಿ ಈ ಗೌರವ ಪಡೆದ ಎರಡನೇ ಆಟಗಾರ ಎನಿಸಿದ್ದಾರೆ.
  • ಎಐಎಫ್‌ಎಫ್ ಈ ವರ್ಷ ನೂತನವಾಗಿ ಎರಡು ವಿಭಾಗಗಳಲ್ಲಿ ಪ್ರಶಸ್ತಿಯನ್ನು ಪ್ರಕಟಿಸಿದ್ದು, ಒಯಿ ನಾಮ್ ಬೆಂಬೆಮ್ ದೇವಿ (ವರ್ಷದ ಆಟಗಾರ್ತಿ),
  • ಜೇಜೆ ಲಾಲ್ಪೇಕ್ಲುವ (ಉದಯೋನ್ಮುಖ ಆಟಗಾರ) ಪ್ರಶಸ್ತಿ ಪಡೆದಿದ್ಧಾರೆ.

ರಾಜ್ಯದಲ್ಲಿ ನಡೆಯುತ್ತಿರುವ ಹುಲಿ ಗಣತಿ ಬಗ್ಗೆ ಒಂದು ಪಕ್ಷಿ ನೋಟ
tigersಪ್ರತಿ 10 ವರ್ಷಕ್ಕೊಮ್ಮೆ ಜನಗಣತಿ ಮಾಡಿದಂತೆ ಕಾಡಿನಲ್ಲೂ ಪ್ರತಿ 4 ವರ್ಷಕ್ಕೊಮ್ಮೆ ಹುಲಿ ಗಣತಿ ನಡೆಯುತ್ತದೆ. ಹುಲಿಗಳ ಸಂಖ್ಯೆ ಪತ್ತೆಹಚ್ಚಲು, ಅದರ ಸಂರಕ್ಷಣೆ, ಹುಲಿಗಳ ಅವನತಿ ಮತ್ತು ಬೆಳವಣಿಗೆ ಬಗ್ಗೆ ಸಂಶೋಧನೆ ನಡೆಸುವ ದೃಷ್ಟಿಯಿಂದ ಗಣತಿ ಕೈಗೊಳ್ಳಲಾಗುತ್ತದೆ. ರಾಜ್ಯದ ಹುಲಿ ರಕ್ಷಿತಾರಣ್ಯಗಳಾದ ಬಂಡೀಪುರ, ನಾಗರಹೊಳೆ, ಬಿಆರ್‌ಟಿ, ಭದ್ರಾ, ಕುದುರೆಮುಖ ಸೇರಿ 16 ವನ್ಯಧಾಮಗಳು, ಪ್ರಾದೇಶಿಕ ಅರಣ್ಯಗಳಲ್ಲೂ ಈ ಗಣತಿ ನಡೆಯುತ್ತದೆ.
ಗಣತಿ ನಡೆಸುವವರು ಯಾರು?
ಸ್ವಯಂ ಸೇವಕರು, ಅರಣ್ಯ ಸಿಬ್ಬಂದಿ ಇದರಲ್ಲಿ ಇರುತ್ತಾರೆ. ಇವರಿಗೆ ತರಬೇತಿ ಕೊಟ್ಟಿರುತ್ತಾರೆ. ಒಂದು ಬೀಟ್‌ಗೆ ಮೂವರು ಅರಣ್ಯ ಇಲಾಖೆ ಸಿಬ್ಬಂದಿ ಸೇರಿದಂತೆ ಒಬ್ಬರು ಅಥವಾ ಇಬ್ಬರು ಸ್ವಯಂ ಸೇವಕರನ್ನು ನಿಯೋಜಿಸಲಾಗಿದೆ.
ಗಣತಿ ಹೇಗೆ?
  • ಮೂರು ದಿನ ಹುಲಿ, ಚಿರತೆ ಮತ್ತು ಇತರೆ ಮಾಂಸಹಾರಿ ಪ್ರಾಣಿಗಳನ್ನು ಗಮನಿಸುತ್ತಾ 5 ಕಿ.ಮೀ. ದೂರ ಸಾಗುತ್ತಾ ಮತ್ತದೇ ದಾರಿಯಲ್ಲಿ ಹಿಂದಿರುಗುವಾಗ ಮಾಂಸಹಾರಿ ಪ್ರಾಣಿ ಪ್ರಭೇದಗಳಾದ ಹುಲಿ, ಚಿರತೆ, ಕಾಡು (ಸೀಳು) ನಾಯಿ, ಕರಡಿ, ತೋಳ, ಗುಳ್ಳೆ ನರಿ ಮುಂತಾದ ಪ್ರಾಣಿಗಳ ಹೆಜ್ಜೆ ಗುರುತು, ಲದ್ದಿ, ಉಜ್ಜಿದ ಗುರುತುಗಳು, ಚಿಹ್ನೆಯ ಸ್ವರೂಪಗಳು, ಗರ್ಜನೆ ಬಗ್ಗೆ ಸಂಕ್ಷಿಪ್ತ ಮಾಹಿತಿ ದಾಖಲು ಮಾಡುತ್ತಾರೆ.
  • ಮೂರು ದಿನ ಕಾಲ ನಿತ್ಯ 2 ಕಿ.ಮೀ. ಗುರುತಿಸಿದ ಟ್ರಾನ್ಸೆಕ್ಟ್ ಲೈನ್‌ನಲ್ಲಿ ಹೋಗುವಾಗ ಕಣ್ಣಿಗೆ ಬಿದ್ದ ಪ್ರಾಣಿಗಳ ಸಂಖ್ಯೆ, ನೋಡಿದ ಸಮಯ, ಪ್ರಭೇದ ಮತ್ತು ಗುಂಪಿನ ಪ್ರಮಾಣ ಗುರುತಿಸಬೇಕು.
  • ಮತ್ತೆ ವಾಪಸಾಗುವಾಗ ಸಸ್ಯ ಸಂಪತ್ತು, ಮಾನವ ಚಟುವಟಿಕೆಗಳ ಬಗ್ಗೆ ಮಾಹಿತಿ ಸಂಗ್ರಹಿಸಬೇಕು.
ಜಿಪಿಎಸ್ ಬಳಕೆ:
ಈ ಬಾರಿ ಜಿಪಿಎಸ್ ತಂತ್ರಾಂಶ ಬಳಸಲಾಗುತ್ತಿದೆ. ಈ ಜಿಪಿಎಸ್ ಮೂಲಕ ಸೀಳುದಾರಿಗಳನ್ನು ನಿಖರವಾಗಿ ಗುರುತಿಸಲಾಗುತ್ತದೆ. ಇಲ್ಲಿ ಸಂಚರಿಸುವ ಗಣತಿದಾರರು ಹುಲಿಯ ಹೆಜ್ಜೆ ಗುರುತು, ಆವಾಸ ಪತ್ತೆ ಮಾಡುತ್ತಾರೆ. ಜತೆಗೆ, ಇತರೇ ಪ್ರಾಣಿಗಳನ್ನು ತಮಗೆ ನೀಡಿರುವ ಅರ್ಜಿ ನಮೂನೆಯಲ್ಲಿ ದಾಖಲಿಸಲಾಗುತ್ತದೆ.
ಪ್ರಥಮ ಗಣತಿ?
  • ಪ್ರಪಂಚದಲ್ಲೇ ಮೊದಲ ಹುಲಿ ಗಣತಿ ಭಾರತದಲ್ಲೇ ಆರಂಭವಾಗಿದ್ದು. ಜಾರ್ಖಂಡ್‌ನ ಪಲ್ಮಾವ್ ಹುಲಿರಕ್ಷಿತಾರಣ್ಯದಲ್ಲಿ ಮೊದಲಬಾರಿಗೆ ನಡೆಸಲಾಗಿತ್ತಾದರೂ, 1972ರಲ್ಲಿ ವನ್ಯಜೀವಿ ಕಾಯ್ದೆ ಜಾರಿಗೆ ಬಂದ ನಂತರ 1972ರಿಂದ ಹುಲಿ ಗಣತಿಯನ್ನು ರಾಜಸ್ಥಾನದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಯಾಗಿದ್ದ ಕೈಲಾಸ್ ಸಂಕಲ್ ಆರಂಭಿಸಿದರು.
  • ಹೀಗೆ 1972, 1979, 1984, 1989, 1993, 1997, 2001, 2005, 2009 ಇದೀಗ 2013ರಲ್ಲಿ ಹುಲಿ ಗಣತಿ ನಡೆಸಲಾಗುತ್ತಿದೆ.
  • ಹಿಂದೆ 2005ರವರೆಗೂ ಪಗ್ ಮಾರ್ಕ್ ಅನ್ನು ಪ್ಲಾಸ್ಟರ್ ಆಫ್ ಪ್ಯಾರಿಸ್ ಮೂಲಕ ಅಚ್ಚು ಹಾಕಿಸಲಾಗುತ್ತಿತ್ತು.
  • 2009- 10ರ ಹುಲಿ ಗಣತಿಯಂತೆ ರಾಷ್ಟ್ರದಲ್ಲಿ 1,706 ಹುಲಿಗಳಿದ್ದು, ಕರ್ನಾಟಕದಲ್ಲಿಯೇ 300 ರಿಂದ 320 ಹುಲಿಗಳಿವೆ.

ಪತ್ರಕರ್ತರಿಗೆ ಅತ್ಯಂತ ಅಪಾಯಕಾರಿಯಾದ ದೇಶಗಳ ಪಟ್ಟಿಯಲ್ಲಿ ಸಿರಿಯಾ ನಂ.1
reportersಪತ್ರಕರ್ತರಿಗೆ ಅತ್ಯಂತ ಅಪಾಯಕಾರಿಯಾಗಿ ಪರಿಣಮಿಸಿರುವ ದೇಶಗಳ ಪಟ್ಟಿಯಲ್ಲಿ ಆಂತರಿಕ ದಂಗೆಗೆ ಸಾಕ್ಷಿಯಾದ ಸಿರಿಯಾ ಸತತ ಎರಡನೇ ವರ್ಷ ಮೊದಲ ಸ್ಥಾನದಲ್ಲಿದ್ದರೆ, ಭಾರತ ಹಾಗೂ ಫಿಲಿಪ್ಪೀನ್ಸ್‌ ಎರಡನೇ ಸ್ಥಾನವನ್ನು ಹಂಚಿಕೊಂಡಿವೆ.
ಕಾರಣವೇನು?
  • ಈ ವರ್ಷ ವಿಶ್ವದಾದ್ಯಂತ ಒಟ್ಟು 126 ವರದಿಗಾರರು ಹಾಗೂ ಮಾಧ್ಯಮ ಸಿಬ್ಬಂದಿ ಕರ್ತವ್ಯದ ಸಂದರ್ಭದಲ್ಲಿ ಸಾವನ್ನಪ್ಪಿದ್ದಾರೆ.
  • ಈ ಪೈಕಿ ಸಿರಿಯಾದಲ್ಲಿ ಅತಿ ಹೆಚ್ಚು ಅಂದರೆ 19 ಮಂದಿ ಸಾವಿಗೀಡಾಗಿದ್ದಾರೆ. 18 ವಿದೇಶಿ ಹಾಗೂ 20 ಸಿರಿಯಾ ಪತ್ರಕರ್ತರು ಆ ದೇಶದಿಂದ ಕಣ್ಮರೆಯಾಗಿದ್ದಾರೆ ಎಂದು ಅಂತಾರಾಷ್ಟ್ರೀಯ ವಾರ್ತಾ ಸುರಕ್ಷತಾ ಸಂಸ್ಥೆ (ಐಎನ್‌ಎಸ್‌ಐ) ತಿಳಿಸಿದೆ.
  • ಭಾರತ ಹಾಗೂ ಫಿಲಿಪ್ಪೀನ್ಸ್‌ನಲ್ಲಿ ತಲಾ 13 ಮಂದಿ ಪತ್ರಕರ್ತರು ಸಾವಿಗೀಡಾಗಿದ್ದಾರೆ. ಭಾರತದಲ್ಲಿ 7 ಪತ್ರಕರ್ತರನ್ನು ಹತ್ಯೆ ಮಾಡಲಾಗಿದ್ದರೆ, ಇನ್ನಿಬ್ಬರು ಕೋಮುಗಲಭೆ ಕುರಿತ ವರದಿಗೆಂದು ತೆರಳಿದ್ದ ವೇಳೆ ಸಾವನ್ನಪ್ಪಿದ್ದಾರೆ. ಉಳಿದಂತೆ ಕರ್ತವ್ಯಕ್ಕೆ ತೆರಳುತ್ತಿದ್ದ ಸಂದರ್ಭದಲ್ಲಿ ನಾಲ್ವರು ಬಲಿಯಾಗಿದ್ದಾರೆ.
  • ಫಿಲಿಪ್ಪೀನ್ಸ್‌ನಲ್ಲಿ 7 ಪತ್ರಕರ್ತರನ್ನು ಕೊಲೆ ಮಾಡಲಾಗಿದ್ದರೆ, ನಾಲ್ಕು ಮಂದಿ ಚಂಡಮಾರುತ ಕುರಿತು ವರದಿಗೆಂದು ತೆರಳಿದ್ದ ವೇಳೆ ಸಾವಿಗೀಡಾಗಿದ್ದಾರೆ.
  • ಇರಾಕ್‌ನಲ್ಲಿ 11 ಮಂದಿ ಬಲಿಯಾಗಿದ್ದು, ಆ ಪೈಕಿ 10 ಮಂದಿಯನ್ನು ಬಂಡುಕೋರ ಸಂಘಟನೆಗಳು ಕೊಂದಿವೆ.
  • ಬಾಂಬ್‌ ದಾಳಿ ಹೆಚ್ಚಿರುವ ಪಾಕಿಸ್ತಾನದಲ್ಲಿ 9 ಪತ್ರಕರ್ತರು ಕಣ್ಣು ಮುಚ್ಚಿದ್ದಾರೆ ಎಂದು ವರದಿ ಹೇಳಿದೆ.

ಪ್ರಚಲಿತ ವಿದ್ಯಮಾನಗಳು ಡಿಸೆಂಬರ್ 18, 2013


“ಹುಂಡೈ ಗ್ರಾಂಡ್ i10” ಇಂಡಿಯನ್ ಕಾರ್ ಆಫ್ ದಿ ಇಯರ್-2014
ಪ್ರಚಲಿತ ವಿದ್ಯಮಾನಗಳು ಡಿಸೆಂಬರ್ 18, 2013ಹುಂಡೈ ಮೋಟಾರ್ಸ್ ನ ನೂತನ ಶೈಲಿಯ “ಗ್ರಾಂಡ್ i10” ಮಾಡೆಲ್ ಕಾರು ಪ್ರತಿಷ್ಠಿತ ಇಂಡಿಯನ್ ಕಾರ್ ಆಫ್ ದಿ ಇಯರ್-2014 ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಇಂಡಿಯನ್ ಕಾರ್ ಆಫ್ ದಿ ಇಯರ್ (Indian Car of the Year) ಆಟೋಮೊಬೈಲ್ ಕ್ಷೇತ್ರದಲ್ಲಿ ನೀಡುವ ಅತ್ಯುತ್ತಮ ಪ್ರಶಸ್ತಿಯಲ್ಲಿ ಒಂದು.
  • ಕಳೆದ ವರ್ಷ ರೆನಾಲ್ಟ್ ಡಸ್ಟರ್ ಈ ಪ್ರಶಸ್ತಿಗೆ ಭಾಜವಾಗಿತ್ತು. ಇದಕ್ಕೂ ಮುಂಚೆ ಮಾರುತಿ ಸುಝುಕಿ ಸ್ವಿಪ್ಟ್ 2012 ರಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದುಕೊಂಡಿತ್ತು.
  • ಹುಂಡೈ ಮೋಟಾರ್ಸ್  “ಗ್ರಾಂಡ್ ಐ10” ಮಾದರಿಯ 35,000 ಕ್ಕೂ ಹೆಚ್ಚು ಕಾರುಗಳನ್ನು ಸೆಪ್ಟೆಂಬರ್ ತಿಂಗಳಲ್ಲಿ ಮಾರಾಟ ಮಾಡಿದೆ.
  • ಬಿಎಂಡ್ಲ್ಯೂ1 ಸೀರಿಸ್, ಚೆವರ್ಲೆಟ್ ಎಂಜಾಯ್, ಮಹೀಂದ್ರಾ ವೆರಿಟೊ ವೈಬ್, ಮರ್ಸಿಡೇಸ್ ಬೆಂಜ್ ಸ್ಪರ್ಧಾಕಣದಲ್ಲಿ ಇದ್ದ ಇತರೆ ಮಾದರಿ ಕಾರುಗಳು.
ರಾಯಲ್ ಎನ್ ಫೀಲ್ಡ್ ಇಂಡಿಯನ್ ಮೋಟಾರ್ ಸೈಕಲ್ ಆಫ್ ದಿ ಇಯರ್:
  • ಬೈಕ್ ವಿಭಾಗದಲ್ಲಿ ರಾಯಲ್ ಎನ್ ಫೀಲ್ಡ್ ಇಂಡಿಯನ್ ಮೋಟಾರ್ ಸೈಕಲ್ ಆಫ್ ದಿ ಇಯರ್ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ.
  • ಕಳೆದ ವರ್ಷ ಕೆಟಿಎಂ ಡೂಕ್ 200 ಈ ಪ್ರತಿಷ್ಠಿತ ಪ್ರಶಸ್ತಿಯನ್ನು ಪಡೆದುಕೊಂಡಿತ್ತು.

ವಂಸಧಾರ ನದಿ ನೀರು ವಿವಾದ: ಆಂಧ್ರಪ್ರದೇಶ ಪಾಲಾದ ತೀರ್ಪು
vamsadhara riverಬಹುದಿನಗಳಿಂದ ಆಂಧ್ರ ಪ್ರದೇಶ ಮತ್ತು ಓಡಿಶಾ ರಾಜ್ಯಗಳ ನಡುವೆ ಕಗ್ಗಾಂಟಾಗಿದ್ದ ವಸಂಧಾರ ನದಿ ನೀರು ಬಳಕೆ ವಿವಾದಕ್ಕೆ ಸದ್ಯಕ್ಕೆ ತೆರೆ ಬಿದ್ದಿದೆ. ವಂಸಧಾರ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ತೀರ್ಪು ಹೊರಬಿದ್ದಿದ್ದು, ಆಂಧ್ರಪ್ರದೇಶಕ್ಕೆ 8 ಟಿಎಂಸಿ ನೀರನ್ನು ಬಳಕೆ ಮಾಡಲು ನ್ಯಾಯಮಂಡಳಿ ತೀರ್ಪು ನೀಡಿದೆ.
  • ನ್ಯಾಯಮಂಡಳಿ ನೀಡಿರುವ ಈ ತೀರ್ಪಿನಿಂದ ಆಂಧ್ರಪ್ರದೇಶದ ಶ್ರೀಕಾಕುಲಂ ಜಿಲ್ಲೆಯ ಸಾವಿರಾರು ರೈತರಿಗೆ ಇದರಿಂದ ಅನುಕೂಲವಾಗಲಿದೆ. ಅಲ್ಲದೇ ಬಾಮಿನಿ ಮಂಡಲ್ ಬಳಿ ಬ್ಯಾರೇಜ್ ನಿರ್ಮಾಣ ನೀಡಲು ಸಹ ನ್ಯಾಯ ಮಂಡಳಿ ಅನುಮತಿ ನೀಡಿದೆ
  • ನ್ಯಾಯಮಂಡಳಿಯ ಅಧ್ಯಕ್ಷರಾಗಿರುವ ಮುಕುಂದ್ ಶರ್ಮಾ ಅವರು ಈ ಮಹತ್ವದ ತೀರ್ಪನ್ನು ನೀಡಿದೆ. ಆದರೆ ಓಡಿಶಾ ಸರ್ಕಾರ ಈ ತೀರ್ಪಿನಿಂದ ಅಸಮಾಧಾನವನ್ನು ವ್ಯಕ್ತಪಡಿಸಿದೆ. ನದಿಗೆ ಬ್ಯಾರೆಜ್ ಕಟ್ಟುವ ಕಾರಣ ಓಡಿಶಾದ ಹಲವು ಗ್ರಾಮಗಳು ನೀರಿನಲ್ಲಿ ಮುಳುಗಡೆಯಾಗಲಿವೆ ಎಂದು ಓಡಿಶಾ ರಾಜ್ಯ ಅಕ್ರೋಶ ವ್ಯಕ್ತಪಡಿಸಿದೆ.
ವಿವಾದವೇನು?
  • ವಂಸಧಾರ ನದಿಯ ಮೂಲ ಓಡಿಶಾದ ರಾಯಘಡ ಜಿಲ್ಲೆ. ಇಲ್ಲಿ ಉಗಮವಾಗುವ ವಂಸಧಾರ ಆಂಧ್ರಪ್ರದೇಶದಲ್ಲಿ ಹರಿದು ಹೋಗುವ ಮೂಲಕ ಬಂಗಾಳ ಕೊಲ್ಲಿಯನ್ನು  ಸೇರುತ್ತದೆ.
  • ವಂಸಧಾರ ನದಿ 10,830 ನದಿ ಮುಖಜ ಭೂಮಿಯನ್ನು ಹೊಂದಿದ್ದು, ಓಡಿಶಾ 8015 ಚದರ ಕೀ.ಮೀ ಹಾಗೂ ಉಳಿದ ಪ್ರದೇಶ ಆಂಧ್ರಪ್ರದೇಶ ಹೊಂದಿದೆ.
  • ವಂಸಧಾರ ನದಿಯ ಮೇಲೆ ಆಂಧ್ರಪ್ರದೇಶ ನಿರ್ಮಿಸುತ್ತಿರುವ ಬ್ಯಾರೇಜ್ ಈ ಎರಡು ರಾಜ್ಯಗಳ ನಡುವೆ ವಿವಾದಕ್ಕೆ ಎಡೆಮಾಡಿ ಕೊಟ್ಟಿದೆ. ಆಂಧ್ರಪ್ರದೇಶ ನಿರ್ಮಿಸುತ್ತಿರುವ ಬ್ಯಾರೇಜ್ ನಿಂದ ಓಡಿಶಾದ ಕೆಲವು ಗ್ರಾಮಗಳು ನೀರಿನಲ್ಲಿ ಮುಳುಗಲಿವೆ ಎನ್ನುವುದು ಓಡಿಶಾದ ವಾದ.

ಚೂರು ಪಾರು ಸುದ್ದಿ:
    news
  • ವೊಡಫೋನ್ ರಾಯಭಾರಿಯಾಗಿ ಬಾಕ್ಸಿಂಗ್ ಪಟು “ಮೇರಿ ಕೊಮ್” ನೇಮಕ: ಒಲಂಪಿಕ್ ಬೆಳ್ಳಿ ಪದಕ ವಿಜೇತೆ ಬಾಕ್ಸಿಂಗ್ ಪಟು ಮೇರಿ ಕೊಮ್ ಅವರನ್ನು ಬ್ರಿಟನ್ ಬಹುರಾಷ್ಟ್ರ ಸಂಸ್ಥೆ ವೊಡೊಫೋನ್ ತನ್ನ ಕಂಪನಿಯ ಪ್ರಚಾರ ರಾಯಭಾರಿಯನ್ನಾಗಿ ನೇಮಕ ಮಾಡಿದೆ. ಜನವರಿ 1 ರಿಂದ ಮೇರಿ ಕೊಮ್ ಈ ಸಂಸ್ಥೆಯ ರಾಯಭಾರಿಯಾಗಿ ಕಾಣಿಸಿಕೊಳ್ಳಲ್ಲಿದ್ದಾರೆ.

  • ಮೇರಿ ಕೊಮ್ ಆಟೋಬಯೋಗ್ರಾಫಿ “Unbreakable” ಬಿಡುಗಡೆ:  ಬಾಕ್ಸಿಂಗ್ ಪಟು ಮೇರಿ ಕೊಮ್ ಅವರ ಆಟೋಬಯೋಗ್ರಾಫಿ “ಅನ್ ಬಿಲಿವೇಬಲ್” ಅನ್ನು ಇತ್ತೀಚೆಗೆ ಬಿಡುಗಡೆಗೊಳಿಸಲಾಯಿತು. ಬಾಲಿವುಡ್ ನಟಿ ಸುಶ್ಮೀತ ಸೇನ್ ಅವರು ಈ ಪುಸ್ತಕವನ್ನು ಬಿಡುಗಡೆಗೊಳಿಸಿದರು.

IRCON ಸಂಸ್ಥೆಗೆ ಇಂಡಿಯಾ ಪ್ರೈಡ್ ಆವಾರ್ಡ್ ಫಾರ್ ಎಕ್ಸಲೆನ್ಸ್ ಪ್ರಶಸ್ತಿ: ರೈಲ್ವೆ ಸಚಿವಾಲಯದ ಬಹು ದೊಡ್ಡ ಸರ್ಕಾರಿ ಸ್ವಾಮ್ಯದ ಸಂಸ್ಥೆ IRCON ಗೆ ಈ ಬಾರಿ ಪ್ರತಿಷ್ಠಿತ ಇಂಡಿಯಾ ಫ್ರೈಡ್ ಆವಾರ್ಡ್ ಫಾರ್ ಎಕ್ಸಲೆನ್ಸ್ ಪ್ರಶಸ್ತಿಯನ್ನು ಪಡೆದುಕೊಂಡಿದೆ.

 

* ಪ್ರಚಲಿತ ವಿದ್ಯಮಾನಗಳು ಡಿಸೆಂಬರ್ 17, 2013

ನಬಾರ್ಡ್ ನ ನೂತನ ಚೇರಮನ್: ಹರ್ಷ್ ಕುಮಾರ್ ಭನವಾಲ್
ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಅಭಿವೃದ್ದಿ ಬ್ಯಾಂಕ್ (ನಬಾರ್ಡ್) ನ ನೂತನ ಅಧ್ಯಕ್ಷರಾಗಿ ಹರ್ಷ್ ಕುಮಾರ್ ಭನವಾಲ್ ಅವರು ಅಧಿಕಾರವಹಿಸಿಕೊಂಡರು. ಈ ಹಿಂದೆ ಬ್ಯಾಂಕ್ ನ ಅಧ್ಯಕ್ಷರಾಗಿದ್ದ ಪ್ರಕಾಶ್ ಭಕ್ಷಿ ಅವರು ನಿವೃತ್ತಿ ಹೊಂದಿದ ಕಾರಣ ಈ ಸ್ಥಾನ ತೆರವಾಗಿತ್ತು.
  • ಭನವಾಲ್ ಅವರು “ಇಂಡಿಯಾ ಇನ್ಪ್ರಸ್ಟ್ರಕ್ಚರ್ ಫೈನಾನ್ಸ್ ಕಂಪನಿ (IIFCL)” ಯಲ್ಲಿ ಕಾರ್ಯನಿರ್ವಾಹಕ ನಿರ್ದೇಶಕರಾಗಿ ಸೇವೆ ಸಲ್ಲಿಸುತ್ತಿದ್ದರು. ಇದರ ಜತೆಗೆ ಮಾನವ ಸಂಪನ್ಮೂಲ ಅಭಿವೃದ್ದಿ, ಸಾಲ ವಿತರಣೆ ಸೇರಿದಂತೆ ವಿವಿಧ ಕ್ಷೇತ್ರಗಳನ್ನೂ ಸಹ ಕರ್ತವ್ಯ ನಿರ್ವಹಿಸಿದ್ದರು.
  • IIFCL ಸೇರುವುದಕ್ಕೂ ಮುನ್ನ ಇವರು IL & FS ಸಂಸ್ಥೆಯ ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಅನುಭವವನ್ನು ಹೊಂದಿದ್ದಾರೆ. ನಬಾರ್ಡ್ ನಲ್ಲಿಯೂ ಸಹ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದಾರೆ.

ರಾಷ್ಟ್ರೀಯ ಗೋವು ತಳಿ ಮತ್ತು ಡೈರಿ ಅಭಿವೃದ್ದಿ ಕಾರ್ಯಕ್ರಮಕ್ಕೆ (NPBBDD)ಕೇಂದ್ರ ಸರ್ಕಾರ ಒಪ್ಪಿಗೆ
dairy devptರಾಷ್ಟ್ರೀಯ ಗೋವು ತಳಿ ಮತ್ತು ಡೈರಿ ಅಭಿವೃದ್ದಿ (National Programme for Bovine Breeding and Dairy Development) ಕಾರ್ಯಕ್ರಮವನ್ನು 12ನೇ ಪಂಚವಾರ್ಷಿಕ ಯೋಜನೆಯಲ್ಲಿ ಅನುಷ್ಟಾನಗೊಳಿಸಲು ರೂ 1,800 ಕೋಟಿಯನ್ನು ಕೇಂದ್ರ ಆರ್ಥಿಕ ವ್ಯವಹಾರ ಮೇಲಿನ ಸಚಿವ ಸಂಪುಟ ಒಪ್ಪಿಗೆ ನೀಡಿದೆ. ಡೈರಿ, ಮೀನು ಸಾಕಾಣಿಕೆ ಹಾಗೂ ಪಶುಸಂಗೋಪನೆ ಇಲಾಖೆಯಲ್ಲಿ ಚಾಲ್ತಿ ಇರುವ ವಿವಿಧ ಯೋಜನೆಗಳನ್ನು ಒಗ್ಗೂಡಿಸುವ ಮೂಲಕ ಈ ಯೋಜನೆಯನ್ನು ಜಾರಿಗೊಳಿಸಲಾಗುವುದು.
  • ಈ ಯೋಜನೆ ಪ್ರಮುಖವಾಗಿ ಎರಡು ಅಂಶಗಳನ್ನು ಒಳಗೊಂಡಿದೆ ಅವುಗಳೆಂದರೆ ರಾಷ್ಟ್ರೀಯ ಗೋ ತಳಿ ಅಭಿವೃದ್ದಿ ಕಾರ್ಯಕ್ರಮ ಮತ್ತು ರಾಷ್ಟ್ರೀಯ ಡೈರಿ ಅಭಿವೃದ್ದಿ ಕಾರ್ಯಕ್ರಮ.
  • ಹನ್ನೆರಡನೇ ಪಂಚವಾರ್ಷಿಕ ಯೋಜನೆ (2012-17)ಯಲ್ಲಿ ಈ ಕಾರ್ಯಕ್ರಮವನ್ನು ಅನುಷ್ಟಾನಗೊಳಿಸಲಾಗುವುದು.
  • ಅತ್ಯುತ್ತಮ ಹಸು ಮತ್ತು ಎಮ್ಮೆ ತಳಿಗಳ ಅಭಿವೃದ್ಧಿ, ಕೃತಕ ವೀರ್ಯ ಸೌಕರ್ಯ ಸೇರಿದಂತೆ ಪಶುಸಂಗೋಪನೆ ವಲಯಕ್ಕೆ ಪೂರಕವಾದ ಮೂಲಭೂತ ಸೌಕರ್ಯಗಳನ್ನು ಅಭಿವೃದ್ದಿಪಡಿಸುವ ಗುರಿಯನ್ನು ಈ ಯೋಜನೆ ಹೊಂದಿದೆ.
  • ಇದಲ್ಲದೇ ಪ್ರತಿ ದಿನಕ್ಕೆ 2.8 ಮಿಲಿಯನ್ ಲೀಟರ್ ಸಾಮರ್ಥ್ಯದ ಹಾಲು ಶೀಥಲೀಕರಣ ವ್ಯವಸ್ಥೆ ಹಾಗೂ 3.01 ಮಿಲಿಯನ್ ಲೀಟರ್ ಹಾಲು ಸಂಸ್ಕರಣ ವ್ಯವಸ್ಥೆಯ ಗುರಿಯನ್ನು ಈ ಕಾರ್ಯಕ್ರಮ ಹೊಂದಿದೆ.

ಅಂಟಾರ್ಟಿಕದಲ್ಲಿ ನಾಲ್ಕನೇ ಸಂಶೋಧನಾ ಸಂಸ್ಥೆಯನ್ನು ಸ್ಥಾಪಿಸಲಿರುವ ಚೀನಾ
antarcticaಅಂಟಾರ್ಟಿಕ ವಲಯದಲ್ಲಿ ಸಾರ್ವಭೌಮತ್ವವನ್ನು ಸಾಧಿಸಲು ವಿವಿಧ ರಾಷ್ಟ್ರಗಳು ಸೆಣಸುತ್ತಿರುವ ಬೆನ್ನಲ್ಲೇ ಚೀನಾ ತನ್ನ ನಾಲ್ಕನೇ ಸಂಶೋಧನಾ ಕೇಂದ್ರವನ್ನು ಸ್ಥಾಪಿಸುತ್ತಿರುವುದಾಗಿ ಹೇಳಿದೆ. ಈ ಮೂಲಕ ಅಂಟಾರ್ಟಿಕದಲ್ಲಿ ತನ್ನ ಅಸ್ಥಿತ್ವವನ್ನು ಮತ್ತಷ್ಟು ಭದ್ರಗೊಳಿಸಲು ಚೀನಾ ಸಜ್ಜಾಗಿದೆ.
  • “ತೈಶನ್ (Taishan)” ಚೀನಾ ಅಂಟಾರ್ಟಿಕ ವಲಯದಲ್ಲಿ ಸ್ಥಾಪಿಸುತ್ತಿರುವ ಸಂಶೋಧನಾ ಸಂಸ್ಥೆಯ ಹೆಸರು. ಮಾಧ್ಯಮಗಳ ಪ್ರಕಾರ ಈಗಾಗಲೇ ಈ ಸಂಶೋಧನಾ ಸಂಸ್ಥೆ ಪೂರ್ಣಗೊಂಡಿದ್ದು, ಐದನೇ ಸಂಸ್ಥೆಗೆ ಸ್ಥಳ ಪರಿಶೀಲನೆ ನಡೆಯುತ್ತಿದೆ ಎನ್ನಲಾಗಿದೆ.
  • ಚೀನಾ ಈಗಾಗಲೇ ಅಂಟಾರ್ಟಿಕದಲ್ಲಿ ಮೂರು ಸಂಶೋಧನಾ ಸಂಸ್ಥೆಗಳನ್ನು ಸ್ಥಾಪಿಸಿದೆ ಅವುಗಳೆಂದರೆ “ಗ್ರೇಟ್ ವಾಲ್”, ಝೋಂಗ್ ಷಾನ್” ಮತ್ತು “ಕುನ್ ಲುನ್”.
  • ತೈಶನ್ ಅನ್ನು ದಕ್ಷಿಣ ಗೋಲಾರ್ಧದ ಬೇಸಿಗೆ ಸಮಯದಲ್ಲಿ ಅಂದರೆ ಡಿಸೆಂಬರ್ ಮತ್ತು ಮಾರ್ಚ್ ನಡುವೆ ಸಂಶೋಧನೆಗೆ ಬಳಸಲಾಗುವುದು. ಜಿಯೋಮ್ಯಾಗ್ನಟಿಸಂ, ನಿರ್ಗಲ್ಲು, ಭೂಗರ್ಭ ಸೇರಿದಂತೆ ಹಲವು ಬಗೆಯ ಸಂಶೋಧನೆಯನ್ನು ಇಲ್ಲಿ ಕೈಗೊಳ್ಳಲಾಗುವುದು.
  • 1908 ರಲ್ಲಿ ಬ್ರಿಟನ್ ತನ್ನ ಸಂಶೋಧನಾ ಸಂಸ್ಥೆಯನ್ನು ತೆರೆಯುವ ಮೂಲಕ ಅಂಟಾರ್ಟಿಕದಲ್ಲಿ ಸಂಶೋಧನಾ ಸಂಸ್ಥೆಯನ್ನು ತೆರೆದ ಮೊದಲ ದೇಶವೆನಿಸಿತು. ಇದಾದ ನಂತರ ನ್ಯೂಜಿಲ್ಯಾಂಡ್, ಫ್ರಾನ್ಸ್, ನಾರ್ವೆ, ಆಸ್ಟ್ರೇಲಿಯಾ, ಚಿಲಿ ಹಾಗೂ ಅರ್ಜೆಂಟೇನಾ ರಾಷ್ಟ್ರಗಳು ಸಹ ಅಂಟಾರ್ಟಿಕದಲ್ಲಿ ಸಂಶೋಧನಾ ಸಂಸ್ಥೆಯನ್ನು ತೆರೆದಿವೆ.

ಪ್ರಚಲಿತ ವಿದ್ಯಮಾನಗಳು ಡಿಸೆಂಬರ್ 16, 2013

ಪ್ರಥಮ ದೂರಸಂಪರ್ಕ ಉಪಗ್ರಹವನ್ನು ಯಶಸ್ವಿಯಾಗಿ ಉಡಾಯಿಸಿದ “ಬೊಲಿವಿಯಾ”
ಪ್ರಚಲಿತ ವಿದ್ಯಮಾನಗಳು ಡಿಸೆಂಬರ್ 16, 2013ಬೊಲಿವಿಯಾ ದೇಶ ತನ್ನ ಮೊದಲ ದೂರಸಂಪರ್ಕ ಉಪಗ್ರಹವನ್ನು ಯಶಸ್ವಿಯಾಗಿ ರವಾನಿಸಿದೆ. “ತುಪಕ್ ಕಟರಿ (Tupac Katari)” ಹೆಸರಿನ ಈ ಉಪಗ್ರಹವನ್ನು ಚೀನಾದ ಸಹಯೋಗದೊಂದಿಗೆ ಕಕ್ಷೆಗೆ ಹಾರಿಸಲಾಯಿತು.  ಚೀನಾದ ಕ್ಸಿಚಾಂಗ್ ರಾಕೆಟ್ ಉಡಾವಣಾ ಕೇಂದ್ರದಿಂದ ಈ ಉಪಗ್ರಹವನ್ನು ಹೊತ್ತ ರಾಕೆಟ್ ನಭಕ್ಕೆ ಚಿಮ್ಮಿದ್ದು, ಬೊಲಿವಿಯಾದ ದೂರ ಸಂಪರ್ಕ ಕ್ಷೇತ್ರದಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎನ್ನಲಾಗಿದೆ.
  • ತುಪಕ್ ಕಟರಿ ಉಪಗ್ರಹವನ್ನು $300 ಮಿಲಿಯನ್ ಡಾಲರ್ ವೆಚ್ಚದಲ್ಲಿ ನಿರ್ಮಿಸಲಾಗಿದೆ.
  • ಮುಂದಿನ ಏಳು ದಿನಗಳಲ್ಲಿ ಈ ರಾಕೆಟ್ ಕಕ್ಷೆಗೆ ಸೇರ್ಪಡೆಯಾಗಲಿದ್ದು, ಏಪ್ರಿಲ್ ನಿಂದ ಕಾರ್ಯನಿರ್ವಹಿಸಲಿದೆ.
  • ದೂರ ಸಂಪರ್ಕ, ಅಂತರ್ಜಾಲ, ಸುದ್ದಿ ಪ್ರಸರಣೆ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಪಾತ್ರವನ್ನು ಈ ಉಪಗ್ರಹದಿಂದ ನಿರೀಕ್ಷಿಸಲಾಗಿದೆ.
  • ಬೊಲಿವಿಯಾದ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆ “ಎಂಟೆಲ್” ಈಗಾಗಲೇ 1,100 ಅಂಟೆನಾಗಳನ್ನು ನಿರ್ಮಿಸಲಾಗಿದ್ದು, ಉಪಗ್ರಹದೊಂದಿಗೆ ಸಂಪರ್ಕ ಸಾಧಿಸಲು ಸಿದ್ಧತೆ ನಡೆಸಿದೆ.

ಆಂಧ್ರಪ್ರದೇಶದಲ್ಲಿ ಪಾನೀಯ ತಯಾರಿಕ ಘಟಕವನ್ನು ಸ್ಥಾಪಿಸಲಿರುವ ಪೆಪ್ಸಿಕೊ ಇಂಡಿಯಾ
pepsiಭಾರತದಲ್ಲಿ ತನ್ನ ಮಾರುಕಟ್ಟೆ ಕ್ಷೇತ್ರವನ್ನು ವಿಸ್ತರಿಸಲು ತುದಿಗಾಲಿನಲ್ಲಿರುವ ಪೆಪ್ಸಿಕೊ ಇಂಡಿಯಾ ಆಂಧ್ರಪ್ರದೇಶದಲ್ಲಿ ಪಾನೀಯ ತಯಾರಿಕ ಘಟಕವನ್ನು ಸ್ಥಾಪಿಸುವ ಯೋಜನೆಯನ್ನು ಹೊಂದಿರುವುದಾಗಿ ಹೇಳಿದೆ. ಸುಮಾರು 1,200 ಕೋಟಿ ಬಂಡವಾಳದಲ್ಲಿ ತಲೆಯತ್ತಲಿರುವ ಈ ಘಟಕ ಸ್ಥಾಪನೆಗೊಂಡ ಮೇಲೆ ದೇಶದಲ್ಲೇ ಪೆಪ್ಸಿಕೊ ಇಂಡಿಯಾದ ಅತಿ ದೊಡ್ಡ ಪಾನೀಯ ತಯಾರಿಕ ಘಟಕ ಎನಿಸಲಿದೆ.
  • ಪೆಪ್ಸಿಕೊ ಮತ್ತು ಇದರ ಪಾಲುದಾರಿಕೆ ಸಂಸ್ಥೆಗಳು 2020 ರ ವೇಳೆಗೆ ಭಾರತದಲ್ಲಿ 33,000 ಕೋಟಿ ಬಂಡವಾಳವನ್ನು ಹೂಡುವ ಯೋಜನೆಯನ್ನು ಹೊಂದಿದೆ.
  • ಈ ಉದ್ದೇಶಿತ ತಯಾರಿಕ ಘಟಕದಲ್ಲಿ ಹಣ್ಣಿನ ರಸ ಸೇರಿದಂತೆ ವಿವಿಧ ರೀತಿಯ ತಂಪು ಪಾನೀಯಗಳನ್ನು ತಯಾರಿಸಲಾಗುವುದೆಂದು ಪೆಪ್ಸಿಕೊ ಇಂಡಿಯಾದ ಸಿಇಓ ಶಿವಕುಮಾರ್ ಹೇಳಿದ್ದಾರೆ.
  • ಈ ಘಟಕವನ್ನು ಮೂರು ಹಂತಗಳಲ್ಲಿ ಸ್ಥಾಪಿಸಲಾಗುವುದು. ಇದರಿಂದ ಸುಮಾರು 8,000 ಜನರಿಗೆ ಉದ್ಯೋಗ ದೊರೆಯಲಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಕಿರಣ್ ಕುಮಾರ್ ಹೇಳಿದ್ದಾರೆ.
  •  ಆಂಧ್ರಪ್ರದೇಶ ಮತ್ತು ಕರ್ನಾಟಕ ವಲಯಗಳಲ್ಲಿರುವ ಬೇಡಿಕೆಯನ್ನು ಈ ಘಟಕದಿಂದ ಪೂರೈಸಲಾಗುವುದು.

ರಾಜ್ಯದ ಹತ್ತು ನಗರಗಳಲ್ಲಿ “ರಾಜೀವ್ ಆವಾಸ್ ಯೋಜನೆ” ಅನುಷ್ಟಾನಕ್ಕೆ ನಿರ್ಧಾರ
rajiv awasನಗರ ಪ್ರದೇಶದ ಕೊಳಚೆ ನಿವಾಸಿಗಳಿಗೆ ವಸತಿ ಸೌಕರ್ಯವನ್ನು ಕಲ್ಪಿಸುವ ರಾಜೀವ್ ಆವಾಸ್ ಯೋಜನೆಯನ್ನು ರಾಜ್ಯದ ಹತ್ತು ನಗರಗಳಲ್ಲಿ ಅನುಷ್ಟಾನಗೊಳಿಸುವುದಾಗಿ ರಾಜ್ಯ ಸರ್ಕಾರ ಹೇಳಿದೆ. ಇದಕ್ಕಾಗಿ 10,752 ಕೋಟಿಯನ್ನು ಭರಿಸಲು ರಾಜ್ಯ ಸಚಿವ ಸಂಪುಟ ತೀರ್ಮಾನಿಸಿದೆ.
ಯಾವ ನಗರಗಳು:
  • ಮಂಗಳೂರು, ಹುಬ್ಬಳ್ಳಿ, ಧಾರವಾಡ, ಬಳ್ಳಾರಿ, ಶಿವಮೊಗ್ಗ, ಮೈಸೂರು, ಬೆಂಗಳೂರು, ತುಮಕೂರು, ಗುಲ್ಬರ್ಗ, ಬೆಳಗಾಂ ಮತ್ತು ದಾವಣಗೆರೆ ನಗರಗಳಲ್ಲಿ ಈ ಯೋಜನೆಯನ್ನು ಜಾರಿಗೊಳಿಸಲು ನಿರ್ಧರಿಸಲಾಗಿದೆ.
  • ಈ ಯೋಜನೆಯ ಅನುಷ್ಟಾನಕ್ಕೆ ತಗಲುವ ವೆಚ್ಚವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಭರಿಸಲಿದ್ದು, ವಸತಿ ಸೌಕರ್ಯ, ಮೂಲಭೂತ ಸೌಕರ್ಯ ಮತ್ತಿತ್ತರ ಸಾಮಾಜಿಕ ಸೌಕರ್ಯಗಳನ್ನು ರಾಜ್ಯ ಸರ್ಕಾರ ಒದಗಿಸಲಿದೆ.
ಯೋಜನೆಯ ವೆಚ್ಚ:
  • ಯೋಜನೆಯ ಅನುಷ್ಟಾನಕ್ಕೆ ತಗಲುವ ವೆಚ್ಚವನ್ನು ಕೇಂದ್ರ, ರಾಜ್ಯ ಮತ್ತು ಸ್ಥಳೀಯ ಸರ್ಕಾರಗಳು ಕ್ರಮವಾಗಿ 50:25:25 ರ ಅನುಪಾತದಲ್ಲಿ ಭರಿಸಲಿವೆ.
  • ವಸತಿ ನಿರ್ಮಾಣಕ್ಕೆ ತಗಲುವ ವೆಚ್ಚವನ್ನು 75:15:10 ರ ಪ್ರಮಾಣದಲ್ಲಿ ಭರಿಸಲಿವೆ. ಪ್ರತಿ ಮನೆಯ ನಿರ್ಮಾಣಕ್ಕೆ 2.5 ಲಕ್ಷ ಮೀರಬಾರದು.
ರಾಜೀವ್ ಆವಾಸ್ ಯೋಜನೆ:
  • ನಗರ ಪ್ರದೇಶಗಳಲ್ಲಿ ಕಂಡುಬರುವ ಕೊಳಚೆ ನಿವಾಸಿಗಳಿಗೆ ವಸತಿ ಸೌಕರ್ಯವನ್ನು ಕಲ್ಪಿಸುವ ಮಹತ್ವಾಕಾಂಕ್ಷೆಯೊಂದಿಗೆ ಈ ಯೋಜನೆಯನ್ನು ಜಾರಿಗೊಳಿಸಲಾಗಿದೆ.
  • ಹಂತ ಹಂತವಾಗಿ ವಸತಿ ಸೌಕರ್ಯವನ್ನು ಕಲ್ಪಿಸುವುದರ ಜತೆಗೆ ಇತರೆ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುವ ಮೂಲಕ ಉತ್ತಮ ನಗರ ವ್ಯವಸ್ಥೆಯನ್ನು ಸಾಧಿಸುವುದು ಈ ಯೋಜನೆಯ ಮತ್ತೊಂದು ಪ್ರಮುಖ ಗುರಿ.

ಚೂರು ಪಾರು ಸುದ್ದಿ:
    barbie
  • ಆರೋಗ್ಯ ಮತ್ತು ಹೂಡಿಕೆಯಲ್ಲಿ ಹಿಮಾಚಲ ಪ್ರದೇಶ ನಂ.1: ಆರೋಗ್ಯ ಮತ್ತು ಹೂಡಿಕೆ ವಲಯದಲ್ಲಿ ಹಿಮಾಚಲ ಪ್ರದೇಶ ದೇಶದಲ್ಲೇ ನಂ.1 ಸ್ಥಾನವನ್ನು ಪಡೆದುಕೊಂಡಿದೆ. ಕೇಂದ್ರ ಗ್ರಾಮೀಣ ಅಭಿವೃದ್ದಿ ಸಚಿವ ಜಯರಾಂ ರಮೇಶ್ ಅವರು ನವದೆಹಲಿಯಲ್ಲಿ ನಡೆದ ಸಮಾರಂಭದಲ್ಲಿ ಹಿಮಾಚಲ ಪ್ರದೇಶ ಮುಖ್ಯ ಮಂತ್ರಿ ವೀರಭದ್ರ ಸಿಂಗ್ ಅವರಿಗೆ ಪ್ರಶಸ್ತಿಯನ್ನು ವಿತರಿಸಿದರು.

ಪಂಜಾಬ್ ನಲ್ಲಿ ಅಂತರರಾಷ್ಟ್ರೀಯ ಅಹಮ್ಮದೀಯ ಮುಸ್ಲಿಂ ಸಮಾವೇಶ: ಅಹಮ್ಮದೀಯ ಮುಸ್ಲಿಂರ ಅಂತರರಾಷ್ಟ್ರೀಯ ಸಮ್ಮೇಳನ ಪಂಜಾಬ್ ಗುರುದಾಸ್ ಪುರದ ಖದಿಯನ್ ನಲ್ಲಿ ಡಿಸೆಂಬರ್ 27 ರಿಂದ ನಡೆಯಲಿದೆ. ಪಾಕಿಸ್ತಾನದ ಸುಮಾರು 5,000 ಕ್ಕೂ ಹೆಚ್ಚು ಮುಸ್ಲಿಂರು ಈ ಸಮಾವೇಶದಲ್ಲಿ ಪಾಲ್ಗೊಳ್ಳಲ್ಲಿದ್ದಾರೆ ಎನ್ನಲಾಗಿದೆ. ಅಹಮ್ಮದೀಯ ಮುಸ್ಲಿಂರು ಪಾಕಿಸ್ತಾನದಲ್ಲಿ ಅತಿ ಹೆಚ್ಚಾಗಿ ನೆಲೆಸಿದ್ದಾರೆ. ಭಾರತದಲ್ಲಿ ಜಮ್ಮು ಮತ್ತು ಕಾಶ್ಮೀರ, ಕೇರಳ ಹಾಗೂ ಓಡಿಶಾದಲ್ಲಿ ಅಹಮ್ಮದೀಯ ಮುಸ್ಲಿಂ ಹೆಚ್ಚಾಗಿ ನೆಲೆಸಿದ್ದಾರೆ.

 

ಪ್ರಚಲಿತ ವಿದ್ಯಮಾನಗಳು ಡಿಸೆಂಬರ್ 15, 2013


ಸಾಹಿತಿ ಸಿ.ಎನ್. ರಾಮಚಂದ್ರನ್ ಗೆ 2013ನೇ ಸಾಲಿನ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
ಪ್ರಚಲಿತ ವಿದ್ಯಮಾನಗಳು ಡಿಸೆಂಬರ್ 15, 20132013ನೇ ಸಾಲಿನ ಪ್ರತಿಷ್ಠಿತ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಘೋಷಣೆಯಾಗಿದ್ದು, ಕನ್ನಡದಲ್ಲಿ ಸಾಹಿತಿ ಸಿ.ಎನ್. ರಾಮಚಂದ್ರನ್ ಅವರಿಗೆ ಪ್ರಶಸ್ತಿ ಲಭಿಸಿದೆ. ರಾಮ ಚಂದ್ರನ್‌ ಅವರ ‘ಆಖ್ಯಾನ- ವ್ಯಾಖ್ಯಾನ’ ಕೃತಿಗೆ ಪ್ರಶಸ್ತಿ ಲಭಿಸಿದೆ. ಕನ್ನಡದ ಹಿರಿಯ ವಿಮರ್ಶಕರೂ, ಸಂಸ್ಕೃತಿ ಚಿಂತಕರೂ ಆಗಿರುವ ಸಿ.ಎನ್. ರಾಮಚಂದ್ರನ್ ಅವರು ಸೇರಿದಂತೆ ಸಾಹಿತ್ಯ ಕ್ಷೇತ್ರದ 22 ಸಾಧಕರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಲಭಿಸಿದೆ.  ಪ್ರಸ್ತುತ ಪ್ರಶಸ್ತಿಯು ಪ್ರಶಸ್ತಿ ಫಲಕ, ಶಾಲು ಮತ್ತು 1 ಲಕ್ಷ ರೂಗಳ ಚೆಕ್ ಒಳಗೊಂಡಿರುತ್ತದೆ. ಈ ಪ್ರಶಸ್ತಿಯನ್ನು 2014 ಮಾರ್ಚ್ 11 ರಂದು ನವದೆಹಲಿಯಲ್ಲಿ ನಡೆಯುವ ಸಾಹಿತ್ಯ ಅಕಾಡೆಮಿಯ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು.
ರಾಮಚಂದ್ರನ್ ಬಗ್ಗೆ:
  • ಕಥನ ಪ್ರಕಾರದಲ್ಲಿ ಸಾಕಷ್ಟು ಕೃಷಿ ಮಾಡಿದರೂ ಕನ್ನಡದ ಪ್ರಮುಖ ವಿಮರ್ಶಕರಲ್ಲೊಬ್ಬರಾಗಿ ಗುರುತಿಸಿಕೊಂಡಿರುವ ಡಾ| ಸಿ.ಎನ್. ರಾಮಚಂದ್ರನ್‌ ಸೋಮಾಲಿಯಾ, ಸೌದಿ ಅರೇಬಿಯಾ ಸೇರಿದಂತೆ ಹಲವು ಪ್ರತಿಷ್ಠಿತ ವಿಶ್ವವಿದ್ಯಾಲಯಗಳಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದವರು. 1996ರಲ್ಲಿ ಮಂಗಳೂರು ವಿಶ್ವವಿದ್ಯಾಲಯದಿಂದ ನಿವೃತ್ತರಾದರು.
  • ಕನ್ನಡದಲ್ಲಿ 16 ಹಾಗೂ ಇಂಗ್ಲಿಷ್‌ನಲ್ಲಿ 10 ಕೃತಿಗಳು ಬೆಳಕು ಕಂಡಿವೆ. ವಸಾಹತೋತ್ತರ ಚಿಂತನೆ, ತೌಲನಿಕ ಸಾಹಿತ್ಯ, ಹೊಸ ಮಡಿಯ ಮೇಲೆ ಚದುರಂಗ ಮೊದಲಾದ ಕಥನೇತರ ಕೃತಿಯಿಂದ ಗಮನ ಸೆಳೆದ ಸಿಎನ್ನಾರ್‌, ‘ಶೋಧ’ ಎಂಬ ಕಾದಂಬರಿ, ‘ಕಸಾಂದ್ರ’ ಕಥಾ ಸಂಕಲನವನ್ನೂ ರಚಿಸಿದ್ದಾರೆ. ಇತ್ತೀಚೆಗೆ ಅವರ ‘ನೆರಳುಗಳ ಬೆನ್ನುಹತ್ತಿ’ ಆತ್ಮಕಥನ ಬಿಡುಗಡೆಯಾಗಿ ಮೆಚ್ಚುಗೆ ಗಳಿಸಿದೆ.
  • ವಿಮರ್ಶೆಯ ಜೊತೆ ಅನುವಾದ ಪ್ರಕಾರದಲ್ಲೂ ಗಮನಾರ್ಹ ಕೊಡುಗೆ ನೀಡಿರುವ ಸಿಎನ್ನಾರ್‌, ಮಲೆ ಮಾದೇಶ್ವರ ಮೌಖಿಕ ಕಥನ, ವೀರಪ್ಪ ಮೊಯ್ಲಿ ಅವರ ತೆಂಬರೆ, ಚಂದ್ರಶೇಖರ ಕಂಬಾರರ ಶಿವರಾತ್ರಿ ಸೇರಿದಂತೆ ಕನ್ನಡದಿಂದ ಇಂಗ್ಲಿಷ್‌ಗೆ ಹಲವು ಕೃತಿಗಳನ್ನು ಅನುವಾದಿಸಿದ್ದಾರೆ.

ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ಕಪಿಲ್ ದೇವ್ ಗೆ ಸಿ.ಕೆ ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿ
kapil devಭಾರತದ ಮೊದಲ ವಿಶ್ವಕಪ್ ವಿಜೇತ ನಾಯಕ ಕಪಿಲ್ ದೇವ್ ಅವರಿಗೆ ಬಿಸಿಸಿಐ ಸಿ.ಕೆ ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿ ನೀಡಿದೆ. ಜೀವಮಾನ ಸಾಧನೆ ಪ್ರಶಸ್ತಿಗೆ ಕಪಿಲ್ ದೇವ್ ಅವರ ಹೆಸರನ್ನು ಅವಿರೋಧವಾಗಿ ಆಯ್ಕೆ ಮಾಡಲಾಗಿದೆ. ಕಪಿಲ್ ದೇವ್ ಅವರು ಸಿ.ಕೆ ನಾಯ್ಡು ಜೀವಮಾನ ಸಾಧನೆ ಪ್ರಶಸ್ತಿಯನ್ನು 2012-13ನೇ ಬಿಸಿಸಿಐ ವಾರ್ಷಿಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕಪಿಲ್ ಅವರು ಈ ಗೌರವ ಪಡೆಯಲಿದ್ದು, ಪ್ರಶಸ್ತಿಯು ಟ್ರೋಫಿ ಹಾಗೂ 25 ಲಕ್ಷ ರೂಗಳ ಚೆಕ್ ಒಳಗೊಂಡಿದೆ.
ಭಾರತ ಕಂಡ ಶ್ರೇಷ್ಠ ಕ್ರಿಕೆಟರ್:
  • ಕಪಿಲ್ ದೇವ್ ಭಾರತ ಕ್ರಿಕೆಟ್ ಕಂಡ ಅತ್ಯದ್ಭುತ ಆಲ್ರೌಂಡರ್ ಆಗಿದ್ದು, 131 ಟೆಸ್ಟ್ ಪಂದ್ಯಗಳಲ್ಲಿ 434 ವಿಕೆಟ್ ಕಬಳಿಸಿದ್ದಾರೆ.
  • ಟೆಸ್ಟ್ ಕ್ರಿಕೆಟ್‌ನಲ್ಲಿ 5000 ರನ್ ಗಳಿಸಿ 400 ವಿಕೆಟ್ ಗಡಿ ದಾಟಿದ ಮೊದಲ ಆಟಗಾರನಾಗಿದ್ದಾರೆ.
  • ಇನ್ನು ಏಕದಿನ ಕ್ರಿಕೆಟ್‌ನಲ್ಲಿ 225 ಪಂದ್ಯಗಳನ್ನಾಡಿದ್ದು, 253 ವಿಕೆಟ್ ಕಬಳಿಸಿದ್ದಾರೆ. ಅಲ್ಲದೆ 3,783 ರನ್ ದಾಖಲಿಸಿದ್ದಾರೆ.
  • 1983ರ ಏಕದಿನ ಕ್ರಿಕೆಟ್ ವಿಶ್ವಕಪ್ ಗೆದ್ದ ತಂಡವನ್ನು ಮುನ್ನಡೆಸಿದ ಹೆಗ್ಗಳಿಕೆಗೆ ಕಪಿಲ್ ಪಾತ್ರರಾಗಿದ್ದು, ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಉತ್ತಮ ಕೊಡುಗೆ ನೀಡಿದ್ದಾರೆ.
  • 2007ರಲ್ಲಿ ಬಿಸಿಸಿಐ ವಿರುದ್ಧವಾಗಿ ಇಂಡಿಯನ್ ಕ್ರಿಕೆಟ್ ಲೀಗ್ ಆರಂಭಿದ ಕಾರಣ ಬಿಸಿಸಿಐ ಅವರನ್ನು ತನ್ನ ಪರಿಧಿಯಿಂದ ಅಮಾನತುಗೊಳಿಸಿತ್ತು. ನಂತರ ಐಸಿಎಲ್‌ನಿಂದ ಹೊರಬಂದ ನಂತರ ಕಪಿಲ್ ದೇವ್ ಅವರನ್ನು ಬಿಸಿಸಿಐ ಮತ್ತೆ ಸೇರಿಸಿಕೊಂಡಿತು.
ಈವರೆಗಿನ ಪ್ರಶಸ್ತಿ ಪುರಸ್ಕೃತರು:
ಭಾರತೀಯ ಕ್ರಿಕೆಟ್‌ಗೆ ಅಪಾರ ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ಬಿಸಿಸಿಐ ಭಾರತದ ಪ್ರಥಮ ಟೆಸ್ಟ್ ತಂಡದ ನಾಯಕ ಸಿ.ಕೆ ನಾಯ್ಡು ಅವರ ಹೆಸರಿನಲ್ಲಿ ಜೀವಮಾನ ಸಾಧನೆ ಪ್ರಶಸ್ತಿ ನೀಡುತ್ತಿದೆ. ಈವರೆಗೆ ಸಿ.ಕೆ ನಾಯ್ಡು ಜೀವಮಾನ ಪ್ರಶಸ್ತಿ ಪಡೆದ ಆಟಗಾರರು 1994-ಲಾಲಾ ಅಮರ್‌ನಾಥ್, 1995-ಸೈಯದ್ ಮುಷ್ತಾಕ್ ಅಲಿ, 1996-ವಿಜಯ್ ಹಜಾರೆ, 1997-ಕೆ.ಎನ್ ಪ್ರಭು, 1998-ಪಿ.ಆರ್ ಉಮ್ರಿಗರ್, 1999-ಹೇಮಚಂದ್ರ ಅಧಿಕಾರಿ, 2000-ಸುಭಾಷ್ ಗುಪ್ತಾ, 2001-ಮನ್ಸೂರ್ ಅಲಿ ಖಾನ್ ಪಟೌಡಿ, 2002-ಭೌಸಹೆಬ್ ನಿಂಬಾಲ್ಕರ್, 2003-ಚಂದ್ರಕಾಂತ್ ಬೊರ್ಡೆ, 2004-ಬಿಷನ್ ಸಿಂಗ್ ಬೇಡಿ, ಬಿ.ಚಂದ್ರಶೇಖರ್, ಎರ್ರಪಳ್ಳಿ ಪ್ರಸನ, ಎಸ್. ವೆಂಕಟರಾಘವನ್, 2007-ನಾರಿಮನ್ ಕಂಟ್ರಾಕ್ಟರ್, 2008-ಗುಂಡಪ್ಪ ವಿಶ್ವನಾಥ್, 2009-ಮೊಹಿಂದರ್ ಅಮರ್‌ನಾಥ್, 2010-ಸಲೀಂ ದುರಾಣಿ, 2011-ಅಜಿತ್ ವಾಡೇಕರ್, 2012-ಸುನಿಲ್ ಗವಾಸ್ಕರ್.

ಚೂರು-ಪಾರು ಸುದ್ಧಿಗಳು:
    churu
  • ಜನವರಿ 2014 ರಿಂದ ಖಾಲಿ ಹುದ್ದೆಗಳ ನೇಮಕಾತಿ ಆರಂಭ: ರಾಜ್ಯ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಖಾಲಿ ಉಳಿದ ಹುದ್ದೆಗಳ ನೇಮಕಾತಿ ಪ್ರಕ್ರಿಯೆಯನ್ನು 2014ರ ಜನವರಿಯಿಂದ ಆರಂಭಿಸಲಾಗುವುದು ಎಂದು ಕಾನೂನು, ಸಂಸದೀಯ ಹಾಗೂ ಪಶುಸಂಗೋಪನಾ ಸಚಿವ ಟಿ.ಬಿ. ಜಯಚಂದ್ರ ತಿಳಿಸಿದರು. 371ನೇ ತಿದ್ದುಪಡಿ ಹಿನ್ನೆಲೆಯಲ್ಲಿ ನೇಮಕಾತಿ ಸ್ಥಗಿತಗೊಂಡಿತ್ತು. ಆದರೆ ಈ ಕುರಿತ ಸಂಪುಟ ಉಪ ಸಮಿತಿಯು ನಿರಂತರ ಸಭೆ ನಡೆಸುತ್ತಿದ್ದು, ವಾಸಸ್ಥಾನ ಪ್ರಮಾಣ ಪತ್ರ, ಮೀಸಲಾತಿ ನಿಗದಿ ಮತ್ತಿತರ ವಿಚಾರಗಳ ಕುರಿತ ಗೊಂದಲ ಬಗೆಹರಿಸಲಾಗಿದೆ. ಶೀಘ್ರವೇ ಅಧಿಸೂಚನೆಯನ್ನು ಹೊರಡಿಸಿ, ಜನವರಿಯಿಂದ ನೇಮಕಾತಿ ಪ್ರಕ್ರಿಯೆಗೆ ಚಾಲನೆ ನೀಡಲಾಗುವುದು ಎಂದು ಹೇಳಿದರು.

  • ರಾಜ್ಯದ 164 ಗ್ರಾಮ ಪಂಚಾಯಿತಿಗಳು ಮೇಲ್ದರ್ಜೆಗೆ: ರಾಜ್ಯದಲ್ಲಿ 164 ಗ್ರಾಮ ಪಂಚಾಯ್ತಿಗಳನ್ನು ಪಟ್ಟಣ ಪಂಚಾಯ್ತಿಗಳಾಗಿ ಮೇಲ್ದರ್ಜೆಗೆ ಏರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪೌರಾಡಳಿತ ಸಚಿವ ಖಮರುಲ್ ಇಸ್ಲಾಂ ಹೇಳಿದ್ದಾರೆ. 2011 ಮಹಾ ಜನಗಣತಿ ಪ್ರಕಾರ ಜನಸಂಖ್ಯೆ ಆಧಾರದಲ್ಲಿ ಗ್ರಾಮ ಪಂಚಾಯ್ತಿಗಳನ್ನು ಮೇಲ್ದರ್ಜೆಗೇರಿಸಲು ಉದ್ದೇಶಿಸಲಾಗಿದೆ. ಅಲ್ಲಿ 10 ಸಾವಿರ ಜನಸಂಖ್ಯೆ ಇರಬೇಕು, ಕೃಷಿಯೇತರ ಜಾಗ, ಒಂದು ಚದರ ಕಿ.ಮೀ.ನೊಳಗೆ 400 ಕುಟುಂಬ ಇರಬೇಕು ಎಂಬ ಮಾನದಂಡದ ಆಧಾರದಲ್ಲಿ ಗ್ರಾಮ ಪಂಚಾಯ್ತಿ ಕೈಗೊಂಡಿರುವ ನಿರ್ಣಯವನ್ನು ಜಿಲ್ಲಾಡಳಿತಕ್ಕೆ ಕಳುಹಿಸಬೇಕು. ಜಿಲ್ಲಾಡಳಿತ ಸಲ್ಲಿಸುವ ವರದಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದರು.

  • ಕಿರಿಯರ ವಿಶ್ವಕಪ್ ಹಾಕಿಯಲ್ಲಿ ಜರ್ಮನಿ ತಂಡ ಚಾಂಪಿಯನ್: ಜರ್ಮನಿ ತಂಡ ಶೂಟೌಟ್‌ನಲ್ಲಿ ಫ್ರಾನ್ಸ್‌ ತಂಡವನ್ನು ಬಗ್ಗುಬಡಿದು ಕಿರಿಯರ ವಿಶ್ವಕಪ್‌ ಹಾಕಿ ಪಂದ್ಯಾವಳಿಯಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಮೇಜರ್‌ ಧ್ಯಾನ್‌ಚಂದ್‌ ಕ್ರೀಡಾಂಗಣದಲ್ಲಿ ನಡೆದ ಫೈನಲ್‌ನಲ್ಲಿ ನಿಗದಿತ ಅವಧಿಯ ಆಟ ನಿಂತಾದ ಉಭಯ ತಂಡಗಳು 1-1 ರಿಂದ ಸಮಬಲ ಸಾಧಿಸಿದ್ದವು. ಪಂದ್ಯ ಶೂಟೌಟ್‌ ತಲುಪಿದಾದ ಜರ್ಮನಿ ತಂಡ 4-2ರಿಂದ ಮೇಲುಗೈ ಸಾಧಿಸಿ ಪ್ರಶಸ್ತಿ ಎತ್ತಿ ಹಿಡಿಯಿತು. ಇದಕ್ಕೂ ಮುನ್ನ ನಡೆದ ಪ್ಲೇ-ಆಫ್ ಪಂದ್ಯದಲ್ಲಿ ಹಾಲೆಂಡ್‌ ತಂಡ 7-2 ಗೋಲುಗಳಿಂದ ಮಲೇಷ್ಯಾ ತಂಡವನ್ನು ಮಣಿಸಿ ಕಂಚಿನ ಪದಕ ಗಳಿಸಿತು.

  • ಮೂರನೇ ಬಾರಿಗೆ ಜರ್ಮನಿ ಚಾನ್ಸಲರ್ ಆಗಿ ಏಂಜೆಲಾ ಮಾರ್ಕೆಲ್ ಆಯ್ಕೆ: ವಿವಿಧ ಪಕ್ಷಗಳ ಜತೆ ಹೊಂದಾಣಿಕೆ ಮಾಡಿಕೊಳ್ಳುವ ಮೂಲಕ ಏಂಜೆಲಾ ಮರ್ಕೆಲ್‌ ಅವರು ಮೂರನೇ ಬಾರಿಗೆ ಜರ್ಮನಿ ಚಾನ್ಸಲರ್‌ ಆಗಿ ಆಯ್ಕೆಯಾಗುವಲ್ಲಿ ಯಶಸ್ವಿಯಾಗಿದ್ದಾರೆ. ಸೆಪ್ಟೆಂಬರ್‌ 22 ರಂದು ನಡೆದ ಚುನಾವಣೆಯಲ್ಲಿ ಅಗತ್ಯ ಬಹುಮತ ಗಳಿಸುವಲ್ಲಿ ಮರ್ಕೆಲ್‌ ವಿಫಲರಾಗಿದ್ದರು. ಈಗ ವಿರೋಧ ಪಕ್ಷವಾದ ಸೋಷಿ ಯಲ್‌ ಡೆಮಾಕ್ರೆಟಿಕ್‌ ಜತೆ ಸುದೀರ್ಘ ಸಂಧಾನ ನಡೆಸಿ ಬೆಂಬಲ ಪಡೆಯುವಲ್ಲಿ ಯಶಸ್ವಿ ಆಗಿರುವುದರಿಂದ ಜರ್ಮನಿಯ ರಾಜಕೀಯ ಅನಿಶ್ಚಿತತೆ ಕೊನೆಗೊಂಡಿದೆ. 621 ಸದಸ್ಯರನ್ನು ಹೊಂದಿರುವ ಸಂಸತ್ತಿನಲ್ಲಿ ಮರ್ಕೆಲ್‌ ಅವರ ಪರ 462 ಮತ್ತು ವಿರೋಧವಾಗಿ 150 ಮತಗಳು ಚಲಾವಣೆಯಾದವು. ಮಹಾ ಯುದ್ಧದ ನಂತರ ಮೂರನೇ ಬಾರಿಗೆ ಸತತವಾಗಿ ಚಾನ್ಸಲರ್ ಹುದ್ದೆಗೆ ಏರುತ್ತಿರುವ ಪ್ರಥಮ ಮಹಿಳೆ ಏಂಜೆಲಾ ಮರ್ಕೆಲ್‌. ಈ ಹಿಂದೆ ಹೆಲ್ಮುಟ್‌ ಮತ್ತು ಕೊನಾರ್ಡ್ ಅವರು ಸತತ ಮೂರು ಬಾರಿ ಚಾನ್ಸಲರ್‌ ಆಗಿದ್ದರು.

 

ಪ್ರಚಲಿತ ವಿದ್ಯಮಾನಗಳು ಡಿಸೆಂಬರ್ 14, 2013


ಭಾರತದ ಟೆಸ್ಟ್ ಕ್ರಿಕೆಟ್ ನಾಯಕತ್ವದಲ್ಲಿ ದಾಖಲೆ ಬರೆದ ಮಹೇಂದ್ರ ಸಿಂಗ್ ಧೋನಿ
ಪ್ರಚಲಿತ ವಿದ್ಯಮಾನಗಳು ಡಿಸೆಂಬರ್ 14, 2013ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಣ ಮೊದಲ ಟೆಸ್ಟ್‌ ವಾಂಡರರ್ನಲ್ಲಿ ಆರಂಭಗೊಂಡಿದೆ. ಈ ಮೂಲಕ 50 ಟೆಸ್ಟ್‌ ಪಂದ್ಯಗಳಲ್ಲಿ ಭಾರತ ತಂಡದ ನಾಯಕತ್ವ ವಹಿಸಿದ ಮೊದಲ ಭಾರತೀಯ ಎಂಬ ಗೌರವಕ್ಕೆ ಮಹೇಂದ್ರ ಸಿಂಗ್‌ ಧೋನಿ ಪಾತ್ರರಾಗಿದ್ದಾರೆ. 50 ಟೆಸ್ಟ್‌ಗಳಲ್ಲಿ ತಂಡದ ನಾಯಕತ್ವ ವಹಿಸಿದ ಭಾರತದ ಮೊದಲ, ಏಶ್ಯದ ದ್ವಿತೀಯ ಮತ್ತು ಸಮಗ್ರವಾಗಿ 14ನೇ ಆಟಗಾರರಾಗಿದ್ದಾರೆ.
ದಾಖಲೆ ವೀರ:
  • ಸರ್‌ ವಿವಿಯನ್‌ ರಿಚರ್ಡ್ಸ್‌ (ವೆಸ್ಟ್‌ಇಂಡೀಸ್‌), ಮಾರ್ಕ್‌ ಟಯ್ಲರ್‌ (ಆಸ್ಟ್ರೇಲಿಯ) ಮತ್ತು ಆಯಂಡ್ರೂ ಸ್ಟ್ರಾಸ್‌ (ಇಂಗ್ಲಂಡ್‌) ಕೂಡ 50 ಟೆಸ್ಟ್‌ ಪಂದ್ಯಗಳಲ್ಲಿ ತಮ್ಮ ದೇಶದ ನಾಯಕತ್ವ ವಹಿಸಿದ್ದರು.
  • ಭಾರತ ತಂಡದ ನಾಯಕರಾಗಿ ಆಡಿದ 49 ಟೆಸ್ಟ್‌ ಪಂದ್ಯಗಳಲ್ಲಿ ಧೋನಿ ಪಡೆ 26ರಲ್ಲಿ ಜಯ ಸಾಧಿಸಿದ್ದರೆ 12ರಲ್ಲಿ ಸೋಲು ಮತ್ತು 11ರಲ್ಲಿ ಡ್ರಾ ಸಾಧಿಸಿದೆ.
  • ತವರಿನಲ್ಲಿ ಧೋನಿ ಪಡೆ 21ರಲ್ಲಿ ಜಯ, 3ರಲ್ಲಿ ಸೋಲು ಮತ್ತು 6ರಲ್ಲಿ ಡ್ರಾ ಸಾಧಿಸಿದ್ದರೆ, ವಿದೇಶದಲ್ಲಿ ಭಾರತ 5ರಲ್ಲಿ ಜಯ, 9ರಲ್ಲಿ ಸೋಲು ಮತ್ತು 5ರಲ್ಲಿ ಡ್ರಾ ಸಾಧಿಸಿದೆ.
  • ಈ ಸಾಧನೆಯ ವೇಳೆ ಧೋನಿ ಅವರು ಮಾಜಿ ನಾಯಕ ಸೌರವ್‌ ಗಂಗೂಲಿ ಅವರ ದಾಖಲೆಯನ್ನು ಅಳಿಸಿ ಹಾಕಿದರು.
  • 50ಕ್ಕಿಂತ ಹೆಚ್ಚಿನ ಟೆಸ್ಟ್‌ಗಳಲ್ಲಿ ತನ್ನ ದೇಶದ ನಾಯಕತ್ವ ವಹಿಸಿದ್ದ ಏಷ್ಯಾದ ಏಕೈಕ ಕ್ರಿಕೆಟಿಗ ಶ್ರೀಲಂಕಾದ ಅರ್ಜುನ ರಣತುಂಗ ಆಗಿದ್ದಾರೆ. ಅವರು 56 ಟೆಸ್ಟ್‌ಗಳಲ್ಲಿ ನಾಯಕತ್ವ ವಹಿಸಿದ್ದರು.

ಅತೀ ಶೀಘ್ರದಲ್ಲಿ ಖಾಲಿ ಇರುವ ಹುದ್ದೆಗಳ ಭರ್ತಿಗೆ ಸರ್ಕಾರ ಕ್ರಮ: ಟಿ.ಬಿ. ಜಯಚಂದ್ರ
karnatakaರಾಜ್ಯದಲ್ಲಿ ಕಂದಾಯ, ಆಹಾರ ಮತ್ತು ನಾಗರಿಕ ಸರಬರಾಜು ಮತ್ತು ನಗರಾಭಿವೃದ್ಧಿ ಇಲಾಖೆಗಳಲ್ಲಿ ಖಾಲಿಯಿರುವ ಹುದ್ದೆಗಳ ಭರ್ತಿಗೆ ಸರ್ಕಾರ ಹೆಚ್ಚಿನ ಆದ್ಯತೆ ನೀಡಲಿದೆ ಎಂದು ಕಾನೂನು ಸಚಿವ ಟಿ.ಬಿ. ಜಯಚಂದ್ರ ಹೇಳಿದ್ದಾರೆ. ಹಲವು ಸರ್ಕಾರಿ ಇಲಾಖೆಗಳಲ್ಲಿ ಸಿ,ಡಿ ಗ್ರೂಪ್‌ ಹಾಗೂ ಇತರೆ ಹುದ್ದೆಗಳು ಖಾಲಿಯಿದ್ದು. ಆದರೆ, ಜನರ ಹಿತದೃಷ್ಟಿಯಿಂದ ಕಂದಾಯ, ಆಹಾರ ಮತ್ತು ನಾಗರಿಕ ಸರಬರಾಜು ಹಾಗೂ ನಗರಾಭಿವೃದ್ಧಿ ಇಲಾಖೆಯಲ್ಲಿರುವ ಖಾಲಿ ಹುದ್ದೆಗಳನ್ನು ಆದಷ್ಟು ಬೇಗ ಭರ್ತಿ ಮಾಡಬೇಕಿದೆ ಎಂದು ಹೇಳಿದ್ದಾರೆ.
ಸಂಪುಟ ಸಭೆಯಲ್ಲಿ ತೀರ್ಮಾನ:
ರಾಜ್ಯದ ವಿವಿಧ ಇಲಾಖೆಗಳಲ್ಲಿ ಖಾಲಿ ಇರುವ ಪ್ರಥಮ ದರ್ಜೆ ಮತ್ತು ದ್ವಿತೀಯ ದರ್ಜೆ ಹುದ್ದೆಗಳನ್ನು ಭರ್ತಿ ಮಾಡುವ ಬಗ್ಗೆ ಸಂಪುಟ ಸಭೆಯಲ್ಲಿ ತೀರ್ಮಾನ ಕೈಗೊಂಡಿದ್ದು.  ಪ್ರಮುಖವಾಗಿ ಕಂದಾಯ ಇಲಾಖೆ ಮತ್ತು ಆಹಾರ ಇಲಾಖೆಯಲ್ಲಿ ಖಾಲಿ ಇರುವ ಹುದ್ದೆಗಳನ್ನು ಆದ್ಯತೆ ಮೇಲೆ ಭರ್ತಿ ಮಾಡಲಾಗುವುದು. ಇದಾದ ಬಳಿಕ ಉಳಿದ ಇಲಾಖೆಗಳ ಖಾಲಿ ಹುದ್ದೆಗಳ ಭರ್ತಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನಮಾನ ನೀಡುವ ಪ್ರಕ್ರಿಯೆ ಜಾರಿಯಲ್ಲಿದ್ದುದರಿಂದ ಕಳೆಗ ಹಲವು ತಿಂಗಳುಗಳಿಂದ ಯಾವುದೇ ಸರ್ಕಾರಿ ನೇಮಕಾತಿಗಳು ನಡೆದಿಲ್ಲ. ಈ ಹಿನ್ನೆಲೆಯಲ್ಲಿ ಖಾಲಿ ಹುದ್ದೆಗಳ ನೇಮಕಾತಿ ಕುರಿತಂತೆ ಸಂಪುಟ ಸಭೆಯಲ್ಲಿ ಪರಿಹಾರ ಕಂಡುಕೊಳ್ಳಲಾಗಿದೆ. ಈ ನಿಟ್ಟಿನಲ್ಲಿ ಯಾವ್ಯಾವ ಇಲಾಖೆಗಳಲ್ಲಿ ಎಷ್ಟು ಖಾಲಿ ಹುದ್ದೆಗಳಿವೆ ಎಂಬ ಪಟ್ಟಿ ತರಿಸಿಕೊಳ್ಳಲಾಗುತ್ತಿದೆ. ಈ ಪೈಕಿ ಅಗತ್ಯ ಹುದ್ದೆಗಳನ್ನು ಮೊದಲ ಹಂತದಲ್ಲಿ ಭರ್ತಿ ಮಾಡಲಾಗುವುದು.

ಮಹತ್ವಾಕಾಂಕ್ಷಿ  ‘ಲೋಕಪಾಲ ಮಸೂದೆ’ ಏನು………?ಎತ್ತ………?
lokapal billಜನಪ್ರತಿನಿಧಿಗಳು ಹಾಗೂ ಸರ್ಕಾರಿ ನೌಕರರ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಮಹತ್ವದ್ದು ಎನ್ನಲಾಗಿರುವ ಲೋಕಪಾಲ ಮಸೂದೆಗೆ ಸಂಸತ್ತು ಅಂಗೀಕಾರ ನೀಡಿದೆ. ಈ ಹಿನ್ನೆಲೆಯಲ್ಲಿ ಈ ಐತಿಹಾಸಿಕ ಮಸೂದೆ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ. ಲೋಕಾಯುಕ್ತರು ಭ್ರಷ್ಟಾಚಾರ ತಡೆಗೆ ಕೇಂದ್ರದಲ್ಲಿ ಲೋಕಾಯುಕ್ತ ಹಾಗೂ ರಾಜ್ಯಗಳಲ್ಲಿ ಲೋಕಾಯುಕ್ತ ರಚನೆ ಕಡ್ಡಾಯ. ಲೋಕಪಾಲ ಮಸೂದೆಯಂತೆ 365 ದಿನಗಳೊಳಗೆ ಎಲ್ಲ ರಾಜ್ಯ ಸರ್ಕಾರಗಳು ಲೋಕಾಯುಕ್ತರನ್ನು ನೇಮಿಸಬೇಕು. ಲೋಕಾಯುಕ್ತ ಯಾವ ರೀತಿ ಇರಬೇಕು ಎನ್ನುವುದನ್ನು ನಿರ್ಧರಿಸುವ ಹಕ್ಕನ್ನು ರಾಜ್ಯಗಳಿಗೆ ಬಿಡಲಾಗಿದೆ.
ಲೋಕಪಾಲದಲ್ಲಿ ಯಾರ್ಯಾರು?
ಲೋಕಪಾಲದಲ್ಲಿ ಒಬ್ಬ ಅಧ್ಯಕ್ಷ ಹಾಗೂ ಗರಿಷ್ಠ 8 ಮಂದಿ ಸದಸ್ಯರು ಇರಲಿದ್ದಾರೆ. ಇವರಲ್ಲಿ ಶೇ.50ರಷ್ಟು ಮಂದಿ ನ್ಯಾಯಾಂಗಕ್ಕೆ ಸಂಬಂಧಿಸಿದವರಾಗಿರಬೇಕು. ಶೇ.50ರಷ್ಟು ಸದಸ್ಯರು ಎಸ್ಸಿ, ಎಸ್ಟಿ, ಇತರೆ ಹಿಂದುಳಿದ ವರ್ಗಗಳು, ಅಲ್ಪಸಂಖ್ಯಾತರು ಹಾಗೂ ಮಹಿಳೆಯರು ಆಗಿರಬೇಕು.
ಲೋಕಪಾಲ ವ್ಯಾಪ್ತಿ:
ವಿದೇಶದಿಂದ ವಾರ್ಷಿಕ 10 ಲಕ್ಷಕ್ಕಿಂತ ಹೆಚ್ಚಿನ ಧನಸಹಾಯ ಪಡೆಯುವ, ಸಾರ್ವಜನಿಕರಿಂದ ಹಣ ಸಂಗ್ರಹಿಸುವ, ದೊಡ್ಡಮಟ್ಟದ ಆದಾಯ ಹೊಂದಿರುವ ಟ್ರಸ್ಟ್ ಗಳು, ಸೊಸೈಟಿಗಳೂ ಲೋಕಪಾಲದ ವ್ಯಾಪ್ತಿಯಡಿ ಬರುತ್ತವೆ. ಧಾರ್ಮಿಕ, ದಾನಧರ್ಮ ಕಾರ್ಯದಲ್ಲಿ ತೊಡಗಿಕೊಂಡಿರುವ ಸಂಸ್ಥೆಗಳನ್ನು ಹೊರಗಿಡಲಾಗಿದೆ.
ವರ್ಗಾವಣೆ:
ಲೋಕಪಾಲಕ್ಕೆ ಸಂಬಂಧಿಸಿದ ಪ್ರಕರಣದ ತನಿಖೆ ನಡೆಸುತ್ತಿರುವ ಸಿಬಿಐ ಅಧಿಕಾರಿ ವರ್ಗಾವಣೆಗೆ ಲೋಕಪಾಲದ ಅನುಮತಿ ಅಗತ್ಯ.
ಹೇಳಿಕೆ:
ಭ್ರಷ್ಟಾಚಾರ ಪ್ರಕರಣವೊಂದರಲ್ಲಿ ಲೋಕಪಾಲ ಯಾವುದೇ ನಿರ್ಧಾರಕ್ಕೆ ಬರುವ ಮುನ್ನ ಸರ್ಕಾರಿ ನೌಕರನ ಹೇಳಿಕೆ ಪಡೆಯಲಾಗುತ್ತದೆ. ಕೆಲವು ವಿಚಾರಗಳಲ್ಲಿ ಪ್ರಧಾನಮಂತ್ರಿಯೂ ಲೋಕಪಾಲ ವ್ಯಾಪ್ತಿಯಡಿ ಬರುತ್ತಾರೆ.
ವಿಚಾರಣೆ:
ತನಿಖೆ ವಿಚಾರಣೆ 60 ದಿನದೊಳಗೆ ಮುಗಿಯಬೇಕು ಹಾಗೂ ತನಿಖೆ ಆರು ತಿಂಗಳೊಳಗೆ ಪೂರ್ಣಗೊಳ್ಳಬೇಕು. ಸರ್ಕಾರಿ ನೌಕರನ ಹೇಳಿಕೆ ಪಡೆದ ನಂತರವಷ್ಟೇ ಲೋಕಪಾಲ ತನಿಖೆಗೆ ಆದೇಶಿಸಬಹುದು. ಪ್ರಧಾನಮಂತ್ರಿಗಳ ವಿಚಾರಣೆ ಕ್ಯಾಮೆರಾದ ಎದುರು ನಡೆಯಬೇಕು. ಈ ವಿಚಾರಣೆಗೆ ಲೋಕಪಾಲದ ಮೂರನೇ ಎರಡರಷ್ಟು ಸದಸ್ಯರ ಅನುಮತಿ ಬೇಕು.
ಸುಳ್ಳು ದೂರುಗಳಿಗೆ ದಂಡ:
ಒಂದು ವರ್ಷದ ವರೆಗೆ ಜೈಲು, 1 ಲಕ್ಷದ ವರೆಗೆ ದಂಡ. ಸರ್ಕಾರಿ ನೌಕರರಿಗೆ ಏಳು ವರ್ಷ ಜೈಲು ಶಿಕ್ಷೆ , ಕ್ರಿಮಿನಲ್ ದುರ್ನಡತೆ ಮತ್ತು ಅಭ್ಯಾಸ ಬಲದಂತೆ ಭ್ರಷ್ಟಾಚಾರಕ್ಕೆ ಪ್ರೋತ್ಸಾಹ ನೀಡುವವರಿಗೆ  10 ವರ್ಷದ ವರೆಗೆ ಜೈಲು.
ಲೋಕಪಾಲದ ಹಾದಿ:
  • 1966 ಮೊರಾರ್ಜಿ ದೇಸಾಯಿ ನೇತೃತ್ವದ ಮೊದಲ ಆಡಳಿತಾತ್ಮಕ ಸುಧಾರಣಾ ಆಯೋಗ ಕೇಂದ್ರದಲ್ಲಿ ಲೋಕಪಾಲ, ರಾಜ್ಯದಲ್ಲಿ ಲೋಕಾಯುಕ್ತ ರಚನೆಗೆ ಶಿಫಾರಸು ಮಾಡಿತ್ತು.
  • ಸಂಸದರೂ ಸೇರಿ ಎಲ್ಲ ಸರ್ಕಾರಿ ನೌಕರರ ವಿರುದ್ಧದ ತನಿಖೆಗೆ ಅಧಿಕಾರ ನೀಡುವಂತೆ ತಿಳಿಸಿತ್ತು.
  • 1968-2001 ನಂತರ ಅಧಿಕಾರಕ್ಕೆ ಬಂದ ಸರ್ಕಾರಗಳು ಎಂಟು ಬಾರಿ ಲೋಕಪಾಲ ಮಸೂದೆಯನ್ನು ಮಂಡಿಸಲು ಮುಂದಾದವು.
  • 2002 ನ್ಯಾ. ಎಂ.ಎನ್. ವೆಂಕಟಾಚಲಯ್ಯ ನೇತೃತ್ವದ ಸಂವಿಧಾನ ಪರಿಶೀಲನಾ ಆಯೋಗ ಲೋಕಾಯುಕ್ತ ಮತ್ತು ಲೋಕಪಾಲದ ಅಗತ್ಯ ಕುರಿತು ಒತ್ತಿ ಹೇಳಿತ್ತು.
  • 2004 ಯುಪಿಎ-1ರ ಸಾಮಾನ್ಯ ಕನಿಷ್ಠ ಕಾರ್ಯಕ್ರಮದಲ್ಲಿ ಲೋಕಪಾಲ ಮಸೂದೆಯನ್ನು ಜಾರಿಗೆ ತರುವ ಭರವಸೆ ನೀಡಲಾಗಿತ್ತು.
  • 2005 ವೀರಪ್ಪ ಮೊಯ್ಲಿ ನೇತೃತ್ವದ ಎರಡನೇ ಆಡಳಿತಾತ್ಮಕ ಸುಧಾರಣಾ ಆಯೋಗವು ಲೋಕಪಾಲವನ್ನು ಅನುಷ್ಠಾನಕ್ಕೆ ತರುವುದು ಅಗತ್ಯ ಎಂದು ಹೇಳಿತು.
  • ಯುಪಿಎ-2ರ ಅವಧಿಯಲ್ಲಿ ಪ್ರಣಬ್ ಮುಖರ್ಜಿ ನೇತೃತ್ವದ ಸಚಿವರ ಉನ್ನತಾಧಿಕಾರಗಳ ಸಮಿತಿಯು ಲೋಕಪಾಲ ಮಸೂದೆ ಸೇರಿ ಅನೇಕ ಭ್ರಷ್ಟಾಚಾರ ವಿರೋಧಿ ಕ್ರಮಗಳನ್ನು ಜಾರಿಗೆ ತರುವ ಸಲಹೆ ನೀಡಿತ್ತು.

* ಪ್ರಚಲಿತ ವಿದ್ಯಮಾನಗಳು ಡಿಸೆಂಬರ್ 13, 2013


ಗ್ರಾಮ ಪಂಚಾಯತಿಗಳನ್ನು ಪುರಸ್ಕರಿಸಲು ‘ಗಾಂಧಿ ಗ್ರಾಮ ಪುರಸ್ಕಾರ’ ಯೋಜನೆ ಜಾರಿ
ಪ್ರಚಲಿತ ವಿದ್ಯಮಾನಗಳು ಡಿಸೆಂಬರ್ 13, 2013ಗ್ರಾಮ ಪಂಚಾಯತಿಗಳ ಆಡಳಿತ ನಿರ್ವಹಣೆ ಹಾಗೂ ಆರ್ಥಿಕ ಪ್ರಗತಿಯನ್ನು ಮತ್ತಷ್ಟು ಹೆಚ್ಚಿಸಲು ರಾಜ್ಯ ಸರ್ಕಾರ ಗ್ರಾಮ ಪಂಚಾಯತಿಗಳಿಗೆ ಪ್ರೋತ್ಸಾಹ ನೀಡುವ ‘ಗಾಂಧಿ ಗ್ರಾಮ ಪುರಸ್ಕಾರ’ ಎಂಬ ನೂತನ ಯೋಜನೆ ಜಾರಿಗೆ ತಂದಿದ್ದು, ಈ ವರ್ಷ 174 ಗ್ರಾಮ ಪಂಚಾಯತಿಗಳಿಗೆ ‘ಗಾಂಧಿ ಗ್ರಾಮ ಪುರಸ್ಕಾರ’ ನೀಡಲು ಮುಂದಾಗಿದೆ.
ಏನಿದು ಯೋಜನೆ?
‘ಗಾಂಧಿ ಗ್ರಾಮ ಪುರಸ್ಕಾರ’ ಯೋಜನೆಯಡಿ ಆಯ್ಕೆಯಾಗುವ ಗ್ರಾಮ ಪಂಚಾಯತಿಗಳಿಗೆ ತಲಾ 2 ಲಕ್ಷ ರೂ. ಹೆಚ್ಚುವರಿ ಉತ್ತೇಜನ ಅನುದಾನ ನೀಡಲಾಗುತ್ತದೆ. ಈ ಸಂಬಂಧ ಸರ್ಕಾರ ಅಧಿಕೃತ ಆದೇಶ ಹೊರಡಿಸಿದ್ದು, 2013-14ನೇ ಹಣಕಾಸು ವರ್ಷದಲ್ಲಿ ಆಯ್ಕೆಯಾದ ಗ್ರಾಮ ಪಂಚಾಯತಿಗಳಿಗೆ 2014ರ ಫೆಬ್ರವರಿಯಲ್ಲಿ ಪುರಸ್ಕಾರ ನೀಡಲಾಗುವುದು. ಈ ಪ್ರಶಸ್ತಿಗೆ ಜನವರಿ 1 ರಿಂದ 20 ರೊಳಗೆ ಗ್ರಾಮ ಪಂಚಾಯಿತಿಗಳು ಅರ್ಜಿ ಸಲ್ಲಿಸಬಹುದಾಗಿದೆ.
ಉದ್ದೇಶವೇನು?
ಸಂಪೂರ್ಣ ರಾಜ್ಯ ಸರ್ಕಾರದ ಪ್ರಾಯೋಜಿತ ಯೋಜನೆಯಾಗಿರುವ ‘ಗಾಂಧಿ ಗ್ರಾಮ ಪುರಸ್ಕಾರ’ ಯೋಜನೆ ಇದೇ ಆರ್ಥಿಕ ವರ್ಷದಿಂದ ಅಸ್ತಿತ್ವಕ್ಕೆ ಬಂದಿದೆ. ಉತ್ತಮ ಆಡಳಿತ ಮತ್ತು ಆರ್ಥಿಕ ಸಾಧನೆ ಮಾಡಿದ ಪ್ರತಿ ತಾಲೂಕಿನ ಒಂದು ಗ್ರಾಮ ಪಂಚಾಯತಿಯನ್ನು ಆಯ್ಕೆ ಮಾಡಿ 2 ಲಕ್ಷ ರೂ. ಉತ್ತೇಜಕ ಅನುದಾನ ನೀಡುವ ಮೂಲಕ ಮತ್ತಷ್ಟು ಉತ್ತಮ ಕಾರ್ಯಸಾಧನೆಗೆ ಅವಕಾಶ ಮಾಡಿಕೊಡಬೇಕು. ಈ ಮೂಲಕ ಉಳಿದ ಗ್ರಾಮ ಪಂಚಾಯತಿಗಳಿಗೆ ಪ್ರೇರಣೆ ಸಿಗುವಂತಾಗಬೇಕು ಎನ್ನುವುದು ‘ಗಾಂಧಿ ಗ್ರಾಮ ಪುರಸ್ಕಾರ’ ಯೋಜನೆಯ ಉದ್ದೇಶ.
ಆಯ್ಕೆ ಹೇಗೆ?
ಉದ್ಯೋಗ ಖಾತರಿ ಯೋಜನೆ ಜಾರಿ, ಕುಡಿಯುವ ನೀರಿನ ವ್ಯವಸ್ಥೆ, ವಸತಿ ಯೋಜನೆಗಳ ಅನುಷ್ಠಾನ, ಶೌಚಾಲಯಗಳ ನಿರ್ಮಾಣ, ಶಾಸನಬದ್ಧ ಅನುದಾನದ ಬಳಕೆ, ತೆರಿಗೆ ವಸೂಲಿ, ತೆರಿಗೆ ಪರಿಷ್ಕರಣೆ, ಗ್ರಾಮ ಪಂಚಾಯತಿ ಆಸ್ತಿಗಳ ಒತ್ತುವರಿ ತೆರವು, ವಿದ್ಯುತ್‌ ಬಿಲ್‌ ಪಾವತಿ, ಮಾಸಿಕ ಗ್ರಾಮ ಸಭೆಗಳ ಆಯೋಜನೆ, ಅವುಗಳ ವಿಡಿಯೋ ಚಿತ್ರೀಕರಣ, ಕಡತಗಳ ನಿರ್ವಹಣೆ ಸೇರಿದಂತೆ ಪ್ರಮುಖ ಆಡಳಿತ ಮತ್ತು ಆರ್ಥಿಕ ಅಂಶಗಳನ್ನು ಪ್ರಗತಿ ಸೂಚ್ಯಂಕ ಹಾಗೂ ಸಾಂಸ್ಥಿಕ ಸೂಚ್ಯಂಕ ಎಂದು ವಿಂಗಡಿಸಿ ತಲಾ 75 ಅಂಕಗಳಂತೆ ಒಟ್ಟು 150 ಅಂಕಗಳನ್ನು ನಿಗದಿಪಡಿಸಲಾಗಿದೆ. ಪ್ರತಿಯೊಂದು ಅಂಶಕ್ಕೆ ಪ್ರತ್ಯೇಕ ಅಂಕಗಳನ್ನು ನಿಗದಿಪಡಿಸಲಾಗಿದ್ದು, ಇದರಲ್ಲಿ ಅತಿ ಹೆಚ್ಚು ಅಂಕ ಪಡೆದ ಗ್ರಾ.ಪಂ.ಗಳಿಗೆ ಪುರಸ್ಕಾರ ನೀಡಲಾಗುತ್ತದೆ.
ಜನವರಿ 1ರಿಂದ ಅರ್ಜಿ ಆಹ್ವಾನ:
ಪುರಸ್ಕಾರ ಪಡೆಯಬೇಕಾದರೆ ಗ್ರಾಮ ಪಂಚಾಯತಿಯು 90ರಿಂದ 135 ಅಂಕಗಳನ್ನು ಪಡೆಯಬೇಕು. ಪುರಸ್ಕಾರಕ್ಕಾಗಿ ಪ್ರತಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಗೂ ಪಿಡಿಒ ಜಂಟಿಯಾಗಿ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬೇಕು. ಪ್ರತಿ ವರ್ಷ ಜನವರಿ 1 ರಿಂದ 20ರೊಳಗೆ ಅರ್ಜಿ ಸಲ್ಲಿಸಲು ಅವಕಾಶವಿರುತ್ತದೆ. ಗ್ರಾಮ ಪಂಚಾಯಿತಿಗಳಿಂದ ಸಲ್ಲಿಕೆಯಾಗುವ ಆನ್‌ಲೈನ್‌ ಅರ್ಜಿಗಳ ಪೈಕಿ ಅಂಕಗಳ ಆಧಾರದಲ್ಲಿ ಮೊದಲ ಐದು ಸ್ಥಾನಗಳನ್ನು ಪಡೆದ ಗ್ರಾಮ ಪಂಚಾಯಿತಿಗಳನ್ನು ಮೂರನೇ ವ್ಯಕ್ತಿಯಿಂದ ಮೌಲ್ಯಮಾಪನ ಮಾಡಿಸಿ ಅಂತಿಮ ಆಯ್ಕೆ ನಡೆಸಲಾಗುತ್ತದೆ. ಗಾಂಧಿ ಗ್ರಾಮ ಪುರಸ್ಕಾರ ಯೋಜನೆ ಜಾರಿಗೆ ಈಗಾಗಲೇ ಅಧಿಕೃತ ಸರ್ಕಾರಿ ಆದೇಶ ಹೊರಡಿಸಲಾಗಿದೆ. ಗ್ರಾಮ ಪಂಚಾಯತಿಗಳಲ್ಲಿ ಆಡಳಿತ ನಿರ್ವಹಣೆ ಹಾಗೂ ಆರ್ಥಿಕ ಸ್ಥಿತಿಯನ್ನು ಉತ್ತಮಗೊಳಿಸುವುದೇ ಈ ಯೋಜನೆ ಉದ್ದೇಶ. ಈ ವರ್ಷ ಆಯ್ಕೆಯಾಗುವ ಗ್ರಾಮ ಪಂಚಾಯಿತಿಗಳಿಗೆ ಫೆಬ್ರವರಿಯಲ್ಲಿ ಪುರಸ್ಕಾರ ನೀಡಲಾಗುವುದು.

ವಿಶೇಷ ಗೋಧಾಮ ನಿರ್ಮಾಣಕ್ಕೆ ಚಿಂತನೆ ನಡೆಸಿರುವ ಗುಜರಾತ್ ಸರ್ಕಾರ
godhamaಗೋ ಆಧಾರಿತ ಆರ್ಥಿಕತೆಯನ್ನು ಉತ್ತೇಜಿಸುವ ಸಲುವಾಗಿ ಗೋವುಗಳಿಗಾಗಿ ಮೀಸಲಿಟ್ಟ ಧಾಮವೊಂದನ್ನು ನಿರ್ಮಿಸಲು ಗುಜರಾತ್‌ ಸರ್ಕಾರ ಚಿಂತನೆ ನಡೆಸಿದೆ. ಮಹಾತ್ಮಾ ಗಾಂಧೀಜಿ ಅವರ ಜನ್ಮ ಸ್ಥಳವಾದ ಪೋರ್‌ಬಂದರ್‌ ಜಿಲ್ಲೆಯ ರಣವವ್‌ ತಾಲೂಕಿನ ಧರ್ಮಪುರ ಗ್ರಾಮದಲ್ಲಿ ಈ ವಿಶೇಷ ಗೋ ಧಾಮ ನಿರ್ಮಾಣಗೊಳ್ಳಲಿದೆ. ಒಂದು ವೇಳೆ ಈ ಯೋಜನೆ ಕಾರ್ಯರೂಪಕ್ಕೆ ಬಂದರೆ, ಗೋ ಹತ್ಯೆ ನಿಷೇಧ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸಿರುವ ಗುಜರಾತ್‌, ಮಧ್ಯಪ್ರದೇಶದ ಬಳಿಕ ಗೋವುಗಳಿಗಾಗಿ ಆಶ್ರಯ ತಾಣ ನಿರ್ಮಿಸಿದ ಎರಡನೇ ರಾಜ್ಯ ಎನ್ನುವ ಹೆಗ್ಗಳಿಕೆಗೆ ಪಾತ್ರವಾಗಲಿದೆ. ಆದರೆ ಕೆಲವೊಂದು ವಿಶಿಷ್ಠತೆಗಳನ್ನು ಗಮನಿಸಿದರೆ ಇಂತಹ ಧಾಮ ವಿಶ್ವದಲ್ಲಿಯೇ ಪ್ರಥಮವಾಗಲಿದೆ ಎಂದು ಸರ್ಕಾರ ಹೇಳಿದೆ.
‘ಗೋ ಧಾಮ ಯೋಜನೆ’:
ಯೋಜನೆಗೆ ಸರ್ಕಾರ ಈ ಸಾಲಿನ ಬಜೆಟ್‌ನಲ್ಲಿ 20 ಕೋಟಿ ಮೀಸಲಿಟ್ಟಿದೆ. ಮುಂದಿನ ದಿನಗಳಲ್ಲಿ ಧಾಮ ನಿರ್ವಹಣೆಗೆ ಪ್ರತಿವರ್ಷ ಒಂದು ಕೋಟಿ ರೂ. ಒದಗಿಸಲಾಗುವುದು. ಈ ನಿಟ್ಟಿನಲ್ಲಿ ಅಗತ್ಯವಿರುವ ಜಾಗವನ್ನು ವಶಪಡಿಸಿಕೊಳ್ಳಲಾಗಿದ್ದು, ಪರಿಣತರು ಅಧ್ಯಯನ ನಡೆಸಿ ವರದಿ ಸಲ್ಲಿಸಲಿದ್ದಾರೆ. ವರದಿ ಬಂದ ಬಳಿಕ ಧಾಮ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಲಾಗುವುದು ಎಂದು ರಾಜ್ಯ ಗೋಸೇವಾ ಆಯೋಗದ ಮುಖ್ಯಸ್ಥ ವಲ್ಲಭ್‌ ಕಥಿರಿಯಾ ಹೇಳಿದ್ದಾರೆ.
ಗೋ ಧಾಮದ ವಿಶೇಷತೆ:
ಗೋ ಧಾಮ 1200 ಹೆಕ್ಟೇರ್‌ ವಿಸ್ತೀರ್ಣದಲ್ಲಿ ನಿರ್ಮಾಣವಾಗುವ ಸಾಧ್ಯತೆ ಇದೆ. ಇದು 10 ಸಾವಿರ ಗೋವುಗಳಿಗೆ ಆಶ್ರಯ ಕಲ್ಪಿಸಲಿದೆ. ಆಶ್ರಯ ತಾಣ ಆರಂಭವಾದ ಕೆಲ ಕಾಲದ ಬಳಿಕ ಅಲ್ಲಿ ಸಂಶೋಧನಾ ಕೇಂದ್ರವೊಂದನ್ನು ಸ್ಥಾಪಿಸಲಾಗುವುದು. ದೇಶದಲ್ಲಿ ಗೋವು ಆಧಾರಿತ ಆರ್ಥಿಕತೆಯನ್ನು ಉತ್ತೇಜಿಸುವುದು ಈ ಯೋಜನೆಯ ಪ್ರಮುಖ ಉದ್ದೇಶವಾಗಿದೆ. ಗೋವಿನ ಹಾಲು, ಸಗಣಿ ಮತ್ತು ಮೂತ್ರದಿಂದ ತಯಾರಾಗುವ ಉತ್ಪನ್ನಗಳನ್ನು ಹೇರಳ ಪ್ರಮಾಣದಲ್ಲಿ ಉತ್ಪಾದಿಸಲಾಗುತ್ತದೆ. ಅಲ್ಲದೆ, ಜೈವಿಕ ಗೊಬ್ಬರ, ಜೈವಿಕ ಕೀಟನಾಶಕಗಳನ್ನು ಕೂಡ ಧಾಮದಲ್ಲಿ ತಯಾರು ಮಾಡಲಾಗುವುದು. ಗೋ ಉತ್ಪನ್ನಗಳಿಂದ ವಾರ್ಷಿಕವಾಗಿ ರಸಗೊಬ್ಬಕ್ಕೆ ಕೇಂದ್ರ ಸರ್ಕಾರ ನೀಡುತ್ತಿರುವ ಸಹಾಯಧನದಲ್ಲಿ 1.45 ಲಕ್ಷ ಕೋಟಿ ರೂ. ಉಳಿತಾಯ ಮಾಡಬಹುದಾಗಿದೆ ಎಂಬುದು ಗುಜರಾತ್‌ ಸರ್ಕಾರದ ವಾದ.

ಭಾಷಾ ವಿಜ್ಞಾನಿ ಡಾ.ಡಿ.ಎನ್‌. ಶಂಕರ ಭಟ್‌ ರವರಿಗೆ 2012ನೇ ಸಾಲಿನ ಪಂಪ ಪ್ರಶಸ್ತಿ
pampa awardಭಾಷಾ ವಿಜ್ಞಾನಿ ಡಾ.ಡಿ.ಎನ್‌. ಶಂಕರ ಭಟ್‌ ಅವರು 2012ನೇ ಸಾಲಿನ ಪಂಪ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಮೂಲತ ಪುತ್ತೂರು ತಾಲ್ಲೂ ಕಿನ ಬೆಟ್ಟಪಾಡಿ ಗ್ರಾಮದವ ರಾಗಿರುವ 78 ವರ್ಷದ ಶಂಕರ ಭಟ್‌, ತಾಲ್ಲೂಕಿನ ಹಳೆ ಹೆಗ್ಗೋಡು ಗ್ರಾಮದಲ್ಲಿ ನೆಲೆಸಿದ್ದಾರೆ.
ಶಂಕರ್ ಭಟ್ ಬಗ್ಗೆ:
ಮಂಗಳೂರಿನ ಸೇಂಟ್‌ ಅಲೋ ಷಿಯಸ್‌ ಕಾಲೇಜಿನಲ್ಲಿ ಇಂಟರ್‌ ಮೀಡಿ ಯಟ್‌ ಮುಗಿಸಿದ ಅವರು ಚೆನ್ನೈನ (ಆಗಿನ ಮದರಾಸು) ವಿವೇಕಾ ನಂದ ಕಾಲೇಜಿನಲ್ಲಿ ಸಂಸ್ಕೃತದಲ್ಲಿ ಎಂ.ಎ ಪದವಿ ಪೂರೈಸಿದರು. ನಂತರ ಪುಣೆಯ ಪೂನಾ ವಿಶ್ವವಿದ್ಯಾ ಲಯದಲ್ಲಿ ಭಾಷಾ ಶಾಸ್ತ್ರದಲ್ಲಿ ಡಾಕ್ಟರೇಟ್‌ ಪದವಿ ಗಳಿಸಿದರು.
ಕೃತಿಗಳು:
  • ‘ಕನ್ನಡ ನುಡಿ ನಡೆದು ಬಂದ ದಾರಿ’, ‘ಕನ್ನಡಕ್ಕೆ ಬೇಕು ಕನ್ನಡ ವ್ಯಾಕರಣ’ ‘ಭಾಷೆಯ ಬಗ್ಗೆ ನೀವೇನು ಬಲ್ಲಿರಿ’ ‘ಕನ್ನಡ ಬರಹವನ್ನು ಸರಿಪಡಿಸೋಣ’, ‘ಮಾತಿನ ಒಳಗುಟ್ಟು’, ‘ಇಂಗ್ಲೀಷ್‌ ಪದಗಳಿಗೆ ಕನ್ನಡದ್ದೆ ಪದಗಳು’, ‘ಕನ್ನಡ ಬರಹದ ಸೊಲ್ಲರಿಮೆ’ ಸೇರಿದಂತೆ 77ಕ್ಕೂ ಹೆಚ್ಚು ಕೃತಿಗಳನ್ನು ಶಂಕರ ಭಟ್‌ ರಚಿಸಿದ್ದಾರೆ.
  • ಶಂಕರ ಭಟ್‌ ಅವರ ‘ಪ್ರನೌನ್‌-ಎ ಲಿಂಗ್ವಿಸ್ಟಿಕ್‌ ಸ್ಟಡಿ’ ಎಂಬ ಕೃತಿಯನ್ನು ಆಕ್ಸ್‌ ಪರ್ಡ್‌ ಪ್ರಕಾಶನ ಪ್ರಕಟಿಸಿದೆ. ‘ಗ್ರಮ್ಯಾಟಿಕಲ್‌ ರಿಲೇಷನ್ಸ್‌’ ಎಂಬ ಕೃತಿಯನ್ನು ಲಂಡನ್‌ ಹಾಗೂ ನ್ಯೂಯಾರ್ಕ್‌ನ ಪ್ರಕಾಶನ ಸಂಸ್ಥೆಗಳು ಹೊರ ತಂದಿದ್ದರೆ, ‘ಮಣಿ ಪುರಿ ಗ್ರಾಮರ್‌’ ಕೃತಿಯನ್ನು ಜರ್ಮನಿಯ ಪ್ರಕಾಶನ ಸಂಸ್ಥೆ ಪ್ರಕಟಿಸಿದೆ. ಹಾಲೆಂಡ್‌, ಸಿಂಗಪುರಗಳ ಪ್ರಕಾಶನ ಸಂಸ್ಥೆಗಳೂ ಇವರ ಕೃತಿಗಳನ್ನು ಹೊರ ತಂದಿವೆ.
  • ಮೈಸೂರಿನಲ್ಲಿ ಸ್ವಂತ ಮನೆ ಹೊಂದಿದ್ದರೂ ಬರವಣಿಗೆ ಹಾಗೂ ಸಂಶೋಧನೆಗೆ ಪ್ರಶಾಂತ ವಾತಾವರಣ ಬೇಕು ಎನ್ನುವ ಕಾರಣಕ್ಕೆ ಶಂಕರ ಭಟ್‌, ಕಳೆದ ಹತ್ತು ವರ್ಷ ಗಳಿಗೂ ಹೆಚ್ಚು ಕಾಲದಿಂದ ಹಳೆ ಹೆಗ್ಗೋಡು ಗ್ರಾಮದಲ್ಲಿ ಪತ್ನಿ ಭಾರತಿ ಭಟ್‌ ಅವರೊಂದಿಗೆ ನೆಲೆಸಿದ್ದಾರೆ.
  • ಕೆಲವು ಕಾಲ ಕುಪ್ಪಳ್ಳಿ, ಹುಂಚ, ಆರಗ ಗ್ರಾಮಗಳಲ್ಲಿ ನೆಲೆಸಿದ್ದ ಅವರು ಈಚೆಗೆ ಮತ್ತೆ ಇದೇ ತಾಲ್ಲೂಕಿನ ಮುಂಗರವಳ್ಳಿ ಗ್ರಾಮಕ್ಕೆ ಬಂದು ನೆಲೆಸಿದ್ದಾರೆ.
  • 2010ನೇ ಸಾಲಿನಲ್ಲಿ ಹಂಪಿಯ ಕನ್ನಡ ವಿಶ್ವವಿದ್ಯಾಲಯ, ಶಂಕರ ಭಟ್ ಅವರಿಗೆ ನಾಡೋಜ ಗೌರವ ಪ್ರದಾನ ಮಾಡಿತ್ತು. ಸದ್ಯಕ್ಕೆ ಭಟ್‌ ಅವರು ‘ಕನ್ನಡದಲ್ಲಿ ಹೊಸ ಪದಗಳನ್ನು ಕಟ್ಟುವ ಬಗೆ’ ಎನ್ನುವ ಕೃತಿ ರಚನೆಯಲ್ಲಿ ತೊಡಗಿದ್ದಾರೆ.

 

* ಪ್ರಚಲಿತ ವಿದ್ಯಮಾನಗಳು ಡಿಸೆಂಬರ್ 12, 2013

ಬಿಐಎಎಲ್ ಗೆ ‘ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ’ ಎಂದು ಮರುನಾಮಕರಣ
ಪ್ರಚಲಿತ ವಿದ್ಯಮಾನಗಳು ಡಿಸೆಂಬರ್ 12, 2013ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಕೆಂಪೇಗೌಡರ ಹೆಸರು ಇಡಬೇಕು ಎಂಬುದು ನಾಡಿನ ಜನರ ಬಹುದಿನಗಳ ಬೇಡಿಕೆಯಾಗಿತ್ತು. ಜನರ ಭಾವನೆಯನ್ನು ಗೌರವಿಸುವ ಕೆಲಸವನ್ನು ಸರ್ಕಾರ ಈಗ ಮಾಡಿದೆ. ಬಿಐಎಎಲ್ ಇನ್ನು ಮುಂದೆ “ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣ” ಎಂದು ಕರೆಯಲಾಗುತ್ತದೆ.
ಟರ್ಮಿನಲ್ ಸಾಮರ್ಥ್ಯ:
  • ಟರ್ಮಿನಲ್‌ ವಿಸ್ತರಣೆಯಿಂದ ಪ್ರಯಾ ಣಿಕರನ್ನು ನಿರ್ವಹಿಸುವ ವಿಮಾನ ನಿಲ್ದಾಣದ ವಾರ್ಷಿಕ ಸಾಮರ್ಥ್ಯ ಎರಡು ಕೋಟಿಗೆ ಹೆಚ್ಚಲಿದೆ. ಇದುವರೆಗೆ ಈ ಸಾಮರ್ಥ್ಯ ಸುಮಾರು 1.20 ಕೋಟಿಯಷ್ಟಿತ್ತು. ಭವಿಷ್ಯದಲ್ಲಿ ವಾರ್ಷಿಕ ಸಾಮರ್ಥ್ಯವನ್ನು 5.5 ಕೋಟಿಗೆ ಹೆಚ್ಚಿಸುವ ಉದ್ದೇಶ ಹೊಂದಲಾಗಿದೆ.
  • ವಿಸ್ತರಣಾ ಯೋಜನೆಗೆ 1,500 ಕೋಟಿ ರೂ. ವೆಚ್ಚವಾಗಿದೆ. ನ್ಯಾಷನಲ್‌ ಕೌನ್ಸಿಲ್‌ ಆಫ್ ಅಪ್ಲೆ„ಡ್‌ ಎಕಾನಾಮಿಕ್‌ ರಿಸರ್ಚ್‌ (ಎನ್‌ಐಎಇಆರ್‌) ನಡೆಸಿದ ಸಮೀಕ್ಷೆ ಪ್ರಕಾರ ಒಬ್ಬ ವಿಮಾನ ಪ್ರಯಾಣಿಕನಿಂದ ಸರಾಸರಿ 11,500 ರೂ. ಆದಾಯ ಬರುತ್ತದೆ. ಇದನ್ನು ಮಾನದಂಡವಾಗಿ ಇಟ್ಟುಕೊಂಡರೆ ಎರಡು ಕೋಟಿ ಪ್ರಯಾಣಿಕರಿಂದ ರಾಜ್ಯಕ್ಕೆ 23,000 ಕೋಟಿ ರೂ. ವಾರ್ಷಿಕ ಆದಾಯ ಲಭಿಸುತ್ತದೆ.
  • ವಿಮಾನ ನಿಲ್ದಾಣ ಸದ್ಯಕ್ಕೆ 7,500 ಜನರಿಗೆ ನೇರ ಉದ್ಯೋಗ ನೀಡಿದೆ. ಇನ್ನು ಪರೋಕ್ಷವಾಗಿ ದೊರೆಯುವ ಉದ್ಯೋಗ ದುಪ್ಪಟ್ಟು.
  • 2008ರ ಮೇ 24ರಂದು ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆರಂಭವಾಗಿದ್ದು, ಇದುವರೆಗೆ ಸುಮಾರು 6.4 ಕೋಟಿ ಪ್ರಯಾಣಿಕರು ಈ ನಿಲ್ದಾಣದ ಮೂಲಕ ಪ್ರಯಾಣ ಬೆಳೆಸಿದ್ದಾರೆ.
  • ಪ್ರಯಾಣಿಕರ ಸಂಖ್ಯೆಯಲ್ಲಿ ದೆಹಲಿ ಮತ್ತು ಮುಂಬೈ ಮೊದಲ ಎರಡು ಸ್ಥಾನಗಳನ್ನು ಪಡೆದಿವೆ. ಮೂರನೇ ಸ್ಥಾನಕ್ಕೆ ಬೆಂಗಳೂರು ಮತ್ತು ಚೆನ್ನೈ ನಡುವೆ ಪೈಪೋಟಿ ನಡೆದಿದೆ. ಮುಂದಿನ ವರ್ಷದ ವೇಳೆಗೆ ಚೆನ್ನೈ ನಮ್ಮೊಂದಿಗೆ ಪೈಪೋಟಿ ನಡೆಸಲಾಗದಷ್ಟು ಮುಂದೆ ಹೋಗಲಿದ್ದೇವೆ.

ಚಂದ್ರನ ಮೇಲೆ ಶೋಧ ಉಪಗ್ರಹ ಇಳಿಸಿದ ಜಗತ್ತಿನ ಮೂರನೇ ರಾಷ್ಟ್ರವಾಗಿ ಚೀನಾ
china satelliteಚೀನಾದ ಚಂದ್ರಶೋಧ ಉಪಗ್ರಹ ‘ಚಾಂಗ್‌ ಇ-3′ ತನ್ನನ್ನು ಹೊತ್ತೂಯ್ದಿರುವ ನೌಕೆಯಿಂದ ಬೇರ್ಪಟ್ಟು ಚಂದ್ರನ ಮೇಲ್ಮೆ„ ಮೇಲೆ ಸಲೀಸಾಗಿಳಿಯಿತು. ಚಂದ್ರನ ಸಡಿಲ ಮಣ್ಣಿನ ಮೇಲೆ ಆಳವಾದ ಗುರುತುಗಳನ್ನು ಮೂಡಿಸಿರುವ ಅದು, ಉಡಾವಣೆಗೊಂಡ 12 ದಿನಕ್ಕೆ ಸಲೀಸಾಗಿ ಚಂದ್ರನ ಮೇಲಿಳಿದಿದೆ. ಸಲೀಸಾಗಿ ಚಂದ್ರನ ಮೇಲೆ ಶೋಧ ಉಪಗ್ರಹ ಇಳಿಸಿದ ಜಗತ್ತಿನ ಮೂರನೇ ರಾಷ್ಟ್ರ ಎಂಬ ಗೌರವಕ್ಕೆ ಚೀನಾ ಪಾತ್ರವಾಗಿದೆ. ಈ ಮೊದಲು ಅಮೆರಿಕ ಮತ್ತು ಸೋವಿಯಟ್‌ ರಷ್ಯಾ ಮಾತ್ರ ಈ ಸಾಧನೆ ಮಾಡಿದ್ದವು.
40 ವರ್ಷದ ನಂತರದ ಸಾಧನೆ:
ಉಪಗ್ರಹ ಅಂತರಿಕ್ಷ ನೌಕೆಯಿಂದ ಬೇರ್ಪಟ್ಟ ನಂತರ, ಅಂತರಿಕ್ಷ ನೌಕೆ ಮತ್ತು ಉಪಗ್ರಹ ಪರಸ್ಪರ ಚಿತ್ರಗಳನ್ನು ತೆಗೆದುಕೊಂಡಿವೆ. ಅವು ಭೂಮಿಗೆ ರವಾನೆಯಾಗಿವೆ. ಅಮೆರಿಕ, ರಷ್ಯಾಗಳು ಚಂದ್ರನ ಮೇಲೆ ಶೋಧ ಉಪಗ್ರಹ ಇಳಿಸಿದ 40 ವರ್ಷಗಳ ನಂತರ ಚೀನಾ ಸಾಧನೆ ಮಾಡಿದೆ.
ಸೇಫ್ ಲ್ಯಾಂಡಿಂಗ್‌ ಅಂದರೇನು?
ಯಾವುದೇ ಉಪಗ್ರಹ ನಿಗದಿತ ಗುರಿಯಲ್ಲಿ ಇಳಿಯುವಾಗ ಅದರ ಯಾವುದೇ ಪರಿಕರಗಳಿಗೆ ಹಾನಿಯಾಗದಿದ್ದರೆ ಅದನ್ನು ಸಲೀಸು ಇಳಿಕೆ ಎನ್ನಲಾಗುತ್ತದೆ. ಚೀನಾದ ಉಪಗ್ರಹ ಅದನ್ನು ಸಾಧಿಸಿದೆ.
ಸ್ವನಿಯಂತ್ರಿತ ಚಾಂಗ್‌ ಇ-3:
ಯಶಸ್ವಿಯಾಗಿ ‘ಚಾಂಗ್‌ ಇ-3′ ಉಪಗ್ರಹಸಹಿತ ಚಂದ್ರನ ಮೇಲಿಳಿದಿದ್ದ ಚಂದ್ರಶೋಧ ನೌಕೆ ಉಪಗ್ರಹದಿಂದ ಬೇರ್ಪಟ್ಟಿದೆ. ಚಂದ್ರನ ಮೇಲಿಳಿದಿರುವ ಚಾಂಗ್‌ಇ-3 ಸ್ವನಿಯಂತ್ರಿತವಾಗಿದೆ. ದೂರ, ವ್ಯಾಪ್ತಿಮಿತಿ ಮತ್ತು ನಿರ್ದಿಷ್ಟ ಗುರಿ ಮೇಲಿಳಿಯುವುದು ಸೇರಿದಂತೆ ಎಲ್ಲವನ್ನು ತನ್ನಷ್ಟಕ್ಕೆ ತಾನೇ ನಿಯಂತ್ರಿಸಿಕೊಳ್ಳುವ ವ್ಯವಸ್ಥೆ ಹೊಂದಿದೆ.

ಪೆಟ್ರೋಲ್ ಗೆ ಪರ್ಯಾಯ ಇಂಧನವನ್ನು ಸಂಶೋಧಿಸಿದ ಪ್ರೊ.ಜಿ.ಕೆ.ಸೂರ್ಯಪ್ರಕಾಶ್
surya prakashಪೆಟ್ರೋಲ್‌ಗೆ ಪರ್ಯಾಯವಾಗಿ ಮೆಥನಾಲ್‌ ಇಂಧನವನ್ನು ಬಳಸಲು ಅನುಕೂಲವಾಗುವಂತೆ ಸಂಶೋಧನೆ ಮಾಡಿರುವ  ಅಮೆರಿಕದಲ್ಲಿ ನೆಲೆಸಿರುವ ಹೆಸರಾಂತ ವಿಜ್ಞಾನಿಯಾಗಿರುವ ಹೆಮ್ಮೆಯ ಕನ್ನಡಿಗ ಪ್ರೊ| ಜಿ.ಕೆ. ಸೂರ್ಯಪ್ರಕಾಶ್‌ ಪೆಟ್ರೋಲ್‌ಗೆ ಪರ್ಯಾಯವಾದ, ಪೆಟ್ರೋಲ್‌ನಷ್ಟೇ ಪರಿಣಾಮಕಾರಿಯಾದ ಮೆಥನಾಲ್‌ ಇಂಧನವನ್ನು ಸೃಜಿಸಿದ್ದಾರೆ.
ಅಗ್ಗದ ಇಂಧನ:
ಈಗಾಗಲೇ ಚೀನಾ ಮತ್ತು ಇಸ್ರೇಲ್‌ನಲ್ಲಿ ಈ ತಂತ್ರಜ್ಞಾನ ಬಳಸಿಕೊಂಡು ಉತ್ಪಾದಿಸುತ್ತಿರುವ ಪರ್ಯಾಯ ಪೆಟ್ರೋಲ್‌ನಿಂದ ವಾಹನಗಳು ಓಡುತ್ತಿವೆ. ‘ತೆಂಗಿನ ನಾರು, ಚಿಪ್ಪು, ಮನೆಯಲ್ಲಿ ಉತ್ಪತ್ತಿಯಾಗುವ ತ್ಯಾಜ್ಯ, ಪ್ಲಾಸ್ಟಿಕ್‌, ಕಾರ್ಖಾನೆಗಳು ಉಗುಳುವ ಇಂಗಾಲದ ಡೈ ಆಕ್ಸೆ„ಡ್‌ ಹೀಗೆ ಯಾವುದೇ ವಸ್ತು ಬಳಸಿಕೊಂಡು ಪೆಟ್ರೋಲ್‌ಗಿಂತ ಅಗ್ಗದ ಇಂಧನ ತಯಾರಿಸಬಹುದು. ವಿದ್ಯುತ್‌ ಕೂಡ ಉತ್ಪಾದಿಸಬಹುದು. ಇಡೀ ಪ್ರಪಂಚವನ್ನು ಬಾಧಿಸುತ್ತಿರುವ ಜಾಗತಿಕ ತಾಪಮಾನ ಸಮಸ್ಯೆಯನ್ನೂ ನಿವಾರಿಸಬಹುದು’ ಎಂಬುದನ್ನು ಸತತ 30 ವರ್ಷಗಳ ಕಾಲ ಸಂಶೋಧನೆ ನಡೆಸಿ ತೋರಿಸಿರುವ ಅವರಿಗೆ ಇತ್ತೀಚೆಗಷ್ಟೇ ಇಸ್ರೇಲ್‌ ಸರ್ಕಾರ ಬರೋಬ್ಬರಿ 6 ಕೋಟಿ ರೂ. ಮೊತ್ತದ ಬಹುಮಾನ ನೀಡಿ ಸತ್ಕರಿಸಿದೆ.
ಭಾರತಕ್ಕೆ ಆಹ್ವಾನ:
ಇವರ ಸಂಶೋಧನೆಯ ಮಹತ್ವ ತಿಳಿದ ರಿಲಯನ್ಸ್‌ ಸಮೂಹದ ಒಡೆಯ ಮುಕೇಶ್‌ ಅಂಬಾನಿ ಅವರು ತಮ್ಮ ನಿವಾಸಕ್ಕೆ ಸೂರ್ಯಪ್ರಕಾಶ್‌ ಅವರನ್ನು ಆಹ್ವಾನಿಸಿ ತಮ್ಮ ತಮ್ಮ ಪೆಟ್ರೋಲಿಯಂ ಉದ್ಯಮಕ್ಕೆ ಪರ್ಯಾಯವಾಗಿರುವ ಮೆಥನಾಲ್‌ ಇಂಧನದ ಬಗ್ಗೆ ಮಾಹಿತಿಪಡೆದರು. ಟಾಟಾ ಸಮೂಹ ಕಂಪನಿಗಳ ಮಾಲೀಕ ರತನ್‌ ಟಾಟಾ ಅವರು ಮುಖಾಮುಖೀ ಚರ್ಚೆ ನಡೆಸಿ ಈ ಬಗ್ಗೆ ವಿವರಣೆ ಪಡೆದುಕೊಂಡರು. ಯೋಜನಾ ಆಯೋಗದ ಉಪಾಧ್ಯಕ್ಷ ಮೊಂಟೆಕ್‌ ಸಿಂಗ್‌ ಅಹ್ಲುವಾಲಿಯಾ ಕೂಡ ಕುತೂಹಲದಿಂದ ಸಂಶೋಧನೆ ವಿವರ ಪಡೆದರು.
3 ದಶಕಗಳ ಶ್ರಮ:
ಸದ್ಯ ಇಡೀ ವಿಶ್ವ ತನ್ನ ಇಂಧನ ಅಗತ್ಯತೆಗಳಿಗೆ ಶೇ.80ರಷ್ಟು ಫಾಸಿಲ್‌ (ಪಳೆಯುಳಿಕೆ) ಇಂಧನಗಳ ಮೇಲೆ ಅವಲಂಬಿತವಾಗಿದೆ. ಇದು ನವೀಕರಿಸಲಾಗದಂತದ್ದು ಅರ್ಥಾತ್‌ ಮುಂದೊಂದು ದಿನ ಖಾಲಿಯಾಗುವಂತದ್ದು. ಈ ಇಂಧನ ಬಳಸಿದರೆ ಕಾರ್ಬನ್‌ ಡೈ ಆಕ್ಸೆ„ಡ್‌ ಉತ್ಪತ್ತಿಯಾಗಿ ವಾಯುಮಾಲಿನ್ಯ ಉಂಟಾಗುತ್ತದೆ (ಇಡೀ ವಿಶ್ವದಲ್ಲೇ ಚೀನಾ ಅತಿ ಹೆಚ್ಚು ಕಾರ್ಬನ್‌ ಡೈ ಆಕ್ಸೆ„ಡ್‌ ಉಗುಳುತ್ತಿದೆ. ಇದರ ಪರಿಣಾಮವಾಗಿ ಇತ್ತೀಚೆಗೆ ಶಾಂಘೈನಲ್ಲಿ ಕೆಲ ದಿನಗಳ ಕಾಲ ಶಾಲೆಗಳನ್ನು ಮುಚ್ಚಲಾಗಿತ್ತು.). ವಾತಾವರಣದಲ್ಲಿ ಇಂಗಾಲದ ಪ್ರಮಾಣ ಹೆಚ್ಚುವುದರಿಂದ ಜಾಗತಿಕ ತಾಪಮಾನ ಹೆಚ್ಚುವುದಷ್ಟೇ ಅಲ್ಲ, ಸಮುದ್ರದ ನೀರು ಆಮ್ಲೀಕರಣಗೊಂಡು ಹವಳದ ರಾಶಿ (ಕೋರಲ್‌ ರೀಫ್) ನಶಿಸುತ್ತದೆ.  ಇದರೊಂದಿಗೆ ವಿದ್ಯುತ್‌ ಕೂಡ ಉತ್ಪಾದಿಸಬಹುದು ಎಂಬುದನ್ನು 30 ವರ್ಷಗಳ ಕಾಲ ಸಂಶೋಧನೆ ನಡೆಸಿ ಶೋಧಿಸಲಾಗಿದೆ. ಈಗಾಗಲೇ ಚೀನಾದಲ್ಲಿ ಶೇ.10ರಷ್ಟು ವಾಹನಗಳು ಮೆಥನಾಲ್‌ನಿಂದಲೇ ಓಡುತ್ತಿವೆ. 2018ರ ಹೊತ್ತಿಗೆ ಪೆಟ್ರೋ ರಾಸಾಯನಿಕಗಳ ಮೇಲಿನ ಅವಲಂಬನೆ ಕಡಿದುಕೊಂಡು ಮೆಥನಾಲ್‌ ಅನ್ನು ಪರ್ಯಾಯವಾಗಿ ಬಳಸುವ ನಿಟ್ಟಿನಲ್ಲಿ ಚೀನಾ ಮುನ್ನುಗ್ಗುತ್ತಿದೆ ಎಂದು ಎಚ್ಚರಿಸುತ್ತಾರೆ. ಈ ಹೊಸ ಸಂಶೋಧನೆ ಬಳಸಿ ಇಸ್ರೇಲ್‌ ಈಗಾಗಲೇ ವಿದ್ಯುತ್ಛಕ್ತಿ ತಯಾರಿಸುತ್ತಿದೆ.

ಪ್ರಚಲಿತ ವಿದ್ಯಮಾನಗಳು ಡಿಸೆಂಬರ್ 11, 2013


ಭಾರತಕ್ಕೆ ಆಗಮಿಸುವ ಪಾಕಿಸ್ತಾನ ಪ್ರಯಾಣಿಗರಿಗೆ ಪೊಲೀಯೊ ಲಸಿಕೆ ಕಡ್ಡಾಯ
ಭಾರತಕ್ಕೆ ಪ್ರಯಾಣ ಬೆಳೆಸುವ ಪಾಕಿಸ್ತಾನಿಗರು ಇನ್ನು ಮುಂದೆ ಪೊಲೀಯೊ ಲಸಿಕೆ ಹಾಕಿಸಿಕೊಂಡರಷ್ಟೇ ಭಾರತಕ್ಕೆ ಪ್ರವೇಶ ಮಾಡಬಹುದು. ಇಂತಹ ಮಹತ್ವದ ನಿರ್ಣಯವೊಂದನ್ನು ಭಾರತ ಕೈಗೊಂಡಿದ್ದು, ಈ ಹೊಸ ನಿಯಮ ಜನವರಿಯಿಂದ ಜಾರಿಗೆ ಬರಲಿದೆ.
  • ಹೊಸ ನಿಯಮದ ಪ್ರಕಾರ ಭಾರತಕ್ಕೆ ಹೋಗಲು ಇಚ್ಚಿಸುವ ಮಕ್ಕಳು ಹಾಗೂ ವಯಸ್ಕರು ಕನಿಷ್ಠ 6 ವಾರಗಳು ಮುಂಚಿತವಾಗಿ ಪೊಲೋಯೊ ಲಸಿಕೆಯನ್ನು ಹಾಕಿಸಿಕೊಳ್ಳುವುದು ಕಡ್ಡಾಯ. ಪೊಲೀಯೊ ಲಸಿಕೆ ಹಾಕಿಸಿಕೊಂಡಿರುವ ಪ್ರಮಾಣ ಪತ್ರವನ್ನು ಹಾಜರಿಪಡಿಸಿದ್ದಲ್ಲಿ ಮಾತ್ರ ವೀಸಾ ದೊರೆಯಲಿದೆ. ಅಷ್ಟೇ ಅಲ್ಲ,  ಭಾರತದಿಂದ ಪಾಕಿಸ್ತಾನಕ್ಕೆ ಹೋಗುವವರು ಸಹ ಪೊಲೀಯೊ ಲಸಿಕೆಯನ್ನು ಹಾಕಿಸಿಕೊಳ್ಳುವುದು ಕಡ್ಡಾಯ ಮಾಡಲಾಗಿದೆ
  • ಈ ಹೊಸ ನಿಯಮ ಪಾಕಿಸ್ತಾನ ಸೇರಿದಂತೆ ವಿಶ್ವದಲ್ಲಿ ಇತರೆ ಪೊಲೀಯೊ ಪೀಡಿತ ದೇಶಗಳಿಗೆ ಅನ್ವಯವಾಗಲಿದೆ. ವಿಶ್ವದ ಪೊಲೀಯೊ ಪೀಡಿತ ದೇಶವೆಗಳಲ್ಲಿ ಒಂದಾಗಿರುವ ಪಾಕಿಸ್ತಾನ.
  • ಪ್ರಸ್ತುತ ಪಾಕಿಸ್ತಾನ, ನೈಜೀರಿಯಾ ಹಾಗೂ ಆಫ್ಘಾನಿಸ್ತಾನ ವಿಶ್ವದಲ್ಲಿ ಪೊಲೀಯೊ ಪೀಡಿತ ರಾಷ್ಟ್ರಗಳು ಎನಿಸಿವೆ.

ಮರಿಜುನಾ (Marijuna) ಉತ್ಪಾದನೆ, ಮಾರಾಟ ಹಾಗೂ ಬಳಕೆಯನ್ನು ಕಾನೂನು ಬದ್ಧಗೊಳಿಸಿದ ಉರುಘ್ವೆ
Marijunaಉರುಘ್ವೆ ಸಂಸತ್ತು ಮರಿಜುನಾ (ಡ್ರಗ್) ಉತ್ಪಾದನೆ, ಮಾರಾಟ ಹಾಗೂ ಬಳಕೆಯನ್ನು ಕಾನೂನು ಬದ್ಧಗೊಳಿಸುವ ಮಸೂದೆಗೆ ಅನುಮೋದನೆ ನೀಡಿದೆ. ಈ ಮೂಲಕ ಮರಿಜುನಾ ಉತ್ಪಾದನೆಯನ್ನು ಕಾನೂನೀಕರಣಗೊಳಿಸಿದ ವಿಶ್ವದ ಮೊದಲ ದೇಶವೆಂಬ ಹೆಗ್ಗಳಿಕೆಗೆ ಉರುಘ್ವೆ ಪಾತ್ರವಾಗಿದೆ.
  • ಮಸೂದೆಯ ಅನ್ವಯ 18 ವರ್ಷದ ತುಂಬಿದ ಉರುಘ್ವೆ ಪ್ರಜೆಯು ತಿಂಗಳಿಗೆ 40 ಗ್ರಾಂ ಮೀರದಂತೆ ಮರಿಜುನಾವನ್ನು ಬಳಸಬಹುದಾಗಿದೆ.
  • ಉರುಘ್ವೆಯ ಈ ನಿರ್ಧಾರ ದೇಶದಲ್ಲಿ ಅಕ್ರಮವಾಗಿ ಡ್ರಗ್ ಮಾರಾಟ ಮಾಡುವುದನ್ನು ತಡೆಯುವುದಾಗಿದೆ. ಆದರೆ ಸರ್ಕಾರದ ಈ ಕ್ರಮ ಈಗ ತೀವ್ರ ಟೀಕೆಗೆ ಗುರಿಯಾಗಿದೆ. ದೇಶದಲ್ಲಿ ಡ್ರಗ್ ಚಟಕ್ಕೆ ಬಲಿಯಾಗುವವರ ಸಂಖ್ಯೆ ಹೆಚ್ಚಗಲಿದೆ ಎಂದು ವಿರೋಧ ಪಕ್ಷಗಳು ವ್ಯಕ್ತಪಡಿಸಿವೆ. ಉರುಘ್ವೆಯ ಈ ಕ್ರಮವನ್ನು ವಿಶ್ವ ಸಂಸ್ಥೆ ಸಹ ವಿರೋಧಿಸಿದೆ.

ವಿಶ್ವಕಪ್  ಕಬಡ್ಡಿ  ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಪುರಷ ಮತ್ತು ಮಹಿಳಾ ವಿಭಾಗದ ಡಬಲ್ ಪ್ರಶಸ್ತಿ
kabadiಭಾರತ ವನಿತೆಯರ ತಂಡ ತವರಿನ ಅಭಿಮಾನಿಗಳ ಸಮ್ಮುಖದಲ್ಲಿ ವಿಶ್ವಕಪ್‌ ಕಬಡ್ಡಿ  ಹ್ಯಾಟ್ರಿಕ್‌ ಪ್ರಶಸ್ತಿ ಗೆದ್ದ ಸಾಧನೆ ಮಾಡಿದೆ. ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಭಾರತ ತಂಡ 49-21 ಅಂಕಗಳಿಂದ ನ್ಯೂಜಿಲೆಂಡ್‌ ತಂಡವನ್ನು ಬಗ್ಗುಬಡಿದು 1 ಕೋಟಿ ರೂ. ಬಹುಮಾನ ಮೊತ್ತ ಹಾಗೂ ಟ್ರೋಫಿಯನ್ನು ಎತ್ತಿ ಹಿಡಿದ ಸಾಧನೆ ಮಾಡಿದೆ. ಅನುರಾಣಿ ಶ್ರೇಷ್ಠ ರಕ್ಷಣಾ ಆಟಗಾರ್ತಿ ಮತ್ತು ರಾಮ್‌ ಬಟಾರಿ ಶ್ರೇಷ್ಠ ರೈಡರ್‌ ಪ್ರಶಸ್ತಿಗೆ ಪಾತ್ರರಾದರು. ಇವರಿಬ್ಬರು ಮಾರುತಿ ಆಲ್ಟೊ ಕಾರು ಉಡುಗೊರೆಯಾಗಿ ಸ್ವೀಕರಿಸಿದರು. ಇದಕ್ಕೂ ಮುನ್ನ ಭಾರತ ತಂಡ ಸೆಮಿಫೈನಲ್‌ನಲ್ಲಿ ಪಾಕಿಸ್ತಾನ ತಂಡವನ್ನು ಸೋಲಿಸಿದರೆ, ಡೆನ್ಮಾರ್ಕ್‌ ತಂಡವನ್ನು ನ್ಯೂಜಿಲೆಂಡ್‌ ಮಣಿಸಿತ್ತು. ಡೆನ್ಮಾರ್ಕ್‌ ತಂಡ 34-33ರಿಂದ ಪಾಕಿಸ್ತಾನ ತಂಡವನ್ನು ಸೋಲಿಸಿ ಕಂಚಿನ ಪದಕ ಗಳಿಸಿತು.
ಪುರುಷರ ವಿಕ್ರಮ:
ಕಬಡ್ಡಿಯಲ್ಲಿ ತನ್ನ ಪ್ರಾಬಲ್ಯ ಮತ್ತೂಮ್ಮೆ ಸಾಬೀತುಪಡಿಸಿರುವ ಭಾರತ, ಪುರುಷರ ವಿಭಾಗದಲ್ಲೂ ವಿಶ್ವಕಪ್‌ ಪ್ರಶಸ್ತಿ ಗೆದ್ದುಕೊಂಡಿದೆ.  ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಸೋಲಿಸಿದ ಭಾರತದ ಪುರುಷರ ತಂಡ 4ನೇ ವಿಶ್ವಕಪ್‌ ಕಬಡ್ಡಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಫೈನಲ್‌ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಭಾರತ ತಂಡ ಪಾಕಿಸ್ತಾನವನ್ನು 48-39 ಅಂತರದಲ್ಲಿ ಸೋಲಿಸಿ ಪ್ರಶಸ್ತಿ ತನ್ನದಾಗಿಸಿಕೊಂಡಿತು.

ಪ್ರಚಲಿತ ವಿದ್ಯಮಾನಗಳು ಡಿಸೆಂಬರ್ 10, 2013


ಫಾರ್ಚೂನ್ ಇಂಡಿಯಾ 500 ಕಂಪನಿಗಳ ಪಟ್ಟಿಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡ “ಇಂಡಿಯನ್ ಆಯಿಲ್ ಕಾರ್ಪೋರೇಶನ್”
ಸರ್ಕಾರಿ ಸ್ವಾಮ್ಯದ “ಇಂಡಿಯನ್ ಆಯಿಲ್ ಕಾರ್ಪೋರೇಶನ್ (ಐಓಸಿ)” ಸಂಸ್ಥೆ ಭಾರತದ ಅತಿ ದೊಡ್ಡ ಸಂಸ್ಥೆಯಾಗಿ ಹೊರಹೊಮ್ಮಿದೆ. ಫಾರ್ಚೂನ್ ಇಂಡಿಯಾ ಹೊರತಂದಿರುವ ಭಾರತದ 500 ಸಂಸ್ಥೆಗಳ ಪಟ್ಟಿಯಲ್ಲಿ ಐಓಸಿ ಅಗ್ರಸ್ಥಾನವನ್ನು ಪಡೆದುಕೊಳ್ಳುವ ಮೂಲಕ ದೇಶದ ಅತಿ ದೊಡ್ಡ ಸಂಸ್ಥೆಯಾಗಿ ಹೊರಹೊಮ್ಮಿದೆ. ಐಓಸಿಯ ವಾರ್ಷಿಕ ವಹಿವಾಟು ರೂ 4,75,867 ಕೋಟಿ.
  • ಜಾಗತಿಕ ವ್ಯವಹಾರ ನಿಯತಕಾಲಿಕೆ ಫಾರ್ಚೂನ್ ಹೊರತಂದಿರುವ ಈ ಪಟ್ಟಿಯಲ್ಲಿ ಮುಖೇಶ್ ಅಂಬಾನಿ ಓಡೆತನದ ರಿಲಾಯನ್ಸ್ ಇಂಡಸ್ಟ್ರೀಸ್ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ. ರಿಲಾಯನ್ಸ್ ಸಂಸ್ಥೆಯ ವಾರ್ಷಿಕ ವಹಿವಾಟು ರೂ 4,09,883 ಕೋಟಿ.
  • ಭಾರತ್ ಪೆಟ್ರೋಲಿಯಂ (ರೂ 2,44,822 ಕೋಟಿ) ಮತ್ತು ಹಿಂದೂಸ್ತಾನ್ ಪೆಟ್ರೋಲಿಯಂ (2,17,771 ಕೋಟಿ) ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನವನ್ನು ಪಡೆದುಕೊಂಡಿವೆ.
  • ಭಾರತೀಯ ಸ್ಟೇಟ್ ಬ್ಯಾಂಕ್ (5 ನೇ), ಟಾಟಾ ಮೋಟಾರ್ಸ್ (6 ನೇ), ಆಯಿಲ್ & ನ್ಯಾಚುರಲ್ ಗ್ಯಾಸ್ (ONGC) 7, ಟಾಟಾ ಸ್ಟೀಲ್ (8), ಎಸ್ಸಾರ್ ಇಂಡಿಯಾ (9) ಹಾಗೂ ಕೋಲ್ ಇಂಡಿಯಾ ಟಾಪ್ ಹತ್ತರಲ್ಲಿ ಸ್ಥಾನ ಪಡೆದುಕೊಂಡಿರುವ ಸಂಸ್ಥೆಗಳು.

ಪೂರ್ವ ಅಂಟಾರ್ಟಿಕ ವಿಶ್ವದ ಅತಿ ಶೀತಲ ಪ್ರದೇಶವಾಗಿ ದಾಖಲೆ
east antarcticaವಿಶ್ವದ ಅತ್ಯಂತ ಶೀತಲ ಪ್ರದೇಶ ಪೂರ್ವ ಅಂಟಾರ್ಟಿಕದಲ್ಲಿರುವ ನಿರ್ಜನ ಪ್ರದೇಶ ಎಂದು ತಿಳಿದು ಬಂದಿದೆ. ನಾಸಾದ ಉಪಗ್ರಹಗಳು 2003 ರಿಂದ 2012 ರ ವರೆಗೆ ಕಲೆ ಹಾಕಿರುವ ಮಾಹಿತಿಯಿಂದ ಈ ಅಂಶ ಬಹಿರಂಗಗೊಂಡಿದೆ.
  • ನಾಸಾ ವಿಜ್ಞಾನಿಗಳು ಪತ್ತೆ ಹಚ್ಚಿರುವ ಈ ಪ್ರದೇಶದ ತಾಪಮಾನ -92.3 ಡಿಗ್ರಿ ಸೆಲಿಯಸ್ಸ್ ಎನ್ನಲಾಗಿದೆ. ಅಂದರೆ ಭೂಮಿಯ ಮೇಲೆ ಇಷ್ಟು ಕಡಿಮೆ ತಾಪಮಾನ ಹೊಂದಿರುವ ಪ್ರದೇಶ ಪತ್ತೆಯಾಗಿರುವುದು ಇದೇ ಮೊದಲು.
  • ಈ ಮುಂಚೆ ಪೂರ್ವ ಅಂಟಾರ್ಟಿಕದಲ್ಲೇ ಇರುವ ರಷ್ಯಾದ ವಸ್ತೊಕ್ ಸಂಶೋಧನಾ ಪ್ರದೇಶದಲ್ಲಿ ಅತ್ಯಂತ ಕಡಿಮೆ ತಾಪಮಾನ ಅಂದರೆ -89.2 ಡಿಗ್ರಿ ಸೆಲ್ಸಿಯಸ್ ದಾಖಲಾಗಿತ್ತು.
  • ನಾಸಾ ವಿಜ್ಞಾನಿಗಳ ಹೇಳಿಕೆಯಂತೇ ಈ ಪ್ರದೇಶದಲ್ಲಿ ಕಾಲಿಟ್ಟ ತಕ್ಷಣವೇ ಮಂಜು ಗಡ್ಡೆಯಾಗಿ ಪರಿವರ್ತನೆಯಾಗವಷ್ಟು ಕಡಿಮೆ ತಾಪಮಾನವಿದೆ.

ಬಾಹ್ಯಕಾಶಕ್ಕೆ ಯಶಸ್ವಿಯಾಗಿ ಎರಡನೇ ಬಾರಿ ಮಂಗನನ್ನು ಕಳುಹಿಸಿದ ಇರಾನ್
monkey to spaceಬಾಹ್ಯಕಾಶಕ್ಕೆ ಮಾನವನನ್ನು ಕಳುಹಿಸುವ ತವಕದಲ್ಲಿರುವ ಇರಾನ್ ಬಾಹ್ಯಕಾಶಕ್ಕೆ ಮಂಗನನ್ನು ಎರಡನೇ ಬಾರಿ ಯಶಸ್ವಿಯಾಗಿ ಕಳುಹಿಸುವ ಮೂಲಕ ವಿಶ್ವ ಗಮನ ಸೆಳೆದಿದೆ. ಇದೇ ಮೊದಲ ಬಾರಿಗೆ ದ್ರವ ಇಂಧನವನ್ನು ಬಳಸಿ ಮಂಗನನ್ನು ಬಾಹ್ಯಕಾಶಕ್ಕೆ ಯಶಸ್ವಿಯಾಗಿ ಕಳುಹಿಸಲಾಗಿದೆ ಎಂದು ಇರಾನ್ ಮಾಧ್ಯಮ ಮೂಲಗಳು ವರದಿ ಮಾಡಿವೆ.
  • ಬಾಹ್ಯಕಾಶಕ್ಕೆ ಮಂಗನನ್ನು ಕಳುಹಿಸುವ ಕಾರ್ಯಕ್ರಮಕ್ಕೆ ಪಜೊಹೆಶ್ (Pajohesh) ಎಂದು ಹೆಸರಿಡಲಾಗಿದೆ. ಪಜೊಹೆಶ್ ಎಂದರೆ ಪರ್ಷಿಯನ್ ಭಾಷೆಯಲ್ಲಿ ಸಂಶೋಧನೆ ಎಂದರ್ಥ.
  • ರಾಕೆಟ್ ನಲ್ಲಿ “ಫರ್ಗಮ್” ಹೆಸರಿನ ಮಂಗಗನ್ನು ಬಾಹ್ಯಕಾಶಕ್ಕೆ  ಕಳುಹಿಸಿಕೊಡಲಾಗಿದೆ. ರಾಕೆಟ್ 72 ಮೈಲಿ ಕ್ರಮಿಸಿದ ನಂತರ ಮಂಗನಿಂದ ಕ್ಯಾಪ್ಸೂಲ್ ರಾಕೆಟ್ ನಿಂದ ಬೇರ್ಪಡೆಗೊಂಡು ಮಂಗ ಸುರಕ್ಷಿತವಾಗಿ ಭೂಮಿ ಇಳಿಸಿರುವುದಾಗಿ ಇರಾನ್ ಟಿ.ವಿ ಮಾಧ್ಯಮಗಳಲ್ಲಿ ಭಿತ್ತರಿಸಲಾಗಿದೆ.
  • ಮಂಗಗನ್ನು ಬಾಹ್ಯಕಾಶಕ್ಕೆ ಕಳುಹಿಸುವಲ್ಲಿ ಯಶಸ್ವಿಯಾಗಿರುವ ಇರಾನ್ ಮುಂದಿನ ದಿನಗಳಲ್ಲಿ ಮಾನವರನ್ನು ಬಾಹ್ಯಕಾಶಕ್ಕೆ ಕಳುಹಿಸುವ ಮಹತ್ವದ ಗುರಿಯನ್ನು ಹೊಂದಿದೆ.

ಪ್ರಚಲಿತ ವಿದ್ಯಮಾನಗಳು ಡಿಸೆಂಬರ್ 9, 2013

ಚೇತೇಶ್ವರ್ ಪೂಜಾರಗೆ “ಐಸಿಸಿ ಉದಯೋನ್ಮುಖ ಆಟಗಾರ” ಪ್ರಶಸ್ತಿ
ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ನೀಡಲಾಗುವ ವಾರ್ಷಿಕ ಪ್ರಶಸ್ತಿಯನ್ನು ಪ್ರಕಟಿಸಲಾಗಿದೆ. ಭಾರತ ಚೇತೇಶ್ವರ್ ಪೂಜಾರ ಅವರಿಗೆ “ಐಸಿಸಿ ಉದಯೋನ್ಮುಖ ಆಟಗಾರ” ಪ್ರಶಸ್ತಿಯನ್ನು ನೀಡಲಾಗಿದೆ. ಪ್ರಶಸ್ತಿ ಪಡೆದ ಇತರೆ ವಿಶ್ವ ಕ್ರಿಕೆಟ್ ಆಟಗಾರರ ವಿವರ ಇಲ್ಲಿದೆ.
  • ಐಸಿಸಿ ವರ್ಷದ ಕ್ರಿಕೆಟ್ ಆಟಗಾರ: ಆಸ್ಟ್ರೇಲಿಯಾದ ಮೈಕಲ್ ಕ್ಲಾರ್ಕ್ ಅವರು ಸರ್ ಗ್ಯಾರಿಫೀಲ್ಡ್ ಐಸಿಸಿ ವರ್ಷದ ಕ್ರಿಕೆಟ್ ಆಟಗಾರ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಅಲ್ಲದೇ ಕ್ಲಾರ್ಕ್ ಅವರು ವರ್ಷದ ಟೆಸ್ಟ್ ಕ್ರಿಕೆಟ್ ಆಟಗಾರ ಪ್ರಶಸ್ತಿಗೂ ಪಾತ್ರರಾಗಿದ್ದಾರೆ.
  • ಏಕದಿನ ಕ್ರಿಕೆಟ್ ಆಟಗಾರ: ಶ್ರೀಲಂಕಾದ ಕುಮಾರ ಸಂಗಕ್ಕಾರ ಐಸಿಸಿ ಏಕದಿನ ಕ್ರಿಕೆಟ್ ಆಟಗಾರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ. ಸಂಗಕ್ಕಾರ ಕಳೆದ ವರ್ಷ ವರ್ಷದ ಕ್ರಿಕೆಟ್ ಆಟಗಾರ ಹಾಗೂ ಟೆಸ್ಟ್ ಆಟಗಾರ ಪ್ರಶಸ್ತಿಯನ್ನು ಸ್ವೀಕರಿಸಿದ್ದರು.
  • ಐಸಿಸಿ ವರ್ಷದ ಉದಯೋನ್ಮುಕ ಆಟಗಾರ: ಭಾರತದ ಕ್ರಿಕೆಟ್ ತಂಡದ ರಾಹುಲ್ ದ್ರಾವಿಡ್ ಎನಿಸಿರುವ ಚೇತೇಶ್ವರ್ ಪೂಜಾರ ಅವರು ಐಸಿಸಿ ವರ್ಷದ ಉದಯೋನ್ಮುಕ ಆಟಗಾರ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದ್ದಾರೆ.
  • ಅತ್ಯುತ್ತಮ ಅಂಪೈರ್: ಇಂಗ್ಲೆಂಡ್ ನ ರಿಚರ್ಡ್ ಕೆಟ್ಟಲಬರೊಪ್ ಅವರನ್ನು ವರ್ಷದ ಅತ್ಯುತ್ತಮ ಅಂಪೈರ್ ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.
  • ನ್ಯೂಜಿಲ್ಯಾಂಡ್ ನ ಸೂಝಿ ಬೆಟ್ಸ್ ಅವರು ಮಹಿಳಾ ಏಕದಿನ ಕ್ರಿಕೆಟ್ ಪಟು ಪ್ರಶಸ್ತಿಗೆ ಆಯ್ಕೆಮಾಡಲಾಗಿದೆ.
  • ಜನರ ಆಯ್ಕೆ ಪ್ರಶಸ್ತಿ : ಮಹೇಂದ್ರ ಸಿಂಗ್ ಧೋನಿ (ಭಾರತ)
  • ಸಹ ಸಂಸ್ಥೆಯ ಕ್ರಿಕೆಟರ್ : ಕೆವಿನ್ ಓಬ್ರಿಯಾನ್ (ಐರ್ಲೆಂಡ್)
  • ಟಿ20 ಕ್ರಿಕೆಟಿಗ : ಉಮರ್ ಗುಲ್ (ಪಾಕಿಸ್ತಾನ)
  • ಮಹಿಳಾ ಟಿ20 ಕ್ರಿಕೆಟರ್ : ಸಾರಾ ಟೇಲರ್ (ಇಂಗ್ಲೆಂಡ್)
  • ಕ್ರೀಡಾ ಸ್ಫೂರ್ತಿ ಕ್ರಿಕೆಟರ್ : ಮಹೆಲಾ ಜಯವರ್ಧನೆ(ಶ್ರೀಲಂಕಾ)

ವಕಾರ್ ಯೂನಿಸ್ ಮತ್ತು ಆಡಂ ಗಿಲ್ ಕ್ರಿಸ್ಟ್ ಕ್ರಿಕೆಟ್ “ಹಾಲ್ ಆಫ್ ಫೇಮ್ಸ್”ಗೆ ಸೇರ್ಪಡೆ
hall of fameಪಾಕಿಸ್ತಾನದ ಪ್ರಖ್ಯಾತ ಕ್ರಿಕೆಟ್ ಆಟಗಾರ ವಕಾರ್ ಯೂನಿಸ್ ಮತ್ತು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟ್ ಆಟಗಾರ ಆಡಂ ಗಿಲ್ ಕ್ರಿಸ್ಟ್ ಅವರನ್ನು ಕ್ರಿಕೆಟ್ “ಹಾಲ್ ಆಫ್ ಫೇಮ್ಸ್” ಗೌರವಕ್ಕೆ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ ಸೇರ್ಪಡಿಸಿದೆ. ಯೂನಿಸ್ ಮತ್ತು ಗಿಲ್ ಕ್ರಿಸ್ಟ್ ಹಾಲ್ ಆಫ್ ಪೇಮ್ಸ್ ಗೌರವಕ್ಕೆ ಪಾತ್ರರಾದ 70 ಮತ್ತು 71 ನೇ ಆಟಗಾರರು ಎನಿಸಿದ್ದಾರೆ.
  • ವಕಾರ್ ಯೂನಿಸ್ ಹಾಲ್ ಆಫ್ ಪೇಮ್ಸ್ ಗೌರವಕ್ಕೆ ಪಾತ್ರರಾದ ಪಾಕಿಸ್ತಾನದ ಐದನೇ ಆಟಗಾರ. ಈ ಮುಂಚೆ ಹನೀಫ್ ಖಾನ್, ಇಮ್ರಾನ್ ಖಾನ್, ಜಾವೇದ್ ಮಿಯಾಂದಾದ್ ಮತ್ತು ವಾಸಿಂ ಅಕ್ರಂ ಅವರುಗಳು ಈ ಗೌರವಕ್ಕೆ ಭಾಜನರಾಗಿದ್ದರು.
  • ಆಡಂ ಗಿಲ್ ಕ್ರಿಸ್ಟ್ ಈ ಗೌರವವನ್ನು ಪಡೆದುಕೊಂಡ ಆಸ್ಟ್ರೇಲಿಯಾದ 19 ನೇ ಆಟಗಾರ. ಡಾನ್ ಬ್ರಾಡಮನ್, ರಿಚಿ ಬೆನಾಡ್, ಅಲನ್ ಬಾರ್ಡರ್, ಡೆನ್ನಿಸ್ ಲಿಲ್ಲಿ ಈ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ ಆಸ್ಟ್ರೇಲಿಯಾದ ಪ್ರಮುಖ ಆಟಗಾರರು.

ಇಸ್ರೇಲ್, ಜೊರ್ಡನ್ ಮತ್ತು ಪಾಲೇಸ್ತಾನ್ ನಡುವೆ ಜಲ ಒಪ್ಪಂದ
israel jordonಜಲ ಒಪ್ಪಂದಕ್ಕೆ ಸಂಬಂಧಿಸಿದಂರೆ ಪಾಲೇಸ್ತಾನ್ ಮತ್ತು ಜೊರ್ಡನ್ ನಡುವೆ ಮಹತ್ವದ ಒಪ್ಪಂದಕ್ಕೆ ಸಹಿ ಹಾಕಿರುವುದಾಗಿ ಇಸ್ರೇಲ್ ಹೇಳಿದೆ. ಒಪ್ಪಂದದ ಅನ್ವಯ ಕೆಂಪು ಸಮುದ್ರ (ರೆಡ್ ಸೀ) ದಿಂದ ಮೃತ ಸಮುದ್ರ (ಡೆಡ್ ಸೀ)ಕ್ಕೆ ನೀರು ಹಾಯಿಸಿಲಾಗುವುದು.
  • ಜೊರ್ಡನ್ ನಲ್ಲಿ ಈ ನೀರನ್ನು ಲವಣ ಮುಕ್ತಗೊಳಿಸುವ ಮೂಲಕ ಇಸ್ರೇಲ್ ಹಾಗೂ ಜೊರ್ಡನ್ ಗೆ ನೀರು ಸರಬರಾಜು ಮಾಡಲಾಗುವುದು. ಅಷ್ಟೇ ಅಲ್ಲದೇ ಒಣಗುತ್ತಿರುವ ಮೃತ ಸಮುದ್ರದ ಪುನಶ್ಚೇತನಕ್ಕೂ ಸಹ ಇದನ್ನು ಬಳಸಲಾಗುವುದೆಂದು ಇಸ್ರೇಲ್ ಹೇಳಿದೆ.
  • ಇಸ್ರೇಲ್ ಹೇಳಿಕೆಯ ಪ್ರಕಾರ ಈ ಯೋಜನೆಯ ಉದ್ದ 180 ಕಿಲೋಮೀಟರ್. ಇದರ ಒಟ್ಟು ವೆಚ್ಚ 300 ಮಿಲಿಯನ್ ಡಾಲರ್ ಹಾಗೂ ಇದನ್ನು ಪೂರ್ಣಗೊಳಿಸಲು ಮೂರು ವರ್ಷ ಬೇಕಾಗಬಹುದು ಎನ್ನಲಾಗಿದೆ,
  • ವಾರ್ಷಿಕ 200 ಮಿಲಿಯನ್ ಕ್ಯೂಬಿಕ್ ಅಡಿ ನೀರನ್ನು ಬಳಸಲಾಗುವುದು. ಪಾಲೇಸ್ತಾನ್ ಗೂ ಸಹ ಇಸ್ರೇಲ್ ಈ ಯೋಜನೆಯಡಿ ನೀರನ್ನು ಒದಗಿಸುವದಾಗಿ ಒಪ್ಪಂದದ ತಿಳಿದು ಬಂದಿದೆ.

ಪ್ರಚಲಿತ ವಿದ್ಯಮಾನಗಳು ಡಿಸೆಂಬರ್ 8, 2013


ಚೀನಾ ಅಧ್ಯಕ್ಷ “ಕ್ಸಿ ಜಿನ್ ಪಿಂಗ್” ಹಾಗೂ ಜಪಾನ್ ಪ್ರಧಾನಿ “ಶಿಂಜೊ ಅಬೆ” ಏಷ್ಯಾದ ವ್ಯಕ್ತಿಗಳು:
ಪ್ರಚಲಿತ ವಿದ್ಯಮಾನಗಳು ಡಿಸೆಂಬರ್ 8, 2013ಸಿಂಗಾಪುರ ಮೂಲದ ಪ್ರಸಿದ್ಧ ದಿನ ಪತ್ರಿಕೆಯೊಂದು ಚೀನಾದ ಪ್ರಸ್ತುತ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಹಾಗೂ ಜಪಾನ್ ನ ಹಾಲಿ ಪ್ರಧಾನ ಮಂತ್ರಿ ಶಿಂಜೊ ಅಬೆ ಅವರನ್ನು ಏಷ್ಯಾದ ವ್ಯಕ್ತಿಗಳೆಂದು ಬಣ್ಣಿಸಿದೆ.
  • ಸಿಂಗಾಪುರ ಮೂಲದ “ಸ್ಟ್ರೇಟ್ ಟೈಮ್ಸ್” ಪತ್ರಿಕೆ ಈ ರಾಷ್ಟ್ರ ನಾಯಕರನ್ನು ಏಷ್ಯಾದ ವ್ಯಕ್ತಿಗಳೆಂದು ಹೇಳಿದ್ದು, ಚೀನಾ ಮತ್ತು ಜಪಾನ್ ನಡುವೆ ದ್ವೇಷ ಸಮರವನ್ನು ಮರೆತು ಏಷ್ಯಾದಲ್ಲಿ ಶಾಂತಿ ಸುವ್ಯವಸ್ಥೆಗೆ ಒಂದಾಗಬೇಕೆಂದು ಹೇಳಿದೆ.
  • ಸೆನಾಕಾಕು ದ್ವೀಪ ಪ್ರದೇಶದ ಮೇಲೆ ಹಿಡಿತ ಸಾಧಿಸುವ ಸಲುವಾಗಿ ಉಭಯ ರಾಷ್ಟ್ರಗಳು ಸೆಣಸಾಡುತ್ತಿವೆ. ಇತ್ತೀಚೆಗಷ್ಟೇ ಪೂರ್ವ ಚೀನಾ ಸಮುದ್ರದ ಮೇಲೆ ವಾಯು ರಕ್ಷಣ ಪ್ರದೇಶವನ್ನು ಚೀನಾ ಘೋಷಿಸಿದೆ. ಚೀನಾದ ಈ ಕ್ರಮವನ್ನು ಜಪಾನ್ ಹಾಗೂ ದಕ್ಷಿಣ ಕೊರಿಯಾ ಬಲವಾಗಿ ಖಂಡಿಸಿದ್ದವು.
  • ಮಯನ್ಮಾರ್ ನ ಅಧ್ಯಕ್ಷ ಥೇನ್ ಸೇನ್ ಅವರು 2012 ರಲ್ಲಿ ಏಷ್ಯಾದ ವ್ಯಕ್ತಿ ಎಂಬ ಗೌರವಕ್ಕೆ ಪಾತ್ರರಾಗಿದ್ದರು.

ಗುರು ಗ್ರಹದ ಉಪಗ್ರಹ “ಯೂರೋಪ” ದಲ್ಲಿ ನೀರಿನಿಂದ ಕೂಡಿದ ವಾತಾವರಣ ಪತ್ತೆ
europaಗುರು ಗ್ರಹದ ಸುತ್ತು ಸುತ್ತುತ್ತಿರುವ ಗುರುವಿನ ಉಪಗ್ರಹ “ಯೂರೋಪ” ದಲ್ಲಿ ನೀರಿನಿಂದ ಕೂಡಿರುವ ವಾತಾರವರಣವನ್ನು ನಾಸಾದ ಹಬ್ಬಲ್ಸ್ ಟೆಲಿಸ್ಕೋಪ್ ಪತ್ತೆಹಚ್ಚಿದೆ. ಈ ಅನ್ವೇಷಣೆಯಿಂದ ಯುರೋಪದಲ್ಲಿ ಜೀವಿಗಳು ವಾಸಿಸುತ್ತಿವೆಯೇ ಎಂಬ ಅನುಮಾನಕ್ಕೆ ಮತ್ತಷ್ಟು ಪುಷ್ಠಿ ಬಂದಿದೆ.
ಭೂಮಂಡಲದ ಹೊರಗೆ:
ವಿಶ್ವಮಂಡಲದಲ್ಲಿ ಭೂಮಿಯನ್ನು ಹೊರತುಪಡಿಸಿ ಬೇರಾವ ಗ್ರಹಗಳಲ್ಲಿ ಜೀವಿಗಳ ಉಗಮದ ಬಗ್ಗೆ ಕುರುಹು ಕಂಡು ಬಂದಿಲ್ಲ, ಆದರೆ ಈಗಾಗಲೇ ಕೈಗೊಳ್ಳಲಾಗಿರುವ ಹಲವಾರು ಅಧ್ಯಯನಗಳಿಂದ ಮಂಗಳ ಸೇರಿದಂತೆ ಕೆಲವು ಗ್ರಹಗಳಲ್ಲಿ ಜೀವಿಗಳ ಉಗಮಕ್ಕೆ ಪ್ರಮುಖವಾಗಿರುವ ನೀರಿನ ಮೂಲಗಳು ಪತ್ತೆಯಾಗಿರುವುದು, ಈ ಗ್ರಹಗಳಲ್ಲಿ ಜೀವಿಗಳು ಇರಬಹುದು ಎನ್ನಲಾಗಿದೆ.ಹಬ್ಬಲ್ಸ್ ದೂರದರ್ಶಕ ಸೆರೆಹಿಡಿದಿರುವ ಚಿತ್ರಗಲ್ಲಿ ಯೂರೋಪ ಉಪಗ್ರಹದಲ್ಲಿ ನೀರಿನ ಹನಿಗಳಿಂದ ಕೂಡಿರುವ ವಾತಾವರಣ ಪತ್ತೆಯಾಗಿದೆ.

ಫೋರ್ಬ್ಸ್ ಸೆಲೆಬ್ರಿಟಿ ಪಟ್ಟಿ: ಶಾರೂಖ್ ಖಾನ್ ಗೆ ನಂ.1 ಸ್ಥಾನ
shah rukh khanಬಾಲಿವುಡ್ ನ ಕಿಂಗ್ ಖಾನ್ ಎಂದೇ ಖ್ಯಾತಿ ಹೊಂದಿರುವ ಶಾರೂಖ್ ಖಾನ್ ಅವರು ಫೋರ್ಬ್ ಇಂಡಿಯಾ ಹೊರತಂದಿರುವ ಸೆಲೆಬ್ರಿಟಿ ಪಟ್ಟಿಯಲ್ಲಿ ಅಗ್ರಸ್ಥಾನವನ್ನು ಗಳಿಸಿದ್ದಾರೆ. ಈ ಮೂಲಕ ಖಾನ್ ಸತತ ಎರಡನೇ ವರ್ಷ ಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಅಲಂಕರಿಸಿದ್ದಾರೆ. ಖಾನ್ ಹೊಂದಿರುವ ಜನಪ್ರಿಯತೆ ಹಾಗೂ ಇತ್ತೀಚೆಗೆ ಬಿಡುಗಡೆಯಾದ “ಚೆನ್ನೈ ಎಕ್ಸ್ ಪ್ರೆಸ್” ಚಿತ್ರದ ಯಶಸ್ಸು ಅವರ ಹಿರಿಮೆಯನ್ನು ಹಿಮ್ಮಡೆಗೊಳಿಸಿದ್ದು, ಅಗ್ರಸ್ಥಾನವನ್ನು ಕಾಯ್ದುಕೊಳ್ಳಲು ಸಹಕಾರಿಯಾಗಿದೆ.
  • ಭಾರತ ಕ್ರಿಕೆಟ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಅವರು ಎರಡನೇ ಸ್ಥಾನವನ್ನು ಅಲಂಕರಿಸಿದ್ದಾರೆ. ಧೋನಿ ಅವರು ಕಳೆದ ವರ್ಷ ಮೂರನೇ ಸ್ಥಾನದಲ್ಲಿದ್ದರು.
  • ಬಾಲಿವುಡ್ ನ ಮತ್ತೊಬ್ಬ ನಟ ಸಲ್ಮಾನ್ ಖಾನ್ ಈ ಬಾರಿ ಮೂರನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದ್ದಾರೆ. ಸಲ್ಮಾನ್ ಅವರು ಕಳೆದ ವರ್ಷ ಎರಡನೇ ಸ್ಥಾನದಲ್ಲಿದ್ದರು.
  • ಮಾಜಿ ಕ್ರಿಕೆಟ್ ತಾರೆ ಸಚಿನ್ ತೆಂಡೂಲ್ಕರ್ 4 ನೇ ಸ್ಥಾನ ಹಾಗೂ ಬಾಲಿವುಡ್ ಸಿನಿಮಾ ರಂಗದ ದಂತಕತೆ ಅಮಿತಾಬ್ ಬಚ್ಚನ್ ಅವರು 5 ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ.
  • ಯುವ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರು 10 ನೇ ಸ್ಥಾನವನ್ನು ಪಡೆದುಕೊಂಡಿದ್ದಾರೆ.
  • ಸಚಿನ್‌ ತೆಂಡುಲ್ಕರ್‌ಗೆ 4, ಅಮಿತಾಭ್‌ ಬಚ್ಚನ್‌ಗೆ 5ನೇ ಸ್ಥಾನ ಸಿಕ್ಕಿದೆ. ಪಟ್ಟಿಯಲ್ಲಿ ಕರ್ನಾಟಕ ಮೂಲದವರಾದ ರಾಹುಲ್‌ ದ್ರಾವಿಡ್‌, ದೀಪಿಕಾ ಪಡುಕೋಣೆ, ರೋಹಿತ್‌ ಶೆಟ್ಟಿ, ಐಶ್ವರ್ಯಾ ರೈ, ಶಿಲ್ಪಾ ಶೆಟ್ಟಿ, ಅನುಷ್ಕಾ ಶರ್ಮಾ ಸ್ಥಾನ ಪಡೆದಿದ್ದಾರೆ.
  • ಪಟ್ಟಿಯಲ್ಲಿ ಕನ್ನಡದ ನಟರಾದ ಸುದೀಪ್ ಹಾಗೂ ದರ್ಶನ್ ಅವರು ಸ್ಥಾನವನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಸುದೀಪ್ 62 ನೇ ಸ್ಥಾನವನ್ನು ಹಾಗೂ ದರ್ಶನ್ 67 ನೇ ಸ್ಥಾನವನ್ನು ಪಡೆದುಕೊಡಿದ್ದಾರೆ.

ಪ್ರಚಲಿತ ವಿದ್ಯಮಾನಗಳು ಡಿಸೆಂಬರ್ 7, 2013


ಮಲಾಲಗೆ ವಿಶ್ವಸಂಸ್ಥೆ ಮಾನವ ಹಕ್ಕು ಪ್ರಶಸ್ತಿ (Human Rights Prize)-2013
ಪಾಕಿಸ್ತಾನದ ಯುವ ಹೋರಾಟಗಾರ್ತಿ ಮಲಾಲ ಯೂಸಫ್ ಝೈ ಅವರು ಪ್ರತಿಷ್ಠಿತ ವಿಶ್ವಸಂಸ್ಥೆ ಮಾನವ ಹಕ್ಕು ಪ್ರಶಸ್ತಿ-2013 ಗೆ ಭಾಜನರಾಗಿದ್ದಾರೆ. ಮಲಾಲ ಅವರು ಪಾಕಿಸ್ತಾನದ ಸ್ವಾತ್ ಕಣಿವೆಯಲ್ಲಿ ಹೆಣ್ಣು ಮಕ್ಕಳ ಶಿಕ್ಷಣ ಹಕ್ಕು ಹೋರಾಟಕ್ಕಾಗಿ ಶ್ರಮಿಸಿದವರು. ಬಳಿಕ ತಾಲಿಬಾನ್ ಉಗ್ರರಿಂದ ಗುಂಡೇಟು ತಿಂದು ಚೇತರಿಸಿಕೊಂಡ ಬಳಿಕ ವಿಶ್ವ ವಿಖ್ಯಾತಿ ಹೊಂದಿದ್ದಾರೆ. ಯುವ ಹೋರಾಟಗಾರ್ತಿಯಾಗಿ ಪ್ರಸಿದ್ದರಾಗಿರುವ ಮಲಾಲ ಅವರಿಗೆ ಈಗಾಗಲೇ ಅನೇಕ ಪ್ರಶಸ್ತಿಗಳು ಒಲಿದು ಬಂದಿವೆ.
ಪ್ರಶಸ್ತಿಯ ಬಗ್ಗೆ:
  • ವಿಶ್ವ ಸಂಸ್ಥೆ ಮಾನವ ಹಕ್ಕು ಪ್ರಶಸ್ತಿಯನ್ನು ವಿಶ್ವ ಸಂಸ್ಥೆ ಸಾಮಾನ್ಯ ಸಭೆಯ ನಿರ್ಣಯದ ಮೇರೆಗೆ 1966 ರಲ್ಲಿ ಸ್ಥಾಪಿಸಲಾಗಿದೆ.
  • ಮಾನವ ಹಕ್ಕು ರಕ್ಷಣೆಗೆ ಶ್ರಮಿಸುವ ವ್ಯಕ್ತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಪ್ರಶಸ್ತಿಯನ್ನು ಪ್ರತಿ ಐದು ವರ್ಷಗಳಿಗೊಮ್ಮೆ ನೀಡಲಾಗುತ್ತಿದೆ.
  • ವಿಶ್ವ ಸಂಸ್ಥೆ ಮಾನವ ಹಕ್ಕು ದಿನವಾದ ಡಿಸೆಂಬರ್ 10 ರಂದು ಈ ಪ್ರಶಸ್ತಿಯನ್ನು ವಿತರಿಸಲಾಗುವುದು
  • ಈ ಬಾರಿ ಮಲಾಲ ಸೇರಿದಂತೆ ಮಾನವ ಹಕ್ಕು ರಕ್ಷಣೆಗೆ ಶ್ರಮಿಸಿದ ಇತರರಿಗೆ ಈ ಪ್ರಶಸ್ತಿಯನ್ನು ನೀಡಲಾಗುವುದು.
2013 ನೇ ಸಾಲಿನಲ್ಲಿ ಪ್ರಶಸ್ತಿಗೆ ಆಯ್ಕೆಯಾಗಿರುವ ಇತರರು:
  • ಬಿರಮ್ ಡಹ್ ಅಬೈದ್ (Biram Dah Abeid): ಮಾರಿಟನಿಯದಲ್ಲಿ ಗುಲಾಮ ಗಿರಿಯನ್ನು ತೊಳೆದು ಹಾಕುವಲ್ಲಿ ಶ್ರಮಿಸಿದ್ದಕ್ಕಾಗಿ.
  • ಹಿಲ್ಜಿಮ್ನಜೆತ ಅಪುಕ್ (Hiljimnijeta Apuk): ಕೊಸೊವೊ ಮಾನವ ಹಕ್ಕು ಹೋರಾಟಗಾರ
  • ಲಿಸ ಕಪ್ಪಿನೆನ್ (Liisa Kauppinen): ವರ್ಲ್ಡ್ ಫೆಡರೇಷನ್ ಆಫ್ ಡೆಫ್ ನ ಅಧ್ಯಕ್ಷರು.
  • ಖಾದಿಜ ಯಾದಿ (Khadija Ryadi): ಮೊರೊಕೊ ಮಾನವ ಹಕ್ಕು ಹೋರಾಟ ಸಂಘಟನೆಯ ಮಾಜಿ ಅಧ್ಯಕ್ಷರು.

ದೇಶದಲ್ಲಿ ವಸತಿ ರಹಿತರ ಸಂಖ್ಯೆ ಇಳಿಕೆ: ರಾಜಸ್ತಾನದಲ್ಲಿ ಅತಿ ಹೆಚ್ಚು ವಸತಿ ರಹಿತರು
houselessದೇಶದಲ್ಲಿ ವಸತಿ ರಹಿತರ ಸಂಖ್ಯೆ ಇಳಿಕೆಯಾಗಿದೆ ಎಂಬ ಸಂಗತಿ ಇತ್ತೀಚೆಗೆ ಬಿಡುಗಡೆ ಮಾಡಿರುವ ಗಣತಿ ಅಂಕಿ-ಅಂಶಗಳಿಂದ ತಿಳಿದು ಬಂದಿದೆ. ಈ ಅಂಕಿ-ಅಂಶಗಳ ಪ್ರಕಾರ 2001 ರಿಂದ 2011 ರಲ್ಲಿ ದೇಶದಲ್ಲಿ ವಸತಿ ರಹಿತರ ಸಂಖ್ಯೆ ಗ್ರಾಮೀಣ ಭಾಗದಲ್ಲಿ ಕಡಿಮೆಯಾಗಿದೆ, ಆದರೆ ನಗರ ಹಾಗೂ ಪಟ್ಟಣ ಪ್ರದೇಶಗಳಲ್ಲಿ ಶೇ 21 ರಷ್ಟು ಹೆಚ್ಚಾಗಿದೆ ಎನ್ನಲಾಗಿದೆ.
ವಸತಿ ರಹಿತರೆಂದರೆ  ಯಾರು?
  • ಗಣತಿ ಪ್ರಕಾರ ವಾಸಿಸಲು ಸೂಕ್ತ ಕಟ್ಟಡ ಸೌಲಭ್ಯವಲಿದೆ ಆದರೆ ರಸ್ತೆ ಬದಿ, ರೈಲ್ವೆ ಪ್ಲಾಟಫಾರಂ ಬಳಿ, ದೇವಸ್ಥಾನ ಹಾಗೂ ಮಂಟಪದ ಬಳಿ ಅಥವಾ ಮೋರಿ ಪೈಪುಗಳಲ್ಲಿ ವಾಸಿಸುವವರನ್ನು ವಸತಿ ರಹಿತರೆಂದು ಕರೆಯಲಾಗುವುದು.
ರಾಜ್ಯಗಳ ಪಾಲು
  • ದೇಶದ ಅತಿ ದೊಡ್ಡ ರಾಜ್ಯ ಎನಿಸಿರುವ ರಾಜಸ್ತಾನದಲ್ಲಿ ಹೆಚ್ಚು ವಸತಿ ರಹಿತರಿರುವುದು ಗಣತಿಯ ಅಂಕಿ ಅಂಶಗಳಿಂದ ತಿಳಿದುಬಂದಿದೆ. ವಸತಿ ರಹಿತರಿಗೆ ಸೂರು ಕಲ್ಪಿಸುವಲ್ಲಿ ರಾಜಸ್ಥಾನ ವಿಫಲವಾಗಿದೆ ಎನ್ನಲಾಗಿದೆ. ಹರಿಯಾಣ ಮತ್ತು ಪಶ್ವಿಮ ಬಂಗಾಳದ ಗತಿ ಸಹ ಇದೆ ಆಗಿದೆ.
  • ಉತ್ತರ ಪ್ರದೇಶ, ಮಹಾರಾಷ್ಟ್ರ, ರಾಜಸ್ತಾನ ಮತ್ತು ಮಧ್ಯಪ್ರದೇಶ ರಾಜ್ಯಗಳಲ್ಲಿ ಒಟ್ಟಾರೆ ದೇಶದ ಶೇ 50 ರಷ್ಟು ವಸತಿ ರಹಿತರಿರುವುದಾಗಿ ದಾಖಲಾಗಿದೆ.
  • ಜನಸಂಖ್ಯೆ ಅನುಗಣವಾಗಿ ಹೋಲಿಸಿದರೆ ದೆಹಲಿ (0.28%) ಮತ್ತು ಚಂಡಿಗರ್ (0.39%) ನಲ್ಲಿ ಹೆಚ್ಚು ವಸತಿ ರಹಿತರು ದಾಖಲಾಗಿದ್ದಾರೆ. ಮಿಜೋರಂ (0.01%), ಅಂಡಮಾನ್ ನಿಕೋಬರ್ (0.02%) ಹಾಗೂ ಕೇರಳ (0.04%) ಕಡಿಮೆ ವಸತಿ ರಹಿತರಿರುವ ರಾಜ್ಯಗಳು.

20 ನೇ ಕಾನೂನು ಆಯೋಗ (Law Commission)ದ ಅಧ್ಯಕ್ಷರಾಗಿ “ಅಜಿತ್ ಪ್ರಕಾಶ್ ಷಾ” ನೇಮಕ
ajith prakash shahದೆಹಲಿ ಹೈಕೋರ್ಟ್ ನ ಮಾಜಿ ಮುಖ್ಯ ನ್ಯಾಯಾಧೀಶರಾದ “ಅಜಿತ್ ಪ್ರಕಾಶ್ ಷಾ”ಅವರು 20 ನೇ ಕಾನೂನು ಆಯೋಗದ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ. ಈ ಹಿಂದೆ ಆಯೋಗದ ಅಧ್ಯಕ್ಷರಾಗಿದ್ದ ಡಿ.ಕೆ.ಜೈನ್ ಅವರು ರಾಜೀನಾಮೆ ನೀಡಿದ ಹಿನ್ನಲೆಯಲ್ಲಿ ಷಾ ಅವರನ್ನು ಆಯೋಗದ ಅಧ್ಯಕ್ಷರನ್ನಾಗಿ ನೇಮಕ ಮಾಡಲಾಗಿದೆ. ಷಾ ಅವರು ಬಾಂಬೆ ಹೈಕೋರ್ಟ್ ನಲ್ಲಿ ಸೇವೆ ಸಲ್ಲಿಸಿದ್ದಾರೆ.
  • ಡಿ.ಕೆ.ಜೈನ್ ಅವರು ರಾಷ್ಟ್ರೀಯ ಗ್ರಾಹಕ ವಿವಾದ ನಿವಾರಣಾ ಆಯೋಗ (National Consumer Dispute Redressal Commission) ನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.
ಕಾನೂನು ಆಯೋಗ:
ಕಾನೂನು ಸುಧಾರಣೆ ಸಂಬಂಧಿ ಸಲಹೆಗಳನ್ನು ಶಿಫಾರಸ್ಸು ಮಾಡುವ ಸಲುವಾಗಿ ಭಾರತ ಸರ್ಕಾರ ಕಾನೂನು ಆಯೋಗವನ್ನು ರಚಿಸುತ್ತದೆ. ಕಾನೂನು ತಜ್ಞರನ್ನು ಈ ಆಯೋಗ ಒಳಗೊಂಡಿದ್ದು, ದೇಶದಲ್ಲಿ ಕಾನೂನಿಗೆ ಸಂಬಂಧಿಸಿದಂತೆ ಸಲಹೆಗಳನ್ನು ಈ ಆಯೋಗ ಶಿಫಾರಸ್ಸು ಮಾಡುವ ಕರ್ತವ್ಯವನ್ನು ಹೊಂದಿದೆ.
  • 1833 ಚಾರ್ಟರ್ ಆಕ್ಟ್ ಅನ್ವಯ ಸ್ವಾತಂತ್ರ ಪೂರ್ವ ಭಾರತದಲ್ಲಿ ಮೊದಲ ಬಾರಿಗೆ 1834 ರಲ್ಲಿ ಕಾನೂನು ಆಯೋಗವನ್ನು ರಚಿಸಲಾಗಿತ್ತು.
  • ಸ್ವಾತಂತ್ರ ನಂತರ ಭಾರತದಲ್ಲಿ 1955 ರಲ್ಲಿ ಎಂ.ಸಿ.ಸೇತಲ್ವಾಡ್ ಅವರ ಅಧ್ಯಕ್ಷತೆಯಲ್ಲಿ ಮೊದಲ ಕಾನೂನು ಆಯೋಗವನ್ನು ರಚಿಸಲಾಯಿತು. ಈ ಆಯೋಗದ ಅವಧಿ ಮೂರು ವರ್ಷ.
  • ಸದ್ಯ ಇಲ್ಲಿಯ ತನಕ 19 ಕಾನೂನು ಆಯೋಗಗಳು ತಮ್ಮ ವರದಿಯನ್ನು ಸಲ್ಲಿಸಿವೆ. ಪ್ರಸ್ತುತ 20 ನೇ ಕಾನೂನು ಆಯೋಗ ಷಾ ಅವರ ಅಧ್ಯಕ್ಷತೆಯಲ್ಲಿ ತನ್ನ ಶಿಫಾರಸ್ಸನ್ನು ಮಾಡಲಿದೆ.

ಪ್ರಚಲಿತ ವಿದ್ಯಮಾನಗಳು ಡಿಸೆಂಬರ್ 6, 2013


ಭಾರತೀಯ ವಾಯುಪಡೆಗೆ ಹಗುರ ಯುದ್ಧವಿಮಾನ “ತೇಜಸ್” ಸೇರ್ಪಡೆ
ದೇಶೀಯವಾಗಿ ಅಭಿವೃದ್ಧಿಪಡಿಸಿದ ಹಗುರ ಯುದ್ಧವಿಮಾನ ತೇಜಸ್ ಡಿಸೆಂಬರ್ ನಲ್ಲಿ ಭಾರತೀಯ ವಾಯುಪಡೆಗೆ ಸೇರ್ಪಡೆಗೊಳ್ಳಲಿದೆ. ಈ ಹಿನ್ನೆಲೆಯಲ್ಲಿ ಈ ಲಘುಯುದ್ಧ ವಿಮಾನದ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ.
ಸ್ವದೇಶಿ ನಿರ್ಮಿತ:
  • 4ನೇ ತಲೆಮಾರಿನ ಯುದ್ಧವಿಮಾನ ಎಚ್‌ಎಎಲ್ ಅಭಿವೃದ್ಧಿಪಡಿಸಿದ ತೇಜಸ್ ಲೈಟ್ ಕಾಂಬ್ಯಾಟ್ ಏರ್‌ಕ್ರಾಫ್ಟ್(ಎಲ್‌ಸಿಎ) 4ನೇ ತಲೆಮಾರಿನ ಯುದ್ಧವಿಮಾನವಾಗಿದೆ.
  • ವಿಶ್ವದಲ್ಲೇ ಅತಿ ಹಗುರ ಮತ್ತು ಕಡಿಮೆ ಬೆಲೆಯ ಯುದ್ಧ ವಿಮಾನ ಎನ್ನುವ ಗೌರವವೂ ತೇಜಸ್‌ಗೆ ದಕ್ಕಿದೆ.
  • ಎಲ್‌ಸಿಎ ಅಭಿವೃದ್ಧಿ ಕಾರ್ಯಕ್ಕೆ 1980ರ ದಶಕದಲ್ಲೇ ಚಾಲನೆ ನೀಡಲಾಗಿತ್ತು. ಇದು ಸ್ವದೇಶಿ ನಿರ್ಮಿತ 2ನೇ ಯುದ್ಧವಿಮಾನ.
  • 1961ರಲ್ಲೇ ಎಚ್‌ಎಫ್- 24 ಮಾರುತ್ ಎನ್ನುವ ವಿಮಾನವನ್ನು ಭಾರತ ನಿರ್ಮಿಸಿತ್ತು. ತೇಜಸ್ ದೇಶೀಯವಾಗಿ ನಿರ್ಮಿತ ಯುದ್ಧವಿಮಾನ ಎನ್ನಲಾಗುತ್ತದೆಯಾದರೂ ಈ ವಿಮಾನದ ಶೇ.65ರಿಂದ 75ರಷ್ಟು ಭಾಗಗಳಷ್ಟೇ ದೇಶಿ ನಿರ್ಮಿತ. ಎಂಜಿನ್ ಹಾಗೂ ಕೆಲ ತಂತ್ರಜ್ಞಾನಗಳನ್ನು ವಿದೇಶದಿಂದಲೇ ಆಮದು ಮಾಡಿಕೊಳ್ಳಲಾಗಿದೆ.
ವಿಶೇಷತೆಗಳೇನು?
  • ಸಿಂಗಲ್ ಎಂಜಿನ್‌ನ ಈ ವಿಮಾನ ಡೆಲ್ಟಾ ಆಕಾರದ ರೆಕ್ಕೆ ಹೊಂದಿದೆ. ವೈಮಾನಿಕ ಕ್ಷೇತ್ರದಲ್ಲಿ ಸಾಕಷ್ಟು ಕುತೂಹಲ ಮೂಡಿಸಿರುವ ಈ ವಿಮಾನಕ್ಕೆ ಬಾಲವೇ ಇಲ್ಲ.
  • ತೇಜಸ್ ವಿಮಾನ ಅಭಿವೃದ್ಧಿಯ ಹಿಂದಿದ್ದು ಪ್ರಮುಖವಾಗಿ 2 ಗುರಿಗಳು. ಮೊದಲನೆಯದು ಮಿಗ್- 21ಗೆ ದೇಶೀಯವಾದ ಪರ್ಯಾಯ ಕಲ್ಪಿಸುವುದು, 2ನೆಯದು ರಾಷ್ಟ್ರಕ್ಕೆ ಆಸ್ತಿಯಾಗಬಹುದಾದ ಆಧುನಿಕ ಯುದ್ಧ ವಿಮಾನ ಹಾಗೂ ಅದಕ್ಕೆ ಸಂಬಂಧಿಸಿದ ತಂತ್ರಜ್ಞಾನದ ಅಭಿವೃದ್ಧಿಪಡಿಸುವ ಕ್ಷೇತ್ರದಲ್ಲಿ ಪ್ರಗತಿ ಸಾಧಿಸುವುದು.
  • ಕಾವೇರಿ ಎಂಜಿನ್ ವಿಫಲ ಆರಂಭದಲ್ಲಿ ತೇಜಸ್‌ಗೆ ಸ್ವದೇಶಿ ನಿರ್ಮಿತ ಎಂಜಿನ್ ಅನ್ನೇ ಬಳಸುವ ಚಿಂತನೆ ಇತ್ತು. ಇದಕ್ಕಾಗಿ ಕಾವೇರಿ ಎಂಜಿನ್ ಅಭಿವೃದ್ಧಿಪಡಿಸುವ ಕಾರ್ಯವನ್ನು 20 ವರ್ಷಗಳ ಹಿಂದೆಯೇ ಕೈಗೆತ್ತಿಕೊಳ್ಳಲಾಗಿತ್ತು. ಆದರೆ, ಸ್ವದೇಶಿ ಎಂಜಿನ್ ನಿರ್ಮಾಣದಲ್ಲಿ ಭಾರತ ನಿರೀಕ್ಷಿತ ಯಶಸ್ಸು ಕಾಣುವಲ್ಲಿ ವಿಫಲವಾದ ಕಾರಣ ತೇಜಸ್‌ಗೆ ಅನಿವಾರ್ಯವಾಗಿ ಅಮೆರಿಕದ ಜಿಇ ಸಂಸ್ಥೆ ಅಭಿವೃದ್ಧಿಪಡಿಸಿದ ಎಂಜಿನ್ ಬಳಸಲಾಗುತ್ತಿದೆ.
  • ವೇಗ……..ಗರಿಷ್ಠ ಪ್ರತಿ ಗಂಟೆಗೆ 1,475 ಮೈಲಿ ಎಂಜಿನ್………ಜಿಇ ಎಫ್-404 ಎಂಜಿನ್ ಕ್ಷಿಪಣಿ ಸಾಮರ್ಥ್ಯ….. ಈ ಹಗುರ ವಿಮಾನವು ಆಕಾಶದಿಂದ ಆಕಾಶಕ್ಕೆ, ಆಕಾಶದಿಂದ ನೆಲಕ್ಕೆ ಚಿಮ್ಮುವ ಕ್ಷಿಪಣಿಗಳನ್ನು ಹೊತ್ತೊಯ್ಯಬಲ್ಲ ಸಾಮರ್ಥ್ಯ ಹೊಂದಿದೆ.
ವಿಳಂಬ ಏಕೆ?
ಪೋಖರಣ್ ಅಣು ಪರೀಕ್ಷೆ ಬಳಿಕ ಅಮೆರಿಕವು ಭಾರತದ ಮೇಲೆ ಹೇರಿದ್ದ ನಿರ್ಬಂಧದಿಂದಾಗಿ ತೇಜಸ್ ಅಭಿವೃದ್ಧಿಗೆ ತೀವ್ರ ಹಿನ್ನಡೆಯಾಗಿತ್ತು. ಯಾಕೆಂದರೆ ವಿಮಾನದ ಪ್ರಮುಖ ಭಾಗಗಳಿಗೆ ವಿದೇಶವನ್ನೇ ಅವಲಂಬಿಸಬೇಕಾಗಿತ್ತು. ಅಲ್ಲದೆ, ಈ ವಿಮಾನಕ್ಕೆ ಸ್ವದೇಶಿ ನಿರ್ಮಿತ ಕಾವೇರಿ ಎಂಜಿನ್ ಅನ್ನು ಬಳಸುವ ಯೋಜನೆ ಹಾಕಿಕೊಳ್ಳಲಾಗಿತ್ತು. ಆದರೆ, ಅದೂ ವಿಫಲವಾಯಿತು. ಅಲ್ಲದೆ, ಕೆಲವು ಪರೀಕ್ಷೆಗಳಲ್ಲಿ ಇದು ನಿರೀಕ್ಷಿತ ಯಶಸ್ಸು ಕಂಡಿರಲಿಲ್ಲ. -ತೇಜಸ್‌ನ ಮೊದಲ ಹಾರಾಟ ಜನವರಿ 2001ರಲ್ಲಿ ನಡೆಯಿತು. -2006ರಲ್ಲಿ ಭಾರತ ಸರ್ಕಾರ ವಾಯುಸೇನೆಗಾಗಿ 20 ತೇಜಸ್ ಉತ್ಪಾದನೆಗೆ ಅನುಮತಿ ನೀಡಿತ್ತು. -ಮೊದಲ ಉತ್ಪಾದನೆ ಆರಂಭವಾದದ್ದು ಏಪ್ರಿಲ್ 2007ರಿಂದ.

ಮೈಸೂರು ಮಹಾರಾಜ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ವಿಧಿವಶ
wodeyarಯದುವಂಶದ ಕೊನೆಯ ಕುಡಿ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಅವರು ವಿಧಿವಶರಾಗಿದ್ದು ಅವರ ಬಗೆಗಿನ ಕಿರುವ ಪರಿಚಯ ಇಲ್ಲಿದೆ.
ಕಾಲಘಟ್ಟ:
ಅವರು ರಾಜಮನೆತನದಲ್ಲಿ ಹುಟ್ಟಿ, ರಾಜಕೀಯ, ಕ್ರಿಕೆಟ್‌, ಸಂಗೀತ ಹಾಗೂ ಇತರೆ ಕ್ಷೇತ್ರಗಳಲ್ಲಿ ತಮ್ಮದೇ ಛಾಪು ಮೂಡಿಸಿ, ಬಹುಮುಖ ವ್ಯಕ್ತಿತ್ವ ಉಳ್ಳವರಾಗಿದ್ದರು. 1953 ಫೆಬ್ರವರಿ 20 ರಂದು ಜಯಚಾಮರಾಜ ಒಡೆಯರ್‌-ತ್ರಿಪುರ ಸುಂದರಿ ಅಮ್ಮಣ್ಣಿ ಅವರ ಪುತ್ರನಾಗಿ ಜನಿಸಿದ ಒಡೆಯರ್‌, ರಾಜ್ಯಶಾಸ್ತ್ರ ವಿಷಯದಲ್ಲಿ ಸ್ನಾತಕೋತ್ತರ ಪದವೀಧರರು. ಅವರು ಕಾನೂನು ವಿಷಯದಲ್ಲಿಯೂ ಪದವಿ ಪಡೆದಿದ್ದರು. ಎರಡು ವರ್ಷ ಮೈಸೂರು ವಿವಿಯಲ್ಲಿ ರಾಜ್ಯ ಶಾಸ್ತ್ರ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸಿದರು. 1974ರಲ್ಲಿ ಮೈಸೂರು ಮಹಾರಾಜರಾಗಿ ಅವರಿಗೆ ಪಟ್ಟಾಭಿಷೇಕ ಮಾಡಲಾಗಿತ್ತು. 1976 ಫೆಬ್ರವರಿ 2 ರಂದು ಪ್ರಮೋದಾದೇವಿ ಅವರನ್ನು ವರಿಸಿದರು.
ನಾಲ್ಕು ಬಾರಿ ಸಂಸದ:
ಶ್ರೀಕಂಠದತ್ತರು 31ನೇ ವಯಸ್ಸಿನಲ್ಲಿ ರಾಜಕೀಯ ಜೀವನಕ್ಕೆ ಪದಾರ್ಪಣೆ ಮಾಡಿದರು. ಮಾಜಿ ಮುಖ್ಯಮಂತ್ರಿ ಗುಂಡುರಾವ್‌ ಅವರು ಒಡೆಯರನ್ನು ಕಾಂಗ್ರೆಸ್‌ಗೆ ಕರೆತಂದರು. ಅರಮನೆಗೆ ತೆರಳಿ ರಾಜಕೀಯ ಜೀವನಕ್ಕೆ ನೀಡಿದ ಆಹ್ವಾನ ಎರಡು ದಶಕಗಳ ಕಾಲ ಒಡೆಯರ್‌ ಅವರನ್ನು ಸಕ್ರಿಯ ರಾಜಕಾರಣದಲ್ಲಿ ಉಳಿಯುವಂತೆ ಮಾಡಿತು. ಇವರು 4 ಬಾರಿ ಗೆಲುವು, 2 ಬಾರಿ ಸೋಲು ಅನುಭವಿಸಿದ್ದರು. 1984, 1989ಕಾಂಗ್ರೆಸ್‌ ಅಭ್ಯರ್ಥಿಯಾಗಿ ಗೆದ್ದ ಒಡೆಯರ್‌ ಅವರನ್ನು ಮೈಸೂರು ಮತದಾರರು 1991ರಲ್ಲಿ ತಿರಸ್ಕರಿಸಿದರು. ಇದು ಅವರನ್ನು ಮತ್ತೆ ಕಾಂಗ್ರೆಸ್‌ಗೆ ಮರಳುವಂತೆ ಮಾಡಿತು. ಆನಂತರ ನಡೆದ 1996 ಮತ್ತು 1999ರಲ್ಲಿ ವಿಜೇತರಾದರು. ಬಿಜೆಪಿ ಸೇರಿ ಚುನಾವಣೆಗೆ ನಿಂತಿದ್ದ ಅವರು ಪರಾಜಿತರಾಗಿದ್ದರು.
ಕಲಾಭಿಮಾನಿ ಒಡೆಯರ್:
ಕಲೆ – ಸಾಹಿತ್ಯದಲ್ಲಿ ಅಪಾರ ಆಸಕ್ತಿ ಹೊಂದಿದ್ದ ಶ್ರೀಕಂಠದತ್ತ ನರಸಿಂಹ ಒಡೆಯರ್‌ ಅವರು ಪಾಶ್ಚಿಮಾತ್ಯ ಸಂಗೀತದಲ್ಲಿ ಪದವಿ ಸಹ ಪಡೆದಿದ್ದರು. ಲಂಡನ್ನಿನ ಟ್ರಿನಿಟಿ ಕಾಲೇಜ್‌ ಆಫ್‌ ಮ್ಯೂಸಿಕ್‌ನಿಂದ ಮೆರಿಟ್‌ ಪಡೆದಿದ್ದರು. ಮೈಸೂರಿನ ಜಯಚಾಮರಾಜೇಂದ್ರ ಕಲಾ ಗ್ಯಾಲರಿ, ಲಕ್ಷ್ಮಮ್ಮ ಅಮ್ಮಣ್ಣಿ ಶಿಕ್ಷಣ ಟ್ರಸ್ಟ್‌, ಜಯಚಾಮರಾಜೇಂದ್ರ ಶಿಕ್ಷಣ ಟ್ರಸ್ಟ್‌ ಮುಖ್ಯಸ್ಥರು ಸಹ ಆಗಿದ್ದರು. ಫ್ಯಾಷನ್‌ ಡಿಸೈನರ್‌ ಆಗಿ ಮೈಸೂರು ರೇಷ್ಮೆ ಸೀರೆಗಳ ಬ್ರಾಂಡ್‌ನಲ್ಲಿ ತಮ್ಮದೇ ಆದ ವಿನ್ಯಾಸವನ್ನು ಪರಿಚಯಿಸಿದ್ದರು. ವಿಶಿಷ್ಟವಾದ ಕಲಾಕೃತಿಗಳು, ವಾಚುಗಳು, ಐಷಾರಾಮಿ ಕಾರುಗಳನ್ನು ಕೊಳ್ಳುವ ಹವ್ಯಾಸ ಅವರಲ್ಲಿ ಇತ್ತು.
ಕ್ರಿಕೆಟ್ ಅಚ್ಚು-ಮೆಚ್ಚು:
ಕ್ರಿಕೆಟ್‌ ಅವರಿಗೆ ಅತ್ಯಂತ ನೆಚ್ಚಿನ ಕ್ರೀಡೆ. ಇದನ್ನು ತುಂಬಾ ಪ್ರೀತಿಸುತ್ತಿದ್ದರು. ಇದಲ್ಲದೆ ಮೈಸೂರು ರೇಸ್‌ ಕ್ಲಬ್‌, ಬೆಂಗಳೂರು ಗಾಲ್ಫ್‌ ಕ್ಲಬ್‌, ಬೆಂಗಳೂರು ಟರ್ಫ್‌ ಕ್ಲಬ್‌, ದೆಹಲಿ ರೇಸ್‌ ಕ್ಲಬ್‌ನೊಂದಿಗೆ ಒಡನಾಟ ಇಟ್ಟುಕೊಂಡು ವಿವಿಧ ಹುದ್ದೆಗಳನ್ನು ಅಲಂಕರಿಸಿದ್ದರು.
ರಾಜರ ಒಡೆತನ:
ಮೈಸೂರು ಅರಮನೆ, ಬೆಂಗಳೂರು ಅರಮನೆ, ಲೋಕರಂಜನ್‌ ಮಹಲ್‌, ಚಾಮುಂಡಿ ಬೆಟ್ಟದಲ್ಲಿರುವ ರಾಜೇಂದ್ರ ವಿಲಾಸ ಅರಮನೆ, ಊಟಿಯಲ್ಲಿರುವ ಫರ್ನ್‌ ಹಿಲ್‌ ಅರಮನೆ (ಈಗ ಹೋಟೆಲ್‌), ಗನ್‌ಹೌಸ್‌, ಸುರಭಿ ಡೇರಿ ಮುಂತಾದವು ಒಡೆಯರ್‌ ಅವರ ಒಡೆತನಕ್ಕೆ ಸೇರಿವೆ.

ಚೂರು-ಪಾರು ಸುದ್ಧಿಗಳು:
    teacher
  • ಮಿಸ್ ಅರ್ತ್-2013 ಆಗಿ ವೆನಿಜುವೆಲಾದ ಅಲೆಜ್ ಹೆನ್ರಿಚ್ ಆಯ್ಕೆ: ಸೌಂದರ್ಯ ಸ್ಪರ್ಧೆ ಮಿಸ್‌ ಅರ್ತ್‌-2013ರ ವಿಜೇತರಾಗಿ ವೆನಿಜುವೆಲಾದ ಅಲೆಜ್‌ ಹೆನ್ರಿಚ್‌ ಆಯ್ಕೆಯಾಗಿದ್ದಾರೆ. ಹೆನ್ರಿಚ್‌ ನಂತರದ ಸ್ಥಾನ ಮಿಸ್‌ ಏರ್‌ ಆಗಿ ಆಸ್ಟ್ರಿಯಾದ ಕತಿಯಾ ವ್ಯಾಗ್ನರ್‌, ಮಿಸ್‌ ವಾಟರ್‌ ಆಗಿ ಥಾಯ್ಲೆಂಡ್‌ನ‌ ಪುನಿಕಾ ಕಲೂನ್‌ಟೊರ್ನಟ್‌ ಆಯ್ಕೆಯಾಗಿದ್ದಾರೆ. ಈ ವರ್ಷ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಿದ್ದ ಶೋಭಿತಾ ಅಂತಿಮ ಸುತ್ತನ್ನು ಪ್ರವೇಶಿಸುವಲ್ಲಿ ವಿಫ‌ಲರಾದರು. 2010ರಲ್ಲಿ ಬೆಂಗಳೂರಿನ ನಿಕೊಲೆ ಫ‌ರಿಯಾ ಮಿಸ್‌ ಅರ್ತ್‌ ಕಿರೀಟ ಮುಡಿಗೇರಿಸಿಕೊಂಡಿದ್ದರು.

  • ಮೈಸೂರು ಮೃಗಾಲಯದಲ್ಲಿ ದೇಶದ ಎರಡನೇ ಪ್ರಾಣಿಗಳ ವಿದ್ಯುತ್ ಚಿತಾಗಾರ: ವಿಶ್ವ ಪ್ರಸಿದ್ಧ ಮೈಸೂರು ಚಾಮರಾಜೇಂದ್ರ ಮೃಗಾಲಯ ಪ್ರಾಣಿಗಳ ಅಂತ್ಯ ಸಂಸ್ಕಾರಕ್ಕಾಗಿ ವಿದ್ಯುತ್‌ ಚಿತಾಗಾರ ಸ್ಥಾಪನೆ ಮಾಡಿರುವ ದೇಶದ ಎರಡನೇ ಮೃಗಾಲಯ ಎಂಬ ಕೀರ್ತಿಗೆ ಪಾತ್ರವಾಗಿದೆ. ಹೈದರಾಬಾದ್‌ ಮೃಗಾಲಯದಲ್ಲಿ ಈಗಾಗಲೇ ಈ ರೀತಿಯ ಚಿತಾಗಾರವಿದೆ. ಮೃಗಾಲಯದ ಪ್ರಾಣಿಗಳು ಮೃತಪಟ್ಟರೆ ಈ ಹಿಂದೆ ಅವುಗಳನ್ನು ಮೃಗಾಲಯ ಆವರಣದಲ್ಲಿ ಹೂಳುವ ಅಥವಾ ಸುಡುವ ಮೂಲಕ ಅಂತ್ಯ ಸಂಸ್ಕಾರ ನೆರವೇರಿಸಲಾಗುತ್ತಿತ್ತು. ಇದಕ್ಕೆ ಸಾಕಷ್ಟು ಪ್ರಮಾಣದಲ್ಲಿ ಸೌದೆ, ಸೀಮೆಎಣ್ಣೆ ಬೇಕಾಗುತ್ತಿತ್ತು. ಅಲ್ಲದೆ ಪ್ರಾಣಿಗಳ ಚಿತೆಗೆ ಬೆಂಕಿ ಹಚ್ಚಿದಾಗ ಕೆಟ್ಟ ವಾಸನೆ ಬರುತ್ತಿತ್ತು. ಈ ಹಿನ್ನೆಲೆ 6 ತಿಂಗಳ ಹಿಂದೆ 29 ಲಕ್ಷ ರೂ. ವೆಚ್ಚದಲ್ಲಿ ವಿದ್ಯುತ್‌ ಚಿತಾಗಾರ ಸ್ಥಾಪಿಸಲು ಉದ್ದೇಶಿಸಿದ್ದು, ಇದೀಗ ಅದರ ಬಳಕೆ ಆರಂಭವಾಗಿದೆ.
ಶತಮಾನದ ಧೂಮಕೇತು “ಇಸಾನ್” ಶೇಷ: ಶತಮಾನದ ಧೂಮಕೇತು ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಇಸಾನ್ ಸಾವಿಗೀಡಾಗಿದೆ. ಸುಮಾರು ವರ್ಷದ ಹಿಂದಷ್ಟೇ ಹುಟ್ಟಿಕೊಂಡಿದ್ದ ಈ ಧೂಮಕೇತು ಸೂರ್ಯನ ಸಮೀಪ ಪಥದಲ್ಲಿ ಹಾದುಹೋಗುವಾಗ ಸುಟ್ಟುಭಸ್ಮವಾಗಿದೆ.ಸೂರ್ಯನಿಂದ ಕೇವಲ 7.30 ಲಕ್ಷ ಕಿ.ಮೀ. ದೂರದಲ್ಲಿ ಹಾದು ಹೋದ ಈ ಧೂಮಕೇತು ವೈಜ್ಞಾನಿಕ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿತ್ತು. ಈ ಹಿಂದೆ ಕೆಲವು ಧೂಮಕೇತುಗಳು ಮುಖ್ಯವಾಗಿ ಲವ್‌ಜಾಯ್ ಉಳಿವ ಗೋಳ ಸೂರ್ಯನ ಸಮೀಪದಿಂದ ಹಾದು ಹೋದರೂ ಬದುಕಿ ಬಂದಿದ್ದವು. ಅದರಂತೆ ಸೂರ್ಯನ ತಾಪವನ್ನು ತಾಳಿಕೊಂಡು ಇಸಾನ್ ಕೂಡ ಬದುಕಿಬರಬಹುದು. ಡಿಸೆಂಬರ್ ಅಂತ್ಯದಲ್ಲಿ ಆಗಸದಲ್ಲಿ ಎಲ್ಲರ ಕಣ್ಣಿಗೆ ಗೋಚರಿಸಬಹುದು ಎಂದು ಬಹುತೇಕರು ನಿರೀಕ್ಷಿಸಿದ್ದರು.

 

ಪ್ರಚಲಿತ ವಿದ್ಯಮಾನಗಳು ಡಿಸೆಂಬರ್ 5, 2013


ಸಾಂವಿಧಾನಿಕ ಹುದ್ದೆಯಲ್ಲಿರುವವರಿಗೆ ಮಾತ್ರ ಕೆಂಪು ದೀಪದ ವಾಹನ: ಸುಪ್ರೀಂ ಆದೇಶ
ಪ್ರಚಲಿತ ವಿದ್ಯಮಾನಗಳು ಡಿಸೆಂಬರ್ 5, 2013ಸಾಂವಿಧಾನಿಕ ಹುದ್ದೆಯಿರುವವರ ವಾಹನಕ್ಕೆ ಮಾತ್ರವೇ ಕೆಂಪು ದೀಪ ಅಳವಡಿಸುವಂತೆ ಕೇಂದ್ರ, ರಾಜ್ಯ ಸರ್ಕಾರಗಳಿಗೆ ಆದೇಶ ನೀಸಿದೆ. ಇದೇ ವೇಳೆ ವಿಐಪಿ ಕಾರುಗಳ ಮೇಲೆ ಬೆಳಗುವ ಕೆಂಪು ದೀಪಗಳಿಗೆ ಸುಪ್ರೀಂ ಕೋರ್ಟ್ ನಿರ್ಬಂಧ ಹೇರಿದೆ. ಕೇವಲ ಸಾಂವಿಧಾನಿಕ ಹುದ್ದೆಯಲ್ಲಿರುವವರು ಹಾಗೂ ಅತಿ ಗಣ್ಯರಿಗೆ ಮಾತ್ರ ಕಾರುಗಳಲ್ಲಿ ಕೆಂಪು ದೀಪ ಅಳವಡಿಸಲು ಅನುಮತಿ ನೀಡಬೇಕು ಎಂದು ಕೋರ್ಟ್ ಹೇಳಿದೆ. ಸ್ಥಳೀಯ ರಾಜಕಾರಣಿಗಳು ಕೆಂಪುದೀಪಗಳನ್ನು ತಮ್ಮ ಪ್ರತಿಷ್ಠೆಗಾಗಿ ಬಳಸುವ ಮೂಲಕ ಅದನ್ನು ದುರ್ಬಳಕೆ ಮಾಡುತ್ತಿದ್ದಾರೆ. ಇದನ್ನು ತಪ್ಪಿಸಲೆಂದೇ ಕೋರ್ಟ್ ಈ ನಿರ್ಬಂಧಗಳನ್ನು ಹೇರಿದೆ.
ಗಡುವು ವಿಧಿಸಿದ ಕೋರ್ಟ್:
  • ರಾಷ್ಟ್ರಪತಿ, ಪ್ರಧಾನಿ, ಸಂಪುಟ ಸಚಿವರು, ರಾಜ್ಯಪಾಲರು, ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಾಗೂ ಸುಪ್ರೀಂನ ಇತರೆ ನ್ಯಾಯಮೂರ್ತಿಗಳು, ಸಂಸತ್‌ನ ಎರಡೂ ಸದನಗಳ ಮುಖ್ಯಸ್ಥರು ಸಾಂವಿಧಾನಿಕ ಹುದ್ದೆ ಹೊಂದಿದವರಾಗಿರುತ್ತಾರೆ. ಇಂಥವರು ಮಾತ್ರ ಕಾರುಗಳಲ್ಲಿ ಕೆಂಪು ದೀಪ ಅಳವಡಿಸಲಿ ಎಂದೂ ಕೋರ್ಟ್ ಹೇಳಿದೆ.
  • ಇದೇ ವೇಳೆ, ಕೆಂಪು ದೀಪಕ್ಕೆ ಅರ್ಹರಾದವರ ಪಟ್ಟಿಯನ್ನು 3 ತಿಂಗಳೊಳಗಾಗಿ ಒದಗಿಸುವಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ಕೋರ್ಟ್ ಆದೇಶಿಸಿದೆ. ಜತೆಗೆ ಈ ಪಟ್ಟಿಯನ್ನು ಸುಖಾಸುಮ್ಮನೆ ಬೆಳೆಸದಂತೆಯೂ ಎಚ್ಚರಿಸಿದೆ.
  • ಏತನ್ಮಧ್ಯೆ, ಆಯಂಬುಲೆನ್ಸ್, ತುರ್ತು ವಾಹನಗಳು ಹಾಗೂ ಪೊಲೀಸ್ ಜೀಪ್‌ಗಳು ನೀಲಿ ಬಣ್ಣದ ದೀಪಗಳನ್ನು ಅಳವಡಿಸಬೇಕು ಎಂದು ಕೋರ್ಟ್ ಹೇಳಿದೆ.

ಚುನಾವಣೆಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸಿ ಮುಖ್ಯಮಂತ್ರಿಗಳಾದ ನಾಯಕರ ಪಟ್ಟಿ
hatrick cmಛತ್ತೀಸ್‌ಗಡ, ಮಧ್ಯಪ್ರದೇಶದಲ್ಲಿ ಬಿಜೆಪಿ ಮತ್ತೆ ಅಧಿಕಾರದ ಚುಕ್ಕಾಣಿ ಹಿಡಿದಿದೆ. ಈ ರಾಜ್ಯಗಳ ಮುಖ್ಯಮಂತ್ರಿಗಳಾದ ರಮಣ್‌ಸಿಂಗ್ ಹಾಗೂ ಶಿವರಾಜ್‌ಸಿಂಗ್ ಚೌಹಾಣ್ ಅವರು ಮತ್ತೆ ಗದ್ದುಗೆಯೇರಲಿದ್ದಾರೆ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಅವರ ಬಳಿಕ ಸತತ ಮೂರನೇ ಅವಧಿಗೆ ಮುಖ್ಯಮಂತ್ರಿಯಾಗುತ್ತಿರುವ ಬಿಜೆಪಿ ನಾಯಕರಲ್ಲಿ ರಮಣ್‌ಸಿಂಗ್ ಹಾಗೂ ಚೌಹಾಣ್ ಹೆಸರೂ ಈಗ ಸೇರ್ಪಡೆಯಾಗಿದೆ. ಈವರೆಗೆ ಹ್ಯಾಟ್ರಿಕ್ ಗೆಲವು ಸಾಧಿಸಿ ಸಿಎಂ ಆದ ಬಿಜೆಪಿ ನಾಯಕರೆಂದರೆ ಮೋದಿ ಮಾತ್ರ.
ಹ್ಯಾಟ್ರಿಕ್  ನಾಯಕರು:
ಒಟ್ಟಾರೆ ಸತತವಾಗಿ ಸಿಎಂ ಪಟ್ಟ ಗಿಟ್ಟಿಸಿಕೊಂಡ 14 ಮುಖ್ಯಮಂತ್ರಿಗಳ ವಿವರ ಇಲ್ಲಿದೆ. ಇವರಲ್ಲಿ 12 ಮಂದಿ ಹ್ಯಾಟ್ರಿಕ್ ಗೆಲವು ಸಾಧಿಸಿ ಸಿಎಂ ಆಗಿದ್ದಾರೆ. ಇನ್ನೂ ಕೆಲವರು 3ಕ್ಕಿಂತ ಹೆಚ್ಚು ಬಾರಿ ಸಿಎಂ ಆಗಿದ್ದರೂ, ಅವರು ಸತತವಾಗಿ ಮುಖ್ಯಮಂತ್ರಿ ಆದವರಲ್ಲ.
  • 5 ಬಾರಿ: ಜ್ಯೋತಿ ಬಸು (ಸಿಪಿಎಂ) ಪಶ್ಚಿಮ ಬಂಗಾಳ (1977-2000)
  • 4 ಬಾರಿ: ಪವನ್‌ಕುಮಾರ್ ಚಾಮ್ಲಿಂಗ್ (ಸಿಕ್ಕಿಂ ಡೆಮಾಕ್ರಟಿಕ್ ಫ್ರಂಟ್) (1994ರಿಂದ) ಸಿಕ್ಕಿಂ; ಮೋಹನ್‌ಲಾಲ್ ಸುಖಾದಿಯಾ (ಕಾಂಗ್ರೆಸ್) ರಾಜಸ್ಥಾನ (1954-1971); ಗೋವಿಂದ್ ವಲ್ಲಭ್ ಪಂತ್ (ಕಾಂಗ್ರೆಸ್) ಉತ್ತರ ಪ್ರದೇಶ (1937-54); ಮಾಣಿಕ್ ಸರ್ಕಾರ್ (ಸಿಪಿಎಂ) ತ್ರಿಪುರ (1998ರಿಂದ)
  • 3 ಬಾರಿ: ಶಿವರಾಜ್‌ಸಿಂಗ್ (ಬಿಜೆಪಿ), ಮಧ್ಯಪ್ರದೇಶ (2005ರಿಂದ); ರಮಣ್‌ಸಿಂಗ್ (ಬಿಜೆಪಿ) ಛತ್ತೀಸ್‌ಗಡ (2003ರಿಂದ); ಓಕ್ರಾಂ ಇಬೋಬಿ ಸಿಂಗ್ (ಕಾಂಗ್ರೆಸ್) ಮಣಿಪುರ (2002ರಿಂದ);  ನರೇಂದ್ರ ಮೋದಿ (ಬಿಜೆಪಿ) ಗುಜರಾತ್ (2002ರಿಂದ); ತರುಣ್ ಗೊಗೋಯ್ (ಕಾಂಗ್ರೆಸ್), ಅಸ್ಸಾಂ (2001 ರಿಂದ) ; ಶೀಲಾ ದೀಕ್ಷಿತ್ (ಕಾಂಗ್ರೆಸ್) ದೆಹಲಿ (1998- 2008); ವಸಂತ್‌ರಾವ್ ನಾಯಕ್, (ಕಾಂಗ್ರೆಸ್), ಮಹಾರಾಷ್ಟ್ರ (1963-75); ಕೆ. ಕಾಮರಾಜ್ (ಕಾಂಗ್ರೆಸ್) ತಮಿಳುನಾಡು (1954-63); ವಿಮಲ್ ಪ್ರಸಾದ್ ಚಾಲಿಹಾ (ಕಾಂಗ್ರೆಸ್), ಅಸ್ಸಾಂ (1957- 70) .
  • ಹೆಚ್ಚು ಬಾರಿ ಸಿಎಂ ಹುದ್ದೆಗೇರಿದವರಲ್ಲಿ ಕಾಂಗ್ರೆಸ್ ನಾಯಕರದ್ದೇ ಮೇಲುಗೈ. 8 ಮಂದಿ ಕಾಂಗ್ರೆಸ್ ನಾಯಕರು ಈ ಪಟ್ಟಿಯಲ್ಲಿ ಬರುತ್ತಾರೆ. ಜತೆಗೆ ಬಿಎಸ್‌ಪಿ ನಾಯಕಿ ಮಾಯಾವತಿ ಅವರ ಹೆಸರೂ ಪಟ್ಟಿಯಲ್ಲಿದೆ. ಅವರೂ 3 ವರ್ಷ ಸಿಎಂ ಸ್ಥಾನ ಗಿಟ್ಟಿಸಿಕೊಂಡವರು. ಆದರೆ ಸತತವಾಗಿ ಅಲ್ಲ. ದೆಹಲಿ ಸಿಎಂ ಆಗಿದ್ದ ಶೀಲಾ ದೀಕ್ಷಿತ್ ಹೆಸರೂ ಈ ಪಟ್ಟಿಯಲ್ಲಿದೆ.

ವಾಯುಪಡೆಯಲ್ಲಿ ತನ್ನ ಸುದೀರ್ಘ ಯಾನ ನಿಲ್ಲಿಸಲಿರುವ ಸೂಪರ್ ಸಾನಿಕ್ ಜೆಟ್ ‘ಮಿಗ್-21’
mig-21ಒಂದು ಕಾಲದಲ್ಲಿ ಭಾರತೀಯ ವಾಯುಪಡೆಯ ಹೆಮ್ಮೆಯೇ ಆಗಿದ್ದ ಮಿಗ್-21 ಇತಿಹಾಸದ ಪುಟ ಸೇರಲಿದೆ. ಹಾರಾಡುವ ಶವಪೆಟ್ಟಿಗೆ ಕುಖ್ಯಾತಿ ಹಿನ್ನೆಲೆಯಲ್ಲಿ ಭಾರತೀಯ ವಾಯುಪಡೆಯು ಎಫ್-21ರ ಬಳಕೆ ನಿಲ್ಲಿಸಲು ಉದ್ದೇಶಿಸಿದೆ. ಡಿಸೆಂಬರ್ 11 ರಂದು ಈ ವಿಮಾನ ಕೊನೆಯ ಹಾರಾಟ ನಡೆಸಲಿದೆ. ಈ ಹಿನ್ನೆಲೆಯಲ್ಲಿ ಈ ಯುದ್ಧವಿಮಾನದ ಕುರಿತು ಒಂದಷ್ಟು ಮಾಹಿತಿ ಇಲ್ಲಿದೆ.
ಮಿಗ್-21 ಜೆಟ್ ಬಗ್ಗೆ:
  • ಸೂಪರ್‌ಸಾನಿಕ್ ಜೆಟ್ ಮಿಗ್-21 ಮಿಕಾಯೊನ್ ಗುರ್ರೆವಿಚ್ ಒಂದು ಸೂಪರ್‌ಸಾನಿಕ್ ಜೆಟ್ ಫೈಟರ್ ಆಗಿದೆ. ಈ ವಿಮಾನವನ್ನು ವಿನ್ಯಾಸಗೊಳಿಸಿದ್ದು ಮಿಕಾಯನ್ ಗುರ್ರೇವಿಚ್ ಡಿಸೈನ್ ಬ್ಯುರೋದ ಆರ್ಟೆಮ್ ಮಿಕಾಯನ್.
  • ಮಿಗ್-21ನ ಹಿಂದಿನ ಆವೃತ್ತಿಗಳಿಗೆ 2ನೇ ತಲೆಮಾರಿನ ಯುದ್ಧವಿಮಾನಗಳು ಹಾಗೂ ನಂತರದ ಆವೃತ್ತಿಗಳನ್ನು 3ನೇ ತಲೆಮಾರಿನ ಯುದ್ಧ ವಿಮಾನಗಳು ಎಂದು ಕರೆಯಲಾಗುತ್ತದೆ.
  • ಹೆಚ್ಚು ಬಳಸುವ ದೇಶಗಳು – ರಷ್ಯಾ ಏರ್‌ಫೋರ್ಸ್ – ಭಾರತದ ಏರ್‌ಫೋರ್ಸ್ – ರೊಮಾನಿಯನ್ ಏರ್‌ಫೋರ್ಸ್ – ಸರ್ಬಿಯನ್ ಏರ್‌ಫೋರ್ಸ್
  • 50ರ ದಶಕದ ಆರಂಭದಲ್ಲಿ ಅಮೆರಿಕ ಮತ್ತು ಸೋವಿಯತ್ ರಷ್ಯಾದ ನಡುವೆ ಶೀತಲ ಸಮರದ ಕಾಲದಲ್ಲಿ ಈ ಯುದ್ಧ ವಿಮಾನ ಉತ್ಪಾದನೆ ಆರಂಭವಾಗಿತ್ತು.
  • ಫೆಬ್ರವರಿ 14, 1955 ರಲ್ಲಿ ವಿಮಾನ ಮೊದಲ ಬಾರಿಗೆ ಗಗನಕ್ಕೇರಿತ್ತು. ಮೊದಲು ಸಾರ್ವಜನಿಕ ಹಾರಾಟ ನಡೆಸಿದ್ದು 1956 ರಲ್ಲಿ.
  • ಫೈಟರ್ ಮತ್ತು ಇಂಟರ್‌ಸೆಪ್ಟರ್ ಎರಡೂ ವಿಶೇಷತೆಗಳನ್ನು ಹೊಂದಿರುವ ಸೋವಿಯತ್‌ನ ಮೊದಲ ಯುದ್ಧವಿಮಾನ ಎನ್ನುವ ಗೌರವ ಈ ಮಿಗ್- 21ಗೆ ಸಲ್ಲುತ್ತದೆ.
  • ಮಿಗ್- 21 ಬಳಿಕ ಮಿಗ್- 21ಎಫ್, ಪಿಎಫ್, ಪಿಎಫ್‌ಎಂ, ಎಸ್/ಎಸ್‌ಎಂ, ಎಂಎಫ್, ಬಿಐಎಸ್ ಹೀಗೆ ಅನೇಕ ಆವೃತ್ತಿಗಳು ಹೊರಬಂದಿವೆ. ಮಿಗ್- 23, 27, 29… ಅತ್ಯುತ್ತಮ ತರಬೇತಿ ಪಡೆದ ಪೈಲಟ್ ಹಾಗೂ ಉತ್ತಮ ಕ್ಷಿಪಣಿಯಿದ್ದರೆ ಶತ್ರುಗಳ ಪಾಲಿಗೆ ಈ ವಿಮಾನ ಸಿಂಹಸ್ವಪ್ನವಾಗಿ ಪರಿಣಮಿಸಬಲ್ಲುದು.
  • ಈ ವಿಮಾನದ ಸ್ಥಾನವನ್ನೀಗ ಮಿಗ್- 23 ಮತ್ತು ಮಿಗ್- 27 ತುಂಬುತ್ತಿದೆ. ಈಗ ರಷ್ಯಾವು ಮಿಗ್- 29 ವಿಮಾನವನ್ನು ಅಭಿವೃದ್ಧಿಪಡಿಸಿದೆ. ಕಡಿಮೆ ಉತ್ಪಾದನಾ ಮತ್ತು ನಿರ್ವಹಣಾ ವೆಚ್ಚದಿಂದಾಗಿ ಮಿಗ್-21 ಈಗಲೂ ಅನೇಕ ರಾಷ್ಟ್ರಗಳ ಫೇವರಿಟ್.
  • 50ಕ್ಕೂ ಹೆಚ್ಚು ದೇಶಗಳು ಮಿಗ್-21 ಯುದ್ಧವಿಮಾನವನ್ನು ಈವರೆಗೆ 4 ಖಂಡಗಳ 50ಕ್ಕೂ ಹೆಚ್ಚು ದೇಶಗಳು ಬಳಸಿವೆ. ಭಾರತ ಸೇರಿದಂತೆ ಇನ್ನೂ ಅನೇಕ ದೇಶಗಳಲ್ಲಿ ಈ ವಿಮಾನ ಇನ್ನೂ ಕಾರ್ಯಾಚರಣೆಯಲ್ಲಿದೆ.
  • ವಿಮಾನಯಾನ ಇತಿಹಾಸದಲ್ಲೇ ಅತಿ ಹೆಚ್ಚು ಪ್ರಮಾಣದಲ್ಲಿ ನಿರ್ಮಾಣವಾದ ಸೂಪರ್‌ಸಾನಿಕ್ ಜೆಟ್ ಎನ್ನುವ ದಾಖಲೆ ಮಿಗ್-21 ಗಿದೆ.
ಭಾರತದಲ್ಲಿ ಮಿಗ್-21:
  • ಭಾರತ- ಪಾಕ್ ಯುದ್ಧದಲ್ಲಿ ಪಾತ್ರ 1971 ವಿಶ್ವ ವಿಮಾನಯಾನ ಇತಿಹಾಸದಲ್ಲೇ ಅವಿಸ್ಮರಣೀಯ ವರ್ಷ. ಪೂರ್ವ ಭಾರತದಲ್ಲಿ ಪಹರೆ ನಡೆಸುತ್ತಿದ್ದ ಭಾರತೀಯ ವಾಯುಪಡೆಯ 2 ಮಿಗ್-21 ವಿಮಾನಗಳು ಪಾಕ್ ಏರ್‌ಫೋರ್ಸ್‌ನ ಕೆಲವು ಏರ್‌ಫೋರ್ಸ್ ಎಫ್-104 ಸ್ಟಾರ್‌ಫೈಟರ್ಸ್‌ಗಳನ್ನು ಪತ್ತೆ ಹಚ್ಚಿ ಹೊಡೆದುರುಳಿಸಿದ್ದವು. ಅಲ್ಲದೆ, ಪಾಕ್ ವಾಯುಬಲದ ವಿರುದ್ಧ ಮೇಲುಗೈ ಸಾಧಿಸುವಲ್ಲಿ ಈ ವಿಮಾನ ಪ್ರಮುಖ ಪಾತ್ರವಹಿಸಿದ್ದವು. ಇದು ಮಿಗ್-21ರ ಭವಿಷ್ಯವನ್ನೇ ಬದಲಿಸಿತು ಎನ್ನುತ್ತಾರೆ ರಕ್ಷಣಾ ವಿಶ್ಲೇಷಕರಾದ ಎಡ್ವಡ್ ಕಾಗ್ಗಿನ್ಸ್.
  • ಭಾರತ ಮತ್ತು ಮಿಗ್-21 ಭಾರತೀಯ ವಾಯುಪಡೆಗೆ ಸೇರ್ಪಡೆಯಾದ ಮೊದಲ (964ರಲ್ಲಿ) ಸೂಪರ್‌ಸಾನಿಕ್ ಯುದ್ಧವಿಮಾನ ಎನ್ನುವ ಗೌರವ ಮಿಗ್-21ಗಿದೆ.
  • 1963ರಿಂದ ಈವರೆಗೆ ಭಾರತ 1,200ಕ್ಕೂ ಹೆಚ್ಚು ಮಿಗ್ ವಿಮಾನಗಳನ್ನು ಖರೀದಿಸಿದೆ. ಆಗಸ್ಟ್ 2013ರ ಮಾಹಿತಿ ಪ್ರಕಾರ ಈಗಲೂ 252 ಮಿಗ್-21 ವಿಮಾನಗಳು ಕಾರ್ಯಾಚರಣೆಯಲ್ಲಿವೆ.
  • ಹಾರಾಡುವ ಶವಪೆಟ್ಟಿಗೆ 1970 ರಿಂದೀಚೆಗೆ 170 ಪೈಲಟ್‌ಗಳು ಹಾಗೂ 40 ನಾಗರಿಕರು ಮಿಗ್-27 ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಒಟ್ಟು 350ಕ್ಕೂ ಹೆಚ್ಚು ವಿಮಾನಗಳು ಅಪಘಾತಕ್ಕೀಡಾಗಿವೆ. ತಾಂತ್ರಿಕ ದೋಷದಿಂದಾಗಿ ಅಪಘಾತಕ್ಕೀಡಾಗುತ್ತಿವೆ ಎಂಬ ಆರೋಪವಿದೆ. ಆದರೆ, ಕೆಲ ನಿವೃತ್ತ ಏರ್‌ಚೀಫ್ ಮಾರ್ಷಲ್‌ಗಳು ಈ ಆರೋಪವನ್ನು ನಿರಾಕರಿಸುತ್ತಾರೆ.

 

ಪ್ರಚಲಿತ ವಿದ್ಯಮಾನಗಳು ಡಿಸೆಂಬರ್ 4, 2013


ವಿಶ್ವ ಆಹಾರ ಭದ್ರತಾ ಮಸೂದೆ ಹಾಗೂ ವ್ಯಾಪಾರಕ್ಕೆ ಸೌಲಭ್ಯ ಕಲ್ಪಿಸುವ ‘ಬಾಲಿ ಪ್ಯಾಕೇಜ್’ಗೆ ಡಬ್ಲೂಟಿಓ ಒಪ್ಪಿಗೆ
ಪ್ರಚಲಿತ ವಿದ್ಯಮಾನಗಳು ಡಿಸೆಂಬರ್ 4, 2013ಭಾರತ ಸೇರಿದಂತೆ ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳಿಗೆ ಪೂರಕವಾಗಬಲ್ಲ ವಿಶ್ವ ಆಹಾರ ಭದ್ರತಾ ಮಸೂದೆ ಹಾಗೂ ವ್ಯಾಪಾರಕ್ಕೆ ಸೌಲಭ್ಯ ಕಲ್ಪಿಸುವ ಐತಿಹಾಸಿಕ ‘ಬಾಲಿ ಪ್ಯಾಕೇಜ್’ಗೆ ವಿಶ್ವ ವಾಣಿಜ್ಯ ಸಂಘಟನೆಗಳ ಒಕ್ಕೂಟ ಒಪ್ಪಿಗೆ ನೀಡಿದೆ. ಬಾಲಿಯಲ್ಲಿ ನಡೆದ ಒಕ್ಕೂಟದ 9ನೇ ಜಾಗತಿಕ ಸಭೆಯಲ್ಲಿ ಕ್ಯೂಬಾ ಸೇರಿದಂತೆ ಲ್ಯಾಟಿನ್ ಅಮೆರಿಕದ ಮೂರು ರಾಷ್ಟ್ರಗಳು ಗದ್ದಲ ಎಬ್ಬಿಸಿ ಆಹಾರ ಭದ್ರತೆ ಮಸೂದೆ ಒಪ್ಪಿಗೆ ನೀಡುವಂತೆ ಹೆಚ್ಚಿನ ಒತ್ತಡ ತಂದ ಹಿನ್ನೆಲೆಯಲ್ಲಿ, ಬೊಲಿವಿಯಾ, ನಿಕರಾಗೊ ಹಾಗೂ ವೆನಿಜುವೆಲ ರಾಷ್ಟ್ರಗಳ ವ್ಯಾಪಾರಕ್ಕೆ ಒಪ್ಪಂದದ ಅಂಶವನ್ನು ಸೇರ್ಪಡೆಗೊಳಿಸುವ ಮೂಲಕ ಡಬ್ಲ್ಯುಟಿಒ ‘ಪ್ಯಾಕೇಜ್’ಗೆ ಒಪ್ಪಿಗೆ ಸೂಚಿಸುತು.
ಆಹಾರ ಭದ್ರತೆ ಅಬಾಧಿತ:
ಬಹುಪಕ್ಷೀಯ ವ್ಯಾಪಾರ ಸುಧಾರಣೆ ಕರಡಿಗೆ ಭಾರತ ಸಹಮತ ವ್ಯಕ್ತಪಡಿಸುವ ಮೂಲಕ ಇಲ್ಲಿ ನಾಲ್ಕು ದಿನಗಳಿಂದ ನಡೆಯುತ್ತಿದ್ದ ವಿಶ್ವ ವ್ಯಾಪಾರ ಸಂಘಟನೆ (ಡಬ್ಲುಟಿಒ) ಶೃಂಗಸಭೆ ಯಶಸ್ವಿಯಾಗಿದೆ. ಉದ್ದೇಶಿತ ಕರಡಿನಲ್ಲಿ ಸದಸ್ಯ ರಾಷ್ಟ್ರಗಳು ಆಹಾರ ಧಾನ್ಯಗಳ ಸಬ್ಸಿಡಿ ನೀಡಲು ಒಪ್ಪಿಗೆ ನೀಡಿದ ನಂತರ ಭಾರತ ಕರಡಿಗೆ ಸಹಮತ ವ್ಯಕ್ತಪಡಿಸಿತು. ನಾಲ್ಕು ದಿನಗಳಿಂದ ನಡೆದ ಸುದೀರ್ಘ ಹಾಗೂ ಸೂಕ್ಷ್ಮ ವಿಷಯಗಳ ಚರ್ಚೆಯ ನಂತರ ಸಭೆಯಲ್ಲಿ ಒಮ್ಮತ ಮೂಡಿತು ಎನ್ನಲಾಗಿದೆ. ಈ ಕರಡಿಗೆ ಸಹಿ ಹಾಕುವ ಮೂಲಕ ಎರಡು ದಶಕಗಳ ನಂತರ ಜಾಗತಿಕ ಮಟ್ಟದಲ್ಲಿ ಭಾರತ ವ್ಯಾಪಾರ ಒಪ್ಪಂದಕ್ಕೆ ಬಂದಿದೆ.
ತುರ್ತು ಸಭೆ:
ಶೃಂಗದಲ್ಲಿ ಸಹಮತಕ್ಕೆ ಬರುವ ಮುನ್ನ ಡಬ್ಲುಟಿಒ ಮಹಾ ನಿರ್ದೇಶಕ ರಾಬರ್ಟ್‌ ಅಜವೆಡೊ ಅವರು ಭಾರತ, ಅಮೆರಿಕ ಮತ್ತು ಇಂಡೋನೇಷ್ಯಾದ ವಾಣಿಜ್ಯ ಸಚಿವರ ತುರ್ತು ಸಭೆ ನಡೆಸಿದರು. ಅಹಾರ ಭದ್ರತೆ ಮತ್ತು ಸಬ್ಸಿಡಿ ನೀಡುವುದಕ್ಕೆ ಸಂಬಂಧಿಸಿದಂತೆ ಭಾರತ ತನ್ನ ನಿಲುವಿಗೆ ಅಂಟಿಕೊಂಡಿದ್ದರಿಂದ ಈ ಸಭೆಯಲ್ಲಿ ನಿರೀಕ್ಷಿತ ಸಹಮತ ವ್ಯಕ್ತವಾಗಲಿಲ್ಲ. ಹಾಗಾಗಿ ಸಭೆ ವಿಫಲವಾಗುತ್ತದೇ ಎಂದೇ ಭಾವಿಸಲಾಗಿತ್ತು. ಸದಸ್ಯ ರಾಷ್ಟ್ರಗಳು ತಮ್ಮ ನಾಗರಿಕರಿಗೆ ಅಹಾರ ಭದ್ರತೆ ಒದಗಿಸುವುದು ಮೂಲಭೂತ ವಿಷಯ. ಹಾಗಾಗಿ ಈ ನಿಟ್ಟಿನಲ್ಲಿ ಭಾರತ ಯಾವುದೇ ರಾಜಿಗೂ ಸಿದ್ಧವಿಲ್ಲ ಎಂದು ಬಿಗಿ ನಿಲುವು ತಾಳಿತ್ತು. ಆದರೆ ಇತರ ದೇಶಗಳ ಪ್ರಕಾರ ಆಹಾರ ಭದ್ರತೆಗೆ ಸಬ್ಸಿಡಿ ನೀಡುವುದು ಡಬ್ಲುಟಿಒ ನಿಯಮಗಳಿಗೆ ತದ್ವಿರುದ್ಧವಾಗಿದೆ. ಹಾಗಾಗಿ ಕೃಷಿ ಕ್ಷೇತ್ರದ ಸಬ್ಸಿಡಿ ಕಡಿಮೆಯಾಗುತ್ತದೆ. ಇಂತಹ ಸಂದರ್ಭವನ್ನು ಬಳಸಿಕೊಂಡು ಭಾರತ ಅಗ್ಗದ ದರದಲ್ಲಿ ಆಹಾರ ಧಾನ್ಯಗಳನ್ನು ರಫ್ತು ಮಾಡುತ್ತದೆ ಎನ್ನುವ ವಾದ ಮಂಡಿಸಿದವು. ಆದರೆ, ಸದಸ್ಯ ರಾಷ್ಟ್ರಗಳ ಆತಂಕದ ಬಗ್ಗೆ ಭಾರತ ಮನವರಿಕೆ ಮಾಡಿಕೊಟ್ಟ ನಂತರ ಅಹಾರ ಭದ್ರತಾ ಸಬ್ಸಿಡಿಗೆ ಶೃಂಗದಲ್ಲಿ ಒಪ್ಪಿಗೆ ನೀಡಲಾಯಿತು.

‘ವಿಶ್ವ ಪ್ರವಾಸಿ ಪ್ರಶಸ್ತಿ’ ಪಡೆದುಕೊಂಡ ವಿಶ್ವದ ಅತ್ಯಂತ ಜನಪ್ರಿಯ ಪ್ರವಾಸಿ ತಾಣ ಮಾಲ್ಡೀವ್ಸ್
maldiesಮಾಲ್ಡೀವ್ಸ್‌ ವಿಶ್ವದಲ್ಲಿಯೇ ಅತ್ಯಂತ ಜನಪ್ರಿಯ ಪ್ರವಾಸಿ ತಾಣವಾಗಿದ್ದು, ಕತಾರ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ 2013 ನೇ ಸಾಲಿನ ‘ವಿಶ್ವ ಪ್ರವಾಸಿ ಪ್ರಶಸ್ತಿ’ ಪಡೆದುಕೊಂಡಿದೆ. ಮಾಲ್ಡೀವ್ಸ್‌ ಮೂರನೇ ಬಾರಿಗೆ ಈ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನವಾಗಿದೆ. ‘ವಿಶ್ವ ಪ್ರವಾಸಿ ಪ್ರಶಸ್ತಿ’ಯು ವಿಶ್ವ ಪ್ರವಾಸೋದ್ಯಮ ವಲಯದ ಆಸ್ಕರ್‌ ಪ್ರಶಸ್ತಿ ಎಂದು ಬಣ್ಣಿಸಲಾಗಿದೆ.
ಪ್ರವಾಸಿ ದ್ವೀಪಗಳು:
ಇಂಡೋನೇಷ್ಯಾದ ಬಾಲಿ, ವೆಸ್ಟ್‌ಇಂಡೀಸ್‌ನ ಬಾರ್ಬೊಡಾಸ್‌, ಗ್ರೀಸ್‌ನ ಕುಕ್‌ ದ್ವೀಪ, ಮಡೇರಿಯಾ ದ್ವೀಪ, ಮಾರಿಷಸ್‌, ಸಿಷೇಲ್ಸ್‌, ಇಟಲಿಯ ಸಿಸಿಲಿ, ತಾಂಜಾನಿಯಾದ ಸೇಂಟ್‌ ಲೂಸಿಯಾ ಮತ್ತು ಜಂಜಿಬಾರ್‌ ದ್ವೀಪಗಳೂ ಸಹ ಆಕರ್ಷಕ ಪ್ರವಾಸಿ ದ್ವೀಪಗಳ ಸಾಲಿನಲ್ಲಿದ್ದು, ಪ್ರಶಸ್ತಿಗೆ ಪೈಪೋಟಿ ನಡೆಸಿದವು ಎಂದು ಮಾಧ್ಯಮಗಳು ವರದಿ ಮಾಡಿವೆ. ಪ್ರತಿಷ್ಠಿತ ಪ್ರಶಸ್ತಿಯ ಜತೆಗೆ ಮಾಲ್ಡೀವ್ಸ್‌ನ ಅನೇಕ ರೆಸಾರ್ಟ್‌ಗಳು ಹಲವು ಪ್ರಶಸ್ತಿಗಳನ್ನು ಬಾಚಿಕೊಂಡಿವೆ.
ರೆಸಾರ್ಟ್ ಗಳಿಗೂ ಪ್ರಶಸ್ತಿ:
ವಿಶ್ವದ ಪ್ರಮುಖ ಏರ್‌ಪೋರ್ಟ್‌ ದ್ವೀಪ ಪ್ರಶಸ್ತಿಯನ್ನು ಹುಲ್‌ಹುಲೇ ದ್ವೀಪ ಹೋಟೆಲ್‌ ಪಡೆದುಕೊಂಡಿದೆ. ಕನ್‌ರಾಡ್‌ ಮಾಲ್ಡೀವ್ಸ್‌ ರಂಗಾಲಿ ದ್ವೀಪವು ವಿಶ್ವದ ಪ್ರಸಿದ್ದ ನೀರಿನಲ್ಲಿರುವ ರೆಸಾರ್ಟ್‌ ಪ್ರಶಸ್ತಿಗೆ ಭಾಜನವಾಯಿತು. ವಿಶ್ವದ ಅತ್ಯಂತ ರಮ್ಯ ರೆಸಾರ್ಟ್‌ ಪ್ರಶಸ್ತಿ ಇದೇ ದ್ವೀಪದ ಬಾರೋಸ್‌ಗೆ ಸಂದಿದೆ.

ರಾಜ್ಯಸಭೆ ಸದಸ್ಯರ ಪೈಕಿ ಶೇ.67 ಮಂದಿ ಕೋಟ್ಯಾಧಿಪತಿಗಳು: ವರದಿ
rajya sabhaರಾಜ್ಯಸಭೆಯ ಹಾಲಿ ಸದಸ್ಯರ ಪೈಕಿ ಶೇ.67 ಮಂದಿ ಕೋಟ್ಯಧಿಪತಿಗಳಾಗಿದ್ದರೆ, ಶೇ.17 ಮಂದಿಯ ಮೇಲೆ ಕ್ರಿಮಿನಲ್‌ ಆರೋಪಗಳಿವೆ ಎಂದು ಪ್ರಜಾಸತ್ತೆ ಸುಧಾರಣೆ ಸಂಸ್ಥೆ ಎಂಬ ಸ್ವಯಂಸೇವಾ ಸಂಘಟನೆಯೊಂದು ಅಂಕಿ-ಅಂಶಗಳನ್ನು ಬಿಡುಗಡೆ ಮಾಡಿದೆ. 615 ಕೋಟಿ ರೂ. ಮೌಲ್ಯದ ಆಸ್ತಿ ಹೊಂದಿರುವ ಕರ್ನಾಟಕದ ಸಂಸದ ವಿಜಯ ಮಲ್ಯ 2ನೇ ಅತಿ ಶ್ರೀಮಂತ ಸಂಸದ.
ಕ್ರಿಮಿನಲ್ ಆರೋಪಿಗಳು:
  • 245 ರಾಜ್ಯಸಭೆ ಸದಸ್ಯರ ಪೈಕಿ 227 ಸದಸ್ಯರ ಹಿನ್ನೆಲೆಯನ್ನು ಸಂಸ್ಥೆಯು ಅವಲೋಕಿಸಿದೆ. ಇದರಲ್ಲಿ 38 ಸಂಸದರು ತಮ್ಮ ಮೇಲೆ ಕ್ರಿಮಿನಲ್‌ ಆರೋಪ ಇರುವ ಬಗ್ಗೆ ಸ್ವಯಂಪ್ರೇರಿತವಾಗಿ ಘೋಷಿಸಿಕೊಂಡಿದ್ದಾರೆ. ಇವರಲ್ಲಿ ಶೇ.15 ಮಂದಿಯ ಮೇಲೆ ಗಂಭೀರ ಕ್ರಿಮಿನಲ್‌ ಆಪಾದನೆಗಳಿವೆ.
  • ಇನ್ನು 227 ಸಂಸದರ ಸರಾಸರಿ ಆಸ್ತಿ 20.17 ಕೋಟಿ ರೂಪಾಯಿ. ಕಾಂಗ್ರೆಸ್‌ ರಾಜ್ಯಸಭಾ ಸದಸ್ಯರು ಅತಿ ಶ್ರೀಮಂತರಾಗಿದ್ದು, ಸರಾಸರಿ 16.74 ಕೋಟಿ ರೂ, ಬಿಜೆಪಿ- 8.51 ಕೋಟಿ ರೂ, ಬಿಎಸ್ಪಿ- 13.82 ಕೋಟಿ ರೂ. ಮತ್ತು ಸಿಪಿಎಂ ಸಂಸದರು 39.65 ಲಕ್ಷ ರೂ. ಆಸ್ತಿ ಹೊಂದಿದ್ದಾರೆ.
  • ಬಿಹಾರದ ಜೆಡಿಯು ರಾಜ್ಯಸಭಾ ಸದಸ್ಯ ಮಹೇಂದ್ರ ಪ್ರಸಾದ್‌ 683 ಕೋಟಿ ರೂ. ಆಸ್ತಿ ಹೊಂದಿದ್ದು, ಅತಿ ಶ್ರೀಮಂತ ಸಂಸದರಾಗಿದ್ದಾರೆ. ನಂತರ ಸ್ಥಾನ ವಿಜಯ ಮಲ್ಯರದ್ದು (615 ಕೋಟಿ ರೂ.). ನಟಿ, ಸಮಾಜವಾದಿ ಪಕ್ಷದ ಜಯಾ ಬಚ್ಚನ್‌ 493.86 ಕೋಟಿ ರೂ. ಆಸ್ತಿ ಹೊಂದುವ ಮೂಲಕ 3ನೇ ಸ್ಥಾನ ಪಡೆದಿದ್ದಾರೆ.


ಪ್ರಚಲಿತ ವಿದ್ಯಮಾನಗಳು ಡಿಸೆಂಬರ್ 3, 2013


ರಾಜ್ಯದಲ್ಲಿ ಹೊಸದಾಗಿ 171 ತಹಸೀಲ್ದಾರ್‌ ಹುದ್ದೆಗಳ ನೇರ ನೇಮಕಾತಿ
ಪ್ರಚಲಿತ ವಿದ್ಯಮಾನಗಳು ಡಿಸೆಂಬರ್ 3, 2013ರಾಜ್ಯದಲ್ಲಿ ಹೊಸದಾಗಿ 171 ತಹಸೀಲ್ದಾರ್‌ ಗ್ರೂಪ್‌-ಬಿ ಹುದ್ದೆಗಳನ್ನು ನೇರ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲಾಗುವುದು ಎಂದು ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್‌ ತಿಳಿಸಿದ್ದಾರೆ.
ನೇರ ನೇಮಕಾತಿ:
ಬೆಳಗಾವಿಯಲ್ಲಿ ನಡೆದ ಅಧಿವೇಶನದ ಅವಧಿಯಲ್ಲಿ ಶಾಸಕರೊಬ್ಬರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಭರ್ತಿ ಮಾಡಲು ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆಯು ಕರ್ನಾಟಕ ಲೋಕಸೇವಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಿದೆ ಎಂದು ಹೇಳಿದರು. ಕರ್ನಾಟಕ ಲೋಕಸೇವಾ ಆಯೋಗದಿಂದ 1998, 1999, 2005 ಮತ್ತು 2006ನೇ ಸಾಲಿನಲ್ಲಿ ನೇರ ನೇಮಕಾತಿ ಮೂಲಕ ತಹಸೀಲ್ದಾರ್‌ ಗ್ರೇಡ್‌-2 ಹುದ್ದೆಗಳಿಗೆ ನೇಮಕಗೊಂಡವರಿಗೆ 2011ರಂದು ತಹಸೀಲ್ದಾರ್‌ ಗ್ರೇಡ್‌-1 ವೃಂದಕ್ಕೆ ಬಡ್ತಿ ನೀಡಲಾಗಿದೆ. ಈ ಬ್ಯಾಚ್‌ನಲ್ಲಿ ಆಯ್ಕೆಗೊಂಡ ಅಧಿಕಾರಿಗಳಿಗೆ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯು ನೇಮಕಾತಿ ಪ್ರಾಧಿಕಾರವಾಗಿ 2012ರ ಡಿಸೆಂಬರ್‌ 22ರಂದು ಗ್ರೇಡ್‌- 1 ವೃಂದದಿಂದ ಕೆಎಎಸ್‌ ಕಿರಿಯ ಶ್ರೇಣಿ ವೃಂದಕ್ಕೆ ಬಡ್ತಿ ನೀಡಿದೆ ಎಂದು ತಿಳಿಸಿದರು.

ಡೆಬಿಟ್ ಕಾರ್ಡ್ ಬಳಕೆಗೆ ಮಾರ್ಗದರ್ಶಿ ಸೂತ್ರಗಳನ್ನು ಬಿಡುಗಡೆಗೊಳಿಸಿದ ರಿಸರ್ವ್ ಬ್ಯಾಂಕ್
debit cardsಡೆಬಿಟ್ ಕಾರ್ಡ್ ಬಳಸಿಕೊಂಡು ನಡೆಸುವ ವ್ಯವಹಾರ ಇತ್ತೀಚೆಗೆ ದೇಶದಲ್ಲಿ ಹೆಚ್ಚು ಜನಪ್ರಿಯವಾಗುತ್ತಿದೆ. ಈ ವ್ಯವಹಾರವನ್ನು ಸುರಕ್ಷಿತವಾಗಿಡಲು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಡಿಸೆಂಬರ್ 1 ರಿಂದ ಕ್ರೆಡಿಟ್ ಕಾರ್ಡ್ ಬಳಸಿಕೊಂಡು ನಡೆಸುವ ಯಾವುದೇ ವ್ಯವಹಾರಗಳ ವೇಳೆ ಪಿನ್‌ನಂಬರ್ ಟೈಪ್ ಮಾಡುವುದು ಕಡ್ಡಾಯ ಮಾಡಿದೆ. ಈ ಹಿನ್ನೆಲೆಯಲ್ಲಿ ಈ ನಿಯಮದ ಹಿನ್ನೆಲೆಯಲ್ಲಿ ಇಲ್ಲಿದೆ ಒಂದಷ್ಟು ಮಾಹಿತಿ.
ನಿಯಮಗಳೇನು?
  • ಪಿನ್‌ನಂಬರ್ ಟೈಪ್‌ಮಾಡುವುದನ್ನು ಕಡ್ಡಾಯ ಮಾಡುವ ನಿಯಮವನ್ನು ಆರ್‌ಬಿಐ ಜೂನ್ 2013ರಲ್ಲೇ ಜಾರಿ ತಂದಿತ್ತು. ಡೆಬಿಟ್ ಕಾರ್ಡ್ ಮೂಲಕ ನಡೆಯುವ ವ್ಯವಹಾರಗಳಿಗೆ ಹೆಚ್ಚುವರಿ ಸುರಕ್ಷತೆ ಕಲ್ಪಿಸುವ ನಿಟ್ಟಿನಲ್ಲಿ ಈ ನಿಯಮ ಜಾರಿಗೊಳಿಸಲಾಗಿತ್ತು. ಆದರೆ, ಅಗತ್ಯ ಮೂಲಸೌಕರ್ಯ ಕಲ್ಪಿಸುವ ನಿಟ್ಟಿನಲ್ಲಿ ಬ್ಯಾಂಕ್‌ಗಳು ಈ ನಿಯಮ ಜಾರಿಗೊಳಿಸಲು ಒಂದಷ್ಟು ಕಾಲಾವಕಾಶ ಕೋರಿದ್ದವು. ಅದರಂತೆ ಆರ್‌ಬಿಐ ಈ ನಿಯಮ ಅನುಷ್ಠಾನಕ್ಕೆ ನೀಡಲಾಗಿದ್ದ ಗಡುವನ್ನು ನ.30ರ ವರೆಗೆ ವಿಸ್ತರಿಸಿತ್ತು.
  • ನಿಯಮದಂತೆ ಇನ್ನು ಮುಂದೆ ಯಾವುದೇ ಖರೀದಿಗಳಿಗಾಗಿ ಅಂಗಡಿಗಳು ನೀಡುವ ಸಣ್ಣ ಯಂತ್ರದಲ್ಲಿ ಡೆಬಿಟ್ ಕಾರ್ಡ್ ಸ್ವೈಪ್ ಮಾಡಿದರೆ ಪಿನ್‌ನಂಬರ್ ಹಾಕುವುದು ಕಡ್ಡಾಯ. ಒಮ್ಮೆ ನೀವು ಪಿನ್ ಟೈಪ್ ಮಾಡಿದ ಬಳಿಕ ನಿಮಗೆ ಹಣ ವರ್ಗಾವಣೆಗೆ ಸಂಬಂಧಿಸಿದ ಚೀಟಿಯೊಂದನ್ನು ನೀಡಲಾಗುತ್ತದೆ. ಅದಕ್ಕೆ ನೀವು ಸಹಿ ಹಾಕಬೇಕಾಗುತ್ತದೆ.
  • ಒಂದು ವೇಳೆ ಸ್ವೈಪ್ ಮಾಡುವ ಯಂತ್ರ ಪಿನ್ ನಂಬರ್ ಕೇಳದೇ ಇದ್ದರೆ ಬ್ಯಾಂಕ್‌ಗಳು ಈ ರೀತಿಯ ವರ್ಗಾವಣೆಯನ್ನು ರದ್ದು ಮಾಡುತ್ತವೆ.
  • ಎಟಿಎಂನಲ್ಲಿ ಹಣ ವಿತ್‌ಡ್ರಾ ಮಾಡುವ ವೇಳೆ ನೀವು ಪಿನ್‌ನಂಬರ್ ಟೈಪ್ ಮಾಡುವ ರೀತಿಯಲ್ಲೇ ಈ ಸಣ್ಣ ಯಂತ್ರದಲ್ಲೂ ಪಿನ್‌ನಂಬರ್ ಟೈಪ್ ಮಾಡಬೇಕಾಗುತ್ತದೆ.
  • ಎಟಿಎಂನಂತೆಯೇ ಇಲ್ಲೂ ನೀವು ಸರಿಯಾದ ಪಿನ್ ನಂಬರ್ ಪಂಚ್ ಮಾಡಲು ಕೇವಲ ಮೂರು ಅವಕಾಶವನ್ನಷ್ಟೇ ಪಡೆಯಲಿದ್ದೀರಿ. ಆ ಬಳಿಕ ಡೆಬಿಟ್ ಕಾರ್ಡ್ ಬಳಸಿ ನಡೆಸುವ ವ್ಯವಹಾರ ಸ್ವಯಂಚಾಲಿತವಾಗಿ ರದ್ದಾಗುತ್ತದೆ. ಆದರೆ, ಆ ನಂತರ ಸರಿಯಾದ ಪಿನ್ ನಂಬರ್ ನೆನಪಾದರೆ ಮತ್ತೆ ಹೊಸದಾಗಿ ಕಾರ್ಡ್ ಸ್ವೈಪ್ ಮಾಡಿ ಪಿನ್‌ಟೈಪ್ ಮಾಡಬೇಕು. ಅಂದರೆ ಎಟಿಎಂನಲ್ಲಾಗುವಂತೆ ಇಲ್ಲಿ ನಿಮ್ಮ ಕಾರ್ಡ್ ಲಾಕ್ ಆಗುವುದಿಲ್ಲ.
  • ಒಂದು ವೇಳೆ ನೀವು ಪಿನ್ ನಂಬರ್ ಕಳೆದುಕೊಂಡರೆ ನಿಮ್ಮ ಬ್ಯಾಂಕ್‌ಗೆ ಕರೆ ಮಾಡಿ. ಡೂಪ್ಲಿಕೇಟ್ ಪಿನ್ ನಂಬರ್‌ಗಾಗಿ ಕೇಳಿ. ಈ ವೇಳೆ ನಿಮ್ಮ ವೈಯಕ್ತಿಕ ವಿವರಗಳಾದ ಇಮೇಲ್ ಐಡಿ, ಹುಟ್ಟಿದ ದಿನಾಂಕ ಮತ್ತಿತರ ಮಾಹಿತಿಗಳನ್ನು ಭದ್ರತಾ ದೃಷ್ಟಿಯಿಂದ ಕೇಳಲಾಗುತ್ತದೆ. ನಂತರ ಡೂಪ್ಲಿಕೇಟ್ ಪಿನ್ ನಂಬರ್ ಅನ್ನು ಏಳರಿಂದ ಹತ್ತು ದಿನಗಳೊಳಗೆ ನಿಮ್ಮ ಮನೆಯ ವಿಳಾಸಕ್ಕೆ ಪೋಸ್ಟ್ ಮಾಡಲಾಗುತ್ತದೆ.
  • ಈ ನಿಯಮಗಳು ಕೇವಲ ಡೆಬಿಟ್ ಕಾರ್ಡ್ ಮೂಲಕ ಅಂಗಡಿಗಳಲ್ಲಿ ನಡೆಯುವ ವ್ಯವಹಾರಗಳಿಗೆ ಮಾತ್ರ. ಇಂಟರ್ನೆಟ್‌ನಲ್ಲಿ ನಡೆಯುವ ಆನ್‌ಲೈನ್ ವ್ಯವಹಾರಗಳಿಗೆ ಈ ನಿಯಮ ಅನ್ವಯಿಸುವುದಿಲ್ಲ. ಕ್ರೆಡಿಟ್ ಕಾರ್ಡ್‌ಗೆ ಸಂಬಂಧಿಸಿದ ನಿಯಮದಲ್ಲೂ ಯಾವುದೇ ಬದಲಾವಣೆ ಇಲ್ಲ.
  • ಈ ನಿಯಮ ಅನುಷ್ಠಾನಗೊಳಿಸಿದ ಹಿಂದಿನ ಮುಖ್ಯ ಉದ್ದೇಶ ವಂಚನೆ ಹಾಗೂ ಭದ್ರತೆಯಲ್ಲಿ ಆಗುತ್ತಿರುವ ಲೋಪದ ನಿಯಂತ್ರಣ.
  • ದೇಶದಲ್ಲಿ 36 ಕೋಟಿ ಡೆಬಿಟ್ ಕಾರ್ಡ್‌ಗಳ ಮೂಲಕ 5.54 ಕೋಟಿ ಅಂಗಡಿಗಳಲ್ಲಿ ಪ್ರತಿ ದಿನ 8,017.86 ಕೋಟಿ ವ್ಯವಹಾರ ನಡೆಸಲಾಗುತ್ತದೆ. ಎಟಿಎಂ ಬಳಸಿಕೊಂಡು ತಿಂಗಳೊಂದರಲ್ಲಿ ಸುಮಾರು 52 ಕೋಟಿ ವ್ಯವಹಾರ ನಡೆಸಲಾಗುತ್ತದೆ ಎಂದು ಆರ್‌ಬಿಟಿ ದಾಖಲೆಗಳು ಹೇಳುತ್ತವೆ.
  • ಕ್ರೆಡಿಟ್ ಕಾರ್ಡ್ ವಿಚಾರಕ್ಕೆ ಬಂದಾಗ ದೇಶದಲ್ಲಿ 1.8 ದಶಲಕ್ಷ ಕಾರ್ಡ್‌ಗಳು ಬಳಕೆಯಲ್ಲಿವೆ. ಡೆಬಿಟ್ ಕಾರ್ಡ್‌ಗೆ ಹೋಲಿಸಿದರೆ ಅಂಗಡಿಗಳಲ್ಲಿ ಕ್ರೆಡಿಟ್ ಕಾರ್ಡ್‌ಗಳ ಮೂಲಕ ನಡೆಯುವ ವ್ಯವಹಾರ ಕೇವಲ 4.14 ಕೋಟಿ.

ಕರ್ನಾಟಕ ಅನುಸೂಚಿತ ಜಾತಿಗಳ ಮತ್ತು ಬುಡಕಟ್ಟು ಉಪಯೋಜನೆ ವಿಧೇಯಕಕ್ಕೆ ಅಂಗೀಕಾರ
sc stರಾಜ್ಯ ಯೋಜನಾ ವೆಚ್ಚದ ಒಂದು ಭಾಗವನ್ನು ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಉಪಯೋಜನೆಗೆ ಮೀಸಲಿಡುವ ಉದ್ದೇಶದಿಂದ ರಾಜ್ಯ ಸರ್ಕಾರ ಜಾರಿಗೆ ತಂದಿರುವ ಕರ್ನಾಟಕ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ ವಿಧೇಯಕ 2013 ಕ್ಕೆ ವಿಧಾನಸಭೆ ಸರ್ವಾನುಮತದ ಅಂಗೀಕಾರ ನೀಡಿತು. ಸಮಾಜ ಕಲ್ಯಾಣ ಸಚಿವ ಎಚ್.ಆಂಜನೇಯ ಮಂಡಿಸಿದ ಈ ವಿಧೇಯಕಕ್ಕೆ ಪಕ್ಷಭೇದ ಮರೆತು ಎಲ್ಲ ಶಾಸಕರೂ ಒಪ್ಪಿಗೆ ನೀಡಿದ್ದು, ಸಣ್ಣಪುಟ್ಟ ತಿದ್ದುಪಡಿಗಳಿಗೆ ಸಲಹೆ ನೀಡಿದರು.
ಏನಿದು ವಿಧೇಯಕ?
ಪರಿಶಿಷ್ಟ ಜಾತಿ ಮತ್ತು ಪಂಗಡಗಳಿಗೆ ಮೀಸಲಾದ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸದಂತೆ ತಡೆಯುವುದು ಹಾಗೂ ಅವುಗಳ ಸದ್ಬಳಕೆಯಾಗುವಂತೆ ನೋಡಿಕೊಳ್ಳಲು ರಾಜ್ಯ ಸರ್ಕಾರ ಈ ವಿಧೇಯಕವನ್ನು ಜಾರಿಗೆ ತರಲು ಉದ್ದೇಶಿಸಿದೆ. ಆಂಧ್ರಪ್ರದೇಶದ ನಂತರ ಇಡೀ ರಾಷ್ಟ್ರದಲ್ಲಿ ಇಂಥದೊಂದು ಕಾನೂನನ್ನು ಜಾರಿಗೆ ತಂದ ರಾಜ್ಯ ಎಂಬ ಕೀರ್ತಿಗೆ ರಾಜ್ಯ ಸರ್ಕಾರ ಪಾತ್ರವಾಗಲಿದೆ.
ಪ್ರೋತ್ಸಾಹ ಮತ್ತು ದಂಡನೆ:
ಈ ವಿಧೇಯಕದ ಪ್ರಕಾರ ಯೋಜನೆಯ ಕಾರ್ಯಸಾಧನೆಯಲ್ಲಿ ಪ್ರಶಂಸಾರ್ಹವಾದ ಕೆಲಸ ಮಾಡಿದವರಿಗೆ ಪ್ರೋತ್ಸಾಹಧನ ನೀಡುವುದಕ್ಕೆ ಸ್ಕೀಂ ರೂಪಿಸಲು ಅವಕಾಶವಿದೆ. ಜತೆಗೆ ಯೋಜನೆಗೆ ಅಡ್ಡಿಪಡಿಸುವ, ಕರ್ತವ್ಯ ನಿರ್ಲಕ್ಷಿಸುವ ಸರ್ಕಾರಿ ಅಧಿಕಾರಿಯ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹೂಡಲೂ ಅವಕಾಶ ಕಲ್ಪಿಸಲಾಗಿದೆ. ಇಂಥ ತಪ್ಪು ಎಸಗಿದ ಅಧಿಕಾರಿಯ ಮೇಲಿನ ಆರೋಪ ಸಾಬೀತಾದರೆ ಆರು ತಿಂಗಳ ವರೆಗೆ ಕಾರಾಗೃಹವಾಸ ಹಾಗೂ ದಂಡ ವಿಧಿಸಬಹುದು.
ವಿಧೇಯಕದಲ್ಲಿ ಏನಿದೆ?
  • ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನಸಂಖ್ಯೆಗೆ ಅನುಗುಣವಾಗಿ ರಾಜ್ಯ ಯೋಜನಾ ವೆಚ್ಚವನ್ನು ಹಂಚಿಕೆ ಮಾಡಲಾಗುತ್ತದೆ.
  • ಈ ರೀತಿ ಹಂಚಿಕೆಯಾದ ನಿಧಿ ಯಾವುದೇ ಕಾರಣಕ್ಕೂ ಬೇರೆ ಉದ್ದೇಶಕ್ಕೆ ಬಳಕೆಯಾಗದಂತೆ ತಡೆಯುವುದು.
  • ಈ ರೀತಿ ನಿಗದಿಯಾದ ಹಣ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಜನರಿಗೆ ನೇರವಾಗಿ ಪ್ರಯೋಜನವಾಗುವ ಯೋಜನೆಗಳಿಗೆ ಏಕ ಗವಾಕ್ಷಿ ವಿಧಾನದ ಮೂಲಕ ತಲುಪಿಸುವ ಉದ್ದೇಶವನ್ನು ವಿಧೇಯಕ ಹೊಂದಿದೆ.
  • ಈ ರೀತಿ ನಿಗದಿಯಾದ ಹಣವನ್ನು ಸದ್ಬಳಕೆ ಮಾಡುವಲ್ಲಿ ಅಡ್ಡಿಯುಂಟು ಮಾಡುವ ಅಧಿಕಾರಿಗಳ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸುವುದಕ್ಕೂ ಅವಕಾಶವಿದೆ.
ಅಭಿವೃದ್ಧಿ ಪರಿಷತ್ ರಚನೆ:
ವಿಧೇಯಕದ ಹಿನ್ನೆಲೆಯಲ್ಲಿ ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಅಭಿವೃದ್ಧಿ ಪರಿಷತ್ ರಚಿಸಲಾಗುತ್ತದೆ. ಇದಕ್ಕೆ ಮುಖ್ಯಮಂತ್ರಿ ಅಧ್ಯಕ್ಷರಾಗಿದ್ದು, ಸಮಾಜ ಕಲ್ಯಾಣ, ಸಂಸದೀಯ ವ್ಯವಹಾರ, ಗ್ರಾಮೀಣಾಭಿವೃದ್ಧಿ, ಶಿಕ್ಷಣ ಹಾಗೂ ಕಂದಾಯ ಸಚಿವರು ಪದನಿಮಿತ್ತ ಸದಸ್ಯರಾಗಿರುತ್ತಾರೆ. ಪರಿಶಿಷ್ಟ ಜಾತಿ ಮತ್ತು ಪಂಗಡಕ್ಕೆ ಸೇರಿದ ಐವರು ವಿಧಾನಸಭೆ, ವಿಧಾನ ಪರಿಷತ್ ಹಾಗೂ ಸಂಸದರೂ ಸದಸ್ಯರಾಗಿರುತ್ತಾರೆ. ಅಭಿವೃದ್ಧಿ ಆಯುಕ್ತರು, ಆರ್ಥಿಕ, ಯೋಜನಾ, ಸಮಾಜ ಕಲ್ಯಾಣ ಇಲಾಖೆ ಪ್ರಧಾನ ಕಾರ್ಯದರ್ಶಿಗಳು ಪದನಿಮಿತ್ತ ಸದಸ್ಯರಾಗಿರುತ್ತಾರೆ. ಇದರ ಜತೆಗೆ ಸಮಾಜ ಕಲ್ಯಾಣ ಇಲಾಖೆ ಸಚಿವರ ಅಧ್ಯಕ್ಷತೆಯಲ್ಲಿ ನೋಡಲ್ ಏಜೆನ್ಸಿ ಹಾಗೂ ಜಿಲ್ಲಾ ಸಮಿತಿಗಳನ್ನು ರಚಿಸಲಾಗುತ್ತದೆ. ಈ ಸಮಿತಿಗೆ ಡಿಸಿ ಅಧ್ಯಕ್ಷರಾಗಿರುತ್ತಾರೆ.
ಆಯಾ ವರ್ಷದಲ್ಲೇ ಖರ್ಚು:
ವಿಧೇಯಕದ ಪ್ರಕಾರ ಪರಿಶಿಷ್ಟ ಜಾತಿ ಮತ್ತು ಪಂಗಡದ ಅಭಿವೃದ್ಧಿ ನಿಧಿಯನ್ನು ರಾಜ್ಯ ವಾರ್ಷಿಕ ಯೋಜನೆಯ ಅಂತಿಮ ವೆಚ್ಚಕ್ಕೆ ಅನುಸಾರವಾಗಿ ರೂಪಿಸಬೇಕು. ಜತೆಗೆ ಪ್ರತಿ ಹಣಕಾಸು ವರ್ಷದಲ್ಲೂ ಹಣ ಹಂಚಿಕೆ ಮಾಡಬೇಕು. ಜತೆಗೆ ಅದನ್ನು ಆಯಾ ಆರ್ಥಿಕ ವರ್ಷದಲ್ಲೇ ಖರ್ಚು ಮಾಡಬೇಕು. ಒಂದೊಮ್ಮೆ ಅನಿವಾರ್ಯ ಕಾರಣಗಳಿಂದ ವ್ಯಯಿಸಲು ಸಾಧ್ಯವಾಗದಿದ್ದರೆ ಅದನ್ನು ಮುಂದಿನ ಆರ್ಥಿಕ ವರ್ಷಕ್ಕೆ ಮುಂದುವರಿಸಬಹುದೇ ವಿನಃ ಹಣವನ್ನು ಬೇರೆ ಉದ್ದೇಶಗಳಿಗೆ ಬಳಸಲು ಸಾಧ್ಯವಿಲ್ಲ.



ಪ್ರಚಲಿತ ವಿದ್ಯಮಾನಗಳು ಡಿಸೆಂಬರ್ 2, 2013


ಪ್ರಚಲಿತ ವಿದ್ಯಮಾನಗಳು ಡಿಸೆಂಬರ್ 2, 2013ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಡಾ. ನಾ.ಡಿಸೋಜ
ಜನವರಿಯಲ್ಲಿ ಕೊಡಗಿನಲ್ಲಿ ನಡೆಯುವ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಖ್ಯಾತ ಕಥೆ, ಕಾದಂಬರಿಕಾರ ಡಾ.ನಾ.ಡಿಸೋಜ ಅವರು ಆಯ್ಕೆಯಾಗಿದ್ದಾರೆ. 80ನೇ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆ ಕುರಿತಂತೆ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪುಂಡಲೀಕ ಹಾಲಂಬಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಡಿಸೋಜ ಅವರ ಹೆಸರನ್ನು ಅಂತಿಮಗೊಳಿಸಲಾಯಿತು. ಮೂರು ದಿನಗಳ ಕಾಲ ನಡೆಯುವ ಅಖಿಲ ಭಾರತ 80ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 40 ವಿಚಾರಗೋಷ್ಠಿಗಳು, ಸಾಂಸ್ಕೃತಿಕ ಸೇರಿದಂತೆ ಹಲವು ಕಾರ್ಯಕ್ರಮಗಳು ನಡೆಯಲಿವೆ.
ಡಾ.ಡಿಸೋಜ ಬಗ್ಗೆ:
  • ಕನ್ನಡದ ಪ್ರಸಿದ್ಧ ಮತ್ತು ಜನಪ್ರಿಯ ಸಾಹಿತಿಯಾದ ಡಿಸೋಜ ಅವರ ಸಹಜ ಸೃಜನಶೀಲತೆಯಿಂದ ಇದುವರೆಗೂ 37 ಕಾದಂಬರಿ, ನಾಲ್ಕು ನಾಟಕ, 37 ಮಕ್ಕಳ ಕೃತಿ ಹಾಗೂ ನೂರಾರು ಸಣ್ಣ ಕಥೆಗಳು, ಲೇಖನಗಳು, ವ್ಯಕ್ತಿ ಪರಿಚಯ, ಅಂಕಣ ಬರಹಗಳು ಸೃಷ್ಟಿಯಾಗಿವೆ.
  • ಇದಕ್ಕಾಗಿ ಸಾಹಿತ್ಯ ಅಕಾಡೆಮಿ ಸೇರಿದಂತೆ ವಿವಿಧ ಪ್ರಶಸ್ತಿಗಳು ಬಂದಿವೆ. ಕಾಡಿನ ಬೆಂಕಿ, ದ್ವೀಪ ಕೃತಿಗಳು ಸಿನಿಮಾ ಆಗಿ `ರಜತ ಕಮಲ, `ಸ್ವರ್ಣ ಕಮಲ ಪ್ರಶಸ್ತಿಗಳಿಗೆ ಭಾಜನವಾಗಿವೆ.
  • ಮುಳುಗಡೆ ಬದುಕು, ಮಲೆನಾಡ ಹಾಡು-ಹಸೆ, ಹೋರಾಟ, ಬುಡಕಟ್ಟು ಜನಾಂಗದ ವಿಲಕ್ಷಣ-ವಿಶೇಷಗಳು ನಾಡಿ ಬರಹದ ಪ್ರಧಾನ ನೆಲೆಗಳು.
  • ವಿಶೇಷವಾಗಿ ಮಕ್ಕಳ ಸಾಹಿತ್ಯದಲ್ಲಿ ಕೃಷಿ ಮಾಡಿದ ನಾ.ಡಿಸೋಜ ಇದುವರೆಗೂ 15 ಕಿರುಕಾದಂಬರಿ, 10 ನಾಟಕಗಳು, ಮಕ್ಕಳ ಸಾಹಿತ್ಯದ ವಿವಿಧ ಪ್ರಕಾರದಲ್ಲಿ 12 ಕೃತಿಗಳನ್ನು ಪ್ರಕಟಿಸಿದ್ದಾರೆ.
  • ಇವರ `ಬೆಳಕಿನೊಡನೆ ಬಂತು ನೆನಪು ಮಕ್ಕಳ ಕಿರುಕಾದಂಬರಿಗೆ 1988ರಲ್ಲಿ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಬಂದಿದೆ.
  • ಇನ್ನೊಂದು ಕಿರುಕಾದಂಬರಿ `ಬೆಟ್ಟದ ಪುರದ ದಿಟ್ಟ ಮಕ್ಕಳು ಮಕ್ಕಳ ಸಿನಿಮಾ ಆಗಿದೆ.
  • ಅವರ `ಮುಳುಗಡೆಯ ಊರಿಗೆ ಬಂದವರು ಎಂಬ ಮಕ್ಕಳ ಕಿರುಕಾದಂಬರಿ 2011ರ ಕೇಂದ್ರ ಸಾಹಿತ್ಯ ಅಕಾಡೆಮಿಯ `ಬಾಲ ಸಾಹಿತ್ಯ ಪುರಸ್ಕಾರಕ್ಕೆ ಪಾತ್ರವಾಗಿದೆ.
  • ನಾ.ಡಿಸೋಜ ಅವರು ಸಾಹಿತ್ಯ ರಚನೆ ಜತೆ ಹೋರಾಟಗಾರರಾಗಿಯೂ ಹೆಸರಾಗಿದ್ದಾರೆ. ಸಮಾಜದ ಪ್ರಸ್ತುತ ಬಿಕ್ಕಟ್ಟುಗಳಿಗೆ ಬರವಣಿಗೆ ಜತೆ ಹೋರಾಟದಲ್ಲೂ ಮುಂಚೂಣಿಯಲ್ಲಿದ್ದು, ಜಾಗೃತಿ ಮೂಡಿಸುತ್ತಿದ್ದಾರೆ. ನಾಡಿನ ಹಿತಕ್ಕೆ, ಆಶಯಗಳಿಗೆ ಧಕ್ಕೆ ಬಂದಾಗೆಲ್ಲ ನಾ.ಡಿಸೋಜರು `ಅಭಿವೃದ್ಧಿಯ ಹರಿಕಾರರಿಗೆ ಮಾತಿನ ಪೆಟ್ಟು ನೀಡುತ್ತಾ ಬಂದಿದ್ದಾರೆ. ಹಮ್ಮು-ಬಿಮ್ಮುಗಳಿಲ್ಲದ ಸಾದಾಸೀದಾ ಲೇಖಕ. ಮೃದು ಹೃದಯದ ಬಂಡಾಯಗಾರ. ಆದರೆ, ಖಚಿತ ನಿಲುವಿನ, ಕಠಿಣ ಬದ್ಧತೆಯ ಸಾಹಿತಿ.

ಐಸಿಸಿ ‘ವರ್ಷದ ಟೆಸ್ಟ್‌’ ಹಾಗೂ ‘ವರ್ಷದ ಏಕದಿನ’ ತಂಡದಲ್ಲಿ ಸ್ಥಾನ ಪಡೆದ ಮಹೇಂದ್ರ ಸಿಂಗ್ ದೋನಿ
dhoniಭಾರತ ಕ್ರಿಕೆಟ್‌ ತಂಡದ ನಾಯಕ ಮಹೇಂದ್ರ ಸಿಂಗ್‌ ದೋನಿ ಅವರು ಅಂತರರಾಷ್ಟ್ರೀಯ ಕ್ರಿಕೆಟ್‌ ಸಮಿತಿ ಪ್ರಕಟಿಸಿದ ‘ವರ್ಷದ ಟೆಸ್ಟ್‌’ ಹಾಗೂ ‘ವರ್ಷದ ಏಕದಿನ’ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಏಕದಿನ ತಂಡದ ನಾಯಕನಾಗುವ ಅವಕಾಶವೂ ದೋನಿಗೆ ದೊರೆತಿದೆ. ‘ವರ್ಷದ ಏಕದಿನ’ ತಂಡದಲ್ಲಿ ದೋನಿ ಅಲ್ಲದೆ, ಶಿಖರ್‌ ಧವನ್‌ ಮತ್ತು ರವೀಂದ್ರ ಜಡೇಜ ಕಾಣಿಸಿಕೊಂಡಿದ್ದಾರೆ. ಚೇತೇಶ್ವರ ಪೂಜಾರಗೆ ಟೆಸ್ಟ್‌ ತಂಡದಲ್ಲಿ ಸ್ಥಾನ ದೊರೆತಿದೆ. ಆರ್‌. ಅಶ್ವಿನ್‌ ಟೆಸ್ಟ್ ತಂಡದಲ್ಲಿ 12ನೇ ಆಟಗಾರನಾಗಿ ಸ್ಥಾನ ಪಡೆದಿದ್ದಾರೆ.
ಕುಂಬ್ಳೆ ನೇತೃತ್ವದ ಸಮಿತಿ:
ದೋನಿ ಸತತ ಆರನೇ ವರ್ಷ ಐಸಿಸಿ ಏಕದಿನ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆರಂಭಿಕ ಆಟಗಾರನಾಗಿ ಧವನ್‌ಗೆ ಸ್ಥಾನ ದೊರೆತರೆ, ಜಡೇಜ ಆಲ್‌ ರೌಂಡರ್‌ ಆಟಗಾರನಾಗಿ ಅವಕಾಶ ಪಡೆದಿದ್ದಾರೆ. ಇಂಗ್ಲೆಂಡ್‌ನ ಅಲಸ್ಟೇರ್‌ ಕುಕ್‌ ಅವರಿಗೆ ಐಸಿಸಿ ವರ್ಷದ ಟೆಸ್ಟ್‌ ತಂಡದ ನಾಯಕನಾಗುವ ಗೌರವ ದೊರೆತಿದೆ. ಐಸಿಸಿ ಕ್ರಿಕೆಟ್‌ ಸಮಿತಿಯ ಮುಖ್ಯಸ್ಥರಾಗಿರುವ ಅನಿಲ್‌ ಕುಂಬ್ಳೆ ನೇತೃತ್ವದ ಆಯ್ಕೆ ಸಮಿತಿ ಈ ತಂಡಗಳನ್ನು ಆಯ್ಕೆ ಮಾಡಿವೆ. ಕುಂಬ್ಳೆ ಅಲ್ಲದೆ, ಮಾಜಿ ಆಟಗಾರರಾದ ವಕಾರ್‌ ಯೂನಿಸ್‌, ಅಲೆಕ್‌ ಸ್ಟುವರ್ಟ್‌, ಗ್ರೇಮ್‌ ಪೊಲಾಕ್‌ ಮತ್ತು ನ್ಯೂಜಿಲೆಂಡ್‌ ಮಹಿಳಾ ತಂಡದ ಮಾಜಿ ಆಟಗಾರ್ತಿ ಕ್ಯಾಥರಿನ್‌ ಕ್ಯಾಂಪ್‌ ಬೆಲ್‌ ಅವರು ಸಮಿತಿಯಲ್ಲಿದ್ದರು.
ಆಯ್ಕೆ ಹೇಗೆ?
’2012ರ ಆಗಸ್ಟ್‌ 7 ರಿಂದ 2013ರ ಆಗಸ್ಟ್‌ 25ರ ವರೆಗಿನ ಅವಧಿಯಲ್ಲಿ ಆಟಗಾರರು ನೀಡಿದ ಪ್ರದರ್ಶನವನ್ನು ಆಧರಿಸಿ ತಂಡವನ್ನು ಆಯ್ಕೆ ಮಾಡ ಲಾಗಿದೆ. ಈ ಅವಧಿಯಲ್ಲಿ ಹಲವರು ಗಮನಾರ್ಹ ಆಟ ತೋರಿದ್ದಾರೆ. ಆದ್ದರಿಂದ ವರ್ಷದ ತಂಡವನ್ನು ಆಯ್ಕೆ ಮಾಡುವುದು ತುಂಬಾ ಕಠಿಣ ಕೆಲಸ’ ಎಂದು ಕುಂಬ್ಳೆ ಹೇಳಿದ್ದಾರೆ.
ಜನರ ನೆಚ್ಚಿನ ಆಟಗಾರ:
ಮಹೇಂದ್ರ ಸಿಂಗ್‌ ದೋನಿ ಅವರು ಈ ವರ್ಷದ ‘ಎಲ್‌ಜಿ ಜನರ ನೆಚ್ಚಿನ ಆಟಗಾರ’ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಈ ಗೌರವ ಪಡೆದ ಭಾರತದ ಎರಡನೇ ಆಟಗಾರ ಎಂಬ ಹಿರಿಮೆ ಭಾರತ ತಂಡದ ನಾಯಕನಿಗೆ ಒಲಿದಿದೆ. ಸಚಿನ್‌ ತೆಂಡೂಲ್ಕರ್‌ 2010 ರಲ್ಲಿ ಈ ಗೌರವ ಪಡೆದಿದ್ದರು. ಐಸಿಸಿ ಈ ಪ್ರಶಸ್ತಿಯನ್ನು 2010 ರಲ್ಲಿ ಆರಂಭಿಸಿತ್ತು. ಮೊದಲ ವರ್ಷದ ಗೌರವ ಸಚಿನ್‌ಗೆ ಒಲಿದಿತ್ತು. 2011 ಮತ್ತು 2012 ರಲ್ಲಿ ಈ ಪ್ರಶಸ್ತಿಯನ್ನು ಶ್ರೀಲಂಕಾದ ಕುಮಾರ ಸಂಗಕ್ಕಾರ ಪಡೆದು ಕೊಂಡಿದ್ದರು.

ದೇಶದ ನೂತನ ಮುಖ್ಯ ಮಾಹಿತಿ ಆಯುಕ್ತರಾಗಿ ಸುಷ್ಮಾ ಸಿಂಗ್ ನೇಮಕ
sushmaದೇಶದ ನೂತನ ಮುಖ್ಯ ಮಾಹಿತಿ ಆಯುಕ್ತರಾಗಿ (ಸಿಐಸಿ) ಐಎಎಸ್‌ ಅಧಿಕಾರಿ ಸುಷ್ಮಾ ಸಿಂಗ್‌ ಅವರನ್ನು ಕೇಂದ್ರ ಸರ್ಕಾರ ನೇಮಕ ಮಾಡಿದೆ. ಹಾಲಿ ಆಯುಕ್ತೆ ದೀಪಕ್‌ ಸಂಧು ಅವರು ತಮ್ಮ ಅವಧಿಯನ್ನು ಪೂರ್ಣಗೊಳಿಸುತ್ತಿದ್ದು ಇವರ ಸ್ಥಾನದಲ್ಲಿ ಸುಷ್ಮಾ ಸಿಂಗ್‌ ಅವರನ್ನು ನೇಮಕ ಮಾಡಲಾಗಿದೆ.
ಎರಡನೇ ಮಹಿಳೆ:
ಪ್ರಧಾನಿ ಮನಮೋಹನ್‌ ಸಿಂಗ್‌, ಲೋಕಸಭೆಯಲ್ಲಿ ವಿಪಕ್ಷ ನಾಯಕಿ ಸುಷ್ಮಾ ಸ್ವರಾಜ್‌ ಮತ್ತು ಕಾನೂನು ಸಚಿವ ಕಪಿಲ್‌ ಸಿಬಲ್‌ ಅವರನ್ನು ಒಳಗೊಂಡ ಆಯ್ಕೆ ಸಮಿತಿ ಮಾಜಿ ಈ ತಿಂಗಳಾಂತ್ಯದಲ್ಲಿ ಹುದ್ದೆಯನ್ನು ತೆರವುಗೊಳಿಸಲಿರುವ ದೀಪಕ್‌ ಸಂಧು ಬಳಿಕ ಈ ಹುದ್ದೆ ಅಲಂಕರಿಸುತ್ತಿರುವ ಎರಡನೇ ಮಹಿಳೆ ಸುಷ್ಮಾ ಆಗಿದ್ದಾರೆ. 2009ರ ಮೇ 31ರಂದು ಐಎಎಸ್‌ ಹುದ್ದೆಯಿಂದ ನಿವೃತ್ತರಾದ ಬಳಿಕ ಅದೇ ವರ್ಷದ ಸೆ.23ರಂದು ಸುಷ್ಮಾ ಸಿಂಗ್‌ ಮಾಹಿತಿ ಆಯುಕ್ತರಾಗಿ ನೇಮಕಗೊಂಡಿದ್ದರು.
ಸುಷ್ಮಾ ಬಗ್ಗೆ:
ಜಾರ್ಖಂಡ್‌ ಕೇಡರ್‌ ಐಎಎಸ್‌ ಅಧಿಕಾರಿಯಾಗಿದ್ದ ಇವರು ಭಾರತ ಸರ್ಕಾರದ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದಾರೆ. 1972ರಲ್ಲಿ ಐಎಎಸ್‌ಗೆ ಸೇರ್ಪಡೆಗೊಂಡಿದ್ದ ಸುಷ್ಮಾ ವಾರ್ತಾ ಮತ್ತು ಪ್ರಸಾರ ಖಾತೆಯ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದರು. ಅಲ್ಲದೆ ಪಂಚಾಯತ್‌ ರಾಜ್‌ ಮತ್ತು ಈಶಾನ್ಯ ಪ್ರದೇಶಗಳ ಅಭಿವೃದ್ಧಿ ಖಾತೆಯ ಕಾರ್ಯದರ್ಶಿಯಾಗಿಯೂ ಕಾರ್ಯ ನಿರ್ವಹಿಸಿದ್ದರು.

ಪ್ರಚಲಿತ ವಿದ್ಯಮಾನಗಳು ಡಿಸೆಂಬರ್ 1, 2013


3ಡಿ ಲೋಹ ಮುದ್ರಣ ಯಂತ್ರವನ್ನು (3 ಡಿ ಮೆಟಲ್ ಪ್ರಿಂಟರ್) ಅಭಿವೃದ್ಧಿಪಡಿಸಿದ ವಿಜ್ಞಾನಿಗಳು
ವಿಜ್ಞಾನಿಗಳು ಇದೀಗ ಅತಿ ಕಡಿಮೆ ವೆಚ್ಚದಲ್ಲಿ, ಮುಕ್ತವಾಗಿ ಎಲ್ಲೆಡೆ ಲಭ್ಯವಾಗಬಲ್ಲಂತಹ 3ಡಿ ಲೋಹ ಮುದ್ರಣಯಂತ್ರವನ್ನು (3 ಡಿ ಮೆಟಲ್ ಪ್ರಿಂಟರ್) ನಿರ್ಮಿಸಿದ್ದಾರೆ. ಅಂದರೆ ಯಾರು ಬೇಕಿದ್ದರೂ ಅದನ್ನು ಬಳಸಿ ತಮಗೆ ಬೇಕಾದ ಲೋಹದ ಉತ್ಪನ್ನಗಳನ್ನು ಮನೆಯಲ್ಲಿಯೇ ತಯಾರು ಮಾಡಿಕೊಳ್ಳಬಹುದು.
ಏನಿದು ಆವಿಷ್ಕಾರ?
ಈವರೆಗೆ, 3ಡಿ ಮುದ್ರಣ ಪಾಲಿಮರ್ ವ್ಯವಹಾರವಾಗಿತ್ತು. ಬಹುತೇಕ ನಿರ್ಮಾಪಕರು 3ಡಿ ಮುದ್ರಣಯಂತ್ರಗಳನ್ನು ಬಳಸಿಕೊಂಡು ಟೆಂಟ್ ನಿಂದ ಚೆಸ್ ಸೆಟ್ ವರೆಗೆ ಎಲ್ಲ ಬಗೆಯ ಗ್ರಾಹಕ ಬಳಕೆಯ ಪ್ಲಾಸ್ಟಿಕ್ ವಸ್ತುಗಳನ್ನು ನಿರ್ಮಿಸುತ್ತಿದ್ದರು. ಮಿಷಿಗನ್ ತಂತ್ರಜ್ಞಾನ ವಿಶ್ವ ವಿದ್ಯಾಲಯದ ಜೊಶುವಾ ಪೀಯರ್ಸ್ ಮತ್ತು ಅವರ ತಂಡವು ನಿರ್ಮಿಸಿರುವ ಹೊಸ 3ಡಿ ಮುದ್ರಣಯಂತ್ರವು ಈ ಉತ್ಪನ್ನಗಳ ಪಟ್ಟಿಗೆ ಇದೀಗ ಸುತ್ತಿಗೆಯನ್ನೂ ಸೇರಿಸಿದೆ. ವಿವಿಧ ಉತ್ಪನ್ನಗಳ ವಿವರವಾದ ನಕ್ಷೆಗಳು, ಸಾಫ್ಟ ವೇರ್ ಇತ್ಯಾದಿಗಳೆಲ್ಲ ಈಗ ಮುಕ್ತವಾಗಿ ಎಲ್ಲೆಡೆಯಲ್ಲೂ ಲಭಿಸುತ್ತವೆ. ಅಂದರೆ ಈಗ ಇದನ್ನು ಬಳಸಿಕೊಂಡು ಯಾರು ಬೇಕಿದ್ದರೂ ಈ ಹೊಸ 3 ಡಿ ಮುದ್ರಣಯಂತ್ರವನ್ನು ತಮ್ಮ ಸ್ವಂತ ಕೆಲಸಗಳಿಗಾಗಿ ತಯಾರಿಸಿಕೊಳ್ಳಬಹುದು ಎಂದು ವಿಜ್ಞಾನಿಗಳು ಹೇಳಿದ್ದಾರೆ.
ಪೀಯರ್ಸ್ ತಂಡ:
ಪೀಯರ್ಸ್ ತಂಡವು 1500 ಅಮೆರಿಕನ್ ಡಾಲರ್ ಗೂ ಕಡಿಮೆ ಬೆಲೆಯ ಸಾಧನಗಳನ್ನು ಬಳಸಿ ಈ 3 ಡಿ ಲೋಹ ಮುದ್ರಣಯಂತ್ರವನ್ನು ತಯಾರಿಸಿದೆ. ಅವರು ಇದಕ್ಕಾಗಿ ಬಳಸಿದ ವಸ್ತುಗಳಲ್ಲಿ ಪುಟ್ಟ ಕಮರ್ಷಿಯಲ್ ಮಿಗ್ ವೆಲ್ಡರ್ ಮತ್ತು ಮುಕ್ತ ಮಾರುಕಟ್ಟೆಯಲ್ಲಿ ಲಭಿಸುವ ಮೈಕ್ರೋ – ಕಂಟ್ರೋಲರ್ ಸೇರಿವೆ. ವಾಣಿಜ್ಯ ಬಳಕೆಯ ಲೋಹ ಮುದ್ರಣಯಂತ್ರಗಳು ಲಭ್ಯ ಇವೆ. ಆದರೆ ಅವು ತುಂಬಾ ದುಬಾರಿ. ಅವುಗಳ ಬೆಲೆ 5 ಲಕ್ಷ ಡಾಲರ್ ಗಳಿಗೂ ಹೆಚ್ಚು.
ಅಪಾಯಗಳು:
3ಡಿ ಲೋಹ ಮುದ್ರಣಯಂತ್ರವು ಹೊಸ ಸಾಧ್ಯತೆಗಳನ್ನು ತೆರೆದುಕೊಳ್ಳುವುದರ ಜೊತೆಗೇ, ಮನೆಯಲ್ಲೇ ಮದ್ದು ಗುಂಡುಗಳನ್ನು ತಯಾರಿಸುವ ಅಪಾಯವೂ ಇದೆ. ವಾಣಿಜ್ಯ ಬಳಕೆಯ ಲೋಹ ಹಾಗೂ ಪ್ಲಾಸ್ಟಿಕ್ 3 ಡಿ ಮುದ್ರಣಯಂತ್ರಗಳನ್ನು ಬಳಸಿ ಪಿಸ್ತೂಲುಗಳನ್ನು ತಯಾರಿಸಿರುವ ಕೆಲವರು ಇದನ್ನು ತಮ್ಮ ಉದ್ದೇಶಕ್ಕೆ ಬಳಸುವ ಸಾಧ್ಯತೆಗಳನ್ನೂ ಅಲ್ಲಗಳೆಯುವಂತಿಲ್ಲ ಎಂದು ಸಂಶೋಧಕರು ನುಡಿದರು. ಆದರೆ 3ಡಿ ಲೋಹ ಮುದ್ರಣ ಯಂತ್ರದಿಂದ ಆಗುವ ಆಪಾಯಗಳಿಗಿಂತ ಉಪಯುಕ್ತತೆಯೇ ಹೆಚ್ಚು ಎಂಬುದು ತಮ್ಮ ನಂಬುಗೆ ಎಂದು ಅವರು ಹೇಳಿದರು.

ಬಹು ನಿರೀಕ್ಷಿತ ದಾಭೋಲ್- ಬೆಂಗಳೂರು ಗ್ಯಾಸ್ ಪೈಪ್‌ಲೈನ್ ಲೋಕಾರ್ಪಣೆ
dabole gangaloe pipelineರಾಜ್ಯದ ಪಾಲಿಗೆ ಅಭಿವೃದ್ಧಿ ಬಾಗಿಲು ತೆರೆಯುವ ಸಾವಿರ ಕಿ.ಮೀ. ಉದ್ದದ ದಾಭೋಲ್- ಬೆಂಗಳೂರು ಗ್ಯಾಸ್ ಪೈಪ್‌ಲೈನ್ ಅನ್ನು ಪ್ರಧಾನಿ ಮನಮೋಹನ್ ಸಿಂಗ್ ಅವರು ಔಪಚಾರಿಕವಾಗಿ ರಾಷ್ಟ್ರಕ್ಕೆ ಸಮರ್ಪಿಸಿದರು. ಭಾರತೀಯ ಅನಿಲ ಪ್ರಾಧಿಕಾರ (ಗೇಲ್) ಸುಮಾರು 4,500 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಈ ಗ್ಯಾಸ್ ಪೈಲ್‌ಲೈನ್ 16 ಎಂಎಂಎಸ್‌ಸಿಎಂಡಿ (ನಿತ್ಯ ದಶ ಲಕ್ಷ ಘನ ಅಡಿ) ಸಾಮರ್ಥ್ಯ ಹೊಂದಿದೆ.
ಮಹತ್ವಾಕಾಂಕ್ಷಿ ಯೋಜನೆ:
ಕಳೆದ ಫೆಬ್ರವರಿಯಲ್ಲಿ ಈ ಅನಿಲ ಮಾರ್ಗ ಅನೌಪಚಾರಿಕವಾಗಿ ಕಾರ್ಯಾರಂಭವಾಗಿತ್ತು. ಬಿಡದಿಯಲ್ಲಿ ನಿರ್ಮಿಸುತ್ತಿರುವ ಅನಿಲಾಧಾರಿತ 700 ಮೆಗಾವ್ಯಾಟ್ ವಿದ್ಯುತ್ ಸ್ಥಾವರಕ್ಕೆ ಅನಿಲ ಪಡಿಯಲು ಕೆಪಿಟಿಸಿಎಲ್ ಈಗಾಗಲೇ ಗೇಲ್ ಜತೆ ಒಪ್ಪಂದ ಮಾಡಿಕೊಂಡಿದೆ. ವಿದ್ಯುತ್ ಕೊರತೆ ಎದುರಿಸುತ್ತಿರುವ ರಾಜ್ಯದ ಪಾಲಿಗೆ ಈ ಯೋಜನೆ ಅತಿ ಮಹತ್ವದ್ದು. 16 ಎಂಎಂಎಸ್‌ಸಿಎಂಡಿ ಅನಿಲದಿಂದ 3000 ಮೆಗಾವ್ಯಾಟ್ ವಿದ್ಯುತ್ ಉತ್ಪಾದಿಸಬಹುದು. ಜತೆಗೆ ಗ್ರಾಹಕರ ಮನೆ ಮನೆಗೆ ಪೈಲ್ ಮೂಲಕ ಅಡುಗೆ ಅನಿಲ ಒದಗಿಸುವ ಯೋಜನೆಯೂ ಇದರಿಂದ ಸಾಕಾರಗೊಳ್ಳಲಿದೆ. ಕೇಂದ್ರ ಸರ್ಕಾರ ಅನಿಲ ಈಗ 15000 ಕಿ.ಮೀ. ಉದ್ದ ಇರುವ ಅನಿಲ ಪೈಪ್‌ಲೈನ್ ಅನ್ನು 2030ರ ವೇಳೆಗೆ 30,000 ಕಿ.ಮೀ.ಗೆ ಹೆಚ್ಚಿಸುವ ಗುರಿ ಹೊಂದಿದೆ ಎಂದರು. 1000 ಕಿ.ಮೀ. ಉದ್ದದ ದಾಭೋಲ್ – ಬೆಂಗಳೂರು ಗ್ಯಾಸ್ ಪೈಪ್‌ಲೈನ್ ರಾಜ್ಯದ ಹತ್ತು ಜಿಲ್ಲೆಗಳನ್ನು ಹಾದು ಹೋಗುತ್ತದೆ.
ಯಾವ ಜಿಲ್ಲೆಗಳಲ್ಲಿ?
ಬೆಳಗಾವಿ, ಧಾರವಾಡ, ಗದಗ, ಬಳ್ಳಾರಿ, ದಾವಣಗೆರೆ, ಚಿತ್ರದುರ್ಗ, ತುಮಕೂರು, ರಾಮನಗರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಯನ್ನು ಹಾದು ಹೋಗಿದೆ. ಈ ಎಲ್ಲ ಜಿಲ್ಲೆಗಳಿಗೂ ಬರುವ ದಿನಗಳಲ್ಲಿ ಅನಿಲ ಪೂರೈಕೆ ಸರಾಗವಾಗಲಿದೆ. ಮನೆ ಮನೆಗೆ ಅನಿಲ ಗ್ರಾಹಕರ ಮನೆ ಮನೆಗೆ ಪೈಪ್ ಮೂಲಕ ಅಡುಗೆ ಅನಿಲ ಒದಗಿಸಲು ಈಗಾಗಲೇ ಕರ್ನಾಟಕ ಕೈಗಾರಿಕಾ ಹೂಡಿಕೆ ಅಭಿವೃದ್ಧಿ ನಿಗಮ (ಕೆಎಸ್‌ಐಐಡಿಸಿ) ಮತ್ತು ಭಾರತೀಯ ಅನಿಲ ಪ್ರಾಧಿಕಾರ (ಗೇಲ್) ಜಂಟಿ ಸಹಭಾಗಿತ್ವದಲ್ಲಿ ವಿತರಣಾ ಕಂಪನಿಯನ್ನು ರಚಿಸಿವೆ.

ಕರ್ನಾಟಕ ಜ್ಞಾನ ಆಯೋಗ ಮುಂದುವರಿಸಲು ರಾಜ್ಯ ಸರ್ಕಾರ ನಿರ್ಧಾರ
knowledge commissionಕರ್ನಾಟಕ ಜ್ಞಾನ ಆಯೋಗ ಮುಂದುವರಿಸಲು ರಾಜ್ಯ ಸರ್ಕಾರ ನಿರ್ಧರಿಸಿದ್ದು, ಹಿರಿಯ ವಿಜ್ಞಾನಿ ಕೆ.ಕಸ್ತೂರಿ ರಂಗನ್ ಅವರ ಅಧ್ಯಕ್ಷತೆಯಲ್ಲಿಯೇ ಆಯೋಗ ಕಾರ್ಯನಿರ್ವಹಿಸಲಿದೆ. ಆಯೋಗದ ವಿಚಾರದಲ್ಲಿ ರಾಜಕೀಯ ಹಸ್ತಕ್ಷೇಪ ಮಾಡದೇ, ಈಗಿರುವ ಆಯೋಗದ ಅವಧಿ ವಿಸ್ತರಿಸಲು ಉದ್ದೇಶಿಸಿದೆ. ಆದರೆ ಕಳೆದ ಸರ್ಕಾರದ ಅವಧಿಯಲ್ಲಿ ಸಲ್ಲಿಸಿರುವ ವರದಿ ಶಿಫಾರಸುಗಳಲ್ಲಿ ಶೇ.70ರಷ್ಟು ಜಾರಿಗೆ ಬಾರದಿರುವುದು ಆಯೋಗದ ಅಸ್ತಿತ್ವದ ಬಗೆಗೆ ಪ್ರಶ್ನೆ ಉದ್ಭವಿಸಿದೆ.
ಜ್ಞಾನ ಆಯೋಗ ವರದಿ:
2012ರ ಜನವರಿ 21ರಂದು ಜ್ಞಾನ ಆಯೋಗವು ರಾಜ್ಯ ಸರ್ಕಾರಕ್ಕೆ 89 ಶಿಫಾರಸುಳ್ಳ ಅಂತಿಮ ವರದಿ ನೀಡಿತ್ತು. ಶಿಕ್ಷಣ ಹಾಗೂ ಆರೋಗ್ಯ ಕ್ಷೇತ್ರದ ಅಭಿವೃದ್ಧಿ ಕುರಿತಂತೆ ಸರ್ಕಾರಕ್ಕೆ ಸಲಹೆ ನೀಡಲು ಈ ಆಯೋಗವನ್ನು  ಹಿಂದಿನ ಸರ್ಕಾರದ ಅವಧಿಯಲ್ಲಿ ನೇಮಿಸಿತ್ತು. ಸುಮಾರು ನಾಲ್ಕೂವರೆ ವರ್ಷಗಳ ಅಧ್ಯಯನ ಬಳಿಕ ಉನ್ನತ ಶಿಕ್ಷಣ ಹಾಗೂ ಸಮುದಾಯ ಆಧರಿತ ಸಾರ್ವಜನಿಕ ಆರೋಗ್ಯ ವ್ಯವಸ್ಥೆ ಕುರಿತಂತೆ ನಾಲ್ಕು ಹಂತದಲ್ಲಿ ಕರ್ನಾಟಕ ಜ್ಞಾನ ಆಯೋಗ ವರದಿ ನೀಡಿತ್ತು. ಉನ್ನತ ಶಿಕ್ಷಣದ ಅಭಿವೃದ್ಧಿಗೆ ಜ್ಞಾನ ಆಯೋಗದ ಸಲಹೆ ಮುಖ್ಯವಾಗಿದೆ ಎನ್ನುವ ಉದ್ದೇಶದಿಂದ ಆಯೋಗವನ್ನು ಮತ್ತೊಂದು ಅವಧಿಗೆ ಮುಂದುವರಿಸಲಾಗುತ್ತಿದೆ. ಈ ಹಿನ್ನೆಲೆಯಲ್ಲಿ ಕೆ.ಕಸ್ತೂರಿ ರಂಗನ್ ಅವರನ್ನು ಅಧ್ಯಕ್ಷರಾಗಿ ಹಾಗೂ ಎಂ.ಕೆ.ಶ್ರೀಧರ್ ಅವರನ್ನು ಸದಸ್ಯ ಕಾರ್ಯದರ್ಶಿಯನ್ನಾಗಿ ಮುಂದುವರಿಸಲು ಸರ್ಕಾರ ನಿರ್ಧರಿಸಿದೆ.
ರುಸಾ ಹಾಗೂ ಕೌಶಲ್ಯ ಅಭಿವೃದ್ಧಿಗೆ ಒತ್ತು:
ಉನ್ನತ ಶಿಕ್ಷಣ ಇಲಾಖೆಗೆ ಸಂಬಂಧಿಸಿ ರಾಷ್ಟ್ರೀಯ ಉನ್ನತ ಶಿಕ್ಷಣ ಅಭಿಯಾನ(ರುಸಾ) ಹಾಗೂ ಕೌಶಲ್ಯ ಅಭಿವೃದ್ಧಿಗೆ ಸಂಬಂಧಿಸಿ ಹೆಚ್ಚಿನ ಒತ್ತು ನೀಡುವಂತೆ ಆಯೋಗವನ್ನು ಸರ್ಕಾರ ಕೋರಿದೆ. ರುಸಾ ಯೋಜನೆಯಡಿ ಇನ್ನೆಂಟು ವರ್ಷ ರಾಜ್ಯಕ್ಕೆ 10 ಸಾವಿರ ಕೋಟಿಗೂ ಅಧಿಕ ಅನುದಾನ ಬರಲಿದೆ. ಆಯೋಗದ ಸಲಹೆ ಆಧರಿಸಿ ಉನ್ನತ ಶಿಕ್ಷಣ ಅಭಿವೃದ್ಧಿಗೆ ಆಲೋಚಿಸಲಾಗಿದೆ. ಈ ಹಿಂದಿನ ವರದಿಯಲ್ಲಿಯೇ ಆಯೋಗ ಕೌಶಲ್ಯ ಅಭಿವೃದ್ಧಿಗೆ ಸಂಬಂಧಿಸಿ ವಿಸ್ತೃತ ವರದಿ ನೀಡಿತ್ತು. ಇದನ್ನು ಮತ್ತಷ್ಟು ಪರಿಣಾಮಕಾರಿಯಾಗಿಸಲು ಆಯೋಗದ ಸಲಹೆ ಕೇಳಲಾಗುತ್ತಿದೆ.
ಹಿಂದಿನ ಶಿಫಾರಸುಗಳ ಕತೆಯೇನು?
ಜ್ಞಾನ ಆಯೋಗ ಶಿಕ್ಷಣ ಅಭಿವೃದ್ಧಿಗೆ ನೀಡಿದ್ದ 89 ಶಿಫಾರಸಲ್ಲಿ ಕೇವಲ 27 ಜಾರಿಗೆ ಬಂದಿವೆ ಅಥವಾ ಕಾರ್ಯೋನ್ಮುಖದಲ್ಲಿದೆ. ಉಳಿದ ಶಿಫಾರಸುಗಳ ಬಗ್ಗೆ ಸರ್ಕಾರ ಗಂಭೀರ ಚಿಂತನೆ ಮಾಡಿಲ್ಲ. ವರದಿ ಸ್ವೀಕರಿಸಿದ್ದ ಅಂದಿನ ಮುಖ್ಯಮಂತ್ರಿ ಆಯೋಗದ ಶಿಫಾರಸು ಮುಂದಿನ ಬಜೆಟ್‌ನಲ್ಲಿ ಅಳವಡಿಸಿಕೊಳ್ಳುವುದಾಗಿ ಹೇಳಿದ್ದರು. ಆದರೆ ಬಹುತೇಕ ಶಿಫಾರಸುಗಳು ಜಾರಿಯಾಗಲಿಲ್ಲ

ಪ್ರಚಲಿತ ವಿದ್ಯಮಾನಗಳು ನವೆಂಬರ್ 30, 2013


ವಿಶ್ವದ ಭ್ರಷ್ಟ ರಾಷ್ಟ್ರಗಳ ಪೈಕಿ ಭಾರತಕ್ಕೆ 94 ನೇ ಸ್ಥಾನ: ಸಮೀಕ್ಷೆ
ಯಾವ ರಾಷ್ಟ್ರಗಳು ಎಷ್ಟು ಭ್ರಷ್ಟ ಎನ್ನುವ ಕುರಿತು ‘ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್‌’ ಸಂಸ್ಥೆಯು ವರದಿಯೊಂದನ್ನು ಪ್ರಕಟಿಸಿದ್ದು, 174 ರಾಷ್ಟ್ರಗಳ ಪೈಕಿ ಭಾರತ 94ನೇ ಸ್ಥಾನ ಪಡೆದುಕೊಂಡಿದೆ. ಕಳೆದ ವರ್ಷ ಹೊಂದಿದ್ದ ಸ್ಥಾನದಲ್ಲೇ ಮುಂದುವರೆಯುವ ಮೂಲಕ ಭ್ರಷ್ಟಾಚಾರವನ್ನು ಕಾಪಾಡಿಕೊಂಡ ಕುಖ್ಯಾತಿ ಪಡೆದುಕೊಂಡಿದೆ.  40 ಅಂಕಗಳನ್ನು ಗಳಿಸಿಕೊಂಡಿರುವ ನೆರೆಯ ಚೀನಾ 80ನೇ ಸ್ಥಾನದಲ್ಲಿದೆ. ಪಾಕಿಸ್ತಾನಕ್ಕೆ ಹೋಲಿಸಿಕೊಂಡರೆ ಭಾರತಲ್ಲಿನ ಭ್ರಷ್ಟಾಚಾರ ಪ್ರಮಾಣ ಕಡಿಮೆ ಪ್ರಮಾಣದಲ್ಲಿದ್ದು, ಪಾಕಿಸ್ತಾನ 28 ಅಂಕಗಳನ್ನು ಗಳಿಸಿ 127ನೇ ಸ್ಥಾನದಲ್ಲಿದೆ.
ಶ್ರೇಣಿ ಹೇಗೆ:
  • ವಿಶ್ವದ ಎಲ್ಲ ದೇಶಗಳನ್ನು ಪಟ್ಟಿಮಾಡಿ ಆ ದೇಶಗಳಲ್ಲಿನ ಭ್ರಷ್ಟಾಚಾರ ಪ್ರಮಾಣಕ್ಕೆ ಅನುಗುಣವಾಗಿ 0-100 ವರೆಗಿನ ಅಂಕಗಳನ್ನು ನೀಡಲಾಗಿದೆ.
  • ವಿವಿಧ ಮಾನದಂಡಗಳಡಿ ನಿಗದಿ ಮಾಡಲಾಗಿದ್ದ ಗರಿಷ್ಠ 100 ಅಂಕಗಳಿಗೆ ಭಾರತ 36 ಅಂಕಗಳನ್ನಷ್ಟೇ ಪಡೆದಿದೆ. ಯಾವ ಅಂಕವನ್ನೂ ಪಡೆಯಲಾಗದೆ ಸೊನ್ನೆ (0) ಸುತ್ತುವ ರಾಷ್ಟ್ರ ‘ಪರಮ ಭ್ರಷ್ಟ’ವಾದರೆ 100 ಅಂಕ ಗಳಿಸುವ ರಾಷ್ಟ್ರ ‘ಅತ್ಯಂತ ಶುದ್ಧ’ ಎಂದು ಪರಿಗಣಿಸಲಾಗುತ್ತದೆ.
  • ಆ ಪ್ರಕಾರ ವಿಶ್ವದ ಅತ್ಯಂತ ಭ್ರಷ್ಟ ದೇಶಗಳ ಸಾಲಿನಲ್ಲಿ ಸೊಮಾಲಿಯಾ, ಉತ್ತರ ಕೊರಿಯಾ ಮತ್ತು ಆಫ್ಘಾನಿಸ್ತಾನ ದೇಶಗಳು ತಲಾ 8 ಅಂಕಗಳನ್ನು ಗಳಿಸುವುದರೊಂದಿಗೆ ಜಂಟಿ ಪ್ರಥಮ ಸ್ಥಾನದಲ್ಲಿವೆ.
  • ಅಂತೆಯೇ 91 ಅಂಕಗಳನ್ನು ಗಳಿಸಿರುವ ಡೆನ್ಮಾರ್ಕ್ ಮತ್ತು ನ್ಯೂಜಿಲೆಂಡ್ ದೇಶಗಳು ಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆಯುವ ಮೂಲಕ ಅತ್ಯಂತ ಕಡಿಮೆ ಭ್ರಷ್ಟಾಚಾರ ನಡೆವ ದೇಶಗಳು ಎಂಬ ಖ್ಯಾತಿ ಪಡೆದಿವೆ.
  • ಆದರೆ ಇಲ್ಲಿ ವಿಶ್ವದ ಯಾವುದೇ ರಾಷ್ಟ್ರವೂ ಕೂಡ 100 ಅಂಕಗಳಿಸಿ ಸಂಪೂರ್ಣ ಭ್ರಷ್ಟಾಚಾರ ಮುಕ್ತ ರಾಷ್ಟ್ರ ಎನಿಸಿಕೊಳ್ಳುವುದರಲ್ಲಿ ವಿಫಲವಾಗಿವೆ.
ಟಾಪ್ 10 ಭ್ರಷ್ಟ ರಾಷ್ಟ್ರಗಳು:
‘ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್‌’ ಬಿಡುಗಡೆ ಮಾಡಿರುವ ವಿಶ್ವದ ಮೊದಲ ಹತ್ತು ಅತ್ಯಂತ ಹೆಚ್ಚು ಭ್ರಷ್ಟ ರಾಷ್ಟ್ರಗಳು ಸೊಮಾಲಿಯಾ (8) ಆಫ್ಘಾನಿಸ್ತಾನ (8) ಉತ್ತರ ಕೊರಿಯಾ (8) ಸುಡಾನ್ (11) ದಕ್ಷಿಣ ಸುಡಾನ್ (14) ಲಿಬಿಯಾ (15) ಇರಾಕ್ (16) ಉಜ್ಬೇಕಿಸ್ತಾನ (17) ಟರ್ಕ್‌ಮೆನಿಸ್ತಾನ (17) ಸಿರಿಯಾ (17)
ಅತ್ಯಂತ ಕಡಿಮೆ ಭ್ರಷ್ಟ ರಾಷ್ಟ್ರಗಳು:
ವಿಶ್ವದ ಮೊದಲ ಹತ್ತು ಅತ್ಯಂತ ಕಡಿಮೆ ಭ್ರಷ್ಟ ರಾಷ್ಟ್ರಗಳು ಡೆನ್ಮಾರ್ಕ್ (91) ನ್ಯೂಜಿಲ್ಯಾಂಡ್ (91) ಫಿನ್ ಲ್ಯಾಂಡ್ (89) ಸ್ವೀಡೆನ್ (89) ನಾರ್ವೆ (86) ಸಿಂಗಾಪುರ (86) ಸ್ವಿಟ್ಜೆರ್‌ಲ್ಯಾಂಡ್ (85) ನೆದರ್ ಲ್ಯಾಂಡ್ (83) ಆಸ್ಟ್ರೇಲಿಯಾ (81) ಕೆನಡಾ (81)

ಆತ್ಮಹತ್ಯೆ ಪ್ರಮಾಣದಲ್ಲಿ ದೇಶದಲ್ಲೇ ಎರಡನೇ ನಗರ ಎಂಬ ಅಪಖ್ಯಾತಿಗೆ ಬೆಂಗಳೂರು
suicideಐಟಿಬಿಟಿ, ಉದ್ಯಾನನಗರಿ ಎಂದೇ ಪ್ರಸಿದ್ಧಿಯಾಗಿರುವ ಬೆಂಗಳೂರು, ಇದೀಗ ಆತ್ಮಹತ್ಯೆ ಪ್ರಮಾಣದಲ್ಲೂ ದೇಶದಲ್ಲೇ ಎರಡನೇ ನಗರ ಎಂಬ ಅಪಖ್ಯಾತಿಗೆ ತುತ್ತಾಗಿದೆ. ಬೆಂಗಳೂರಿನಲ್ಲಿ ಪ್ರತಿ ವರ್ಷ, ಲಕ್ಷಕ್ಕೆ 24 ಜನರಂತೆ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. ಇನ್ನು ನಂ.1 ಸ್ಥಾನದಲ್ಲಿರುವ ಚೆನ್ನೈನಲ್ಲಿ ಪ್ರತಿ ಲಕ್ಷಕ್ಕೆ 29 ಜನ ಸಾವನ್ನಪ್ಪುತ್ತಿದ್ದಾರೆ. ಆದರೆ ಮತ್ತೂಂದು ಮಹಾನಗರಿ ಕೋಲ್ಕತಾದಲ್ಲಿ ಈ ಪ್ರಮಾಣ ಕೇವಲ 2.6ರಷ್ಟಿದೆ ಎಂದು ರಾಷ್ಟ್ರೀಯ ಅಪರಾಧ ಬ್ಯೂರೋ ತನ್ನ ಇತ್ತೀಚಿನ ವರದಿಯಲ್ಲಿ ಹೇಳಿದೆ.
ಕಾರಣ ಏನು?
ಮಹಾನಗರಗಳಿಗೆ ಉದ್ಯೋಗ ಅರಸಿ ಬರುವವರ ಸಂಖ್ಯೆ ಹೆಚ್ಚು. ಹೀಗೆ ಬರುವವರಲ್ಲಿ ಹೆಚ್ಚಿನವರು ಉನ್ನತ ಶಿಕ್ಷಣ ಪಡೆದು ಬಂದಿರುತ್ತಾರೆ. ಹೆಚ್ಚೆಚ್ಚು ಪದವಿ ಹೊಂದಿದ್ದಂತೆ ಆಕಾಂಕ್ಷೆಗಳೂ ಹೆಚ್ಚಾಗಿರುತ್ತವೆ. ಇದು ಹೆಚ್ಚಿನ ನಿರಾಶೆ ಮತ್ತು ಒತ್ತಡಕ್ಕೆ ಕಾರಣವಾಗುತ್ತದೆ. ಇಂತಹ ಒತ್ತಡವನ್ನು ತಾಳಲಾರದೆ ಆತ್ಮಹತ್ಯೆಯ ಪ್ರಕರಣಗಳು ಹೆಚ್ಚುತ್ತಿವೆ. ಮೆಟ್ರೋ ನಗರಗಳಲ್ಲಿ ಬಹುಬೇಗನೆ ಬದಲಾಗುವ ಆರ್ಥಿಕ ಪರಿಸ್ಥಿತಿ ಮತ್ತು ಕೆಲಸದ ಒತ್ತಡಗಳಿಗೆ ಹೊಂದಿಕೊಳ್ಳಲು ಜನ ಕಷ್ಟ ಪಡುತ್ತಿದ್ದಾರೆ. ಇದು ಆತ್ಮಹತ್ಯೆಯ ಸಂಖ್ಯೆ ಹೆಚ್ಚಾಗಲು ಕಾರಣ ಎಂದು ವಿಶ್ವ ಆರೋಗ್ಯ ಸಂಸ್ಥೆ (ಡಬ್ಲ್ಯುಎಚ್‌ಓ)ಯ ಮನೋವೈದ್ಯರು ತಿಳಿಸಿದ್ದಾರೆ.
ಕೊಲ್ಕತಾ ಉತ್ತಮ:
ಉಳಿದ ಮೆಟ್ರೋ ನಗರಗಳಿಗೆ ಹೋಲಿಸಿದರೆ ಕೊಲ್ಕತಾದಲ್ಲಿ ಇನ್ನು ಸಂಸ್ಕೃತಿ ಬೇರೆ ನಗರಗಳಷ್ಟು ಬದಲಾಗಿಲ್ಲ. ಹೀಗಾಗಿ ಸ್ಥಳೀಯ ಜನರಿಗೆ ಒಂದು ಮನೋಸ್ಥಿತಿಯಿಂದ ಮತ್ತೂಂದು ಮನೋಸ್ಥಿತಿಗೆ ಬದಲಾಗಲು ಕಾಲಾವಕಾಶ ಸಿಕ್ಕಿದೆ. ಇದು ಜನರಿಗೆ ಒತ್ತಡವನ್ನು ಎದುರಿಸುವ ಸಾಮರ್ಥ್ಯವನ್ನು ದಕ್ಕಿಸಿಕೊಟ್ಟಿದೆ. ಹೀಗಾಗಿ ಕೊಲ್ಕತಾದಲ್ಲಿ ಆತ್ಮಹತ್ಯೆ ಪ್ರಮಾಣ ಕಡಿಮೆ ಇದೆ ಎಂದು ಅವರು ತಿಳಿಸಿದ್ದಾರೆ.
ಕೆಲಸದ ಕಿರಿಕಿರಿ:
ಉದ್ಯೋಗ ಸಮಸ್ಯೆಯಿಂದಾಗಿ 2011ರಲ್ಲಿ ಬೆಂಗಳೂರಿನಲ್ಲಿ 47 ಜನ ಆತ್ಮಹತ್ಯೆಗೆ ಶರಣಾಗಿದ್ದರೆ, 2012ರಲ್ಲಿ ಈ ಸಂಖ್ಯೆ 89ಕ್ಕೆ ಏರಿದೆ. ಇನ್ನು ಇಡೀ ಕರ್ನಾಟಕದಲ್ಲಿ ಉದ್ಯೋಗ ಸಂಬಂಧಿ ಕಾರಣಗಳಿಗಾಗಿ 2012ರಲ್ಲಿ 166 ಜನ ಸಾವನ್ನಪ್ಪಿದ್ದು, ಈ ಪೈಕಿ ಶೇ.50ರಷ್ಟು ಬೆಂಗಳೂರಿನದ್ದೇ ಆಗಿದೆ.

ಚೂರು-ಪಾರು ಸುದ್ಧಿಗಳು:
    barbie
  • ಭಾರತ ಮೂಲದ ಡಾ.ಜಸ್ಮಂದರ್ ಗೆ ‘ಏಷ್ಯನ್‌ ಲೈಟ್‌ ಪ್ರೊಫೆಷನಲ್‌ ಎಕ್ಸಲೆನ್ಸ್‌’ ಪ್ರಶಸ್ತಿ: ಮ್ಯಾಂಚೆಸ್ಟರ್‌ ನಲ್ಲಿ ಮನೋವೈದ್ಯರಾಗಿ ಉತ್ತಮ ಸೇವೆ ಸಲ್ಲಿಸಿರುವ ಭಾರತ ಮೂಲದ ಡಾ. ಜಸ್ವಿಂದರ್‌ ಎಸ್‌. ಬಮ್ರಾಹ್‌ ಅವರಿಗೆ ಬ್ರಿಟನ್‌ ‘ಏಷ್ಯನ್‌ ಲೈಟ್‌ ಪ್ರೊಫೆಷನಲ್‌ ಎಕ್ಸಲೆನ್ಸ್‌’ ಪ್ರಶಸ್ತಿ ನೀಡಿ ಗೌರವಿಸಿದೆ. 1978ರಲ್ಲಿ ಪಂಜಾಬಿನ ಪಟಿಯಾಲದ ಸರ್ಕಾರಿ ವೈದ್ಯಕೀಯ ಕಾಲೇಜಿನಲ್ಲಿ ಪದವಿ ಪಡೆದ ಅವರು, 1985ರಲ್ಲಿ ಇಲ್ಲಿನ ರಾಯಲ್‌ ಕಾಲೇಜಿಗೆ ಸೇರಿದ್ದರು

  • ಕಾಮನ್‌ವೆಲ್ತ್ ಚಾಂಪಿಯನ್‌ಷಿಪ್‌ನಲ್ಲಿ ಭಾರತಕ್ಕೆ ಒಟ್ಟು 117 ಪದಕಗಳು: ಭಾರತದ ಲಿಫ್ಟರ್‌ಗಳು ಮಲೇಷ್ಯಾದ ಪೆನಾಂಗ್‌ನಲ್ಲಿ ಮುಕ್ತಾಯಗೊಂಡ ಕಾಮನ್‌ವೆಲ್ತ್ ಚಾಂಪಿಯನ್‌ಷಿಪ್‌ನಲ್ಲಿ ಅಮೋಘ ಸಾಧನೆ ತೋರುವ ಮೂಲಕ ಚಾಂಪಿಯನ್‌ ಪಟ್ಟ ಪಡೆದಿದ್ದಾರೆ. ಇದರೊಂದಿಗೆ ಭಾರತ ಟೂರ್ನಿಯಲ್ಲಿ 57 ಬಂಗಾರದೊಂದಿಗೆ ಒಟ್ಟು 117 ಪದಕ ತನ್ನದಾಗಿಸಿಕೊಂಡಿದೆ. ಭಾರತವು ಯೂತ್‌ ಬಾಲಕ ಮತ್ತು ಬಾಲಕಿಯರ ವಿಭಾಗ, ಜೂನಿಯರ್ ಬಾಲಕ ಮತ್ತು ಬಾಲಕಿಯರ ವಿಭಾಗ ಮತ್ತು ಸೀನಿಯರ್‌ ಪುರುಷರ ವಿಭಾಗದಲ್ಲಿ ಚಾಂಪಿಯನ್‌ ಆಗಿ ಹೊರಹೊಮ್ಮಿದೆ. ಸೀನಿಯರ್ ಮಹಿಳೆಯರ ವಿಭಾಗದಲ್ಲಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡಿದೆ. ಭಾರತ ಟೂರ್ನಿಯಲ್ಲಿ 57 ಬಂಗಾರದ ಜೊತೆಗೆ 39 ಬೆಳ್ಳಿ ಮತ್ತು 21 ಕಂಚಿನ ಪದಕವನ್ನು ಗಳಿಸಿದೆ.

  • ದೇಶದಲ್ಲಿ ನಿರುದ್ಯೋಗ ದರ ಶೇ.13.3 ರಷ್ಟು; ಸರ್ಕಾರಿ ವರದಿ: ದೇಶದಲ್ಲಿ 2012-13ರಲ್ಲಿ 15-29 ವಯಸ್ಸಿನ ನಿರುದ್ಯೋಗ ದರ ಶೇ 13.3ರಷ್ಟು ಇದೆ ಎಂದು ಸರ್ಕಾರಿ ವರದಿ ಬಹಿರಂಗ ಪಡಿಸಿದೆ. ದೇಶದಲ್ಲಿ 15ರಿಂದ 29 ವರ್ಷದೊಳಗಿನ ಪ್ರತಿ ಒಂದು ಸಾವಿರ ಜನರಲ್ಲಿ 133 ಮಂದಿ ನಿರುದ್ಯೋಗಿಗಳಿದ್ದಾರೆ.ಇದು ಶೇಕಡಾ 13.3ರಷ್ಟು ನಿರುದ್ಯೋಗ ಪ್ರಮಾಣದ ದರವನ್ನು ಸೂಚಿಸುತ್ತದೆ ಎಂದು ‘ಯುವ ಉದ್ಯೋಗ-ನಿರುದ್ಯೋಗ 2012-13′ ಕುರಿತು ಕಾರ್ಮಿಕ ಸಚಿವಾಲಯ ನೀಡಿದ ವರದಿಯಲ್ಲಿ ಈ ಅಂಶ ಬಹಿರಂಗವಾಗಿದೆ.

  • ಬೆಂಗಳೂರಿನ ವರ್ಷಾ ವಿಶ್ವ ಸ್ಯೂಕರ್ ನಲ್ಲಿ ದಾಖಲೆ ಸಾಧನೆ: ಬೆಂಗಳೂರಿನ ಶಾಲಾ ಬಾಲಕಿ ವರ್ಷಾ ಸಂಜೀವ್‌ ಐಬಿಎಸ್‌ಎಫ್ ವಿಶ್ವ ಸ್ನೂಕರ್‌ ಚಾಂಪಿಯನ್‌ಶಿಪ್‌ನಲ್ಲಿ ನಾಕೌಟ್‌ ಹಂತಕ್ಕೆ ಅರ್ಹತೆ ಗಿಟ್ಟಿಸುವ ಮೂಲಕ ಈ ಸಾಧನೆ ಮಾಡಿದ ಮೊದಲ ಭಾರತೀಯ ಆಟಗಾರ್ತಿ ಎಂಬಗೌರವಕ್ಕೆ ಪಾತ್ರವಾಗಿದ್ದಾರೆ. ಬೆಂಗಳೂರಿನಿಲ್ಲಿ ನಡೆದ ‘ಎಫ್’ ಗುಂಪಿನ ಪಂದ್ಯದಲ್ಲಿ 17ರ ಹರೆಯದ ವರ್ಷಾ ಸಂಜೀವ್‌ 3-0 ಫ್ರೆàಮ್‌ಗಳಿಂದ ಉಕ್ರೇನ್‌ನ ಮಾರಿಯಾ ಬಕರಸ್ಕಾ ವಿರುದ್ಧ ಸುಲಭ ಗೆಲುವು ಸಾಧಿಸಿದರು. ಇದರೊಂದಿಗೆ ಟೂರ್ನಿಯಲ್ಲಿ ಆಡಿದ 5 ಪಂದ್ಯಗಳ ಪೈಕಿ ನಾಲ್ಕರಲ್ಲಿ ಜಯ ಸಾಧಿಸಿ ನಾಕೌಟ್‌ಗೆ ಪ್ರವೇಶಿಸಿದರು.

ಪ್ರಚಲಿತ ವಿದ್ಯಮಾನಗಳು ನವೆಂಬರ್ 29, 2013


ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಅಧ್ಯಕ್ಷರಾಗಿ ಮೈಸೂರು ಮಹಾರಾಜ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌
ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆಯ ಅಧಿಕಾರ ಮೈಸೂರು ಮಹಾರಾಜ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌ ಮತ್ತು ಮಾಜಿ ಕಾರ್ಯದರ್ಶಿ ಬ್ರಿಜೇಶ್‌ ಪಟೇಲ್‌ ನೇತೃತ್ವದ ಬಣಕ್ಕೆ ಒಲಿದಿದೆ, ಕಳೆದ 3 ವರ್ಷಗಳ ಅಧಿಕಾರ ನಡೆಸಿದ ಮಾಜಿ ಕ್ರಿಕೆಟಿಗರಾದ ಅನಿಲ್‌ ಕುಂಬ್ಳೆ ಮತ್ತು ಜಾವಗಲ್‌ ಶ್ರೀನಾಥ್‌ ಬೆಂಬಲಿತ ಪಡೆ ಸೋಲು ಅನುಭವಿಸಿದೆ.
ಕ್ಲೀನ್ ಸ್ವೀಪ್:
  • ಕೆಎಸ್‌ಸಿಎನ 23 ಪದಾಧಿಕಾರಿಗಳ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಒಡೆಯರ್‌ ಮತ್ತು ಬ್ರಿಜೇಶ್‌ ಬಣದ ಬಹುತೇಕ ಅಭ್ಯರ್ಥಿಗಳು ಭಾರೀ ಅಂತರದಿಂದ ಜಯ ಸಾಧಿಸಿತು. ಇದರೊಂದಿಗೆ ಕಳೆದ 3 ವರ್ಷ ಕಾಲ ಅಧಿಕಾರದಲ್ಲಿದ್ದ ಕುಂಬ್ಳೆ ಬಣಕ್ಕೆ ತೀವ್ರ ಮುಖಭಂಗವಾಗಿದೆ.
  • 1351 ಮತ ಚಲಾವಣೆ ಆಗುವ ಮೂಲಕ ದಾಖಲೆಯ ಸಂಖ್ಯೆಯ ಮತದಾನ ನಡೆಯಿತು. 343 ಕ್ಲಬ್‌ ಮತ್ತು 1485 ಸದಸ್ಯರು ಸೇರಿದಂತೆ 1823 ಮತದಾರರು ಇದ್ದು, ಕಳೆದ ಬಾರಿ 1080 ಮತಗಳು ಚಲಾವಣೆ ಆಗಿದ್ದವು. ಅದಕ್ಕೆ ಹೋಲಿಸಿದರೆ ಈ ಬಾರಿ ದಾಖಲೆ ಸಂಖ್ಯೆಯ ಮತದಾನವಾಗಿದೆ.
  • 2008-2010ರ ಅವಧಿಗೆ ಪರಸ್ಪರ ವಿರೋಧಿ ಬಣಗಳಾಗಿ ಅಧಿಕಾರಕ್ಕೆ ಇಳಿದಿದ್ದ ಒಡೆಯರ್‌ ಮತ್ತು ಬ್ರಿಜೇಶ್‌ ಬಣಗಳು ಈ ಬಾರಿ ಒಂದಾಗಿ ಕುಂಬ್ಳೆ ಬೆಂಬಲಿತ ಬಣಗಳ ವಿರುದ್ಧ ಕಣಕ್ಕಿಳಿದಿತ್ತು. 2010-2013ರಲ್ಲಿ ಮೂರು ವರ್ಷ ಅಧಿಕಾರ ನಡೆಸಿದ್ದ ಕುಂಬ್ಳೆ ಮತ್ತು ಶ್ರೀನಾಥ್‌ ಈ ಬಾರಿ ಸ್ಪರ್ಧೆಯಿಂದ ಈ ಹಿಂದೆ ಸರಿದಿದ್ದರು.
ಜಯಗಳಿಸಿದವರು:
  • ಅಧ್ಯಕ್ಷ: ಶ್ರೀಕಂಠದತ್ತ ನರಸಿಂಹರಾಜ ಒಡೆಯರ್‌,
  • ಕಾರ್ಯದರ್ಶಿ: ಬ್ರಿಜೇಶ್‌ ಪಟೇಲ್‌,
  • ಖಜಾಂಚಿ: ದಯಾನಂದ ಪೈ
  • ಉಪಾಧ್ಯಕ್ಷ: ಪಿ.ಆರ್‌. ಅಶೋಕಾನಂದ್‌, ಸಂಜಯ್‌ ದೇಸಾಯಿ, ಆರ್‌. ಸುಧಾಕರ್‌ ರಾವ್‌
  • ವ್ಯವಸ್ಥಾಪಕ ಸಮಿತಿ: ದೊಡ್ಡ ಗಣೇಶ್‌, ಲಕ್ಷ್ಣಣ್‌ ಮಥಾನಿ, ಮಲ್ಲಿಕಾರ್ಜುನ ಸ್ವಾಮಿ, ವಿ.ಎಂ ಮಂಜುನಾಥ್‌, ರಘುರಾಮ್‌    ಭಟ್‌, ಶ್ರೀನಿವಾಸ್‌ ಮೂರ್ತಿ

ಭೂ ಕಕ್ಷೆಯಿಂದ ಸೂರ್ಯ ಕಕ್ಷೆಗೆ ತಲುಪಿದ ಮಂಗಳಯಾನ ಉಪಗ್ರಹ
mars arbitoerಯಶಸ್ವಿ ‘ಮಂಗಳಯಾನ’ ಕೈಗೊಂಡ ಏಷ್ಯಾದ ಮೊದಲ ರಾಷ್ಟ್ರ ಎಂಬ ಪಟ್ಟವನ್ನು ಭಾರತಕ್ಕೆ ತಂದುಕೊಡುವ ನಿಟ್ಟಿನಲ್ಲಿ ದಾಪುಗಾಲು ಇಟ್ಟಿರುವ ಭಾರತೀಯ ಬಾಹ್ಯಾಕಾಶ ಸಂಸ್ಥೆ (ಇಸ್ರೋ), ಐತಿಹಾಸಿಕ ಮಂಗಳಯಾನ ಉಪಗ್ರಹವನ್ನು ಮಂಗಳ ಗ್ರಹದ ಪಥದತ್ತ ನೂಕುವಲ್ಲಿ ಸಫ‌ಲವಾಗಿದೆ. ತನ್ಮೂಲಕ ಭೂಕಕ್ಷೆ ತೊರೆದು ಅನ್ಯ ಗ್ರಹದ ಕಕ್ಷೆಯತ್ತ ಪ್ರಯಾಣ ಬೆಳೆಸಿದ ಇಸ್ರೋದ ಮೊದಲ ಉಪಗ್ರಹ ಎಂಬ ಹಿರಿಮೆಗೆ ಮಂಗಳಯಾನ ಉಪಗ್ರಹ ಪಾತ್ರವಾಗಿದೆ.
ಸವಾಲಿನ ಕೆಲಸ:
ನಿತ್ಯ 25 ಲಕ್ಷ ಕಿ.ಮೀ. ವೇಗದಲ್ಲಿ ‘ಕೆಂಪುಗ್ರಹ’ದತ್ತ ಚಲಿಸುತ್ತಿರುವ ಈ ಉಪಗ್ರಹ, ಮಾರ್ಗಮಧ್ಯೆ ಏನಾದರೂ ದಾರಿ ತಪ್ಪುವ ಸುಳಿವು ಕಂಡರೆ ಸರಿಪಡಿಸಲು ಇಸ್ರೋಗೆ ನಾಲ್ಕು ಬಾರಿ ಅವಕಾಶವಿದೆ. ಉಪಗ್ರಹವನ್ನು ಮಂಗಳ ಗ್ರಹದ ಹಾದಿಗೆ ಮುಟ್ಟಿಸುವುದು ಇಸ್ರೋ ವಿಜ್ಞಾನಿಗಳಿಗೆ ಉಪಗ್ರಹ ಉಡಾವಣೆಗಿಂತ ಅತ್ಯಂತ ಸವಾಲಿನ ಕೆಲಸವಾಗಿತ್ತು. ಈ ವೇಳೆ, 440 ನ್ಯೂಟನ್‌ ಲಿಕ್ವಿಡ್‌ ಇಂಜಿನ್‌ ಅನ್ನು 22 ನಿಮಿಷಗಳ ಕಾಲ ಚಾಲೂ ಮಾಡಲಾಯಿತು. ಇದರಿಂದಾಗಿ ಸೆಕೆಂಡ್‌ಗೆ 648 ಮೀಟರ್‌ ವೇಗದಲ್ಲಿ ಉಪಗ್ರಹ ಚಲಿಸಿತು ಎಂದು ಇಸ್ರೋ ಅಧಿಕಾರಿಗಳು ತಿಳಿಸಿದ್ದಾರೆ.
ಬೆಂಗಳೂರಿಂದ ನಿಗಾ:
ಗುರುತ್ವಾಕರ್ಷಣೆ ಬಲ ತೊರೆದು ಭೂಕಕ್ಷೆಯಿಂದ ಮಂಗಳ ಹಾದಿಗೆ ತಲುಪಿರುವ ಉಪಗ್ರಹದ ಮೇಲೆ ಬೆಂಗಳೂರು ಹೊರವಲಯದ ಕೆಂಗೇರಿ ಬಳಿ ಇರುವ ಇಂಡಿಯನ್‌ ಡೀಪ್‌ ಸ್ಟೇಷನ್‌ ನೆಟ್‌ವರ್ಕ್‌ (ಐಡಿಎಸ್‌ಎನ್‌) ಜತೆಗೂಡಿ ಪೀಣ್ಯದ ಇಸ್ಟ್ಯಾಕ್‌ ಕೇಂದ್ರದ ವಿಜ್ಞಾನಿಗಳ ತಂಡ ನಿರಂತರ ನಿಗಾ ಇಟ್ಟಿದ್ದಾರೆ. ಉಪಗ್ರಹವನ್ನು ಮಂಗಳ ಹಾದಿಗೆ ನೂಕುವುದು ಅತ್ಯಂತ ಕ್ಲಿಷ್ಟಕರ ಕೆಲಸ. ಏಕೆಂದರೆ ತಲುಪಿಸಬೇಕಾದ ಗುರಿ ಅರ್ಧ ಡಿಗ್ರಿ ಏರುಪೇರಾದರೂ, ವೇಗ ಕೆಲವು ಕಿ.ಮೀ.ಯಷ್ಟು ಹೆಚ್ಚು ಕಮ್ಮಿಯಾದರೂ ತೊಂದರೆಯಾಗುವ ಅಪಾಯವಿರುತ್ತದೆ.
ಮತ್ತೂಂದು ಸವಾಲಿದೆ:
ಭೂಕಕ್ಷೆಯಿಂದ ಉಪಗ್ರಹವನ್ನು ಬೇರ್ಪಡಿಸಿದಾಕ್ಷಣ ಎಲ್ಲ ಸವಾಲುಗಳು ಮುಗಿದಿಲ್ಲ. 2014ರ ಸೆಪ್ಟೆಂಬರ್‌ನಲ್ಲಿ ಉಪಗ್ರಹವನ್ನು ಮಂಗಳ ಗ್ರಹದ ಕಕ್ಷೆಗೆ ನಾಜೂಕಾಗಿ ಇಳಿಸುವ ಮತ್ತೂಂದು ಕ್ಲಿಷ್ಟಕರ ಸನ್ನಿವೇಶವನ್ನು ಇಸ್ರೋ ಎದುರಿಸಬೇಕಾಗಿದೆ.
ಐತಿಹಾಸಿಕ ಸಾಧನೆ:
  • ಮಂಗಳಕಕ್ಷೆಗೆ ಉಪಗ್ರಹವನ್ನು ಸೇರಿಸಿ ಯಶಸ್ವಿ ಯಾನ ಕೈಗೊಂಡ ದೇಶಗಳ ಸಂಖ್ಯೆ ಕೇವಲ ಮೂರು. ಅವೆಂದರೆ- ಅಮೆರಿಕ, ಯುರೋಪ್‌ ಹಾಗೂ ರಷ್ಯಾ.
  • 2011ರ ನವೆಂಬರ್‌ನಲ್ಲಿ ಚೀನಾ ತನ್ನ ಮಂಗಳಯಾನ ಉಪಗ್ರಹವನ್ನು ಯಶಸ್ವಿಯಾಗಿ ಭೂಕಕ್ಷೆಗೆ ಸೇರಿಸಿತ್ತು. ಆದರೆ ಭೂಕಕ್ಷೆಯಿಂದ ಆ ಉಪಗ್ರಹವನ್ನು ಮಂಗಳ ಹಾದಿಗೆ ತಲುಪಿಸುವಾಗ ಅದು ಚೂರುಚೂರಾಗಿತ್ತು. ಆ ಚೂರುಗಳು ಕಳೆದ ವರ್ಷ ಪೆಸಿಫಿಕ್‌ ಸಮುದ್ರಕ್ಕೆ ಬಿದ್ದಿದ್ದವು.
  • 2003ರಲ್ಲಿ ಜಪಾನ್‌ನ ಮಂಗಳ ಉಪಗ್ರಹದಲ್ಲಿ ಮಂಗಳ ಗ್ರಹದ ಬಳಿ ದೋಷ ಕಾಣಿಸಿಕೊಂಡಿತ್ತು. ಹೀಗಾಗಿ ಆ ಉಪಗ್ರಹ ಮಂಗಳ ಕಕ್ಷೆ ಸೇರಲು ವಿಫ‌ಲವಾಗಿತ್ತು.
  • ಇಸ್ರೋ ಉಪಗ್ರಹ ಭೂಕಕ್ಷೆ ತೊರೆದು ಮಂಗಳ ಗ್ರಹ ಹಾದಿ ಹಿಡಿವ ಮೂಲಕ ಚೀನಾ ಮಾಡಲಾರದ್ದನ್ನು ಮಾಡಿ ತೋರಿಸಿದೆ.
  • ಅಮೆರಿಕದ ಮಂಗಳಯಾತ್ರೆಗಿಂತ ಕೇವಲ ಶೇ.10ರಷ್ಟು (450 ಕೋಟಿ ರೂ.) ವೆಚ್ಚದಲ್ಲಿ ಇಸ್ರೋ ಕೈಗೊಂಡಿರುವ ಮಂಗಳಯಾನವನ್ನು ಇಡೀ ವಿಶ್ವ ಅತ್ಯಂತ ಕುತೂಹಲದಿಂದ ಗಮನಹರಿಸುತ್ತಿದೆ.

ಇರಾನ್‌ನಿಂದ ಭಾರತಕ್ಕೆ ಕಚ್ಚಾ ತೈಲ ಆಮದು ವಿನಾಯಿತಿ ಅವಧಿಯನ್ನು ವಿಸ್ತರಿಸಿದ ಅಮೆರಿಕ
iran crude oilಭಾರತ, ಚೀನಾ ಮತ್ತು ಇತರ ಕೆಲ ರಾಷ್ಟ್ರಗಳಿಗೆ ಇರಾನ್‌ನಿಂದ ಕಚ್ಚಾ ತೈಲ ಆಮದು ಸಂಬಂಧ ವಿನಾಯಿತಿ ಅವಧಿಯನ್ನು ಮತ್ತೆ 6 ತಿಂಗಳು ವಿಸ್ತರಿಸಿ ಅಮೆರಿಕ ಸರ್ಕಾರ ನಿರ್ಧಾರ ಕೈಗೊಂಡಿದೆ. ಈ ರಾಷ್ಟ್ರಗಳು ಇರಾನ್‌ನಿಂದ ಖರೀದಿಸುತ್ತಿರುವ ಕಚ್ಚಾತೈಲದ ಪ್ರಮಾಣದಲ್ಲಿ ಭಾರೀ ಕಡಿತ ಮಾಡಿರುವ ಹಿನ್ನೆಲೆಯಲ್ಲಿ ಕಠಿಣ ಆರ್ಥಿಕ ನಿರ್ಬಂಧಗಳಿಂದ ವಿನಾಯಿತಿ ನೀಡಲು ನಿರ್ಧರಿಸಲಾಗಿದೆ.
ಹಿನ್ನೆಲೆ:
ಇರಾನ್‌ನ ಪರಮಾಣು ಯೋಜನೆ ವಿರೋಧಿಸಿ ಅಮೆರಿಕ ಆ ದೇಶದ ವಿರುದ್ಧ ಹಲವಾರು ಆರ್ಥಿಕ ನಿರ್ಬಂಧ ಹೇರಿದ್ದು, ಇರಾನ್‌ನಿಂದ ಭಾರೀ ಪ್ರಮಾಣದಲ್ಲಿ ಕಚ್ಚಾತೈಲ ಆಮದು ಮಾಡಿಕೊಳ್ಳುತ್ತಿರುವ ದೇಶಗಳಿಗೆ ತೈಲ ಆಮದು ಪ್ರಮಾಣ ಕಡಿತ ಮಾಡುವಂತೆ ಈ ಹಿಂದೆಯೇ ಸೂಚನೆ ನೀಡಿತ್ತು. ಈ ಹಿನ್ನೆಲೆಯಲ್ಲಿ ಭಾರತ, ಚೀನಾ, ಕೊರಿಯಾ, ಟರ್ಕಿ ಮತ್ತು ಥೈವಾನ್‌ಗಳು ಇರಾನ್‌ನಿಂದ ಆಮದು ಮಾಡಿಕೊಳ್ಳಲಾಗುತ್ತಿರುವ ಕಚ್ಚಾತೈಲದ ಪ್ರಮಾಣದಲ್ಲಿ ಭಾರೀ ಕಡಿತ ಮಾಡಿದ್ದವು.
ಅವಧಿ ಪೂರ್ಣ:
ಇದನ್ನು ಪರಿಗಣಿಸಿ ಅಮೆರಿಕ ಈ ದೇಶಗಳಿಗೆ ನಿರ್ಬಂಧದಿಂದ ವಿನಾಯಿತಿಯನ್ನು ನೀಡಿತ್ತು. ವಿನಾಯಿತಿಯ ಅವಧಿ ಪೂರ್ಣಗೊಂಡ ಹಿನ್ನೆಲೆಯಲ್ಲಿ 2012ನೇ ಆರ್ಥಿಕ ಸಾಲಿಗಾಗಿನ ರಾಷ್ಟ್ರೀಯ ರಕ್ಷಣಾ ಅಧಿಕಾರ ಕಾಯಿದೆಯಡಿಯಲ್ಲಿ ಇದೀಗ ಮತ್ತೆ ವಿನಾಯಿತಿಯ ಅವಧಿಯನ್ನು ಆರು ತಿಂಗಳ ಕಾಲ ವಿಸ್ತರಿಸಲಾಗಿದೆ ಎಂದು ಅಮೆರಿಕದ ವಿದೇಶಾಂಗ ಖಾತೆಯ ಸಚಿವ ಜಾನ್‌ ಕೆರಿ ತಿಳಿಸಿದರು.

ಪ್ರಚಲಿತ ವಿದ್ಯಮಾನಗಳು ನವೆಂಬರ್ 28, 2013


ಏಡ್ಸ್ ಮತ್ತು ಕುಷ್ಠರೋಗ ಪೀಡಿತರ ಮಕ್ಕಳಿಗೆ ಉಚಿತ ಉನ್ನತ ಶಿಕ್ಷಣ ಮತ್ತು ವಿದ್ಯಾರ್ಥಿ ವೇತನ
ಏಡ್ಸ್ ದಿನಾಚರಣೆ ಪ್ರಯುಕ್ತ ಏಡ್ಸ್ ಮತ್ತು ಕುಷ್ಠರೋಗ ಪೀಡಿತರಿಗೊಂದು ಸಿಹಿ ಸುದ್ದಿ. ಎಚ್‌ಐವಿ ಅಥವಾ ಕುಷ್ಠರೋಗಗಳಿಂದ ಬಳಲುತ್ತಿರುವ ಮಕ್ಕಳಿಗೆ ಉಚಿತ ಉನ್ನತ ಶಿಕ್ಷಣ ಮತ್ತು ವಿದ್ಯಾರ್ಥಿ ವೇತನ ನೀಡುವ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸಲು ಉನ್ನತ ಶಿಕ್ಷಣ ಇಲಾಖೆ ಕೆಲವು ಮಾರ್ಗಸೂಚಿಗಳನ್ನು ಸಿದ್ಧಪಡಿಸಿದೆ. ಈ ಮೂಲಕ ಏಡ್ಸ್ ಅಥವಾ ಕುಷ್ಠರೋಗದಿಂದ ಬಳಲುತ್ತಿರುವ ವಿದ್ಯಾರ್ಥಿಗಳು ಅಥವಾ ಏಡ್ಸ್ ಅಥವಾ ಕುಷ್ಠರೋಗಕ್ಕೆ ತುತ್ತಾಗಿರುವ ಪಾಲಕರ ಮಕ್ಕಳು ಸರ್ಕಾರಿ ಹಾಗೂ ಅನುದಾನಿತ ಸಂಸ್ಥೆಗಳಲ್ಲಿ ಸರ್ಟಿಫಿಕೇಟ್ ಕೋರ್ಸ್, ಡಿಪ್ಲೊಮಾ, ಪದವಿ, ಸ್ನಾತಕೋತ್ತರ ಪದವಿಯನ್ನು ಉಚಿತವಾಗಿ ಪಡೆದುಕೊಳ್ಳುವಂತೆ ಮಾಡಲು ಕಾಲೇಜು ಮತ್ತು ಕಾಲೇಜು ಶಿಕ್ಷಣ ಇಲಾಖೆ ಕೆಲವು ಮಾರ್ಗಸೂಚಿಗಳನ್ನು ಅನುಸರಿಸಬೇಕಾಗುತ್ತದೆ. ಈ ಯೋಜನೆಯಲ್ಲಿ ಬರುವ ಫಲಾನುಭವಿಗಳಿಗೆ 2014ರ ಫೆಬ್ರವರಿ ಅಂತ್ಯದೊಳಗೆ ವಿದ್ಯಾರ್ಥಿಗಳ ಖಾತೆಗೆ ವಾರ್ಷಿಕ 5000 ಹಣ ಸೇರಲಿದೆ.
ಏನಿದು ಯೋಜನೆ?
  • 2013- 14ನೇ ಸಾಲಿನ ಬಜೆಟ್ನಲ್ಲಿ ಈ ಯೋಜನೆ ಪ್ರಕಟಿಸಲಾಗಿದೆ. ಕಾಲೇಜು ಶಿಕ್ಷಣ ಇಲಾಖೆ ವ್ಯಾಪ್ತಿಯಲ್ಲಿರುವ 362 ಸರ್ಕಾರಿ ಕಾಲೇಜುಗಳು ಮತ್ತು 314 ಖಾಸಗಿ ಅನುದಾನಿತ ಕಾಲೇಜುಗಳ ಪೈಕಿ ಜಿಲ್ಲಾವಾರು, ಪ್ರತಿ ಜಿಲ್ಲೆಗೆ ಅಂದಾಜು 10 ವಿದ್ಯಾರ್ಥಿಗಳನ್ನು ಈ ಯೋಜನೆಯ ವಿದ್ಯಾರ್ಥಿ ವೇತನಕ್ಕೆ ಪರಿಗಣಿಸಬೇಕು.
  • ಆ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣದೊಂದಿಗೆ ವಾರ್ಷಿಕವಾಗಿ ಅಂದಾಜು 500 ವಿದ್ಯಾರ್ಥಿ ವೇತನ ಮಂಜೂರು ಮಾಡಲು ತಿಳಿಸಲಾಗಿತ್ತು.
  • ಎಲ್ಲಾ ಸರ್ಕಾರಿ ಮತ್ತು ಅನುದಾನಿತ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲರುಗಳು ಎಚ್‌ಐವಿ ಮತ್ತು ಕುಷ್ಠರೋಗಗಳಿಂದ ಬಳಲುತ್ತಿರುವ ವಿದ್ಯಾರ್ಥಿಗಳನ್ನು ಕೋರ್ಸ್ವಾರು, ಸಂಸ್ಥೆವಾರು, ಲಿಂಗವಾರು ಮತ್ತು ಪಂಗಡವಾರು ಫಲಾನುಭವಿಗಳನ್ನು ಗುರುತಿಸಿ ಅವರ ಪಟ್ಟಿ ಸಿದ್ಧಪಡಿಸಬೇಕು.
  • ಆ ಪಟ್ಟಿಯನ್ನು ಡಿಸೆಂಬರ್ 31ರೊಳಗೆ ಕಾಲೇಜು ಶಿಕ್ಷಣ ಇಲಾಖೆಯ ಪ್ರಾದೇಶಿಕ ಜಂಟಿ ನಿರ್ದೇಶಕರ ಕಚೇರಿಗೆ ಕಳುಹಿಸಬೇಕು.
ಅನುದಾನ:
ಅರ್ಹ ವಿದ್ಯಾರ್ಥಿಗಳಿಗೆ 2014 ಫೆಬ್ರವರಿಯಲ್ಲಿ ಅರ್ಹ ಶುಲ್ಕ ಮರುಪಾವತಿ ಮಾಡುವುದು ಹಾಗೂ ನಿಗದಿಪಡಿಸಿರುವ ವಿದ್ಯಾರ್ಥಿ ವೇತನವನ್ನು ಸರ್ಕಾರ ಬಿಡುಗಡೆ ಮಾಡಬೇಕಾಗಿರುತ್ತದೆ. ಪ್ರಮುಖ ಮಾರ್ಗಸೂಚಿಗಳು ಈ ಯೋಜನೆಯ ಫಲಾನುಭವಿಗಳು ಬೇರೆ ಯೋಜನೆ ಪಡೆಯುತ್ತಿದ್ದಾರೆಯೇ ಪರಿಶೀಲಿಸುವುದು ಫಲಾನುಭವಿಗಳ ಅರ್ಹತೆ ಮತ್ತು ಆರೋಗ್ಯ ಸ್ಥಿತಿಯನ್ನು ವೈದ್ಯರಿಂದ ದೃಢೀಕರಿಸುವುದು ವಿದ್ಯಾರ್ಥಿ ವೇತನ ಹಾಗೂ ಶುಲ್ಕ ಮರುಪಾವತಿ ಮೊತ್ತವನ್ನು ಸೂಕ್ತ ದಾಖಲೆಗಳೊಂದಿಗೆ ನೇರವಾಗಿ ವಿದ್ಯಾರ್ಥಿಗಳ ಬ್ಯಾಂಕ್ ಖಾತೆಗೆ ಜಮಾ ಮಾಡುವುದು ಕೆಟಿಪಿಪಿ ನಿಯಮಗಳನ್ನು ಹಾಗೂ ಪ್ರಚಲಿತ ನಿಯಮಗಳನ್ನು ಚಾಚೂ ತಪ್ಪದೇ ಪಾಲಿಸುವುದು

ಉದಯೋನ್ಮುಖ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧುಗೆ ಮಕಾವು ಓಪನ್ ಗ್ರ್ಯಾಂಡ್ ಪ್ರಿಕ್ಸ್ ಗೋಲ್ಡ್ ಪ್ರಶಸ್ತಿ
p v sindhuಆಕರ್ಷಕ ಪ್ರದರ್ಶನ ಮುಂದುವರಿಸಿದ ಭಾರತದ ಉದಯೋನ್ಮುಖ ಬ್ಯಾಡ್ಮಿಂಟನ್ ತಾರೆ ಪಿ.ವಿ ಸಿಂಧು ಅವರು ಮಕಾವು ಓಪನ್ ಗ್ರ್ಯಾಂಡ್ ಪ್ರಿಕ್ಸ್ ಗೋಲ್ಡ್ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ.ಇದರೊಂದಿಗೆ ಸಿಂಧು ಋತುವಿನ ಎರಡನೇ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದಾರೆ. ಈ ಮುನ್ನ ಕಳೆದ ಮೇ ತಿಂಗಳಲ್ಲಿ ನಡೆದ ಮಲೇಷ್ಯಾ ಓಪನ್‌ನಲ್ಲಿ ಋತುವಿನ ಮೊದಲ ಪ್ರಶಸ್ತಿ ಗೆದ್ದುಕೊಂಡಿದ್ದರು.
ಮಕಾವು ಓಪನ್:
18 ವರ್ಷದ ಸಿಂಧು ಫೈನಲ್ ಪಂದ್ಯದಲ್ಲಿ ಕೆನಡಾದ ಮಿಚೆಲ್ಲೆ ಲೀ ಅವರನ್ನು 21-15, 21-12 ಗೇಮ್‌ಗಳಿಂದ ಪರಾಭವಗೊಳಿಸಿದರು. ಈ ವರ್ಷವಷ್ಟೇ ಅರ್ಜುನ ಪ್ರಶಸ್ತಿ ಪಡೆದಿರುವ ಸಿಂಧು, ಪ್ರಶಸ್ತಿ ಸುತ್ತಿನಲ್ಲಿ 7ನೇ ಶ್ರೇಯಾಂಕ ಪಡೆದಿದ್ದ ಕೆನಡಾದ ಆಟಗಾರ್ತಿ ವಿರುದ್ಧ ಆರಂಭದಿಂದ ಅಂತ್ಯದವರೆಗೂ ಪಾರಮ್ಯ ಮೆರೆಯುವಲ್ಲಿ ಯಶಸ್ವಿಯಾದರು. ಪ್ರಶಸ್ತಿಯೊಂದಿಗೆ ಸಿಂಧು ಅವರು ಅಂದಾಜು ರು. 5.5 ಲಕ್ಷ ಬಹುಮಾನ ತಮ್ಮದಾಗಿಸಿಕೊಂಡರು.
ಸಿಂಧು ಸಾಧನೆ:
  • ಹೈದರಾಬಾದ್ ಮೂಲದ ಸಿಂಧು ಪ್ರಸಕ್ತ ವರ್ಷದಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದಾರೆ.
  • ಮಲೇಷ್ಯಾ ಓಪನ್ ಪ್ರಶಸ್ತಿ ಜತೆಗೆ, ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಚೀನಾದ ದೈತ್ಯ ಆಟಗಾರ್ತಿಯರ ವಿರುದ್ಧ ಸತತವಾಗಿ ಜಯ ಸಾಧಿಸುವ ಮೂಲಕ ಕಂಚಿನ ಪದಕ ಗೆದ್ದು, ಮಹಿಳೆಯರ ಸಿಂಗಲ್ಸ್‌ನಲ್ಲಿ ಪ್ರಶಸ್ತಿ ಗೆದ್ದ ಮೊದಲ ಭಾರತೀಯ ಆಟಗಾರ್ತಿ ಎಂಬ ಕೀರ್ತಿಗೆ ಪಾತ್ರರಾಗಿದ್ದರು.
  • ಪ್ರಕಾಶ್ ಪಡಕೋಣೆ ಅವರು 1983ರ ವಿಶ್ವ ಚಾಂಪಿಯನ್‌ಶಿಪ್‌ನ ಪುರುಷರ ಸಿಂಗಲ್ಸ್‌ನಲ್ಲಿ ಕಂಚಿನ ಪದಕ ಗೆದ್ದ ನಂತರ ಮೊದಲ ಬಾರಿಗೆ ಸಿಂಧು ಸಿಂಗಲ್ಸ್‌ನಲ್ಲಿ ಪ್ರಶಸ್ತಿ ತಂದುಕೊಟ್ಟಿದ್ದರು.
  • ಒಲಿಂಪಿಕ್ಸ್‌ನಲ್ಲಿ ಕಂಚಿನ ಪದಕ ಗೆದ್ದ ಸೈನಾ ನೆಹ್ವಾಲ್ ನಂತರ, ಸಿಂಧು ಅವರು ಸಹ ಭಾರತದ ಬ್ಯಾಡ್ಮಿಂಟನ್ ತಾರೆಯಾಗಿ ಮಿಂಚುತ್ತಿದ್ದಾರೆ.

ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವ 2013 ಕ್ಕೆ ಸರ್ಕಾರದ ಸಿದ್ಧತೆ
bangalore IFFಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವವು ಡಿಸೆಂಬರ್ 26 ರಿಂದ 8 ದಿನಗಳ ಕಾಲ ನಡೆಯಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ. ಚಲನಚಿತ್ರೋತ್ಸವದಲ್ಲಿ 150 ಕ್ಕೂ ಅಧಿಕ ಚಿತ್ರಗಳು ಪ್ರದರ್ಶನಗೊಳ್ಳುತ್ತಿದ್ದು, ರಾಜ್ಯ ಸರ್ಕಾರ 2 ಕೋಟಿ ಸಹಾಯಧನ ನೀಡಿದೆ.
45 ದೇಶಗಳ 150 ಚಿತ್ರ:
ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವದ ಆರನೇ ಆವೃತ್ತಿಯು ಡಿಸೆಂಬರ್ 26 ಕ್ಕೆ ಉದ್ಘಾಟನೆಗೊಳ್ಳಲಿದ್ದು, ಡಿಸೆಂಬರ್ 27 ರಿಂದ ಜನವರಿ 2 ರವರೆಗೆ ನಿಯಮಿತ ಪ್ರದರ್ಶನಗಳು ನಡೆಯಲಿವೆ. ಪ್ರಸಕ್ತ ಸಾಲಿನ ಚಿತ್ರೋತ್ಸವದಲ್ಲಿ 45 ದೇಶಗಳ 150 ಚಿತ್ರಗಳನ್ನು ಆಯ್ಕೆ ಮಾಡಿಕೊಳ್ಳಲಾಗಿದೆ. ಆಸ್ಕರ್ ಪ್ರಶಸ್ತಿಯ ಪೈಪೋಟಿಯಲ್ಲಿರುವ 14 ಚಿತ್ರಗಳು ಇಲ್ಲಿ ಪ್ರದರ್ಶನವಾಗುತ್ತಿರುವುದು ಉತ್ಸವದ ವಿಶೇಷ ರಂಗಾಗಿದೆ. ಬರ್ಲಿನ್, ಕಾನ್, ಕಾರ್ಲೋವಿವಾರಿ, ಮಾಸ್ಕೋ, ವೆನಿಸ್, ಟೊರೊಂಟೊ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರಶಸ್ತಿ ಪಡೆದ ಚಿತ್ರಗಳು ಕೂಡ ಇಲ್ಲಿ ಪ್ರದರ್ಶನಗೊಳ್ಳುತ್ತಿವೆ.
ಯಾವ ಯಾವ ಚಿತ್ರಗಳು?
ಕರ್ನಾಟಕದ ಉಪಭಾಷೆಗಳಾದ ತುಳು ಹಾಗೂ ಬಂಜಾರದ ಚಿತ್ರಗಳು ಸೇರಿದಂತೆ ವಿಶ್ವವಿಖ್ಯಾತ ನಿರ್ದೇಶಕರಾದ ಆಂದ್ರೆ ವಜಡ, ಅಸ್ಗರ್ ಫರಾದಿ, ಇಸ್ತ್ವಾನ್ ಜಾಬೋ, ಫ್ರಾನ್ಸ್ವಾ ಓಜೋನ್, ಸುಸಾನ್ ಬ್ಲೈರ್, ಗೊರಾನ್ ಪಾಸ್ಕಯವಿಚ್, ಮೈಕ್ ಲೈ, ಡೆನ್ನಿಸ್ ಕ್ಲೇಯರ್ ಅವರ ಚಿತ್ರಗಳು ಪ್ರದರ್ಶನಗೊಳ್ಳುತ್ತಿವೆ. ಜಪಾನ್, ಚೀನ, ಕೊರಿಯಾ, ಪಿಲಿಪಿನ್ಸ್, ಕಜಗಿಸ್ತಾನ್, ಬಾಂಗ್ಲಾದೇಶ, ಶ್ರೀಲಂಕ, ಇಂಡೋನೇಷಿಯಾ ಹಾಗೂ ಐರೋಪ್ಯ ದೇಶಗಳ ನಿರ್ದೇಶಕರ ಚಿತ್ರ ಸೇರಿದಂತೆ ಸೇರಿದಂತೆ 45 ದೇಶಗಳ ಚಿತ್ರಗಳು ಪ್ರದರ್ಶನಗೊಳ್ಳಲಿವೆ. ಈ ಬಾರಿ 45 ದೇಶಗಳ 150 ಚಿತ್ರಗಳು ಪ್ರದರ್ಶನಕ್ಕೆ ಆಯ್ಕೆ ಚಿತ್ರೋತ್ಸವದ ವಿವರ – ಜಾಗತಿಕ ಚಿತ್ರ 50 – ಏಷ್ಯನ್ ಚಿತ್ರ 10 – ಭಾರತೀಯ ಚಿತ್ರ 10 – ಕನ್ನಡ ಚಿತ್ರ 10 – ಕರ್ನಾಟಕದ ಉಪಭಾಷೆ ಚಿತ್ರ 2 – ವಿಶೇಷ ವಿಭಾಗ- ಗೊರಾನ್ ಪಾಸ್ಕಯವಿಚ್, ಮೈಕ್ ಲೈ, ಡೆನ್ನಿಸ್ ಕ್ಲೇಯರ್, ಮಾಲಿನಿ ಫೋನ್ಸೇಕ ಅವರ ಚಿತ್ರಗಳು – ತೈವಾನ್-ಜರ್ಮನಿಯ 10 ಚಿತ್ರ – ಭಾರತೀಯ ಚಿತ್ರ ವಿಶೇಷ ವಿಭಾಗ- ಡಾ.ರಾಜ್‌ಕುಮಾರ್ ಅವರ 5 ಚಿತ್ರ, ಬಿಮಲ್ ರಾಯ್ ಅವರ 5 ಚಿತ್ರ – ದಕ್ಷಿಣ ಅಮೆರಿಕ ಚಿತ್ರ 7 – ರೈಲು ಚಿತ್ರ 5 – ವಿಮರ್ಶಕರ ಆಯ್ಕೆಯ ಚಿತ್ರ 5 – ಏಷ್ಯನ್ ಸ್ಪರ್ಧಾ ವಿಜೇತ ಚಿತ್ರ 5 – ಜಪಾನ್ ಸಮುರಾಯ್ ಚಿತ್ರ 4 – ಇಟಾಲಿಯನ್ ನವವಾಸ್ತವವಾದಿ ಚಿತ್ರ 4 – ರಿತುಪರ್ಣ ಘೋಷ್ ಶ್ರದ್ಧಾಂಜಲಿ ಚಿತ್ರ.

 

ಪ್ರಚಲಿತ ವಿದ್ಯಮಾನಗಳು ನವೆಂಬರ್ 27, 2013


ಫೋರ್ಬ್ಸ್ ಮ್ಯಾಗಜೀನ್‌ನ ಭಾರತದ 100 ಶ್ರೀಮಂತರ ಪಟ್ಟಿಯಲ್ಲಿ ಕರ್ನಾಟಕದ 15 ಮಂದಿ
ಅಮೆರಿಕದ ಫೋರ್ಬ್ಸ್ ಮ್ಯಾಗಜೀನ್‌ ಭಾರತದ 100 ಶ್ರೀಮಂತರ ಪಟ್ಟಿಯೊಂದನ್ನು ಬಿಡುಗಡೆ ಮಾಡಿದ್ದು, ಅದರಲ್ಲಿ ಕರ್ನಾಟಕದ 15 ಮಂದಿ ಸ್ಥಾನ ಪಡೆದಿದ್ದಾರೆ. ಕರ್ನಾಟಕದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ವಿಪ್ರೋ ಸಂಸ್ಥೆಯ ಮುಖ್ಯಸ್ಥ ಅಜೀಂ ಪ್ರೇಂಜಿ ನಂ.1 ಸ್ಥಾನ ಪಡೆದಿದ್ದಾರೆ. ಇವರ ಆಸ್ತಿ 88300 ಕೋಟಿ ರೂ. ಹಾಗೆಯೇ ಮಣಿಪಾಲ ಶಿಕ್ಷಣ ಮತ್ತು ವೈದ್ಯಕೀಯ ಸಮೂಹದ (ಎಂಇಎಂಜಿ) ಮುಖ್ಯಸ್ಥ ರಂಜನ್‌ ಪೈ ಐದನೇ ಸ್ಥಾನ ಪಡೆದುಕೊಂಡಿದ್ದಾರೆ.
ಶ್ರೀಮಂತರ ಪಟ್ಟಿ:
  • ಒಟ್ಟಾರೆ 100 ಭಾರತೀಯರಲ್ಲಿ ರಂಜನ್‌ ಪೈ ಅವರದು 51 ನೇ ಸ್ಥಾನ.
  • ಫೋರ್ಬ್ಸ್ ಪತ್ರಿಕೆ ಬಿಡುಗಡೆ ಮಾಡಿರುವ 100 ಶ್ರೀಮಂತರ ಪಟ್ಟಿಯಲ್ಲಿ ರಿಲಯನ್ಸ್‌ ಸಮೂಹದ ಮುಖೇಶ್‌ ಅಂಬಾನಿ (1.34 ಲಕ್ಷ ಕೋಟಿ ರೂ), ಆರ್ಸೆಲಾರ್‌ ಮಿತ್ತಲ್‌ ಕಂಪನಿಯ ಮಾಲೀಕ ಲಕ್ಷ್ಮೀನಿವಾಸ್‌ ಮಿತ್ತಲ್‌ (1.02 ಲಕ್ಷ ಕೋಟಿ ರೂ.) ಮತ್ತು ಸನ್‌ ಫಾರ್ಮಸುಟಿಕಲ್ಸ್‌ನ ದಿಲೀಪ್‌ ಸ್ಯಾಂ (8900 ಕೋಟಿ ರೂ.) ಕ್ರಮವಾಗಿ ಮೊದಲ ಮೂರು ಸ್ಥಾನ ಪಡೆದುಕೊಂಡಿದ್ದಾರೆ.
  • ಉಳಿದಂತೆ 100 ಶ್ರೀಮಂತರ ಪಟ್ಟಿಯಲ್ಲಿ ಕರ್ನಾಟಕ ಮೂಲದ 15 ಉದ್ಯಮಿಗಳು ಸ್ಥಾನ ಪಡೆದುಕೊಂಡಿದ್ದಾರೆ.
  • ಕರ್ನಾಟಕದವರ ಪೈಕಿ ಅಗ್ರಸ್ಥಾನದಲ್ಲಿ ವಿಪ್ರೋ ಸಮೂಹದ ಅಜೀಂ ಪ್ರೇಮ್‌ಜಿ, ಇನ್ಫೋಸಿಸ್‌ ಸಂಸ್ಥಾಪಕ ಎನ್.ಆರ್.ನಾರಾಯಣಮೂರ್ತಿ, ಇನ್ಫೋಸಿಸ್‌ನ ಕಾರ್ಯಕಾರಿ ಉಪಾಧ್ಯಕ್ಷ ಇದ್ದಾರೆ. ಇನ್ಫೋಸಿಸ್‌ ಸಹ ಸಂಸ್ಥಾಪಕ, ಹಾಲಿ ಆಧಾರ್‌ ಯೋಜನೆ ಮುಖ್ಯಸ್ಥರೂ ಆಗಿರುವ ದೆಹಲಿ ನಿವಾಸಿ, ಕನ್ನಡಿಗ ನಂದನ್‌ ನಿಲೇಕಣಿ ಅವರು ಪಟ್ಟಿಯಲ್ಲಿ 4ನೇ ಸ್ಥಾನದಲ್ಲಿದ್ದರೆ, ಅವರ ನಂತರದ ಸ್ಥಾನದಲ್ಲಿ ಎಂಇಎಂಜಿಯ ರಂಜನ್‌ ಪೈ ಇದ್ದಾರೆ. ಅಬುಧಾಬಿಯಲ್ಲಿ ನೆಲೆಸಿರುವ ಕನ್ನಡಿಗ ಉದ್ಯಮಿ ಬಿ.ಆರ್‌.ಶೆಟ್ಟಿ ಅವರೂ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.
ಪಟ್ಟಿಯಲ್ಲಿರುವ ಕರ್ನಾಟಕದವರು:
1) ಅಜೀಂ ಪ್ರೇಮ್‌ಜಿ: ವಿಪ್ರೋ: 88300 ಕೋಟಿ ರೂ.
2) ನಾರಾಯಣ ಮೂರ್ತಿ ಮತ್ತು ಕುಟುಂಬ: ಇನ್ಫೋಸಿಸ್‌: 10500 ಕೋಟಿ ರೂ
3) ಕ್ರಿಸ್‌ ಗೋಪಾಲಕೃಷ್ಣನ್‌ ಮತ್ತು ಕುಟುಂಬ: ಇನ್ಫೋಸಿಸ್‌: 8900 ಕೋಟಿ ರೂ
4) ನಂದನ್‌ ನಿಲೇಕಣಿ: ಇನ್ಫೋಸಿಸ್‌: 8300 ಕೋಟಿ ರೂ.
5) ರಂಜನ್‌ ಪೈ: ಎಂಇಎಂಜಿ: 8000 ಕೋಟಿ ರೂ.
6) ಜಿ.ಎಂ.ರಾವ್‌: ಜಿಎಂಆರ್‌ ಇನಾ#†ಸ್ಟ್ರಕ್ಚರ್‌: 6500 ಕೋಟಿ ರೂ.
7) ಕೆ. ದಿನೇಶ್‌ ಮತ್ತು ಕುಟುಂಬ: ಇನ್ಫೋಸಿಸ್‌: 6400 ಕೋಟಿ ರೂ
8) ರಾಜೇಶ್‌ ಮೆಹ್ತಾ: ರಾಜೇಶ್‌ ಎಕ್ಸ್‌ಪೋರ್ಟ್ಸ್: 6250 ಕೋಟಿ ರೂ
9) ಜಿತೇಂದ್ರ ವೀರಾÌನಿ: ಎಂಬಸಿ ಪ್ರಾಪರ್ಟಿ: 5700 ಕೋಟಿ ರೂ.
10) ಶಿಬುಲಾಲ್‌ ಮತ್ತು ಕುಟುಂಬ: ಇನ್ಫೋಸಿಸ್‌: 5600 ಕೋಟಿ ರೂ.
11) ಬಿ.ಆರ್‌.ಶೆಟ್ಟಿ: ಎಂಎನ್‌ಸಿ ಹೆಲ್ತ್‌ಕೇರ್‌: 5570 ಕೋಟಿ ರೂ.
12) ವಿ.ಜಿ. ಸಿದ್ಧಾರ್ಥ: ಕಾಫಿ ಡೇ: 5400 ಕೋಟಿ ರೂ.
13) ಪಿ.ಎನ್‌.ಸಿ. ಮೆನನ್‌: ಶೋಭಾ ಡೆವಲಪರ್: 4800 ಕೋಟಿ ರೂ.
14) ವಿಜಯ್‌ ಮಲ್ಯ: ಯುಬಿ ಗ್ರೂಪ್‌: 4750 ಕೋಟಿ ರೂ.
15) ಕಿರಣ್‌ ಮಜುಂದಾರ್‌ ಷಾ: ಬಯೋಕಾನ್‌: 4200 ಕೋಟಿ ರೂ.
ಭಾರತದ ಟಾಪ್‌ 3 ಶ್ರೀಮಂತರು:
1. ಮುಖೇಶ್‌ ಅಂಬಾನಿ ರಿಲಯ, 1.34 ಲಕ್ಷ ಕೋಟಿ ರೂ
2. ಲಕ್ಷ್ಮೀಮಿತ್ತಲ್‌ ಆರ್ಸೆಲಾರ್‌ ಮಿತ್ತಲ್‌ 1.02 ಲಕ್ಷ ಕೋಟಿ ರೂ.
3. ದಿಲೀಪ್‌ ಸಾಂ Ì, ಸನ್‌ ಫಾರ್ಮಸುಟಿಕಲ್ಸ್‌ 8900 ಕೋಟಿ ರೂ.

ದೇಶದಲ್ಲೇ ಪ್ರಥಮ ಬಾರಿಗೆ ಪ್ಲಾಸ್ಟಿಕ್‌ ಗುರುತಿನ ಚೀಟಿ ವಿತರಿಸಿದ ತ್ರಿಪುರ
epic cardತ್ರಿಪುರ ರಾಜ್ಯದಲ್ಲಿ ಲ್ಯಾಮಿನೇಟ್‌ ಮಾಡಿದ ಕಾಗದದ ಗುರುತಿನ ಚೀಟಿ ಬದಲಿಗೆ ಮತದಾರರಿಗೆ ಪ್ಲಾಸ್ಟಿಕ್‌ ಗುರುತಿನ ಚೀಟಿ ವಿತರಿಸುವ ಕಾರ್ಯ ಆರಂಭಗೊಂಡಿದೆ. ದೇಶದಲ್ಲೇ ಮೊದಲ ಬಾರಿಗೆ ಮತದಾರರಿಗೆ ಪ್ಲಾಸ್ಟಿಕ್‌ ಗುರುತಿನ ಚೀಟಿ ವಿತರಿಸಿದ ಮೊದಲ ರಾಜ್ಯ ಎಂಬ ಹೆಗ್ಗಳಿಕೆಗೆ ತ್ರಿಪುರ ಪಾತ್ರವಾಗಿದೆ.
ಚುನಾವಣಾ ಆಯೋಗದ ಸೂಚನೆ:
‘ಚುನಾವಣಾ ಆಯೋಗದ ಸೂಚನೆಗಳಿಗೆ ಅನುಗುಣವಾಗಿ ರಾಜ್ಯದಲ್ಲಿ ಪಿವಿಸಿ (ಪ್ಲಾಸ್ಟಿಕ್‌)- ಎಪಿಕ್‌ಗಳನ್ನು ವಿತರಿಸಲಾಗಿದೆ. ಇದು ದೇಶದಲ್ಲೇ ಮೊದಲು’ ಎಂದು ತ್ರಿಪುರ ಮುಖ್ಯ ಕಾರ್ಯದರ್ಶಿ ಸಂಜೋಯ್‌ ಕುಮಾರ್‌ ಪಾಂಡಾ ತಿಳಿಸಿದ್ದಾರೆ. ಮತದಾರರ ಗುರುತಿನ ಚೀಟಿಯನ್ನು ತಿರುಚುವುದನ್ನು ತಪ್ಪಿಸುವ ಸಲುವಾಗಿ ಎಲ್ಲ ಮತದಾರರಿಗೆ ಪಿವಿಸಿ ಗುರುತಿನ ಚೀಟಿಗಳನ್ನು ವಿತರಿಸಬೇಕು ಎಂದು ಚುನಾವಣಾ ಆಯೋಗ ಈ ಹಿಂದೆ ನಿರ್ದೇಶನ ನೀಡಿತ್ತು. ಮುಂದೆ ಮಿಜೋರಂನಲ್ಲಿಯೂ ಸಹ ಇಂತಹ ಕಾರ್ಡುಗಳನ್ನು ವಿತರಿಸಲಾಗುತ್ತದೆ. ನಂತರ ಉತ್ತರಪ್ರದೇಶದಲ್ಲಿ ಹಂಚಲಾಗುತ್ತದೆ.
ವಿಶೇಷತೆ ಏನು?
ಈ ಗುರುತಿನ ಚೀಟಿಗಳನ್ನು ನಕಲು ಮಾಡಲು ಅಥವಾ ತಿರುಚಲು ಬರುವುದಿಲ್ಲ. ಏಕೆಂದರೆ, ಪ್ಲಾಸ್ಟಿಕ್‌ ಗುರುತಿನ ಚೀಟಿಗಳಲ್ಲಿ ಮತದಾರರ ಮಾಹಿತಿಯನ್ನು ಕೋಡ್‌ ಮಾಡಿ ಅಳವಡಿಸಿರಲಾಗುತ್ತದೆ. ಆ ಮಾಹಿತಿ ಹಾಗೂ ಸರ್ಕಾರದ ಲಾಂಛನ ಅಲ್ಟ್ರಾವಯಲೆಟ್‌ ಬೆಳಕು ಹರಿಸಿದಾಗ ಮಾತ್ರ ಕಂಡುಬರುತ್ತದೆ.

‘ಮಂಗನಿಂದ ಮಾನವ’ ಸಿದ್ಧಾಂತಕ್ಕೆ ಹೊಸ ಆಯಾಮ ನೀಡಿದ ವಿಜ್ಞಾನಿಗಳು
pigsಮಂಗನಿಂದ ಮಾನವ ಎಂಬುದು ಹಳೇ ಕಾಲದಿಂದಲೂ ಕೇಳಿ ಬರುತ್ತಿರುವ ಮಾತು. ಆದರೆ, ಇದನ್ನು ಬುಡಮೇಲಾಗುವಂತೆ ಮಾಡುವ ಸುದ್ದಿಯೊಂದು ಬಂದಿದೆ. ಮಾನವನ ಹುಟ್ಟಿಗೆ ಗಂಡು ಹಂದಿ, ಹೆಣ್ಣು ಚಿಂಪಾಂಜಿ ಸಯೋಗವೇ ಕಾರಣ ಎಂದು, ಖ್ಯಾತ ತಳಿವಿಜ್ಞಾನಿಗಳ ಗುಂಪೊಂದು ಹೇಳಿಕೊಂಡಿದೆ.
ಏನಿದು ಸಿದ್ಧಾಂತ:
ಜಾರ್ಜಿಯಾ ವಿಶ್ವವಿದ್ಯಾಲಯದ, ಮಾನವ ವಂಶವಾಹಿ ವಿಭಾಗದ ಮುಖ್ಯಸ್ಥರಾದ ಡಾ.ಈಗುನೆ ಮೆಕಾರ್ತಿ ಅವರ ಪ್ರಕಾರ, ಮಾನವನದ್ದು ಹ್ರೈಬ್ರಿಡ್‌ ತಳಿ. ಹೈಬ್ರಿಡ್‌ ಹಂದಿ ಮತ್ತು ಹೈಬ್ರಿಡ್‌ ಜಿಂಪಾಂಜಿಯಿಂದಾಗಿ, ಮಾನವನ ಜನ್ಮವಾಗಿದೆಯಂತೆ. ಡಾರ್ವಿನ್‌ ಅವರ ಮಂಗನಿಂದ ಮಾನವ ಎಂಬ ಸಿದ್ಧಾಂತ ಮಾನವ ವಂಶವಾಹಿ ಬಗ್ಗೆ ಅರ್ಧ ಕಥೆಯನ್ನು ಮಾತ್ರ ಹೇಳುತ್ತದೆ. ಉಳಿದರ್ಥ ಬೇರೆಯದೇ ಎಂಬುದು ಅವರ ಹೇಳಿಕೆ.
ಹೊಸ ಆಯಾಮ:
  • ಚಿಂಪಾಂಜಿ ಬಹುತೇಕವಾಗಿ ಮಾನವನನ್ನೇ ಹೋಲುತ್ತದೆ. ಈ ವಾದದಲ್ಲಿ ಆಕ್ಷೇಪವಿಲ್ಲ. ಹಾಗೆಯೇ, ಇತರ ಪ್ರಾಣಿಗಳೊಂದಿಗೆ ಹೋಲಿಸಿದಾಗ, ಹಂದಿ ಮಾನವ ವಂಶವಾಹಿಗೆ ಹತ್ತಿರದಲ್ಲಿದೆಯಂತೆ.
  • ಹಂದಿಯ ಕ್ರೋಮೋಸೋಮ್‌ಗಳು ಮಾನವನ ಕ್ರೋಮೋಸೋಮ್‌ಗಳಂತಿವೆ. ಅಲ್ಲದೇ, ಹಂದಿಯ ಹೃದಯ ಕವಾಟಗಳನ್ನು ಮಾನವನಿಗೆ ಯಶಸ್ವಿಯಾಗಿ ಜೋಡಿಸಲಾಗಿವೆ.
  • ಅವುಗಳ ಚರ್ಮದ ಪದರವನ್ನೂ, ಮಾನವನ ಸುಟ್ಟ ಗಾಯಕ್ಕೆ ಪರ್ಯಾಯವಾಗಿ ಬಳಸಲಾಗಿದೆ.
  • ಹಂದಿಯ ಬಹುತೇಕ ಅವಯವಗಳು, ಮಾನವನಂತೆಯೇ ಇದೆ ಎಂಬ ವಾದದ ಸರಣಿಗಳನ್ನು ಮುಂದಿಟ್ಟಿದ್ದಾರೆ.

ಪ್ರಚಲಿತ ವಿದ್ಯಮಾನಗಳು ನವೆಂಬರ್ 26, 2013


ಗೋವಾದಲ್ಲಿ ನಡೆದ 44ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ತೆರೆ
ಗೋವಾದಲ್ಲಿ ನಡೆದ 44ನೇ ಭಾರತೀಯ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ (ಐಎಫ್‌ಎಫ್‌ಐ)ಕ್ಕೆ ವರ್ಣರಂಜಿತ ತೆರೆ ಬಿದ್ದಿತು.
ಪ್ರಶಸ್ತಿಗಳು:
  • ಬೆಟಿ ರೇಸ್‌ ಮತ್ತು ಲ್ಯೂಗಿ ಅಕ್ವಿಸ್ಟೊ ನಿರ್ದೇಶನದ ಪೋರ್ಚುಗೀಸ್‌ ಸಾಕ್ಷ್ಯಚಿತ್ರ ‘ಬೀಟ್ರಿಜಸ್‌ ವಾರ್‌’ ಪ್ರತಿಷ್ಠಿತ ‘ಸ್ವರ್ಣ ಮಯೂರ’ ಫಲಕ ಮತ್ತು 40 ಲಕ್ಷ ರೂಪಾಯಿ ನಗದು ಪುರಸ್ಕಾರಕ್ಕೆ ಪಾತ್ರವಾಯಿತು. ಆಸ್ಟ್ರೇಲಿಯಾ ಮತ್ತು ಪೂರ್ವ ತಿಮೋರ್‌ ಸಹಯೋಗದಲ್ಲಿ ಈ ಸಾಕ್ಷ್ಯ ಚಿತ್ರ ನಿರ್ಮಾಣಗೊಂಡಿದೆ. ಅಂತಿಮ ಸುತ್ತಿನಲ್ಲಿ ತೀರ್ಪುಗಾರರು ಈ ಚಿತ್ರವನ್ನು ಅವಿರೋಧವಾಗಿ ಪ್ರಶಸ್ತಿಗೆ ಆಯ್ಕೆ ಮಾಡಿದರು.
  • ಕಮಲೇಶ್ವರ್‌ ಮುಖರ್ಜಿ ನಿರ್ದೇಶನದ ಬಂಗಾಳಿ ಚಿತ್ರ ‘ಮೇಘೆ ಢಾಕಾ ತಾರಾ’ ರಜತ ಮಯೂರ ಮತ್ತು 15 ಲಕ್ಷ ರೂಪಾಯಿ ನಗದು ತನ್ನದಾಗಿಸಿ ಕೊಂಡಿತು.
  • ಬಂಗಾಳಿ ಚಿತ್ರ ‘ಅಪುರ್‌ ಪಾಂಚಾಲಿ’ ನಿರ್ದೇಶಕ ಕೌಶಿಕ್‌ ಗಂಗೂಲಿ ಅವರು ‘ಉತ್ತಮ ನಿರ್ದೇಶಕ’ (ರಜತ ಮಯೂರ ಮತ್ತು 15 ಲಕ್ಷ ರೂಪಾಯಿ ನಗದು) ಪ್ರಶಸ್ತಿ ಪಡೆದರು.
  • ಇಸ್ರೇಲ್‌ ನಟ ಅಲೋನ್ ಮೋನಿ ಅಬೌಟ್‌ಬೌಲ್‌ ಅವರು ‘ಪ್ಲೇಸ್‌ ಇನ್‌ ಹೆವೆನ್‌’ ಚಿತ್ರಕ್ಕಾಗಿ ‘ಉತ್ತಮ ನಟ’ (ರಜತ ಪದಕ ಮತ್ತು 10 ಲಕ್ಷ ರೂಪಾಯಿ ನಗದು)
  • ಪೋಲೆಂಡಿನ ‘ ಇನ್‌ ಹೈಡಿಂಗ್ ‘ ಚಿತ್ರದ ನಟನೆಗಾಗಿ ಮಗ್ಡಾಲೇನಾ ಬೋಕ್ಜಾ ರ್ಸಕಾ ‘ಉತ್ತಮ ನಟಿ’ (ಬೆಳ್ಳಿ ಪದಕ ಮತ್ತು 10 ಲಕ್ಷ ರೂಪಾಯಿ ನಗದು) ಪ್ರಶಸ್ತಿ ಪಡೆದರು.
  • ತುರ್ಕಿ ಭಾಷೆಯ ಚಿತ್ರ ‘ದೌ ಗಿಲ್ಡ್ಸ್ ದ ಈವನ್’ ಮತ್ತು ಅದರ ನಿರ್ದೇಶಕ ಓನೂರ್ ಉನ್ಲು ತೀರ್ಪುಗಾರರ ವಿಶೇಷ ಮೆಚ್ಚುಗೆ ಪಡೆದ ಪ್ರಶಸ್ತಿ (ರಜತ ಪದಕ ಮತ್ತು 15 ಲಕ್ಷ ರೂಪಾಯಿ) ಗಿಟ್ಟಿಸಿಕೊಂಡರು.

ಡಿಸೆಂಬರ್ 1 ರಿಂದ ಡೆಬಿಟ್ ಕಾರ್ಡ್ ಬಳಕೆಗೆ ಪಿನ್ ನಂಬರ್ ಕಡ್ಡಾಯ: ಆರ್ ಬಿ ಐ
debit cardಡಿಸೆಂಬರ್ 1 ರಿಂದ ಅನ್ವಯವಾಗುವಂತೆ, ಡೆಬಿಟ್‌ ಕಾರ್ಡ್‌ ಬಳಕೆಗೆ ಪಿನ್‌ ನಂಬರ್‌ ಕಡ್ಡಾಯವಾಗಲಿದೆ. ರಿಸರ್ವ್‌ ಬ್ಯಾಂಕ್‌ ನಿಯಮದಂತೆ, ಡೆಬಿಟ್‌ ಕಾರ್ಡ್‌ ಬಳಕೆಗೆ ಪಿನ್‌ ನಂಬರ್‌ ಕಡ್ಡಾಯವಾಗಿ ನಮೂದಿಸಲೇಬೇಕು. ಈ ಸಂಬಂಧ ಕಳೆದ ಎರಡು ದಿನಗಳಿಂದ ಹಲವು ಬ್ಯಾಂಕ್‌ಗಳು ತಮ್ಮ ಗ್ರಾಹಕರಿಗೆ ಎಸ್‌ಎಂಎಸ್‌ ಮೂಲಕ ಸಂದೇಶ ರವಾನಿಸಲಾಗಿದೆ.
ಹಿನ್ನೆಲೆ:
ಡೆಬಿಟ್‌ ಕಾರ್ಡ್‌ಗಳನ್ನು ಕಳವು ಮಾಡಿ ಎಲ್ಲೆಂದರಲ್ಲಿ ಉಪಯೋಗಿಸುವ ಪ್ರಕರಣಗಳು ಮತ್ತು ನಕಲಿ ಕಾರ್ಡ್‌ ಬಳಕೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ, ಪಿನ್‌ ನಂಬರ್‌ ಬಳಕೆ ಕಡ್ಡಾಯ ಮಾಡಲು ರಿಸರ್ವ್‌ ಬ್ಯಾಂಕ್‌ ಚಿಂತಿಸಿತ್ತು. ಕೆಲವೊಂದು ಬ್ಯಾಂಕ್‌ಗಳ ಡೆಬಿಟ್‌ ಕಾರ್ಡ್‌ ಬಳಕೆ ವೇಳೆ ಪಿನ್‌ ನಂಬರ್‌ ಕೇಳುತ್ತಿತ್ತಾದರೂ, ಈ ಕ್ರಮ ಸಾರ್ವತ್ರಿಕವಾಗಿರಲಿಲ್ಲ.
ನೂತನ ವ್ಯವಸ್ಥೆಗೆ ಸಲಹೆ:
  • ಈ ಮೊದಲು ಆರ್‌ಬಿಐ ಕಾರ್ಯಕಾರಿ ಸಮಿತಿಯೊಂದು, ಅತ್ಯಾಧುನಿಕ ಇಎಮ್‌ವಿ ಚಿಪ್‌ ಕಾರ್ಡ್‌ ಅಂದರೆ, ಮ್ಯಾಗ್ನೆಟಿಕ್‌ ಸ್ಟ್ರಿಪ್‌ ಕಾರ್ಡ್‌ (ಡೆಬಿಟ್‌ ಕಾರ್ಡ್‌ ಮಾದರಿಯವು), ಜೊತೆಗೆ ಬಯೋಮೆಟ್ರಿಕ್‌ (ಆಧಾರ್‌ ಬೆರಳಚ್ಚು)ಗಳನ್ನು ಯೂರೋ ಪೇ, ಮಾಸ್ಟರ್‌ ಕಾರ್ಡ್‌, ವೀಸಾ ಕಾರ್ಡ್‌ಗಳಲ್ಲಿ ನೀಡಲು ಚಿಂತಿಸಿತ್ತು.
  • ಆದರೆ ಸಾಮಾನ್ಯ ಪಿನ್‌ ನಂಬರ್‌ ಹೊಂದಿದ ಡೆಬಿಟ್‌ ಕಾರ್ಡ್‌ಗಳಿಗಿಂತ ಈ ಆಧುನಿಕ ಮಾದರಿಯ ಕಾರ್ಡ್‌ಗಳ ತಯಾರಿಕೆ ಅಧಿಕ ಬೆಲೆಯದ್ದಾಗಿದೆ.
  • ಆದ್ದರಿಂದ ಸದ್ಯದ ಪರಿಸ್ಥಿತಿಯಲ್ಲಿ ಡೆಬಿಟ್‌ ಕಾರ್ಡ್‌ ಜೊತೆ ಪಿನ್‌ ನಂಬರ್‌ ಕಡ್ಡಾಯ ಮಾಡುವ ನಿರ್ಧಾರಕ್ಕೆ ಆರ್‌ಬಿಐ ಬಂದಿದೆ.
  • ಸದ್ಯ ಐಸಿಐಸಿಐ, ಎಚ್‌ಡಿಎಫ್ಸಿ, ಎಸ್‌ಬಿಐ ಇಎಮ್‌ವಿ ಚಿಪ್‌ ಕಾರ್ಡ್‌ಳಗನ್ನು ಗ್ರಾಹಕರಿಗೆ ನೀಡುತ್ತಿವೆ.

ಚಂದ್ರನಲ್ಲಿ ಸೋಲಾರ್ ಬಳಸಿ ಭೂಮಿಗೆ ವಿದ್ಯುತ್ ಪಡೆಯುವ ಹೊಸ ಸಂಶೋಧನೆ
solar in moonಇಷ್ಟು ದಿನ ಬೆಳದಿಂಗಳನ್ನು ನೀಡುತ್ತಿದ್ದ ಚಂದ್ರ ಇನ್ನು ಮುಂದೆ ನಮ್ಮ ಮನೆಯ ವಿದ್ಯುತ್‌ ಬಲ್ಬ್ ಗಳನ್ನೂ ಬೆಳಗಲಿದ್ದಾನೆ. ಇದು ಕೇವಲ ವಿಜ್ಞಾನದ ಕಲ್ಪನೆಯಲ್ಲ. ಜಪಾನಿನ ಕಂಪನಿಯೊಂದು ಚಂದ್ರನ ಮೇಲೆ ಮಾಡಹೊರಟಿರುವ ಮಹತ್‌ ಸಾಧನೆ. ಚಂದ್ರನ ಅಂಗಳದಲ್ಲಿ ಸೋಲಾರ್‌ ಫ‌ಲಕದ ಬೃಹತ್‌ ವೃತ್ತವನ್ನು ನಿರ್ಮಿಸಿ ಅದರಿಂದ ಉತ್ಪಾದನೆಯಾಗುವ ವಿದ್ಯುತ್‌ನ್ನು ಮನೆ ಮನೆಗೆ ಪೂರೈಸುವ ಕನಸನ್ನು ಬೆನ್ನೇರಿ ಹೊರಟಿದೆ ಜಪಾನ್‌.
ಜಪಾನಿನ ಶಿಮಿಜು ಕಂಪನಿಯ ಲೂನಾ (ಚಂದ್ರ) ಯೋಜನೆ, ಚಂದ್ರನ ಸಮಭಾಜಕ ವೃತ್ತದಲ್ಲಿ 6,790 ಮೈಲಿ ಸೋಲಾರ್‌ ಫಲಕವನ್ನು ಹಾಸಿ ವಿದ್ಯುತ್‌ ಉತ್ಪಾದಿಸುವ ಗುರಿ ಹೊಂದಿದೆ. ಪ್ರತಿಯೊಂದು ಸೋಲಾರ್‌ ಫ‌ಲಕ ಸುಮಾರು 250 ಮೈಲಿ ಅಗಲವಾಗಿರಲಿದೆ. ಒಮ್ಮೆ ಸೋಲಾರ್‌ ವೃತ್ತ ನಿರ್ಮಾಣಗೊಂಡರೆ ಅಕ್ಷಯ ವಿದ್ಯುತ್‌ ಸಂಪನ್ಮೂಲವನ್ನು ನೀಡಲಿದೆ. ಈ ಯೋಜನೆಯಿಂದ 13000 ಟೆರಾವ್ಯಾಟ್‌ ನಿರಂತರ ವಿದ್ಯುತ್‌ ಉತ್ಪಾದನೆಯನ್ನು ನಿರೀಕ್ಷಿಸಲಾಗುತ್ತಿದೆ. ಇದರಿಂದ ಉತ್ಪಾದನೆಯಾಗುವ ವಿದ್ಯುತ್ತನ್ನು ವಿದ್ಯುತ್‌ಕಾಂತೀಯ ಅಲೆಗಳು (ಮೈಕ್ರೋವೇವ್‌) ಮತ್ತು ಲೇಸರ್‌ ಕಿರಣದ ಮೂಲಕ ನೇರವಾಗಿ ಅಗತ್ಯವಿರುವ ದೇಶಗಳಿಗೆ ಪೂರೈಸಲಾಗುತ್ತದೆ. ಅಲ್ಲದೆ ಈಗಿನ ವಿದ್ಯುತ್‌ ಮೂಲಗಳಿಂದ ಉತ್ಪಾದನೆಯಾಗುತ್ತಿರುವ ಕಾರ್ಬನ್‌ ಡೈಆಕ್ಸೈಡ್‌ನಿಂದ ಹೆಚ್ಚುತ್ತಿರುವ ಜಾಗತಿಕ ತಾಪಮಾನ ಏರಿಕೆಯನ್ನು ತಡೆಗಟ್ಟುವಲ್ಲಿ ಸೌರ ವಿದ್ಯುತ್‌ ಕಾಣಿಕೆ ನೀಡಲಿದೆ.
ಯೋಜನೆ ಆರಂಭಿಸಿದ್ದು ಏಕೆ?
2011 ರಲ್ಲಿ ಸಂಭವಿಸಿದ ಭೀಕರ ಭೂಕಂಪ ಜಪಾನಿನ ಪುಕುಶಿಮಾ ಅಣು ವಿದ್ಯುತ್‌ ಸ್ಥಾವರದಲ್ಲಿ ಭಾರೀ ಪ್ರಮಾಣದ ವಿಕಿರಣ ಸೋರಿಕೆಗೆ ಕಾರಣವಾಗಿತ್ತು. ಈ ಅಪಾಯದ ಕರೆಗಂಟೆ ಬಾರಿಸುವವರೆಗೂ ಅಣು ವಿದ್ಯುತ್‌ ಮೇಲೆಯೇ ಜಪಾನ್‌ ಅವಲಂಬಿತವಾಗಿತ್ತು. ಇದರಿಂದಾಗಿ ವಿದ್ಯುತ್‌ ಉತ್ಪಾದನೆಯಲ್ಲಿ ಸುರಕ್ಷಿತ ಪರ್ಯಾಯ ಮಾರ್ಗವೊಂದನ್ನು ಕಂಡುಕೊಳ್ಳುವುದು ಜಪಾನಿಗೆ ಅನಿವಾರ್ಯವಾಗಿತ್ತು. ಈ ನಿಟ್ಟಿನಲ್ಲಿ ಆರಂಭವಾಗಿದ್ದೇ ಚಂದ್ರನಿಂದ ವಿದ್ಯುತ್‌ ಉತ್ಪಾದಿಸುವ ಯೋಜನೆ.
ಏನಿದು ಯೋಜನೆ?
ಭೂಮಿಯಿಂದ ಸುಮಾರು 4 ಲಕ್ಷ ಕಿ.ಮೀ. ದೂರದಲ್ಲಿರುವ ಚಂದ್ರನ ಮೇಲೆ ಗಗನಯಾತ್ರಿಗಳನ್ನು ಇಳಿಸಿ, ರೋಬೊಟ್‌ಗಳ ಸಹಾಯದಿಂದ ಸೌರ ಫ‌ಲಕವನ್ನು ಕೂರಿಸುವ ಕಾರ್ಯವನ್ನು ಜಪಾನಿನ ಶಿಮಿಜು ಕಂಪನಿ ಆರಂಭಿಸಲಿದೆ. ರೋಬೊಟ್‌ ಮತ್ತು ಸ್ವಯಂಚಾಲಿತ ಯಂತ್ರಗಳು ಯೋಜನೆಗೆ ಅಗತ್ಯವಿರುವ ನೀರು, ಕಾಂಕ್ರೀಟ್‌, ಆಮ್ಲಜನಕ ಮತ್ತು ಪಿಂಗಾಣಿಯಂತಹ ಅಗತ್ಯ ವಸ್ತುಗಳನ್ನು ಚಂದ್ರನ ಮಣ್ಣನ್ನೇ ಉಪಯೋಗಿಸಿ ನಿರ್ಮಾಣ ಮಾಡಲಿದೆ. ನಿರ್ವಹಣೆಗೆ ಅಗತ್ಯ ವಿರುವ ವಸ್ತುಗಳನ್ನು ಸಾಗಿಸಲು ಚಂದ್ರನ ಮೇಲೆ ರೈಲ್ವೆ ವ್ಯವಸ್ಥೆ ಕಲ್ಪಿಸುವ ಯೋಜನೆಯನ್ನೂ ರೂಪಿಸಲಾಗಿದೆಯಂತೆ.
ವಿದ್ಯುತ್‌ ಉತ್ಪಾದನೆ ಹೇಗೆ?
250 ಮೈಲಿ ಅಗಲದ ಸೌರ ಫ‌ಲಕದ ಪಟ್ಟಿಯನ್ನು ಚಂದ್ರನ ಮೇಲ್ಮೆ„ ಸುತ್ತಲೂ 6,790 ಮೈಲಿವರೆಗೆ ಜೋಡಿಸಲಾಗುತ್ತದೆ. ಒಂದು ಭಾಗ ಸೂರ್ಯನತ್ತ ಮುಖ ಮಾಡಿದರೆ, ಇನ್ನೊಂದು ಭಾಗ ಭೂಮಿಯತ್ತ ಇರುತ್ತದೆ. ಸೌರ ಫ‌ಲಕದ ಕೆಳಭಾಗದಲ್ಲಿ ಅಳವಡಿಸಲಾಗಿರುವ ಕೇಬಲ್‌ಗ‌ಳು ಸೂರ್ಯನಿಗೆ ಅಭಿಮುಖವಾಗಿರುವ ಭಾಗದಿಂದ ತಯಾರಾದ ವಿದ್ಯುತ್ತನ್ನು ಭೂಮಿಯ ಭಾಗಕ್ಕೆ ವರ್ಗಾಯಿಸುತ್ತದೆ. ಬಳಿಕ ವಿದ್ಯುತ್ಕಾಂತೀಯ ತರಂಗಗಳ ಮೂಲಕ 13 ಮೈಲಿ ವ್ಯಾಸದ ಮೈಕ್ರೋವೇವ್‌ ಆಯಂಟೆನಾಗಳು ವಿದ್ಯುತ್ತನ್ನು ಭೂಮಿಗೆ ರವಾನಿಸುತ್ತದೆ. ಸಂಕೇತಾಜ್ಞೆಗಳನ್ನು ಬಳಸಿ ಭೂಮಿಯ ನಿರ್ದಿಷ್ಟ ಸ್ಥಳಗಳಿಗೆ ವಿದ್ಯುತ್‌ ಪೂರೈಸಲಾಗುವುದು.

ಪ್ರಚಲಿತ ವಿದ್ಯಮಾನಗಳು ನವೆಂಬರ್ 25, 2013


ಅಲಮಟ್ಟಿ ಅಣೆಕಟ್ಟೆ ಎತ್ತರವನ್ನು 524.256 ಮೀಟರ್‌ಗೆ ಎತ್ತರಿಸಲು ಕೃಷ್ಣಾ ನ್ಯಾಯಮಂಡಳಿ ತೀರ್ಪು
ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು 519.6 ಮೀಟರ್‌ನಿಂದ 524.256 ಮೀಟರ್‌ಗೆ ಎತ್ತರಿಸಲು ಕೃಷ್ಣಾ ನ್ಯಾಯಮಂಡಳಿ ಹಸಿರು ನಿಶಾನೆ ತೋರಿದೆ. ಇದರಿಂದ ರಾಜ್ಯದ ಕಾನೂನು ಹೋರಾಟಕ್ಕೆ ಐತಿಹಾಸಿಕ ಗೆಲುವು ಸಿಕ್ಕಂತಾಗಿದೆ. ಅಣೆಕಟ್ಟೆ ಎತ್ತರವನ್ನು ಪ್ರಶ್ನಿಸಿದ್ದ ಆಂಧ್ರಪ್ರದೇಶಕ್ಕೆ ಹಿನ್ನಡೆಯಾದಂತಾಗಿದೆ. ಮಹಾರಾಷ್ಟ್ರ, ಕರ್ನಾಟಕ ಹಾಗೂ ಮತ್ತು ಆಂಧ್ರಪ್ರದೇಶ ನಡುವಣ ಕೃಷ್ಣಾ ನದಿ ನೀರಿನ ವಿವಾದ ಇತ್ಯರ್ಥಪಡಿಸಲು ನೇಮಕಗೊಂಡಿರುವ ನ್ಯಾ. ಬ್ರಿಜೇಶ್‌ ಕುಮಾರ್‌ ನೇತೃತ್ವದ ನ್ಯಾಯಮಂಡಳಿ ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು 519.6 ಮೀಟರ್‌ಗೆ ನಿಗದಿಪಡಿಸಬೇಕೆಂದು ಮನವಿ ಮಾಡಿ ಆಂಧ್ರ ಸಲ್ಲಿಸಿದ್ದ ಅರ್ಜಿಯನ್ನು ವಜಾ ಮಾಡಿತು. ಎಲ್ಲ ಅರ್ಜಿಗಳ ಸುದೀರ್ಘ ವಿಚಾರಣೆ ನಡೆಸಿದ ನ್ಯಾಯಮಂಡಳಿ ಆಲಮಟ್ಟಿ ಅಣೆಕಟ್ಟೆ ಎತ್ತರವನ್ನು 524. 256 ಮೀಟರ್ ಗೆ ಎತ್ತರಿಸಬಹುದು ಎಂದು 2010ರಲ್ಲಿ ನೀಡಿರುವ ತೀರ್ಪನ್ನು ಎತ್ತಿ ಹಿಡಿಯಿತು.
ಐತಿಹಾಸಿ ತೀರ್ಪು:
ಕರ್ನಾಟಕ ಅಗತ್ಯಕ್ಕಿಂತ ದೊಡ್ಡ ಗಾತ್ರದ ಅಣೆಕಟ್ಟೆ ಕಟ್ಟುತ್ತಿದೆ. ಇದಕ್ಕೆ ಅವಕಾಶ ಕೊಟ್ಟರೆ ಆಂಧ್ರದ ಜನರ ಹಿತಾಸಕ್ತಿಗೆ ಧಕ್ಕೆ ಆಗಲಿದೆ. ಅಲ್ಲದೆ, ನ್ಯಾಯಮಂಡಳಿ ಶೇ 75ರಷ್ಟು ಅವಲಂಬನೆ ಆಧಾರದಲ್ಲಿ ಕೈಗೊಳ್ಳಬಹುದೆಂದು ಹೇಳಿರುವ ಯೋಜನೆಗಳಿಗೆ ಧಕ್ಕೆ ಆಗಲಿದೆ ಎಂಬ ವಾದವನ್ನು ನ್ಯಾಯಮಂಡಳಿ ತಳ್ಳಿ ಹಾಕಿದೆ. ಅಣೆಕಟ್ಟೆ ಎತ್ತರವನ್ನು 524.256 ಮೀಟರ್ ಗೆ ಎತ್ತರಿಸಲು ಅನುಮತಿ ನೀಡಿದರೆ ಆಂಧ್ರಕ್ಕೆ ಹರಿದು ಬರುವ ನೀರಿಗೆ ತೊಂದರೆ ಆಗುತ್ತದೆ ಎಂಬ ವಾದವನ್ನು ನ್ಯಾಯಮಂಡಳಿ ಒಪ್ಪಿಲ್ಲ. ಆಲಮಟ್ಟಿ ಅಣೆಕಟ್ಟೆ ಎತ್ತರಿಸಬೇಕೆಂಬ ಕರ್ನಾಟಕ ವಾದಕ್ಕೆ ಕೃಷ್ಣಾ ನ್ಯಾಯಮಂಡಳಿ ಕಿವಿಗೊಟ್ಟಿರುವು ದರಿಂದ ಹೊಸದಾಗಿ ಎಂಟು ಯೋಜನೆಗಳನ್ನು ಕೈಗೆತ್ತಿಕೊಳ್ಳಲು ದಾರಿಯಾದಂತಾಗಿದೆ.
ತೀರ್ಪು ಏನು?
  • ಕೃಷ್ಣಾ ನ್ಯಾಯಮಂಡಳಿ ಐ ತೀರ್ಪಿನಲ್ಲಿ ಮೂರು ರಾಜ್ಯಗಳಿಗೂ ಹಂಚಿಕೆ ಮಾಡಿ ಉಳಿದ ಹೆಚ್ಚುವರಿ ನೀರಿನ ಮೇಲೆ ಆಂಧ್ರ ಪ್ರದೇಶಕ್ಕೆ ಯಾವುದೇ ಹಕ್ಕೂ ಇಲ್ಲ ಎಂದು ನ್ಯಾಯಮಂಡಳಿ ಹೇಳಿದೆ.
  • ಮೂರು ರಾಜ್ಯಗಳಿಗೂ ಐತೀರ್ಪಿನಲ್ಲಿ ಮಹಾರಾಷ್ಟ್ರ, ಕರ್ನಾಟಕ ಹಾಗೂ ಆಂಧ್ರಕ್ಕೆ 2578 ಟಿಎಂಸಿ ಅಡಿ ನೀರು ಹಂಚಿಕೆ ಮಾಡಿದ ಮೇಲೂ 513 ಟಿಎಂಸಿ ಅಡಿ ನೀರು ಹೆಚ್ಚುವರಿಯಾಗಿ ಸಿಗುತ್ತಿದೆ.
  • ಮೂರೂ ರಾಜ್ಯಗಳೂ ಹೆಚ್ಚುವರಿ ನೀರಿನ ಮೇಲೆ ಸೂಕ್ತ ವೇದಿಕೆ ಮುಂದೆ ತಮ್ಮ ಹಕ್ಕು ಪ್ರತಿಪಾದಿಸಬಹುದು ಎಂದು ನ್ಯಾಯಮಂಡಳಿ ಹೇಳಿದೆ.
ಕೃಷ್ಣಾ ನ್ಯಾಯಮಂಡಳಿಯ ಐತೀರ್ಪು:
ಕರ್ನಾಟಕಕ್ಕೆ 907, ಮಹಾರಾಷ್ಟ್ರಕ್ಕೆ 666 ಮತ್ತು ಆಂಧ್ರಕ್ಕೆ 1005 ಅಡಿ ನೀರನ್ನು ಹಂಚಿಕೆ ಮಾಡಿದೆ. ಈಗ ಹೆಚ್ಚುವರಿ ನೀರನ್ನು ನದಿ ಕೆಳಗಿನ ಕೊನೆಯ ರಾಜ್ಯವಾದ ಆಂಧ್ರ ಬಳಸುತ್ತಿದೆ. ಆದರೆ, ಈ ನೀರಿನ ಮೇಲೆ ಅದಕ್ಕೆ ಯಾವುದೇ ಹಕ್ಕಿಲ್ಲ. ಹೆಚ್ಚುವರಿ ನೀರಿನ ಹಂಚಿಕೆ ಕುರಿತು ಸೂಕ್ತ ವೇದಿಕೆ ತೀರ್ಮಾನ ಮಾಡು ವವರೆಗೂ ಆಂಧ್ರ ಈ ನೀರನ್ನು ಬಳಕೆ ಮಾಡಬಹುದು ಎಂದು ನ್ಯಾಯಮಂಡಳಿ ತಿಳಿಸಿದೆ.

2013 ನೇ ಸಾಲಿನ ‘ಅಂಗವಿಕಲರ ವಿಶೇಷ ರಾಜ್ಯ ಪ್ರಶಸ್ತಿ’ ಪ್ರಕಟ
prize for PHಅಂಗವಿಕಲರ ಅಭಿವೃದ್ಧಿಗಾಗಿ ವಿಶೇಷ ಸೇವೆ ಸಲ್ಲಿಸಿದ ವ್ಯಕ್ತಿ, ಸಂಸ್ಥೆ ಹಾಗೂ ಶಿಕ್ಷಕರಿಗೆ ಪ್ರತಿ ವರ್ಷ ಸರ್ಕಾರದಿಂದ ನೀಡಲಾಗುವ 2013 ನೇ ಸಾಲಿನ ‘ಅಂಗವಿಕಲರ ವಿಶೇಷ ರಾಜ್ಯ ಪ್ರಶಸ್ತಿ’ ಪ್ರಕಟವಾಗಿದೆ. ಅಂಗವಿಕಲರ ವೈಯಕ್ತಿಕ ಪ್ರಶಸ್ತಿಗೆ 8 ಜನರು, ವಿಶೇಷ ರಾಜ್ಯ ಪ್ರಶಸ್ತಿಗೆ ಐದು ಸಂಸ್ಥೆಗಳು ಹಾಗೂ ಅಂಗವಿಕಲ ಮಕ್ಕಳ ಶಿಕ್ಷಣ ಕ್ಷೇತ್ರದ ಸೇವಾ ಪ್ರಶಸ್ತಿಗೆ ಐವರು ಶಿಕ್ಷಕರನ್ನು ಆಯ್ಕೆ ಮಾಡಲಾಗಿದೆ. ಅಲ್ಲದೆ ಕನ್ನಡ ಚಿತ್ರರಂಗದ ಹಾಸ್ಯ ಚಕ್ರವರ್ತಿ ದಿ.ನರಸಿಂಹರಾಜು ಅವರಿಗೆ ವಿಶೇಷ ವೈಯಕ್ತಿಕ ಮರಣೋತ್ತರ ಪ್ರಶಸ್ತಿ ಘೋಷಿಸಲಾಗಿದೆ.
  • ವೈಯಕ್ತಿಕ ಪ್ರಶಸ್ತಿ: ಸಿದ್ದರಾಜು – ಬೆಂಗಳೂರು, ಚಿದಂಬರಂ ವಿಷ್ಣು ಜೋಶಿ – ಬೆಂಗಳೂರು, ಎಲ್‌.ಶೇಖರ ನಾಯಕ – ಬೆಂಗಳೂರು, ಬಾಲಾಜಿ – ಮೈಸೂರು, ಸಿ. ಸುರೇಶ ನಾಯಕ – ಪುತ್ತೂರು, ಶಬಾನಾ ಭಾನು – ದೇವದುರ್ಗ, ಮಲ್ಲಿಕಾರ್ಜುನ ಖೇಡ – ಜಾಪೂರ, ಭೀಮಾಶಂಕರ – ಗುಲ್ಬರ್ಗ
  • ಪ್ರಶಸ್ತಿ ಪಡೆದ ಸಂಸ್ಥೆಗಳು: ಮಾತೃ ಶ್ರೀ ಮನೋವಿಕಾಸ ಬುದ್ಧಿಮಾಂಧ್ಯ ಮಕ್ಕಳ ಶಾಲೆ, ಬೆಂಗಳೂರು. ಆಕಾಶದೀಪ ಅಂಗವಿಕಲ ಸರ್ವ ಅಭಿವೃದ್ಧಿ ಸೇವಾ ಸಂಸೆ,§ ಕಲಕಲ್ಲ, ಹುನಗುಂದ ತಾಲೂಕು. ವಿದ್ಯಾರಣ್ಯ, ಬೆಂಗಳೂರು. ಶ್ರೀ ವಿನಾಯಕ ಎಜುಕೇಷನ್‌ ಸೊಸೈಟಿ, ದಾವಣಗೆರೆ. ಆಲಂಭಾ ಚಾರಿಟಬಲ್‌ ಟ್ರಸ್ಟ್‌, ಬೆಂಗಳೂರು.
  • ವಿಶೇಷ ಶಿಕ್ಷಕ ಪ್ರಶಸ್ತಿ: ಸುಧಾವತಿ ರಾಘವೇಂದ್ರ ಮಿಟ್ಟಿಮನಿ, ಬೆಳಗಾವಿ. ಮೀನಾಕ್ಷಮ್ಮ ಪಾಟೀಲ್‌, ಗುಲ್ಬರ್ಗ. ರೋಹಿಣಿ, ಬೆಂಗಳೂರು. ಗಂಗಾಧರ, ಮೈಸೂರು. ಫಿಲೋಮಿನಾ ಜೆಸಿಂತಾ ಎಲ್ವಿರ ಡಿಮೆಲ್ಲೋ, ಮಂಗಳೂರು.

ಭಾರತದ ಅತ್ಯಂತ ಸ್ಫೂರ್ತಿದಾಯಕ ಮಹಿಳಾ ರಾಜಕಾರಣಿ ಸೋನಿಯಾ ಗಾಂಧಿ
sonia gandhiಕಾಂಗ್ರೆಸ್‌ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಭಾರತದ ಅತ್ಯಂತ ಸ್ಫೂರ್ತಿದಾಯಕ ಮಹಿಳಾ ರಾಜಕಾರಣಿ ಎನ್ನುವ ಖ್ಯಾತಿಗೆ ಪಾತ್ರರಾಗಿದ್ದಾರೆ. ಅಲ್ಲದೇ ಅವರು ತಮ್ಮ ರಾಜಕೀಯ ವೃತ್ತಿ ಮತ್ತು ಕುಟುಂಬವನ್ನು ಸಮರ್ಥವಾಗಿ ನಿಭಾಯಿಸಬಲ್ಲವರಾಗಿದ್ದಾರೆ ಎಂದು ಸಮೀಕ್ಷೆಯೊಂದು ತಿಳಿಸಿದೆ.
ಸಮೀಕ್ಷೆ ಹೇಗೆ?
  • ಅಂತರ್ಜಾಲದಲ್ಲಿ ವೈವಾಹಿಕ ಸಂಬಂಧಗಳ ಸೇವೆ ಒದಗಿಸುವ ಶಾದಿ.ಕಾಮ್‌ ನಡೆಸಿದ ಸಮೀಕ್ಷೆಯಲ್ಲಿ ಈ ವಿಷಯ ಹೊರಬಿದ್ದಿದೆ.
  • ಈ ಸಮೀಕ್ಷೆಯಲ್ಲಿ ದೇಶದ ವಿವಿಧ ನಗರದ 5,100 ಕ್ಕೂ ಹೆಚ್ಚು ಮಹಿಳೆಯರು ಭಾಗವಹಿಸಿದ್ದರು.
  • ಅಂತರ್ಜಾಲ ಸಮೀಕ್ಷೆಯಲ್ಲಿ ಸೋನಿಯಾಗಾಂಧಿ ಅವರು ಶೇ. 36.2ರಷ್ಟು ಮತಗಳನ್ನು ಸಂಪಾದಿಸುವ ಮೂಲಕ ಈ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
  • ಸೋನಿಯಾ ಅವರ ರಾಜಕೀಯ ಪ್ರತಿಸ್ಪರ್ಧಿ, ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್‌ ಶೇ.33.6 ರಷ್ಟು ಮತದೊಂದಿಗೆ 2ನೇ ಸ್ಥಾನದಲ್ಲಿದ್ದಾರೆ.
  • ಕಾರ್ಪೊರೇಟ್‌ ವಲಯದಲ್ಲಿ ರಿಲಯನ್ಸ್‌ನ ನೀತಾ ಅಂಬಾನಿ (ಶೇ. 35.6) ಅತ್ಯಂತ ಯಶಸ್ವಿ ಮಹಿಳಾ ಉದ್ಯಮಿ ಎನ್ನುವ ಕೀರ್ತಿಗೆ ಪಾತ್ರರಾಗಿದ್ದಾರೆ.
  • ನಂತರದ ಸ್ಥಾನಗಳನ್ನು ಬಯೋಕಾನ್‌ ಕಂಪನಿಯ ಕಿರಣ್‌ ಮಜುಮಾªರ್‌, ಐಸಿಐಸಿಐ ಬ್ಯಾಂಕ್‌ನ ಸಿಇಒ ಚಂದಾ ಕೊಚ್ಚರ್‌ ಮತ್ತು ಆಯಕ್ಸಿಸ್‌ ಬ್ಯಾಂಕ್‌ನ ಸಿಇಒ ಶಿಖಾ ಶರ್ಮಾ ಪಡೆದಿದ್ದಾರೆ.
ಕ್ರೀಡಾ ಮತ್ತು ಬಾಲಿವುಡ್ ಕ್ಷೇತ್ರ:
  • ಇನ್ನು ಕ್ರೀಡಾ ಕ್ಷೇತ್ರದಲ್ಲಿ, ಐದು ಬಾರಿಯ ಮಹಿಳಾ ಬಾಕ್ಸಿಂಗ್‌ ಚಾಂಪಿಯನ್‌ ಮೇರಿ ಕೋಮ್‌ ಅತ್ಯಂತ ಯಶಸ್ವಿ ಕ್ರೀಡಾತಾರೆ (ಶೇ.33.5) ಎನಿಸಿದ್ದಾರೆ.
  • ನಂತರದ ಸ್ಥಾನವನ್ನು ಬ್ಯಾಡ್ಮಿಂಟನ್‌ ಆಟಗಾರ್ತಿ ಸೈನಾ ನೆಹವಾಲ್‌, ಟೆನಿಸ್‌ ತಾರೆ ಸಾನಿಯಾ ಮಿರ್ಜಾ ಮತ್ತು ಯುವ ಬ್ಯಾಡ್ಮಿಂಟನ್‌ ಆಟಗಾರ್ತಿ ಪಿ.ವಿ. ಸಿಂಧು ಪಡೆದಿದ್ದಾರೆ.
  • ಬಾಲಿವುಡ್‌ಗೆ ಸಂಬಂಧಿಸಿದಂತೆ ನಟ ಶಾರುಖ್‌ ಖಾನ್‌ ಅವರ ಪತ್ನಿ ಗೌರಿ ಖಾನ್‌ ಅಗ್ರ ಸ್ಥಾನದಲ್ಲಿದ್ದಾರೆ.
  • ನಂತರದ ಸ್ಥಾನವನ್ನು ಮಾಜಿ ವಿಶ್ವ ಸುಂದರಿ ಐಶ್ವರ್ಯಾ ರೈ, ಮಾಧುರಿ ದೀಕ್ಷಿತ್‌ ಮತ್ತು ಕಾಜೋಲ್‌ ಹಂಚಿಕೊಂಡಿದ್ದಾರೆ.

ಪ್ರಚಲಿತ ವಿದ್ಯಮಾನಗಳು ನವೆಂಬರ್ 24, 2013


“ಅಲ್ಟ್ರಾ ಮೆಗಾ ಪವರ್ ಪ್ರಾಜೆಕ್ಟ್ (Ultra Power Mega Project)” ಒಂದು ನೋಟ
ಜಗತ್ತಿನ ಬಲಾಢ್ಯ ಆರ್ಥಿಕ ರಾಷ್ಟ್ರಗಳ ಪೈಕಿ ಒಂದಾಗಿರುವ ಭಾರತದಲ್ಲಿ ವಿದ್ಯುತ್ ಒಂದು ದೊಡ್ಡ ಸಮಸ್ಯೆ ಸರಿ. ದೇಶದಲ್ಲಿ ತಲೆದೂರಿರುವ ವಿದ್ಯುತ್ ಸಮಸ್ಯೆಯನ್ನು ನೀಗಿಸುವ ಸಲುವಾಗಿ 11 ನೇ ಪಂಚವಾರ್ಷಿಕ ಯೋಜನೆಯ ಅಂತ್ಯಕ್ಕೆ 10,000 ಮೆಗಾ ವ್ಯಾಟ್ ವಿದ್ಯುತ್ ಅನ್ನು ಉತ್ಪಾದಿಸುವ ಗುರಿಹೊಂದುವ ಮೂಲಕ ಅಲ್ಟ್ರಾ ಮೆಗಾ ಪವರ್ ಪ್ರಾಜೆಕ್ಟ್ ಗಳನ್ನು ಸರ್ಕಾರ ಕೈಗೆತ್ತಿಕೊಂಡಿತು. ಪ್ರತಿ ಅಲ್ಟ್ರಾ ಮೆಗಾ ಪವರ್ ಪ್ರಾಜೆಕ್ಟ್ ಗಳು 4000 ಮೆಗಾ ವ್ಯಾಟ್ ವಿದ್ಯುತನ್ನು ಉತ್ಪಾದಿಸುವ ಸಾಮರ್ಥ್ಯವನ್ನು ಹೊಂದಿರಲಿವೆ.
ಉದ್ದೇಶಿತ ಅಲ್ಟ್ರಾ ಪವರ್ ಮೆಗಾ ಪ್ರಾಜೆಕ್ಟ್ ಗಳು: ಇಲ್ಲಿಯವರೆಗೆ ಒಟ್ಟು 12 ಘಟಕಗಳನ್ನು ಸ್ಥಾಪಿಸಲಾಗಿದೆ, ಇವುಗಳಲ್ಲಿ 2 ಘಟಕಗಳು ಈಗಾಗಲೇ ಕಾರ್ಯಾರಂಭಗೊಂಡಿವೆ. ಈ ಘಟಕಗಳ ಕಿರುಮಾಹಿತಿ ಇಲ್ಲಿದೆ.
  • ಕೃಷ್ಣಪಟ್ಟಿಣಂ ಮತ್ತು ನಯುನಿಪಲ್ಲಿ – ಆಂಧ್ರಪ್ರದೇಶ
  • ಸುರಗುಂಜ್- ಛತ್ತೀಸ್ ಗರ್
  • ಮುಂದ್ರಾ – ಗುಜರಾತ್
  • ತಿಲೈಯ – ಜಾರ್ಖಂಡ್
  • ತದ್ರಿ –ಕರ್ನಾಟಕ
  • ಸಸಾನ್ – ಮಧ್ಯಪ್ರದೇಶ
  • ಗಿರ್ಲೆ – ಮಹಾರಾಷ್ಟ್ರ
  • ಸುಂದರ್ಗರ್, ಘೋಪರ್ಲಪಲ್ಲಿ ಮತ್ತು ಸಖಿಗೊಪಲ್ – ಓಡಿಶಾ
  • ಚೆಯ್ಯೂರ್ – ತಮಿಳುನಾಡು.

ಯು.ಕೆ.ಗೆ ವಲಸೆ ಹೋಗುವ ವಿದೇಶಿಯರ ಸಂಖ್ಯೆಯಲ್ಲಿ ಭಾರತವನ್ನು ಹಿಂದಿಕ್ಕಿದ ಚೀನಾ
uk touristಇತ್ತೀಚಿನ ಮಾಹಿತಿ ಪ್ರಕಾರ ಯು.ಕೆ ಗೆ ವಲಸೆ ಹೋಗುವ ವಿದೇಶಿಯರ ಸಂಖ್ಯೆಯಲ್ಲಿ ಚೀನಾ ಅಗ್ರಸ್ಥಾನವನ್ನು ಪಡೆದುಕೊಂಡಿದೆ. ಆಫೀಸ್ ಫಾರ್ ನ್ಯಾಷನಲ್ ಸ್ಟಾಟಿಸ್ಟಿಕ್ಸ್ ಅಂಕಿ ಅಂಶಗಳ ಪ್ರಕಾರ ಕಳೆದ ವರ್ಷ 40,000 ಕ್ಕೂ ಹೆಚ್ಚು ಚೀನಿಯರು ಯು.ಕೆ ಗೆ ವಲಸೆ ಹೋಗಿರುವುದಾಗಿ ತಿಳಿದುಬಂದಿದೆ.
  • ಇದೇ ವರ್ಷದಲ್ಲಿ 37,000 ಭಾರತೀಯರು ಬ್ರಿಟನ್ ಗೆ ವಲಸೆ ಹೋಗಿದ್ದು, ಬ್ರಿಟನ್ ಗೆ ವಲಸೆ ಹೋಗುವ ವಿದೇಶಿಯರ ಪಟ್ಟಿಯಲ್ಲಿ ಭಾರತ ಎರಡನೇ ಸ್ಥಾನವನ್ನು ಪಡೆದುಕೊಂಡಿದೆ.
  • 2009 ರಿಂದ ಸತತ ಮೂರು ವರ್ಷಗಳ ಕಾಲ ಭಾರತ ಪ್ರಥಮ ಸ್ಥಾನವನ್ನು ಕಾಯ್ದುಕೊಂಡು ಬಂದಿತ್ತು. 2011 ರಲ್ಲಿ 61,000 ಭಾರತೀಯರು ವಲಸೆ ಕೈಗೊಂಡಿದ್ದರೆ, 2012 ರಲ್ಲಿ 37,000ಕ್ಕೂ ಹೆಚ್ಚು ಭಾರತೀಯರು ಬ್ರಿಟನ್ ಗೆ ವಲಸೆ ಹೋಗಿದ್ದಾರೆ.
  • ಚೀನಾದಿಂದ ಬ್ರಿಟನ್ ಗೆ ವಲಸೆ ಹೋಗುವವರ ಸಂಖ್ಯೆ ಹೆಚ್ಚಲು ಪ್ರಮುಖ ಕಾರಣವೆಂದರೆ ಬ್ರಿಟನ್ ಗೆ ಚೀನಾದ ವಿದ್ಯಾರ್ಥಿಗಳು ಅಧಿಕ ಸಂಖ್ಯೆಯಲ್ಲಿ ತೆರಳುತ್ತಿರುವುದು.

ಭಾರತ ಮತ್ತು ಚೀನಾ ನಡುವ ಗಡಿ ಮಾತುಕತೆ : ಹೊಸ ಆಯಾಮ
indo chima borderದಶಕಗಳಿಂದ ನೆರೆಯ ಚೀನಾದೊಂದಿಗೆ ಇರುವ ಗಡಿ ವಿವಾದವನ್ನು ಚೌಕಾಸಿ ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಮುಂದಾಗಿರುವ ಕೇಂದ್ರ ಸರ್ಕಾರ, ಜಮ್ಮು- ಕಾಶ್ಮೀರದ ಅಕ್ಸಾಯ್‌ ಚಿನ್‌ ಭಾಗವನ್ನು ಚೀನಾದ ವಶಕ್ಕೆ ಒಪ್ಪಿಸಿ, ಅರುಣಾಚಲಪ್ರದೇಶವನ್ನು ಭಾರತದಲ್ಲೇ ಉಳಿಸಿಕೊಳ್ಳುವ ನಿಟ್ಟಿನಲ್ಲಿ ಪ್ರಯತ್ನ ಆರಂಭಿಸಿದೆ.
ಯಾವುದರ ಬಗ್ಗೆ ಮಾತುಕತೆ?
  • ಅರುಣಾಚಲ ಪ್ರದೇಶದ ಭೂಭಾಗಕ್ಕೆ ಸಾರ್ವಭೌಮತ್ವ ನೀಡಬೇಕು ಎಂದು ಚೀನಾ ಬಹಿರಂಗವಾಗಿ ಒತ್ತಾಯಿಸುತ್ತಿದೆ. ಇದನ್ನು ಬಹಿರಂಗವಾಗಿಯೇ ಭಾರತ ತಿರಸ್ಕರಿಸುತ್ತಲೂ ಬಂದಿದೆ. ಆದರೆ ಉಭಯ ರಾಷ್ಟ್ರಗಳ ನಡುವಿನ ಮಾತುಕತೆ ವೇಳೆ ಇಂತಹದ್ದೊಂದು ಚೌಕಾಸಿ ನಡೆಯುತ್ತಿದೆ ಎಂದು ತಿಳಿಸಿದೆ.
  • ಅರುಣಾಚಲಪ್ರದೇಶದ 90 ಸಾವಿರ ಚದರ ಕಿ.ಮೀ. ಭಾಗ ತನಗೆ ಸೇರಬೇಕು ಎಂದು ಹೇಳುತ್ತಿರುವ ಚೀನಾ ಆ ಹಕ್ಕನ್ನು ಕೈಬಿಟ್ಟರೆ, ಜಮ್ಮು- ಕಾಶ್ಮೀರದಲ್ಲಿರುವ 38000 ಚದರ ಕಿ.ಮೀ. ಅಕ್ಸಾಯ್‌ ಚಿನ್‌ ಭಾಗವನ್ನು ಬಿಟ್ಟುಕೊಡುವುದಾಗಿ ಭಾರತ ಸಿದ್ಧವಿರುವ ಸುಳಿವು ನೀಡಿದೆ ಎನ್ನಲಾಗುತ್ತಿದೆ
  • ಆದರೆ ಇಂತಹ ಪ್ರಸ್ತಾವನೆ ಕಾರ್ಯರೂಪಕ್ಕೆ ಬರಲು ಮುಂದೆ ಅಧಿಕಾರಕ್ಕೆ ಬರುವ ಹೊಸ ಸರ್ಕಾರಕ್ಕೆ ರಾಜಕೀಯ ಇಚ್ಛಾಶಕ್ತಿ ಇರಬೇಕಾಗುತ್ತದೆ. ಏಕೆಂದರೆ ಚೀನಾ ಅತಿಕ್ರಮಿಸಿಕೊಂಡಿರುವ ಎಲ್ಲ ಭೂಭಾಗವನ್ನು ಮರಳಿ ವಶಕ್ಕೆ ಪಡೆಯಬೇಕು ಎಂದು 1962ರಲ್ಲಿ ಭಾರತೀಯ ಸಂಸತ್ತು ಸರ್ವಾನುಮತದ ನಿರ್ಣಯ ಅಂಗೀಕರಿಸಿದೆ
ಏನಿದು ಚೌಕಾಸಿ?
ಅರುಣಾಚಲಪ್ರದೇಶದ 90,000 ಚದರ ಕಿ.ಮೀ. ಭೂಭಾಗ ತನಗೆ ಸೇರಬೇಕೆಂದು ಚೀನಾ ವಾದಿಸುತ್ತಿದೆ. ಇದನ್ನು ಚೀನಾ ಕೈಬಿಡಬೇಕು.  ಅದಕ್ಕೆ ಪ್ರತಿಯಾಗಿ ತನಗೆ ಸೇರಿರುವ, ಚೀನಾ ಹಕ್ಕು ಮಂಡಿಸುತ್ತಿರುವ ವಿವಾದಿತ ಪ್ರದೇಶ ಜಮ್ಮು- ಕಾಶ್ಮೀರದ ಅಕ್ಸಾಯ್‌ ಚಿನ್‌ ಭಾಗ 38000 ಚದರ ಕಿ.ಮೀ.ಯನ್ನು ಚೀನಾಕ್ಕೆ ಬಿಟ್ಟುಕೊಡಲು ರೆಡಿ: ಕೇಂದ್ರ ಸರ್ಕಾರದ ಇಂಗಿತ

 

ಪ್ರಚಲಿತ ವಿದ್ಯಮಾನಗಳು ನವೆಂಬರ್ 23, 2013


2020 ರ “ವಿಶ್ವ ಎಕ್ಸ್ಪೊ ವ್ಯಾಪಾರ ಸಮ್ಮೇಳನ (World Expo Trade Convention)” ದ ಅತಿಥ್ಯವಹಿಸಲಿರುವ ದುಬೈ
2020 ರಲ್ಲಿ ನಡೆಯಲಿರುವ ವಿಶ್ವ ಎಕ್ಸ್ಪೊ ವ್ಯಾಪಾರ ಸಮ್ಮೇಳನದ ಅತಿಥ್ಯವನ್ನು ದುಬೈಗೆ ದಕ್ಕಿದೆ. ರಷ್ಯಾ, ಬ್ರೆಜಿಲ್ ಮತ್ತು ಟರ್ಕಿ ಅಂತಹ ಬಲಾಡ್ಯ ದೇಶಗಳ ಪೈಪೋಟಿಯನ್ನು ಯಶಸ್ವಿಯಾಗಿ ಹಿಮ್ಮೆಟ್ಟಿಸಿ ದುಬೈ ಅತಿಥ್ಯವನ್ನು ತನ್ನದಾಗಿಸಿಕೊಂಡಿದೆ.
  • ದುಬೈ ಈ ಸಮ್ಮೇಳನದ ಅತಿಥ್ಯವಹಿಸುವ ಮೂಲಕ ಇದೇ ಮೊದಲ ಬಾರಿಗೆ ಮಧ್ಯಪ್ರಾಚ್ಯ ದೇಶಗಳ ನಗರವೊಂದರಲ್ಲಿ ವಿಶ್ವ ಎಕ್ಸ್ಪೊ ವ್ಯಾಪಾರ ಸಮ್ಮೇಳವನ್ನು ನಡೆಸುವ ನಗರ ಎಂಬ ಹೆಗ್ಗಳಿಕೆಗೆ ಪಾತ್ರವಾಗಲಿದೆ
  • ಸಮ್ಮೇಳನದಲ್ಲಿ ವಿಶ್ವದ ನೂರಾರು ರಾಷ್ಟ್ರಗಳು ಭಾಗವಹಿಸಲಿದ್ದು, ತಂತ್ರಜ್ಞಾನ ಮತ್ತು ವಾಸ್ತುಕಲೆಗಳ ಬಗ್ಗೆ ಪ್ರದರ್ಶನಗೊಳ್ಳಲಿವೆ.
  • ವಿಶ್ವ ಎಕ್ಸ್ಪೊ ವ್ಯಾಪಾರ ಸಮ್ಮೇಳನ ಪ್ರತಿ ಐದು ವರ್ಷಗಳಿಗೊಮ್ಮೆ ನಡೆಯಲಿದ್ದು, 2015 ರಲ್ಲಿ ಇಟಲಿಯ ಮಿಲನ್ ಅಲ್ಲಿ ನಡೆಯಲಿದೆ.

ಏಷ್ಯಾದ ಅತಿ ದೊಡ್ಡ “ದನ ಜಾತ್ರೆ” ಬಿಹಾರದ ಸೋನೆಪುರ ದನ ಜಾತ್ರೆಗೆ ಚಾಲನೆ
cattle fareಏಷ್ಯಾದಲ್ಲೇ ಅತಿ ದೊಡ್ಡ ದನ ಜಾತ್ರೆ ಎಂದು ಪ್ರಸಿದ್ಧಿಯಾಗಿರುವ “ಸೋನೆಪುರ ದನಜಾತ್ರೆ”ಗೆ ಬಿಹಾರದಲ್ಲಿ ಚಾಲನೆ ನೀಡಲಾಯಿತು. ಇತಿಹಾಸ ಪ್ರಸಿದ್ಧಿ ಹೊಂದಿರುವ ಈ ಜಾತ್ರೆಯಲ್ಲಿ ಏಷ್ಯಾದ ವಿವಿಧ ರಾಷ್ಟ್ರಗಳಿಂದ ಜನರು ಭಾಗಿಯಾಗುವುದು ವಿಶೇಷ. ಮೆಲಗಾಂ ಮೇಳ ಎಂತಲೂ ಕರೆಯುವ ಈ ಜಾತ್ರೆಯನ್ನು ಕಾರ್ತಿಕ ಪೂರ್ಣಿಮ ದಿನದಂದು ಚಾಲನೆ ನೀಡಲಾಗುವುದು. ಪ್ರಸ್ತಕ ಸಾಲಿನ ಈ ಮೇಳಕ್ಕೆ ನವೆಂಬರ್ 16 ರಂದು ಚಾಲನೆ ನೀಡಲಾಗಿದ್ದು, ಡಿಸೆಂಬರ್ 15 ರ ತನಕ ಒಂದು ತಿಂಗಳ ಕಾಲ ನಡೆಯಲಿದೆ.
  • ಸೋನೆಪುರ ಪ್ರದೇಶವು ಗಂಗಾ ಮತ್ತು ಗಂಡಕ್ ನದಿಗಳ ಸಂಗಮದಲ್ಲಿ ನೆಲೆಗೊಂಡಿರುವ ಪ್ರದೇಶ. ಇತಿಹಾಸ ಪುರಾಣ ಪ್ರಸಿದ್ಧಿ ಹೊಂದಿರುವ ಈ ದನಗಳ ಜಾತ್ರೆ ಒಂದು ತಿಂಗಳ ಕಾಲ ನಡೆಯುವ ಏಷ್ಯಾದ ಅತಿ ದೊಡ್ಡ ದನಗಳ ಜಾತ್ರೆ.
  • ಇತಿಹಾಸದ ಪ್ರಕಾರ ಮೌರ್ಯರ ರಾಜ ಚಂದ್ರಗುಪ್ತನ ಕಾಲದಲ್ಲಿ ಈ ಭಾಗದಲ್ಲಿ ಕುದುರೆ ಮತ್ತು ಆನೆಗಳ ವ್ಯಾಪಾರ ವಿನಿಮಯ ನಡೆಯುತ್ತಿತ್ತು ಎನ್ನಲಾಗಿದೆ.
  • ಕೇವಲ ದನಗಳಲ್ಲದೇ ಆನೆ, ವಿವಿಧ ಶ್ವಾನ ತಳಿ, ಎಮ್ಮೆ, ಕತ್ತೆ, ಪರ್ಷಿಯಾದ ಕುದುರೆಗಳು, ಮೊಲ, ಮೇಕೆ ಮುಂತಾದ ಸಾಕು ಪ್ರಾಣಿಗಳ ವ್ಯಾಪಾರ ಇಲ್ಲಿ ನಡೆಯಲಿದೆ.

ರಾಜಸ್ತಾನದಲ್ಲಿ ವಿಶ್ವದ ಅತಿ ದೊಡ್ಡ ಕೇಂದ್ರೀಕೃತ ಸೌರ ವಿದ್ಯುತ್ ಘಟಕ ಆರಂಭಿಸಲಿರುವ ರಿಲಯನ್ಸ್ ಪವರ್
solar plantಅಂಬಾನಿ ಒಡೆತನದ ರಿಲಯನ್ಸ್ ಪವರ್ ಸಂಸ್ಥೆ ರಾಜಸ್ತಾನದಲ್ಲಿ 100 ಮೆಗಾ ವ್ಯಾಟ್ ಸಾಮರ್ಥ್ಯದ ವಿದ್ಯುತ್ ಘಟಕವನ್ನು ಆರಂಭಿಸುವುದಾಗಿ ಹೇಳಿದೆ. ರಾಜಸ್ತಾನದ ಜೈಸಲ್ಮೆರ್ ಜಿಲ್ಲೆಯಲ್ಲಿ ಈ ಘಟಕದ ಕಾಮಗಾರಿ ಮಾರ್ಚ್ ನಲ್ಲಿ ಆರಂಭಗೊಳ್ಳಲಿದೆ.
  • ಸಂಸ್ಥೆಯ ಪ್ರಕಾರ ಈ ಘಟಕ ವಿಶ್ವದ ಅತಿ ದೊಡ್ಡ ಕೇಂದ್ರೀಕೃತ ಸೌರ ವಿದ್ಯುತ್ (Concentrated Solar Power) ಘಟಕ ಇದಾಗಲಿದೆ.
  • ಸುಮಾರು 2,100 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗುತ್ತಿರುವ ಘಟಕವು ರಿಲಯನ್ಸ್ ಪವರ್ ಕಳೆದ ವರ್ಷದ ನಿರ್ಮಿಸಿರುವ 40 ಮೆಗಾ ವ್ಯಾಟ್ ಘಟಕದ ಪಕ್ಕದಲ್ಲಿ ತಲೆಯತ್ತಲಿದೆ.
  • ಕೇಂದ್ರೀಕೃತ ಸೌರ ಘಟಕ ತಂತ್ರಜ್ಞಾನದೊಂದಿಗೆ ಖಾಸಗಿ ಓಡೆತನದಲ್ಲಿ ಭಾರತದಲ್ಲಿ ನಿರ್ಮಾಣಗೊಳ್ಳುತ್ತಿರುವ ಅತಿ ದೊಡ್ಡ ಸೌರ ಘಟಕ ಇದಾಗಿದ್ದು, ಏಷ್ಯಾನ್ ಡೆವೆಲಫ್ ಮೆಂಟ್ ಬ್ಯಾಂಕ್ ಸೇರಿದಂತೆ ವಿಶ್ವದ ಪ್ರಮುಖ ಹಣಕಾಸು ಸಂಸ್ಥೆಗಳ ಸಾಲದ ನೆರವನ್ನು ನೀಡಿವೆ.

ಪೃಥ್ವಿ ಮಧ್ಯಂತರ ಛೇದಕ ಕ್ಷಿಪಣಿ (interceptor missile) ಪರೀಕ್ಷೆಗೆ ಸಜ್ಜಾಗುತ್ತಿರುವ DRDO
interceptor missileಭೂಮಿಯ ಹೊರ ವಾತಾವರಣದಲ್ಲೂ ಶತ್ರು ಕ್ಷಿಪಣಿಯನ್ನು ಯಶಸ್ವಿಯಾಗಿ ನಾಶಗೊಳಿಸುವ ಸಾಮರ್ಥ್ಯ ಹೊಂದಿರುವ ಕ್ಷಿಪಣಿಯ ಪರೀಕ್ಷೆಗೆ DRDO ಸಜ್ಜಾಗಿದೆ. ಓಡಿಶಾದ ವೀಲ್ಹರ್ ಐಲ್ಯಾಂಡ್ ನಿಂದ ಈ ಕ್ಷಿಪಣಿಯನ್ನು ಪರೀಕ್ಷಾರ್ಥ ಪ್ರಯೋಗವನ್ನು ನಡೆಯಸಲಾಗುವುದು.
  • “ಪೃಥ್ವಿ ಡಿಫೆನ್ಸ್ ವೆಹಿಕಲ್ (Prithvi Defence Vehicle)” ಎನ್ನಲಾಗಿರುವ ಈ ಕ್ಷಿಪಣಿಯು ವಾತಾವರಣದ ಹೊರಭಾಗದಲ್ಲೂ ಅಂದರೆ 2,500 ಕಿ,ಮೀ ದೂರದಲ್ಲೂ ಶತ್ರು ಕ್ಷಿಪಣಿಯನ್ನು ಹೊಡೆದುರುಳಿಸುವ ಸಾಮರ್ಥ್ಯವನ್ನು ಹೊಂದಿದೆ.
  • ವಾತಾವರಣದ ಹೊರಗಡೆ ಶತ್ರು ಕ್ಷಿಪಣಿಯನ್ನು ಹೊಡೆದುರುಳಿಸುವ ಕ್ಷಿಪಣಿಯನ್ನು ಜಗತ್ತಿನ ಕೆಲವೇ ಕೆಲವು ರಾಷ್ಟ್ರಗಳು ಹೊಂದಿದ್ದು, ಈ ಸಾಲಿಗೆ ಭಾರತ ಸಹ ಸೇರ್ಪಡೆಗೊಳ್ಳಲಿದೆ.
  •  DRDO ಈಗಾಗಲೇ ಅನೇಕ ಕ್ಷಿಪಣಿಗಳನ್ನು ಯಶಸ್ವಿಯಾಗಿ ಪರೀಕ್ಷೆ ನಡೆಸಿದೆ. ಇವುಗಳಲ್ಲಿ ಅತ್ಯಂತ ಪ್ರಮುಖವಾದವುಗಳೆಂದರೆ ಪೃಥ್ವಿ ಮತ್ತು ಅಗ್ನಿ ಕ್ಷಿಪಣಿ. ಅಗ್ನಿ-III ಕ್ಷಿಪಣಿ 3,000 ಕಿ.ಮೀ ದೂರವನ್ನು ಕ್ರಮಿಸಬಲ್ಲ ಸಾಮರ್ಥ್ಯವನ್ನು ಹೊಂದಿದೆ. ಅಗ್ನಿ-V ಕ್ಷಿಪಣಿಯನ್ನು ಸಹ DRDO ಅಭಿವೃದ್ದಿಪಡಿಸುತ್ತಿದ್ದು ಈ ಕ್ಷಿಪಣಿ 5000 ಕಿ.ಮೀ ದೂರದ ಗುರಿಯನ್ನು ತಲುಪುವ ಸಾಮರ್ಥ್ಯವನ್ನು ಹೊಂದಿದೆ.

ಪ್ರಚಲಿತ ವಿದ್ಯಮಾನಗಳು ನವೆಂಬರ್ 22, 2013


ಪರಿಸರ ಹೋರಾಟಗಾರ್ತಿ ಪ್ರೀತಿ ರಾಜಗೋಪಾಲನ್‌ ಗೆ ಪ್ರಸಕ್ತ ಸಾಲಿನ ಕಾಮನ್‌ವೆಲ್ತ್‌ ಯೂತ್‌ ಪ್ರಶಸ್ತಿ
ಯುವ ಪರಿಸರ ಹೋರಾಟಗಾರ್ತಿ ಪ್ರೀತಿ ರಾಜಗೋಪಾಲನ್‌ ಪ್ರಸಕ್ತ ಸಾಲಿನ ಕಾಮನ್‌ವೆಲ್ತ್‌ ಯೂತ್‌ ಪ್ರಶಸ್ತಿಯನ್ನು ತಮ್ಮ ಮುಡಿಗೇರಿಸಿಕೊಂಡಿದ್ದಾರೆ. ಎಂಜಿನಿಯರಿಂಗ್‌ ಪದವಿ ಓದುತ್ತಿರುವ ಪ್ರೀತಿ ಮೂರು ವರ್ಷಗಳ ಹಿಂದೆ ಗೆಳೆಯರ ಸಹಾಯದಿಂದ ತ್ಯಾಜ್ಯ ನಿರ್ವಹಣಾ ಯೋಜನೆಯನ್ನು ಆರಂಭಿಸಿದರು. ಸುಮಾರು 200 ಶಾಲೆ ಮತ್ತು 40 ವಿಶ್ವವಿದ್ಯಾಲಯಗಳ ವಿದ್ಯಾರ್ಥಿಗಳಿಗೆ ತ್ಯಾಜ್ಯ ಮರುಬಳಕ್ಕೆ ಮಾಡುವುದು ಹೇಗೆ ಎಂಬುದರ ಬಗ್ಗೆ ತರಬೇತಿ ನೀಡಿದರು. ಸತತ ಮೂರು ವರ್ಷ ದೇಶದ ವಿವಿಧ ಭಾಗಗಳನು ಸುತ್ತಿ ಗ್ರಾಮೀಣ ಮಹಿಳೆಯರು ಮತ್ತು ಮಕ್ಕಳಿಗೆ ತ್ಯಾಜ್ಯವನ್ನು ಗೊಬ್ಬರವಾಗಿ ಹೇಗೆ ಮರುಬಳಕೆ ಮಾಡಬಹುದು ಎಂಬುದನ್ನು ತೋರಿಸಿಕೊಟ್ಟರು.
ಪ್ರೀತಿ ಸಾಧನೆ:
  • ಅಲ್ಲದೆ ಅತಿ ಕಡಿಮೆ ವೆಚ್ಚದಲ್ಲಿ ಸೌರಶಕ್ತಿಯಿಂದ ದೀಪಗಳನ್ನು ಉರಿಸುವುದು, ನೀರು ಶುದ್ದೀಕರಣ ಮಾಡುವ ವಿಧಾನದ ಬಗ್ಗೆ ಯಾಂತ್ರಿಕವಾಗಿ ಹೇಳಿಕೊಟ್ಟ ಹೆಗ್ಗಳಿಕೆ ಅವರದ್ದು.
  • ಈ ಯೋಜನೆಯಿಂದ ಸ್ಫೂರ್ತಿ ಪಡೆದ ಕೇಂದ್ರ ಸರ್ಕಾರ ಪ್ರಸ್ತುತ 40 ನಗರಗಳಲ್ಲಿ ತ್ಯಾಜ್ಯ ಮರುಬಳಕೆ ಮಾಡುವ ಘಟಕಗಳಿಗೆ ಸಹಾಯಧನ ನೀಡುತ್ತಿದ್ದೆ.
  • ಪ್ರೀತಿ ತಮ್ಮ ಯೋಜನೆಗೆ ಆಫ್ರಿಕಾ, ಯುರೋಪ್‌ ದೇಶಗಳ ವಿವಿಧ ಸಂಘ ಸಂಸ್ಥೆಗಳಿಂದ ಸಹಾಯಧನ ಪಡೆದಿದ್ದಾರೆ.
  • ಕಾಮನ್‌ವೆಲ್ತ್‌ ಯುವ ಪ್ರಶಸ್ತಿಯಿಂದ ಬಂದ ಹಣವನ್ನು ಸಾವಯವ ಕೃಷಿಯ ಬಗ್ಗೆ ಯುವಕರಿಗೆ ಮತ್ತು ಮಹಿಳೆಯರಿಗೆ ತರಬೇತಿ ನೀಡಲು ವಿನಿಯೋಗಿಸುತ್ತಿದ್ದಾರೆ.
  • ಸಾವಯವ ಬೆಳೆ ಮತ್ತು ತ್ಯಾಜ್ಯ ಮರುಬಳಕೆ ಮಾಡುವ ವಿಧಾನದ ಬಗ್ಗೆ ವಿದ್ಯಾರ್ಥಿಗಳು, ಯುವಕರು ಮತ್ತು ಮಹಿಳೆಯರಲ್ಲಿ ಜಾಗೃತಿ ಮೂಡಿಸುವುದೇ ನನ್ನ ಜೀವನದ ಗುರಿ ಎನ್ನುತ್ತಾರೆ ಪ್ರೀತಿ.

ವಿಶ್ವಸಂಸ್ಥೆಯ ಸಂಶೋಧನಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡ ಭಾರತದ ವರುಣ್ ಅರೋರ
varunವಿಶ್ವಸಂಸ್ಥೆ ಪ್ರತಿ ವರ್ಷ ಯುವಕರಿಗಾಗಿ ಒಂದು ಸಂಶೋಧನಾ ಸ್ಪರ್ಧೆಯನ್ನು ಏರ್ಪಡಿಸುತ್ತದೆ. ಅದು ತಂತ್ರಜ್ಞಾನದ ಮೂಲಕ ಜಗತ್ತನ್ನೇ ಬದಲಿಸುವಂತಹ ಸಂಶೋಧನೆಯಾಗಿರಬೇಕು. 2013ನೇ ಸಾಲಿನ ಈ ಪ್ರಶಸ್ತಿಗೆ ಭಾರತೀಯ ಯುವಕ ವರುಣ್‌ ಆರೋರ ಆಯ್ಕೆಯಾಗುವ ಮೂಲಕ ವಿಶ್ವದ ಗಮನ ಸೆಳೆದಿದ್ದಾರೆ.
ಯಾವುದಕ್ಕೆ ಪ್ರಶಸ್ತಿ:
ಪೂರ್ವ ಪ್ರಾಥಮಿಕ, ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೆ ಸಂಬಂಧಿಸಿದಂತೆ ‘ಓಪನ್‌ ಕರಿಕುಲಂ’ ಎಂಬ ವೆಬ್‌ಸೈಟ್‌ ವಿನ್ಯಾಸಕ್ಕೆ ದೆಹಲಿ ಮೂಲದ ವರುಣ್‌ಗೆ ವಿಶ್ವಸಂಸ್ಥೆ ಪ್ರಶಸ್ತಿ ಸಂದಿದೆ. ವರುಣ್‌ ಸೇರಿದಂತೆ ನಾನಾ ದೇಶಗಳ 10 ಯುವ ಸಂಶೋಧಕರು ಈ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ವಿಶ್ವಸಂಸ್ಥೆ ನೀಡುವ ಈ ಪ್ರಶಸ್ತಿಗೆ ಭಾರತ ಸೇರಿದಂತೆ ವಿಶ್ವಸಂಸ್ಥೆಯಲ್ಲಿ ಸದಸ್ಯತ್ವ ಪಡೆದ ರಾಷ್ಟ್ರಗಳ ನಾಗರಿಕರು ಅರ್ಹರು.
ಈ ಬಾರಿಯ ಸಂಶೋಧನೆ ಏನು?
ಈ ಬಾರಿ 88 ದೇಶಗಳಿಂದ 600 ಸ್ಪರ್ಧಿಗಳು ಭಾಗವಹಿಸಿದ್ದರು. ‘ಕ್ರಿಯಾತ್ಮಕ ತಂತ್ರಜ್ಞಾನದ ಮೂಲಕ ಜಗತ್ತನ್ನು ಬದಲಿಸಬಹುದು’ ಎಂಬುದು ಈ ಪ್ರಶಸ್ತಿಯ ಘೋಷವಾಕ್ಯ. ಅದರಂತೆ ಸ್ಪರ್ಧಿಗಳು ತಮ್ಮ ಸುತ್ತಲಿನ ಸಮಾಜವನ್ನು ಕೇಂದ್ರವಾಗಿಟ್ಟುಕೊಂಡು ತಂತ್ರಜ್ಞಾನದ ಮೂಲಕ ಅದನ್ನು ಹೇಗೆ ಬದಲಿಸಬಹುದು ಎಂಬುದನ್ನು ತೋರಿಸಿಕೊಡಬೇಕು ಅಥವಾ ಬದಲಾವಣೆಗೆ ಪೂರಕವಾದ ತಂತ್ರಜ್ಞಾನವನ್ನು ಕಂಡುಹಿಡಿಯಬೇಕು.
ವರುಣ್ ಆಯ್ಕೆ:
ಈ ಸ್ಪರ್ಧೆಗೆ ವರುಣ್‌ ಭಾರತೀಯ ಶಿಕ್ಷಣ ಪದ್ಧತಿಯನ್ನು ಅಯ್ಕೆ ಮಾಡಿಕೊಂಡರು. ಮುಖ್ಯವಾಗಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೆ ಒತ್ತು ನೀಡಿದರು. ‘ಓಪನ್‌ ಕರಿಕುಲಂ’ ವೆಬ್‌ಸೈಟ್‌ನಲ್ಲಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣಕ್ಕೆ ಸಂಬಂಧಿಸಿದ ಸಂಪೂರ್ಣ ಮಾಹಿತಿಯನ್ನು ಅಪ್‌ಲೋಡ್‌ ಮಾಡಿದರು.ಹಾಗೂ ಶಿಕ್ಷಣಕ್ಕೆ ಸಂಬಂಧಿಸಿದಂತೆ ಯಾರು ಬೇಕಾದರೂ ಮಾಹಿತಿ ಅಪ್‌ಲೋಡ್‌ ಮಾಡಲು ಅವಕಾಶ ಕಲ್ಪಿಸಿದ್ದಾರೆ. ಈ ವೆಬ್‌ ಮೂಲಕ ಶಿಕ್ಷಕರು ಮತ್ತು ವಿದ್ಯಾರ್ಥಿಗಳಿಗೆ ಶಿಕ್ಷಣದ ಬಗ್ಗೆ ಹೆಚ್ಚಿನ ಮಾಹಿತಿ ಲಭ್ಯವಾಗುತ್ತದೆ. ಇದು ಓಪನ್‌ ಕರಿಕುಲಂನ ವಿಶೇಷ.

ಚಂದ್ರನ ಅಂಗಳದಲ್ಲಿ ಸೊಪ್ಪು-ತರಕಾರಿ ಬೆಳೆಸುವ ಯೋಜನೆಗೆ ಕೈಹಾಕಿದ ನಾಸಾ
moonಚಂದ್ರನ ಅಂಗಳದಲ್ಲಿ 2015 ರ ಹೊತ್ತಿಗೆ ಸಣ್ಣ ಗಾತ್ರದ ಸೊಪ್ಪು- ತರಕಾರಿ ಗಿಡಗಳನ್ನು ಬೆಳೆಸುವ ಹೊಸ ಯೋಜನೆಯನ್ನು ನಾಸಾ ಹಾಕಿಕೊಂಡಿದೆ. ಭೂಮಿಯ ಉಪಗ್ರಹವಾದ ಚಂದ್ರನಲ್ಲಿ ಮಾನವ ಜೀವಿಸಲು ಸಾಧ್ಯವೇ ಎನ್ನುವುದನ್ನು ಖಾತರಿ ಪಡಿಸಿಕೊಳ್ಳುವ ಸಲುವಾಗಿ ನಾಸಾ ಈ ಯೋಜನೆ ಹಾಕಿಕೊಂಡಿದ್ದು,
ಏನಿದು ಯೋಜನೆ:
  • ಮೊದಲಿಗೆ ‘ಟರ್ನಿಪ್‌’ (ಸೊಪ್ಪಿನ ಗಿಡ) ಮತ್ತು ‘ಬ್ಯಾಸಿಲ್‌’ (ಸುವಾಸನಾ ಸಸ್ಯ) ಗಿಡಗಳನ್ನು ಬೆಳೆಸಲು ಚಿಂತಿಸಿದೆ.
  • ಮುಂದಿನ ಎರಡು ವರ್ಷಗಳಲ್ಲಿ ಬಾಹ್ಯಾಕಾಶ ನೌಕೆಯ ಮೂಲಕ ಈ ಗಿಡಗಳ ಬೀಜಗಳನ್ನು ಚಂದ್ರನಲ್ಲಿಗೆ ರವಾನಿಸುವ ಯೋಜನೆ ಇದಾಗಿದೆ.
  • ಇದಕ್ಕಾಗಿ ‘ಚಂದ್ರನಲ್ಲಿ ಸಸ್ಯ ನೆಲೆ’ ಕುರಿತ ತಂಡವು ಈಗಾಗಲೇ ಸಂಶೋಧನಾ ಕಾರ್ಯ ಕೈಗೊಂಡಿದೆ ಎಂದು ನಾಸಾ ಹೇಳಿದೆ.
  • ಚಂದ್ರನಲ್ಲಿಗೆ ಈ ಗಿಡಗಳ ಬೀಜ ಗಳನ್ನು ರವಾನಿಸಲು ಕಾಫಿ ಬೆರೆಸಲು ಬಳಸುವ ಕೈಪಾತ್ರೆ ಗಾತ್ರದ ಸಾಧನ ಗಳನ್ನು (ಕುಂಡ) ಬಳಸಲು ಉದ್ದೇಶಿಸಲಾಗಿದೆ. ಈ ಕುಂಡವು ವೈಜ್ಞಾನಿಕವಾಗಿದ್ದು, ಹವಾಮಾನ ವೈಪರೀತ್ಯದಿಂದ ಬೀಜಗಳನ್ನು ರಕ್ಷಿಸುತ್ತವೆ.
  • ಇದರಲ್ಲಿ ಕ್ಯಾಮೆರಾ, ಸೂಕ್ಷ್ಮಸಂವೇದಿಗಳು ಮತ್ತು ಎಲೆಕ್ಟ್ರಾನಿಕ್‌ ಸಾಧನಗಳನ್ನು ಅಳವಡಿಸುವುದರಿಂದ ಚಂದ್ರನಲ್ಲಿ ಬೀಜ ಮೊಳಕೆ ಒಡೆಯುವುದರಿಂದ ಹಿಡಿದು ಅದರ ಪ್ರತಿಯೊಂದು ಬೆಳವಣಿಗೆಯ ಸೂಕ್ಷ್ಮವನ್ನು ಅರಿಯಲು ಸಾಧ್ಯವಾಗುತ್ತದೆ ಎಂದು ಎಂದು ನಾಸಾ ತಿಳಿಸಿದೆ.
  • ಬೀಜ ಚಿಗುರೊಡೆಯಲು ಬೇಕಾದ ನೀರು ಪೂರೈಕೆಗಾಗಿ ನೀರು ತುಂಬಿದ ಕಾಗದವನ್ನು ಈ ಕುಂಡದಲ್ಲಿ ಇರಿಸಲಾಗುವುದು. ಬೀಜದ ಮೊಳಕೆಗೆ ಅಗತ್ಯವಾದ ಬೆಳಕಿಗೆ ಸೂರ್ಯನನ್ನು ಆಶ್ರಯಿಸಲಾಗುವುದು. ಕನಿಷ್ಠ 5 ದಿನಗಳಲ್ಲಿ ಬೀಜ ಮೊಳಕೆಯೊಡೆಯುವ ನಿರೀಕ್ಷೆ ಇದೆ ಎಂದು ನಾಸಾ ಹೇಳಿದೆ.

ಪ್ರಚಲಿತ ವಿದ್ಯಮಾನಗಳು ನವೆಂಬರ್ 21, 2013


2013 ನೇ ಸಾಲಿನ ವಿವಿಧ ಪ್ರಶಸ್ತಿಗಾಗಿ ಆಯ್ಕೆ ಸಮಿತಿಗಳನ್ನು ರಚಿಸಿದ ರಾಜ್ಯ ಸರ್ಕಾರ
ವಿವಿಧ ಕ್ಷೇತ್ರಗಳಲ್ಲಿನ ಗಣನೀಯ ಸೇವೆಗಾಗಿ ನೀಡುವ 2013ನೇ ಸಾಲಿನ ಪ್ರಶಸ್ತಿಗಳ ಆಯ್ಕೆಗಾಗಿ ರಾಜ್ಯ ಸರ್ಕಾರ ಆಯ್ಕೆ ಸಮಿತಿಗಳನ್ನು ರಚಿಸಿ ಆದೇಶ ಹೊರಡಿಸಿದೆ.
ಸಮಿತಿಗಳ ವಿವರ:
  • ಪ್ರೊ| ಕೆ.ಜಿ.ಕುಂದಣಗಾರ ಗಡಿನಾಡ ಸಾಹಿತ್ಯ ಪ್ರಶಸ್ತಿ: ಡಾ| ಎಂ.ಜಿ.ಬಿರಾದಾರ್‌ (ಅಧ್ಯಕ್ಷರು), ನೀಲಗಂಗಾ ಚರಂತಿಮಠ, ಡಾ| ಕೃಷ್ಣಮೂರ್ತಿ ಹನೂರು, ಡಾ| ತಮಿಳು ಸೆಲ್ವಿ, ಡಾ| ಅಮರೇಶ್‌ ನುಗಡೋಣಿ (ಸದಸ್ಯರು).
  • ಸಂಗೊಳ್ಳಿರಾಯಣ್ಣ ಪ್ರಶಸ್ತಿ: ಪ್ರೊ| ಚಂದ್ರಶೇಖರ ಪಾಟೀಲ (ಅಧ್ಯಕ್ಷರು). ಉಮಾ ಟೋಪಣ್ಣನವರ್‌, ಜಯಪ್ರಕಾಶ್‌ ಗೌಡ, ಶಿವಶರಣಪ್ಪ ವಾಲಿ, ಮಹಾದೇವ ಅಂಕಲಗಿ (ಸದಸ್ಯರು).
  • ಪಂಪ ಪ್ರಶಸ್ತಿ: ಪ್ರೊ| ಜಿ.ಎಚ್‌.ನಾಯಕ್‌ (ಅಧ್ಯಕ್ಷರು). ಡಾ| ನರಹಳ್ಳಿ ಬಾಲಸುಬ್ರಹ್ಮಣ್ಯ, ಡಾ| ಮೀನಾಕ್ಷಿ ಬಾಳಿ, ನಾ.ಡಿಸೋಜ (ಸದಸ್ಯರು).
  • ದಾನ ಚಿಂತಾಮಣಿ ಅತ್ತಿಮಬ್ಬೆ ಪ್ರಶಸ್ತಿ: ಡಾ| ಕೆ.ಆರ್‌.ಸಂಧ್ಯಾರೆಡ್ಡಿ (ಅಧ್ಯಕ್ಷರು). ಡಾ| ಎಚ್‌.ಎಸ್‌.ಮುಕ್ತಾಯಕ್ಕ, ಭಾನು ಮುಷ್ತಾಕ್‌, ಭುವನೇಶ್ವರಿ ಹೆಗಡೆ (ಸದಸ್ಯರು).
  • ಶಾಂತಲಾ ನಾಟ್ಯ ಪ್ರಶಸ್ತಿ: ವೈಜಯಂತಿ ಕಾಶಿ (ಅಧ್ಯಕ್ಷರು). ಉಳ್ಳಾಲ್‌ ಮೋಹನ್‌ ಕುಮಾರ್‌, ನಾಗರತ್ನ ಹಡಗಲಿ, ಚೇತನ್‌ ರಾಧಾಕೃಷ್ಣ, ಜ್ಯೋತಿ ಪಟ್ಟಾಭಿರಾಮ್‌ (ಸದಸ್ಯರು).
  • ಜಕಣಾಚಾರಿ ಪ್ರಶಸ್ತಿ: ಕನಕಮೂರ್ತಿ (ಅಧ್ಯಕ್ಷರು). ಈರಣ್ಣ ಪಿ. ಕಂಬಾರ, ಪಿ.ರಾಜಶೇಖರ ಆಚಾರ್ಯ, ಮಳೆಯಪ್ಪ ಬಡಿಗೇರ್‌, ಜಾnನೇಂದ್ರ (ಸದಸ್ಯರು).
  • ಟಿ. ಚೌಡಯ್ಯ ಪ್ರಶಸ್ತಿ: ವೆಂಕಟೇಶ್‌ ಗೋಡ್ಪಿಂಡಿ (ಅಧ್ಯಕ್ಷರು). ವೆಂಕಟೇಶ್‌ ಕುಮಾರ್‌, ಎಚ್‌.ಎಸ್‌.ನಾಗರಾಜ್‌, ಛೋಟೆ ರೆಹ್ಮತ್‌ ಖಾನ್‌, ಇಂದೂಧರ್‌ ನಿರೋಡಿ (ಸದಸ್ಯರು).
  • ಬಸವ ಪುರಸ್ಕಾರ ರಾಷ್ಟ್ರೀಯ ಪ್ರಶಸ್ತಿ: ಡಾ| ಚಂದ್ರಶೇಖರ್‌ ಕಂಬಾರ (ಅಧ್ಯಕ್ಷರು). ಪೊ›| ಓ.ಎಲ್‌.ನಾಗಭೂಷಣ್‌ ಸ್ವಾಮಿ, ಡಾ| ಆರ್‌.ಪೂರ್ಣಿಮಾ, ಡಾ| ರೆಹಮತ್‌ ತರೀಕೆರೆ, ಡಾ| ಬಿ.ವಿ.ಶಿರೂರ (ಸದಸ್ಯರು).
  • ನಿಜಗುಣ ಪುರಂಧರ ಪ್ರಶಸ್ತಿ: ಶ್ಯಾಮಲಾ ಜಿ. ಭಾವೆ (ಅಧ್ಯಕ್ಷರು). ಬಿ.ಕೆ.ಚಂದ್ರಮೌಳಿ, ರಾಜಲಕ್ಷಿ ಶ್ರೀಧರ್‌, ಆರ್‌.ಎಚ್‌. ಮೋರೆ, ಗುರುಸ್ವಾಮಿ ಕಲ್ಕೇರಿ (ಸದಸ್ಯರು).
  • ಸಂತ ಶಿಶುನಾಳ ಷರೀಫ್ ಪ್ರಶಸ್ತಿ: ಯಶವಂತ ಹಳಿಬಂಡಿ (ಅಧ್ಯಕ್ಷರು). ರಮಾ ಅರವಿಂದ್‌, ಸಿ.ವಿಶ್ವನಾಥ್‌ ಶೇಷಗಿರಿದಾಸ್‌, ಶಬ್ಬೀರ್‌ ಅಹ್ಮದ್‌ (ಸದಸ್ಯರು).
  • ಕುಮಾರವ್ಯಾಸ ಪ್ರಶಸ್ತಿ: ಡಾ| ಲಕ್ಷ್ಮಣದಾಸ್‌ (ಅಧ್ಯಕ್ಷರು). ಶಾಂತಾ ಕೌತಾಳ, ಡಿ.ಆರ್‌.ಪಾಂಡುರಂಗ, ಡಾ| ಎಂ.ಕಿರಣಕುಮಾರ್‌, ಬೇಲೂರು ವಸಂತಲಕ್ಷ್ಮೀ (ಸದಸ್ಯರು).
  • ಜಾನಪದ ಶ್ರೀ ಪ್ರಶಸ್ತಿ: ಡಾ| ಶಾಂತಿ ನಾಯಕ್‌ (ಅಧ್ಯಕ್ಷರು). ಡಾ| ಹಿ.ಶಿ.ರಾಮಚಂದ್ರಗೌಡ, ಸಣ್ಣೆಂಗಪ್ಪ ಸತ್ಯಪ್ಪ ಮುಶೆನಗೋಳ, ಡಾ| ವೀರಣ್ಣ ದಂಡೆ (ಸದಸ್ಯರು).
  • ವರ್ಣಶಿಲ್ಪಿ ವೆಂಕಟಪ್ಪ ಪ್ರಶಸಿ: ಪ್ರೊ| ವಿ.ಜಿ.ಅಂದಾನಿ (ಅಧ್ಯಕ್ಷರು). ನಿರ್ಮಲಾ ಕುಮಾರಿ, ಡಿ.ಎಂ.ಬಡಿಗೇರ, ಪರುಷೋತ್ತಮ ಅಡವೆ, ಶಿವಕುಮಾರ್‌ ಕೆಸರಮಡು (ಸದಸ್ಯರು).
  • ಡಾ| ಗುಬ್ಬಿ ವೀರಣ್ಣ ಪ್ರಶಸಿ: ಚಿಂದೋಡಿ ಬಂಗಾರೇಶ್‌ (ಅಧ್ಯಕ್ಷರು). ಗುಡಿಹಳ್ಳಿ ನಾಗರಾಜ್‌, ಸಿ.ಕೆ.ಗುಂಡಣ್ಣ, ಪುಷ್ಪಮಾಲಾ ಅಣ್ಣಿಗೇರಿ, ಶ್ರೀಧರ್‌ ಹೆಗಡೆ (ಸದಸ್ಯರು).

ಚೂರು-ಪಾರು ಸುದ್ಧಿಗಳು:
    teacher
  • ಐಸಿಸಿ ಟ್ವೆಂಟಿ-20 ವಿಶ್ವಕಪ್‌ ಟೂರ್ನಿಗೆ ನೇಪಾಳ ಮತ್ತು ಯುಎಇ ತಂಡಗಳ ಅರ್ಹತೆ: ನೇಪಾಳ ತಂಡ ಮುಂದಿನ ವರ್ಷ ಬಾಂಗ್ಲಾದೇಶದಲ್ಲಿ ನಡೆಯಲಿರುವ ಐಸಿಸಿ ಟ್ವೆಂಟಿ-20 ವಿಶ್ವಕಪ್‌ ಟೂರ್ನಿಗೆ ಅರ್ಹತೆ ಗಿಟ್ಟಿಸಿಕೊಂಡಿತು. ವಿಶ್ವಕಪ್‌ ಅರ್ಹತಾ ಟೂರ್ನಿಯ ಸೆಮಿಫೈನಲ್‌ ಪ್ರವೇಶಿಸುವ ಮೂಲಕ ನೇಪಾಳ ಈ ಸಾಧನೆ ಮಾಡಿದೆ. ಅಬುಧಾಬಿಯ ಶೇಖ್‌ ಜಾಯೇದ್‌ ಕ್ರೀಡಾಂಗಣದಲ್ಲಿ ನಡೆದ ಕ್ವಾರ್ಟರ್‌ ಫೈನಲ್‌ ಪಂದ್ಯದಲ್ಲಿ ನೇಪಾಳ ಹಾಂಕಾಂಗ್‌ ವಿರುದ್ಧ ಐದು ವಿಕೆಟ್‌ಗಳ ಜಯ ಸಾಧಿಸಿತು. ಟೂರ್ನಿಯ ಮತ್ತೊಂದು ಪಂದ್ಯದಲ್ಲಿ ಹಾಲೆಂಡ್‌ ತಂಡವನ್ನು 10 ರನ್‌ಗಳಿಂದ ಮಣಿಸಿದ ಯುಎಇ ಕೂಡಾ ವಿಶ್ವಕಪ್‌ಗೆ ಅರ್ಹತೆ ಗಿಟ್ಟಿಸಿತು.

  • ಪಂಜಾಬ್‌ ಕೃಷಿ ವಿಶ್ವವಿದ್ಯಾಲಯದಿಂದ ಮೊದಲ ಕಪ್ಪು ಕ್ಯಾರೆಟ್‌ (ಗಜ್ಜರಿ) ಅಭಿವೃದ್ಧಿ: ವಿವಿಧ ಬಣ್ಣದ ಟೊಮೆಟೋ, ಮೆಣಸಿನ ಕಾಯಿ ಈಗಾಗಲೇ ಮಾರುಕಟ್ಟೆಗೆ ಬಂದಿವೆ. ಇದಕ್ಕೆ ಇನ್ನೊಂದು ಸೇರ್ಪಡೆ ಎಂಬಂತೆ ಪಂಜಾಬ್‌ ಕೃಷಿ ವಿಶ್ವವಿದ್ಯಾಲಯ ಮೊದಲ ಕಪ್ಪು ಕ್ಯಾರೆಟ್‌ (ಗಜ್ಜರಿ) ಅಭಿವೃದ್ಧಿಪಡಿಸಿದೆ. ಈ ವಿಶೇಷ ತರಕಾರಿ ರಕ್ತದ ಕ್ಯಾನ್ಸರ್‌, ಹೊಟ್ಟೆ ನೋವುಗಳನ್ನು ಗುಣಪಡಿಸುವ ಔಷಧೀಯ ಗುಣಗಳನ್ನು ಹೊಂದಿದೆ. ಕಪ್ಪು ಕ್ಯಾರೆಟ್‌ ರಕ್ತ ಪರಿಚಲನೆಯನ್ನು ಹೆಚ್ಚಿಸುವ ಮೂಲಕ ರಕ್ತಹೀನತೆ ಕಾಯಿಲೆಯನ್ನು ಗುಣಪಡಿಸಬಲ್ಲದು. ಅಲ್ಲದೇ ಅಪೌಷ್ಟಿಕತೆಯಿಂದ ಬಳಲುತ್ತಿರುವ ದೇಶದ ಬಹುಸಂಖ್ಯಾತ ಜನರಿಗೆ ಇದು ದಿವ್ಯ ಔಷಧವಾಗಿದೆ. ಅಲ್ಲದೆ ಇದರಲ್ಲಿ ಅತ್ಯಧಿಕ ಕಬ್ಬಿಣ, ಕ್ಯಾಲ್ಸಿಯಂ ಪೋಷಕಾಂಶಗಳು ಹೇರಳ ಪ್ರಮಾಣದಲ್ಲಿದೆ. ಬೆಳೆದ ಸುಮಾರು 93 ದಿನಗಳ ಬಳಿಕ ಕಪ್ಪು ಕ್ಯಾರೆಟ್‌ನ್ನು ಕೀಳಬಹುದು. ಪ್ರತಿ ಎಕರೆಗೆ 196 ಕ್ವಿಂಟಲ್‌ನಷ್ಟು ಕಪ್ಪು ಕ್ಯಾರೆಟ್‌ನ್ನು ಬೆಳೆಯಬಹುದಾಗಿದೆ. ಇದರ ಎಲೆಗಳು ಅಚ್ಚ ಹಸುರಾಗಿರುತ್ತವೆ.

  • ಚುನಾವಣಾ ಸಂಬಂಧಿ ಅಂತರ್ಜಾಲ ತಾಣ ಆರಂಭಿಸಿದ ಗೂಗಲ್ : ಫೇಸ್‌ಬುಕ್‌ ಬಳಿಕ ಇದೀಗ ಗೂಗಲ್‌ ಕೂಡ ಚುನಾವಣೆಗೆ ಸಂಬಂಧಿಸಿದ ಅಂತರ್ಜಾಲ ತಾಣ ಆರಂಭಿಸಿದೆ. ಚುನಾವಣೆ ಮತ್ತು ರಾಜಕೀಯ ಪಕ್ಷಗಳ ಕುರಿತು ಭಾರತೀಯ ಬಳಕೆದಾರರು ಈ ತಾಣದಿಂದ ಸಮಗ್ರ ಮಾಹಿತಿ ಪಡೆಯಬಹುದು ಎಂದು ಗೂಗಲ್‌ ತನ್ನ ಅಧಿಕೃತ ಬ್ಲಾಗ್‌ನಲ್ಲಿ ತಿಳಿಸಿದೆ.

  • ಅಮೆರಿದ ಮೊದಲ ಮುದ್ರಿತ ಪುಸ್ತಕ 88.40 ಕೋಟಿ ರೂಪಾಯಿಗಳಿಗೆ ಹರಾಜು: ಅಮೆರಿದ ಮೊದಲ ಮುದ್ರಿತ ಪುಸ್ತಕ 88.40 ಕೋಟಿ ರೂ.ಗೆ ಹರಾಜಾಗಿದೆ. ಈ ಮೂಲಕ 1640 ರಲ್ಲಿ ಪಕಟಗೊಂಡ ‘ದ ಬೆ ಪಸ್ಲಮ್ಸ್‌’ ವಿಶ್ವದ ಅತ್ಯಂತ ದುಬಾರಿ ಪುಸ್ತಕ ಎನಿಸಿಕೊಂಡಿದೆ. ಅಮೆರಿಕದಲ್ಲಿ ಮೊದಲ ಮುದ್ರಣಗೊಂಡ ಪುಸ್ತಕದ 11 ಪ್ರತಿಗಳು ಮಾತ್ರ ಈಗ ಲಭ್ಯವಿದ್ದು, ಅವುಗಳಲ್ಲಿ ಒಂದು ಪುಸ್ತಕವನ್ನು ಹರಾಜು ಹಾಕಲಾಗಿದೆ. ಅಮೆರಿಕದ ಉದ್ಯಮಿ ಡೇವಿಡ್‌ ರುಬೆನ್‌ಸ್ಟೆನ್‌ 88.40 ಕೋಟಿ ರೂ.ಗೆ ಖರೀದಿಸಿದ್ದಾರೆ. ದ ಬೆ ಪಸ್ಲಮ್ಸ್‌ ಮೂಲ ಹಿಬ್ರೂ ಭಾಷೆಯಲ್ಲಿದೆ. 2010ರಲ್ಲಿ ಜೋನ್‌ ಜೇಮ್ಸ್‌ ಅವರ ಆಡುಬಾನ್ಸ್‌ ಬರ್ಡ್ಸ್‌ ಆಫ್ ಅಮೆರಿಕ 66 ಕೋಟಿಗೆ ಹರಾಜಾಗಿತ್ತು.

  • ಪಾಕಿಸ್ತಾನದ ನೂತನ ಸೇನಾ ಮುಖ್ಯಸ್ಥರನ್ನಾಗಿ ಲೆ.ಜ| ರಹೀಲ್‌ ಶರೀಫ್ ನೇಮಕ: ಪಾಕಿಸ್ತಾನದ ನೂತನ ಸೇನಾ ಮುಖ್ಯಸ್ಥರನ್ನಾಗಿ ಲೆ.ಜ| ರಹೀಲ್‌ ಶರೀಫ್ ಅವರನ್ನು ಪ್ರಧಾನಿ ನವಾಜ್‌ ಶರೀಫ್ ನೇಮಕ ಮಾಡಿದ್ದಾರೆ. ಜತೆಗೆ ಜಂಟಿ ಸೇನಾ ಮುಖ್ಯಸ್ಥರ ಸಮಿತಿಯ ಅಧ್ಯಕ್ಷರಾಗಿ ಲೆ.ಜ| ರಶೀದ್‌ ಮೆಹಮೂದ್‌ ಅವರನ್ನು ನೇಮಿಸಲಾಗಿದೆ. ಈ ಇಬ್ಬರ ನೇಮಕಕ್ಕೆ ಅಧ್ಯಕ್ಷ ಮಮೂನ್‌ ಹುಸೇನ್‌ ಅನುಮತಿ ನೀಡಿದ್ದಾರೆ. ಸೇನಾಮುಖ್ಯಸ್ಥ ಹುದ್ದೆಯಿಂದ ಶುಕ್ರವಾರ ನಿವೃತ್ತರಾದ ಅಶ್ಫಾಖ್‌ ಪರ್ವೇಜ್‌ ಕಯಾನಿ ಅವರ ಸ್ಥಾನವನ್ನು ರಹೀಲ್‌ ಶರೀಫ್ ತುಂಬಲಿದ್ದಾರೆ.



ಪ್ರಚಲಿತ ವಿದ್ಯಮಾನಗಳು ನವೆಂಬರ್ 20, 2013


ಫಾರ್ಮುಲಾ ಒನ್ ರೇಸ್ ನ ವಿಶ್ವ ಚಾಂಪಿಯನ್ ಆಗಿ ರೆಡ್‌ಬುಲ್‌ ತಂಡದ ಸೆಬಾಸ್ಟಿಯನ್‌ ವೆಟಲ್‌
ರೆಡ್‌ಬುಲ್‌ ತಂಡದ ಸೆಬಾಸ್ಟಿಯನ್‌ ವೆಟಲ್‌ ನಿರೀಕ್ಷೆಯಂತೆ ಬ್ರೆಜಿಲಿಯನ್‌ ಗ್ರ್ಯಾನ್‌ ಪ್ರೀಯಲ್ಲೂ ಪ್ರಶಸ್ತಿ ಗೆಲ್ಲುವ ಮೂಲಕ ಸತತ 9ನೇ ರೇಸ್‌ ಗೆದ್ದ ದಾಖಲೆ ಸರಿಗಟ್ಟಿ ಸತತ ನಾಲ್ಕನೇ ಬಾರಿಗೆ ವಿಶ್ವ ಚಾಂಪಿಯನ್‌ ಪಟ್ಟ ಅಲಂಕರಿಸಿದ್ದಾರೆ. ಬ್ರೆಜಿಲ್ ನಲ್ಲಿ ನಡೆದ ಪ್ರಸಕ್ತ ಸಾಲಿನ ಅಂತಿಮ ರೇಸ್‌ನಲ್ಲಿ ಅಗ್ರಸ್ಥಾನಿಯಾಗಿ ರೇಸ್‌ ಆರಂಭಿಸಿದ ಸೆಬಾಸ್ಟಿಯನ್‌ ವೆಟಲ್‌ ತಮ್ಮದೇ ತಂಡದ ಮಾರ್ಕ್‌ ವೆಬ್ಬರ್‌ ಅವರ ಸವಾಲನ್ನು ದಿಟ್ಟವಾಗಿ ಹಿಮ್ಮೆಟ್ಟಿಸಿ 71 ಲ್ಯಾಪ್‌ಗ್ಳನ್ನು ಮೊದಲಿಗರಾಗಿ ಪೂರೈಸಿದರು. ಇದರೊಂದಿಗೆ ವೆಟಲ್‌ 60 ವರ್ಷದ ಹಿಂದೆ ಅಲೆರ್ಟೊ ಅಸ್ಕಿರಿ ನಿರ್ಮಿಸಿದ್ದ ಸತತ 9ರೇಸ್‌ಗಳ ಜಯದ ದಾಖಲೆಯನ್ನು ಸರಿಗಟ್ಟಿದರು. ಇದು ವೆಟಲ್‌ಗೆ 39ನೇ ಪ್ರಶಸ್ತಿಯಾಗಿದ್ದು, ಸತತ ನಾಲ್ಕು ಬಾರಿ ವಿಶ್ವ ಚಾಂಪಿಯನ್‌ ಪಟ್ಟ ಅಲಂಕರಿಸುವ ಮೂಲಕ ಸಾರ್ವಕಾಲಿಕ ಶ್ರೇಷ್ಠ ಚಾಲಕರ ಸಾಲಿನಲ್ಲಿ ಸ್ಥಾನ ಗಿಟ್ಟಿಸಿದರು. ತೀವ್ರ ಸ್ಪರ್ಧೆ ಒಡ್ಡಿದ ಮಾರ್ಕ್‌ ವೆಬ್ಬರ್‌ ಎರಡನೇ ಸ್ಥಾನಕ್ಕೆ ಕುಸಿದರೆ, ಫ‌ರ್ನಾಂಡೊ ಅಲೊನ್ಸೊ 3ನೇ ಸ್ಥಾನ ಗಳಿಸಿದರು.
ದಾಖಲೆ ಸರಿಗಟ್ಟಿದ ವೆಟಲ್:
  • 2004ರಲ್ಲಿ ಶೂಮಾಕರ್ ಅವರು ಋತು ಒಂದರಲ್ಲಿ ಸತತ 7 ಜಯ ಸಾಧಿಸಿದ್ದ ದಾಖಲೆಯನ್ನು ಕಳೆದ ವಾರ ನಡೆದ ಅಮೆರಿಕ ಜಿಪಿಯಲ್ಲೇ ಮುರಿದಿದ್ದ ವೆಟಲ್ ಅವರು ಈ ವರ್ಷ ಆಕರ್ಷಕ ಪ್ರದರ್ಶನ ತೋರಿದ್ದಾರೆ.
  • ಶೂಮಾಕರ್ ದಾಖಲೆ ಸರಿಗಟ್ಟಿದ್ದಲ್ಲದೆ, ಭಾರತದಲ್ಲಿ ನಡೆದ ಗ್ರ್ಯಾನ್ ಫ್ರೀ ಗೆಲ್ಲುವ ಮೂಲಕ 26 ವರ್ಷದ ವೆಟಲ್ ನಾಲ್ಕು ಬಾರಿ ವಿಶ್ವ ಚಾಂಪಿಯನ್ ಎನಿಸಿದ ವಿಶ್ವದ ಅತಿ ಕಿರಿಯ ಚಾಲಕ ಎನಿಸಿದರು.
  • ಈ ಋತುವಿನಲ್ಲಿ ಅತ್ಯದ್ಭುತ ಪ್ರದರ್ಶನ ವೆಟಲ್ ಅವರು ಮಾಜಿ ಖ್ಯಾತ ಚಾಲಕ ಮೈಕೆಲ್ ಶೂಮಾಕರ್ ದಾಖಲೆ ಸರಿಗಟ್ಟಿದ್ದಾರೆ. ಈ ವರ್ಷ ಸತತ 13 ಜಯ ಕಂಡ ವೆಟಲ್ ಅವರು ಮೈಕೆಲ್ ಶೂಮಾಕರ್ ಋತು ಒಂದರಲ್ಲಿ ಮಾಡಿದ ದಾಖಲೆಯನ್ನು ಸರಿಗಟ್ಟಿದ್ದಾರೆ.
  • ಅಲ್ಲದೆ ಸತತ 9 ಗ್ರ್ಯಾನ್ ಫ್ರಿಗಳಲ್ಲಿ ಜಯ ಕಾಣುವ ಮೂಲಕ ಅಲ್ಬೆರ್ಟೋ ಆಸ್ಕರಿ ಅವರ ದಾಖಲೆಯನ್ನೂ ಸರಿಗಟ್ಟಿದರು.
2013ರಲ್ಲಿ ಚಾಲಕರ ಸಾಧನೆ:
  1. ಸೆಬಾಸ್ಟಿಯನ್ ವೆಟಲ್ ಜರ್ಮನಿ ರೆಡ್‌ಬುಲ್ 397
  2. ಫರ್ನಾಂಡೋ ಅಲೊನ್ಸೋ ಸ್ಪೇನ್ ಫೆರಾರಿ 242
  3. ಮಾರ್ಕ್ ವೆಬರ್ ಆಸ್ಟ್ರೇಲಿಯಾ ರೆಡ್‌ಬುಲ್ 199
  4. ಲೂಯಿಸ್ ಹ್ಯಾಮಿಲ್ಟನ್ ಇಂಗ್ಲೆಂಡ್ ಮರ್ಸಿಡೀಸ್ 189
  5. ಕಿಮಿ ರೈಕೋನೆನ್ ಫಿನ್‌ಲ್ಯಾಂಡ್ ಲೋಟಸ್ ರೆನಾಲ್ಟ್ 183
  6. ಪಾಲ್ ಡಿ ರೆಸ್ಟಾ ಇಂಗ್ಲೆಂಡ್ ಫೋರ್ಸ್ ಇಂಡಿಯಾ 48
  7. ಆಯಡ್ರಿಯನ್ ಸುಟಿಲ್ ಜರ್ಮನಿ ಫೋರ್ಸ್ ಇಂಡಿಯಾ 29
ಋತುವಿನಲ್ಲಿ ಅಗ್ರ 5 ಸ್ಥಾನ ಪಡೆದ ತಂಡಗಳು:
1-ರೆಡ್‌ಬುಲ್-596, 2-ಮರ್ಸಿಡೀಸ್-360, 3-ಫೆರಾರಿ-354, 4-ಲೋಟಸ್-315, 5-ಮೆಕ್‌ಲಾರೆನ್ 122, 6-ಫೋರ್ಸ್ ಇಂಡಿಯಾ-77

ಇಸ್ಲಾಂ ಧರ್ಮ ಹಾಗೂ ಮುಸಲ್ಮಾನರಿಗೆ ನಿಷೇಧ ಹೇರಿದ ಅಂಗೋಲಾ ದೇಶ
islam banಆಫ್ರಿಕಾ ಖಂಡದಲ್ಲಿರುವ ಅಂಗೋಲಾ ಎಂಬ ಪುಟ್ಟ ರಾಷ್ಟ್ರ, ಇಸ್ಲಾಂ ಧರ್ಮ ಹಾಗೂ ಮುಸಲ್ಮಾನರಿಗೆ ನಿಷೇಧ ಹೇರಿದೆ. ಇದರ ಬೆನ್ನಲ್ಲೇ ದೇಶಾದ್ಯಂತ ಇರುವ ಮಸೀದಿಗಳನ್ನು ಒಡೆಯಲು ಆದೇಶಿಸಿದೆ. ತನ್ಮೂಲಕ ಇಂತಹ ತೀರ್ಮಾನ ಕೈಗೊಂಡ ವಿಶ್ವದ ಮೊದಲ ದೇಶ ಎನಿಸಿಕೊಂಡಿದೆ.
ಪ್ರಥಮ ರಾಷ್ಟ್ರ:
‘ನ್ಯಾಯ ಹಾಗೂ ಮಾನವ ಹಕ್ಕುಗಳ ಸಚಿವಾಲಯ ಇಸ್ಲಾಂ ಧರ್ಮವನ್ನು ಕಾನೂನುಬದ್ಧಗೊಳಿಸುವ ಪ್ರಕ್ರಿಯೆಗೆ ಅನುಮತಿ ನೀಡಿಲ್ಲ. ಹೀಗಾಗಿ ಹೊಸದಾಗಿ ಆದೇಶ ನೀಡುವವರೆಗೂ ಮಸೀದಿಗಳನ್ನು ಮುಚ್ಚಲಾಗುತ್ತದೆ’ ಎಂದು ಅಂಗೋಲಾದ ಸಂಸ್ಕೃತಿ ಸಚಿವೆ ರೋಸಾ ಕ್ರೂಜ್‌ ಎ ಸಿಲ್ವಾ ಅವರು ತಿಳಿಸಿದ್ದಾರೆ ಎಂದು ಹಲವಾರು ಸುದ್ದಿ ಸಂಸ್ಥೆಗಳು ಹಾಗೂ ಅಂಗೋಲಾದ ದಿನಪತ್ರಿಕೆಗಳು ವರದಿ ಮಾಡಿವೆ. ದೇಶದಲ್ಲಿರುವ ಅಕ್ರಮ ಧಾರ್ಮಿಕ ಪಂಗಡಗಳನ್ನು ನಿಷೇಧಿಸುವ ಒಂದು ಭಾಗವಾಗಿ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ ಎಂದು ಕಳೆದ ವಾರ ನಡೆದ ರಾಷ್ಟ್ರೀಯ ವಿಧಾನಸಭೆಯ ಆರನೇ ಆಯೋಗದಲ್ಲಿ ತಿಳಿಸಿದ್ದಾರೆ.
ನಿಷೇಧದ ಕಾರಣ:
ಜನರು ಜಮಾವಣೆಗೊಂಡು ಆರಾಧನೆಯಲ್ಲಿ ತೊಡಗುವುದು ಅಂಗೋಲಾ ಸಂಸ್ಕೃತಿ, ಸಂಪ್ರದಾಯಕ್ಕೆ ವಿರುದ್ಧವಾದುದು. ಆದರೂ ಜನರ ಜಮಾವಣೆ ಸಂಪ್ರದಾಯ ಉದಯಿಸಿದ ಹಿನ್ನೆಲೆಯಲ್ಲಿ ಅದನ್ನು ಎದುರಿಸುವ ಸಲುವಾಗಿ ಇಂತಹ ಕ್ರಮದ ಅಗತ್ಯ ಸೃಷ್ಟಿಯಾಯಿತು ಎಂದು ಸಮರ್ಥಿಸಿಕೊಂಡಿದ್ದಾರೆ. ಇಸ್ಲಾಂ ಒಂದೇ ಅಲ್ಲ, ಹಲವಾರು ಧರ್ಮಗಳನ್ನು ಅಕ್ರಮ ಎಂದು ಘೋಷಿಸಲಾಗಿದೆ. ಹೀಗಾಗಿ ಅವುಗಳ ಧಾರ್ಮಿಕ ಕೇಂದ್ರಗಳೂ ಮುಚ್ಚಲಿವೆ. ಕಾನೂನುಬದ್ಧಗೊಳಿಸುವಂತೆ ಕೋರಿ ವಿವಿಧ ಧರ್ಮಗಳಿಂದ ಸಾವಿರಾರು ಅರ್ಜಿಗಳು ಸರ್ಕಾರಕ್ಕೆ ಬಂದಿವೆ ಎಂದು ಅವರು ಹೇಳಿದ್ದಾರೆ. ಈ ಕುರಿತು ಪ್ರತಿಕ್ರಿಯಿಸಿರುವ ಅಂಗೋಲಾದ ಅಧ್ಯಕ್ಷ ಜೋಸ್‌ ಎಜುವಾಡೋ ಡೊಸ್‌ ಸ್ಯಾಂಟೋಸ್‌ ಅವರು, ದೇಶದ ಮೇಲಿನ ಇಸ್ಲಾಮಿಕ್‌ ಪ್ರಭಾವಕ್ಕೆ ಇದು ಅಂತಿಮ ಅಂತ್ಯ ಎಂದು ಹೇಳಿದ್ದಾರೆ.
ಎಲ್ಲಿದೆ ಅಂಗೋಲಾ?
ಪೋರ್ಚುಗಲ್‌ನ ವಸಾಹತು ರಾಷ್ಟ್ರವಾಗಿದ್ದ ಅಂಗೋಲಾ ಮಧ್ಯ ಆಫ್ರಿಕಾದಲ್ಲಿದೆ. ನಮೀಬಿಯಾ, ಕಾಂಗೋ, ಜಾಂಬಿಯಾದ ಜತೆ ಗಡಿ ಹಂಚಿಕೊಂಡಿದೆ. ಅಟ್ಲಾಂಟಿಕ್‌ ಕರಾವಳಿ ತೀರವನ್ನೂ ಹೊಂದಿದೆ. 1975ರ ನವೆಂಬರ್ 11 ರಂದು ಪೋರ್ಚುಗಲ್‌ನಿಂದ ಸ್ವಾತಂತ್ರ್ಯ ಪಡೆಯಿತು. ಈ ದೇಶದ ಒಟ್ಟು ಜನಸಂಖ್ಯೆ 1.8 ಕೋಟಿ.

ಚೂರು-ಪಾರು ಸುದ್ಧಿಗಳು:
  • barbie‘ಆ್ಯಪಲ್” ಜಗತ್ತಿನ ಅತ್ಯಂತ ಬೆಲೆಬಾಳುವ ಬ್ರ್ಯಾಂಡ್: ಜಾಗತಿಕ ತಂತ್ರಜ್ಞಾನ ದಿಗ್ಗಜ ಸಂಸ್ಥೆ ‘ಆ್ಯಪಲ್‌’, ಜಗತ್ತಿನ ಅತಿ ಬೆಲೆಬಾಳುವ ಬ್ರ್ಯಾಂಡ್‌ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಫೋಬ್ಸ್ ನಿಯತಕಾಲಿಕ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿ 10,430 ಕೋಟಿ ಡಾಲರ್‌ (ಅಂದಾಜು ರೂ.6.5 ಲಕ್ಷ ಕೋಟಿ) ಬ್ರ್ಯಾಂಡ್‌ ಮೌಲ್ಯ ಹೊಂದಿರುವ ‘ಆ್ಯಪಲ್‌’ ಮೊದಲ ಸ್ಥಾನದಲ್ಲಿದ್ದರೆ, ನಂತರ ಸ್ಥಾನಗಳಲ್ಲಿ ಮೈಕ್ರೊಸಾಫ್ಟ್‌, ಕೋಕ- ಕೋಲಾ, ಐಬಿಎಂ , ಗೂಗಲ್ ಇವೆ. ಭಾರತದ ಯಾವ ಕಂಪೆನಿಯೂ 100 ಕಂಪೆನಿಗಳ ಪಟ್ಟಿಯಲ್ಲಿ ಇಲ್ಲ.  ಆಯಪಲ್‌ ತನ್ನ ಬ್ರ್ಯಾಂಡ್‌ ಮೌಲ್ಯವನ್ನು ಕಳೆದ ಒಂದು ವರ್ಷದಲ್ಲಿ ಶೇ. 20ರಷ್ಟು ಏರಿಸಿಕೊಂಡಿದೆ. ಉಳಿದಂತೆ ಉನ್ನತ 10 ಮೌಲ್ಯಯುತ ಬ್ರ್ಯಾಂಡ್‌ ಗಳಲ್ಲಿ ಮೆಕ್‌ ಡೊನಾಲ್ಡ್‌, ಜನರಲ್‌ ಇಲೆಕ್ಟ್ರಾನಿಕ್ಸ್‌, ಇಂಟೆಲ್‌, ಸ್ಯಾಮ್‌ಸಂಗ್‌, ಲೂಯಿಸ್‌ ವಿಟಾನ್‌ ಸ್ಥಾನ ಪಡೆದಿವೆ. ಫೋಬ್ಸ್ ಬಿಡುಗಡೆ ಮಾಡಿರುವ 100 ಬ್ರ್ಯಾಂಡ್‌ ಗಳ ಪಟ್ಟಿಯಲ್ಲಿ ಅಮೆರಿಕ ಮೂಲದ ಕಂಪನಿಗಳು 50 ಕ್ಕಿಂತಲೂ ಹೆಚ್ಚಿದ್ದು, 9 ಬ್ರ್ಯಾಂಡ್‌ ಗಳನ್ನು ಹೊಂದಿರುವ ಜರ್ಮನಿ 2ನೇ ಸ್ಥಾನ ಮತ್ತು ಫ್ರಾನ್ಸ್‌ ಮತ್ತು ಜಪಾನ್‌ ನಂತರದ ಸ್ಥಾನದಲ್ಲಿದೆ. ಭಾರತದ ಯಾವುದೇ ಕಂಪನಿ ಫೋಬ್ಸ್ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿಲ್ಲ.

  • ದೆಹಲಿ ದೂರದರ್ಶನ ಕೇಂದ್ರದ ಹೆಚ್ಚುವರಿ ಮಹಾ ನಿರ್ದೇಶಕರಾಗಿ ಡಾ| ಮಹೇಶ್‌ ಜೋಶಿ: ದೆಹಲಿ ದೂರದರ್ಶನ ಕೇಂದ್ರದ ಹೆಚ್ಚುವರಿ ಮಹಾ ನಿರ್ದೇಶಕರಾಗಿ ಡಾ| ಮಹೇಶ್‌ ಜೋಶಿ ಅಧಿಕಾರ ವಹಿಸಿಕೊಂಡಿದ್ದಾರೆ. ಇದರೊಂದಿಗೆ ಅವರು ಈಶಾನ್ಯ ಹಾಗೂ ದಕ್ಷಿಣ ವಲಯಗಳ ದೂರದರ್ಶನ ಕೇಂದ್ರಗಳ ಉಸ್ತುವಾರಿಯೂ ಆಗಿರುತ್ತಾರೆ. ದೆಹಲಿ ಸೇರಿದಂತೆ ಸುಮಾರು ಹತ್ತು ದೂರದರ್ಶನ ಕೇಂದ್ರಗಳು ಅವರ ಆಡಳಿತ ವ್ಯಾಪ್ತಿಗೆ ಬರಲಿವೆ. ಇಂತಹ ಮಹತ್ತರ ಹುದ್ದೆ ಅಲಂಕರಿಸಿದ ಮೊದಲ ಕನ್ನಡಿಗ ಎಂಬ ಹೆಮ್ಮೆಗೂ ಅವರು ಭಾಜನರಾಗಿದ್ದಾರೆ. ಬೆಂಗಳೂರು ದೂರದರ್ಶನ ಕೇಂದ್ರದ ಮುಖ್ಯಸ್ಥರಾಗಿದ್ದ ಅವರು, ನಂತರ ಬಡ್ತಿ ಹೊಂದಿ ದಕ್ಷಿಣ ವಲಯದ ಹೆಚ್ಚುವರಿ ಮಹಾ ನಿರ್ದೇಶಕರಾಗಿದ್ದರು. ಸ್ವತಃ ಗಾಯಕರೂ ಆಗಿರುವ ಜೋಶಿ, ಮಧುರ ಮಧುರವೀ ಮಂಜುಳಗಾನ, ಹುತಾತ್ಮ ಯೋಧರ ಸ್ಮರಣಾಂಜಲಿ ಕಾರ್ಯಕ್ರಮಗಳ ಮೂಲಕ ಖಾಸಗಿ ವಾಹಿನಿಗಳ ಭರಾಟೆಯ ನಡುವೆಯೂ ದೂರದರ್ಶನವನ್ನು ಜನರ ಬಳಿಗೆ ಕೊಂಡೊಯ್ದ ಹೆಗ್ಗಳಿಕೆ ಹೊಂದಿದ್ದಾರೆ. ಹೀಗಾಗಿಯೇ ಅವರ ಬಗ್ಗೆ ದೂರದರ್ಶನವನ್ನು ಸಮೀಪ ದರ್ಶನವಾಗಿಸಿದರು ಎಂಬ ಮಾತಿದೆ.

  • ಕರ್ನಾಟಕದ ಮಡಿಲಿಗೆ ‘ಕಾಳು ಮೆಣಸಿನ ರಾಜ’ ಪಟ್ಟ:  ‘ಕಾಳು ಮೆಣಸಿನ ರಾಜ’ ಪಟ್ಟ ಕೇರಳದ ಕೈತಪ್ಪಿ ಕರ್ನಾಟಕದ ಮಡಿಲಿಗೆ ಬಿದ್ದಿದೆ. ಇಳುವರಿ ಲೆಕ್ಕಾಚಾರದಲ್ಲಿ ಕರ್ನಾಟಕದ ಕಾಳು ಮೆಣಸು ಉತ್ಪಾದನೆ ಕೇರಳಕ್ಕಿಂತ ಹೆಚ್ಚಾಗಿದ್ದು, ದೇಶದಲ್ಲೇ ಮೊದಲ ಸ್ಥಾನ ಪಡೆದಿದೆ. ಸಂಬಾರ ಮಂಡಳಿ ಅಂಕಿ-ಅಂಶಗಳ ಪ್ರಕಾರ ಐದು ವರ್ಷದಲ್ಲಿ ಕರ್ನಾಟಕದ ಕಾಳು ಮೆಣಸು ಇಳುವರಿ ಎಂಟು ಪಟ್ಟು ಹೆಚ್ಚಿದೆ. 2007-08ನೇ ಸಾಲಿನಲ್ಲಿ 16,320 ಹೆಕ್ಟೇರ್‌ನಲ್ಲಿ 3624 ಟನ್‌ ಕಾಳು ಮೆಣಸು ಬೆಳೆದಿದ್ದ ಕರ್ನಾಟಕ ಈ ವರ್ಷ 21,000 ಹೆಕ್ಟೇರ್‌ನಲ್ಲಿ 25,000 ಟನ್‌ ಇಳುವರಿ ಸಾಧಿಸಿ ದಾಖಲೆ ಮಾಡಿದೆ. ಹವಾಮಾನ ಪ್ರತಿಕೂಲವಾಗಿದ್ದರೂ ಮುಂದಿನ ವರ್ಷವೂ ಕರ್ನಾಟಕದಿಂದ 20,000- 22,000 ಟನ್‌ ಇಳುವರಿ ಸಿಗುವ ನಿರೀಕ್ಷೆಯಿದೆ. ಕರ್ನಾಟಕದಲ್ಲಿ ಕಾಳುಮೆಣಸು ಇಳುವರಿ ಹೆಚ್ಚಿರುವುದು ಗಮನಾರ್ಹ. 2002ರಲ್ಲಿ ದೇಶದಲ್ಲಿ 2.18 ಲಕ್ಷ ಹೆಕ್ಟೇರ್‌ ಕೃಷಿ ಭೂಮಿಯಲ್ಲಿ ಕಾಳು ಮೆಣಸು ಬೆಳೆಯುತ್ತಿದ್ದರು. 2012ರಲ್ಲಿ ಇದು 1.71 ಲಕ್ಷ ಹೆಕ್ಟೇರ್‌ಗಿಳಿದಿದೆ.



ಪ್ರಚಲಿತ ವಿದ್ಯಮಾನಗಳು ನವೆಂಬರ್ 19, 2013


ವಾಣಿಜ್ಯ, ಇಂಜಿನಿಯರಿಂಗ್‌, ವೈದ್ಯಕೀಯ ಪದವಿದರರಿಗೂ ‘ಬಿ.ಎಡ್ ಭಾಗ್ಯ’
ವಾಣಿಜ್ಯ, ಇಂಜಿನಿಯರಿಂಗ್‌, ವೈದ್ಯಕೀಯ ಪದವಿ ಪಡೆದವರೂ ಇನ್ನು ಮುಂದೆ ಅಪೇಕ್ಷೆ ಪಟ್ಟಲ್ಲಿ ಬಿ.ಎಡ್‌ ಅಧ್ಯಯನ ಮಾಡಬಹುದು. ಕಲಾ ಹಾಗೂ ವಿಜ್ಞಾನ ಪದವಿಯಲ್ಲಿ ನಿರ್ದಿಷ್ಟ ಐಚ್ಛಿಕ ವಿಷಯಗಳನ್ನು ಅಧ್ಯಯನ ಮಾಡಿದವರಷ್ಟೇ ಬಿ.ಎಡ್‌ ಮಾಡಬೇಕೆಂಬ ಕಡ್ಡಾಯ ನಿಯಮವನ್ನು ಸಡಿಲಿಸಿರುವ ಸರ್ಕಾರ, ಯಾವುದೇ ಪದವಿ ಅಥವಾ ಸ್ನಾತಕೋತ್ತರ ಪದವಿ ಪೂರೈಸಿರುವ ಅಭ್ಯರ್ಥಿಗಳೂ ಇನ್ನು ಮುಂದೆ ಬಿ.ಎಡ್‌ ಶಿಕ್ಷಣಕ್ಕೆ ಪ್ರವೇಶ ಪಡೆಯಹುದೆಂಬ ಮುಕ್ತ ಅವಕಾಶ ನೀಡಿ ಆದೇಶ ಹೊರಡಿಸಿದೆ.
ಆದೇಶದ ಬಗ್ಗೆ:
  • ಹೊಸ ಆದೇಶದ ಪ್ರಕಾರ ಕಲಾ ಮತ್ತು ವಿಜ್ಞಾನೇತರ ಪದವಿ ಪಡೆದ ಹಾಗೂ ಕಲಾ ಹಾಗೂ ವಿಜ್ಞಾನ ಪದವಿಯಲ್ಲಿ ನಿರ್ದಿಷ್ಟ ಐಚ್ಛಿಕ ವಿಷಯಗಳ ಹೊರತಾಗಿ ಯಾವುದೇ ಐಚ್ಛಿಕ ವಿಷಯಗಳನ್ನು ಅಧ್ಯಯನ ಮಾಡಿರುವ ಅಭ್ಯರ್ಥಿಗಳೂ ಬಿ.ಎಡ್‌ ಶಿಕ್ಷಣಕ್ಕೆ ಅರ್ಹರಾಗುತ್ತಾರೆ.
  • ಹಾಗಾಗಿ ಪದವಿಯಲ್ಲಿ ನಿರ್ದಿಷ್ಟ ಶಿಕ್ಷಣ ಪಡೆಯದ ಕಾರಣ ಬಿ.ಎಡ್‌ ಶಿಕ್ಷಣಕ್ಕೆ ಪ್ರವೇಶ ಪಡೆಯಲು ಅರ್ಹತೆ ಇಲ್ಲದೆ ನಿರಾಶರಾಗಿದ್ದ ಯಾವುದೇ ಪದವೀಧರರೂ ಪ್ರಸಕ್ತ ಶೈಕ್ಷಣಿಕ ವರ್ಷದಿಂದ ಬಿ.ಎಡ್‌ ಶಿಕ್ಷಣಕ್ಕೆ ಪ್ರವೇಶ ಪಡೆಯಬಹುದು.
  • ಅಲ್ಲದೆ ಈವರೆಗೆ ಬಿ.ಎಡ್‌ ಶಿಕ್ಷಣ ಅವಕಾಶ ವಂಚಿತರಾಗಿದ್ದ ವಾಣಿಜ್ಯ(ಬಿಕಾಂ, ಬಿಬಿಎಂ ಮತ್ತಿತರ), ತಾಂತ್ರಿಕ(ಬಿಇ, ಎಂಇ, ಎಂಟೆಕ್‌), ವೈದ್ಯಕೀಯ (ಎಂಬಿಬಿಎಸ್‌, ಬಿಎಸ್ಸಿ ಮತ್ತು ಎಂಎಸ್ಸಿ ನರ್ಸಿಂಗ್‌, ಎಂ.ಡಿ, ಎಂಎಸ್‌ ಮತ್ತಿತರ) ಮತ್ತಿತರ ಪದವಿ ಹಾಗೂ ಸ್ನಾತಕೋತ್ತರ ಪದವೀಧರರೂ ಬಿ.ಎಡ್‌ ಶಿಕ್ಷಣ ಪಡೆಯಬಹುದು .
ನಿಯಮ ಸಡಿಸಲಿಸಲು ಏನು ಕಾರಣ?
ಬಿ.ಎಡ್‌ ಶಿಕ್ಷಣದ ಪ್ರವೇಶಾತಿಗೆ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಪರಿಷತ್ತು(ಎನ್‌ಸಿಟಿಇ) ರಾಷ್ಟ್ರಾದ್ಯಂತ ಏಕರೂಪತೆ ಪಾಲಿಸಲು ಈಗಾಗಲೇ ಯಾವುದೇ ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದವರು ಅರ್ಹರೆಂದು ಘೋಷಿಸಿದೆ. ಆದರೆ ಕರ್ನಾಟಕದಲ್ಲಿ ಈವರೆಗೆ ಪ್ರೌಢಶಾಲೆಯಲ್ಲಿ ಬೋಧಿಸುವ ವಿಷಯಗಳನ್ನು ಪದವಿಯಲ್ಲಿ ಅಧ್ಯಯನ ಮಾಡಿದವರಿಗೆ ಮಾತ್ರ ಬಿ.ಎಡ್‌ ಪ್ರವೇಶ ನೀಡಲಾಗುತ್ತಿತ್ತು. ಇದೀಗ ರಾಜ್ಯ ಸರ್ಕಾರ ಪಿಯು ಉಪನ್ಯಾಸಕರಿಗೂ ಬಿ.ಎಡ್‌ ಶಿಕ್ಷಣ ಕಡ್ಡಾಯಗೊಳಿಸಿದೆ.
ಬಿ.ಎಡ್‌ ಗೆ ಹಿಂದಿನ ನಿಯಮ ಏನಿತ್ತು?
ಕಲಾ ಮತ್ತು ವಿಜ್ಞಾನ ಪದವಿಯಲ್ಲಿ ಇಂಗ್ಲೀಷ್‌, ಕನ್ನಡ, ಹಿಂದಿ, ಉರ್ದು, ಸಂಸ್ಕೃತ ಮತ್ತು ಮರಾಠಿ ಈ ಯಾವುದಾದರೂ ಒಂದು ಭಾಷೆಯ ಜತೆಗೆ ಅಧ್ಯಯ ಮಾಡುವ ಮೂರು ಐಚ್ಛಿಕ ವಿಷಯದಲ್ಲಿ ಇತಿಹಾಸ, ರಾಜ್ಯಶಾಸ್ತ್ರ, ಸಮಾಜಶಾಸ್ತ್ರ, ಭೂಗೋಳ ಶಾಸ್ತ್ರ, ಅರ್ಥಶಾಸ್ತ್ರ, ಭೌತಶಾಸ್ತ್ರ, ರಸಾಯನಶಾಸ್ತ್ರ, ಸಸ್ಯಶಾಸ್ತ್ರ, ಪ್ರಾಣಿಶಾಸ್ತ್ರ, ಗಣಿತ, ಜೀವಶಾಸ್ತ್ರ, ಕನ್ನಡ, ಹಿಂದಿ, ಉರ್ದು, ಸಂಸ್ಕೃತ ಮತ್ತು ಮರಾಠಿ(ಪ್ರೌಢಶಾಲೆಗಳಲ್ಲಿ ಬೋಧಿಸುವ ವಿಷಯಗಳು) ಇವುಗಳಲ್ಲಿ ಎರಡು ವಿಷಯಗಳನ್ನು ಅಧ್ಯಯನ ಮಾಡಿರುವುದು ಕಡ್ಡಾಯವಾಗಿತ್ತು.

‘ಟೈಮ್‌’ ಮ್ಯಾಗಜೀನ್ ನ ವರ್ಷದ ವ್ಯಕ್ತಿ ಪ್ರಶಸ್ತಿಯ ಅಂತಿಮ ಸುತ್ತಿಗೆ ನರೇಂದ್ರ ಮೋದಿ
modiಅಮೆರಿಕದ ಪ್ರತಿಷ್ಠಿತ ‘ಟೈಮ್‌’ ಮ್ಯಾಗಜೀನ್‌, ತನ್ನ ವರ್ಷದ ವ್ಯಕ್ತಿ ಪ್ರಶಸ್ತಿಗೆ ಅಂತಿಮ 42 ಜನರ ಪಟ್ಟಿಯೊಂದನ್ನು ಸಿದ್ಧಪಡಿಸಿದ್ದು, ಇದರಲ್ಲಿ ಬಿಜೆಪಿ ಪ್ರಧಾನಿ ಅಭ್ಯರ್ಥಿ ನರೇಂದ್ರ ಮೋದಿ ಸ್ಥಾನ ಪಡೆದುಕೊಂಡಿದ್ದಾರೆ. ಪಟ್ಟಿಯಲ್ಲಿ ಸ್ಥಾನ ಪಡೆದ ಏಕೈಕ ಭಾರತೀಯ ರಾಜಕಾರಣಿ, ಮೋದಿ.
ಮುಂದಿನ ತಿಂಗಳು ಘೋಷಣೆ:
ಮುಂದಿನ ತಿಂಗಳು ಟೈಮ್‌ ವರ್ಷದ ವ್ಯಕ್ತಿಯ ಅಂತಿಮ ಹೆಸರನ್ನು ಘೋಷಣೆ ಮಾಡಲಾಗುತ್ತದೆ. ನರೇಂದ್ರ ಮೋದಿ ಅವರನ್ನು, ‘ವಿವಾದಿತ ಹಿಂದೂ ರಾಷ್ಟ್ರೀಯವಾದಿ ನಾಯಕ’ ಎಂದು ನಿಯತಕಾಲಿಕೆ ಬಣ್ಣಿಸಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಆಡಳಿತಾರೂಢ ಕಾಂಗ್ರೆಸ್‌ ಅನ್ನು ಮಣಿಸಿ ಪ್ರಧಾನಿ ಸ್ಥಾನಕ್ಕೇರುವ ಸಾಧ್ಯತೆ ಹೆಚ್ಚಿದೆ ಎಂದು ಹೇಳಿದೆ.
ಪಟ್ಟಿಯಲ್ಲಿರುವ ಇತರರು:
ಉಳಿದಂತೆ ಪಟ್ಟಿಯಲ್ಲಿ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮಾ, ಪಾಕಿಸ್ತಾನದ ಮಕ್ಕಳ ಶಿಕ್ಷಣ ಹೋರಾಟಗಾರ್ತಿ ಮಲಾಲಾ ಯೂಸುಫ್ಝೈ, ಜಪಾನ್‌ ಪ್ರಧಾನಿ ಶಿಂಜೋ ಅಬೆ, ಅಮೆಜಾನ್‌ ಸಿಇಒ ಜೆಫ್ ಬೆಜೋಸ್‌, ಅಮೆರಿಕದ ರಾಷ್ಟ್ರೀಯ ಭದ್ರತಾ ಸಂಸ್ಥೆಯ ಮಾಜಿ ಉದ್ಯೋಗಿ ಎಡ್ವರ್ಡ್‌ ಸ್ನೋಡೆನ್‌ ಮತ್ತು ಇತ್ತೀಚೆಗಷ್ಟೇ ಜನ್ಮತಾಳಿದ ಬ್ರಿಟನ್‌ನ ಯುವರಾಜ ಜಾರ್ಜ್‌ ಸ್ಥಾನ ಪಡೆದುಕೊಂಡಿದ್ದಾರೆ.
ಆನ್‌ಲೈನ್‌ನಲ್ಲೂ ಮುಂಚೂಣಿ:
ಟೈಮ್‌ ವರ್ಷದ ವ್ಯಕ್ತಿಗೆ ಈಗಾಗಲೇ ಆನ್‌ಲೈನ್‌ ಮೂಲಕ ಬೆಂಬಲ ವ್ಯಕ್ತಪಡಿಸುವ ಪ್ರಕ್ರಿಯೆ ಆರಂಭಗೊಂಡಿದ್ದು, ನರೇಂದ್ರ ಮೋದಿ 2650 ಮತಗಳನ್ನು (ಚಲಾವಣೆಯಾಗಿದ್ದರಲ್ಲಿ ಶೇ.25ರಷ್ಟು ಪಾಲು) ಗಳಿಸುವ ಮೂಲಕ ಮುಂಚೂಣಿಯಲ್ಲಿದ್ದಾರೆ. ಎರಡನೇ ಸ್ಥಾನದಲ್ಲಿರುವ ಅಮೆರಿಕದ ಮಾಜಿ ಗೂಢಚರ ಎಡ್ವರ್ಡ್‌ ಸ್ನೋಡೆನ್‌ ಶೇ.7 ರಷ್ಟು ಮತ ಪಡೆದುಕೊಂಡಿದ್ದಾರೆ.

ಈ ವರ್ಷದ ಮೆಗಾ ಲೋಕ್ ಅದಾಲತ್ ನಲ್ಲಿ  92,192 ಪ್ರಕರಣಗಳ ಇತ್ಯರ್ಥ
lok adalatಸುಪ್ರೀಂಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ರಾಜ್ಯದ ನಾನಾ ನ್ಯಾಯಾಲಯಗಳಲ್ಲಿ ಮೂರು ತಿಂಗಳಿಂದ ನಡೆಯುತ್ತಿರುವ ಮೆಗಾ ಲೋಕ್ ಅದಾಲತ್‌ನಲ್ಲಿ 92,192 ಪ್ರಕರಣಗಳನ್ನು ರಾಜಿ ಪಂಚಾಯ್ತಿ ಮೂಲಕ ಇತ್ಯರ್ಥಗೊಳಿಸಲಾಗಿದೆ ಎಂದು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಎಚ್.ವಘೇಲ ತಿಳಿಸಿದ್ದಾರೆ.
ಲೋಕ್ ಅದಾಲತ್ ಮಾಹಿತಿ:
ಹೈಕೋರ್ಟ್ ಸೇರಿ ಪ್ರತಿ ಜಿಲ್ಲಾ ನ್ಯಾಯಾಲಯಗಳಲ್ಲಿ ಆಗಸ್ಟ್ 23ರಿಂದ ನವೆಂಬರ್ 23ರವರೆಗೆ ರಾಷ್ಟ್ರೀಯ ಮಟ್ಟದ ಮೆಗಾ ಲೋಕ್ ಅದಾಲತ್ ಹಮ್ಮಿಕೊಳ್ಳಲಾಗಿತ್ತು. ಇದರಿಂದ ಸಾವಿರಾರು ಕಕ್ಷಿದಾರರ ಜೊತೆಗೆ ನ್ಯಾಯಾಂಗ ಇಲಾಖೆಗೂ ನಿರಾಳತೆ ದೊರೆತಿದೆ. ಅಲ್ಲದೆ, ನ್ಯಾಯಾಲಯದಿಂದ ಹೊರಗೆ ಅತ್ಯಂತ ಶೀಘ್ರ ನ್ಯಾಯ ಪಡೆಯುವ ಪರ್ಯಾಯ ವ್ಯವಸ್ಥೆ ಇದೆ ಎಂಬುದರ ಕುರಿತು ರಾಜ್ಯದ ಜನತೆಗೆ ಸಂದೇಶ ದೊರೆತಂತಾಗಿದೆ.
ಪ್ರಕರಣಗಳು:
  • ಮೆಗಾ ಲೋಕ್ ಅದಾಲತ್‌ನಲ್ಲಿ 4,580 ಮೋಟಾರ್ ವೆಹಿಕಲ್ ಅಪಘಾತ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದ್ದು 48.53 ಕೋಟಿ ಮೊತ್ತದ ಪರಿಹಾರ ವಿತರಿಸಲಾಗಿದೆ.
  • 9,169 ವ್ಯಾಜ್ಯಪೂರ್ವ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ.
  • 202 ವೈವಾಹಿಕ ಪ್ರಕರಣಗಳು, 1,755 ನಿರ್ವಹಣಾ ವೆಚ್ಚದ ಪ್ರಕರಣಗಳನ್ನು ಇತ್ಯರ್ಥಗೊಳಿಸಲಾಗಿದೆ.
ರಾಜಿ ಮನಸ್ಸು ಮುಖ್ಯ:
ನ್ಯಾಯಾಲಯದ ಮೆಟ್ಟಿಲೇರುವ ವ್ಯಾಜ್ಯಗಳು ರಾಜಿ ಪಂಚಾಯ್ತಿಯಲ್ಲಿ ಇತ್ಯರ್ಥಗೊಂಡರೆ ಎಲ್ಲರಿಗೂ ಒಳ್ಳೆಯದು. ಇದಕ್ಕೆ ಕಕ್ಷಿದಾರರ ನ್ಯಾಯಯುತ ಬೇಡಿಕೆ ಹಾಗೂ ಅವರು ಬೇಡಿಕೆಗಳನ್ನು ಮುಂದಿಡುವ ರೀತಿ ಮುಖ್ಯವಾಗುತ್ತದೆ. ಕಕ್ಷಿದಾರರು ರಾಜಿಗೆ ಮನಸ್ಸು ಮಾಡದಿದ್ದಲ್ಲಿ ಇದರಿಂದ ಯಾವುದೇ ಪ್ರಯೋಜನವಿಲ್ಲ. ವರ್ಷಾನುಗಟ್ಟಲೇ ಎಳೆದಾಡುವ ಪ್ರಕರಣಗಳನ್ನು ಕೆಲ ಗಂಟೆಗಳ ಸಂಧಾನದಲ್ಲಿ ಬಗೆಹರಿಸಲು ಸಾಧ್ಯ ಎಂಬುದನ್ನು ಜನರು ಅರಿಯಬೇಕು ಎಂದು ಅವರು ಕರೆ ನೀಡಿದರು.
ಮುಖ್ಯ ಮಾಹಿತಿ:
  • ಬೆಂಗಳೂರು ಹೈಕೋರ್ಟ್‌ನಲ್ಲಿ 19, ಧಾರವಾಡ ಪೀಠದಲ್ಲಿ 3 ಹಾಗೂ ಗುಲ್ಬರ್ಗ ಪೀಠದಲ್ಲಿ 3 ಲೋಕ ಅದಾಲತ್ ಪೀಠ ಸ್ಥಾಪಿಸಲಾಗಿತ್ತು.
  • ಈ ಮೂರು ಪೀಠಗಳು 1,385 ಪ್ರಕರಣಗಳನ್ನು ಇತ್ಯರ್ಥಗೊಳಿಸಿವೆ. ಇದರಿಂದ ನ್ಯಾಯಾಲಯಗಳ ಸಾಕಷ್ಟು ಸಮಯ ಉಳಿತಾಯವಾಗಿದೆ.
  • ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ 2013ರ ಜುಲೈ 1ರಿಂದ 11.83 ಲಕ್ಷ ಪ್ರಕರಣಗಳು ವಿಚಾರಣೆಗೆ ಬಾಕಿ ಉಳಿದಿದ್ದು, ಇದರಲ್ಲಿ 82,714 ಪ್ರಕರಣಗಳನ್ನು ಲೋಕ ಅದಾಲತ್ ವಿಚಾರಣೆಗೆ ಆಯ್ಕೆ ಮಾಡಲಾಗಿತ್ತು. ರಾಜ್ಯ ಹೈಕೋರ್ಟ್‌ನಲ್ಲಿ ಬಾಕಿ ಇರುವ 1,70,312 ಪ್ರಕರಣಗಳ ಪೈಕಿ 5 ಸಾವಿರ ಪ್ರಕರಣಗಳನ್ನು ರಾಜಿ ಸಂಧಾನಕ್ಕೆ ಆಯ್ಕೆ ಮಾಡಲಾಗಿತ್ತು.
ಇತ್ಯರ್ಥವಾಗಿರುವ ಪ್ರಕರಣಗಳು:
ಬೆಂಗಳೂರು ನಗರ-ಸಿಎಂಎಂ ನ್ಯಾಯಾಲಯ-5,798, ಸಣ್ಣ ವ್ಯಾಜ್ಯಗಳ ನ್ಯಾಯಾಲಯ-7,592, ಸಿವಿಲ್ ನ್ಯಾಯಾಲಯ-1,500, ಬೆಂಗಳೂರು ಗ್ರಾಮಾಂತರ-4,647, ರಾಮನಗರ-1,685, ಬಳ್ಳಾರಿ-2,105, ಬೆಳಗಾವಿ-4,666, ಬೀದರ್-4,939, ಬಿಜಾಪುರ-2,361, ಬಾಗಲಕೋಟೆ-2,373, ಚಿಕ್ಕಮಗಳೂರು-1,776, ಚಿತ್ರದುರ್ಗ-1,814, ದಾರವಾಡ-3,388, ಹಾವೇರಿ-1,222, ದಾವಣಗೆರೆ-2,749, ಗದಗ-800, ಗುಲ್ಬರ್ಗಾ-2,849, ಹಾಸನ-6,176, ಕಾರವಾರ-2,108, ಕೊಪ್ಪಳ-1,182, ಕೊಡಗು-547, ಕೋಲಾರ-5,681, ಚಿಕ್ಕಬಳ್ಳಾಪುರ-1,240, ಮಂಗಳೂರು-1,663, ಉಡುಪಿ-1,626, ಮಂಡ್ಯ-1,295, ಮೈಸೂರು-4,830, ಚಾಮರಾಜನಗರ-1,597, ರಾಯಚೂರು-3,465, ಶಿವಮೊಗ್ಗ-2,797, ತುಮಕೂರು-3,705, ಯಾದಗಿರಿ-573, ಬೆಂಗಳೂರು ಹೈಕೋರ್ಟ್-837, ಧಾರವಾಡ ಹೈಕೋರ್ಟ್-270, ಗುಲ್ಬರ್ಗ ಹೈಕೋರ್ಟ್-278, ಕೌಟುಂಬಿಕ ನ್ಯಾಯಾಲಯ-17, ಕಾರ್ಮಿಕ ನ್ಯಾಯಾಲಯ-41.

ಪ್ರಚಲಿತ ವಿದ್ಯಮಾನಗಳು ನವೆಂಬರ್ 18, 2013

ಇರಾನ್ ಪರಮಾಣು ಅಸ್ತ್ರ ಹೊಂದುವುದನ್ನು ತಡೆಯುವುದಕ್ಕೆ ವಿಶ್ವದ ಪ್ರಮುಖ ರಾಷ್ಟ್ರಗಳೊಂದಿಗೆ ಒಪ್ಪಂದ
ಪರಮಾಣು ಕಾರ್ಯಕ್ರಮಗಳನ್ನು ತಗ್ಗಿಸುವ ದಿಸೆಯಲ್ಲಿ ವಿಶ್ವದ ಪ್ರಮುಖ ರಾಷ್ಟ್ರಗಳೊಂದಿಗೆ ಇರಾನ್‌ ಕೊನೆಗೂ ಒಪ್ಪಂದ ಮಾಡಿಕೊಂಡಿದ್ದು, ಈ ಬೆಳವಣಿಗೆಯನ್ನು ಅಮೆರಿಕದ ಅಧ್ಯಕ್ಷ ಬರಾಕ್‌ ಒಬಾಮ ಅವರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ. ‘ಇರಾನ್‌ ದೇಶವು ಪರಮಾಣು ಅಸ್ತ್ರ ಹೊಂದುವುದನ್ನು ತಡೆಯುವುದಕ್ಕೆ ಇದು ಮಹತ್ವದ ಮೊದಲ ಹೆಜ್ಜೆ’ ಎಂದು ಬಣ್ಣಿಸಿದ್ದಾರೆ.
ಸಂಧಾನ ಮಾತುಕತೆ:
ಅಮೆರಿಕ, ಬ್ರಿಟನ್‌, ರಷ್ಯಾ, ಚೀನಾ, ಫ್ರಾನ್ಸ್‌ ಹಾಗೂ ಜರ್ಮನಿ ದೇಶಗಳ ಪ್ರತಿನಿಧಿಗಳು ಸತತ ನಾಲ್ಕು ದಿನಗಳ ಸಂಧಾನದ ಮೂಲಕ ಇರಾನ್‌ ಜತೆಗೆ ಈ ಒಪ್ಪಂದಕ್ಕೆ ಬರಲು ಯಶಸ್ವಿಯಾದರು. ಐರೋಪ್ಯ ಒಕ್ಕೂಟದ ವಿದೇಶಿ ನೀತಿ ಅಧ್ಯಕ್ಷರಾದ ಕ್ಯಾಥರಿನ್‌ ಆಸ್ಟನ್‌ ಅವರು ಅಧಿಕೃತವಾಗಿ ಈ ಒಪ್ಪಂದವನ್ನು ಘೋಷಿಸಿದರು.
ಒಪ್ಪಂದವೇನು?
  • ಪರಮಾಣು ಕಾರ್ಯಕ್ರಮದ ವಿಷಯದಲ್ಲಿ ಇನ್ನು ಆರು ತಿಂಗಳವರೆಗೆ ಇರಾನ್‌ ಮೇಲೆ ಆರ್ಥಿಕ ನಿರ್ಬಂಧ ಇರುವುದಿಲ್ಲ.
  • ಒಪ್ಪಂದದ ಪ್ರಕಾರ ಇರಾನ್‌ ದೇಶವು ಶೇ.5 ರಷ್ಟು ಯುರೇನಿಯಂ ಸಂಸ್ಕರಣ ಕಾರ್ಯಕ್ರಮಗಳನ್ನು ನಿಲ್ಲಿಸಲು ಒಪ್ಪಿಕೊಂಡಿದೆ.
  • ‘ಪರಮಾಣು ಅಸ್ತ್ರ ಹೊಂದುವ ಹಕ್ಕು ನಮಗೆ ಈಗಲೂ ಇದೆ’ ಎಂದು ಇರಾನ್‌ ಸಂಧಾನಕಾರರು ಹೇಳಿದ್ದಾರೆ.
  • ಇಷ್ಟು ದಿನಗಳವರೆಗೆ ನಿರ್ಬಂಧಕ್ಕೆ ಒಳಗಾಗಿದ್ದಕ್ಕೆ ಇರಾನ್‌, ಸುಮಾರು ರೂ. 43 ಸಾವಿರ ಕೋಟಿ  (700 ಕೋಟಿ ಡಾಲರ್‌) ಪರಿಹಾರ ಪಡೆದುಕೊಳ್ಳಲಿದೆ.
  • ‘ಪರಮಾಣು ಕಾರ್ಯಕ್ರಮಗಳ ಹಿಂದೆ ಯಾವುದೇ ದುರುದ್ದೇಶವಿಲ್ಲ ಎನ್ನುವುದನ್ನು ಸಾಬೀತು ಮಾಡುವ ಹೊಣೆಗಾರಿಕೆ ಇರಾನ್‌ ಮೇಲೆ ಇದೆ. ಒಂದು ವೇಳೆ ಈ ಅವಕಾಶವನ್ನು ಇರಾನ್‌ ಬಳಸಿಕೊಂಡಲ್ಲಿ ಅಂತರರಾಷ್ಟ್ರೀಯ ಸಮುದಾಯದಿಂದ ಮತ್ತೆ ನೆರವು ಪಡೆಯುವುದಕ್ಕೆ ಸಾಧ್ಯವಾಗುತ್ತದೆ. 

ಹೂಡಿಕೆಗೆ ವಿಶ್ವದಲ್ಲೇ ಅತ್ಯಂತ ನೆಚ್ಚಿನ ತಾಣವಾಗಿ ಹೊರಹೊಮ್ಮಿದ ಭಾರತ
india invstವಿದೇಶಿ ನೇರ ಬಂಡವಾಳ ಹೂಡಿಕೆಯ ನಿಯಮಗಳನ್ನು ಬಹುತೇಕ ಸಡಿಲಗೊಳಿಸಿರುವ ಭಾರತ, ಹೂಡಿಕೆಗೆ ವಿಶ್ವದಲ್ಲೇ ಅತ್ಯಂತ ನೆಚ್ಚಿನ ತಾಣವಾಗಿ ಹೊರಹೊಮ್ಮಿದೆ. ಈ ಹಾದಿಯಲ್ಲಿ ಚೀನಾ ಮತ್ತು ಅಮೆರಿಕವನ್ನೂ ಭಾರತ ಹಿಂದಿಕ್ಕಿದೆ. ‘ಅರ್ನಸ್ಟ್‌ ಆಯಂಡ್‌ ಯಂಗ್‌’ ಸಂಸ್ಥೆ ನಡೆಸಿದ ಜಾಗತಿಕ ಸಮೀಕ್ಷೆಯಲ್ಲಿ ಈ ವಿಷಯ ಹೊರಬಿದ್ದಿದೆ. ಭಾರತದ ನಂತರದ ಸ್ಥಾನದಲ್ಲಿ ಬ್ರೆಜಿಲ್‌ ಮತ್ತು ಚೀನಾ ರಾಷ್ಟ್ರಗಳಿವೆ.
ನಿಯಮ ಸಡಿಲಿಕೆ:
  • ರೂಪಾಯಿಯ ಮೌಲ್ಯ ಕುಸಿತ ಕಂಡಿರುವುದು ಮತ್ತು ವಿದೇಶಿ ನೇರ ಬಂಡವಾಳ ಹೂಡಿಕೆ ನಿಯಮಗಳಲ್ಲಿ ಸಡಿಲ ಮಾಡಿರುವುದರಿಂದ, ಭಾರತ ಹೂಡಿಕೆಗೆ ವಿಶ್ವದಲ್ಲೇ ಅತ್ಯಂತ ನೆಚ್ಚಿನ ತಾಣವಾಗಿ ಹೊರಹೊಮ್ಮಿದೆ.
  • ಕಳೆದ ಆಗಸ್ಟ್‌ ತಿಂಗಳಿನಲ್ಲಷ್ಟೇ ಕೇಂದ್ರ ಸರ್ಕಾರ, ಚಿಲ್ಲರೆ, ಟೆಲಿಕಾಂ ಸೇರಿದಂತೆ ಹಲವು ವಲಯಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಗೆ ಇದ್ದ ಮಿತಿಯನ್ನು ಸಡಿಲ ಮಾಡಿತ್ತು. ಇದರ ಜೊತೆಗೆ ಪ್ರಸಕ್ತ ಬೃಹತ್‌ ಆರ್ಥಿಕತೆಯ ಒತ್ತಡ, ಸಾಲದ ಒತ್ತಡದಿಂದಾಗಿ ಹಲವು ಭಾರತೀಯ ಕಂಪನಿಗಳು ಕೆಲವು ಉದ್ಯಮಗಳಿಂದ ಹೊರಬರುತ್ತಿವೆ. ಹೀಗಾಗಿ ವಿದೇಶಿ ಹೂಡಿಕೆದಾರರಿಗೆ ಭಾರತದಲ್ಲಿ ಹೂಡಿಕೆಗೆ ಹೊಸ ಹೊಸ ಅವಕಾಶಗಳು ಸೃಷ್ಟಿಯಾಗಿವೆ ಎಂದು ಸಂಸ್ಥೆ ಹೇಳಿದೆ.
  • ಎರಡು ವರ್ಷಗಳ ಬಳಿಕ ಯುರೋಪ್‌ ಮತ್ತು ಜರ್ಮನ್‌ ಹೂಡಿಕೆದಾರರು ಮತ್ತೆ ಭಾರತದತ್ತ ಮುಖ ಮಾಡಿದ್ದಾರೆ. ಆಟೋಮೊಬೈಲ್‌, ಜೀವ ವಿಜ್ಞಾನ ಮತ್ತು ದಿನಬಳಕೆಯ ಗ್ರಾಹಕ ಉತ್ಪನ್ನಗಳ ಕ್ಷೇತ್ರದಲ್ಲಿ ವಿದೇಶಿ ಹೂಡಿಕೆದಾರರು ಹೆಚ್ಚಿನ ಹೂಡಿಕೆ ಮಾಡಿದ್ದಾರೆ.
  • ಇದೇ ವೇಳೆ ಕೆಲ ಭಾರತೀಯ ಕಂಪನಿಗಳು ವಿದೇಶಿ ಕಂಪನಿಗಳ ಖರೀದಿಯಲ್ಲಿ ತೊಡಗಿಸಿಕೊಂಡಿವೆ ಎಂದು ಸಂಸ್ಥೆ ಹೇಳಿದೆ.
  • ಇನ್ನು ಅಮೆರಿಕ, ಫ್ರಾನ್ಸ್‌ ಮತ್ತು ಜಪಾನ್‌, ಭಾರತದಲ್ಲಿ ಅತಿ ಹೆಚ್ಚಿನ ಹೂಡಿಕೆ ಮಾಡಿದ ಮೂರು ರಾಷ್ಟ್ರಗಳಾಗಿವೆ.

ಆನ್‌ಲೈನ್ ಖರೀದಿ ಹಾಗೂ ಪಾವತಿಯಲ್ಲಿ ಜನಪ್ರಿಯಗೊಳ್ಳುತ್ತಿರುವ ‘ಇ- ವ್ಯಾಲೆಟ್’
e walletಆನ್‌ಲೈನ್ ಖರೀದಿ ಹಾಗೂ ಪಾವತಿಗಾಗಿ ಈಗ ಇ- ವ್ಯಾಲೆಟ್ ಹೆಚ್ಚು ಜನಪ್ರಿಯತೆ ಪಡೆಯುತ್ತಿದೆ. ಈ ಇ- ವ್ಯಾಲೇಟ್ ಅಂದ್ರೆ ಏನು, ಅದರ ಉಪಯೋಗ ಏನು ಎನ್ನುವ ಕುರಿತು ಇಲ್ಲಿದೆ ಒಂದಷ್ಟು ಮಾಹಿತಿ.
ಇ- ವ್ಯಾಲೆಟ್?
ಇದೊಂದು ಆನ್‌ಲೈನ್ ಪ್ರೀಪೇಡ್ ಅಕೌಂಟ್. ಈ ಅಕೌಂಟ್‌ನಲ್ಲಿ ಯಾರು ಬೇಕಾದರೂ ಹಣ ಹಾಕಿಡಬಹುದು. ಅಗತ್ಯ ಬಿದ್ದಾಗ ಬಳಸಬಹುದು. ಈ ವ್ಯಾಲೆಟ್ ಬಳಸಿಕೊಂಡು ಗ್ರಾಹಕರು ಆನ್‌ಲೈನ್ ಮೂಲಕ ಏರ್‌ಟಿಕೆಟ್‌ನಿಂದ ಹಿಡಿದು ಯಾವುದೇ ವಸ್ತುಗಳನ್ನು ಕ್ರೆಡಿಟ್ ಕಾರ್ಡ್ ಅಥವಾ ಡೆಬಿಟ್ ಕಾರ್ಡ್ ಸ್ವೈಪ್ ಮಾಡದೆ ಕೊಳ್ಳಬಹುದು.
ಪಡೆಯುವುದು ಹೇಗೆ?
ಟೆಲಿಕಾಂ ಸೇವೆಗಳು, ಆನ್‌ಲೈನ್ ದಿನವಹಿ ವಸ್ತುಗಳ ಸ್ಟೋರ್, ರೀಚಾರ್ಜ್ ಪೋರ್ಟಲ್‌ಗಳು ಮಾತ್ರವಲ್ಲದೆ ಫರ್ನಿಚರ್‌ಗಳನ್ನು ಮಾರಾಟ ಮಾಡುವ ಆದರೆ ಇ- ವ್ಯಾಲೆಟ್ ಅನ್ನು ಪರ್ಯಾಯ ಪಾವತಿ ಆಯ್ಕೆಯಾಗಿ ಬಳಸುವ ಸೈಟ್‌ಗಳಿಗೆ ಲಾಗ್ ಆನ್ ಆಗುವ ಮೂಲಕ ಈ ಸೇವೆಯ ಸದುಪಯೋಗ ಪಡೆದುಕೊಳ್ಳಬಹುದು.
ಎಲ್ಲಿ ಬಳಸಬಹುದು?
ಆನ್‌ಲೈನ್ ದಿನಸಿ ಸ್ಟೋರ್‌ಗಳಲ್ಲಿ, ರೇಲ್ವೆ ಪೋರ್ಟಲ್‌ನಲ್ಲಿ. ಬೆಂಗಳೂರಿನ ಬಿಗ್ ಬಾಸ್ಕೆಟ್. ಕಾಂ (ಒಂದು ಆನ್‌ಲೈನ್ ಆಹಾರ ಮತ್ತು ದಿನಸಿ ಸ್ಟೋರ್ ಆಗಿದೆ). ಇದು ಇ- ವ್ಯಾಲೆಟ್ ಸೌಲಭ್ಯವನ್ನು ಕಲ್ಪಿಸುತ್ತದೆ. ಈ ವೆಬ್‌ಸೈಟ್ ಇ- ವ್ಯಾಲೆಟ್‌ಗೆ 10 ರಿಂದ 10 ಸಾವಿರದ ವರೆಗೆ ಹಣ ಹಾಕಬಹುದು. ರೇಲ್ವೆ, ಐಆರ್‌ಟಿಸಿ ಕೂಡ ಇ-ವ್ಯಾಲೆಟ್ ಸೌಲಭ್ಯವನ್ನು ಆರಂಭಿಸಿದೆ. ಇದರ ಮೂಲಕ ನೀವು ರೇಲ್ವೆ ಟಿಕೆಟ್‌ಗಳನ್ನು ಬುಕ್ ಮಾಡಬಹುದಾಗಿದೆ.
ಉಪಯೋಗ ಏನು?
  • ಪ್ರತಿ ಬಾರಿ ಆನ್‌ಲೈನ್‌ನಲ್ಲಿ ವ್ಯವಹರಿಸುವಾಗ ಕ್ರೆಡಿಟ್ ಅಥವಾ ಡೆಬಿಟ್ ಕಾರ್ಡ್ ವಿವರಗಳನ್ನು ಟೈಪ್ ಮಾಡಬೇಕಿಲ್ಲ.
  • ಕೆಲವು ಸೈಟ್‌ಗಳಲ್ಲಿ ಹಣ ಹಾಕಲು ಕನಿಷ್ಠ ಮಿತಿ ಏನೂ ಇಲ್ಲ. ನೀವು ಕನಿಷ್ಠ 10ನಷ್ಟು ಹಣವನ್ನೂ ಡಿಪಾಸಿಟ್ ಮಾಡಬಹುದು.
  • ನಿಮ್ಮ ಇ- ವ್ಯಾಲೆಟ್‌ನ ಅನುಕೂಲವನ್ನು ಗೆಳೆಯರು ಮತ್ತು ಕುಟುಂಬ ಸದಸ್ಯರಿಗೂ ವರ್ಗಾವಣೆ ಮಾಡಬಹುದು.
ತೊಂದರೆಗಳೇನು?
ಪಾಸ್‌ವರ್ಡ್ ಬಹಿರಂಗವಾದರೆ ಕಳ್ಳತನಕ್ಕೆ ಅವಕಾಶವಾಗಬಹುದು. ಮರುಪಾವತಿ ಸೌಲಭ್ಯ ಇಲ್ಲ. ನೀವು ಇ- ವ್ಯಾಲೆಟ್‌ಗೆ ಹಾಕಿದ ಹಣದಿಂದ ಏನಾದರೂ ವಸ್ತುವನ್ನು ಕೊಳ್ಳಲೇಬೇಕು.
ಬಳಸುವುದು ಹೇಗೆ?
  • ಇ- ವ್ಯಾಲೆಟ್ ಸೇವೆಗಾಗಿ, ನಿಮ್ಮ ಇ-ಮೇಲ್ ಐಡಿಯಿಂದ ಲಾಗಿನ್ ಆಗಿ. ಇ- ವ್ಯಾಲೆಟ್ ಆಯ್ಕೆ ಮಾಡಿಕೊಳ್ಳಿ.
  • ನಿಮಗೋಸ್ಕರ ಪ್ರತ್ಯೇಕ ಇ- ವ್ಯಾಲೆಟ್ ನಿರ್ಮಿಸಿಕೊಳ್ಳಿ.
  • ಸೈಟ್‌ನಿಂದ ಯಾವುದಾದರೂ ವಸ್ತುಕೊಳ್ಳಬೇಕೆಂದಿದ್ದರೆ ಅಷ್ಟು ಪ್ರಮಾಣದ ಹಣ ಇ- ವ್ಯಾಲೆಟ್‌ನಲ್ಲಿರುವಂತೆ ನೋಡಿಕೊಳ್ಳಿ.
  • ಇ-ಖಾತೆ, ಡೆಬಿಟ್ ಅಥವಾ ಕ್ರೆಡಿಟ್ ಕಾರ್ಡ್‌ನಿಂದ ಇ-ವ್ಯಾಲೆಟ್‌ಗೆ ಹಣ ವರ್ಗಾಯಿಸಿ.
  • ಒಂದು ವೇಳೆ ನೀವು ಕೊಳ್ಳಬೇಕೆಂದಿರುವ ವಸ್ತುವಿನ ಬೆಲೆ ಇ- ವ್ಯಾಲೆಟ್‌ನಲ್ಲಿರುವ ಹಣಕ್ಕಿಂತ ಹೆಚ್ಚಿದ್ದರೆ ಉಳಿದ ಹಣವನ್ನು ಸಾಂಪ್ರದಾಯಿಕ ವಿಧಾನದ ಮೂಲಕ ಪಾವತಿಸಬಹುದಾಗಿದೆ.

ಪ್ರಚಲಿತ ವಿದ್ಯಮಾನಗಳು ನವೆಂಬರ್ 17, 2013

ನವೀಯತೆಗಾಗಿನ ಅಧ್ಯಕ್ಷರ ಸಮಿತಿಯ ಸದಸ್ಯರಾಗಿ ಕಲ್ಪೇನ್‌ ಹಿತೇಶ್‌ ಮೋದಿ ನೇಮಕ ಕಲೆ ಮತ್ತು ಮಾನವೀಯತೆಗಾಗಿನ ಅಧ್ಯಕ್ಷರ ಸಮಿತಿಯ ಸದಸ್ಯರನ್ನಾಗಿ ಜನಪ್ರಿಯ ಭಾರತೀಯ ಅಮೆರಿಕನ್‌ ನಟ ಮತ್ತು ಶ್ವೇತ ಭವನದ ಮಾಜಿ ನೌಕರ ಕಾಲ್‌ ಪೆನ್‌ ಅಲಿಯಾಸ್‌ ಕಲ್ಪೇನ್‌ ಹಿತೇಶ್‌ ಮೋದಿ ಅವರನ್ನು ಅಧ್ಯಕ್ಷ ಬರಾಕ್‌ ಒಬಾಮಾ ನೇಮಕ ಮಾಡಿದ್ದಾರೆ.
ನೇಮಕದ ಹಿನ್ನೆಲೆ:
ಒಬಾಮಾ ಅವರ ಪ್ರಥಮ ಅಧ್ಯಕ್ಷೀಯ ಅವಧಿಯಲ್ಲಿ ಕಾಲ್‌ ಪೆನ್‌ ಅವರು ಶ್ವೇತಭವನದ ನೌಕರರಾಗಿ ಕಾರ್ಯನಿರ್ವಹಿಸಿದ್ದರು. ಕಳೆದ ವರ್ಷ ನಡೆದ ಒಬಾಮಾ ಅವರ ಪುನಾರಾಯ್ಕೆಗಾಗಿನ ಪ್ರಚಾರ ಅಭಿಯಾನದ ವೇಳೆ ಪೆನ್‌ ಅವರು ಒಬಾಮಾ ಪರವಾಗಿ ಪ್ರಚಾರ ಮಾಡುವ ಮೂಲಕ ಮತದಾರರನ್ನು ಅದರಲ್ಲೂ ಮುಖ್ಯವಾಗಿ ಯುವಜನರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದ್ದರು.
ಸುರೇಶ್ ಮೋದಿ ಬಗ್ಗೆ:
ನ್ಯೂಜೆರ್ಸಿಯಲ್ಲಿ ಜನಿಸಿದ ಕಾಲ್‌ ಪೆನ್‌ ಅವರ ಮೂಲ ಹೆಸರು ಕಲ್ಪೇನ್‌ ಸುರೇಶ್‌ ಮೋದಿ. ನಟ, ಚಿತ್ರಲೇಖಕ ಮತ್ತು ನಿರ್ಮಾಪಕರಾಗಿ ಜನಪ್ರಿಯತೆಯನ್ನು ಪಡೆದಿರುವ ಪೆನ್‌ ಹೆರಾಲ್ಡ್‌ ಮತ್ತು ಕುಮಾರ್‌ ಸರಣಿಯ ಹೆಸರಾಂತ ಚಿತ್ರಗಳನ್ನು ಪ್ರೇಕ್ಷಕರಾಗಿ ನೀಡಿದ್ದಾರೆ. 2009ರಿಂದ 2011ರ ವರೆಗೆ ಸಾರ್ವಜನಿಕ ಸಂಪರ್ಕ ಕಚೇರಿಯಲ್ಲಿ ಸಹಾಯಕ ನಿರ್ದೇಶಕರಾಗಿದ್ದರು.

 ನಾರ್ವೆಯ ಮ್ಯಾಗ್ನಸ್‌ ಕಾರ್ಲ್ಸನ್‌  ವಿಶ್ವ ಚೆಸ್ ನ ಹೊಸ ಚಾಂಪಿಯನ್‌
carlsenಇದೇ ಮೊದಲ ಬಾರಿಗೆ ನಾರ್ವೆಯ 22 ವರ್ಷದ ಮ್ಯಾಗ್ನಸ್‌ ಕಾರ್ಲ್ಸನ್‌ ಹೊಸ ವಿಶ್ವ ಚಾಂಪಿಯನ್‌ ಆಗಿ ಹೊರಹೊಮ್ಮಿದ್ದಾರೆ. ಕಾರ್ಲ್ಸನ್‌ಗೆ ಇದು ಮೊದಲ ವಿಶ್ವ ಕಿರೀಟ. ಆನಂದ್‌ ಮತ್ತು ಕಾರ್ಲ್ಸನ್‌ ನಡುವೆ ನಡೆದ 10ನೆ ಪಂದ್ಯ ಡ್ರಾಗೊಳ್ಳುವ ಮೂಲಕ ವಿಶ್ವಚಾಂಪಿಯನ್‌ಶಿಪ್‌ ಆನಂದ್‌ ಕೈತಪ್ಪಿದೆ. 5 ಬಾರಿ ವಿಶ್ವಚಾಂಪಿಯನ್‌ ಆನಂದ್‌ರನ್ನು ತವರಿನಲ್ಲೇ ಮಣಿಸಿದ ಖ್ಯಾತಿ ಕಾರ್ಲ್ಸನ್‌ರದ್ದು. ಇದರೊಂದಿಗೆ 22ರ ಕಾರ್ಲ್‌ಸನ್ ವಿಶ್ವ ಚೆಸ್ ಚಾಂಪಿಯನ್‌ಶಿಪ್ ಗೆದ್ದ ಎರಡನೇ ಅತಿ ಕಿರಿಯ ಆಟಗಾರ ಎನಿಸಿದರು. ಈ ಮುನ್ನ 1985ರಲ್ಲಿ ಗ್ಯಾರಿ ಕಾಸ್ಪರೋವ್ 22ನೇ ವಯಸ್ಸಿನಲ್ಲಿ ಸಾಧನೆ ಮಾಡಿದ್ದು ಮೊದಲ ದಾಖಲೆಯಾಗಿದೆ.
ಏಕಪಕ್ಷೀಯ ಸೋಲು:
ಆಧುನಿಕ ಚೆಸ್‌ ವಿಶ್ವಚಾಂಪಿಯನ್‌ಶಿಪ್‌ ಇತಿಹಾಸದಲ್ಲಿ ಏಕಪಕ್ಷೀಯವಾಗಿ ವಿಜೇತನ ನಿರ್ಧಾರವಾದ ಮೊದಲ ಟೂರ್ನಿಯಿದು. ಹಾಲಿ ಚಾಂಪಿಯನ್‌ ಆಗಿದ್ದ ಆನಂದ್‌ ಮತ್ತು ಕಾರ್ಲ್ಸನ್‌ ನಡುವೆ 7 ಪಂದ್ಯಗಳು ಡ್ರಾಗೊಂಡಿವೆ. 3 ಪಂದ್ಯಗಳಲ್ಲಿ ಆನಂದ್‌ ಸೋತಿದ್ದರು. ಒಟ್ಟಾರೆ 6.5 ಅಂಕಗಳಿಸಿದ ಕಾರ್ಲ್ಸನ್‌ ಚಾಂಪಿಯನ್‌ ಶಿಪ್‌ ಗೆದ್ದುಕೊಂಡರು. ಇದೇ ವೇಳೆ ಆನಂದ್‌ 3.5 ಅಂಕ ಗಳಿಸಿದರು.
ಚಾಂಪಿಯನ್‌ ನಿರ್ಧಾರವಾಗುವುಗು ಹೇಗೆ?
ವಿಶ್ವ ಚೆಸ್‌ ಚಾಂಪಿಯನ್‌ಶಿಪ್‌ನಲ್ಲಿ ಒಟ್ಟು 12 ಪಂದ್ಯಗಳಿರುತ್ತವೆ. ಹಾಲಿ ಚಾಂಪಿಯನ್‌ ಮತ್ತು ವಿಶ್ವ ನಂ.1 ಶ್ರೇಣಿಯ ಆಟಗಾರನ ನಡುವೆ ಪಂದ್ಯ ನಡೆಯುತ್ತದೆ. ಅತಿಹೆಚ್ಚು ಅಂಕಗಳಿಸಿದವರು ಟೂರ್ನಿ ಗೆಲ್ಲುತ್ತಾರೆ. ಒಂದು ವೇಳೆ ಇಬ್ಬರು ಸಮ ಅಂಕಗಳಿಸಿದರೆ. ಹಾಲಿ ಚಾಂಪಿಯನ್‌ ನಡುವೆ ಮತ್ತೆ ಚಾಂಪಿಯನ್‌ ಆಗುತ್ತಾರೆ. ಆನಂದ್‌ಗೆ ಮೊದಲ ಕಟು ಅನುಭವ 1991 ರಿಂದ ಆರಂಭವಾದ ತಮ್ಮ 22 ವರ್ಷಗಳ ವೃತ್ತಿಜೀವನದಲ್ಲಿ ಒಂದು ಪಂದ್ಯದಲ್ಲೂ ಗೆಲ್ಲದೇ ಟೂರ್ನಿ ಸೋತ ಮೊದಲ ಚಾಂಪಿಯನ್‌ಶಿಪ್‌ ಇದು. 2000,2007, 2008, 2010, 2012 ಸೇರಿದಂತೆ ಆನಂದ್‌ 5 ಬಾರಿ ವಿಶ್ವಚಾಂಪಿಯನ್‌ ಆಗಿದ್ದಾರೆ.
ಯಾರು ಈ ಕಾರ್ಲ್ಸನ್‌?
ತಮ್ಮ 19ನೆ ವಯಸ್ಸಿನಲ್ಲೇ ವಿಶ್ವ ಚೆಸ್‌ನಲ್ಲಿ ನಂ.1 ಶ್ರೇಣಿ ಪಡೆದ ಆಟಗಾರ ನಾರ್ವೆಯ ಮ್ಯಾಗ್ನಸ್‌ ಕಾರ್ಲ್ಸನ್‌. ಇಂತಹ ಸಾಧನೆ ಮಾಡಿದ ವಿಶ್ವದ ನಂ.1 ಆಟಗಾರ. 2009ರಲ್ಲಿ ಇವರು ಬ್ಲಿಟ್ಜ್ ವಿಶ್ವಚಾಂಪಿಯನ್‌ಶಿಪ್‌ ಗೆದ್ದಿದ್ದರು. ವಿಶ್ವಚೆಸ್‌ನ ದಿಗ್ಗಜ ಗ್ಯಾರಿ ಕಾಸ್ಪರೋವ್‌ರಿಂದಲೇ ಚೆಸ್‌ ತಂತ್ರಗಳನ್ನು ಕಲಿತ್ತಿದ್ದಾರೆ. ಕೇವಲ 13ನೆ ವರ್ಷಕ್ಕೆ ಗ್ರಾಂಡ್‌ ಮಾಸ್ಟರ್‌ ಪಟ್ಟಕ್ಕೇರಿದರು. ಇದೀಗ ಮೊದಲ ಬಾರಿಗೆ ಚೆಸ್‌ ವಿಶ್ವಚಾಂಪಿಯನ್‌ಶಿಪ್‌ ಗೆದ್ದಿದ್ದಾರೆ.
ಪ್ರಶಸ್ತಿ ಮೊತ್ತ: 14 ಕೋಟಿ ರೂ.- ವಿಶ್ವಚಾಂಪಿಯನ್‌ ಶಿಪ್‌ ಪ್ರಶಸ್ತಿ ಮೊತ್ತ. 60 ಶೇ.-ಚಾಂಪಿಯನ್‌ಗೆ ಸಿಗುವ ಹಣ. 40 ಶೇ.-ಸೋತವರಿಗೆ ಸಿಗುವ ಹಣ

ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಲಿಗೆ ಅರ್ಹತೆ ಪಡೆದ ಐರ್ಲೆಂಡ್ ಮತ್ತು ಅಫ್ಘಾನಿಸ್ತಾನ ತಂಡಗಳು
icc t20ಐರ್ಲೆಂಡ್ ಮತ್ತು ಅಫ್ಘಾನಿಸ್ತಾನ ತಂಡಗಳು ಬರುವ ವರ್ಷ ಅಂದರೆ 2014 ರಲ್ಲಿ ನಡೆಯಲಿರುವ ಐಸಿಸಿ ಟಿ20 ವಿಶ್ವಕಪ್ ಪಂದ್ಯಾವಳಿಗೆ ಅರ್ಹತೆ ಪಡೆದುಕೊಂಡಿವೆ. ಅರ್ಹತಾ ಪಂದ್ಯಾವಳಿಯಲ್ಲಿ ಕ್ರಮವಾಗಿ ತಮ್ಮ ಪಂದ್ಯಗಳಲ್ಲಿ ಗೆದ್ದ ಉಭಯ ತಂಡಗಳು ವಿಶ್ವಕಪ್‌ಗೆ ಅರ್ಹತೆ ಪಡೆಯುವಲ್ಲಿ ಯಶಸ್ವಿಯಾಗಿವೆ.
ಅರ್ಹತಾ ಪಂದ್ಯಗಳು:
  • ಐರ್ಲೆಂಡ್ ಅಂತಿಮ ಅರ್ಹತಾ ಪಂದ್ಯದಲ್ಲಿ ಹಾಂಕಾಂಗ್ ತಂಡವನ್ನು 85 ರನ್‌ಗಳ ಅಂತರದಿಂದ ಸೋಲಿಸುವ ಮೂಲಕ ಅರ್ಹತೆ ಗಿಟ್ಟಿಸಿದರೆ,
  • ಅಫ್ಘಾನಿಸ್ತಾನ ತನ್ನ ಅಂತಿಮ ಹಣಾಹಣಿಯಲ್ಲಿ ಕೀನ್ಯಾ ತಂಡವನ್ನು 34 ರನ್‌ಗಳ ಅಂತರದಿಂದ ಸೋಲಿಸುವ ಮೂಲಕ ಅರ್ಹತೆ ಪಡೆದುಕೊಂಡಿತು.
  • ಅರ್ಹತಾ ಪಂದ್ಯಾವಳಿಯಲ್ಲಿ ಆಫ್ಘಾನಿಸ್ತಾನ ತನ್ನ ಎಲ್ಲ ಏಳೂ ಪಂದ್ಯಗಳಲ್ಲೂ ಜಯ ಸಾಧಿಸಿದರೆ, ಐರ್ಲೆಂಡ್ ತನ್ನ ಏಳು ಪಂದ್ಯಗಳಲ್ಲಿ ಆರರಲ್ಲಿ ಮಾತ್ರ ಜಯ ಸಾಧಿಸಿತು.
  • ಅಲ್ಲದೆ ಉಭಯ ತಂಡಗಳು ತಾವು ಪ್ರತಿನಿಧಿಸಿದ ಗುಂಪುಗಳಲ್ಲಿ ಅಗ್ರ ಸ್ಥಾನ ಪಡೆದವು.

ಪ್ರಚಲಿತ ವಿದ್ಯಮಾನಗಳು ನವೆಂಬರ್ 16, 2013

ವಿಶ್ವದ ಅತಿ ವೇಗದ ಕಂಪ್ಯೂಟರ್ ಆಗಿ ಮತ್ತೆ ಸ್ಥಾನ ಪಡೆದ ಚೀನಾದ “Tianhe-2”
ವಿಶ್ವದ ಟಾಪ್-500 ಸೂಪರ್ ಕಂಪ್ಯೂಟರ್ ಗಳ ಪೈಕಿ ಚೀನಾದ Tianhe-2 ಕಂಪ್ಯೂಟರ್ ವಿಶ್ವದ ಅತ್ಯಂತ ವೇಗದ ಕಂಪ್ಯೂಟರ್ ಎನ್ನುವ ಖ್ಯಾತಿಗೆ ಪಾತ್ರವಾಗಿದೆ. ವಿಶ್ವದ ಸೂಪರ್ ಕಂಪ್ಯೂಟರ್ ಗಳ ಪಟ್ಟಿಯನ್ನು ಎರಡು ವರ್ಷಕ್ಕೊಮ್ಮೆ ಬಿಡುಗಡೆಗೊಳಿಸಲಾಗುತ್ತದೆ. “ಜರ್ಮನ್ ಯುನಿರ್ವಸಿಟಿ ಆಫ್ ಮನ್ನಹೈಮ್” ನ ಪ್ರೋಫೆಸರ್ ಗಳ ತಂಡ ಈ ಪಟ್ಟಿಯನ್ನು ತಯಾರಿಸುತ್ತದೆ.
  • “Tianhe-2” ರ ಅನುವಾದದ ಅರ್ಥ “ಮಿಲ್ಕಿ ವೇ-2”. “ಚೀನಾ ನ್ಯಾಷನಲ್ ಯೂನಿವರ್ಸಿಟಿ ಆಫ್ ಡಿಫೆನ್ಸ್” ಈ ಕಂಪ್ಯೂಟರ್ ಅನ್ನು ಅಭಿವೃದ್ದಿ ಪಡಿಸಿದೆ. ಪ್ರಸ್ತುತ Tianhe-2 ಚೀನಾದ ಗುವಾಂಗ್ಜು ನಗರದಲ್ಲಿದೆ.
  • ಅಮೆರಿಕಾದ ಟೈಟಾನ್ ಕಂಪ್ಯೂಟರ್ ಜಗತ್ತಿನ ಎರಡನೇ ಅತ್ಯಂತ ಸೂಪರ್ ವೇಗದ ಕಂಪ್ಯೂಟರ್.
  • Tianhe-2 ಕಂಪ್ಯೂಟರ್ 33.86 ಪೆಟಾಪ್ಲಾಫ್/ಸೆಕೆಂಡ್ ವೇಗದಲ್ಲಿ ಕಾರ್ಯನಿರ್ವಹಸಲಿದೆ. ಅಂದರೆ 33,863 ಟ್ರಿಲಿಯನ್ ಕ್ಯಾಲುಕೇಶನ್/ಸೆಕೆಂಡ್.
  • ಭಾರತದ ಇನ್ಸ್ ಸ್ಟಿಟ್ಯೂಟ್ ಆಫ್ ಮೆಟ್ರಿಯಲಾಜಿಕಲ್ ಸಂಸ್ಥೆಯಲ್ಲಿರುವ ಕಂಪ್ಯೂಟರ್ ವಿಶ್ವದ ಸೂಪರ್ ಕಂಪ್ಯೂಟರ್ ಗಳ ಪಟ್ಟಿಯಲ್ಲಿ 44 ನೇ ಸ್ಥಾನವನ್ನು ಗಳಿಸಿದೆ.

ರಾಜ್ಯದ ಸರ್ಕಾರಿ ಶಾಲೆಗಳ ಗುಣಮಟ್ಟ ಅತ್ಯಂತ ಕಳಪೆ; ಸಮೀಕ್ಷೆ
kar schoolರಾಜ್ಯದ ಸರ್ಕಾರಿ ಶಾಲೆಗಳ ಗುಣಮಟ್ಟ ಅತ್ಯಂತ ಕಳಪೆ ಎಂದು ಮತ್ತೊಮ್ಮೆ ಸಾಬೀತಾಗಿದೆ. ಕರ್ನಾಟಕ ಸ್ಕೂಲ್ ಕ್ವಾಲಿಟಿ ಅಸ್ಸೆಸ್ಮೆಂಟ್ ಮತ್ತು ಅಕ್ರಿಡೇಶನ್ ಕೌನ್ಸಿಲ್ (Karnataka School Quality Assessment and Accreditation Council) ಜುಲೈ 2012 ರಿಂದ ಫೆಬ್ರವರಿ 2013 ರ ವರೆಗೆ ನಡೆಸಿದ ಸಮೀಕ್ಷೆಯಲ್ಲಿ ಈ ಆಘಾತಕಾರಿ ಅಂಶ ಬೆಳಕಿಗೆ ಬಂದಿದೆ.
ಸಮೀಕ್ಷೆಯಲ್ಲಿ ಏನಿದೆ?
  • ರಾಜ್ಯದ 1020 ಸರ್ಕಾರಿ ಶಾಲೆಗಳನ್ನು ಈ ಸಮೀಕ್ಷೆಗೆ ಒಳಪಡಿಸಲಾಗಿದೆ. ವಿಪರ್ಯಾಸವೆಂದರೆ ಯಾವುದೇ ಶಾಲೆಯು “ಎ+” ಗ್ರೇಡ್ ಪಡೆದಿಲ್ಲ.
  • ರಾಜ್ಯದ ಬಹುತೇಕ ಶಾಲೆಗಳು 100 ಅಂಕಗಳಿಗೆ ಕೇವಲ 40 ರಿಂದ 49.9 ಅಂಕಗಳನ್ನು ಪಡೆಯುವ ಮೂಲಕ “ಸಿ” ಗ್ರೇಡನ್ನು ಪಡೆದುಕೊಂಡಿವೆ.
  • ಕೇವಲ ಐದು ಶಾಲೆಗಳು ಮಾತ್ರ 80 ರಿಂದ 89.9 ಅಂಕಗಳನ್ನು ಪಡೆಯುವ ಮೂಲಕ “ಎ”ಗ್ರೇಡ್ ಅನ್ನು ಪಡೆದುಕೊಂಡಿವೆ.
  • ಸಮೀಕ್ಷೆ ಪ್ರಕಾರ 122 ಶಾಲೆಗಳು “ಸಿ” ಶ್ರೇಣಿಯನ್ನು ಹಾಗೂ 200 ಶಾಲೆಗಳು “ಡಿ” ಶ್ರೇಣಿಯನ್ನು ಪಡೆದುಕೊಂಡಿವೆ.
ಚಿಕ್ಕೋಡಿಗೆ ಪ್ರಥಮ ಸ್ಥಾನ
  • ಚಿಕ್ಕೋಡಿ ತಾಲ್ಲೂಕಿನ ನಾಲ್ಕು ಶಾಲೆಗಳು “ಎ” ಶ್ರೇಣಿಯನ್ನು ಪಡೆಯುವ ಮೂಲಕ ಶಾಲೆ ಗುಣಮಟ್ಟದಲ್ಲಿ ಚಿಕ್ಕೋಡಿ ಪ್ರಥಮ ಸ್ಥಾನ ಪಡೆದಿದೆ.
  • ಕಳೆದ ನಾಲ್ಕು ವರ್ಷಗಳ SSLC ಫಲಿತಾಂಶದಲ್ಲಿಯೂ ಸಹ ಚಿಕ್ಕೋಡಿ ಪ್ರಥಮ ಸ್ಥಾನದಲ್ಲಿದೆ.
  • ಇನ್ನು ಬೀದರ್ ಜಿಲ್ಲೆಯಲ್ಲಿ ಈ ಸಮೀಕ್ಷೆಯಲ್ಲಿ ಕೊನೆಯ ಸ್ಥಾನವನ್ನು ಪಡೆದುಕೊಂಡಿದೆ. ಬೀದರ್ ನ 22 ಶಾಲೆಗಳು “ಡಿ” ಶ್ರೇಣಿಯನ್ನು ಪಡೆದುಕೊಂಡಿವೆ. ಬೀದರ್ ಜಿಲ್ಲೆ ಕಳೆದ ನಾಲ್ಕು ವರ್ಷಗಳಿಂದ SSLC ಫಲಿತಾಂಶದಲ್ಲಿ ಕೊನೆಯ ಸ್ಥಾನ ಪಡೆದಿದೆ.

 ಭಾರತದ ರಾಕೆಟ್ ಉಡಾವಣೆಗೆ ಸುವರ್ಣ ಮಹೋತ್ಸವದ ಸಂಭ್ರಮ
first satelliteಭಾರತ ತನ್ನ ಪ್ರಥಮ ರಾಕೆಟ್ ಉಡಾವಣೆ ಮಾಡಿದ ದಿನಕ್ಕೆ ಈಗ 50 ವರ್ಷಗಳ ಸಂಭ್ರಮ. ನವೆಂಬರ್ 21 ಈ ಸಂಭ್ರಮದ ಕ್ಷಣಕ್ಕೆ ಸಾಕ್ಷಿಯಾಗಲಿದೆ.
  • ಇತ್ತೀಚೆಗಷ್ಟೇ ಮಂಗಳಯಾನವನ್ನು ಯಶಸ್ವಿಯಾಗಿ ಕೈಗೊಂಡು ವಿಶ್ವವನ್ನು ನಿಬ್ಬೆರಗಾಗಿಸಿರುವ ಭಾರತ ತನ್ನ ಮೊದಲ ರಾಕೆಟ್ ಅನ್ನು ನವೆಂಬರ್ 21, 1963 ರಂದು ಉಡಾಯಿಸುವ ಮೂಲಕ ಬಾಹ್ಯಕಾಶ ಕ್ಷೇತ್ರಕ್ಕೆ ಅಂಬೆಗಾಲಿಟ್ಟಿತ್ತು.
  • ಅಮೆರಿಕಾದ ತಂತ್ರಜ್ಞಾನದ ಸಹಾಯದೊಂದಿಗೆ ತಯಾರಿಸಲಾದ “ನಿಕೆ ಅಪಾಚೆ (Niche Apache)” ರಾಕೆಟ್ ಅನ್ನು ಕೇರಳದ “TUMBA” ರಾಕೆಟ್ ಉಡಾವಣಾ ಸಂಸ್ಥೆಯಿಂದ ಮೊದಲ ಬಾರಿ ಉಡಾಯಿಸಲಾಯಿತು.
  • TERLS (Tumba Equatorial Rocket Launch Station) ಅನ್ನು ಬಳಿಕ ವಿಕ್ರಂ ಸರಬಾಯಿ ಸ್ಪೇಸ್ ಸೆಂಟರ್ ಎಂದು ಮರು ನಾಮಕರಣ ಮಾಡಲಾಯಿತು. ಭಾರತದ ಬಾಹ್ಯಕಾಶಕ್ಕೆ ಸುಭದ್ರ ಅಡಿಪಾಯ ಹಾಕುವಲ್ಲಿ ವಿಕ್ರಂ ಸರಭಾಯಿ ಅವರು ಸಲ್ಲಿಸದ ಸೇವೆ ಅಪಾರ ಆಗಾಗಿ ಈ ರಾಕೆಟ್ ಉಡಾವಣಾ ಸಂಸ್ಥೆಗೆ ಅವರ ಹೆಸರನ್ನು ಇಡಲಾಗಿದೆ.
  • ದಕ್ಷಿಣಾ ಕೇರಳದಲ್ಲಿರುವ “ತುಂಬ” ಪ್ರದೇಶದ ಮೂಲಕ ಭೂಮಿಯ ಮ್ಯಾಗ್ನೆಟಿಕ್ ರೇಖೆ ಹಾದು ಹೋಗುವ ಕಾರಣ ಈ ಸ್ಥಳವನ್ನು ರಾಕೆಟ್ ಉಡಾವಣೆಗೆ ಆರಿಸಿಕೊಳ್ಳಲಾಯಿತು.

ಪ್ರಚಲಿತ ವಿದ್ಯಮಾನಗಳು ನವೆಂಬರ್ 15, 2013


ಚೀನಾ ಅಕಾಡೆಮಿ ಆಫ್ ಸೈನ್ಸ್ ಗೆ ನೇಮಕಗೊಂಡ ಸಿ.ಎನ್.ಆರ್.ರಾವ್
ಖ್ಯಾತ ವಿಜ್ಞಾನಿ ಹಾಗೂ ಭಾರತ ರತ್ನ ಪುರಸ್ಕೃತ ಸಿ.ಎನ್,ಆರ್.ರಾವ್ ಅವರು ಚೀನಾ ಅಕಾಡೆಮಿ ಆಫ್ ಸೈನ್ಸ್ ಗೆ ನೇಮಕಗೊಂಡ ಭಾರತದ ಮೊದಲ ವಿಜ್ಞಾನಿ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
  • ಖ್ಯಾತ ವಿಖ್ಯಾತ ನೊಬೆಲ್ ಪ್ರಶಸ್ತಿಯನ್ನು ಒಳಗೊಂಡಿರುವ “ಚೀನಾ ಅಕಾಡೆಮಿ ಆಫ್ ಸೈನ್ಸ್” ಗೆ ಆಯ್ಕೆಯಾದ ಭಾರತದ ಮೊದಲ ವಿಜ್ಞಾನಿ.
  • ಚಿಕ್ಕಬಳ್ಳಾಪುರ ಜಿಲ್ಲೆ, ಚಿಂತಾಮಣಿಯಲ್ಲಿ ಜನಿಸಿರುವ ರಾವ್ ಅವರು ಬೆಂಗಳೂರಿನಲ್ಲಿರುವ “ಜವಹಾರ್ ಲಾಲ್ ನೆಹರೂ ಸೆಂಟರ್ ಫಾರ್ ಅಡ್ವಾನ್ಸ್ಡ್ ಸೈಂಟಿಫಿಕ್ ರಿಸರ್ಚ್” ಸಂಸ್ಥೆಯ ಸಂಸ್ಥಾಪಕರು.
  • ವಿಜ್ಞಾನ ಕ್ಷೇತ್ರಕ್ಕೆ ರಾವ್ ನೀಡಿರುವ ಗಣನೀಯ ಕೊಡುಗೆಯನ್ನು ಗಮನಿಸಿ ಭಾರತ ಸರ್ಕಾರ ಅವರಿಗೆ ಇತ್ತೀಚೆಗೆ ಭಾರತ ರತ್ನ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.
  • ರಾವ್ ಅವರು ಈ ಹಿಂದೆ ರಾಯಲ್ ಸೊಸೈಟಿ ಆಫ್ ಲಂಡನ್, ನ್ಯಾಷನಲ್ ಅಕಾಡೆಮಿ ಆಫ್ ಸೈನ್ಸ್ (ಯುಎಸ್ಎ), ಜಪಾನ್ ಅಕಾಡೆಮಿ ಆಫ್ ಸೈನ್ಸ್ ಸೇರಿದಂತೆ ವಿಶ್ವದ ಇತರೆ ಪ್ರತಿಷ್ಠಿತ ಅಕಾಡೆಮಿಗಳಿಗೆ ನೇಮಕಗೊಂಡಿದ್ದಾರೆ.
  • ಪ್ರಧಾನಿ ಮಂತ್ರಿಯವರ ವೈಜ್ಞಾನಿಕ ಸಮಿತಿಯ ಸಲಹೆಗಾರರಾಗಿರುವ ರಾವ್ ಅವರು ಸುಮಾರು 60 ಕ್ಕೂ ಹೆಚ್ಚು ಡಾಕ್ಟರೇಟ್ ಪದವಿಗಳನ್ನು ಪಡೆದಿದ್ದಾರೆ.

ಅದ್ದೂರಿಯಾಗಿ ನೆರವೇರಿದ 18 ನೇ ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವ
children FF18ನೇ ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವವನ್ನು ಮುತ್ತಿನ ನಗರಿ ಹೈದ್ರಾಬಾದ್ ನಲ್ಲಿ ಆಯೋಜಿಸಲಾಗಿತ್ತು. ಒಂದು ವಾರಗಳ ಕಾಲ ನಡೆಯುವ ಈ ಸಮಾರಂಭಕ್ಕೆ ಹೈದ್ರಾಬಾದ್ ನ ಲಲಿತ ಕಲಾ ತೋರಣಂ ಅನ್ನು ವರ್ಣರಂಜಿತವಾಗಿ ಸಜ್ಜುಗೊಳಿಸಲಾಗಿತ್ತು. 1995 ರಿಂದ ಎರಡು ವರ್ಷಗಳಿಗೊಮ್ಮೆ ಈ ಸಮಾರಂಭವನ್ನು ಹೈದ್ರಾಬಾದ್ ನ ಲಲಿತ ಕಲಾ ತೋರಣಂನಲ್ಲಿ ಆಯೋಜಿಸಲಾಗುತ್ತಿದೆ.
ಮುಖ್ಯಾಂಶಗಳು:
  •  ಚಿಲ್ಡ್ರನ್ ಫಿಲಂ ಸೊಸೈಟಿ ಆಫ್ ಇಂಡಿಯಾ ಮತ್ತು ಆಂಧ್ರಪ್ರದೇಶ ಸರ್ಕಾರ ಜಂಟಿಯಾಗಿ ಈ ಚಲನಚಿತ್ರೋತ್ಸವವನ್ನು ಆಯೋಜಿಸುತ್ತಿವೆ.
  • ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಮನೀಶ್ ತಿವಾರಿ, ಆಂಧ್ರಪ್ರದೇಶ ಮುಖ್ಯಮಂತ್ರಿ ಕಿರಣ್ ಕುಮಾರ್ ರೆಡ್ಡಿಯವರು ಸಮಾರಂಭಕ್ಕೆ ಚಾಲನೆ ನೀಡಿದರು.
  • ಬಾಲಿವುಡ್ ನಟ ರಣಬೀರ್ ಕಪೂರ್ ಹಾಗೂ ತಾರೆ ಜಮೀನ್ ಪರ ಚಿತ್ರದ ಬಾಲನಟ ಖ್ಯಾತಿ ದರ್ಶಿಲ್ ಸಫಾರಿ ಅವರು ಚಲನಚಿತ್ರೋತ್ಸವದಲ್ಲಿ ಭಾಗವಹಿಸಿ ಆಕರ್ಷಣಯ ಬಿಂದು ಎನಿಸಿದರು.
  • ಸುಮಾರು 1.5 ಲಕ್ಷ ಮಕ್ಕಳು ಭಾಗವಹಿಸಿದ್ದ ಈ ಚಿತ್ರೋತ್ಸವದಲ್ಲಿ 40 ದೇಶಗಳ 200 ಕ್ಕೂ ಹೆಚ್ಚು ಚಿತ್ರಗಳು ಈ ಸಮಾರಂಭದಲ್ಲಿ ಪ್ರದರ್ಶಿಸಲಾಯಿತು.
  •  ಇದೇ ಮೊದಲ ಬಾರಿಗೆ ದಕ್ಷಿಣ ಅಮೆರಿಕಾದ 26 ಚಿತ್ರಗಳನ್ನು ಪ್ರದರ್ಶಿಸಲಾಯಿತು.
ಪ್ರಶಸ್ತಿ ಗೆದ್ದ ಚಿತ್ರಗಳು:
  • ಅಂತರರಾಷ್ಟ್ರೀಯ ಮಕ್ಕಳ ಚಲನಚಿತ್ರೋತ್ಸವದಲ್ಲಿ ಪ್ರದರ್ಶಿಸಲಾದ ಚಿತ್ರಗಳ ಪೈಕಿ ನಾಲ್ಕು ವಿಭಾಗದಲ್ಲಿ ಅತ್ಯುತ್ತಮ ಚಿತ್ರಗಳನ್ನು “ಗೋಲ್ಡನ್ ಎಲಿಫಂಟ್” ಪ್ರಶಸ್ತಿಯನ್ನು ವಿತರಿಸಲಾಯಿತು. ಪ್ರಶಸ್ತಿ ಪಡೆದ ಚಿತ್ರಗಳ ವಿವರ ಇಲ್ಲಿದೆ.
  • ಕೌಬಾಯ್ (Kauwboy):   ಡಚ್ ಸಿನಿಮಾ “ಕೌಬಾಯ್” ಗೋಲ್ಡನ್ ಎಲಿಫಂಟ್ ಪ್ರಶಸ್ತಿಗೆ ಭಾಜನವಾಯಿತು. ಇಂಟರ್ ನ್ಯಾಷನಲ್ ಲೈವ್ ಆಕ್ಷನ್ ವಿಭಾಗದಲ್ಲಿ ಈ ಚಿತ್ರ ಪ್ರಶಸ್ತಿಗೆ ಭಾಜನವಾಯಿತು.
  • ಇದೇ ವಿಭಾಗದಲ್ಲಿ “ಬಟುಲ್ ಮುಕ್ತಿಯಾರ್” ಅವರು ತಮ್ಮ “ಕಪಾಲ್” ಚಿತ್ರಕ್ಕೆ ಅತ್ಯುತ್ತಮ ನಿರ್ದೇಶಕ ಪ್ರಶಸ್ತಿಗೆ ಭಾಜನರಾದರು.
  • ಅತ್ಯುತ್ತಮ ಸ್ಕ್ರೀನ್ ಪ್ಲೇ ವಿಭಾಗದಲ್ಲಿ: ನಾನೋ-ದಿ ಝಿಗ್ ಜಾಗ್ ಕಿಡ್ ಚಿತ್ರ ಭಾಜನವಾಯಿತು.

ಚೀನಾದ ಪ್ರಥಮ “ರಹಸ್ಯ ಡ್ರೋನ್ (Stealth Drone)” ಪ್ರಯೋಗಾರ್ಥ ಪರೀಕ್ಷೆ ಯಶಸ್ವಿ
Stealth Droneಚೀನಾ ತನ್ನ ಮೊದಲ ರಹಸ್ಯ ಡ್ರೋನ್ ನ ಪ್ರಯೋಗಾರ್ಥ ಪರೀಕ್ಷೆಯನ್ನು ಯಶಸ್ವಿಯಾಗಿ ನೆರವೇರಿಸಿರುವುದಾಗಿ ಮೂಲಗಳು ತಿಳಿಸಿವೆ. ಈ ಮೂಲಕ ಮಾನವ ರಹಿತ ಯುದ್ದ ವಿಮಾನವನ್ನು ಹೊಂದಿರುವ ವಿಶ್ವದ ಕೆಲವೇ ರಾಷ್ಟ್ರಗಳ ಪಟ್ಟಿಗೆ ಚೀನಾ ಸಹ ಸೇರ್ಪಡೆಗೊಂಡಿದೆ.
  • “ಶಾರ್ಪ್ ಸ್ವೊರ್ಡ್ (Sharp Sword)” ಹೆಸರಿನ ಈ ರಹಸ್ಯ ಯುದ್ದ ವಿಮಾನ ಅಮೆರಿಕಾದ US B2 ಬಾಂಬರ್ ರೀತಿಯೇ ಇರುವುದಾಗಿ ಚೀನಾ ಬಿಡುಗಡೆಗೊಳಿಸಿರುವ ಚಿತ್ರಗಳ ಮೂಲಕ ಕಂಡುಬಂದಿದೆ.
  • ಈ ಮಾನವ ರಹಿತ ಯುದ್ದ ವಿಮಾನವನ್ನು ಯಶಸ್ವಿಯಾಗಿ ಪರೀಕ್ಷೆ ನೆರವೇರಿಸಿದ ಬಳಿಕ ಚೀನಾ ಇಂತಹ ಯುದ್ದ ವಿಮಾನಗಳನ್ನು ಹೊಂದಿರುವ ವಿಶ್ವದ ನಾಲ್ಕನೇ ರಾಷ್ಟ್ರ ಎನಿಸಿದೆ. ಅಮೆರಿಕಾ, ಯೂರೋಪಿಯನ್ ಯೂನಿಯನ್, ಯು.ಕೆ ಇಂತಹ ವಿಮಾನಗಳನ್ನು ಹೊಂದಿರುವ ಕೆಲವೇ ರಾಷ್ಟ್ರಗಳು.
  • ಈ ರಹಸ್ಯ ಡ್ರೋನ್ ವಾಯು ಮತ್ತು ನೆಲದಿಂದ ದಾಳಿಯನ್ನು ಸಮರ್ಥವಾಗಿ ನಡೆಸಲಿದೆ.

ಪ್ರಚಲಿತ ವಿದ್ಯಮಾನಗಳು ನವೆಂಬರ್ 14, 2013

ಪ್ರತಿಷ್ಠಿತ DSC ಸಾಹಿತ್ಯ ಪ್ರಶಸ್ತಿ ಸ್ಪರ್ಧೆಯಲ್ಲಿ ಭಾರತದ ಮೂವರು ಸಾಹಿತಿಗಳು
ದಕ್ಷಿಣಾ ಏಷ್ಯಾದ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿಯ ಸ್ಪರ್ಧೆಯಲ್ಲಿ ಈ ಬಾರಿ ಭಾರತದ ಮೂವರು ಸಾಹಿತಿಗಳು ತೀವ್ರ ಪ್ರತಿಸ್ಪರ್ಧೆಯನ್ನು ಒಡ್ಡುವ ಮೂಲಕ ಪ್ರಶಸ್ತಿ ಆಕಾಂಕ್ಷಿಗಳ ಕಣದಲ್ಲಿದ್ದಾರೆ. ಪಾಕಿಸ್ತಾನದ ಮೊಹಸೀನ್ ಹಮೀದ್ ಮತ್ತು ನದೀಮ್ ಅಸ್ಲಾಂ ಸೇರಿದಂತೆ ಭಾರತ ಮೂವರು ಸಾಹಿತಿಗಳು ಸೇರಿ ಒಟ್ಟು ಆರು ಸಾಹಿತಿಗಳಲ್ಲಿ ಈ ಪ್ರತಿಷ್ಠಿತ ಪ್ರಶಸ್ತಿ ಯಾರಿಗೆ ಒಲಿಯಲಿದೆ ಎನ್ನುವುದು ಕುತೂಹಲ ಮೂಡಿಸಿದೆ. ಪ್ರಶಸ್ತಿಯ ವಿಜೇತರನ್ನು ಜನವರಿಯಲ್ಲಿ ನಡೆಯಲಿರುವ ಜೈಪುರ ಸಾಹಿತ್ಯ ಸಮ್ಮೇಳನದಲ್ಲಿ ಪ್ರಕಟಿಸಲಾಗುವುದು,
ಭಾರತದ ಸಾಹಿತಿಗಳು:
ಪ್ರತಿಷ್ಠಿತ ಪ್ರಶಸ್ತಿಗೆ ಸ್ಪರ್ಧೆಯಲ್ಲಿರುವ ಮೂವರು ಸಾಹಿತಿಗಳೆಂದರೆ:
  • ಬೆನ್ಯಮಿನ್ ರವರ “ಗೋಟ್ ಡೇಸ್ (Goat Days)” (ಮಲೆಯಾಳಂ ನ ಅನುವಾದ ಕೃತಿ)
  • ಆನಂದ್ ರವರ “ಡಿಸ್ಟ್ರಕಷನ್ (Destruction)” (ಮಲೆಯಾಳಂ ನ ಅನುವಾದ ಕೃತಿ)
  • ಸಿರಸ್ ಮಿಸ್ತ್ರಿ ರವರ “ಕ್ರೊನಿಕಲ್ ಆಫ್ ಎ ಕರ್ಪ್ಸ್ ಬಿಯರೆರ್ (Chronicle of a Corpse Bearer)”
ಸ್ಪರ್ಧೆಯಲ್ಲಿರುವ ಇತರೆ ಕೃತಿಗಳು:
  • ಪಾಕಿಸ್ತಾನ ಹಮೀದ್ ರವರ ಕೃತಿ “ಹೌ ಟು ಗೆಟ್ ಫಿಲ್ತಿ ರಿಚ್ ಇನ್ ರೈಸಿಂಗ್ ಏಷ್ಯಾ”. ಹಮೀದ್ ಅವರ “ರಿಲೆಕ್ಟಂಟ್ ಫಂಡ್ ಮೆಂಟಲಿಸ್ಟ್” ಮತ್ತು “ಮಾತ್ ಸ್ಮೋಕ್” ಈ ಮುಂಚೆ ವಿಮರ್ಶಕರ ಪ್ರಶಂಸೆಯನ್ನು ಗಳಿಸಿದ ಕೃತಿಗಳು.
  • ನದೀಮ್ ಅಸ್ಲಂ ಅವರ “ಬ್ಲೈಂಡ್ ಮ್ಯಾನ್ ಗಾರ್ಡನ್”  ಈ ಬಾರಿ ಸ್ಪರ್ಧೆಯಲ್ಲಿರುವ ಕೃತಿ,
DSC ಪ್ರಶಸ್ತಿ:
  • DSC ಪ್ರಶಸ್ತಿ ದಕ್ಷಿಣ ಏಷ್ಯಾ ಸಾಹಿತ್ಯಕ್ಕೆ ನೀಡಲಾಗುವ ಪ್ರತಿಷ್ಠಿತ ಸಾಹಿತ್ಯ ಪ್ರಶಸ್ತಿ. ಈ ಪ್ರಶಸ್ತಿಯನ್ನು ವಾರ್ಷಿಕವಾಗಿ ನೀಡಲಾಗುತ್ತದೆ, ದಕ್ಷಿಣ ಏಷ್ಯಾದ ರಾಜಕೀಯ, ಇತಿಹಾಸ ಅಥವಾ ಜನರಿಗೆ ಸಂಬಂಧಿಸಿದಂತೆ ರಚಿಸಲಾಗುವ ಕೃತಿಗಳಿಗೆ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ.
ಇದುವರೆಗೂ ಪ್ರಶಸ್ತಿಯನ್ನು ಗೆದ್ದಿರುವ ಸಾಹಿತಿಗಳು:
  • 2011: ಹೆಚ್.ಎಂ.ನಾಕ್ವಿ (ಹೋಮ್ ಬಾಯ್)
  • 2012:ಶೇಶನ್ ಕರುನತಿಲಕ (ರ್ಯಾಂಡಮ್ ಹೌಸ್)
  • 2013: ಜೀತ್ ಥಾಯಿಲ್ (ನಾರ್ಕೊಪೊಲಿಸ್)

ಪಾಕಿಸ್ತಾನ ಮತ್ತು ಭಾರತ ನಡುವೆ ತಲೆ ಎತ್ತಲಿದೆ ತಡೆ ಗೋಡೆ
ಪಾಕಿಸ್ತಾನದಿಂದ ಒಳನುಸುಳುವ ದಾಳಿಕೋರರನ್ನು ತಡೆಯುವ ಸಲುವಾಗಿ ಭಾರತದ ಜಮ್ಮು ಮತ್ತು ಕಾಶ್ಮೀರದ ಗಡಿ ಭಾಗದಲ್ಲಿ ಬೃಹತ್ ಆದ ರಕ್ಷಣಾ ಗೋಡೆಯನ್ನು ನಿರ್ಮಿಸಲು ಭಾರತ ಸಿದ್ದತೆ ನಡೆಸಿದೆ. ಭಯೋತ್ಪಾದಕರು, ಕಳ್ಳ ಸಾಗಣಿಕೆ ಮಾಡುವವರನ್ನು ತಡೆಯಲು ಈ ಗೋಡೆ ಅತ್ಯಂತ ಪ್ರಮುಖ ಪಾತ್ರವಹಿಸಲಿದೆ ಎನ್ನಲಾಗಿದೆ. ಶೀತಲ ಸಮರದ ವೇಳೆ ಜರ್ಮನಿಯಲ್ಲಿ ರಚಿಸಲಾಗಿರುವ “ಬರ್ಲಿನ್ ಗೋಡೆ” ಮಾದರಿಯಂತೆಯೇ ಇದು ಸಹ ತಲೆ ಎತ್ತಲಿದೆ.
ರಕ್ಷಣಾ ಗೋಡೆಯ ಬಗ್ಗೆ:
  • ಪ್ರಸ್ತಾಪಿತ ಈ ತಡೆ ಗೋಡೆ 198 ಕಿ,ಮೀ ಉದ್ದವಿರಲಿದ್ದು, 10 ಮೀ ಎತ್ತರವಿರಲಿದೆ. ಜಮ್ಮು ಮತ್ತು ಪಾಕಿಸ್ತಾನ ಗಡಿ ಭಾಗದಲ್ಲಿ ಈ ಗೋಡೆ ತಲೆ ಎತ್ತಲಿದೆ.
  • ಸುಮಾರು 135 ಮೀ ಅಗಲವಿರಲಿರುವ ಈ ಗೋಡೆ ಜಮ್ಮು, ಕಥು ಹಾಗೂ ಸಂಬಾ ಜಿಲ್ಲೆಯ 118 ಹಳ್ಳಿಗಳ ಮೂಲಕ ಹಾದು ಹೋಗಲಿದೆ.
  • ಸದ್ಯ ಈ ಯೋಜನೆಯ ಬಂಡವಾಳ ಎಷ್ಟು ಎಂಬುದರ ಬಗ್ಗೆ ನಿಖರ ಮಾಹಿತಿ ಇಲ್ಲ. ಆದರೆ ಗೃಹ ಸಚಿವಾಲಯ ಇದಕ್ಕೆ ತಗಲುವ ವೆಚ್ಚವನ್ನು ಭರಿಸಲಿದೆ ಎನ್ನಲಾಗಿದೆ. ಗಡಿ ಭದ್ರತಾ ಪಡೆ ಇದರ ನಿರ್ವಹಣೆಯನ್ನು ವಹಿಸಿಕೊಳ್ಳಲಿದೆ.

ಬಂಡವಾಳ ಹೂಡಿಕೆ ಆಕರ್ಷಣೆಯಲ್ಲಿ ಚೀನಾ ಮತ್ತು ಅಮೆರಿಕಾವನ್ನು ಸರಿಗಟ್ಟಿದ ಭಾರತ: ಸಮೀಕ್ಷೆ
ಬಂಡವಾಳ ಹೂಡಿಕೆಯನ್ನು ಉತ್ತೇಜಿಸುವ ಹಿನ್ನೆಲೆಯಿಂದಾಗಿ ವಿದೇಶಿ ನೇರ ಬಂಡವಾಳ (FDI) ನಿಯಮಗಳನ್ನು ಸಡಿಲಗೊಳಿಸಿಗೊಳಿಸಿದ ಕಾರಣ ಬಂಡವಾಳ ಹೂಡಿಕೆ ಆಕರ್ಷಣೆಯಲ್ಲಿ ಭಾರತವೂ ಚೀನಾ ಮತ್ತು ಅಮೆರಿಕಾವನ್ನು ಹಿಂದಿಕ್ಕಿದೆ ಎಂದು ಸಮೀಕ್ಷೆಯಿಂದ ತಿಳಿದು ಬಂದಿದೆ.
  • ಜಾಗತಿಕ ಸಮೀಕ್ಷ ಸಂಸ್ಥೆ “ಆರ್ನೆಸ್ಟ್ ಅಂಡ್ ಯಂಗ್ (Earnst and Young)’ ನಡೆಸಿರುವ ಸಮೀಕ್ಷೆಯಲ್ಲಿ ಬಂಡವಾಳ ಆಕರ್ಷಣೆಯಲ್ಲಿ ಚೀನಾ ಮತ್ತು ಅಮೆರಿಕಾವನ್ನು ಹಿಂದಿಕ್ಕಿ ಭಾರತ ಅಗ್ರಸ್ಥಾನವನ್ನು ಪಡೆದುಕೊಂಡಿದೆ.
  • ಭಾರತದ ನಂತರದ ಸ್ಥಾನದಲ್ಲಿ ಚೀನಾ ಮತ್ತು ಬ್ರೆಜಿಲ್ ದೇಶಗಳು ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನವನ್ನು ಪಡೆದುಕೊಂಡಿವೆ.
  • ಪಟ್ಟಿಯಲ್ಲಿರುವ ಇತರೆ ಟಾಪ್ ಟೆನ್ ರಾಷ್ಟ್ರಗಳೆಂದರೆ ಕೆನಡಾ (4), ಅಮೆರಿಕಾ (5), ದಕ್ಷಿಣ ಆಫ್ರಿಕಾ (6), ವಿಯೆಟ್ನಾಂ (7), ಮಯನ್ಮಾರ್ (8), ಮೆಕ್ಸಿಕೊ (9) ಮತ್ತು ಇಂಡೊನೇಷಿಯಾ.
  • ವಿವಿಧ ಕ್ಷೇತ್ರಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯನ್ನು ಉತ್ತೇಜಿಸುವ ಸಲುವಾಗಿ ಭಾರತ ಅನೇಕ ಕ್ರಮಗಳನ್ನು ಕೈಗೊಂಡಿರುವ ಹಿನ್ನೆಲೆಯಲ್ಲಿ ಭಾರತ ಈ ಮಟ್ಟವನ್ನು ತಲುಪಲು ಸಾಧ್ಯವಾಗಿದೆ.

No comments:

Post a Comment